‘ಹಿಂದೂ ಪಾಕಿಸ್ತಾನ’ದ ಸುತ್ತಮುತ್ತ

Update: 2018-07-19 18:31 GMT

ಭಾಗ-2

ಹಿಂದೂ ರಾಷ್ಟ್ರದ ಒಡೆಯರು ಯಾರು? ಈ ಹಿಂದುತ್ವ ಎನ್ನುವ ಶಬ್ದ ಹಿಂದೂ ಧರ್ಮಕ್ಕೆ ಸಂಬಂಧಪಟ್ಟದಲ್ಲ. ಅದು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದಕ್ಕೋಸ್ಕರ ಸಾವರ್ಕರ್ ಹುಟ್ಟುಹಾಕಿರುವ ಒಂದು ರಾಜಕೀಯ ಸಿದ್ಧಾಂತ. ಅದನ್ನೇ ತನ್ನ ಮೂಲ ಸಿದ್ಧಾಂತವಾಗಿಸಿರುವ ಸಂಘ ಪರಿವಾರದ ಅಂತಿಮ ಗುರಿಯೇ ಸೆಕ್ಯುಲರ್ ಭಾರತವನ್ನು ವೈದಿಕ ಪುರೋಹಿತಶಾಹಿಯ ಕೈಗೊಪ್ಪಿಸಿ ಅದನ್ನೊಂದು ದೇವಪ್ರಭುತ್ವವಾಗಿಸಿ (ಹಿಂದೆ ರಾಜರು ಆಳುತ್ತಿದ್ದಂತೆ) ದೇವರ ಹೆಸರಿನಲ್ಲಿ ಜನರನ್ನಾಳುವುದಾಗಿದೆ. ಗೋಳ್ವಾಲ್ಕರ್ ವಿರಚಿತ ಹಾಗೂ ಆರೆಸ್ಸೆಸ್‌ನ ಬೈಬಲ್ ಎಂದೇ ಪರಿಗಣಿಸಲಾಗುವ ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್‌ಡ್’ ಪುಸ್ತಕದಲ್ಲಿ ‘‘ನಮ್ಮ ಪಾಲಿಗೆ ಜೀವನದ ಪ್ರತಿಯೊಂದು ವೈಯಕ್ತಿಕ, ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆ ಕೂಡ ಧರ್ಮದ ಆದೇಶವಾಗಿದೆ...... ರಾಜಕಾರಣದಲ್ಲಿ ತೊಡಗುವಾಗ ಅದನ್ನೊಂದು ಧರ್ಮದ ಆದೇಶವೆಂದು ಪರಿಗಣಿಸಬೇಕು’’ ಎಂದು ಹೇಳಲಾಗಿರುವುದನ್ನು ಗಮನಿಸಬೇಕು. ಸಾವರ್ಕರ್ ಮತ್ತು ಗೋಳ್ವಾಲ್ಕರ್‌ರ ಪ್ರಕಾರ ಹಿಂದೂ ರಾಷ್ಟ್ರ ಕೇವಲ ಹಿಂದೂಗಳಿಗೆ ಸೇರಿದುದಾಗಿದ್ದು ಅದನ್ನು ಆಳುವ ಹಕ್ಕಿರುವುದು ಕೇವಲ ಮೇಲ್ಜಾತಿಗಳಿಗೆ; ಇವರ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಲ್ಲದವರಿಗೆ, ಅಂದರೆ ಅಲ್ಪಸಂಖ್ಯಾತರು, ಕೆಳಜಾತಿಗಳು, ಆದಿವಾಸಿಗಳಿಗೆ ಸಮಾನ ಹಕ್ಕುಗಳುಳ್ಳ ಪ್ರಜೆಗಳಾಗಿ ಬಾಳುವ ಅವಕಾಶ ಇಲ್ಲ; ಒಂದು ವೇಳೆ ಹಿಂದೂ ರಾಷ್ಟ್ರದಲ್ಲಿ ಉಳಿಯಬೇಕೆಂದಿದ್ದರೆ ಎರಡನೇ ದರ್ಜೆಯ ಪ್ರಜೆಗಳಾಗಲು ಒಪ್ಪಬೇಕು; ಅಲ್ಪಸಂಖ್ಯಾತರು ಬೇಕಿದ್ದರೆ ದೇಶಾಂತರ ಹೋಗಬಹುದು. ‘‘ಹಿಂದೂಸ್ಥಾನದಲ್ಲಿರುವ ವಿದೇಶೀಯ ಜನಾಂಗಗಳು ಒಂದೋ ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದೂ ಧರ್ಮಕ್ಕೆ ಗೌರವ ತೋರಿಸಿ ಅದನ್ನು ಭಯಭಕ್ತಿಯಿಂದ ಕಾಣಬೇಕು, ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರದ ಸಂಸ್ಕೃತಿಯನ್ನು ವೈಭವೀಕರಿಸುವುದರ ಹೊರತು ಬೇರಾವ ವಿಷಯವನ್ನೂ ಮನದೊಳಕ್ಕೆ ಬಿಟ್ಟುಕೊಳ್ಳಬಾರದು ಮತ್ತು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ ಹಿಂದೂ ಜನಾಂಗದೊಳಕ್ಕೆ ಸೇರಿಕೊಳ್ಳಬೇಕು. ಇಲ್ಲಾ ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ ದೇಶದೊಳಗಿರಬಹುದು’’ ಎಂದು ಗೋಳ್ವಾಲ್ಕರ್ ತನ್ನ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ಬರೆದಿದ್ದಾರೆ.

ಇನ್ನು ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್‌ರ ಪ್ರಕಾರ ‘‘ಭಾರತದಲ್ಲಿ ರಾಷ್ಟ್ರೀಯ ಎಂದರೆ ರಾಷ್ಟ್ರದ ಮುಖ್ಯವಾಹಿನಿಯಾಗಿರುವ ಹಿಂದೂಗಳು ಎನ್ನುವುದು ಆರೆಸ್ಸೆಸ್‌ನ ನಂಬಿಕೆಯಾಗಿದೆ. ಆದುದರಿಂದಲೇ ಅದಕ್ಕೆ ‘ಹಿಂದೂ ಸ್ವಯಂಸೇವಕ ಸಂಘ’ ಎಂಬ ಹೆಸರನ್ನು ಆಯ್ಕೆ ಮಾಡಲಿಲ್ಲ.’’ ಇವೆಲ್ಲವೂ ಹಿಂದೂ ರಾಷ್ಟ್ರದ ಒಡೆಯರು ಯಾರೆಂಬುದನ್ನು ಯಾವುದೇ ಅನುಮಾನಕ್ಕೆ ಆಸ್ಪದವಿರದಂತೆ ಸ್ಪಷ್ಟಪಡಿಸುತ್ತವೆ.

ಹಿಂದೂ ರಾಷ್ಟ್ರ ಮತ್ತು ಸಂವಿಧಾನ
 ಸಂಘ ಪರಿವಾರದ ಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಭಾರತದ ಸಂವಿಧಾನ ಇರುವುದಿಲ್ಲ. ಬದಲಿಗೆ ಹಿಂದೂ ರಾಷ್ಟ್ರದಲ್ಲಿ ಆಡಳಿತಕ್ಕೆ ಮಾರ್ಗಸೂಚಿಯಾಗಲಿರುವುದು ಮನುವಿನ ಸೂತ್ರಗಳು. ಹಿಂದುತ್ವ ಸಿದ್ಧಾಂತ ರಚಿಸಿದ ಸಾವರ್ಕರ್ ಇದನ್ನು 1940ರಷ್ಟು ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಆತ ‘‘ಮನುಸ್ಮತಿಯೇ ಹಿಂದೂಗಳ ಮೂಲ ಕಾನೂನು. ಅದನ್ನು ಅಳವಡಿಸಿದರೆ ಹಿಂದೂ ರಾಷ್ಟ್ರವು ಅಜೇಯವಾಗುವುದು ಮತ್ತು ಜಯಗಳಿಸಲು ಶಕ್ತವಾಗುವುದು’’ ಎಂದು ಮಥುರಾದಲ್ಲಿ ಹಿಂದೂ ಮಹಾಸಭಾದ 22ನೆ ಅಧಿವೇಶನದ ವೇಳೆ ಹೇಳಿದ್ದರು. ಮುಂದೆ ಗೋಳ್ವಾಲ್ಕರ್‌ಮತ್ತಿತರರು ಕೂಡಾ ಇದಕ್ಕೆ ದನಿಗೂಡಿಸಿದ್ದಾರೆ. 1960ರಲ್ಲಿ ಮಾಡಿದ್ದ ಭಾಷಣವೊಂದರಲ್ಲಿ ಗೋಳ್ವಾಲ್ಕರ್, ‘‘ನಮ್ಮ ದೇಶದ ದುರದೃಷ್ಟವೇನೆಂದರೆ ನಮ್ಮ ಸಂವಿಧಾನ ನೆಲದ ಮಕ್ಕಳನ್ನೂ ಆಕ್ರಮಣಕಾರರನ್ನೂ ಸಮಾನರಾಗಿ ಪರಿಗಣಿಸಿ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಇದು ವಿವೇಚನಾಶೂನ್ಯ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗೂ ಮನೆಯಲ್ಲಿರುವ ಕಳ್ಳರಿಗೂ ಸಮಾನ ಹಕ್ಕುಗಳನ್ನು ನೀಡಿ, ಆಸ್ತಿಯನ್ನು ಅವರೆಲ್ಲರಿಗೂ ಹಂಚಿಕೊಡಬಹುದು ಎನ್ನುವಂತಿದೆ’’ ಎಂದಿದ್ದರು. ದೀನ ದಯಾಳು ಉಪಾಧ್ಯಾಯರೂ ಸಂವಿಧಾನವನ್ನು ತಿರಸ್ಕರಿಸಿದ್ದರು. ಸಂಘ ಪರಿವಾರದ ಕೆಲವೊಂದು ನಾಯಕರ ಇತ್ತೀಚಿನ ಹೇಳಿಕೆಗಳು ಇದಕ್ಕೆ ಪೂರಕವಾಗಿಯೇ ಇರುವುದನ್ನು ಗಮನಿಸಬೇಕು. ‘‘ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಂವಿಧಾನವನ್ನು ಬದಲಾಯಿಸಲು; ಸದ್ಯದಲ್ಲೇ ಅದನ್ನು ಮಾಡಲಿದೆ’’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಬಹಿರಂಗವಾಗಿ ಹೇಳಿದ್ದಾರೆ. ಇನ್ನೊಂದು ಕಡೆ ಆರೆಸ್ಸೆಸ್‌ನ ಹಿರಿಯ ಸಿದ್ಧಾಂತವಾದಿಯಾಗಿರುವ ಗೋವಿಂದಾಚಾರ್ಯರು ತಾನು ಹೊಸ ಹಿಂದುತ್ವ ಸಂವಿಧಾನವೊಂದನ್ನು (?!) ರಚಿಸುತ್ತಿದ್ದೇನೆಂದು ತಿಳಿಸಿದ್ದಾರೆ. ಹೀಗೆ ಸಂಘ ಪರಿವಾರದ ಉದ್ದೇಶ ಸಂವಿಧಾನವನ್ನು ಬದಲಾಯಿಸುವುದಾಗಿದ್ದರೂ ಮೋದಿ ಸರಕಾರ ಇಂದು ಸಂವಿಧಾನ ದಿನ, ಗಣತಂತ್ರ ದಿನಗಳನ್ನು ಆಚರಿಸುತ್ತಾ ಸಂವಿಧಾನವನ್ನು ಹೊಗಳುವ ಭಾಷಣ ಮಾಡುತ್ತಾ ಸಂವಿಧಾನಕ್ಕೆ ಬದ್ಧತೆ ಇರುವವರಂತೆ ತೋರ್ಪಡಿಸಿಕೊಳ್ಳುತ್ತಿದೆ. ಆದರೆ ಇದೊಂದು ಕಪಟ ನಾಟಕ. ಜನಸಾಮಾನ್ಯರಿಗೆ ಮಂಕುಬೂದಿ ಎರಚುವ ಕೃತ್ಯ. ಏಕೆಂದರೆ ಇಂದು ಬಿಜೆಪಿ ಲೋಕಸಭೆಯಲ್ಲಿ ಬಹುಮತ ಹೊಂದಿರುವುದರೊಂದಿಗೆ 22 ರಾಜ್ಯಗಳನ್ನು ನಿಯಂತ್ರಿಸುತ್ತಿದೆಯಾದರೂ ಸಂವಿಧಾನವನ್ನು ಬದಲಾಯಿಸಲು ಇಷ್ಟು ಬಲ ಸಾಲದಾಗಿದೆ. ಒಂದೊಮ್ಮೆ 2019ರ ಚುನಾವಣೆಗಳ ನಂತರ ರಾಜ್ಯಸಭೆಯಲ್ಲೂ ಬಿಜೆಪಿಗೆ ಬಹುಮತ ದೊರೆತು ಸಂಸತ್ತಿನ ಮೂರನೆ ಎರಡರಷ್ಟು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾದಲ್ಲಿ ಸಂವಿಧಾನ ಬದಲಾಯಿಸುವ ಪ್ರಕ್ರಿಯೆಗೆ ಇರುವ ಅಡೆತಡೆಗಳೆಲ್ಲವೂ ಇಲ್ಲವಾಗುತ್ತವೆ! ಆದುದರಿಂದಲೆ 2019ರ ಚುನಾವಣೆ ಗೆಲ್ಲಲು ಬಿಜೆಪಿ ಭಗೀರಥ ಪ್ರಯತ್ನ ನಡೆಸುತ್ತಿದೆ.

ಪಾಕಿಸ್ತಾನ ಮತ್ತು ‘ಹಿಂದೂ ಪಾಕಿಸ್ತಾನ’
ನಮಗೆಲ್ಲರಿಗೂ ಗೊತ್ತಿರುವ ಹಾಗೆೆ ಪಾಕಿಸ್ತಾನ ಅದರ ಹುಟ್ಟಿನಿಂದಲೇ ಒಂದು ದೇವಪ್ರಭುತ್ವ. ಅಲ್ಲಿ ಆಡಳಿತವು ಮತಾಂಧ ಮುಸ್ಲಿಂ ಪುರೋಹಿತಶಾಹಿಯ ಕಪಿಮುಷ್ಟಿಯಲ್ಲಿದೆ. ಅದು ಮತೀಯ ಉಗ್ರವಾದಿಗಳ ಆಡುಂಬೊಲವಾಗಿದೆ. ಪಾಕಿಸ್ತಾನದಲ್ಲಿ ಅನ್ಯಮತೀಯರು ಅನುಭವಿಸುತ್ತಿರುವ ದುರವಸ್ಥೆಗಳೇನೆಂದು ನಾವು ನೋಡುತ್ತಿದ್ದೇವೆ. ಒಂದು ವೇಳೆ ಭಾರತದಲ್ಲಿ ದೇವಪ್ರಭುತ್ವ ಸ್ಥಾಪಿಸಲ್ಪಟ್ಟಲ್ಲಿ ಆಡಳಿತವು ಮತಾಂಧ ಹಿಂದೂ (ವೈದಿಕ) ಪುರೋಹಿತಶಾಹಿಯ ಕೈವಶವಾಗಲಿದೆ. ಆ ಹಿಂದೂ ರಾಷ್ಟ್ರದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮುಂತಾದವರು ಗೋಳ್ವಾಲ್ಕರ್ ಆದೇಶಕ್ಕೆ ಅನುಗುಣವಾಗಿ ‘‘ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ’’ ಬದುಕಬೇಕಾಗುತ್ತದೆ. ಅಲ್ಲಿ ಮತೀಯ ಉಗ್ರವಾದಿಗಳ ಅಟ್ಟಹಾಸ ಮೇರೆ ಮೀರಲಿದೆ. ಅಂದಮೇಲೆ ಮತಾಂಧ ಮುಲ್ಲಾಗಳ ಪಾಕಿಸ್ತಾನ ಮತ್ತು ಮತಾಂಧ ಸ್ವಾಮೀಜಿ, ಮಠಾಧಿಪತಿಗಳ ಭಾರತದ ನಡುವೆ ಏನು ವ್ಯತ್ಯಾಸ ಉಳಿಯಿತು? ಎರಡು ದೇಶಗಳೂ ಒಂದು ಇನ್ನೊಂದರ ಪ್ರತಿಬಿಂಬದಂತಾಗಲಿವೆ, ‘‘ಭಾರತವು ಹಿಂದೂ ಪಾಕಿಸ್ತಾನವಾಗಲಿದೆ’’ ಎಂದು ತರೂರ್ ಹೇಳಿರುವುದು ಇದೇ ಅರ್ಥದಲ್ಲಿ.
ಕೊನೆ ಹನಿ: ಇಂದಿನ ಕಾಂಗ್ರೆಸ್‌ನಲ್ಲಿ ಮೃದು ಹಿಂದುತ್ವವಾದಿಗಳ ಪ್ರಭಾವ ಸಾಕಷ್ಟಿದೆ ಎನ್ನುವುದಕ್ಕೆ ಪಕ್ಷದ ವಕ್ತಾರರು ತರೂರ್‌ರಿಗೆ ನೀಡಿರುವ ‘ಎಚ್ಚರಿಕೆ’ಯೇ ಸಾಕ್ಷಿ. ಕಾಂಗ್ರೆಸ್ ಪಕ್ಷ ಪುನರುಜ್ಜೀವಿತ ಗೊಂಡು ಮೃದು ಹಿಂದುತ್ವವಾದಿಗಳನ್ನು ತೊಲಗಿಸಿ, ಎಲ್ಲಾ ಧರ್ಮಗಳನ್ನು ಒಂದೇ ಸಮನಾಗಿ ಕಾಣುವ ನೈಜ ಜಾತ್ಯತೀತತೆಯನ್ನು ಪಾಲಿಸಿ, ಹಾದಿಯಲ್ಲೆಲ್ಲೋ ಕೈಬಿಟ್ಟ ಸಂವಿಧಾನದ ಸಮಾಜವಾದಿ ಸೂತ್ರವನ್ನು ಮತ್ತೊಮ್ಮೆ ಅಳವಡಿಸಿ, ಬಂಡವಾಳಶಾಹಿಯ ಅಟ್ಟಹಾಸವನ್ನು ಮೆಟ್ಟಿನಿಂತು, ಶ್ರೀೀಸಾಮಾನ್ಯರ ಪರವಾಗಿ ನಿಲ್ಲದೆ ಹೋದರೆ ಎದುರಿಗೆ ಸಿಕ್ಕಿದುದನ್ನೆಲ್ಲಾ ಪುಡಿಪುಡಿ ಮಾಡುತ್ತಾ ಉರುಳುತ್ತಾ ಬರುತ್ತಿರುವ ಹಿಂದೂ ರಾಷ್ಟ್ರ ಎಂಬ ಜಗನ್ನಾಥ ರಥವನ್ನು ತಡೆಯುವುದು ಕಷ್ಟಸಾಧ್ಯ.

*********

(ಆಧಾರ: ‘ದ ಪ್ರಿಂಟ್’ನಲ್ಲಿ ಶಶಿತರೂರ್ ಮತ್ತು ಕುಮಾರ್ ಕೇತ್ಕರ್ ಲೇಖನಗಳು; ಸ್ಕ್ರಾಲ್.ಇನ್‌ನಲ್ಲಿ ಶುಐಬ್ ದನಿಯಾಲ್ ಲೇಖನ; ಎ.ಜಿ. ನೂರಾನಿಯವರ ‘ಆರೆಸ್ಸೆಸ್ ಮತ್ತು ಬಿಜೆಪಿ’, ಶಂಶುಲ್ ಇಸ್ಲಾಮ್‌ರ ‘ವೀರ ಸಾವರ್ಕರ್: ಸತ್ಯ ಎಷ್ಟು ಮತ್ತು ಮಿಥ್ಯ ಎಷ್ಟು’, 13-6-2000ರ ದ ಹಿಂದೂ ನಲ್ಲಿ ಸುಬ್ರಮಣಿಯನ್ ಸ್ವಾಮಿ ಲೇಖನ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ