‘ಹಿಂದೂ ಪಾಕಿಸ್ತಾನ’ದ ಸುತ್ತಮುತ್ತ

Update: 2018-07-18 18:33 GMT

ಭಾಗ-1

ಇಂದು ಮೋದಿ ಸರಕಾರದಡಿ ತಮಗೆಲ್ಲ ಕಾನೂನಿನ ಕ್ರಮದಿಂದ ರಕ್ಷಣೆಯಿದೆ ಯೆಂಬುದನ್ನು ಗ್ರಹಿಸಿರುವ ಸಂಘಿಗಳಿಂದ ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ, ಬುದ್ಧಿಜೀವಿ ಗಳ ಮೇಲೆ, ಪ್ರಗತಿಪರ ವ್ಯಕ್ತಿ, ಸಂಘಟನೆಗಳ ಮೇಲೆ, ವಾಕ್‌ಸ್ವಾತಂತ್ರ್ಯದ ಮೇಲೆ ವ್ಯವಸ್ಥಿತ ಮತ್ತು ತೀವ್ರಮಟ್ಟದ ಶಾಬ್ದಿಕ ಹಾಗೂ ದೈಹಿಕ ದಾಳಿಗಳಾಗುತ್ತಿವೆ. ಕೇಂದ್ರ ಮತ್ತು ರಾಜ್ಯಗಳ ಸಂಘಿ ಮಂತ್ರಿಗಳು ಶಾಬ್ದಿಕ ದಾಳಿಗಳನ್ನು ನಡೆಸುತ್ತಿದ್ದರೆ ಸಂಘ ಪರಿವಾರದ ಫ್ಯಾಶಿಸ್ಟ್ ಕಾಲಾಳು ಪಡೆಗಳು ನೈತಿಕ ಪೊಲೀಸ್‌ಗಿರಿ, ಲವ್ ಜಿಹಾದ್, ಮತಾಂತರದ ನೆಪವೊಡ್ಡಿ ಧರ್ಮರಕ್ಷಣೆಯ ಹೆಸರಿನಲ್ಲಿ ದೈಹಿಕ ಹಲ್ಲೆ ನಡೆಸುವುದರಲ್ಲಿ ತೊಡಗಿವೆ; ಗೋರಕ್ಷಕರ ಗುಂಪುಗಳು ದೇಶದಾದ್ಯಂತ ಮುಸ್ಲಿಮರು ಮತ್ತು ದಲಿತರನ್ನು ಬೇಟೆನಾಯಿಗಳ ಥರ ಬೆಂಬೆತ್ತಿ ಹತ್ಯೆ ಮಾಡುತ್ತಿವೆ.

ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ. ಅಂತೆಯೇ 2019ರ ಚುನಾವಣೆಗಳಲ್ಲಿ ಬಿಜೆಪಿ ಗೆದ್ದರೆ ಭಾರತವು ಹಿಂದೂ ಪಾಕಿಸ್ತಾನವಾಗಲಿದೆ ಎಂದು ಕಾಂಗ್ರೆಸ್ ನಾಯಕ ಶಶಿತರೂರ್ ಹೇಳಿದಾಕ್ಷಣ ಸಂಘ ಪರಿವಾರದ ಮಂದಿ ಕೆರಳಿ ಕೆಂಡವಾಗಿದ್ದಾರೆ! ಒಬ್ಬಾತ ತರೂರ್ ವಿರುದ್ಧ ಪ್ರಕರಣ ದಾಖಲಿಸಿಯೂ ಆಗಿದೆ. ತರೂರ್ ಪ್ರಕಾರ ಆತ ಇದೇ ಹೇಳಿಕೆಯನ್ನು 2013ರಿಂದ ಆರಂಭಿಸಿ ಹಲವು ಬಾರಿ ನೀಡಿದ್ದಾರೆ. ಅಷ್ಟೇಕೆ, ಸ್ವತಃ ಕೆಲವು ಸ್ವತಂತ್ರ ಬಲಪಂಥೀಯ ವಿಮರ್ಶಕರೇ ‘ಭಾರತದ ಪಾಕಿಸ್ತಾನೀಕರಣ’ವನ್ನು ಪ್ರಸ್ತಾಪಿಸುತ್ತಾ ಅದನ್ನು ತಡೆಯುವುದಕ್ಕೋಸ್ಕರ ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕುವಂತೆ ಪ್ರಧಾನಿ ಮೋದಿಯಲ್ಲಿ ಮೊರೆಯಿಟ್ಟಿರುವ ವಿದ್ಯಮಾನವೂ ನಡೆದಿದೆ! ಆದರೆ ಅಂದು ಕೇಸರಿ ಪಾಳ್ಯದ ಪ್ರತಿಕ್ರಿಯೆ ಇಂದಿನಷ್ಟು ತೀಕ್ಷ್ಣವಾಗಿರಲಿಲ್ಲ. ಕಾರಣವೇನೆಂದರೆ ವಾಕ್‌ಸ್ವಾತಂತ್ರ್ಯದ ಮಟ್ಟಿಗೆ ಅಂದಿನ ವಾತಾವರಣ ಇಂದಿನಷ್ಟು ಭೀಕರವಾಗಿ ಕಲುಷಿತಗೊಂಡಿರಲಿಲ್ಲ. ಪ್ರಧಾನಿ ಮೋದಿಯ ಅಧಿಕಾರಾವಧಿಯಲ್ಲಿ ವಾಕ್‌ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ಭಾರತದ ‘ಉದಾರವಾದಿ ಪ್ರಜಾಪ್ರಭುತ್ವ’ ಸೂಚ್ಯಂಕ ಗಣನೀಯವಾಗಿ ಕುಸಿದಿದೆ ಎಂದು ಇತ್ತೀಚೆಗೆ ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನ ವಿಭಾಗದ ವತಿಯಿಂದ ನಡೆಸಲಾದ ಅಧ್ಯಯನವೊಂದು ತಿಳಿಸಿದೆ. ಇದು ಇಂದಿನ ಕಟುವಾಸ್ತವವನ್ನು ನೂರಕ್ಕೆ ನೂರರಷ್ಟು ಸರಿಯಾಗಿ ಬಿಂಬಿಸುತ್ತದೆ. ಈ ಹೊತ್ತು ಹೆಚ್ಚಿನ ಮಾಧ್ಯಮಗಳಲ್ಲಿ ಢಾಳಾಗಿ ಎದ್ದುತೋರುತ್ತಿರುವ ಏಕವ್ಯಕ್ತಿ ಆರಾಧನೆ ಒಂದು ಕಡೆಯಾದರೆ ಇನ್ನೊಂದು ಕಡೆ ಏಕಪಕ್ಷೀಯ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಟಿವಿ ಚಾನಲ್‌ಗಳಲ್ಲಿ ಕೂಗುಮಾರಿಗಳು ಕತ್ತೆಕಿರುಬಗಳಂತೆ ಕಿರಿಚಾಡುತ್ತಾ ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ಸಂವಿಧಾನಪರರು, ಮಾನವ ಹಕ್ಕು ಹೋರಾಟಗಾರರು, ವಿದ್ಯಾರ್ಥಿ ಮುಖಂಡರು ಮುಂತಾದವರ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸುತ್ತಾ ‘ನಗರದ ನಕ್ಸಲರು’, ‘ಉಗ್ರವಾದಿಗಳ ಬೆಂಬಲಿಗರು’, ‘ದೇಶದ್ರೋಹಿಗಳು’ ಎಂದು ಮುಂತಾದ ಹಣೆಪಟ್ಟಿ ಹಚ್ಚಿ ಅವರ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿರುವುದನ್ನು ಕಾಣಬಹುದು. ವರ್ಷಾನುಗಟ್ಟಲೆ ಸೆರೆಮನೆಯಲ್ಲಿರಿಸಲು ಅವಕಾಶ ನೀಡುವ ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ ಈಗಾಗಲೇ ಕೆಲವರನ್ನು ಬಂಧಿಸಿ ಆ ಮೂಲಕ ಇತರರಲ್ಲಿ ಭಯಭೀತಿ ಉತ್ಪಾದಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಅರ್ಥಾತ್ ಭಿನ್ನಮತವನ್ನು ಸಂಪೂರ್ಣವಾಗಿ ಹತ್ತಿಕ್ಕುವ ಪ್ರಕ್ರಿಯೆ ಶುರುವಾಗಿದೆ ಮಾತ್ರವಲ್ಲ ವೇಗ ಪಡೆದುಕೊಳ್ಳುತ್ತಿದೆ.

ತರೂರ್ ಹೇಳಿಕೆಗೆ ಸಂಘಿಗಳ ಪ್ರತಿಕ್ರಿಯೆ
ತರೂರ್ ಹೇಳಿಕೆ ‘‘ಭಾರತೀಯ ಪ್ರಜಾಸತ್ತೆ ಮತ್ತು ಹಿಂದೂಗಳ ಮೇಲಿನ ದಾಳಿ’’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟೀಕಿಸಿದ್ದಾರೆ. ಅತ್ತ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ‘‘ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ತರೂರ್ ಪಾಕ್‌ಗೆ ಹೋಗಲಿ’’ ಎಂಬ ಹಳಸಲು ಸಲಹೆಯಿತ್ತಿದ್ದಾರೆ. ಅವಕಾಶ ಇರುವಲ್ಲಿಗೆ ಜಿಗಿಯುವ ಸುಬ್ರಮಣಿಯನ್ ಸ್ವಾಮಿಯಂಥವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ಇದೇ ಮಹಾಸ್ವಾಮಿಯವರು 2000ರಲ್ಲೊಮ್ಮೆ ತುರ್ತುಪರಿಸ್ಥಿತಿ ಕುರಿತ ಒಂದು ಲೇಖನದಲ್ಲಿ ‘‘ಸಂಘ ಪರಿವಾರದ ನಾಯಕರಲ್ಲಿ ಹೆಚ್ಚಿನವರು ತುರ್ತುಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ ನಂಬಿಕೆದ್ರೋಹ ಬಗೆದಿದ್ದರು’’ ಎಂದು ಬರೆದಿದ್ದರು! ಅಷ್ಟು ಮಾತ್ರವಲ್ಲ ‘‘ನುರಿತ ಕಾರ್ಯಕರ್ತರ ಫ್ಯಾಶಿಸ್ಟ್ ಸಂಘಟನೆಯೊಂದು ಅಧಿಕಾರದ ಸನ್ನೆಕೋಲುಗಳನ್ನು ನಿಯಂತ್ರಿಸುತ್ತಿದೆ. ಅದು ಅರಕ್ಷಿತ ಧರ್ಮಪ್ರಚಾರಕರನ್ನು ಕೊಲ್ಲಲೂ ಹೇಸದ ದಡ್ಡ ಕೆಳವರ್ಗದವರಿರುವ ಮುಖವಾಡ ಸಂಘಟನೆಗಳನ್ನು ಹುಟ್ಟುಹಾಕಿದೆ. ಕಳ್ಳತನದಿಂದ ತೆವಳುತ್ತಾ ಬರುತ್ತಿರುವ ತುರ್ತುಪರಿಸ್ಥಿತಿ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಒಳಗಿಂದೊಳಗೆ ಕೊರೆದುಹಾಕುತ್ತಿದೆ. ಬಿಜೆಪಿ ಸಂವಿಧಾನಕ್ಕೆ ತಿದ್ದುಪಡಿ ಮಾತ್ರ ಮಾಡಹೊರಟಿಲ್ಲ, ಇಡೀ ಸಂವಿಧಾನವನ್ನೇ ರಿಪೇರಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಚರಿತ್ರೆಯನ್ನು ಬದಲಾಯಿಸಲಾರಂಭಿಸಿದೆ. ಅದರ ಮುಖವಾಡ ಸಂಸ್ಥೆಗಳಾದ ವಿಹಿಂಪ, ಬಜರಂಗ ದಳಗಳು ಈಗಾಗಲೇ ಸಮಾಜದ ತಳಮಟ್ಟದಲ್ಲಿ ವಿಕರಾಳ, ಮಸುಕು ಮಸುಕಾದ ಭಯೋತ್ಪಾದನೆಯನ್ನು ಹರಿಯಬಿಟ್ಟಿವೆ. ಹೀಗಿರುವಾಗ ಬಿಜೆಪಿಗೆ ಅದು ಹೇಗೆ ಪ್ರಜಾಪ್ರಭುತ್ವವನ್ನು ಕಾಪಿಡುವ ಬಗ್ಗೆ ಮಾತನಾಡಲು ಸಾಧ್ಯ?’’ ಎಂದೂ ಹೇಳಿದ್ದರು!! ಇಂದಿನ ಪರಿಸ್ಥಿತಿಗೂ ಅನ್ವಯವಾಗುತ್ತಿರುವ ಈ ಲೇಖನ ಬಹುಶಃ ಸನ್ಮಾನ್ಯ ಸಂಬಿತ್ ಪಾತ್ರರ ಗಮನಕ್ಕೆ ಬಂದಿಲ್ಲವೆಂದು ತೋರುತ್ತದೆ.

2000ದ ಪರಿಸ್ಥಿತಿಗೂ ಇಂದಿನದ್ದಕ್ಕೂ ಏನು ವ್ಯತ್ಯಾಸ?

ಸ್ವಾಮಿಯವರು 2000ರಲ್ಲಿ ಗಮನಿಸಿದ ವಿದ್ಯಮಾನಗಳಿಗೂ 2014ರ ನಂತರದಲ್ಲಿ ನಡೆಯುತ್ತಿರುವ ಈಗಿನ ವಿದ್ಯಮಾನಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಈಗಿನ ಪರಿಸ್ಥಿತಿ 2000ಕ್ಕಿಂತಲೂ ಕನಿಷ್ಠ ನೂರು ಪಟ್ಟು ಹೆಚ್ಚು ಕೆಟ್ಟದಾಗಿದೆ. ಇಂದು ಮೋದಿ ಸರಕಾರದಡಿ ತಮಗೆಲ್ಲ ಕಾನೂನಿನ ಕ್ರಮದಿಂದ ರಕ್ಷಣೆಯಿದೆಯೆಂಬುದನ್ನು ಗ್ರಹಿಸಿರುವ ಸಂಘಿಗಳಿಂದ ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ, ಬುದ್ಧಿಜೀವಿ ಗಳ ಮೇಲೆ, ಪ್ರಗತಿಪರ ವ್ಯಕ್ತಿ, ಸಂಘಟನೆಗಳ ಮೇಲೆ, ವಾಕ್‌ಸ್ವಾತಂತ್ರ್ಯದ ಮೇಲೆ ವ್ಯವಸ್ಥಿತ ಮತ್ತು ತೀವ್ರಮಟ್ಟದ ಶಾಬ್ದಿಕ ಹಾಗೂ ದೈಹಿಕ ದಾಳಿಗಳಾಗುತ್ತಿವೆ. ಕೇಂದ್ರ ಮತ್ತು ರಾಜ್ಯಗಳ ಸಂಘಿ ಮಂತ್ರಿಗಳು ಶಾಬ್ದಿಕ ದಾಳಿಗಳನ್ನು ನಡೆಸುತ್ತಿದ್ದರೆ ಸಂಘ ಪರಿವಾರದ ಫ್ಯಾಶಿಸ್ಟ್ ಕಾಲಾಳು ಪಡೆಗಳು ನೈತಿಕ ಪೊಲೀಸ್‌ಗಿರಿ, ಲವ್ ಜಿಹಾದ್, ಮತಾಂತರದ ನೆಪವೊಡ್ಡಿ ಧರ್ಮರಕ್ಷಣೆಯ ಹೆಸರಿನಲ್ಲಿ ದೈಹಿಕ ಹಲ್ಲೆ ನಡೆಸುವುದರಲ್ಲಿ ತೊಡಗಿವೆ; ಗೋರಕ್ಷಕರ ಗುಂಪುಗಳು ದೇಶದಾದ್ಯಂತ ಮುಸ್ಲಿಮರು ಮತ್ತು ದಲಿತರನ್ನು ಬೇಟೆನಾಯಿಗಳ ಥರ ಬೆಂಬೆತ್ತಿ ಹತ್ಯೆ ಮಾಡುತ್ತಿವೆ.

ಭಾರತದ ಪ್ರಜಾಸತ್ತೆಗೆ ಗಂಡಾಂತರ ತಂದೊಡ್ಡಿರು ವವರು ಯಾರು?
ಭಾರತದಲ್ಲಿ ಇಂದು ಸಂಭವಿಸುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವದ ಅಡಿಪಾಯವನ್ನು ಒಳಗಿಂದೊಳಗೆ ಕೊರೆಯುತ್ತಿವೆ ಎನ್ನುತ್ತದೆ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ. ಇದೊಂದು ವಿಶ್ವದಾದ್ಯಂತ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ತಿಳಿಯುವುದಕ್ಕಾಗಿರುವ ಪರಿಮಾಣಾತ್ಮಕ ಅಧ್ಯಯನವಾಗಿದೆ. ಇದೇ ಮೇ 28ರಂದು ಬಿಡುಗಡೆಗೊಂಡಿರುವ ಅಧ್ಯಯನದ ವರದಿ ಬ್ರೆಝಿಲ್, ಭಾರತ, ರಶ್ಯಾ, ಟರ್ಕಿ, ಅಮೆರಿಕ ಸಹಿತ ಜಗತ್ತಿನ ಹಲವಾರು ದೊಡ್ಡ ದೇಶಗಳಲ್ಲಿ ಪ್ರಜಾಪ್ರಭುತ್ವ ಹಿಮ್ಮೆಟ್ಟುತ್ತಿದೆಯೆಂಬ ಮುನ್ಸೂಚನೆಯನ್ನು ನೀಡಿದೆ. ನಿರ್ದಿಷ್ಟವಾಗಿ ಭಾರತದ ವಿಷಯವನ್ನು ಪ್ರಸ್ತಾಪಿಸುತ್ತಾ ‘‘ಹಿಂದೂ ರಾಷ್ಟ್ರೀಯವಾದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರಜಾಪ್ರಭುತ್ವದ ಭಾಗವಾದ ಮಾಧ್ಯಮ ಸ್ವಾತಂತ್ರ್ಯವನ್ನು ಮತ್ತು ನಾಗರಿಕ ಸಮಾಜದ ಚಟುವಟಿಕೆಗಳನ್ನು ಅತಿಕ್ರಮಿಸುವ ಘಟನೆಗಳು ಹೆಚ್ಚಿವೆ. ಇದರಿಂದಾಗಿ ಭಾರತದ ಪ್ರಜಾಪ್ರಭುತ್ವದ ಅಡಿಪಾಯ ಶಿಥಿಲಗೊಳ್ಳುತ್ತಿದೆ...... 2017ರ ಹೊತ್ತಿಗೆ 20,000 ಮಾನವ ಹಕ್ಕು ಮತ್ತು ಪರಿಸರವಾದಿ ಸಂಸ್ಥೆಗಳ ಪರವಾನಗಿ ರದ್ದಾಗಿದೆ...... ವಿದೇಶಿ ನಿಧಿ ನಿಯಂತ್ರಣ ಕಾಯ್ದೆಯನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ವಿಷಯಗಳ ಮೇಲೆ ಸರಕಾರಕ್ಕಿಂತ ಭಿನ್ನ ನಿಲುವು ತಾಳುವ ಸಂಸ್ಥೆಗಳ ಬಾಯ್ಮುಚ್ಚಿಸಲು ಹೆಚ್ಚೆಚ್ಚಾಗಿ ಬಳಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ’’ ಎನ್ನುತ್ತದೆ ವರದಿ. ಬಿಜೆಪಿಯ ಸನ್ಮಾನ್ಯ ವಕ್ತಾರರು ಈ ವರದಿಯನ್ನೂ ಗಮನಿಸಿದಂತಿಲ್ಲ. ಆದರೆ ಪ್ರಜಾಪ್ರಭುತ್ವದ ಕುರಿತು ಸಂಘ ಪರಿವಾರದ ಅಸಲಿ ನಿಲುವನ್ನು ಸ್ಪಷ್ಟಪಡಿಸುವ ಆರೆಸ್ಸೆಸ್‌ನ ಗುರು ಗೋಳ್ವಾಲ್ಕರ್‌ರ ‘ಬಂಚ್ ಆಫ್ ಥಾಟ್ಸ್’ ಪುಸ್ತಕವನ್ನಂತೂ ಪಾತ್ರ, ಸ್ವಾಮಿಯಾದಿಯಾಗಿ ಎಲ್ಲರೂ ಖಂಡಿತಾ ಓದಿರಲೇಬೇಕು! ಅದರಲ್ಲಿ ಮಾನ್ಯ ಗೋಳ್ವಾಲ್ಕರ್, ‘‘ಪ್ರಜಾಪ್ರಭುತ್ವವು ಅನುಸರಣೆಯಲ್ಲಿ ಬಹುತೇಕವಾಗಿ ಬರೀ ಒಂದು ದಂತಕತೆ’’ ಎಂದು ಹೇಳಿದ್ದಾರೆ. ಇವೆಲ್ಲವನ್ನು ಪರಿಗಣಿಸಿದಾಗ ಭಾರತೀಯ ಪ್ರಜಾಸತ್ತೆಗೆ ಎಲ್ಲಿಲ್ಲದ ಗಂಡಾಂತರ ತಂದೊಡ್ಡಿರುವುದು ಸಂಘ ಪರಿವಾರವೇ ಹೊರತು ತರೂರ್ ಮತ್ತಿತರ ಪ್ರಗತಿಪರರ ಹೇಳಿಕೆಗಳಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಹಿಂದೂ ಪರ ಅಲ್ಲ ಹಿಂದುತ್ವ ಪರ, ವೈದಿಕ ಪುರೋಹಿತಶಾಹಿ ಪರ
ಈಗ ಮತ್ತೆ ತರೂರ್ ಎತ್ತಿರುವ ವಿಷಯಕ್ಕೆ ಮರಳೋಣ. ಹಿಂದುಗಳ ಹೆಸರಿನಲ್ಲಿ ಕಾರ್ಯಾಚರಿಸುವ ಸಂಘ ಪರಿವಾರ ಅಸಲಿಗೆ ಹಿಂದೂಗಳ ಪರ ಅಲ್ಲ. ವಾಸ್ತವದಲ್ಲಿ ಅದು ಹಿಂದೂತ್ವ ಪರ, ವೈದಿಕ ಪುರೋಹಿತಶಾಹಿಯ ಪರ. ಉದಾಹರಣೆಗೆ ತಾವು ಹಿಂದೂ ಪರ ಎಂದು ಎಸ್‌ಐಟಿ ತನಿಖೆಯ ವೇಳೆ ಹೇಳಿದ ಗೌರಿ ಲಂಕೇಶ್ ಹತ್ಯೆ ಆರೋಪಿಗಳಲ್ಲಿ ಎರಡು ಶ್ಲೋಕ ಹೇಳುವಂತೆ ಸೂಚಿಸಿದಾಗ ಅವರು ತಬ್ಬಿಬ್ಬಾದ ಘಟನೆಯನ್ನು ಜ್ಞಾಪಿಸಿಕೊಳ್ಳಬಹುದು. ಈ ಸೂಕ್ಷ್ಮ ವ್ಯತ್ಯಾಸಗಳು ಜನಸಾಮಾನ್ಯರಿಗೆ ತಿಳಿದಿಲ್ಲವೆಂದೇ ಇಟ್ಟುಕೊಳ್ಳೋಣ. ಆದರೆ ಮಾಧ್ಯಮಗಳಿಗೆ ಏನಾಗಿದೆ? ಬಹುತೇಕ ಭಾರತೀಯ ಮಾಧ್ಯಮಗಳು ಸಂಘ ಪರಿವಾರದ ಅಂಗಸಂಸ್ಥೆಗಳನ್ನು ಹಿಂದೂ ಪರ ಎಂದು ತಪ್ಪಾಗಿ ಬಣ್ಣಿಸುವುದನ್ನು ಮುಂದುವರಿಸುತ್ತಾ ಜನಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿರುವುದನ್ನು ನೋಡಿದರೆ ಬೇಲಿಯೇ ಹೊಲವನ್ನು ಮೇಯುವ ಗಾದೆ ನೆನಪಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿದೆಯೇ ಎಂದು ಭಯವಾಗುತ್ತದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ