ಇನ್ನು ಮುಂದೆ ಒಮ್ಮೆಗೆ 5 ಚಾಟ್ ಗಳಿಗೆ ಮಾತ್ರ ಮೆಸೇಜ್ ಫಾರ್ವರ್ಡ್ ಮಾಡಲು ಅವಕಾಶ

Update: 2018-07-20 06:48 GMT

ಹೊಸದಿಲ್ಲಿ, ಜು.20: ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶಗಳನ್ನು ನಂಬಿ ಹಲವಾರು ಗುಂಪು ಥಳಿತ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ವಾಟ್ಸ್ಯಾಪ್ ತನ್ನ ಭಾರತೀಯ ಬಳಕೆದಾರರಿಗೆ ಒಮ್ಮೆಗೆ ಐದಕ್ಕಿಂತ ಹೆಚ್ಚು ಚಾಟ್ ಗಳಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅನುಮತಿ ನೀಡದೇ ಇರಲು ನಿರ್ಧರಿಸಿದೆ.  ಅಷ್ಟೇ ಅಲ್ಲದೆ ಮೀಡಿಯಾ ಮೆಸೇಜ್ ಪಕ್ಕದಲ್ಲಿರುವ ಕ್ವಿಕ್ ಫಾರ್ವರ್ಡ್  ಬಟನ್ ಅನ್ನೂ  ತೆಗೆದು ಹಾಕಿ ನಕಲಿ ಸುದ್ದಿಗಳು ಹರಡದಂತೆ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

ತನ್ನ ಬ್ಲಾಗ್ ಪೋಸ್ಟ್ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡ ವಾಟ್ಸ್ಯಾಪ್,  ವಿಶ್ವದ ಇತರ ಯಾವುದೇ ದೇಶಕ್ಕಿಂತ ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮೆಸೇಜುಗಳು, ಫೋಟೋಗಳು ಹಾಗೂ ವೀಡಿಯೊಗಳು ಫಾರ್ವರ್ಡ್ ಆಗುತ್ತಿವೆ. ವಿಶ್ವದಾದ್ಯಂತ ವಾಟ್ಸ್ಯಾಪ್ ಗೆ ಒಂದು ಬಿಲಿಯನ್ ಬಳಕೆದಾರರಿದ್ದರೆ ಭಾರತದಲ್ಲಿ ಈ ಸಂಖ್ಯೆ 200 ಮಿಲಿಯನ್ ಗೂ ಅಧಿಕ.

ನಕಲಿ ಸುದ್ದಿಗಳನ್ನು ನಂಬಿ ದೇಶದಲ್ಲಿ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಭಾರತ ಸರಕಾರ ಈಗಾಗಲೇ ವಾಟ್ಸ್ಯಾಪ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗೆ ಇನ್ನೊಂದು ನೋಟಿಸ್ ಜಾರಿಗೊಳಿಸಿರುವ ಕೇಂದ್ರ ಈ ಸಮಸ್ಯೆಗೆ ಯಾವ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿತ್ತು.

ಸರಕಾರದ ಎರಡನೇ ನೋಟಿಸಿಗೆ ಇನ್ನಷ್ಟೇ ಉತ್ತರಿಸಬೇಕಿರುವ ವಾಟ್ಸ್ಯಾಪ್ ಮೊದಲ ನೋಟಿಸಿಗೆ ಈ ಹಿಂದೆಯೇ ಸ್ಪಂದಿಸಿದ್ದು  ಸರಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಕಂಪೆನಿಗಳ ಸಹಕಾರದಿಂದ  ನಕಲಿ ಸುದ್ದಿಗಳನ್ನು ತಡೆಯಬಹುದು. ತನಗೆ ಸ್ಪ್ಯಾಮ್ ನಿಯಂತ್ರಿಸುವ ಸಾಮರ್ಥ್ಯವಿದೆಯಾದರೂ ಖಾಸಗಿ ಸಂದೇಶಗಳನ್ನು ತಿಳಿಯುವುದು ಅಸಾಧ್ಯ, ಬಳಕೆದಾರರ ವರದಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News