ಜೆಎನ್‌ಯು ಕಟ್ಟಿದ ಜಿಪಿ
ಗೋಪಾಲಸ್ವಾಮಿ ಪಾರ್ಥಸಾರಥಿ ಎಂದು ಹೇಳಿದರೆ ಯಾರು? ಎಂದು ಮನಗಾಣಲು ಸ್ವಲ್ಪ ಹೊತ್ತು ಬೇಕಾಗುತ್ತದೆ. ಆದರೆ ಜಿಪಿ ಎಂದರೆ ಸಾಕು, ಯಾರು ಎಂದು ತಕ್ಷಣ ಗೊತ್ತಾಗಿ ಬಿಡುತ್ತದೆ. ತನ್ನ ಸುತ್ತ ಇರುವ ಪ್ರಪಂಚದ ಒಳಿತಿನ ಬಗ್ಗೆ ಸದಾ ಕಾಳಜಿ ಹೊಂದಿದ್ದ ಒಬ್ಬ ವ್ಯಕ್ತಿ ಎಂದು ಅವರನ್ನು ಜನ ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿರುತ್ತಾರೆ.
ನಾವು ಇತಿಹಾಸಕಾರರು ಪೂರ್ಮಿಕರ, ವಂಶಾವಳಿಯ ಜಾಡು ಹಿಡಿದು ಓಡಾಡುತ್ತಿರುತ್ತೇವೆ. ಜಿಪಿಯವರ ವಂಶದ ಇತಿಹಾಸ ಆಸಕ್ತಿ ಹುಟ್ಟಿಸುವಂತಿದೆ. ಅವರ ತಂದೆ ಗೋಪಾಲ ಸ್ವಾಮಿ ಅಯ್ಯಂಗಾರ್ ಕಾಶ್ಮೀರದ ಪ್ರಧಾನಿಯಾಗಿ ದ್ದರು ಮತ್ತು ಬಳಿಕ ಜವಾಹರಲಾಲ್ ನೆಹರೂರವರ ಸಚಿವ ಸಂಪುಟದ ಓರ್ವ ಸದಸ್ಯರಾಗಿದ್ದರು. ಅವರ ಚಿಕ್ಕಪ್ಪ, ರಂಗಸ್ವಾಮಿ ಅಯ್ಯಂಗಾರ್ ದಿ ಹಿಂದು ಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಕಾರ್ಯದರ್ಶಿಯಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ವಿ.ಚಿ.ಕೃಷ್ಣಮಾಚಾರಿ ಅವರ ಸಂಬಂಧಿಕರಾಗಿದ್ದರು.
ಆದ್ದರಿಂದ ಜಿಪಿ ರಾಜಕಾರಣ ಮತ್ತು ಆಡಳಿತದಲ್ಲಿ ಪಾತ್ರವಹಿಸಿದ್ದ ಬಹಳ ಶಿಕ್ಷಿತ ವ್ಯಕ್ತಿಗಳ ಕುಟುಂಬದ ವಾತಾವರಣದಲ್ಲಿ ಬೆಳೆದರು. ಸಮಾಜದ ಕಲ್ಯಾಣದ, ಒಳಿತಿನ ಕುರಿತಾದ ಕಾಳಜಿ ಎಂದು ರಾಜಕಾರಣವನ್ನು ವ್ಯಾಖ್ಯಾನಿ ಸಲಾಗಿದ್ದ ಕಾಲ ಅದು. ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಆಳವಾಗಿ ತೊಡಗಿದ್ದವರು ಬರಲಿರುವ ಸಮಾಜದ ಒಂದು ದರ್ಶನ (ವಿಷನ್)ಕ್ಕೆ ಪೂರಕವಾದ ವೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡಿದ್ದರು. ಸಾಮಾಜಿಕವಾಗಿ ನ್ಯಾಯಯುತ ವಾದ ಮತ್ತು ಆರ್ಥಿಕವಾಗಿ ಸಮಾನವಾದ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಆ ತಲೆಮಾರಿಗೆ ಸೇರಿದವರು ಜಿಪಿ.
ಜಿಪಿಯವರು ಮದರಾಸು ವಿಶ್ವವಿದ್ಯಾನಿಲಯದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಚಳವಳಿಯಲ್ಲಿ ಅವರು ಸಕ್ರಿಯರಾಗಿದ್ದರು ಮತ್ತು ಇದು ಯುವ ಜನತೆಯ ಆಕಾಂಕ್ಷೆಗಳ ಬಗ್ಗೆ ಅವರನ್ನು ಸೂಕ್ಷ್ಮ ಸಂವೇದಿಯಾಗಿ ಮಾಡಿತು. ಬಳಿಕ ಅವರು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯಕ್ಕೆ ತೆರಳಿ ಆಧುನಿಕ ಇತಿಹಾಸ ಅಧ್ಯಯನ ಮಾಡಿ, ಲಂಡನ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಕ್ರಿಕೆಟ್ ಅವರ ಅಚ್ಚುಮೆಚ್ಚಿನ ಕ್ರೀಡೆಯಾಗಿತ್ತು.
ಭಾರತಕ್ಕೆ ಮರಳಿ ಬಂದ ನಂತರ ಅವರು ಉಪಸಂಪಾದಕರಾಗಿ ದಿ ಹಿಂದು ಪತ್ರಿಕೆಯಲ್ಲಿ ದುಡಿಯಲಾರಂಭಿಸಿದರು. ಜೊತೆಗೆ, ಆಗ ನಡೆಯುತ್ತಿದ್ದ ವಸಾಹತುಶಾಹಿ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡಿದರು. ಇದರಿಂದಾಗಿ, ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಭಾರತ ಸರಕಾರ ಮಧ್ಯೆ ನಡೆಯುವ ಮಾತುಕತೆಗಳಿಗೆ ಅವರು ಮುಖ್ಯ ಸಂಧಾನಕಾರರಾದರು. 1949ರಲ್ಲಿ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಓರ್ವ ಪ್ರತಿನಿಧಿಯಾಗಿ ಲಂಡನ್‌ಗೆ ಹೋದರು. ಆಗ ತಾನೆ ಭಾರತ ಸ್ವತಂತ್ರವಾಗಿತ್ತು. ಅಂತರ್‌ರಾಷ್ಟ್ರೀಯ ರಂಗದಲ್ಲಿ ಭಾರತದ ರಾಜಕೀಯ ನಿಲುವುಗಳನ್ನು ಸ್ಪಷ್ಟಪಡಿಸುವುದು ಅವರ ಕೆಲಸವಾಗಿತ್ತು.
ಮುಂದಿನ ದಶಕದಲ್ಲಿ, ಜಿಪಿ ಪತ್ರಿಕೋದ್ಯಮ ತೊರೆದು ರಾಜತಾಂತ್ರಿಕ ರಂಗ ಸೇರಿದರು. ಕಾಂಬೋಡಿಯಾ ಮತ್ತು ವಿಯೆಟ್ನಾಂನಲ್ಲಿ ‘ಇಂಟರ್ ನ್ಯಾಷನಲ್ ಕಮಿಶನ್ಸ್ ಫಾರ್ ಸುಪರ್‌ವಿಶನ್ ಆ್ಯಂಡ್ ಕಂಟ್ರೋಲ್’ನ ಅಧ್ಯಕ್ಷರಾಗಿ, ಬಳಿಕ ಇಂಡೋನೇಶ್ಯಾ ಮತ್ತು ನಂತರ ಚೀನಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 1965ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾದರು.
ಒಂದು ವಿಶ್ವವಿದ್ಯಾನಿಲಯ ಎಂದರೆ ಏನು?
ಅಕಾಡಮಿಕ್ ಆಗಲು ಪ್ರಯತ್ನಿಸುತ್ತಿರುವ ಓರ್ವ ರಾಜತಾಂತ್ರಿಕನಲ್ಲ. ಬದಲಾಗಿ ಒಂದು ವಿಶ್ವವಿದ್ಯಾನಿಲಯ ಹೇಗೆ ಒಂದು ವಿಶ್ವವಿದ್ಯಾನಿಲಯವಾಗುತ್ತದೆ ಎಂಬ ಧೀಮಂತ ದರ್ಶನವಿದ್ದ ಒಬ್ಬ ವ್ಯಕ್ತಿಯನ್ನು ಜೆಎನ್‌ಯು ಪಡೆದಿದೆ ಎಂದು ಆಗ ನನಗೆ ಮನವರಿಕೆಯಾಯಿತು.
ವಿಶ್ವವಿದ್ಯಾನಿಲಯ ಎಂಬುದು ಕೇವಲ ಪದವಿಗಳನ್ನೂ ನೀಡುವ ಸ್ಥಳವಲ್ಲ. ಅದು ಜ್ಞಾನವನ್ನು ಹೆಚ್ಚಿಸುವ ಒಂದು ತಾಣ. ಇಂತಹ ತಾಣವಾಗಬೇಕಾದರೆ ಮುಕ್ತ ಯೋಜನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಒಂದು ವಾತಾವರಣದಲ್ಲಿ, ಪ್ರಶ್ನೆಗಳನ್ನು ಕೇಳುವ ಮತ್ತು ಅನುಮಾನಗಳನ್ನು ವ್ಯಕ್ತಪಡಿಸುವ ಪರಿಸ್ಥಿತಿ ಇರಬೇಕು. ಭಾರತದ ಅತ್ಯಂತ ಪ್ರಸಿದ್ಧವಾದ ಜೆಎನ್‌ಯುವನ್ನು ಈಗ ನಿಧಾನವಾಗಿ ಅಂಗಹೀನಗೊಳಿಸಲಾಗುತ್ತದೆ. ಆದರೆ, ಮುಕ್ತವಾಗಿ ಚರ್ಚಿಸಲು ಅವಕಾಶ ನೀಡದೆ ಸರಕಾರದ ಪರವಾನಿಗೆ ಪಡೆದ ವಿಚಾರಗಳಿಗೆ ಮಾತ್ರ ಅವಕಾಶ ನೀಡುವುದು ಅಧಿಕಾರಸ್ಥ ಸರಕಾರ ಅಭದ್ರವಾಗುತ್ತಿರುವುದರ ಮತ್ತು ಪ್ರಾಯಶಃ ಸ್ವಲ್ಪ ಬೆದರಿರುವುದರ ಸಂಕೇತವೆಂದು ನಾವು ಇತಿಹಾಸದಿಂದ ಕಲಿತಿದ್ದೇವೆ.
ಒಂದು ವಿಶ್ವವಿದ್ಯಾನಿಲಯದ ವ್ಯಾಖ್ಯಾನದ ಬಗ್ಗೆ, ಒಂದು ಸಮಾಜದ ನಿರ್ಮಾಣದಲ್ಲಿ ಅದು ವಹಿಸುವ ಪ್ರಮುಖವಾದ ಪಾತ್ರದ ಬಗ್ಗೆ ಜಿಪಿಯವರಿಗೆ ಸ್ಪಷ್ಟವಾದ ಅರಿವಿತ್ತು. ಜೆಎನ್‌ಯುನಲ್ಲಿ ವಾದ ವಿವಾದಗಳು, ಘರ್ಷಣೆಗಳು, ಘೇರಾವ್‌ಗಳು ಇರಲಿಲ್ಲವೆಂದಲ್ಲ. ಅದೇ ವೇಳೆ ಅಲ್ಲಿ, ನಮನೀಯತೆ ಇತ್ತು ಮತ್ತು ಸಂವಾದಕ್ಕೆ ಅವಕಾಶವಿತ್ತು. ಇದೇ ಕಾರಣಕ್ಕಾಗಿ ಅಲ್ಲಿ, ಇಂದಿನ ಬೌದ್ಧಿಕತೆ ವಿರೋಧಿ ವಾತಾವರಣದಲ್ಲಿ ಅದು ಸರಕಾರದ ನಾನಾ ವಿಧದ ದಾಳಿಗಳಿಗೆ ಗುರಿಯಾಗುತ್ತಿದೆ.
ಜೆಎನ್‌ಯು ವರ್ಷಗಳು
1969ರಲ್ಲಿ ಮರಳಿದ ನಂತರ, ಅವರು ದಿಲ್ಲಿಯ ಜವಹಾರಲಾಲ್‌ನೆಹರೂ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದರು. ಇಂದಿನ ಸರಕಾರ ಜೆಎನ್‌ಯುವನ್ನು ಅಂಗವಿಕಲಗೊಳಿಸುತ್ತಿರುವ ರೀತಿಯನ್ನು ನೋಡುವಾಗ, ಇದಕ್ಕೂ ಇತರ ವಿಶ್ವವಿದ್ಯಾನಿಲಯಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಬೇಕು ಅನ್ನಿಸುತ್ತದೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿದ್ದ ನಾನು, 1970ರ ಕೊನೆಯಲ್ಲಿ ಜೆಎನ್‌ಯು ಸೇರಿದೆ. ಆಗ ಇತಿಹಾಸ ಅಧ್ಯಯನಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿವಿ ತುಂಬ ಸಂಪ್ರದಾಯ ಶರಣವಾಗಿತ್ತು. ನಾವು ಕೆಲವರು ಅದರ ಇತಿಹಾಸ ಪಠ್ಯಕ್ರಮವನ್ನೂ ಬದಲಿಸಲು ಪ್ರಯತ್ನಿಸಿ ಸೋತಿದ್ದೆವು. ಆದ್ದರಿಂದ ಒಂದು ಹೊಸ ವಿಶ್ವವಿದ್ಯಾನಿಲಯವಾದ ಜೆಎನ್‌ಯು ಇತಿಹಾಸದ ತಿಳುವಳಿಕೆಯ ಹೊಸ ವಿಧಾನಗಳಿಗೆ, ಬೋಧನೆಯ ಹೊಸ ರೀತಿಗಳಿಗೆ ಮುಕ್ತವಾಗಿರುತ್ತದೆ ಎಂಬುದು ನನಗೆ ಅಲ್ಲಿಯ ಒಂದು ಆಕರ್ಷಣೆಯಾಗಿತ್ತು.
ಜಿಪಿಯವರೊಂದಿಗೆ ನಡೆಸಿದ ದೀರ್ಘ ಮಾತುಕತೆಯ ಬಳಿಕ ನಾನು ಜೆಎನ್‌ಯು ಸೇರಿದೆ. ನಮ್ಮ ಇತಿಹಾಸ ಕೋರ್ಸ್‌ಗಳು ಹೊಸದಾಗಿರಬೇಕು, ವಿಮರ್ಶಾತ್ಮಕ ಮನೋಧರ್ಮವನ್ನು ಹೊಂದಿರಬೇಕಲ್ಲದೆ, ಕೋರ್ಸ್‌ಗಳು ತಮ್ಮ ಚೌಕಟ್ಟಿನಲ್ಲಿ ಅಂತರ್‌ಶಿಸ್ತೀಯವಾಗಿರಬೇಕೆಂದು ಜಿಪಿ ಒತ್ತಿ ಹೇಳಿದರು. ಅಲ್ಲದೆ ಜ್ಞಾನದಾಹಿಗಳಾದ ಎಲ್ಲರಿಗೂ ಅದು ಸಿಗುವ ಹಾಗೆ ಜೆಎನ್‌ಯು ಅವಕಾಶ ವಂಚಿತರಿಗೆ ತನ್ನ ಬಾಗಿಲುಗಳನ್ನು ತೆರೆಯಬೇಕೆಂದು ಅವರು ಬಯಸಿದ್ದರು.