ಭಗತ್ ಸಿಂಗ್-ಸಾವರ್ಕರ್: ಒಂದು ಮುಖಾಮುಖಿ
ಭಾರತದ ಸದ್ಯದ ರಾಜಕೀಯ ಸಂದರ್ಭ ಹಲವು ವಿರೋಧಾಭಾಸಗಳ ನಡುವೆ ಸಿಕ್ಕಿ ಒದ್ದಾಡುತ್ತಿದೆ. ಇತಿಹಾಸದ ಸತ್ಯಗಳು ಪುರಾಣದ ಸಿಕ್ಕುಗಳ ಜೊತೆಗೆ ಸಿಲುಕಿಕೊಂಡು ನರಳುತ್ತಿದೆ. ಬಿಜೆಪಿಗೆ ಭಾರತದ ವಾಸ್ತವ ಇತಿಹಾಸ ಬೇಕಾಗಿಲ್ಲ. ಆದುದರಿಂದ ಅದು ಇತಿಹಾಸವನ್ನು ಪುರಾಣವಾಗಿಸಲು, ಭ್ರಾಮಕವಾಗಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಇತಿಹಾಸದ ಹತ್ತು ಹಲವು ನಾಯಕರ ಪಾತ್ರಗಳು ವಿರೂಪಗೊಳ್ಳುತ್ತಿವೆೆ. ಜೊತೆ ಜೊತೆಗೇ ಇತಿಹಾಸದ ವಿರೂಪ ಪಾತ್ರಗಳು ಹೊಸ ಬಣ್ಣಗಳನ್ನು ಬಳಿದುಕೊಂಡು ಪ್ರಸ್ತುತವಾಗಲು ಹವಣಿಸುತ್ತಿವೆ. ಸೂಕ್ಷ್ಮ ಒಳನೋಟಗಳನ್ನೆಲ್ಲ ಸಾಯಿಸಿ, ಆ ಜಾಗದಲ್ಲಿ ರೋಚಕತೆಯನ್ನು ತುಂಬಿ ಜನರನ್ನು ವಿಸ್ಮತಿಯಲ್ಲಿ ಕೆಡವಲು ಹೊರಟಿದೆ. ಇಂತಹ ಎರಡು ವಿರೋಧಾಭಾಸಗಳುಳ್ಳ ವ್ಯಕ್ತಿತ್ವವನ್ನು ಮುಖಾಮುಖಿ ಗೊಳಿಸುವ ಪ್ರಯತ್ನವನ್ನು ‘ಭಗತ್ ಸಿಂಗ್-ವೀರಸಾವರ್ಕರ್: ಕ್ರಾಂತಿಯ ಕಹಳೆಯೂ ಶರಣಾಗತಿಯ ಸ್ವರವೂ’ ಕೃತಿಯ ಮೂಲಕ ನಾ. ದಿವಾಕರ ಅವರು ಮಾಡಿದ್ದಾರೆ. ಇದು ಅನುವಾದಿತ ಲೇಖನಗಳ ಸಂಗ್ರಹ.
ಭಗತ್ ಸಿಂಗ್ ತನ್ನ ವಿಚಾರಗಳಿಗಾಗಿ ಪ್ರಾಣವನ್ನೇ ಕೊಟ್ಟ ತರುಣ. ವೀರ ಸಾವರ್ಕರ್ ‘ಕಾಲಾಪಾನಿ’ ಶಿಕ್ಷೆಗೆ ಹೆದರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರವನ್ನು ಎರಡೆರಡು ಬಾರಿ ಬರೆದುಕೊಟ್ಟ ನಾಯಕ. ಅಷ್ಟೇ ಅಲ್ಲ, ಸ್ವಾತಂತ್ರ ಹೋರಾಟದಿಂದ ಸಂಪೂರ್ಣ ಹಿಂದೆ ಸರಿದು, ಪರೋಕ್ಷವಾಗಿ ಬ್ರಿಟಿಷರಿಗೆ ನೆರವು ನೀಡಿದ ನಾಯಕ. ಹಿಂದುತ್ವದ ಸ್ಥಾಪನೆಯಲ್ಲಿಯೂ ಪ್ರಧಾನ ಪಾತ್ರವಹಿಸಿದಾತ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧೀಜಿಯ ಕೊಲೆಯ ಏಳನೇ ಆರೋಪಿ. ಆದರೆ ಇಂದಿನ ಹಿಂದುತ್ವ ನಾಯಕರು, ಭಗತ್ ಸಿಂಗ್ ಮತ್ತು ಸಾವರ್ಕರ್‌ರನ್ನು ಕಲಬೆರಕೆ ಮಾಡಲು ನೋಡುತ್ತಿದ್ದಾರೆ. ಸಾವರ್ಕರ್‌ರನ್ನು ದೇಶದ ಅಸ್ಮಿತೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ ಅಂತರಗಳೇನು ಎನ್ನುವುದನ್ನು ಸಾಕ್ಷಾಧಾರಗಳ ಸಹಿತ ಈ ಕೃತಿ ವಿವರಿಸುತ್ತದೆ. ಪಂಜಾಬ್ ಗವರ್ನರ್‌ಗೆ ಭಗತ್ ಸಿಂಗ್ ಬರೆದ ಕೊನೆಯ ಮನವಿ ಪತ್ರ, ವೀರಸಾವರ್ಕರ್ ಬ್ರಿಟಿಷ್ ಸರಕಾರಕ್ಕೆ ದಯಾಭಿಕ್ಷೆ ಬೇಡಿ ಬರೆದ ಅರ್ಜಿ, ಆತ್ಮಹತ್ಯೆಯ ಪ್ರಸ್ತಾವ ಮಾಡಿದ ಸುಖ್‌ದೇವ್‌ಗೆ ಭಗತ್‌ಸಿಂಗ್ ಬರೆದ ಪತ್ರ, ಯುವ ರಾಜಕೀಯ ಕಾರ್ಯಕರ್ತರಿಗೆ ಭಗತ್ ಸಿಂಗ್ ಬರೆದ ಪತ್ರ, ತಾನು ಏಕೆ ನಾಸ್ತಿಕ ಎನ್ನುವ ವಿವರಗಳುಳ್ಳ ಲೇಖನ, ಡ್ರೀಂ ಲ್ಯಾಂಡ್ ಕೃತಿಗೆ ಭಗತ್ ಸಿಂಗ್ ಮಾಡಿದ ಪ್ರಸ್ತಾವನೆ ಈ ಕೃತಿಯಲ್ಲಿ ಇವೆ. ಒಂದೆಡೆ ಭಗತ್ ಸಿಂಗ್ ಅವರ ಪತ್ರ, ಇನ್ನೊಂದೆಡೆ ಸಾವರ್ಕರ್ ವ್ಯಕ್ತಿತ್ವ ಎರಡನ್ನೂ ಇಲ್ಲಿ ಜೊತೆಗಿಟ್ಟು ನೋಡಲಾಗಿದೆ. ಒಬ್ಬ ತರುಣನ ಅಸಾಮಾನ್ಯ ಧೈರ್ಯ, ದೇಶಪ್ರೇಮ ಮತ್ತು ತ್ಯಾಗ ಒಂದೆಡೆಯಾದರೆ, ಇನ್ನೊಬ್ಬ ಹಿರಿಯರ ಹೇಡಿತನ, ನಾಚಿಕೆಗೇಡಿತನ ಮತ್ತು ರಾಷ್ಟ್ರದ್ರೋಹದ ಪರಮಾವಧಿ ಇನ್ನೊಂದೆಡೆ ಇದೆ. ಒಂದು ರೀತಿಯಲ್ಲಿ ಈ ಪುಟ್ಟ ಕೃತಿ, ಭಗತ್ ಸಿಂಗ್ ತನ್ನ ಪತ್ರಗಳು, ಸಂದೇಶಗಳ ಮೂಲಕ ತೆರೆದಿಟ್ಟ ಮನದಾಳವಾಗಿದೆ. ಒಬ್ಬ ದೇಶಪ್ರೇಮಿ ಹೇಗಿರುತ್ತಾನೆ, ಹೇಗಿರಬೇಕು ಎನ್ನುವುದಕ್ಕೆ ನಮಗೆ ಬಿಟ್ಟು ಹೋಗಿರುವ ಮಾದರಿಯೂ ಆಗಿದೆ. ಭಗತ್ ಸಿಂಗ್‌ನ ಉಜ್ವಲ ವ್ಯಕ್ತಿತ್ವದ ಮುಂದೆ ಸಾವರ್ಕರ್, ಧೂಮಕೇತುವಿನಂತೆ ಭಾಸವಾಗುತ್ತಾರೆ.
ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಪುಟಗಳು 80 ರೂಪಾಯಿ. ಮುಖಬೆಲೆ 60 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.