ಕನ್ನಡದ ಕೀಲಿಮಣೆ ವಿನ್ಯಾಸಗಳಲ್ಲಿ ಬಹುಪಯೋಗಿ ‘ಮಲ್ಟಿಫಾಂಟ್ ಕೀಬೋರ್ಡ್ ಲೇಔಟ್’
ಒಂದು ತಂತ್ರಾಂಶದ ಕೀಬೋರ್ಡ್‌ಡ್ರೈವರ್ (ಲಾಂಗ್ವೇಜ್ ಇಂಜಿನ್) ಬಳಸಿ, ಮತ್ತಾವುದೋ ತಯಾರಕರು ನೀಡಿರುವ ಫಾಂಟುಗಳನ್ನು ಬಳಸಿ ಕನ್ನಡವನ್ನು ಟೈಪ್ ಮಾಡಬಹುದು’’ ಎಂದು ಇದೇ ಅಂಕಣದಲ್ಲಿನ ಮಾಹಿತಿ ಉಲ್ಲೇಖಿಸಿ, ಶ್ರೀಲಿಪಿ, ಆಕೃತಿ ಮುಂತಾದ ಡಿ.ಟಿ.ಪಿ.ಫಾಂಟುಗಳನ್ನು ಬಳಸಿ ನುಡಿ ಲೇಔಟ್‌ನಲ್ಲಿ ಟೈಪ್ ಮಾಡಬಹುದೇ ಎಂದು ಅಂಕಣದ ಓದುಗರು ಪ್ರಶ್ನಿಸಿದ್ದಾರೆ. ಹೌದು, ಇಂತಹ ಒಂದು ಸಲಕರಣೆ ಕೇಂದ್ರ ಸರಕಾರವು ಉಚಿತವಾಗಿ ನೀಡಿರುವ ತಂತ್ರಾಂಶ ಸಲಕರಣೆಗಳಲ್ಲಿ ಲಭ್ಯವಿದೆ.
ಕಂಪ್ಯೂಟರಿನಲ್ಲಿ ಕನ್ನಡವನ್ನು ಟೈಪ್‌ಮಾಡಲು - ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದರೆ ಕನ್ನಡ ಮೂಡಿಬರುವ ‘ಟ್ರಾನ್ಸ್‌ಲಿಟರೇಷನ್ ಕೀಬೋರ್ಡ್ ಲೇಔಟ್’ ಅಥವಾ ‘ನುಡಿ-ಲೇಔಟ್’ ಅಥವಾ ‘ಟೈಪ್‌ರೈಟರ್-ಲೇಔಟ್’ ಈ ಮೂರು ವಿನ್ಯಾಸಗಳಲ್ಲಿ ಒಂದನ್ನು ಬಹುತೇಕರು ಬಳಸುತ್ತಾರೆ. ಈ ವಿನ್ಯಾಸಗಳು ಜನಪ್ರಿಯ ಲೇಔಟ್‌ಗಳಾಗಿವೆ. ಇಂಗ್ಲಿಷ್ ಮೂಲಕ ಕನ್ನಡವನ್ನು ಟೈಪ್‌ಮಾಡುವ ಕ್ರಮ ಇರುವ ಕೀಬೋರ್ಡ್ ಲೇಔಟ್‌ಗೆ ಟ್ರಾನ್ಸ್‌ಲಿಟರೇಷನ್ ಲೇಔಟ್ ಎಂದು ಕರೆಯಲಾಗಿದೆ. ಇಂಗ್ಲಿಷ್ ಟೈಪಿಂಗ್ ಕಲಿತವರು ಕಂಪ್ಯೂಟರಿನಲ್ಲಿ ಕನ್ನಡ ಟೈಪ್‌ಮಾಡಬೇಕೆಂದರೆ ಈ ಲೇಔಟ್ ಬಳಸುತ್ತಾರೆ. ಕನ್ನಡ ಭಾಷೆ ತಿಳಿದಿದ್ದು, ಲಿಪಿಯ ಬರವಣಿಗೆಯ ಪರಿಚಯವಿಲ್ಲದವರಿಗೆ ಕೀಲಿಮಣೆ ವಿನ್ಯಾಸವು ಬಹಳ ಸಹಾಯಕ. ಈ ವಿನ್ಯಾಸದಲ್ಲಿ kannada ಎಂದು ಟೈಪ್ ಮಾಡಿದರೆ ‘ಕನ್ನಡ’ ಎಂದು ಮೂಡುತ್ತದೆ. ‘ಬರಹ’ ತಂತ್ರಾಂಶವು ವಿಶ್ವಾದ್ಯಂತ ಅತ್ಯಂತ ಕಡಿಮೆ ಅವಧಿಯಲ್ಲಿ ಬಹಳ ಜನಪ್ರಿಯವಾಗಲು ಈ ಲೇಔಟ್ ಕೂಡ ಕಾರಣ. ಈ ಲೇಔಟ್ ಬಳಸಿ ಒಂದೆರಡು ಪದಗಳು, ಕೆಲವು ವಾಕ್ಯಗಳನ್ನು ತಾಳ್ಮೆಯಿಂದ ಟೈಪ್‌ಮಾಡಬಹುದು. ಆದರೆ, ಅತ್ಯಂತ ಕ್ಲಿಷ್ಟಕರವಾದ ಪದಗಳನ್ನು ಟೈಪ್‌ಮಾಡುವಾಗ ಅತ್ಯಂತ ಸಂಕೀರ್ಣವಾದ ಕೀಲಿ-ಸಂಯೋಜನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಉದಾಹರಣೆಗೆ; ‘‘ಕಯ್ಯಿರ ಕಿಞ್ಞಣ್ಣ ರೈ’’ ಹೆಸರನ್ನು ಟೈಪ್ ಮಾಡುವುದಕ್ಕೆ ಎಂತಹ ಪರಿಣಿತನೂ ಸರ್ಕಸ್ ಮಾಡಲೇಬೇಕು. ಕನ್ನಡ ತಿಳಿದಿರುವವರು ಪಠ್ಯವನ್ನು ಟೈಪ್‌ಮಾಡುವಾಗ ಮನಸ್ಸಿನಲ್ಲಿ ಇಂಗ್ಲಿಷ್ ಕ್ರಮದಲ್ಲಿ ಲಿಪಿಸಂಯೋಜನೆ ಮಾಡಿಕೊಂಡು ಟೈಪ್‌ಮಾಡುವ ಕ್ರಮಗಳು ಅತ್ಯಂತ ಅವೈಜ್ಞಾನಿಕ ಮತ್ತು ಅಸಂಬದ್ಧ. ಕನ್ನಡವನ್ನು ಕನ್ನಡದಲ್ಲಿಯೇ ಆಲೋಚಿಸಿ ಉಚ್ಚಾರಣಾ ಕ್ರಮದಲ್ಲಿ ಕೀಲಿ-ಸಂಯೋಜನೆ ಬಳಸಿ ಟೈಪ್‌ಮಾಡುವುದು ಅತ್ಯಂತ ವೈಜ್ಞಾನಿಕ ಕ್ರಮ. ಇಂತಹ ಕ್ರಮವನ್ನೇ ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸವಾದ ಕರ್ನಾಟಕ ರಾಜ್ಯ ಸರಕಾರವು ಕನ್ನಡಕ್ಕೆ ಅಧಿಕೃತ ಎಂದು ಘೋಷಿಸಿರುವ ಕೀಲಿಮಣೆ ವಿನ್ಯಾಸದಲ್ಲಿ ಅಳವಡಿಸಲಾಗಿದೆ (ನುಡಿ-ಲೇಔಟ್).
ನುಡಿ ಮತ್ತು ಬರಹಗಳು ಹೊಸ ಬಳಕೆದಾರರಿಗೆ ಮಾತ್ರ ಅನುಕೂಲವಾಗುವ ಕೀಲಿಮಣೆ ವಿನ್ಯಾಸಗಳನ್ನು ನೀಡಿದರೆ, ಹಳೆಯ ಬಳಕೆದಾರರಿಗೆ ಅನುಕೂಲವಾಗುವಂತೆ, ಕುವೆಂಪು ತಂತ್ರಾಂಶದಲ್ಲಿ, ಈ ಹಿಂದೆ ಡಿ.ಟಿ.ಪಿ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದ ಖಾಸಗಿ ತಂತ್ರಾಂಶ ತಯಾರಕರ ಜನಪ್ರಿಯ ವಿನ್ಯಾಸಗಳನ್ನೂ ಸಹ ನೀಡಲಾಗಿದೆ. ಅವುಗಳಲ್ಲಿ ಟೈಪ್‌ರೈಟರ್ ವಿನ್ಯಾಸವು ಬಹಳ ಪ್ರಮುಖವಾದುದು. ನುಡಿಯಲ್ಲಿ ಕೇವಲ ಒಂದೇ ಶಿಷ್ಟ ಕೀಲಿಮಣೆ ವಿನ್ಯಾಸವನ್ನು ನೀಡಲಾಗಿದೆ. ಈ ಕಾರಣದಿಂದಾಗಿ ಬಹುತೇಕ ಹಳೆಯ ಬಳಕೆದಾರರು ಹೊಸ ವಿನ್ಯಾಸವನ್ನು ಕಲಿಯುವಲ್ಲಿ ಹಿಂದೇಟು ಹಾಕಿದ ಬಹಳಷ್ಟು ಉದಾಹರಣೆಗಳು ಸರಕಾರದ ಕಚೇರಿಗಳಲ್ಲಿ ಕಂಡುಬಂದಿತ್ತು. ಇಂದು ಹೊಸದಾಗಿ ಕನ್ನಡ-ಕಂಪ್ಯೂಟರ್ ಕಲಿಯುವವರು, ಯಾವುದೇ ಹೆಚ್ಚಿನ ತರಬೇತಿ ಇಲ್ಲದೆ, ನುಡಿ ವಿನ್ಯಾಸವನ್ನು ಕನಿಷ್ಠ ಅವಧಿಯಲ್ಲಿ ಕಲಿತು ಬಳಸುತ್ತಿರುವುದು ಸಹ ವಾಸ್ತವ ಸಂಗತಿ. ಇಂದು ಟೈಪಿಂಗ್ ಕಲಿಸುವ ಕಾಮರ್ಸ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ನುಡಿ-ಲೇಔಟ್ ಬಳಸಿಯೇ ತರಬೇತಿಯನ್ನು ನೀಡಲಾಗುತ್ತಿರುವುದರಿಂದ ಕನ್ನಡದ ಟೈಪಿಂಗ್ ಕಲಿಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ.
ಹೊಸ ತಂತ್ರಾಂಶಗಳಲ್ಲಿ ಕನ್ನಡಕ್ಕೆ ಈಗಾಗಲೇ ಬಳಕೆಯಲ್ಲಿರುವ ಹಳೆಯ ವಿನ್ಯಾಸಗಳೂ ಇರಲಿ ಎಂಬ ಅಭಿಪ್ರಾಯಗಳಿವೆ. ಹಲವು ಕೀಲಿಮಣೆ ವಿನ್ಯಾಸಗಳು ಇದ್ದರೆ, ಬಳಕೆಯ ಗೊಂದಲ ಸೃಷ್ಟಿಯಾಗುತ್ತದೆ ಮತ್ತು ಒಬ್ಬೊಬ್ಬ ತಂತ್ರಾಂಶ ತಯಾರಕರೂ ತಮ್ಮ ವಿವಿಧ ರೀತಿಯ ಕೀಲಿಮಣೆಗಳನ್ನು ನೀಡುವುದರಿಂದ, ಬಳಕೆದಾರರು ಬೇರೆ ಬೇರೆ ತಂತ್ರಾಂಶಗಳನ್ನು ಬಳಸುವಾಗ ಆಯಾಯ ತಂತ್ರಾಂಶಗಳಲ್ಲಿನ ವಿನ್ಯಾಸಗಳನ್ನು ಕಲಿಯಬೇಕಾಗುತ್ತದೆ. ಹಳೆಯ ಬಳಕೆದಾರರೂ ಸೇರಿದಂತೆ ಎಲ್ಲರೂ ಸಹ ಕನ್ನಡಕ್ಕೆ ಒಂದೇ ವಿನ್ಯಾಸವನ್ನು ಕಲಿಯಬೇಕು ಮತ್ತು ಅದನ್ನೇ ಬಳಸಬೇಕು, ಹಾಗೂ ಎಲ್ಲಾ ಕನ್ನಡ ತಂತ್ರಾಂಶ ತಯಾರಕರೂ ಅವರ ತಂತ್ರಾಂಶಗಳಲ್ಲಿ ಈ ವಿನ್ಯಾಸವನ್ನು ನೀಡಬೇಕು - ‘ಕನ್ನಡಕ್ಕೆ ಇನ್ನು ಮುಂದೆ ಇರಬೇಕಾದ್ದು ಒಂದೇ ಕೀಲಿಮಣೆ ವಿನ್ಯಾಸ ಅದುವೇ ಕನ್ನಡದ ಅಧಿಕೃತ ವಿನ್ಯಾಸ’ - ಎಂಬುದು ಈ ಶಿಷ್ಟ ವಿನ್ಯಾಸದ ಹಿಂದಿರುವ ಆಶಯವಾಗಿದೆ. ಈಗಾಗಲೇ ಒಂದು ಲೇಔಟ್ ಬಳಸಿ ಟೈಪಿಂಗ್ ಕಲಿತವರು ಮತ್ತೊಂದು (ಹೊಸ) ಲೇಔಟ್ ಕಲಿಯಲು ಅವರ ಮನಸ್ಸು ಒಪ್ಪುವುದಿಲ್ಲ ಮತ್ತು ಅದು ಅನಿವಾರ್ಯವೂ ಅಲ್ಲ. ಹೀಗಾಗಿ, ದಶಕಗಳಿಂದ ಬಳಕೆಯಲ್ಲಿದ್ದ ಹಳೆಯ ಲೇಔಟ್‌ಗಳು ಹೊಸ ತಂತ್ರಾಂಶಗಳಲ್ಲಿ ಮುಂದುವರಿಯುತ್ತಾ ಬಂದಿವೆ.
ಒಂದು ಕೀಲಿಗೆ ನಿಗದಿಯಾಗಿರುವ ಅಕ್ಷರವನ್ನು ಬದಲಾಯಿಸಿ ಮತ್ತೊಂದಕ್ಕೆ ನಿಗದಿಪಡಿಸುವ ಅವಕಾಶ ಇರಬೇಕು ಎಂದು ಬಳಕೆದಾರನಿಗೆ ಎನಿಸುವುದು ಸಹಜ. ಈ ರೀತಿ ಯಾವುದೇ ಅಕ್ಷರಗಳ ಸ್ಥಾನವನ್ನು ನಿಗದಿಪಡಿಸಿ ವಿನ್ಯಾಸವನ್ನು ರಚಿಸಿಕೊಂಡು ಬಳಸುವ ಸೌಲಭ್ಯಗಳೂ ಇವೆ. ಬಳಕೆದಾರನೇ ತನ್ನ ಅಗತ್ಯಕ್ಕೆ ತಕ್ಕಂತೆ ವಿನ್ಯಾಸವನ್ನು ಮಾರ್ಪಡಿಸಿ ಬಳಸಿಕೊಳ್ಳಲು ಮೊದಲಿಗೆ ಡಾ.ಕೆ.ಪಿ.ರಾವ್‌ರವರು ತಮ್ಮ ‘ಸೇಡಿಯಾಪು’ ತಂತ್ರಾಂಶದಲ್ಲಿ ಈ ರೀತಿಯ ಅವಕಾಶ ಕಲ್ಪಿಸಿದ್ದರು. ಮೈಕ್ರೋಸಾಫ್ಟ್ ತನ್ನ ತಂತ್ರಾಂಶಗಳಲ್ಲಿ ಬಳಕೆದಾರರೇ ಕೀಲಿಮಣೆ ವಿನ್ಯಾಸವನ್ನು ರೂಪಿಸಿಕೊಳ್ಳಬಹುದಾದ ಮೈಕ್ರೋಸಾಫ್ಟ್ ಕೀಬೋರ್ಡ್ ಕ್ರಿಯೇಟರ್ (ಎಂಎಸ್‌ಕೆಎಲ್‌ಸಿ) ಎಂಬ ಸಲಕರಣೆಯನ್ನು ನೀಡಿದೆ. ಈ ಸಲಕರಣೆಯು ಇಂಗ್ಲಿಷ್ ಭಾಷೆಗೆ ಸೂಕ್ತವಾಗುತ್ತದೆ, ಹೊರತಾಗಿ ಹಲವು ಕೀಲಿಯೊತ್ತುಗಳನ್ನು ಆಧರಿಸಿ ಪೂರ್ಣಾಕ್ಷರಗಳನ್ನು ಸಂಯೋಜಿಸುವ ಭಾರತೀಯ ಭಾಷೆಗಳಿಗೆ ಇದು ಸರಿಹೊಂದುವುದಿಲ್ಲ. ಬಳಕೆದಾರರೇ ಕೀಲಿಮಣೆಗಳನ್ನು ವಿನ್ಯಾಸಗೊಳಿಸಬಹುದಾದ ಸಲಕರಣೆಗಳಿಂದ ಕೀಬೋರ್ಡ್ ಲೇಔಟ್ ಸಮಸ್ಯೆಗಳು ಬಗೆಹರಿದಂತಾಗುವುದಿಲ್ಲ. ವೈಜ್ಞಾನಿಕವಾದ ಮತ್ತು ಶಿಷ್ಟವಾದ ಏಕರೂಪ ಕೀಲಿಮಣೆ ವಿನ್ಯಾಸವು ಅತ್ಯಗತ್ಯ. ಇಂಥದ್ದನ್ನು ಸರಕಾರವು ನಿಗದಿಪಡಿಸಿದರೆ ಮಾತ್ರ ಎಲ್ಲಾ ತಂತ್ರಾಂಶ ತಯಾರಕರು ಅಂತಹ ಏಕರೂಪ ಕೀಲಿಮಣೆ ವಿನ್ಯಾಸ ನೀಡುತ್ತಾರೆ. ಹೊಸದಾಗಿ ಕಂಪ್ಯೂಟರ್ ಟೈಪಿಂಗ್ ಕಲಿಯುವವರು ಇದನ್ನೇ ಕಲಿಯಬಹುದು ಎಂಬ ಆಶಯದಿಂದ ಮತ್ತು ಹಲವಾರು ಕೀಲಿಮಣೆಗಳಿಂದಾಗುವ ಗೊಂದಲ ನಿವಾರಿಸಲು ಕರ್ನಾಟಕ ಸರಕಾರವು ಕನ್ನಡಕ್ಕೆ ಒಂದು ಶಿಷ್ಟ ಕೀಲಿಮಣೆ ವಿನ್ಯಾಸವನ್ನು (ಕೆ.ಪಿ.ರಾವ್ ರೂಪಿತ) ನಿಗದಿಪಡಿಸಿ ಘೋಷಿಸಿದೆ. ಮೊದಲ ಬಾರಿಗೆ ನುಡಿ ತಂತ್ರಾಂಶದಲ್ಲಿ ಅಳವಡಿಸಿದ ಕಾರಣ, ಇಂದು, ಅದು ‘ನುಡಿ’-ಲೇಔಟ್ ಎಂದೇ ಪ್ರಸಿದ್ಧವಾಗಿದೆ. ವಿಂಡೋಸ್‌ನ ಅತ್ಯಾಧುನಿಕ ಆವೃತ್ತಿಗಳಲ್ಲಿ (64 ಬಿಟ್) ಕನ್ನಡದ ಯೂನಿಕೋಡ್ ಫಾಂಟುಗಳು ಮತ್ತು ನುಡಿ-ಲೇಔಟ್ ಎರಡನ್ನೂ ಒಟ್ಟಿಗೆ ಬಳಸಬೇಕಾದರೆ ನೀವು ಮೈಕ್ರೋಸಾಫ್ಟ್ ಕಂಪೆನಿಯ ಭಾಷಾ ಇಂಡಿಯಾ (https://bhashaindia.com/downloads.aspx) ಜಾಲತಾಣದಿಂದ (ನಿಮ್ಮ ಅಗತ್ಯಕ್ಕೆ ತಕ್ಕಂತೆ) Kannada Indic IME-1 ಅಥವಾ ‘ಇಂಡಿಕ್ ಇನ್‌ಪುಟ್-2’ ಅಥವಾ ‘ಇಂಡಿಕ್ ಇನ್‌ಪುಟ್-3’ ಎಂಬುದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಬಹುದು. ಅದೇ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ನೀಡಲಾಗಿರುವ ‘ಯೂಸರ್-ಗೈಡ್’ನ್ನು ಓದಿಕೊಳ್ಳುವುದರಿಂದ ಇದರ ಅನುಸ್ಥಾಪನೆ ಮತ್ತು ಬಳಕೆ ಸುಲಭವಾಗುತ್ತದೆ. ‘‘ಯೂನಿಕೋಡ್ ಫಾಂಟುಗಳು ಮತ್ತು ನುಡಿ-ಲೇಔಟ್’’ ಬಳಸಿ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನು ಬಳಸುವ ಸೌಲಭ್ಯ ಬೇಕೆಂದರೆ \fldinst HYPERLINK "http://www.pada.pro/download/" http://www.pada.pro/download/ *ಜಾಲತಾಣದಲ್ಲಿ ಲಭ್ಯವಿರುವ Pada IME for all languages ಎಂಬುದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.