ಆತ್ಮವಿಶ್ವಾಸದ ಪ್ರತಿರೂಪ ಸಫ್ವಾನಳ ಸಾಧನೆ : ದೇಹ ಸೋಲಿಸಿದರೂ ಮನಸ್ಸು ಗೆಲ್ಲಿಸಿತು

Update: 2018-07-31 16:33 GMT

ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯ ಮುಂದೆ ಎಲ್ಲಾ ಕೊರತೆಗಳು ತೃಣ ಸಮಾನ ಎಂದು ಇಲ್ಲೋರ್ವಳು ವಿದ್ಯಾರ್ಥಿನಿ ನಿರೂಪಿಸಿದ್ದಾಳೆ. ತನ್ನ ಮನೋಧೈರ‍್ಯಕ್ಕೆ ತಕ್ಕ ಪ್ರತಿಫಲವನ್ನೂ ಪಡೆದಿದ್ದಾಳೆ. ಹುಟ್ಟು ಅಂಗವೈಕಲ್ಯವನ್ನು ಮೆಟ್ಟಿನಿಂತ ಈಕೆ ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿ ಭರವಸೆಯ ಬದುಕಿಗೆ ಸಾಕ್ಷಿ ಯಾಗಿದ್ದಾಳೆ.

ಈಕೆ ಸಫ್ವಾನ. ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಅಂಬಟೆಡ್ಕ ನಿವಾಸಿ ಬಿ. ಸುಲೈಮಾನ್ - ಬಿ. ಫಾತಿಮಾ ದಂಪತಿಯ ಪುತ್ರಿ. 6 ತಿಂಗಳಲ್ಲೇ ಈಕೆಯ ಜನನವಾಗಿತ್ತು. ಪರಿಣಾಮ ಹುಟ್ಟು ಅಂಗವೈಕಲ್ಯ ಎದುರಾಯಿತು. ಸೊಂಟದಿಂದ ಕೆಳಗೆ ಅಷ್ಟು ಬಲವಿಲ್ಲದಂತಾಗಿ ನಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ತಂದೆ ತಾಯಿ ಕಷ್ಟದಿಂದಲೇ ಸಫ್ವಾನಳನ್ನು ಬೆಳೆಸಿದರು. 

7ನೇ ತರಗತಿಯವರೆಗೆ ಈಕೆಗೆ ದೊರೆತದ್ದು ಮನೆ ಪಾಠ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೃಹಾಧಾರಿತ ಶಿಕ್ಷಣ ಯೋಜನೆಯಲ್ಲಿ ಶಿಕ್ಷಕಿಯರು ಮನೆಗೆ ಬಂದು ಪಾಠ ಹೇಳಿ ಕೊಟ್ಟರು. ಶಿಕ್ಷಣ ನಿಲ್ಲಿಸಲು ಈಕೆಗೆ ಮನಸ್ಸಿರಲಿಲ್ಲ. ಪೋಷಕರಿಗೂ ಇರಲಿಲ್ಲ. ಹೀಗಾಗಿ ಅಂಗವೈಕಲ್ಯವಿದ್ದರೂ ಶಿಕ್ಷಣ ಮುಂದುವರಿಯಿತು.

ಪ್ರೌಢ ಶಿಕ್ಷಣಕ್ಕಾಗಿ ಸುಳ್ಯದ ಜೂನಿಯರ್ ಕಾಲೇಜಿಗೆ ದಾಖಲಾದಳು. ಶೇ. 55 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪಾಸಾದ ಸಫ್ವಾನ ಅಲ್ಲಿಯೇ ಪಿಯುಸಿ ಶಿಕ್ಷಣವನ್ನು ಮುಂದುವರಿಸಿದಳು. ವಾಣಿಜ್ಯ ವಿಭಾಗ ಆರಿಸಿಕೊಂಡ ಆಕೆ ಶೇ.68 ಅಂಕಗಳೊಂದಿಗೆ ಉತ್ತೀರ್ಣಳಾದಳು. ಪದವಿ ಶಿಕ್ಷಣಕ್ಕಾಗಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದಳು. ಇದೀಗ ಶೇ. 70 ಅಂಕಗಳೊಂದಿಗೆ ಈಕೆ ಬಿ.ಕಾಂ. ಮುಗಿಸಿ ಖುಷಿಯಲ್ಲಿದ್ದಾಳೆ.

ಇಷ್ಟು ಅಂಗವೈಕಲ್ಯವಿದ್ದರೂ, ನಡೆದಾಡಲು ಸಾಧ್ಯವಾಗದಿದ್ದರೂ ತರಗತಿಗಳಿಗೆ ಹೇಗೆ ಹೋಗುತ್ತಾಳೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಜೂನಿಯರ್ ಕಾಲೇಜಿಗೆ ಹೋಗುತ್ತಿರುವ ಸಂದರ್ಭ ಮನೆಯಿಂದ ರಿಕ್ಷಾದಲ್ಲಿ ಕಾಲೇಜಿನವರೆಗೆ ಹೋಗುವ ಈಕೆಯನ್ನು ಸಹಪಾಠಿಗಳು ರಿಕ್ಷಾದಿಂದ ಇಳಿಸುತ್ತಿದ್ದಳು. ಬಳಿಕ ವಾಕರ್ ಸಹಾಯದೊಂದಿಗೆ ತರಗತಿಗೆ ಹೋಗುತ್ತಿದ್ದಳು. ಪದವಿ ಸೇರಿದ ಬಳಿಕ ರಿಕ್ಷಾದಲ್ಲಿ ಕಾಲೇಜಿನವರೆಗೆ ಹೋಗಿ ಸಹಪಾಠಿಗಳ ಸಹಾಯದೊಂದಿಗೆ ವ್ಹೀಲ್ ಚೇರ್ ಮೂಲಕ ತರಗತಿಗೆ ಹೋಗಿ ಎಲ್ಲರಂತೆ ಬೆಂಚಿನಲ್ಲಿ ಕೂರುತ್ತಿದ್ದಳು. ಈಕೆಯ ಓಡಾಟಕ್ಕೆಂದೇ ರಿಕ್ಷಾವೊಂದನ್ನು ಗೊತ್ತು ಮಾಡಲಾಗಿತ್ತು.

ದೇಹಕ್ಕೆ ಅಂಗವೈಕಲ್ಯವಿದ್ದರೂ ಸಫ್ವಾನಳ ಮನಸ್ಸು ಮತ್ತು ಬುದ್ಧಿ ಶಕ್ತಿಗೆ ಶಹಬ್ಬಾಸ್ ಹೇಳಲೇಬೇಕು. ಕಲಿಕೆಗೆ ಈಕೆಗೆ ವಿಪರೀತ ಆಸಕ್ತಿ. ತರಗತಿಯಲ್ಲಿ ಉಪನ್ಯಾಸಕರು ಹೇಳಿದ ವಿಷಯ ಅರ್ಥವಾಗದಿದ್ದರೆ ಇತರ ಸಮಯದಲ್ಲಿ ಉಪನ್ಯಾಸಕರೊಂದಿಗೆ ಕೇಳಿ ತಿಳಿದುಕೊಳ್ಳುತ್ತಿದ್ದಳು. ಸಹಪಾಠಿಗಳೊಂದಿಗೆ ಚರ್ಚಿಸುತ್ತಿದ್ದಳು. ಪರೀಕ್ಷಾ ಸಂದರ್ಭದಲ್ಲಿ ಈಕೆಗೆ ವಿಶೇಷವಾಗಿ ಅರ್ಧತಾಸು ಹೆಚ್ಚಿನ ಅವಧಿ ನೀಡಲಾಗುತ್ತಿತ್ತು.

ಶಿಕ್ಷಣದ ಜೊತೆಗೆ ಪುಸ್ತಕ ಓದುವ, ಚಿತ್ರ ಬಿಡಿಸುವ, ಕವನ ಬರೆಯುವ ಹವ್ಯಾಸವೂ ಸಫ್ವಾನಳಿಗಿದೆ. ಆಟೋಟದಲ್ಲೂ ಆಸಕ್ತಿ ಇದೆ. ಆದರೆ ಮನಸ್ಸಿನ ಆಸಕ್ತಿಗೆ ದೇಹ ಸ್ಪಂದಿಸುವುದಿಲ್ಲ. ಕಾಲೇಜಿನಲ್ಲಿ ನಡೆಯುವ ಆಟೋಟಗಳ ಸಂದರ್ಭ ದೈಹಿಕ ಶಿಕ್ಷಕರು, ಸಹಪಾಠಿಗಳು ಆಕೆ ಅಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಪರೀಕ್ಷೆ ಪಾಸಾದ ಖುಷಿಯಲ್ಲಿ ಸಫ್ವಾನ ಉಪನ್ಯಾಸಕರಿಗೆ, ಆತ್ಮೀಯ ಗೆಳತಿಯರಿಗೆ ಮನೆಯಲ್ಲಿ ಔತಣ ಕೂಟವನ್ನೂ ಏರ್ಪಡಿಸಿದ್ದಳು.

ಸಫ್ವಾನಳಿಗೆ ತಿಂಗಳಿಗೆ 3000 ರೂಪಾಯಿ ಅಂಗವಿಕಲ ವೇತನ ಬರುತ್ತಿದ್ದು, ಈ ಹಣ ರಿಕ್ಷಾ ಬಾಡಿಗೆಗೇ ಖರ್ಚಾಗುತ್ತಿತ್ತು. ಮುಂದೆ ಸುಳ್ಯದಲ್ಲೇ ಎಂ.ಬಿ.ಎ. ಮಾಡಬೇಕೆಂಬ ಹಂಬಲವಿತ್ತು. ಆದರೆ ಪರಿಸ್ಥಿತಿಯ ಬೆಂಬಲವಿಲ್ಲ ! ಕೆ.ವಿ.ಜಿ. ವಿದ್ಯಾಸಂಸ್ಥೆಯಲ್ಲಿ ಎಂ.ಬಿ.ಎ.ಇರುವುದು ಮೂರನೇ ಮಹಡಿಯ ಮೇಲೆ. ಹೀಗಾಗಿ ಕರೆಸ್ಪಾಂಡೆಂಟ್ ಎಂ.ಎ. ಮಾಡಲು ನಿರ್ಧರಿಸಿದ್ದು, ಈ ಮಧ್ಯೆ ಉದ್ಯೋಗ ದೊರೆತರೆ ಹೋಗುವ ಆಸಕ್ತಿ ಇದೆ.

ಸಫ್ವಾನಳಿಗಾಗಿ ಮನೆಯವರು ಕಂಪ್ಯೂಟರ್ ಖರೀದಿಸಿದ್ದಾರೆ. ಹೋಗಿ ಕಲಿಯುವ ಕಷ್ಟವಾದ ಕಾರಣ ಶಿಕ್ಷಕಿ ಸಂಜೆ ಮನೆಗೇ ಬಂದು ಪಾಠ ಹೇಳಿಕೊಡುತ್ತಿದ್ದಾರೆ.
ಸಫ್ವಾನಳ ಅಕ್ಕನಿಗೆ ಮದುವೆಯಾಗಿ ಕಾಸರಗೋಡಿನಲ್ಲಿ ನೆಲೆಸಿದ್ದಾರೆ. ತಮ್ಮ ಸುಳ್ಯದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. 

ಅವಕಾಶಗಳು ಬಂದಾಗ ಕಷ್ಟವನ್ನು ಹುಡುಕುವ ಜನರ ಮಧ್ಯೆ ಕಷ್ಟದ ಮಧ್ಯೆಯೇ ಅವಕಾಶ ಹುಡುಕಿ ತನ್ನ ಮನೋಧೈರ್ಯದಿಂದ ಶಿಕ್ಷಣ ಪಡೆದಿರುವ ಸಫ್ವಾನಾಳ ಸಾಧನೆ ಇತರರಿಗೆ ಮಾದರಿಯೇ ಸರಿ. ಕಂಗ್ರಾಟ್ಸ್ ಸಫ್ವಾನ, ಗುಡ್‌ಲಕ್!

Full View

Writer - ದುರ್ಗಾಕುಮಾರ್ ನಾಯರ್ಕೆರೆ

contributor

Editor - ದುರ್ಗಾಕುಮಾರ್ ನಾಯರ್ಕೆರೆ

contributor

Similar News