ಶಂಕರ ಹಲಗತ್ತಿ ಸಂದರ್ಶನ

Update: 2018-07-08 06:48 GMT

 ಶಂಕರ ಹಲಗತ್ತಿ ಸರಳ ಸಜ್ಜನಿಕೆಯ ಬಹುಮುಖ ವ್ಯಕ್ತಿತ್ವದವರು. ನಾಡಿನ ಮಕ್ಕಳ ಲೋಕಕ್ಕೆ ಬಂದರೆ ತಟ್ಟನೆ ನೆನಪಾಗುವ ಹೆಸರೇ ಇವರದು. ಹತ್ತು ವರ್ಷಗಳ ನಿರಂತರ ಹೋರಾಟದೊಂದಿಗೆ ಕರ್ನಾಟಕ ಬಾಲವಿಕಾಸ ಅಕಾಡಮಿ ಸ್ಥಾಪನೆ ಮಾಡಿಸುವಲ್ಲಿ ಯಶಕಂಡವರು. ಅಕಾಡಮಿಯ ಮೊದಲ ಅಧ್ಯಕ್ಷರಾಗಲು ಅವಕಾಶ ಬಂದಾಗ ಹತ್ತು ವರ್ಷ ಇನ್ನೂ ಸರಕಾರಿ ಸೇವಾ ಅವಧಿ ಇರುವಾಗಲೇ ಬಿಟ್ಟುಕೊಟ್ಟು ತನ್ನ ಕನಸಿನ ಕೂಸು ಅಕಾಡಮಿ ಕಟ್ಟುವುದಕ್ಕಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡವರು, ನೆಮ್ಮದಿಯ ಜೀವನವನ್ನು ಪಕ್ಕಕ್ಕೆ ಸರಿಸಿ ಮಕ್ಕಳ ಲೋಕವನ್ನು ಶ್ರೀಮಂತಗೊಳಿಸಲು ಅಪ್ಪಿಕೊಂಡವರು. ಧಾರವಾಡದ ಮತ್ತು ರಾಜ್ಯದ ಬಹುತೇಕ ಪ್ರಗತಿಪರ ಎಲ್ಲ ಹೋರಾಟಗಳಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಮೆರೆದವರು. ಗೋಕಾಕ ಚಳವಳಿಯಿಂದ ಹಿಡಿದು ಸಾಕ್ಷರತಾ ಆಂದೋಲನ, ವಿಜ್ಞಾನ ಚಳವಳಿ, ಹೈಕೋರ್ಟ್ ಸ್ಥಾಪನಾ ಚಳವಳಿ, ಮಹಾದಾಯಿ ಹೋರಾಟ, ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ, ಇತ್ತೀಚಿನ ಎಂ.ಎಂ. ಕಲಬುರ್ಗಿ, ಗೌರಿ ಹತ್ಯೆಯ ವಿರೋಧಿ ಹೋರಾಟ ಹೀಗೆ ಬಹುತೇಕ ಎಲ್ಲ ಹೋರಾಟಗಳ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು. ಸಂಘಟಕ, ಹೋರಾಟಗಾರ, ಪತ್ರಿಕೆ ಸಂಪಾದಕ, ಪ್ರಕಾಶಕ, ಅಂಕಣಕಾರ, ಶೈಕ್ಷಣಿಕ ಚಿಂತಕ... ಹೀಗೆ ಹಲವು ಸ್ತರಗಳಲ್ಲಿ ತೊಡಗಿಸಿಕೊಂಡವರು. ಧಾರವಾಡದ ಸಾಂಸ್ಕೃತಿಕ ನೆಲದಲ್ಲಿ ಹಣದ ಬೆನ್ನು ಹತ್ತದೆ ಗುಣದ ಬೆನ್ನು ಹತ್ತಿ ಪ್ರೀತಿಯ ಶಂಕ್ರಣ್ಣನಾಗಿ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದವರು.

ನಿಮ್ಮ ಮಾತು ಮತ್ತು ವಿಚಾರಗಳಲ್ಲಿ ಗ್ರಾಮೀಣ ಸೊಗಡು ಢಾಳಾಗಿ ಇದೆ, ಜೊತೆಗೆ ಉಡುಗೆ-ತೊಡುಗೆಯಲ್ಲಿ ಸರಳತೆ ಹಾಗೂ ಸದಾ ಖಾದಿಧಾರಿಯಾಗಿರುವುದರ ವಿಶೇಷತೆ...

- ಪಕ್ಕಾ ಹಳ್ಳಿಯ ಹೈದ ನಾನು. ರೈತಾಪಿ ಕುಟುಂಬದಿಂದ ಬಂದವ. ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದವನು. ಸ್ವಾತಂತ್ರ ಚಳವಳಿ ನಂತರ ಗಾಂಧೀಜಿಯವರ ಸರ್ವೋದಯದ ವಿದಾಯಕ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡಿದ್ದ ಗ್ರಾಮವದು. ಚರಕಾ ಸಂಘವಿತ್ತು, ಗ್ರಂಥಾಲಯವಿತ್ತು, ಬೀದಿ ದೀಪಗಳು, ಕನ್ನಡ ಶಾಲೆ, ಸಾಯಂಕಾಲ ಪ್ರತಿದಿನ ಸರ್ವಧರ್ಮ ಪ್ರಾರ್ಥನೆ, ಸರ್ವೋದಯದ ಜಿಲ್ಲಾ ಮಟ್ಟದ ಶಿಬಿರವೂ ನಮ್ಮೂರಲ್ಲಿ ನಡೆದ ನೆನಪು. ಅಪ್ಪಟ ಗಾಂಧಿವಾದಿ ನೀಲಕಂಠ ಗಣಾಚಾರಿ ನಮ್ಮೂರ ಚಿತ್ರಣವನ್ನೇ ಬದಲಿಸಿದವರು. ನಮ್ಮೂರಲ್ಲಿ ಸಾರಾಯಿ ಅಂಗಡಿ, ಚಹಾದಂಗಡಿ ಯಾವುವೂ ಇದ್ದಿಲ್ಲ. ಬೀಡಿ, ಎಲೆ ಅಡಿಕೆ ಸಹಿತ ತಿನ್ನದಂತೆ ಜನರನ್ನು ಪರಿವರ್ತನೆಗೊಳಿಸಿದ್ದರು. ನಿತ್ಯ ನನ್ನ ಅಪ್ಪ ಸರ್ವಧರ್ಮ ಪ್ರಾರ್ಥನಿಗೆ ಕರೆದುಕೊಂಡು ಹೋಗುತ್ತಿದ್ದರು. ಇಂಥ ವಾತಾವರಣದಲ್ಲಿ ಬಾಲ್ಯವನ್ನು ಕಳೆದವನು ನಾನು. ಇಂದಿಗೂ ಕಣ್ಣಮುಂದೆ ಕಟ್ಟಿದಂತೆ ಪ್ರತಿದಿನ ಹಿರಿಯರೆಲ್ಲರು ಸೇರಿ ನಿತ್ಯ ಪ್ರಾರ್ಥನೆ ಮಾಡುವುದು, ಯುವತಿಯರು ಚರಕಾ ಸಂಘದಲ್ಲಿ ನೂಲು ತೆಗೆಯುವುದು, ಮುದುಕಿಯರು ಲಡಿ ಸುತ್ತುವುದು, ಗಂಡಸರು, ನೇಯುವುದು, ಕುರುಬರ ಓಣಿಯಲ್ಲಿ ಕಂಬಳಿ ನೇಯುವುದು, ಗುಡಿ ಗುಂಡಾರಗಳಲ್ಲಿ ವಯಸ್ಸಾದವರು ತಕಲಿಗಳ ಮೂಲಕ ನೂಲು ಮಾಡುವುದು ಚಿತ್ರದಂತೆ ಹಾದುಹೋಗುತ್ತದೆ. ಹೀಗಾಗಿ ಸಣ್ಣವನಿರುವಾಗಲೇ ನನಗರಿವಿಲ್ಲದೇ ಗಾಂಧೀ ವಿಚಾರಧಾರೆಗಳು ಪ್ರಭಾವ ಬೀರಿದವು. ತಿಳುವಳಿಕೆ ಬಂದಾಗಿನಿಂದ ನಾನು ಖಾದಿ ಬಟ್ಟೆಯನ್ನೇ ತೊಡುತ್ತಿದ್ದೇನೆ. ನನ್ನೂರನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಾ ಬಂದಿದ್ದೇನೆ.

ಅಂದರೆ, ಇಂದಿಗೂ ನಿಮ್ಮ ಗ್ರಾಮದೊಂದಿಗೆ ಯಾವ ಸಂಬಂಧ ಕಾಪಿಟ್ಟುಕೊಂಡಿದ್ದಿರಿ?

- ನನ್ನ ಹಳ್ಳಿ ಎಂಬತ್ತು ಕಿಲೋಮೀಟರ್ ಧಾರವಾಡದಿಂದ ದೂರವಿದ್ದರೂ ಸದಾ ನನ್ನ ಹಳ್ಳಿಯನ್ನೇ ನನ್ನ ಮನಸ್ಸು ಜಪಿಸುತ್ತಿದೆ. ಕಳೆದ ಮೂವತ್ತೈದು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದರೂ, ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಇದು ನಮ್ಮೂರಲ್ಲಿ ನಡೆಯಬೇಕು ಎಂದು ಹಂಬಲಿಸಿದವನು. ಹೀಗಾಗಿ ಸ್ವಾತಂತ್ರ ಹೋರಾಟಗಾರರಾದ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎನ್. ಸುಬ್ಬಾರಾವ್, ನರಸಿಂವ್ ದಾಬಡೆ, ಶಕುಂತಲಾ ಕುರ್ತಕೋಟಿ, ಅಶೋಕ ದೇಶಪಾಂಡೆ, ಪಾಟೀಲ ಪುಟ್ಟಪ್ಪ, ದೇವನೂರ ಮಹಾದೇವರಂತ ಹಿರಿಯರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮಗಳನ್ನು, ಯುವಕರಿಗೆ ಶಿಬಿರಗಳನ್ನು ಮಾಡಿರುವೆ. ಊರಲ್ಲಿ ಇಂಗುಬಚ್ಚಲು, ಶಾಲಾ ಕಾಂಪೌಂಡ್, ಸೇದುವ ಬಾವಿಯ ಸ್ವಚ್ಛತಾ ಕಾರ್ಯ, ಕ್ರೀಡಾ ಚಟುವಟಿಕೆಗಳು, ಹತ್ತು ಹಲವು ವಿದಾಯಕ ಕಾರ್ಯಕ್ರಮಗಳ ಮೂಲಕ ಯುವಕರು ಗ್ರಾಮದ ಅಭಿವೃದ್ಧಿಗಾಗಿ ತೊಡಗಿಸಿಕೊಳ್ಳುವಂತೆ ಮನಸ್ಸು ಕಟ್ಟಿಕೊಡುವ ಪ್ರಯತ್ನ ಮಾಡುತ್ತಲೇ ಇರುವೆ. ನಾಲ್ಕಾರು ಯುವ ಸಂಘಗಳನ್ನು ಕಟ್ಟಿಕೊಳ್ಳುವಂತೆ ಮಾಡಿದ್ದೇನೆ. ಕೊತಬಾಳದ ಜನಪದ ಹಿರಿಯ ಕಲಾವಿದ ಶಂಕರಣ್ಣ ಸಂಕಣ್ಣವರ, ವಲ್ಲೆಪ್ಪನವರಿಂದ ಹಿಡಿದು ಉತ್ತರ ಕರ್ನಾಟಕದ ಎಲ್ಲ ಜನಪದ ಕಲಾವಿದರು ನನ್ನೂರಿಗೆ ಬರುವಂತೆ ಮಾಡಿದ್ದೇನೆ. ಇಂದಿಗೂ ನಾನು ಊರಿಗೆ ಹೋದರೆ ಏನಾದರೊಂದು ಕಾರ್ಯಕ್ರಮ ಹಮ್ಮಿಕೊಳ್ಳಲು ಬಂದಿದ್ದಾರೆ ಎನ್ನುವರು. 

ಮತ್ತೆ ಹಳ್ಳಿಗಳು ಕೆಟ್ಟು ಹೋಗಿವೆ ಎನ್ನುತ್ತಾರಲ್ಲಾ?

- ಹೀಗೆ ಹೇಳುವವರು ಹಳ್ಳಿಗಳಿಂದ ದೂರ ನಿಂತು ನೋಡುವವ ರಾಗಿರುತ್ತಾರೆ. ಎಲ್ಲವೂ ಒಂದೇ ರೀತಿಯಲ್ಲಿ ಇರಬೇಕು ಎನ್ನುವುದು ತಪ್ಪು. ಎಲ್ಲವೂ ಒಂದೇ ರೀತಿಯಲ್ಲಿ ಇರಬೇಕು, ಬದಲಾವಣೆಯಾಗಬಾರದು ಎನ್ನುವ ಮನೋಸ್ಥಿತಿಯವರಿಂದ ಇಂಥ ಮಾತುಗಳು ಆಡಲು ಸಾಧ್ಯ. ಗ್ರಾಮೀಣರಲ್ಲಿ ರಾಜಕೀಯ ಪ್ರಜ್ಞೆ ಬಂದಿದೆ, ಸಾಕ್ಷರತೆ ಹೆಚ್ಚಿದೆ. ಸಮಾನತೆಯ ಅರಿವು ಮೂಡಿದೆ. ಸಹಜವಾಗಿ ಸಂಘರ್ಷವಾಗುತ್ತದೆ. ಉಳಿಗಮಾನ್ಯ ಪದ್ಧತಿ, ಜೀತ ಪದ್ಧತಿ ಇವೆಲ್ಲವೂ ಇಂದು ಇಲ್ಲ, ಇವುಗಳು ಪಲ್ಲಟವಾಗುವಾಗ ಸಹಜ ಸಂಘರ್ಷಗಳು, ವೈಷಮ್ಯಗಳು ನಡೆಯುತ್ತವೆ. ರಾಜಕಾರಣ ಒಂದಿಷ್ಟು ಹಳ್ಳಿಯ ಜನರ ನೆಮ್ಮದಿಯನ್ನು ಕದಡುವಲ್ಲಿ ಹೆಚ್ಚು ಕಾರ್ಯ ಮಾಡುತ್ತಿದೆ. ಹಾಗೆಯೇ ಹಳ್ಳಿಗಳು ಒಂದಿಷ್ಟು ಹೆಚ್ಚೆನ್ನುವಂತೆ ಜಾತಿ ಜಾತಿಗಳ ನಡುವೆ ವೈಮನಸ್ಯ ತಂದುಕೊಂಡು, ಸಾಮರಸ್ಯ ಕಳೆದು ಸಂಘರ್ಷ ಹೆಚ್ಚಾಗುತ್ತಿವೆ. ಇವೆಲ್ಲವೂ ಅರಿವಿನ ಕೊರತೆಯಿಂದ ಆಗುತ್ತಿದೆ. ಅರಿವನ್ನು ನೀಡುವ ಕಾರ್ಯ ತುರ್ತಾಗಿ ಆಗಬೇಕಿದೆ ಅಷ್ಟೆ.

‘ಮಕ್ಕಳ ಮಹರ್ಷಿ’ ಎಂದು ನಿಮ್ಮನ್ನು ಕರೆಯುವುದನ್ನು ಕೇಳಿದ್ದೇನೆ. ಮಕ್ಕಳ ಪ್ರಪಂಚಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಂಡಿರುವುದನ್ನು ನೋಡುತ್ತಿದ್ದೇನೆ. ಮಕ್ಕಳೆಂದರೆ ಯಾಕೆ ನಿಮಗೆ ಇಷ್ಟ?

- ಯಾವಾಗಲೂ ನಮ್ಮ ಇಷ್ಟದಂತೆ ಸಮಾಜವನ್ನು ಕಾಣಲು ಬಯಸುತ್ತೇವೆ. ಇರದಿದ್ದಾಗ ಹಾಗೆ ಕಟ್ಟಲು ಹೆಣಗುತ್ತೇವೆ. ಪ್ರಗತಿಪರ ಆಲೋಚನೆ ಉಳ್ಳವರು ಯಾವಾಗಲು ಸ್ವಸ್ಥಸಮಾಜ ನಿರ್ಮಾಣಕ್ಕೆ ಹಂಬಲಿಸುವುದನ್ನು ನೋಡುತ್ತಿದ್ದೇವೆ. ನಾವು ಹೊಸ ಸಮಾಜ ನಿರ್ಮಾಣ ಮಾಡಬೇಕೆಂದರೆ ಅದು ಮಕ್ಕಳ ಮೂಲಕವೇ ಸಾಧ್ಯ. ಈ ಕಾರಣಕ್ಕಾಗಿಯೇ ಸಮಾಜ ಘಾತುಕರು, ಧರ್ಮಾಂಧರು ಎಳೆಯ ಮನಸ್ಸುಗಳಲ್ಲಿ ವಿಷಬೀಜ ಬಿತ್ತಿ ಸಮಾಜದ ನೆಮ್ಮದಿ ಕೆಡಿಸುವುದನ್ನು ಕಾಣುತ್ತಿದ್ದೇವೆ. ಮಗು ಅಪ್ಪಟ ಪರಿಶುದ್ಧ ಮನಸ್ಸು ಹೊಂದಿರುತ್ತದೆ. ಅಲ್ಲಿ ಕಪಟತನಕ್ಕೆ, ಸುಳ್ಳಿಗೆ ಅವಕಾಶವಿರುವುದಿಲ್ಲ. ನಿರ್ಮಲ ಮನಸ್ಸು, ಪ್ರೀತಿಗೆ ಹಂಬಲಿಸುತ್ತಿರುತ್ತದೆ. ಮುಗ್ಧ ಪ್ರಶ್ನೆಗಳಿರುತ್ತವೆ. ಮಗುವಿಗೆ ಯಾವ ಪರಿಸರ ಒದಗಿಸುತ್ತೇವೆಯೋ ಅದೇ ರೀತಿ ಅದು ಬೆಳೆಯುತ್ತದೆ. ಎಲ್ಲರೂ ಪರಸ್ಪರ ನಂಬಿಕೆಯೊಂದಿಗೆ ಬದುಕು ಸಾಗಿಸಬೇಕಾಗಿದ್ದನ್ನು ಜಾತಿ, ಧರ್ಮಗಳ ನಶೆ ಏರಿಸಿಕೊಂಡು ನೆಮ್ಮದಿಯ ದಿನಗಳನ್ನು ಹಾಳು ಮಾಡುತ್ತಿರುವ ಇಂದಿನ ಹಿರಿಯರನ್ನು, ಮತ್ತು ಯುವಕರನ್ನು ನೋಡುತ್ತಿದ್ದೇವೆ. ಇಂಥವರನ್ನು ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಮಕ್ಕಳಾದರೆ ತಿಳಿದು ಕೊಳ್ಳುವ ಮನೋಸ್ಥಿತಿಯವರಾಗಿರುತ್ತಾರೆ. ಅವರಿಗೆ ಸಮಭಾವ ತುಂಬುವ ಸುಂದರ ಪರಿಸರವನ್ನು ಒದಗಿಸುವ ಮೂಲಕ ಒಂದಿಷ್ಟು ಒಳ್ಳೆಯ ಗುಣಗಳನ್ನು ಬಿತ್ತಲು ಸಾಧ್ಯ. ಅದಕ್ಕಾಗಿ ನೆಮ್ಮದಿಯ ನಾಳೆಯ ದಿನಗಳನ್ನು ಕಂಡುಕೊಳ್ಳಲು ಮಕ್ಕಳ ಲೋಕವನ್ನು ಆಯ್ಕೆ ಮಾಡಿಕೊಂಡೆ.

ಕಳೆದ ವರ್ಷ ಆರನೇ ಮಕ್ಕಳ ಸಮ್ಮೇಳನ ಮಾಡುವಾಗ ಅಂತರ್‌ರಾಷ್ಟ್ರೀಯ ಭಾಷಾ ತಜ್ಞ ಪ್ರೊ. ಗಣೇಶ ಎನ್. ದೇವಿಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಮೂರು ಸಾವಿರದಷ್ಟು ಮಕ್ಕಳು ಮೂರು ದಿನಗಳ ಕಾಲ ಸಂಭ್ರಮಿಸು ವುದನ್ನು ನೋಡಿ, ತಮ್ಮ ಭಾಷಣ ಕಾಲಕ್ಕೆ ನನ್ನ ಕರೆದು ಇವರಿಗೆ ಇಂದಿನಿಂದ ‘ಮಕ್ಕಳ ಮಹರ್ಷಿ’ ಎಂದು ಕರೆಯಿರಿ ಎಂದು ಘೋಷಿಸಿ, ಮಕ್ಕಳಿಂದಲೂ ಜೋರು ದನಿಯಲ್ಲಿ ಹೇಳಿಸಿದರು. ನಾನು ಅದಕ್ಕೆ ಅರ್ಹನಲ್ಲದಿದ್ದರೂ ಪ್ರೀತಿಯಿಂದ ಕರೆಯು ತ್ತಿರುವುದನ್ನು ನಿರಾಕರಿಸಲು ಆಗುತ್ತಿಲ್ಲ.

ಮಕ್ಕಳು ಸುಂದರ ಕನಸುಗಳನ್ನು ಕಟ್ಟಿಕೊಳ್ಳುವಲ್ಲಿ ನಿಮ್ಮ ಪ್ರಯತ್ನದ ಹಾದಿ....

- ಬೇಸಿಗೆ ಶಿಬಿರಗಳನ್ನು ಪ್ರಾರಂಭಿಸುವುದರಿಂದ ಹಿಡಿದು ಆರು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ಮಾಡುವ ಮೂಲಕ ಎಲ್ಲ ವರ್ಗ ಮತ್ತು ಸ್ತರದ ಮಕ್ಕಳು ಒಂದೆಡೆ ಎರಡು ಮೂರು ದಿನಗಳ ಕಾಲ ಕೂಡಿ ಚಿಂತನ ಮಂಥನ, ಆಟ, ಊಟ, ಕೂಡಿ ಇರುವಿಕೆಯನ್ನು ಮಾಡುವುದರ ಮೂಲಕ ನಾವೆಲ್ಲ ಒಂದು ಎಂಬ ವಿಶಾಲ ಗುಣದ ಬೀಜವನ್ನು ಮೊಳಕೆಯೊಡೆಯುವಂತೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಪೌರಪ್ರಜ್ಞೆ ಬೆಳೆಸಲು ಚಳವಳಿ ರೂಪದಲ್ಲಿ ಕಾರ್ಯಕ್ರಮ ಮಾಡಿ ಅವರಲ್ಲಿ ಸಾಮಾಜಿಕ ಅರಿವನ್ನು ಮತ್ತು ಜವಾಬ್ದಾರಿಯನ್ನು ಮೂಡಿಸುವ ಪ್ರಯತ್ನ ಮಾಡಿದೆ. ಮಕ್ಕಳಿಗಾಗಿ ಪತ್ರಿಕೆಯೊಂದನ್ನು ಪ್ರಾರಂಭಿಸಿ ಅದರ ಮೂಲಕ ಓದುವ ಅಭಿರುಚಿ ಹುಟ್ಟುಹಾಕಿ ಅವರಲ್ಲಿ ಮಕ್ಕಳ ಮನೋಲ್ಲಾಸ ಹೆಚ್ಚಿಸಲು ವೈಜ್ಞಾನಿಕವಾಗಿ ಯೋಚಿಸುವಂತೆ ಮಾಡಲು ಪ್ರಯತ್ನಿಸುತ್ತಿರುವುದು, ಮಕ್ಕಳ ಕೈಗೆ ಒಳ್ಳೆಯ ಅಭಿರುಚಿ ಪುಸ್ತಕಗಳನ್ನು ನೀಡುವುದಕ್ಕಾಗಿ ‘ಚಿಲಿಪಿಲಿ’ ಪ್ರಕಾಶನ ಹುಟ್ಟು ಹಾಕಿ ನೂರಾರು ಪುಸ್ತಕಗಳನ್ನು ಪ್ರಕಟಿಸಿ ಅವರ ಕೈಗೆ ಎಟಕುವ ದರದಲ್ಲಿ ನೀಡುತ್ತಾ ಬರಲಾಗಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಚಿಲಿಪಿಲಿ ಬಳಗವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಹಿಂದುಳಿದ ಪ್ರದೇಶದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದೇನೆ. ಎರಡುವರೆನೂರು ಮಕ್ಕಳ ಮನಸ್ಸುಗಳನ್ನು ಪ್ರವೇಶಿಸಿದ್ದೇನೆ. ಸಮ್ಮೇಳನಗಳ ಮೂಲಕ, ಶಿಬಿರಗಳ ಮೂಲಕ ಈ ಕಾರ್ಯವನ್ನು ಮಾಡುತ್ತಲೇ ಇದ್ದೇನೆ. ಮಕ್ಕಳ ಪತ್ರಿಕೆ ‘ಗುಬ್ಬಚ್ಚಿ ಗೂಡು’ ಪ್ರಕಟಿಸುತ್ತಾ ಬಂದಿದ್ದು ನಿಮ್ಮ ಸಾಹಸಗಳಲ್ಲಿ ಒಂದು.

ಮಕ್ಕಳು ಓದುವ ಹವ್ಯಾಸದಿಂದ ದೂರಸರಿದಿರುವಾಗ ನಿಮ್ಮ ಪತ್ರಿಕೆಯನ್ನು ನಿರಂತರ ಪ್ರಕಟಿಸುತ್ತಿರುವ ಪ್ರಯತ್ನದ ಹಿಂದಿರುವ ಭರವಸೆ ಏನು?

- ನಮ್ಮ ರಾಜ್ಯದಲ್ಲಿ ಸಾವಿರಾರು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. ಲಕ್ಷಲಕ್ಷ ಶಿಕ್ಷಕರಿದ್ದಾರೆ. ಎರಡು ಕೋಟಿಗೂ ಮಿಕ್ಕು ಮಕ್ಕಳಿದ್ದಾರೆ. ಇಂಥದೊಂದು ವಿಶಾಲವಾದ ಕ್ಷೇತ್ರದಲ್ಲಿ ಒಂದು ಮಕ್ಕಳ ಪತ್ರಿಕೆ ನಡೆಸಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿರುವುದು ಇಂದಿನ ಕನ್ನಡ ಭಾಷೆಯ ದುಸ್ಥಿತಿಯನ್ನು ಎತ್ತಿತೋರಿಸುವಂತಿದೆ. ಉಳಿದ ಭಾಷೆಯಲ್ಲಿ ಮಕ್ಕಳ ಪತ್ರಿಕೆಗಳು ಯಾವ ಅಡತಡೆ ಇಲ್ಲದೇ ಪ್ರಕಟವಾಗುತ್ತಿರುವುದನ್ನು ನೋಡುತ್ತೇವೆ. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಅತ್ಯಂತ ದಯನೀಯ ಸ್ಥಿತಿ ಮಕ್ಕಳ ಪತ್ರಿಕೆಗಳದ್ದಾಗಿದೆ. ಕಳೆದ ಹತ್ತೊಂಬತ್ತು ವರ್ಷಗಳಿಂದ ಈ ಪತ್ರಿಕೆಯನ್ನು ಪ್ರಕಟಿಸುತ್ತಾ ಬರಲಾಗಿದೆ. ಶಿಶು ಸಂಗಮೇಶರ ‘ಬಾಲ ಭಾರತಿ’ಯಿಂದ ಹಿಡಿದು ಹಲವಾರು ಹಿರಿಯರು ಮಕ್ಕಳ ಪತ್ರಿಕೆಯನ್ನು ಪ್ರಾರಂಭಿಸಿದರು. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಯಾವ ಮಕ್ಕಳ ಪತ್ರಿಕೆಯೂ ಎರಡು ವರ್ಷ ನಡೆದ ಇತಿಹಾಸ ಇಲ್ಲ. ಆದರೆ ‘ಗುಬ್ಬಚ್ಚಿ ಗೂಡು’ ನಿರಂತರ ಹತ್ತೊಂಬತ್ತು ವರ್ಷಗಳಿಂದ ನಡೆದುಬಂದಿದೆ. ಇದೊಂದು ಇತಿಹಾಸ. ಗುಬ್ಬಚ್ಚಿ ಗೂಡು ಬರೀ ಪತ್ರಿಕೆಯಾಗಿ ಅಷ್ಟೇ ಆಗಿರದೇ ಮಕ್ಕಳ ರಾಜ್ಯಮಟ್ಟದ ಸಾಹಿತ್ಯಕ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. ಒಟ್ಟು 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮುಕ್ತವಾಗಿ ತಮ್ಮ ಪ್ರತಿಭೆಯನ್ನು ತೋರಿಸಲು ಹತ್ತಾರು ವೇದಿಕೆಗಳನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಮಕ್ಕಳಿಗಾಗಿ ದುಡಿಯುವ ವ್ಯಕ್ತಿ, ಸಂಘ-ಸಂಸ್ಥೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ‘ಶಿಕ್ಷಣ ಸಿರಿ’ ನೀಡಿ ಸಮಾಜಕ್ಕೆ ಪರಿಚಯಿಸುತ್ತಾ ನಡೆದಿದೆ. ಹೀಗೆ ಹಲವು ಸ್ತರದಲ್ಲಿ ಪತ್ರಿಕಾ ಬಳಗ ಕಾರ್ಯಮಾಡುತ್ತಿರುವುದು ಒಂದು ವಿಶೇಷ. ಒಂದು ಭರವಸೆ ಇದೆ, ಇಂದಲ್ಲಾ ನಾಳೆ ಮತ್ತೆ ಮಕ್ಕಳಿಗೆ ಕನ್ನಡ ಭಾಷೆಯ ಮೇಲೆ ಮೋಹ ಆಗುವ ಬಗ್ಗೆ, ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚುವ ಬಗ್ಗೆ ಆಶಾದಾಯಕವಾಗಿದ್ದೇನೆ. ಅಚ್ಛಾ ದಿನ್ ಗಳಿಗಾಗಿ ಕಾಯುತ್ತಿದ್ದೇನೆ. 

ಈ ನಿಮ್ಮ ಕೆಲಸದಲ್ಲಿ ಸಹಕರಿಸಿದವರನ್ನು ನೆನಪಿಸಿಕೊಳ್ಳಬಹುದೇ?

- ಬಹು ದೊಡ್ಡ ಬಳಗ ನನ್ನ ಹಿಂದಿದೆ. ‘ಚಿಲಿಪಿಲಿ’, ‘ಗುಬ್ಬಚ್ಚಿ ಗೂಡು’ ಬಳಗ ನಾಡಿನ ತುಂಬ ಹರಡಿಕೊಂಡಿದೆ. ಅವರವರ ಮಿತಿಯಲ್ಲಿ ನನ್ನ ಆಶಯಗಳ ಕಾರ್ಯಕ್ರಮಗಳನ್ನು ಕೈ ಜೋಡಿಸಿ ಯಶಸ್ವಿಗೊಳಿಸುತ್ತಾ ಬಂದಿದ್ದಾರೆ. ಡಾ.ನಿಂಗು ಸೊಲಗಿ, ಬಸವರಾಜ ಗಾರ್ಗಿ, ವಿವೇಕಾನಂದ ಪಾಟೀಲ, ಡಾ. ಲಿಂಗರಾಜ ರಾಮಾಪೂರ, ರೂಪ ಹಾಸನ, ಚಂದ್ರಕಾಂತ ಕರದಳ್ಳಿ, ಎಂ.ಎಂ. ಸಂಗಣ್ಣವರ, ಎಲ್.ಐ. ಲಕ್ಕಮ್ಮನವರ, ವಿ.ಎನ್. ಕೀರ್ತಿವತಿ, ಮಮತಾ ಅರಸಿಕೇರೆ, ಪರಮೇಶಿ ಸೊಪ್ಪಿಮಠ, ಚಂದ್ರಪ್ಪ ಹೆಬ್ಬಾಳ್ಕರ, ಎಫ್.ಸಿ.ಚೇಗರೆಡ್ಡಿ, ಆರ್.ಎಸ್. ಗುರುಮಠ, ಎಂ.ಎಸ್. ಪೂಜಾರ, ಡಾ. ಪ್ರಭು ಗಂಜಿಹಾಳ, ಚಿದಂಬರ ನಿಂಬರಗಿ.... ಹೀಗೆ ಪಟ್ಟಿ ಬೆಳೆಯುವಂತೆ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಪರಿಶ್ರಮ ದೆ. ಹೆಸರು ಮಾತ್ರ ನನ್ನದು ಆಗಿದೆ ಅಷ್ಟೇ.

ನಿಮ್ಮ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ಪ್ರಭಾವ ಬೀರಿದವರಿದ್ದಾರೆಯೇ?

- ಮೊತ್ತಮೊದಲು ನನ್ನಪ್ಪ, ನಂತರ ನನ್ನವ್ವ. ನನ್ನಪ್ಪ ‘‘ಓದಿ ಸ್ಯಾನ್ಯಾ ಆದಿ ನಿನ್ನದ ಇರತೈತಿ, ಓದದೇ ತಿರಗಾಡಿ ಕೈಯಲ್ಲಿ ಚಿಪ್ಪು ಬಂದ್ರೂ ನಿನ್ನದೇ ನೋಡು’’ ಎಂದು ಓದಲು ಹಚ್ಚಿದ ನನ್ನಪ್ಪ, ‘‘ಯಪ್ಪಾ ಮಗನ ನೀ ಬರೀ ಬಡಬಗ್ಗರು ಅಂತಾ ಇರತಿ, ವಕೀಲಕಿ ಮಾಡಿದ್ರ ಕೋಟ ಮಾರಕೊಂಡ ಹೆಂಡರ ಮಕ್ಕಳ್ನ ಬೀದಿಗೆ ತಂದ ಇಡತಿ, ಒಂದ ಸರಕಾರಿ ನೌಕರಿ ಹಿಡಿ ಅಂತಾ’’ ಸರಕಾರಿ ನೌಕರಿ ಮಾಡಾಕ ಹಚ್ಚಿದ ನನ್ನವ್ವ, ಪದವಿ ಓದುವಾಗಲೇ ಗಾಂಧೀ ವಿಚಾರಗಳತ್ತ ಸೆಳೆದವರು ಬಸವಪ್ರಭು ಹೊಸಕೇರಿ, ಗೋವಿಂದ ಮಡಿವಾಳರು, ನೌಕರಿ ಮಾಡುತ್ತಲೇ ಹಳ್ಳಿಗಳತ್ತ ಮುಖಮಾಡಲು ಪ್ರೇರೇಪಿಸಿದವರು, ಸ್ವಾತಂತ್ರ್ಯ ಹೋರಾಟಗಾರ್ತಿ ಶಕುಂತಲಾ ಕುರ್ತಕೋಟಿ, ಗಾಂಧೀ ಶಾಂತಿ ಪ್ರತಿಷ್ಠಾನಕ್ಕೆ ನನ್ನನ್ನು ಸೆಳೆದವರು. ನನ್ನೂರನ್ನು ಪ್ರೀತಿಸಲು ಹಚ್ಚಿದವರು ಸ್ವಾತಂತ್ರ ಹೋರಾಟಗಾರ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಎಸ್. ಎನ್. ಸುಬ್ಬಾರಾವ್, ಗಾಂಧಿ ವಿಚಾರದ ಜೊತೆಗೆ ಮಾರ್ಕ್ಸ್‌ವಾದವನ್ನೂ ಅಪ್ಪಿಕೊಂಡು ಹೋರಾಟಕ್ಕೆ ಇಳಿಯುವಂತೆ ಮಾಡಿದವರ ಡಾ. ಸಿದ್ದನಗೌಡ ಪಾಟೀಲ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಇರುವಂತೆ ರೂಪಿಸಿದವರು ವಿಜ್ಞಾನಿ ಪ್ರೊ. ಸಂಪಿಗೆ ತೋಂಟದಾರ್ಯ, ಡಾ. ಎಂ. ಎಂ. ಕಲಬುರ್ಗಿ, ಇನ್ನೂ ಸರಳತೆಯಿಂದ ಬದುಕಲು ಪ್ರೇರೇಪಿಸಿದವರು ದೇವನೂರ ಮಹಾದೇವ.

ಸಾರ್ವಜನಿಕ ಜೀವನದಲ್ಲಿ ನಿಮಗೆ ಬೇಸರ, ನೋವು ಮತ್ತು ಸಂತೋಷ ನೀಡಿದ ಘಟನೆಗಳು ನೆನಪಿಸಿಕೊಳ್ಳಬಹುದಾ?

- ಎಲ್ಲ ಕೆಲಸಗಳೂ ಖುಷಿಯನ್ನು ನೀಡಬೇಕು ಸಂತೋಷವನ್ನು ತರಬೇಕು ಎನ್ನುವುದು ತಪ್ಪು. ಸಾರ್ವಜನಿಕ ಜೀವನಕ್ಕೆ ಬಂದಮೇಲೆ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕು. ನನ್ನ ಮಹಾ ಕನಸು ಪ್ರತಿ ಹಳ್ಳಿಯಲ್ಲಿ ಮಕ್ಕಳ ಮಿತ್ರಪಡೆ ಆಗಬೇಕು, ಆ ಮೂಲಕ ಪ್ರತಿ ಊರಿನ ಪ್ರತಿ ಮಗುವಿನ ಪ್ರತಿಭೆೆ ಗುರುತಿಸಿ, ವಿಷಯವಾರು ತರಬೇತಿ, ಮಾರ್ಗದರ್ಶನ ದೊರಕಿಸಬೇಕು, ತಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಎರಡು ಕೋಟಿ ಮಕ್ಕಳು ಒಂದು ದಿನ ಬೀದಿಯಲ್ಲಿ ನಿಂತು ಸಾರ್ವಜನಿಕರ ಮತ್ತು ಸರಕಾರದ ಗಮನಸೆಳೆಯಬೇಕು ಎಂಬ ಆಸೆ ಇಟ್ಟುಕೊಂಡು ಬಾಲವಿಕಾಸ ಅಕಾಡಮಿ ಹುಟ್ಟುಹಾಕಿದ್ದು. ಅದರ ಅಧ್ಯಕ್ಷನಾಗಿ ಆ ನಿಟ್ಟಿನಲ್ಲಿ ಹೆಜ್ಜೆ ಹಾಕುವಾಗಲೇ ಕೆಳಗಿಳಿಸಿ ನನ್ನ ಕನಸನ್ನು ಭಗ್ನಗೊಳಿಸಿದ್ದು ಬೇಸರ ತಂದಿದೆ. ರಾಜ್ಯದ ತುಂಬ ಮಕ್ಕಳಿಗಾಗಿ ತೊಡಗಿಸಿಕೊಂಡ ಸಾವಿರಾರು ವ್ಯಕ್ತಿ ಸಂಘಟನೆಗಳು, ಸಾಹಿತಿಗಳು, ಶಾಲೆಗಳು, ಮಕ್ಕಳು ಇದ್ದಾಗ್ಯೂ ಒಂದು ಮಕ್ಕಳ ಪತ್ರಿಕೆ ಈ ಕನ್ನಡ ನಾಡಿನಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ಕಾಡುತ್ತಿದೆ. ವ್ಯಕ್ತಿಗತ ನೋವು ಹೇಳಿಕೊಳ್ಳುವುದಾದರೆ ನನಗೆ ಇಂಗ್ಲೀಷ್, ಹಿಂದಿ ಭಾಷೆ ಚೆನ್ನಾಗಿ ಬರದೇ ಇರೋದರಿಂದ ಎಷ್ಟೆಲ್ಲಾ ಅವಕಾಶಗಳನ್ನೂ ಕಳೆದುಕೊಂಡೆನಲ್ಲ ಎಂಬ ನೋವು ನಿರಂತರ ಇದೆ. ಸಂತೋಷದ ಬಗ್ಗೆ ಹೇಳಿಕೊಳ್ಳುವುದಾದರೆ, 2007ರಲ್ಲಿ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜಿ ಅಬ್ದುಲ್ ಕಲಾಮರು ಜನವರಿ 26ರ ಚಹಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರಕಿ, ಅವರೊಟ್ಟಿಗೆ ಎರಡು ತಾಸು ಕಳೆದದ್ದು, ದಿಲ್ಲಿಯ ಮೊಗಲ ಗಾರ್ಡನ್‌ನಲ್ಲಿ ಅವರೊಟ್ಟಿಗೆ ಚಹಾ, ಉಪಾಹಾರ ಸೇವಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ.

ಕೊನೆಯದಾಗಿ ನೀವು ಏನನ್ನು ಹೇಳಲು ಬಯಸುತ್ತಿದ್ದೀರಿ?

- ಪ್ರಗತಿಪರ ಚಿಂತಕರು, ಹೋರಾಟಗಾರರು, ಹಿರಿಯ ಸಾಹಿತಿಗಳು ಮೊದಲು ಮಕ್ಕಳ ಲೋಕದತ್ತ ಮುಖ ಮಾಡಬೇಕು. ಕೋಮುವಾದಿ ಸಂಘಟನೆಗಳು ಮಕ್ಕಳ ಲೋಕವನ್ನು ಆಕ್ರಮಿಸುತ್ತಿದ್ದಾವೆ. ಮಕ್ಕಳ ಮನಸ್ಸಲ್ಲೂ ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಘಟನಾತ್ಮಕವಾಗಿ ಸಮಾನತೆ, ಸಹಬಾಳ್ವೆಯ ನೆಲೆಗಟ್ಟಿನಲ್ಲಿ ಮಕ್ಕಳ ಮನಸ್ಸನ್ನು ಕಟ್ಟುವ ಕಾರ್ಯಕ್ಕೆ ಕೈಹಾಕದೇ ಹೋದರೆ, ಮುಂದಿನ ಜನಾಂಗ ನಮ್ಮನ್ನು ಶಪಿಸದೇ ಬಿಡುವುದಿಲ್ಲ, ಅವರನ್ನು ತೆಗಳುವುದನ್ನು ಬಿಟ್ಟು ಪ್ರತಿಯಾಗಿ ಮಕ್ಕಳ ಲೋಕದಲ್ಲಿ ಪ್ರವೇಶಿಸಿ ನಮ್ಮ ಕನಸುಗಳನ್ನು ಬಿತ್ತುವ ಕೆಲಸ ಮಾಡಬೇಕು ಅಂದಾಗ ಮಾತ್ರ ನಮ್ಮ ಬರವಣಿಗೆ ಮತ್ತು ಮಾತಿಗೆ ಅರ್ಥ ಸಿಗುತ್ತದೆ.

Writer - ಮಮತಾ ಅರಸೀಕೆರೆ

contributor

Editor - ಮಮತಾ ಅರಸೀಕೆರೆ

contributor

Similar News