ದೋಕ್ಲಾಂ ಕರ್ಮಕಾಂಡದ ಕುರಿತಂತೆ....
ಚೀನಾ-ಭಾರತದ ನಡುವಿನ ಗಡಿ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಭಾರತದ ಪಾಲಿಗೆ ಇದು ಒಣಗದ ಗಾಯ. 60ರ ದಶಕದ ಚೀನಾದ ಜೊತೆಗಿನ ಸಂಘರ್ಷದ ಬಳಿಕ ಈ ಗಾಯ ಒಣಗಿದೆ ಎಂದು ಭಾವಿಸುತ್ತಾ ಬಂದರೂ, ಅದು ಅರುಣಾಚಲ ಪ್ರದೇಶ ಸೇರಿದಂತೆ ಬೇರೆ ಬೇರೆ ಗಡಿಭಾಗಗಳಲ್ಲಿ ಮತ್ತೆ ಮತ್ತೆ ಉಲ್ಬಣಿಸಿದೆ. ನರೇಂದ್ರ ಮೋದಿ ಅಧಿಕಾರ ಹಿಡಿದ ಸಂದರ್ಭದಲ್ಲಿ ದೇಶದ ಗಡಿ ತಂಟೆಗಳಿಗೆ ಕಡಿವಾಣ ಬೀಳಬಹುದು ಎಂದು ಭಾವಿಸಿದರೆ, ಚೀನಾ-ಭಾರತ ಸಂಬಂಧ ಹಿಂದೆಂದಿಗಿಂತ ತೀವ್ರವಾಗಿ ಹಳಸಿದೆ. ದೋಕ್ಲಾಂ ಗಡಿ ವಿವಾದ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ದೋಕ್ಲಾಂ ಗಡಿವಿವಾದ ಹಿನ್ನೆಲೆಯನ್ನು ವಿವರಿಸುವ ಪ್ರಯತ್ನವನ್ನು ಯಡೂರ ಮಹಾಬಲ ಅವರು ‘ದೋಕ್ಲಾಂ ಕರ್ಮಕಾಂಡ’ ಕೃತಿಯ ಮೂಲಕ ಮಾಡಿದ್ದಾರೆ. ದೋಕ್ಲಾಂ ಗಡಿವಿವಾದವನ್ನು ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುವವರು ಹೆಚ್ಚಿದ್ದಾರೆ. ಈ ಗಡಿವಿವಾದಕ್ಕೆ ಒಂದು ಶತಮಾನದ ಇತಿಹಾಸವಿದೆ ಎನ್ನುವುದರ ಕಡೆಗೆ ಲೇಖಕರು ಗಮನ ಸೆಳೆಯುತ್ತಾರೆ. ಚೀನಾ-ಭಾರತ ಗಡಿ ವಿವಾದಗಳನ್ನು ಪರಿಹರಿಸಲು ಸ್ಪಷ್ಟ ದಾರಿ ಇದ್ದರೂ ಅದು ಹೇಗೆ ಸ್ವಪ್ರತಿಷ್ಠೆಯ ಕಾರಣದಿಂದ ಮೂಲೆಗುಂಪಾಯಿತು ಮತ್ತು ಅದಕ್ಕಾಗಿ ಭಾರತ ತೆತ್ತ ಬೆಲೆಯೇನು ಎನ್ನುವುದನ್ನು ಈ ಕೃತಿ ವಿವರಿಸುತ್ತದೆ. ಈ ಗಡಿವಿವಾದದ ಜೊತೆಗೆ ಭೂತಾನ್ ಎನ್ನುವ ಪುಟ್ಟ ದೇಶ ಹೇಗೆ ತಳಕು ಹಾಕಿಕೊಂಡಿದೆ ಎನ್ನುವುದೂ ಕುತೂಹಲಕರವಾಗಿದೆ. ಭೂತಾನ್ ವಿಷಯದಲ್ಲಿ ಚೀನಾ ಮತ್ತು ಭಾರತದ ನಡುವೆ ಪೈಪೋಟಿಯಿದೆ. ಭೂತಾನ್-ಭಾರತದ ನಡುವೆ ಕೊಡುಕೊಳ್ಳುವಿಕೆ ಇಂದು ನಿನ್ನೆಯದಲ್ಲ. ಗಡಿಒಪ್ಪಂದದ ವಿಷಯದಲ್ಲಿ ಭಾರತ ಭೂತಾನ್ ಮೇಲೆ ಮಾಡಿದ ಹೇರಿಕೆಯೂ ವಿವಾದ ಉಲ್ಬಣಿಸಲು ಕಾರಣವಾಯಿತೇ? ಎಂದು ಕೃತಿ ಚರ್ಚಿಸುತ್ತದೆ. ದೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಲು ಆರಂಭಿಸಿದಾಗ ಭಾರತ ತೀವ್ರ ಮುಖಭಂಗ ಅನುಭವಿಸಲು ಕಾರಣವೇನು ಎನ್ನುವುದನ್ನೂ ಕೃತಿ ವಿವರಿಸಲು ಪ್ರಯತ್ನಿಸುತ್ತದೆ. ಭಾರತದ ಸೈನ್ಯ ಚೀನಾದ ವಶದಲ್ಲಿರುವ ದೋಕ್ಲಾಂ ಪ್ರವೇಶಿಸಿದ್ದು ತಪ್ಪು ಹಾಗೂ ಅದು ಯುದ್ಧಕ್ಕೆ ನೀಡಿದ ಪ್ರಚೋದನೆ. 1962ರಲ್ಲಿ ವಿವಾದಿತ ಪ್ರದೇಶವಾದ ಧೋಕ್ಲಾಂಗೆ ಕೃಷ್ಣಮೆನೆನ್ ಮತ್ತು ನೆಹರೂ ಸೈನ್ಯವನ್ನು ಕಳುಹಿಸಿ ಯುದ್ಧಕ್ಕೆ ಪ್ರಚೋದನೆ ನೀಡಿರುವುದನ್ನು ಇದು ಜ್ಞಾಪಿಸುತ್ತದೆ ಎಂದು ಲೇಖಕರು ಹೇಳುತ್ತಾರೆ. ಬಹುಶಃ ಭಾರತದ ನಿರ್ಧಾರಗಳ ಹಿಂದೆ ಅಮೆರಿಕದ ಒತ್ತಡಗಳನ್ನು ಲೇಖಕರು ಗುರುತಿಸುತ್ತಾರೆ. ಕೃತಿಯಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಮೊದಲ ಅಧ್ಯಾಯ ದಲ್ಲಿ ಗಡಿವಿವಾದದ ಇತಿಹಾಸವನ್ನು ವಿವರಿಸಲು ಪ್ರಯತ್ನಿಸುತ್ತಾರೆ. ಗಡಿಗೆ ಸಂಬಂಧಿಸಿದ ವರದಿಗಳಲ್ಲಿ ದಾಖಲೆಗಳನ್ನು ಮಂಡಿಸುವಾಗ ಭಾರತ, ಪುರಾಣ ಕತೆಗಳನ್ನು ಆಶ್ರಯಿಸಿರುವುದನ್ನು ಇದು ಹೇಳುತ್ತದೆ. ನೆಹರೂ ಕಾಲದಲ್ಲಿ ಆಗಿರುವ ಬೆಳವಣಿಗೆಗಳನ್ನು ಈ ಅಧ್ಯಾಯ ಹೇಳುತ್ತದೆ. ಹಾಗೆಯೇ ಅನುಬಂಧ-1,2,3,4ರಲ್ಲಿ ಕೆಲವು ಟಿಪ್ಪಣಿಗಳನ್ನು ನೀಡುತ್ತಾರೆ. ಹಾಗೆಯೇ ಕೃತಿಗೆ ಆಧಾರವಾಗಿರುವ ಗ್ರಂಥಸೂಚಿಗಳನ್ನು ಪರಿಚಯಿಸುತ್ತಾರೆ.
64 ಪುಟಗಳ ಈ ಪುಟ್ಟ ಕೃತಿಯ ಮುಖಬೆಲೆ 50 ರೂಪಾಯಿ. ಲಡಾಯಿ ಪ್ರಕಾಶನ ಕೃತಿಯನ್ನು ಹೊರತಂದಿದೆ.