ಅನೂಪ್ ವಾರ್ಧಾರ ವಿಶಿಷ್ಟ ತರಬೇತಿ ಶಾಲೆ ನಳಂದಾ ಅಕಾಡಮಿ

Update: 2018-07-08 06:22 GMT

ವಾರ್ಧಾ ಎಂಬ ಪುಟ್ಟ ಪಟ್ಟಣ ಮಹಾರಾಷ್ಟ್ರದಲ್ಲಿರುವ ನಾಗಪುರದ ಬಳಿ ಇದೆ. ಮಹಾರಾಷ್ಟ್ರ ಎಂಬ ಹೆಸರಿ ನಲ್ಲಿ ಮೆಹರ್ ಎಂಬ ಪದ ಸೇರಿಕೊಂಡು ಅದಕ್ಕೂ ಬಾಬಾ ಸಾಹೇಬರಿಗೂ ನೇರ ನಂಟಿರುವುದರಿಂದ ಅದರ ಬಗೆಗೆ ಒಂದು ವಿಚಿತ್ರ ಆತ್ಮೀಯತೆ ಬೆಳೆಯುತ್ತದೆ. ವಾರ್ಧಾ ಬಳಿ ಇರುವ ನಾಗಪುರವು ಸುಪ್ರಸಿದ್ಧವಾಗಿದೆ. ಭಾರತದ ಸೈದ್ಧಾಂತಿಕ ಸಂಘರ್ಷದ ಆರಂಭ ಬಿಂದುವೇ ಅದಾಗಿದೆ. ಚಿತ್ಪಾವನ ಬ್ರಾಹ್ಮಣರು ಆರೆಸ್ಸೆಸ್ ಮೂಲಕ ಇಡೀ ಭಾರತದ ವಿನ್ಯಾಸವನ್ನು ಇಲ್ಲಿಯೇ ರೂಪಿಸಿದರು. 

ಆರೆಸ್ಸೆಸ್ ಎಂಬ ರಹಸ್ಯ ಸಮಾಜವನ್ನು ಬಹಿರಂಗದಲ್ಲಿಟ್ಟು ಎಲ್ಲರಿಗೂ ಗೊತ್ತಿದ್ದೂ ಗೊತ್ತಿಲ್ಲದಂತೆಯೇ ನಡೆಸುವ ಸೂಕ್ಷ್ಮ ವಿನ್ಯಾಸ ನಾಗಪುರದಿಂದ ಬಂದಿತು. ಇಂಥ ವಿನ್ಯಾಸವನ್ನು ಹೊಡೆಯುವ ಬೆಳಕೂ ಅಲ್ಲಿಂದಲೇ ಮೂಡಿತು. ಇದೇ ನಾಗಪುರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಬಾಬಾ ಸಾಹೇಬರಿಂದಾಗಿಯೇ ನಾಗಪುರದ ಬಗೆಗೆ ಪ್ರೀತಿ ಬೆಳೆಯುತ್ತದೆ. ಆ ಪ್ರೀತಿ ವಿಸ್ತಾರಗೊಂಡು ಭರತ ಖಂಡದುದ್ದಕ್ಕೂ ಹರಡಿದೆ ಎನಿಸುತ್ತದೆ. ಇದಕ್ಕೆ ಸಾಕ್ಷಿ ನಮ್ಮ ಅನೂಪ್. ನೀವು ಗೂಗಲ್‌ಗೆ ಹೋಗಿ ಅನೂಪ್ ಸಿಂಗ್ ವಾರ್ಧಾ ಎಂದು ಕೊಟ್ಟರೆ ನಾನು ಹೇಳುತ್ತಿರುವ ಅನೂಪ್ ಚಿತ್ರಣ ದೊರೆಯುತ್ತದೆ. ಅನೂಪ್ ಎಂದರೆ ಹೊಸ ಟ್ರೆಂಡ್, ಒಂದು ಚಿಂತನಾ ಶಾಲೆ, ಬದುಕಿನ ಕ್ರಮ ಬದ್ಧತೆ ಇತ್ಯಾದಿಗಳಿಂದ ವರ್ಣಿಸಲ್ಪಡುವ ವೆಬ್‌ಸೈಟ್‌ಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ.

ನನಗೆ ವ್ಯಕ್ತಿಪೂಜೆಯಲ್ಲಿ ನಂಬಿಕೆ ಇಲ್ಲದಿದ್ದರೂ ವ್ಯಕ್ತಿಯೊಬ್ಬನ ಬಗೆಗೆ ಹುಟ್ಟುವ ಅಭಿಮಾನ, ದಂತಕತೆಗಳು ಕುತೂಹಲವನ್ನು ಮೂಡಿಸುತ್ತದೆ. ಅನೂಪ್ ಎಂಬ ಹೆಸರು ಕೇಳಿದ ತಕ್ಷಣ ನಾನು ಅವರನ್ನು 15 ವರ್ಷಗಳ ಹಿಂದೆ ಭೇಟಿಯಾದ ನೆನಪು ಬಂತು. ಅವರ ಹೆಸರು ಪ್ರಸ್ತಾಪಿಸಿದ ಸ್ನೇಹಿತರ ಬಳಿ ನನಗೆ ಅವರು ಗೊತ್ತೆಂದು ಹೇಳಿದೆ. ಹೇಳಿದಾಗ ಅವರು ಗೊತ್ತಿದ್ದಾರೆ ಎಂಬ ಖಾತ್ರಿ ಏನೂ ಇರಲಿಲ್ಲ. ಆನಂತರ ನಾನು ಹೇಳಿದ್ದು ನಿಜವಾಗಿತ್ತು. ನಾನು ದಿಲ್ಲಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಅಧ್ಯಾಪಕರ ವಿಶೇಷ ತರಬೇತಿಗಾಗಿ ಹೋಗಿದ್ದೆ. ಆ ವಿಶ್ವವಿದ್ಯಾನಿಲಯವು ಭಾರತದಲ್ಲಿ ಬಡವರು, ಅಲ್ಪಸಂಖ್ಯಾತರು, ದಲಿತರ ಪರವಾಗಿ ಯೋಚಿಸುವ ಜನರಿರುವ ವಿಶ್ವವಿದ್ಯಾನಿಲಯವೆಂದು ಹೆಸರು ಪಡೆದಿದೆ. ನಾನು ಅಲ್ಲಿನ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡಿದಾಗ ಅಲ್ಲಿ ಇನ್‌ಸೈಟ್ ಎಂಬ ಪತ್ರಿಕೆಯೊಂದು ದೊರಕಿತು. ಅದನ್ನು ನೋಡಿದರೆ ಅಲ್ಲಿನ ವಿದ್ಯಾರ್ಥಿಗಳೇ ಹೊರಡಿಸುತ್ತಿರುವ ಪತ್ರಿಕೆ ಎಂದು ತಿಳಿಯಿತು. ಅದನ್ನು ನಡೆಸುತ್ತಿರುವವರ ವಿಳಾಸ ಹುಡುಕಿ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನ ಪುಟ್ಟ ರೂಮೊಂದಕ್ಕೆ ಹೋದೆ. ಅಲ್ಲಿ ಸಣ್ಣಗಿರುವ, ಬಡ ಹುಡುಗನೊಬ್ಬ ತನ್ನ ಇನ್ ಸೈಟ್ ಪತ್ರಿಕೆಯ ಪ್ರತಿಗಳನ್ನು ಪ್ರಿಂಟರ್‌ನಲ್ಲಿ ತೆಗೆಯುತ್ತಿದ್ದರು. ಆಗ ಕಂಪ್ಯೂಟರ್, ಪ್ರಿಂಟರ್ ಬಳಸುವವರು ಅಪರೂಪವಾಗಿದ್ದರು. ಆ ವ್ಯಕ್ತಿಯೇ ಅನೂಪ್. ನೀವು ದೊಡ್ಡ ಮನುಷ್ಯರಾಗುತ್ತೀರಾ, ಇಷ್ಟು ಚಿಕ್ಕ ವಯಸ್ಸಿಗೇ ಹೀಗೆಲ್ಲ ಮಾಡುತ್ತಿದ್ದೀರ ಎಂದು ಮಾತನಾಡಿದ ನೆನಪು. ಅವರ ಮುಖ ಚಹರೆ ನನಗೆ ಮರೆತುಹೋಗಿತ್ತು, ನನ್ನ ಮುಖ ಚಹರೆ ಅವರು ಮರೆತಿರಬಹುದು. ಅರ್ಧ ಗಂಟೆಯ ಭೇಟಿಯ ನೆನಪು ಮಾತ್ರ. ಈ ನೆನಪು ಈಗ ಅನೂಪ್ ಎಂಬ ಹೆಸರಿನಲ್ಲಿ ಒಂದು ಮಾದರಿಯಾಗಿ ಟ್ರೆಂಡ್ ಸೆಟ್ಟಿಂಗ್ ಆಗಿ ವೆಬ್‌ಸೈಟ್‌ನಲ್ಲಿ ಪ್ರತ್ಯಕ್ಷವಾಗಬಹುದೆಂಬ ಊಹೆಯೂ ನನಗಿರಲಿಲ್ಲ. 

ಹೊಸಪೇಟೆಯಲ್ಲಿ ಭಾಗ್ಯಲಕ್ಷ್ಮೀ ಎಂಬ ನಮ್ಮ ಸ್ನೇಹಿತೆ ನಡೆಸುತ್ತಿರುವ ಸಖಿ ಸಂಸ್ಥೆಯೊಂದಿದೆ. ಅಲ್ಲಿಗೆ ಅನೂಪ್ ವಿದ್ಯಾರ್ಥಿಗಳು ಬಂದಿದ್ದರು. ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೆ ಇರುವ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡಿ ಕಳಿಸುವುದು ಅನೂಪ್‌ರ ಉದ್ದೇಶ. ಅದಕ್ಕಾಗಿ ಅನೂಪ್ ವಾರ್ಧಾ ಪಟ್ಟಣದ ಅಸ್ಪಶ್ಯರು ವಾಸಿಸುವ ಕಾಲನಿಯೊಂದರಲ್ಲಿರುವ ಬೌದ್ಧ ವಿಹಾರವನ್ನು ಆಯ್ದುಕೊಂಡಿದ್ದಾರೆ. ಸುಮಾರು ನೂರು ಜನ ಕೂರಬಹುದಾದ ಸ್ಥಳದಲ್ಲಿ ಪ್ರತಿ ನಿತ್ಯ 9 ಗಂಟೆಗಳ ಕಾಲ ಪಾಠ ಮಾಡುತ್ತಾರೆ. ಆಕಾಶದ ಕೆಳಗಿರುವ ಎಲ್ಲ ವಿಷಯಗಳನ್ನು ಬಡ, ಹಿಂದುಳಿದ, ಅಲ್ಪಸಂಖ್ಯಾತರ ಮಕ್ಕಳಿಗೆ ಹೇಳಿಕೊಡುತ್ತಾರೆ. ಹೀಗೆ ನಾಲ್ಕೈದು ವರ್ಷಗಳಿಂದ ನೂರಾರು ಜನರನ್ನು ಭಾರತ ಮತ್ತು ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನೂಪ್ ನಡೆಸುತ್ತಿರುವ ಕೇಂದ್ರದ ಹೆಸರು ನಳಂದ ಅಕಾಡಮಿ. ಅಲ್ಲಿಗೆ ಸೇರುವವರು ಸಮಾಜದ ಕಟ್ಟಕಡೆಯವರಾಗಿರಬೇಕು, ಬಡವರಾಗಿರಬೇಕು, ಕಲಿಯುವ ಆಸಕ್ತಿ ಇರಬೇಕು. ಇದೇ ಮಾನದಂಡ. ಇಂತಹ ಅನೂಪ್ ಸಖಿ ಸಂಸ್ಥೆಗೆ ಬಂದಿದ್ದರು. ನಾನು ಅವರ ವಾಟ್ಸ್ ಆ್ಯಪ್‌ಗೆ ಅವರು ನಡೆಸುತ್ತಿದ್ದ ಪತ್ರಿಕೆಯ ಪ್ರತಿಯೊಂದು ನನ್ನ ಬಳಿ ಇತ್ತು ಅದನ್ನು ಕಳಿಸಿದೆ. ಅನೂಪ್‌ಗೆ ಖುಷಿಯಾಗಿರಬೇಕು. ಭಾಗ್ಯಲಕ್ಷ್ಮೀಯವರು ನನ್ನ ಬಗ್ಗೆ ಸಾಕಷ್ಟು ಹೇಳಿದ್ದರಿಂದ ಅನೂಪ್ ನಮ್ಮ ಮನೆಗೆ ಬಂದರು. ಅನೂಪ್ ಜೊತೆ ಅವರ ಸ್ನೇಹಿತ ಹರ್ಷ ಕೂಡ ಬಂದಿದ್ದರು. ಅನೂಪ್‌ರ ಬದ್ಧತೆ ನೋಡಿ ಅವರಿಗೆ ಭಾರತದಾದ್ಯಂತ ಅನೇಕ ಸ್ನೇಹಿತರು ನೈತಿಕ ಮತ್ತು ಆರ್ಥಿಕ ಬೆಂಬಲ ನೀಡುತ್ತಿದ್ದಾರೆ. ಆ ದಿನ ಸಂಜೆ ಅವರಿಗೆ ಐಟಿ ತಂತ್ರಜ್ಞರ ಜೊತೆ ಮಾತುಕತೆ ಇತ್ತು. ಮಧ್ಯಾಹ್ನ ಊಟ ಮಾಡುವಾಗ ಕರ್ನಾಟಕದ ಸುಪ್ರಸಿದ್ದ ಸಮಾಜ ವಿಜ್ಞಾನಿ ಡಾಮಿನಿಕ್ ಮತ್ತು ಹೋರಾಟಗಾರ ವಿಜಯ್ ಸಿಕ್ಕ್ಕಿದರು. ವಾರ್ಧಾ ಎಂದಾಕ್ಷಣ ಗಾಂಧೀಜಿಯವರ ಆಶ್ರಮವೂ ನೆನಪಿಗೆ ಬಂದಿತ್ತು. ವಿಜಯ್ ಗಾಂಧೀಜಿಯವರಿಗೆ ಕಮೋಡ್ ಮತ್ತು ಬಚ್ಚಲುಮನೆಯ ಟೈಲ್ಸ್‌ಗಳು ಲಂಡನ್‌ನಿಂದ ಬಂದವೆಂದು ಟೀಕಿಸುತ್ತಿದ್ದರು.

ಡಾಮಿನಿಕ್‌ರವರು ಬೌದ್ಧ ಮೀಮಾಂಸೆಯ ತಾತ್ವಿಕತೆಯನ್ನು ನಳಂದ ಅಕಾಡಮಿಯಲ್ಲಿ ತರಬೇಕೆಂದು ಅಲ್ಲಿನ ಮಕ್ಕಳಿಗೆ ವೇಗವಾಗಿ ಓದುವುದನ್ನು ಕಲಿಸುತ್ತೇನೆಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅನೂಪ್ ಸರಳವಾಗಿ ನಿಮ್ಮದೇ ಅಕಾಡಮಿ, ಎಲ್ಲರೂ ಬನ್ನಿ, ಎಲ್ಲರೂ ಪಾಠ ಮಾಡಿ, ಎಲ್ಲರೂ ನಡೆಸಿ ಎಂದರು. ಇವರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಅನೂಪ್‌ರ ಈ ಕಠಿಣ ಹಾದಿಯನ್ನು ಹೇಗೆ ತುಳಿದರು ಎಂದು ತಿಳಿದುಕೊಳ್ಳಲು ಸಮಯವೇ ಆಗಿರಲಿಲ್ಲ. ಸದ್ಯಕ್ಕೆ ಅದೂ ಕೂಡಿ ಬಂದಿತ್ತು. ಸಂವಾದ ಸಂಸ್ಥೆಯಲ್ಲಿ ಅನೂಪ್‌ರ ಅನುಭವ ಹಂಚಿಕೊಳ್ಳಲು ಕರೆಯಲಾಯಿತು. ಅಲ್ಲಿ ಅನೂಪ್ ಸುದೀರ್ಘವಾದ, ಗಾಢವಾದ ವಿಚಾರಗಳನ್ನು ಹಂಚಿಕೊಂಡರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅವರು ಒಬ್ಬ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. ಸುರಕ್ಷಿತ ವಾತಾವರಣದಲ್ಲಿ ಬೆಳೆದವರು. ಇಂಜಿನಿಯರಿಂಗ್ ಪದವಿಗೆ ಸೇರಿಕೊಂಡರು. ಇಂಗ್ಲಿಷ್ ಚೆನ್ನಾಗಿ ಗೊತ್ತಿತ್ತು. ಅನೂಪ್ ಸಿಂಗ್ ಎಂಬುದು ರಜಪೂತ್ ಹೆಸರಿಗೆ ಸಮೀಪವಾಗಿದ್ದರಿಂದ ತಾನು ಅಸ್ಪಶ್ಯನೆಂದು ಮರೆಮಾಚಿಕೊಂಡು ಎಲ್ಲ ನಗರದ ಮಧ್ಯಮ ವರ್ಗದವರಂತೆ ಸುರಕ್ಷಿತ ವಲಯದಲ್ಲಿ ಇದ್ದು ಅದರ ಅನುಕೂಲಗಳನ್ನು ಆನಂದಿಸುತ್ತಿದ್ದವರು. ಅದನ್ನು ಮೀರಿಯೂ ಅವರು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸ್ಪಶ್ಯರು ಮತ್ತು ಒಬಿಸಿಗಳಿಗೆ ಆಗುತ್ತಿದ್ದ ಅವಮಾನಗಳನ್ನು ಪ್ರತಿಭಟಿಸಿ ಸದಾ ಮೂದಲಿಸುತ್ತಿದ್ದ ಹಿರಿಯ ಅಧ್ಯಾಪಕನನ್ನು ಮೂರು ಸಾವಿರ ಜನರೆದುರಿಗೆ ಹೊಡೆದು, ಇಂಜಿನಿಯರಿಂಗ್ ಪದವಿಗೆ ತಿಲಾಂಜಲಿ ಇಟ್ಟರು. ನಂತರ ಮನೆಗೆ ಹಿಂದಿರುಗಿ ಬಿ.ಎ. ಸೇರಿಕೊಂಡು ಇತಿಹಾಸ ಮತ್ತು ಇಂಗ್ಲಿಷ್ ಅಧ್ಯಯನ ಮಾಡಿ ಜೆ.ಎನ್.ಯು. ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ಅಲ್ಲಿ ಇವರಿಗೆ ಆಶ್ಚರ್ಯಕರ ಸಂಗತಿಗಳು ಕಾದಿದ್ದವು. ಇವರು ಮುಚ್ಚಿಡುತ್ತಿದ್ದ ಜಾತಿಯನ್ನು ಜೆ.ಎನ್.ಯು.ನಲ್ಲಿ ಬಹಿರಂಗವಾಗಿ ಮಾತನಾಡಲಾಗುತ್ತಿತ್ತು. ಬಾವಿ ಕಪ್ಪೆಯಲ್ಲಿನ ಮನೋಭಾವ ಹೊಡೆದು ಹೋಗಿ ಅನೂಪ್ ದಿಗಂತದೆಡೆಗೆ ತೆರೆದುಕೊಂಡರು. ಇನ್‌ಸೈಟ್ ಪತ್ರಿಕೆ ಪ್ರಾರಂಭಿಸಿದರು. ಭಾರತದಾದ್ಯಂತ ತಾವೇ ಹೊತ್ತು ಮಾರಿದರು. ಈ ಅನುಭವ ಅಸ್ಪಶ್ಯತೆಯ ಕರಾಳ ಲೋಕವನ್ನು ಅವರಿಗೆ ಪರಿಚಯಿಸಿತು.

ಭಾರತದ ವಿವಿಧ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಐಐಟಿ, ಐಐಎಂಗಳಲ್ಲಿ ದಲಿತ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂತು. ಅದರ ಜೊತೆಗೆ ಛಲವೂ ಬಂದಿತು. ಆತ್ಮಹತ್ಯೆ ಎಂದರೆ ಅದೊಂದು ಸಾಮಾಜಿಕ ಪ್ರತಿಭಟನೆಯೆಂದು ಇವರ ಆತ್ಮಸಾಕ್ಷಿ ಮೊರೆಯುತ್ತಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ನಳಂದ ಅಕಾಡಮಿ ಸ್ಥಾಪಿಸಿ ಕಳೆದ ಐದಾರು ವರ್ಷಗಳಿಂದ ನೂರಾರು ಜನ ವಿದ್ಯಾರ್ಥಿಗಳನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ನನಗೊಂದು ಪ್ರಶ್ನೆ ಕಾಡಿತು. ನಾನು ಕಳೆದ 25 ವರ್ಷಗಳಿಂದ ಸಮಾಜಶಾಸ್ತ್ರದ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೇಕೆ ಹಾಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲಾಗುತ್ತಿಲ್ಲ ಎಂದು ಅವರನ್ನು ಕೇಳಿದೆ. ಅನೂಪ್ ನೀಡಿದ ಉತ್ತರ ಕಣ್ಣು ತೆರೆಸುವಂತಿತ್ತು. 'ನಾನು ಪಾಠ ಮಾಡುತ್ತಿರುವುದು ಅಸ್ಪಶ್ಯರ ಓಣಿಯಲ್ಲಿ. ಅಲ್ಲಿ ಅವರಿಗೆ ಯಾವುದೇ ಭಯ, ಅವಮಾನ, ಆತಂಕ, ಹಿಂಜರಿಕೆ, ಕೀಳರಿಮೆ ಇರುವುದಿಲ್ಲ. ನಾನು ಎಂದೂ ಯಾವ ವಿದ್ಯಾರ್ಥಿಯನ್ನೂ ದಡ್ಡನೆಂದು ಹೇಳುವುದಿಲ್ಲ. ಹೊಸದಾಗಿ ಬಂದು ಸೇರಿಕೊಂಡ ತಕ್ಷಣ ಇಂಗ್ಲಿಷನ್ನು ಕಷ್ಟವೆಂದೂ ಹೇಳುವುದಿಲ್ಲ. ಹಿಂದೂ ಪತ್ರಿಕೆಯ ಸಂಪಾದಕೀಯವನ್ನು ಓದಲು ಹೇಳುತ್ತೇನೆ, ಆತ್ಮವಿಶ್ವಾಸ ತುಂಬುತ್ತೇನೆ. ಬಾಬಾ ಸಾಹೇಬರ ಪ್ರೀತಿಯನ್ನು ಹರಡುತ್ತೇನೆ. ಅಷ್ಟು ಸಾಕು ಅವರು ಯಶಸ್ವಿಯಾಗುತ್ತಾರೆ'.

ಅನೂಪ್‌ರ ಭಾಷಣ ಕೇಳಿ ಸಂವಾದ ಸಂಸ್ಥೆಯ ಅಧ್ಯಾಪಕರು ಸ್ಫೂರ್ತಿ ಪಡೆದರು. ಅದರ ಮುಖ್ಯಸ್ಥೆ ಅನಿತಾ, ತಾವು ಇಂಥದ್ದೇ ಏನಾದರೂ ಮಾಡಬೇಕೆಂದು ತೀವ್ರವಾಗಿ ಯೋಚಿಸ ಲಾರಂಭಿಸಿದರು. ಅದನ್ನು ನನ್ನ ಬಳಿಯೂ ಹಂಚಿಕೊಂಡರು. ಅನೂಪ್, ಇಂದು ಸಂಜೆ ಐಟಿ ಇಂಜಿನಿಯರ್‌ಗಳೊಂದಿಗೆ ಸಂವಾದ ಇದೆ ಎಂದು ಹೊರಟರು. ಅವರ ಭಾಷಣ ಮತ್ತು ಸ್ಫೂರ್ತಿ ಎಲ್ಲರಲ್ಲಿಯೂ ಒಂದು ವಿಚಿತ್ರ ಗಾಂಭೀರ್ಯವನ್ನು ಮೂಡಿಸಿತ್ತು. ಆ ಗಾಂಭೀರ್ಯದಲ್ಲಿ ಬದ್ಧರಾಗುವ, ಬುದ್ಧರಾಗುವ ಬೀಜಗಳು ಮೊಳೆಯತೊಡಗಿವೆ ಎಂದುಕೊಳ್ಳುತ್ತಾ ಸಂತಸದಿಂದ ನನ್ನ ಮನಸ್ಸು ಹಾರಾಡತೊಡಗಿತು. ಅದಕ್ಕೆ ಮತ್ತೂ ಒಂದು ವಿಶೇಷ ಕಾರಣವಿತ್ತು. ತಿರುವನಂತಪುರದಲ್ಲಿ ನಳಂದ ಅಕಾಡಮಿಯ ರೀತಿಯಲ್ಲೇ ಮತ್ತೊಂದು ಸಂಸ್ಥೆಯ ಆರಂಭಕ್ಕೆ ಅನೂಪ್ ಹೊರಟಿದ್ದರು. ಸಂವಾದ ಸಂಸ್ಥೆಯ ಅನಿತಾ ಹಾಗೆಯೇ ಯೋಚಿಸುತ್ತಿದ್ದರು, ಮಾತುಕತೆಯೂ ಹೀಗೆಯೇ ಯೋಚಿಸುತ್ತಿದೆ.

ನಾನು ಪಾಠ ಮಾಡುತ್ತಿರುವುದು ಅಸ್ಪಶ್ಯರ ಓಣಿಯಲ್ಲಿ. ಅಲ್ಲಿ ಅವರಿಗೆ ಯಾವುದೇ ಭಯ, ಅವಮಾನ, ಆತಂಕ, ಹಿಂಜರಿಕೆ, ಕೀಳರಿಮೆ ಇರುವುದಿಲ್ಲ. ನಾನು ಎಂದೂ ಯಾವ ವಿದ್ಯಾರ್ಥಿಯನ್ನೂ ದಡ್ಡನೆಂದು ಹೇಳುವುದಿಲ್ಲ. ಹೊಸದಾಗಿ ಬಂದು ಸೇರಿಕೊಂಡ ತಕ್ಷಣ ಇಂಗ್ಲಿಷನ್ನು ಕಷ್ಟವೆಂದೂ ಹೇಳುವುದಿಲ್ಲ. ಹಿಂದೂ ಪತ್ರಿಕೆಯ ಸಂಪಾದಕೀಯವನ್ನು ಓದಲು ಹೇಳುತ್ತೇನೆ, ಆತ್ಮವಿಶ್ವಾಸ ತುಂಬುತ್ತೇನೆ. ಬಾಬಾ ಸಾಹೇಬರ ಪ್ರೀತಿಯನ್ನು ಹರಡುತ್ತೇನೆ. ಅಷ್ಟು ಸಾಕು ಅವರು ಯಶಸ್ವಿಯಾಗುತ್ತಾರೆ.

ಅನೂಪ್ ಕುಮಾರ್ ವಾರ್ಧಾ

Writer - ಡಾ. ಸಿ.ಜಿ. ಲಕ್ಷ್ಮೀಪತಿ

contributor

Editor - ಡಾ. ಸಿ.ಜಿ. ಲಕ್ಷ್ಮೀಪತಿ

contributor

Similar News