ಜಿಎಸ್‌ಟಿ ಜಾರಿ-ಅಪೂರ್ಣ, ಅಪಕ್ವ

Update: 2018-07-11 18:33 GMT

ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೇವಲ ದಾಖಲಾದ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಮತ್ತು ರಿಟರ್ನ್ಸ್ ಸಲ್ಲಿಕೆಯಲ್ಲಿ ಮಾತ್ರ ಹೆಚ್ಚಳ ಆಗುತ್ತಾ ತೆರಿಗೆ ಸಂಗ್ರಹದಲ್ಲಿ ಮಾತ್ರ ಹೆಚ್ಚಳವಾಗುತ್ತಿಲ್ಲವೆಂದಾದರೆ ಜಿಎಸ್‌ಟಿ ವ್ಯವಸ್ಥೆಯ ಜಾರಿ ಇನ್ನೂ ಅಪೂರ್ಣವಾಗಿದೆ ಮತ್ತು ಅಪಕ್ವವಾಗಿದೆಯೆಂದೇ ಅರ್ಥ. ಹೀಗಾಗಿ ಜಿಎಸ್‌ಟಿ ವ್ಯವಸ್ಥೆಯೊಳಗೆ ಬರುವುದನ್ನು ಲಾಭದಾಯಕವಾಗಿ ಮಾಡುವುದರ ಜೊತೆಜೊತೆಗೆ ಒಟ್ಟಾರೆ ಆರ್ಥಿಕತೆಯ ಹಿತಾಸಕ್ತಿಯಿಂದ ಮೇಲಿನ ಹಲವಾರು ವಿಷಯಗಳ ಬಗ್ಗೆ ಜಿಎಸ್‌ಟಿ ಪರಿಷತ್ತು ಪುನರಾವಲೋಕನ ಮಾಡುವ ಅಗತ್ಯವಿದೆ.

ರಕು ಮತ್ತು ಸೇವಾ ತೆರಿಗೆ (ಗೂಡ್ಸ್ ಆ್ಯಂಡ್ ಸರ್ವೀಸ್ ಟ್ಯಾಕ್ಸ್- ಜಿಎಸ್‌ಟಿ) ವ್ಯವಸ್ಥೆಯು ಜಾರಿಯಾಗಿ ಒಂದು ವರ್ಷವಾಗುತ್ತಿದೆ. ಹೊಸ ವ್ಯವಸ್ಥೆಯೊಂದು ಜಾರಿಯಾಗುವಾಗ ಕಂಡುಬರುವ ಪ್ರಾರಂಭಿಕ ಗೊಂದಲಗಳು ತಕ್ಕಮಟ್ಟಿಗೆ ಬಗೆಹರಿದಿವೆ. ಪ್ರತಿಯೊಂದು ಸರಕು ಮತ್ತು ಸೇವೆಗಳನ್ನು ನಿರ್ದಿಷ್ಟ ತೆರಿಗೆ ವಲಯದಲ್ಲಿ ವರ್ಗೀಕರಿಸುವುದರಲ್ಲಿ ಇದ್ದ ಸಮಸ್ಯೆಗಳು ಬಗೆಹರಿದಿವೆ ಮತ್ತು ರಿಟರ್ನ್ಸ್ ಸಲ್ಲಿಸುವಲ್ಲಿ ಇದ್ದ ಸಮಸ್ಯೆಗಳನ್ನೂ ತಕ್ಕಮಟ್ಟಿಗೆ ಬಗೆಹರಿಸುವ ಪ್ರಯತ್ನಗಳನ್ನೂ ಮಾಡಲಾಗಿದೆ. ಜಿಎಸ್‌ಟಿ ವ್ಯವಸ್ಥೆಯ ಒಂದು ಗಮನಾರ್ಹ ಯಶಸ್ಸೇನೆಂದರೆ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿರುವುದು. ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇ.70ರಷ್ಟು ಮಾತ್ರ ಇದೆ. ಸಮಯಕಳೆದಂತೆ ಅದು ಶೇ.90ರಷ್ಟಾಗುವ ಸಾಧ್ಯತೆ ಇದೆ.

ಇಷ್ಟೆಲ್ಲಾ ಹೇಳಿದ ಮೇಲೂ ಜಿಎಸ್‌ಟಿ ಜಾರಿ ಎಂಬ ಪ್ರಕ್ರಿಯೆ ಇನ್ನೂ ಅಪೂರ್ಣ ಮತ್ತು ಅಪಕ್ವವಾಗಿಯೇ ಉಳಿದುಕೊಂಡಿದೆ ಎಂಬುದನ್ನೂ ಹೇಳಲೇಬೇಕು. ಮೊದಲನೆಯದಾಗಿ ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ದರಗಳ ವರ್ಗೀಕರಣ ಆದಷ್ಟೂ ಕಡಿಮೆ ಇರಬೇಕು ಎಂಬುದರಲ್ಲಿ ಎಲ್ಲರಿಗೂ ಸಹಮತವಿದೆ. ಕೆಲವರು ಒಂದೇ ದರವಿರಬೇಕು ಎಂದು ವಾದಿಸಿದರೆ ಕೆಲವರು ಎರಡು ಅಥವಾ ಮೂರಿದ್ದರೆ ಸಾಕು ಎನ್ನುತ್ತಾರೆ. ತೆರಿಗೆ ಸಂಗ್ರಹದಲ್ಲಿ ಒಳ್ಳೆಯ ಪರಿಣಾಮಗಳು ಕಾಣತೊಡಗಿದ ನಂತರ ತೆರಿಗೆ ದರಗಳ ಹಂತಗಳನ್ನು ಕಡಿಮೆ ಮಾಡಲಾಗುವುದೆಂದು ಹಣಕಾಸು ಮಂತ್ರಿಗಳೂ ಹೇಳಿದ್ದಾರೆ. ಒಟ್ಟಾರೆಯಾಗಿ ಭಿನ್ನ ಭಿನ್ನ ತೆರಿಗೆ ದರಗಳ ಬಾಬ್ತ್ತಿನಲ್ಲಿ ಮಾತ್ರ ಜಿಎಸ್‌ಟಿ ವ್ಯವಸ್ಥೆಯು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ. ಎರಡನೆಯದಾಗಿ ರಿಟರ್ನ್ಸ್ ಸಲ್ಲಿಸುವ ನಮೂನೆಗಳು ಇನ್ನೂ ಸ್ಥಿರಗೊಂಡಿಲ್ಲ: ಜಿಎಸ್‌ಟಿ ಪರಿಷತ್ತು ರಿಟರ್ನ್ಸ್ ನಮೂನೆಯು ಇನ್‌ವಾಯ್ಸ್‌ಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ರೂಪುಗೊಳ್ಳಬೇಕೆಂಬ ಬಗ್ಗೆ ಕಾಳಜಿ ತೋರಿಸುತ್ತಿದೆ. ಅದೇನೇ ಇದ್ದರೂ ಈ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಹೇಳಿಕೆಗಳು ಈ ಬಾಬ್ತಿನಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳು ಬರಲಿವೆ ಎಂಬ ಮುನ್ಸೂಚನೆಯನ್ನಂತೂ ನೀಡುತ್ತಿವೆ. ಮೂರನೆಯದಾಗಿ, ಕೆಲವು ಆರ್ಥಿಕ ಚಟುವಟಿಕೆಗಳು ಇನ್ನೂ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೇ ಇವೆ: ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್, ವಾಯುಯಾನ ಇಂಧನ, ವಿದ್ಯುತ್, ಮದ್ಯಾಧರಿತ ಪಾನೀಯಗಳು ಮತ್ತು ಕೆಲವು ರಿಯಲ್ ಎಸ್ಟೇಟ್ ವಹಿವಾಟು..ಇತ್ಯಾದಿಗಳು. ಜಿಎಸ್‌ಟಿಯನ್ನು ಜಾರಿ ಮಾಡುವುದರಿಂದ ತೆರಿಗೆ ಸಂಗ್ರಹದ ಮೇಲೂ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೂ ಸಕಾರಾತ್ಮಕ ಪರಿಣಾಮಗಳಾಗಲಿವೆ ಎಂದು ನಿರೀಕ್ಷಿಸಲಾಗಿದ್ದರೂ, ಅದು ಜಿಎಸ್‌ಟಿ ಜಾರಿ ಪ್ರಕ್ರಿಯೆ ಸಂಪೂರ್ಣಗೊಂಡ ನಂತರದಲ್ಲಿ ಮತ್ತು ಹಂತಹಂವಾಗಿ ಮಾತ್ರ ಗೋಚರಿಸಲು ಸಾಧ್ಯ.
ಇನ್ನು ಈವರೆಗೆ ಆರ್ಥಿಕತೆಯ ಮೇಲಾಗಿರುವ ಪರಿಣಾಮಗಳನ್ನು ನೋಡುವುದಾದರೆ ಮಿಶ್ರ ಪರಿಣಾಮಗಳು ಕಾಣುತ್ತವೆ. ಮೇಲಾಗಿ ಈಗಲೇ ಜಿಎಸ್‌ಟಿಯ ಸಂಪೂರ್ಣ ಪರಿಣಾಮವನ್ನು ಅಂದಾಜು ಮಾಡಲೂ ಸಹ ಬರುವುದಿಲ್ಲ. ನೋಟು ನಿಷೇಧದ ಮತ್ತು ಜಿಎಸ್‌ಟಿಯ ಪರಿಣಾಮಗಳನ್ನು ಬೇರ್ಪಡಿಸಿ ನೋಡಲು ಸಹ ಆಗುವುದಿಲ್ಲ. ಜಿಎಸ್‌ಟಿಯನ್ನು ಜಾರಿ ಮಾಡಿದ ನಂತರ ಜಿಡಿಪಿಯ ದರದಲ್ಲಿ ಕಾಣುತ್ತಿದ್ದ ತ್ರೈಮಾಸಿಕ ಕುಸಿತ ನಿಂತಿದ್ದು, ಜಿಡಿಪಿ ಸುಧಾರಣೆಯಾಗುತ್ತಿರುವುದು ನಿಜವಾದರೂ ಅದು ನೋಟು ನಿಷೇಧದ ಪೂರ್ವದ ಹಂತವನ್ನು ತಲುಪಿಲ್ಲ. ಬಂಡವಾಳ ಕ್ರೋಡೀಕರಣದಲ್ಲೂ ಸ್ವಲ್ಪಮಟ್ಟಿಗಿನ ಚೇತರಿಕೆ ದಾಖಲಾಗುತ್ತಿದೆ.
ಇದುವರೆಗೂ ಜಿಎಸ್‌ಟಿ ವ್ಯವಸ್ಥೆಯು ತೆರಿಗೆ ಸಂಗ್ರಹದಲ್ಲಿನ ಯಥಾಸ್ಥಿತಿಯನ್ನು ಕಾದುಕೊಳ್ಳುವ ಸಂಗ್ರಹ ತಟಸ್ಥತೆಯನ್ನು ತೋರಿಸಿದಂತಿಲ್ಲ. ಅದು ರಾಜ್ಯಗಳ ತೆರಿಗೆ ಸಂಗ್ರಹಗಳಿಗಿಂತ ಕೇಂದ್ರದ ತೆರಿಗೆ ಸಂಗ್ರಹದ ಮೇಲೆ ಪ್ರಭಾವಬೀರುವ ಅವಕಾಶ ಹೆಚ್ಚು. ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ತೆರಿಗೆ ಆದಾಯಗಳಲ್ಲಿ ಶೇ.14ರಷ್ಟು ಹೆಚ್ಚಳವನ್ನು ಖಾತರಿ ಮಾಡಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಬಹುಪಾಲು ರಾಜ್ಯಗಳ ತೆರಿಗೆ ಸಂಗ್ರಹದ ಅಭಿವೃದ್ಧಿ ದರ ಶೇ.14ಕ್ಕಿಂತ ಕಡಿಮೆಯೇ ಇರುವುದರಿಂದ ಕೇಂದ್ರವು ತಾನು ಆಶ್ವಾಸನೆ ನೀಡಿದಷ್ಟು ಮೊತ್ತವನ್ನು ಆದಷ್ಟು ಬೇಗ ರಾಜ್ಯಗಳಿಗೆ ವರ್ಗಾಯಿಸಬೇಕಿದೆ. ಆದರೆ ಕೇಂದ್ರ ಸರಕಾರದ ಮಟ್ಟಿಗೆ ಜಿಎಸ್‌ಟಿಯು ಈ ಹಿಂದಿನಷ್ಟೇ ಸಂಗ್ರಹವನ್ನು ಒದಗಿಸುವ ಖಾತರಿಯಿಲ್ಲ. ಜಿಎಸ್‌ಟಿ ಪರಿಹಾರ ನಿಧಿಯಲ್ಲಿರುವ ಹಣಕಾಸನ್ನು ಕೇಂದ್ರವು ಆಶ್ವಾಸನೆ ನೀಡಿದಷ್ಟು ತೆರಿಗೆ ಸಂಗ್ರಹವನ್ನು ಮಾಡಿಕೊಳ್ಳಲು ಅಶಕ್ಯವಾದ ರಾಜ್ಯಗಳಿಗೆ ಒದಗಿಸುವುದಕ್ಕಾಗಿ ಎತ್ತಿಡಲಾಗಿದ್ದು ಅದನ್ನು ಕೇಂದ್ರ ಸರಕಾರವು ತನ್ನ ವೆಚ್ಚಗಳಿಗಾಗಿ ಬಳಸುವಂತಿಲ್ಲ. ಮೇಲಾಗಿ, ಆಮದು ಮಾಡಿಕೊಳ್ಳುವ ಉದ್ಯಮಿಯು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಆಗ್ರಹಿಸುವಾಗ ಇಂಟಿಗ್ರೇಟಡ್ ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೇಂದ್ರಕ್ಕೆ ದಕ್ಕುವ ಹಣದ ಒಂದು ಭಾಗವನ್ನು ರಾಜ್ಯಗಳಿಗೇ ಕೇಂದ್ರವು ಮರುಪಾವತಿ ಮಾಡಬೇಕಿರುತ್ತದೆ. ಈ ಎರಡೂ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಲೆಕ್ಕ ಹಾಕಿದಾಗ ಜಿಎಸ್‌ಟಿ ಜಾರಿಯಾದ 12 ತಿಂಗಳಲ್ಲಿ ಕೇಂದ್ರವು ಪಡೆದುಕೊಂಡ ತೆರಿಗೆ ಆದಾಯವು ಜಿಎಸ್‌ಟಿ ಜಾರಿಯಾಗುವ ಪೂರ್ವದ 12 ತಿಂಗಳುಗಳಲ್ಲಿ ಗಳಿಸಿದ ತೆರಿಗೆ ಆದಾಯಕ್ಕಿಂತ ಕಡಿಮೆ ಎನ್ನುವುದು ಗೊತ್ತಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ತೆರಿಗೆ ದರಗಳ ವರ್ಗೀಕರಣದ ಸಮಸ್ಯೆಯನ್ನು ತೆರಿಗೆ ಫಿಟ್‌ಮೆಂಟ್ ಸಮಿತಿಯು ಜಾಣತನದಿಂದ ನಿಭಾಯಿಸಿದರೂ ಸಹ ಕೇಂದ್ರ ಸರಕಾರದ ಮಟ್ಟಿಗೆ ಹೇಳುವುದಾದರೆ ಜಿಎಸ್‌ಟಿ ವ್ಯವಸ್ಥೆಯು ಜಿಎಸ್‌ಟಿ ಪೂರ್ವದಷ್ಟೇ ಸಂಪನ್ಮೂಲ ಸಂಗ್ರಹಣೆಯನ್ನೇನು ಖಾತರಿಗೊಳಿಸಿಲ್ಲ.
ಜಿಎಸ್‌ಟಿಯನ್ನು ಜಾರಿ ಮಾಡಿದ ತರುವಾಯ ಅನೌಪಚಾರಿಕ ವಲಯಕ್ಕೆ ಸೇರಿದ್ದ ಬಹುಪಾಲು ಆರ್ಥಿಕತೆಯ ಭಾಗಗಳು ಔಪಚಾರಿಕ ವಲಯಕ್ಕೆ ಸೇರಿಕೊಳ್ಳುತ್ತವೆ ಎಂದು ಬಹುಮುಖ್ಯವಾಗಿ ನಿರೀಕ್ಷಿಸಲಾಗಿತ್ತು. ಒಂದು ಸಮಗ್ರ ಮೌಲ್ಯವರ್ಧಿತ ತೆರಿಗೆಯಾಗಿರುವ ಜಿಎಸ್‌ಟಿ ವ್ಯವಸ್ಥೆಯು ಔಪಚಾರಿಕ ವಲಯದಿಂದ ಹೊರಗಿರುವ ಬಹುಪಾಲು ವಲಯಗಳಿಗೆ ಔಪಚಾರಿಕವಾಗುವುದಕ್ಕೆ ಉತ್ತೇಜನವನ್ನು ನೀಡುತ್ತದೆ ಎಂಬ ನಿರೀಕ್ಷೆಯಿತ್ತು. ಆರ್ಥಿಕತೆಯು ಎರಡು ರೀತಿಯಲ್ಲಿ ಔಪಚಾರಿಕವಾಗಬಹುದು: ಈವರೆಗೆ ಅನೌಪಚಾರಿಕ ವಲಯದಲ್ಲಿದ್ದ ಕ್ಷೇತ್ರಗಳು ಔಪಚಾರಿಕವಾಗುವುದನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಯಾವ ಬೇಡಿಕೆಗಳನ್ನು ಈವರೆಗೆ ಅನೌಪಚಾರಿಕ ಕ್ಷೇತ್ರ ಪೂರೈಸುತ್ತಿತ್ತೋ ಅವನ್ನು ಔಪಚಾರಿಕ ವಲಯವೇ ಪೂರೈಸುವಂತಾಗಬಹುದು. ಆರ್ಥಿಕತೆಯೊಳಗಿರುವ ಬಿಡಿ ಘಟಕಗಳಿಗೆ ಮೊದಲನೆಯ ಮಾರ್ಗವು ಎರಡನೆ ಮಾರ್ಗಕ್ಕಿಂತ ಕಡಿಮೆ ಅನಾಹುತಕಾರಿಯಾದದ್ದು. ಇಲ್ಲಿ ಜಿಎಸ್‌ಟಿ ವ್ಯವಸ್ಥೆ ಕೊಡಮಾಡಿರುವ ರಿವರ್ಸ್ ಚಾರ್ಜ್ ಸೌಲಭ್ಯವು ಸಾಕಷ್ಟು ಉತ್ತೇಜನವನ್ನು ನೀಡಬಲ್ಲದಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ದಾಖಲಾಗದ ಸರಬರಾಜುದಾರರಿಂದ ಸರಕು-ಸೇವೆಗಳನ್ನು ಕೊಳ್ಳುವಾಗ ಕೊಳ್ಳುವವರೇ ಸರಬರಾಜುದಾರ ಕಟ್ಟಬೇಕಾದ ತೆರಿಗೆಯನ್ನು ಸರಕಾರಕ್ಕೆ ಕಟ್ಟಿ ಆ ನಂತರ ಆ ಬಾಬ್ತಿನ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ್ನು ಹಿಂಪಡೆಯಬಹುದಾಗಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ತೆರಿಗೆ ಬದ್ಧತೆಯ ಹೊಣೆಗಾರಿಕೆಯನ್ನು ಈ ವ್ಯವಸ್ಥೆಯು ಸರಬರಾಜುದಾರನ ಬದಲಿಗೆ ಕೊಳ್ಳುವವರ ಮೇಲೆ ವರ್ಗಾಯಿಸುತ್ತದೆ. ಇದರಿಂದಾಗಿ ಒಂದೋ ಸರಬರಾಜುದಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಬರುವ ಒತ್ತಡವನ್ನು ಸೃಷ್ಟಿಸಬಹುದು ಅಥವಾ ತನ್ನ ಮೇಲೆ ಸರಬರಾಜುದಾರನ ತೆರಿಗೆ ಕಟ್ಟುವ ಹೆಚ್ಚುವರಿ ಹೊಣೆಗಾರಿಕೆ ಬೀಳುವುದರಿಂದ ತಪ್ಪಿಸಿಕೊಳ್ಳಲು ಕೊಳ್ಳುವವರು ಜಿಎಸ್‌ಟಿಯಲ್ಲಿ ದಾಖಲಾಗದ ಸರಬರಾಜುದಾರನ ಬದಲಿಗೆ ಬೇರೆ ಪರ್ಯಾಯವನ್ನು ಹುಡುಕಿಕೊಳ್ಳುವಂತೆ ಮಾಡಬಹುದು. ಸಣ್ಣ ಸರಬರಾಜುದಾರ ಮಟ್ಟಿಗೆ ಜಿಎಸ್‌ಟಿ ವ್ಯವಸ್ಥೆಯ ಒಳಬರುವುದು ನಷ್ಟದಾಯಕವೆಂದಾದರೆ ಮೇಲಿನ ರಿವರ್ಸ್ ಚಾರ್ಜ್ ಸೌಲಭ್ಯವು ಅನೌಪಚಾರಿಕ ಕ್ಷೇತ್ರವನ್ನೇ ನಿರ್ಮೂಲನಗೊಳಿಸಿ ಆ ಮೂಲಕ ಆರ್ಥಿಕತೆಯನ್ನು ಔಪಚಾರಿಕಗೊಳಿಸಬಹುದಾದ ಸಾಧ್ಯತೆ ಹೆಚ್ಚಿದೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೇವಲ ದಾಖಲಾದ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಮತ್ತು ರಿಟರ್ನ್ಸ್ ಸಲ್ಲಿಕೆಯಲ್ಲಿ ಮಾತ್ರ ಹೆಚ್ಚಳ ಆಗುತ್ತಾ ತೆರಿಗೆ ಸಂಗ್ರಹದಲ್ಲಿ ಮಾತ್ರ ಹೆಚ್ಚಳವಾಗುತ್ತಿಲ್ಲವೆಂದಾದರೆ ಜಿಎಸ್‌ಟಿ ವ್ಯವಸ್ಥೆಯ ಜಾರಿ ಇನ್ನೂ ಅಪೂರ್ಣವಾಗಿದೆ ಮತ್ತು ಅಪಕ್ವವಾಗಿದೆಯೆಂದೇ ಅರ್ಥ. ಹೀಗಾಗಿ ಜಿಎಸ್‌ಟಿ ವ್ಯವಸ್ಥೆಯೊಳಗೆ ಬರುವುದನ್ನು ಲಾಭದಾಯಕವಾಗಿ ಮಾಡುವುದರ ಜೊತೆಜೊತೆಗೆ ಒಟ್ಟಾರೆ ಆರ್ಥಿಕತೆಯ ಹಿತಾಸಕ್ತಿಯಿಂದ ಮೇಲಿನ ಹಲವಾರು ವಿಷಯಗಳ ಬಗ್ಗೆ ಜಿಎಸ್‌ಟಿ ಪರಿಷತ್ತು ಪುನಾವಲೋಕನ ಮಾಡುವ ಅಗತ್ಯವಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ