ಅಂದಿನ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹಾಗೂ ಇಂದಿನ ದ್ವೇಷ ರಾಜಕಾರಣದ ಕಾರ್ಮೋಡಗಳು

Update: 2018-08-01 18:30 GMT

ಭಾಗ-1

1977ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನ ತುರ್ತುಪರಿಸ್ಥಿತಿ ಹೇರಿದ್ದನ್ನು ತಿರಸ್ಕರಿಸಿದ್ದು ಮಾತ್ರವಲ್ಲ, ತುರ್ತುಪರಿಸ್ಥಿತಿ ಹೇರಿದವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರಿಗೆ ಶಿಕ್ಷೆಯನ್ನು ವಿಧಿಸಿದರು. ಅಂದರೆ ಮೂಲಭೂತ ಹಕ್ಕುಗಳ ಆದಿಯಾಗಿ ಎಲ್ಲ ಮಾನವೀಯ ಹಕ್ಕುಗಳನ್ನು ಕಳೆದುಕೊಂಡಿದ್ದ ಜನಕ್ಕೆ ತುರ್ತುಪರಿಸ್ಥಿತಿಯನ್ನು ತಿರಸ್ಕರಿಸಿ, ತುರ್ತು ಪರಿಸ್ಥಿತಿ ಹೇರಿದವರಿಗೆ ಶಿಕ್ಷೆ ವಿಧಿಸುವ ಅವಕಾಶವೂ ದೊರೆಯಿತೆಂಬುದು ಇಲ್ಲಿ ನಾವು ಗಂಭೀರವಾಗಿ ಗಮನಿಸಬೇಕಾದ ಅಂಶ.

  1975ನೇ ಇಸವಿ ಜೂನ್ 25ರ ಮಧ್ಯರಾತ್ರಿ ಸಿಡಿಲೆರಗಿದಂತೆ ಎರಗಿ ಬಂತು ದೇಶದ ಮೇಲೆ ತುರ್ತುಪರಿಸ್ಥಿತಿ. ಅದರೊಡನೆ ದೇಶದ ನಾಗರಿಕ ಮೂಲಭೂತ ಹಕ್ಕುಗಳು ಅಸ್ತಿತ್ವವನ್ನು ಕಳೆದುಕೊಂಡವು. ವಾಕ್ ಸ್ವಾತಂತ್ರ ಮಾತ್ರವಲ್ಲ, ಬದುಕುವ ಹಕ್ಕು ಕೂಡ ಭಾರತದ ನಾಗರಿಕರು ಕಳೆದುಕೊಂಡರು. ಇಂತಹ ತುರ್ತುಪರಿಸ್ಥಿತಿಯ ವಿರುದ್ಧ ಯಾರೂ ಸೊಲ್ಲೆತ್ತುವಂತಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಾರೆಂಬ ಅನುಮಾನ ಬಂದರೆ ಸಾಕು ದಸ್ತಗಿರಿಯಾಗುತ್ತಿತ್ತು. ಇಂದಿರಾಗಾಂಧಿ ಆಡಳಿತದ ವಿರುದ್ಧ ಧ್ವನಿ ಎತ್ತುತ್ತಾ ಬಂದ ಎಲ್ಲಾ ರಾಷ್ಟ್ರೀಯ ನಾಯಕರು, ಒಬ್ಬರ ನಂತರ ಒಬ್ಬರಂತೆ ಬಂದಿಖಾನೆ ಸೇರುವಂತಾಯಿತು. ಭಯಾನಕ ವಾತಾವರಣ. ದೇಶದಲ್ಲಿ ಎಲ್ಲವೂ ನಿಶ್ಯಬ್ದ. ಸುದ್ದಿಗಳು ಹರಡತೊಡಗಿದವು. ಇದೊಂದು ಸುದ್ದಿಯ ತುಣುಕು. ‘‘ಕೋತಿಯಾಡಿಸುವವನೊಬ್ಬ ರಸ್ತೆಯೊಂದರಲ್ಲಿ ಕೋತಿಯಾಡಿಸುತ್ತಾ, ಕೋತಿಯನ್ನು ಕುರಿತು ಇಂದಿರಾಗಾಂಧಿ ತರಹದ್ದು ಮೀರುತ್ತಿದ್ದೀಯ’’ ಎಂದನಂತೆ. ತಕ್ಷಣವೇ ಆತನನ್ನು ಹಿಡಿದು ಜೈಲಿಗೆ ತಳ್ಳಲಾಯಿತು. ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ, ಇಂತಹ ಸುದ್ದಿಗಳು ತುರ್ತುಪರಿಸ್ಥಿತಿಯ ಕರಾಳತೆಗೆ, ನ್ನಡಿ ಹಿಡಿಯುತ್ತಿದ್ದದ್ದಂತೂ ಸತ್ಯ.

ಆರೆಸ್ಸೆಸ್ ಆದಿಯಾಗಿ ಅನೇಕ ಸಂಘ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಾಯಿತು. ನಿರ್ಬಂಧಕ್ಕೊಳಗಾದ ಸಂಘ ಸಂಸ್ಥೆಗಳ ಮುಖಂಡರು, ಕಾಯಕರ್ತರು ಎಲ್ಲರೂ, ಒಬ್ಬರ ನಂತರ ಒಬ್ಬರಂತೆ ಜೈಲಿಗೆ ತಳ್ಳಲ್ಪಟ್ಟರು. ನಂತರ ಎದುರಾಳಿ ರಾಜಕೀಯ ಪಕ್ಷಗಳ ಸರದಿ, ಕರ್ನಾಟಕದಲ್ಲಿ ದಸ್ತಗಿರಿ ಮಾಡಲ್ಪಟ್ಟ ರಾಜಕಾರಿಣಿಗಳಲ್ಲಿ ನಾನೇ ಮೊದಲಿಗ. ಬಿಡುಗಡೆಯಾದಾಗ ನಾನೇ ಕಡೆಯವ.
 ಹತ್ತೊಂಬತ್ತು ತಿಂಗಳ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಹದಿನೆಂಟು ತಿಂಗಳಿಗಿಂತಲೂ ಹೆಚ್ಚು ಕಾಲ ನಾನು ಜೈಲಿನಲ್ಲಿ ಕಂಬಿ ಎಣಿಸುತ್ತಾ ಕಾಲ ಕಳೆಯಬೇಕಾಯಿತು. ಅಂದು ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದೆ. ಕಾಂಗ್ರೆಸ್ ಸರಕಾರವಿತ್ತು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿ ರಾಮಕೃಷ್ಣ ಹೆಗಡೆಯವರಿದ್ದರು. ಆಗವರು, ಕಾಂಗ್ರೆಸ್ ಓ ಪಕ್ಷದಲ್ಲಿದ್ದರು. ತುರ್ತುಪರಿಸ್ಥಿತಿ ಹೇರಲ್ಪಟ್ಟ ನಂತರ ಜುಲೈ ತಿಂಗಳಿರಬೇಕು, ಕರ್ನಾಟಕದ ವಿಧಾನ ಮಂಡಲದ ಅಧಿವೇಶನ ಕರೆಯಲಾಯಿತು. ವಿಧಾನಪರಿಷತ್ತಿನ ವಿರೋಧ ಪಕ್ಷಗಳ ಸದಸ್ಯರೆಲ್ಲರೂ, ರಾಮಕೃಷ್ಣ ಹೆಗೆಡೆಯವರ ನೇತೃತ್ವದಲ್ಲಿ ಸಭೆ ಸೇರಿದೆವು. ಅಧಿವೇಶನದಲ್ಲಿ ನಾವೇನು ನಿಲುವು ತಳೆಯಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು. ಚರ್ಚೆಯ ನಂತರ, ತುರ್ತುಪರಿಸ್ಥಿತಿಯನ್ನು ಉಗ್ರವಾಗಿ ಖಂಡಿಸಿ ಹೇಳಿಕೆ ನೀಡಿ, ಸಭಾತ್ಯಾಗ ಮಾಡಿ ಮುಂದಿನ ಕಲಾಪಗಳನ್ನು ಬಹಿಷ್ಕರಿಸಬೇಕೆಂದು ನಿರ್ಣಯಿಸಲಾಯಿತು.
 ಆಗ ರಾಮಕೃಷ್ಣ ಹೆಗಡೆ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ನಾನು, ಅಂದಿನ ನನ್ನ ಪಕ್ಷವಾಗಿದ್ದ ಭಾರತೀಯ ಜನಸಂಘದ ನಾಯಕನಾಗಿದ್ದೆ. ಹೀಗಿದ್ದರೂ, ಖಂಡನಾ ನಿರ್ಣಯವನ್ನು ನಾನೇ ಓದಬೇಕೆಂದು ರಾಮಕೃಷ್ಣ ಹೆಗಡೆಯವರು ಸಲಹೆ ಮಾಡಲಾಗಿ ಹಾಗೆಯೇ ನಿರ್ಣಯಿಸಲಾಯಿತು. ನಿರ್ಣಯದ ಕರಡು ಸಹ ತಯಾರಿಸಿ ನನಗೆ ಕೊಡಲಾಯಿತು.
ಮಾರನೇ ದಿವಸ, ವಿಧಾನ ಪರಿಷತ್ತಿನಲ್ಲಿ ಭಾಗವಹಿಸಿ ತುರ್ತುಪರಿಸ್ಥಿತಿಯನ್ನು ಖಂಡಿಸಿ ಹೇಳಿಕೆ ನೀಡಲು ತಯಾರಾಗಿ ಹೋದಾಗ, ವಿಧಾನಸೌಧದ ಪಶ್ಚಿಮದ್ವಾರದ ಬಳಿ ಪೊಲಿಸ್ ಅಧಿಕಾರಿ ನನ್ನನ್ನು ತಡೆದು, ‘‘ನೀವು ದಸ್ತಗಿರಿಗೆ ಒಳಪಟ್ಟಿದ್ದೀರಿ’’ ಎಂದು ತಿಳಿಸಿ ಪಕ್ಕದಲ್ಲಿದ್ದ ಪೊಲೀಸ್ ಜೀಪಿಗೆ ಒಯ್ದು ನಗರದ ಯಾವುದೋ ಪೊಲೀಸ್ ಠಾಣೆಗೆ ಕೊಂಡೊಯ್ದರು. ನನ್ನ ಕೊಠಡಿಯಿಂದ ಉಡುಪು ವಗೈರೆಗಳನ್ನು ತೆಗೆದುಕೊಳ್ಳಬೇಕೆಂದು ನಾನು ಕೇಳಿಕೊಂಡರೂ, ಪೊಲೀಸ್ ಅಧಿಕಾರಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ನನ್ನನ್ನು ಮಧ್ಯರಾತ್ರಿಯಲ್ಲಿ ನ್ಯಾಯಾಧೀಶರೊಬ್ಬರ ಮನೆಗೆ ಕೊಂಡೊಯ್ದು ಹಾಜರುಪಡಿಸಿ, ಆಜ್ಞೆ ತೆಗೆದುಕೊಂಡು ರಾತ್ರೊೀರಾತ್ರಿ ಮಡಿಕೇರಿಗೆ ಕೊಂಡೊಯ್ದರು.
ರಾತ್ರಿಯಲ್ಲಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿಯೇ ಕೂರಿಸಿ, ಮಾರನೇ ದಿವಸ ವೀರಾಜಪೇಟೆ ಪ್ರಥಮ ದರ್ಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ನಾನು ಸ್ವತಃ ಜಾಮೀನು ಕೋರಿ ಅರ್ಜಿ ಸಲ್ಲಿಸಿದೆ. ನಾನು, ನನ್ನ ಊರಾದ ಹುದಿಕೇರಿಯಲ್ಲಿ, ಒಂದು ವಾರದ ಹಿಂದೆ ರಾತ್ರಿ ಹೊತ್ತು ತುರ್ತುಪರಿಸ್ಥಿತಿಯನ್ನು ಖಂಡಿಸಿ ಪಂಜಿನ ಮೆರವಣಿಗೆ ಮಾಡಿದ್ದೆ ಎಂಬ ಆರೋಪದ ಮೇಲೆ, ಡಿಫೆನ್ಸ್ ಆಫ್ ಇಂಡಿಯಾ ರೂಲ್ ಅಡಿಯಲ್ಲಿ ಬಂಧಿಸಲಾಗಿತ್ತು.
ನಿಜ ಹೇಳಬೇಕೆಂದರೆ, ನಾನು ಅಂತಹ ಪಂಜಿನ ಮೆರವಣಿಗೆ ಮಾಡುವುದಿರಲಿ, ಹಿಂದಿನ ಎರಡು ತಿಂಗಳಿನಲ್ಲಿ ನನ್ನ ಊರಾದ ಹುದಿಕೇರಿಗೆ ಹೋಗಿಯೇ ಇರಲಿಲ್ಲ. ಆಗ ನಾನು ವಿೀರಾಜಪೇಟೆಯಲ್ಲಿಯೇ ಖಾಯಂ ವಾಸವಿದ್ದೆ.
ನನ್ನನ್ನು ವೀರಾಜಪೇಟೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ದಿವಸವೇ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಬೇಕೆಂದು, ವಾದಿಸಿಯೂ ಇದ್ದೆ. ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡಲು ಮೊಕದ್ದಮೆಯನ್ನು ಮಾರನೇ ದಿವಸಕ್ಕೆ ಮುಂದೂಡಲಾಯಿತು. ನನ್ನನ್ನು ಕರೆದುಕೊಂಡು ಹೋಗಿ ಮಡಿಕೇರಿ ಜೈಲಿನಲ್ಲಿ ಹಾಕಿದರು. ಮಾರನೇ ದಿವಸ ನನಗೆ ವೀರಾಜಪೇಟೆ ನ್ಯಾಯಾಲಯದಲ್ಲಿ ಜಾಮೀನು ದೊರೆಯುವ ಸುಳಿವು ಪಡೆದ ಪೊಲಿಸರು, ಅದೇ ರಾತ್ರಿ ನನ್ನ ಬಂಧನವನ್ನು ‘ಡಿ.ಐ.ಆರ್.’ನಿಂದ ‘ಮೀಸಾ’ಕ್ಕೆ ಪರಿವರ್ತಿಸಿ ಜಿಲ್ಲಾಧಿಕಾರಿಯವರಿಂದ ಆಜ್ಞೆ ಪಡೆದು ಬಳ್ಳಾರಿ ಜೈಲಿಗೆ ರವಾನಿಸಿದರು.
ಮಾರನೇ ದಿವಸ ಮುಂಜಾನೆ ನಾನು ಬಳ್ಳಾರಿ ಜೈಲಿನಲ್ಲಿದ್ದೆ. ಬಳ್ಳಾರಿ ಜೈಲು ಪ್ರವೇಶಿಸುವ ದಿನ ನನ್ನ ತೂಕ ನೋಡಲಾಗಿದ್ದು, ಅದು 64 ಕೆ.ಜಿ. ಆಗಿತ್ತು. ಬಳ್ಳಾರಿ ಜೆೃಲಿನಲ್ಲಿ ತುರ್ತುಪರಿಸ್ಥಿತಿಯ ಕೈದಿಯಾಗಿ ಅಂದರೆ ಮೀಸಾ ಕೈದಿಯಾಗಿ ಆನಂದ ಮಾರ್ಗಿಯೊಬ್ಬನನ್ನು ಬಿಟ್ಟರೆ ನಾನೊಬ್ಬನೇ ಇದ್ದೆ. ಸ್ವಲ್ಪದಿವಸ ಕಳೆದ ಮೇಲೆ ಡಾ. ನಾಗಪ್ಪಆಳ್ವರನ್ನು ತಂದು ನನ್ನ ಪಕ್ಕದ ಕೋಣೆಯಲ್ಲಿ ಕೂಡಿ ಹಾಕಲಾಯಿತು. ಮುಂದಿನ ದಿನಗಳಲ್ಲಿ ತಂಡ ತಂಡವಾಗಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸತ್ಯಾಗ್ರಹ ಮಾಡುತ್ತಿದ್ದವರನ್ನೆಲ್ಲಾ ದಸ್ತಗಿರಿ ಮಾಡಿ ಜೈಲಿಗೆ ತರಲಾಯಿತು. ಅವರಲ್ಲಿ ಬಹಳಷ್ಟು ಮಂದಿ ಆರೆಸ್ಸೆಸ್ ಮತ್ತು ಜನಸಂಘಕ್ಕೆ ಸೇರಿದವರೇ ಆಗಿದ್ದರು. ನಾನು ಅವರಿಂದಲೇ ಹೊರಗಡೆ ನಡೆಯುತ್ತಿದ್ದ ಸತ್ಯಾಗ್ರಹಕ್ಕೆ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದುದನ್ನು ತಿಳಿದು, ನನ್ನನ್ನು ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ, ಗುಲ್ಬರ್ಗಾ ಜೆೃಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ನಾನೇ ಮೊದಲನೇ ಮೀಸಾ ಕೈದಿಯಾಗಿದ್ದೆ.
ಕೆಲವು ದಿವಸಗಳ ನಂತರ, ಜೆ. ಎಚ್. ಪಟೇಲರನ್ನೂ ತಂದು ಗುಲ್ಬರ್ಗಾ ಜೆೃಲಿಗೆ ತಳ್ಳಲಾಗಿ, ನನಗೊಬ್ಬ ಜೊತೆಗಾರ ದೊರೆತಂತಾಗಿತ್ತು. ಜೆ. ಎಚ್. ಪಟೇಲರು ಜೈಲಿಗೆ ಬಂದಾಗ ತೀವ್ರತರವಾದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಜೈಲಿನಲ್ಲಿ ಯಾವುದೇ ಔಷಧೋಪಚಾರಳು ಲಭ್ಯವಿರಲಿಲ್ಲ. ಜೈಲು ವೆೃದ್ಯರು ಬಂದು, ಸತ್ಯ ಸಾಯಿಬಾಬಾರ ಭಾವಚಿತ್ರ ಮತ್ತು ಭಸ್ಮ ನೀಡಿ ಇದೇ ಜೈಲಿನಲ್ಲಿ ಲಭ್ಯವಿರುವ ಔಧವಾಗಿದೆಯೆಂದು ಕೈ ಎತ್ತಿ ಬಿಟ್ಟರು.


ಈ ಪರಿಸ್ಥಿತಿಯಲ್ಲಿ ನಾನು ಜೆ. ಎಚ್. ಪಟೇಲರ ಪರವಾಗಿ, ಅವರ ಆರೋಗ್ಯ ಹದಗೆಟ್ಟಿದೆಯೆಂದೂ, ಗುಲ್ಬರ್ಗಾ ಜೈಲಿನಲ್ಲಿ ಚಿಕಿತ್ಸಾ ವ್ಯವಸ್ಥೆ ಇಲ್ಲದೆ ಇರುವುದರಿಂದ ತಕ್ಷಣವೇ ಅವರನ್ನು ಬೆಂಗಳೂರು ಜೈಲಿಗೆ ವರ್ಗಾಯಿಸಿ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಬೇಕೆಂದು ಕೋರಿ ಒಂದು ರಿಟ್ ಅರ್ಜಿ ತಯಾರಿಸಿ ಬೆಂಗಳೂರು ಹೆೃಕೋರ್ಟ್‌ಗೆ ಜೈಲು ಅಧಿಕಾರಿಗಳ ಮೂಲಕ ಕಳುಹಿಸಿಕೊಟ್ಟಿದ್ದೆ. ನಂತರ ಅವರ್ನು ಬೆಂಗಳೂರಿಗೆ ರವಾನಿಸಲಾಯಿತು.
 ಗುಲ್ಬರ್ಗಾ ಜೈಲಿನಲ್ಲಿ ಪುನಃ ನಾನು ಏಕಾಂಗಿಯಾದೆ. ಆಗ ಬೆಂಗಳೂರು ಕೇಂದ್ರ ಬಂದಿಖಾನೆಯಲ್ಲಿದ್ದ ಅಂದಿನ ರಾಷ್ಟ್ರ ನಾಯಕರ ಪರವಾಗಿ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅವರ ಬಿಡುಗಡೆ ಕೋರಿ ರಿಟ್ ಅರ್ಜಿ ದಾಖಲಿಸಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಮಧು ದಂಡವತೆ, ಎಲ್. ಎನ್. ಮಿಶ್ರಾ ಮುಂತಾದ ಅಂದಿನ ಸಂಸದ ಸದಸ್ಯರೇ ಅರ್ಜಿದಾರರು. ನಾನು ಕೂಡ ನನ್ನ ಬಂಧನ ಕಾನೂನುಬಾಹಿರವೆಂದೂ, ನನ್ನನ್ನು ಬೇಷರತ್ತಾಗಿ ಬಿಡುಗಡೆ ಗೊಳಿಸಬೇಕೆಂದೂ ಕೋರಿ ಒಂದು ರಿಟ್ ಅರ್ಜಿ ತಯಾರಿಸಿ, ಬಂದಿಖಾನೆಯ ಅಧಿಕಾರಿಗಳ ಮೂಲಕ ಹೈಕೋರ್ಟ್‌ಗೆ ರವಾನಿಸಿದೆ.
  
ಆಗ ನನ್ನನ್ನು ಬೆಂಗಳೂರು ಜೈಲಿಗೆ ವರ್ಗಾಯಿಸಿದರು. ನಾನು ಬೆಂಗಳೂರು ಜೈಲಿಗೆ ಬಂದಾಗ ಎಲ್. ಕೆ. ಅಡ್ವಾಣಿ, ಮಧುದಂಡವತೆ, ಎಲ್.ಎನ್. ಮಿಶ್ರಾ (ಎಲ್ಲರೂ ಪಾರ್ಲಿಮೆಂಟ್ ಸದಸ್ಯರು) ಅಲ್ಲಿದ್ದರು. ಅವರ ಜೊತೆಗೆ ಜೆ. ಎಚ್. ಪಟೇಲ್ ಸಹ ಅಲ್ಲಿ ಇದ್ದರು. ಆನಂತರ ಇನ್ನೂ ಹಲವಾರು ಜನ ರಾಮಕೃಷ್ಣ ಹೆಗೆಡೆಯವರಾದಿಯಾಗಿ ಕೈದಿಗಳಾಗಿ ಅಲ್ಲಿಗೆ ಬಂದು ಸೇರ್ಪಡೆಯಾದರು. ನಾವೆಲ್ಲರೂ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಬೆಂಗಳೂರು ಕೇಂದ್ರ ಬಂದಿಖಾನೆಯಲ್ಲಿ ಕಳೆಯುತ್ತಿದ್ದೆವು. ಜೈಲಿನೊಳಗೆ ನಮ್ಮೆಲ್ಲರನ್ನು ಗೌರವದಿಂದಲೇ ನಡೆಸಿಕೊಳ್ಳಲಾಗುತ್ತಿತ್ತು. ಯಾವುದೇ ರೀತಿಯ ಕಿರುಕುಳ ಕೊಡಲಾಗುತ್ತಿರಲಿಲ್ಲ. ಎಲ್ಲಾ ರೀತಿಯ ಸೌಲಭ್ಯಗಳು ಜೈಲಿನೊಳಗೆ ನಮಗೆ ಲಭ್ಯವಿದ್ದವು. ತುರ್ತುಪರಿಸ್ಥಿತಿಯ ಅವಧಿಯಲ್ಲಿ ನಾಗರಿಕರ ಎಲ್ಲಾ ಮೂಲಭೂತ ಹಕ್ಕುಗಳು ಸ್ಥಗಿತಗೊಂಡಿದ್ದವು.
ಬದುಕುವ ಹಕ್ಕು ಕೂಡ ದೇಶದ ನಾಗರಿಕರಿಗೆ ಇಲ್ಲವೆಂದು ಅಂದಿನ ಅಟಾರ್ನಿ ಜನರಲ್ ನಿರೆನ್-ಡೇಯವರು ಶ್ರೇಷ್ಠ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು. ಜಸ್ಟೀಸ್ ಖನ್ನಾ ಒಬ್ಬರು ಮಾತ್ರ ಈ ವಾದವನ್ನು ತಳ್ಳಿ ಹಾಕಿದ್ದರು. ಇಡೀ ದೇಶದಲ್ಲಿ ಯಾರೊಬ್ಬರು ಕೂಡ ತುರ್ತುಪರಿಸ್ಥಿತಿಯನ್ನು ವಿರೋಧಿಸುವಂತಿರಲಿಲ್ಲ. ಚಕಾರವೆತ್ತಿದರೆ ಉಳಿಗಾಲವಿರಲಿಲ್ಲ. ಎಲ್ಲೆಡೆ ಭಯಾನಕವಾದ ವಾತಾವರಣ, ಕರಾಳ ಛಾಯೆ, ನಿಶ್ಯಬ್ದ.
ಆಗ ಸರಕಾರಿ ಸಾಧು ಎಂದೇ ಖ್ಯಾತರಾಗಿದ್ದ ಆಚಾರ್ಯ ವಿನೋಬಾಭಾವೆಯವರು ಅನುಶಾಸನ ಪರ್ವವೆಂದಿದ್ದರು. ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರೆಂದರೆ, ಲೋಕನಾಯಕ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ನಡೆದ ಸಮಗ್ರ ಕ್ರಾಂತಿಯಲ್ಲಿ ಸಕ್ರಿಯರಾಗಿದ್ದವರು ಮಾತ್ರವಾಗಿದ್ದರು. ಉಳಿದ ಇಡೀ ಭಾರತೀಯ ಸಮಾಜ ತುರ್ತು ಪರಿಸ್ಥಿತಿಗೆ ತಲೆ ಬಾಗಿ ಏನು ನಡೆದಿಲ್ಲವೆಂಬಂತೆ, ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಮೌನವಾಗಿ ಬಿಟ್ಟಿತ್ತು. ಭಾರತದ ಜನಸಂಖ್ಯೆಗೆ ಹೋಲಿಸಿದರೆ, ತುರ್ತುಪರಿಸ್ಥಿತಿಯಲ್ಲಿ ಜೈಲು ಸೇರಿದವರ ಸಂಖ್ಯೆ ಣ್ಣಿಗೆ ಕಾಣದಷ್ಟೆ ಸಣ್ಣದಾಗುತ್ತದೆ.
ಆದರೂ, ದೇಶದ ಜನತೆ ತುರ್ತುಪರಿಸ್ಥಿತಿಯನ್ನು ಒಪ್ಪಿಕೊಂಡಿರಲಿಲ್ಲವೆಂಬುದು ಮುಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 1977ರ ಲೋಕಸಭಾ ಚುನಾವಣೆ ಯಲ್ಲಿ ಸಾಬೀತಾಯಿತು. ತುರ್ತುಪರಿಸ್ಥಿತಿ ಹೇರಿದ ಇಂದಿರಾ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮಣ್ಣು ಮುಕ್ಕಿದ್ದಷ್ಟೇ ಅಲ್ಲ, ಇಂದಿರಾಗಾಂಧಿ, ಸಂಜಯಗಾಂಧಿ ಆದಿಯಾಗಿ ಎಲ್ಲರೂ ಸೋತು ಮಣ್ಣುಮುಕ್ಕಿದರು. 1977ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನ ತುರ್ತುಪರಿಸ್ಥಿತಿ ಹೇರಿದ್ದನ್ನು ತಿರಸ್ಕರಿಸಿದ್ದು ಮಾತ್ರವಲ್ಲ, ತುರ್ತುಪರಿಸ್ಥಿತಿ ಹೇರಿದವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರಿಗೆ ಶಿಕ್ಷೆಯನ್ನು ವಿಧಿಸಿದರು. ಅಂದರೆ ಮೂಲಭೂತ ಹಕ್ಕುಗಳ ಆದಿಯಾಗಿ ಎಲ್ಲ ಮಾನವೀಯ ಹಕ್ಕುಗಳನ್ನು ಕಳೆದುಕೊಂಡಿದ್ದ ಜನಕ್ಕೆ ತುರ್ತುಪರಿಸ್ಥಿತಿಯನ್ನು ತಿರಸ್ಕರಿಸಿ, ತುರ್ತು ಪರಿಸ್ಥಿತಿ ಹೇರಿದವರಿಗೆ ಶಿಕ್ಷೆ ವಿಧಿಸುವ ಅವಕಾಶವೂ ದೊರೆಯಿತೆಂಬುದು ಇಲ್ಲಿ ನಾವು ಗಂಭೀರವಾಗಿ ಗಮನಿಸಬೇಕಾದ ಅಂಶ.
 ನಮ್ಮ ರಾಜ್ಯಾಂಗದಲ್ಲಿ ಕೆಲವು ಸಂದರ್ಭಗಳಲ್ಲಿ ರಾಷ್ಟ್ರದ ಹಿತಕ್ಕಾಗಿ ತುರ್ತುಪರಿಸ್ಥಿತಿ ತರುವ ಅಧಿಕಾರವಿದೆ. ಆದರೆ, 1975ರಲ್ಲಿ ಹೇರಿದ ತುರ್ತುಪರಿಸ್ಥಿತಿಗೆ ಸಕಾರಣವಂತೂ ಇರಲಿಲ್ಲ. ಇಂದಿರಾಗಾಂಧಿಯವರ ಅಧಿಕಾರಕ್ಕೆ ಅಭದ್ರತೆ ಒದಗಿ ಬಂದಿತ್ತು. ತನ್ನ ಅಧಿಕಾರ ಭದ್ರಪಡಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ದತ್ತವಾದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತುರ್ತುಪರಿಸ್ಥಿತಿ ಹೇರಲಾಯಿತೆಂಬುದು ಅಲ್ಲಗಳೆಯಲಾಗದ ಸತ್ಯವೇ ಆಗಿದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಕೇವಲ ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲೋಸುಗ, ತುರ್ತು ಪರಿಸ್ಥಿತಿ ಹೇರಿದ್ದನ್ನು ಎಂದೆಂದಿಗೂ ಕ್ಷಮಿಸಲಾಗಲೀ ಸಮರ್ಥಿಸಲಾಗಲೀ ಸಾಧ್ಯವೇ ಇಲ್ಲ. ಇದು ಕ್ಷಮಿಸಲಾಗದ ಅಪರಾಧವೆಂಬುದರಲ್ಲಿ ಎರಡು ಮಾತಿಲ್ಲ.
 1977 ಜನವರಿಯಲ್ಲಿ ತುರ್ತುಪರಿಸ್ಥಿತಿ ಸಡಿಲಿಸಿ ಲೋಕಸಭಾ ಚುನಾವಣೆ ಘೋಷಿಸಲ್ಪಟ್ಟಿತು. ಅಷ್ಟರೊಳಗೆ ಬೆಂಗಳೂರು ಜೈಲಿನಲ್ಲಿ ನನ್ನೊಡನಿದ್ದ ಎಲ್ಲರೂ ಬಿಡುಗಡೆ ಹೊಂದಿದ್ದರು. ನಾನು ಮತ್ತು ನನ್ನ ಸಂಗಾತಿ ವಿಧಾನ ಪರಿಷತ್ ಸದಸ್ಯ ಎಸ್. ಮಲ್ಲಿಕಾರ್ಜುನಯ್ಯನವರು ಮಾತ್ರ ಚುನಾವಣೆ ಘೋಷಣೆಯಾದಾಗ ಇನ್ನೂ ಜೈಲಿನಲ್ಲೇ ಇದ್ದೆವು. ಚುನಾವಣೆ ಘೋಷಣೆಯಾಗಿ ತುರ್ತುಪರಿಸ್ಥಿತಿ ಸಡಿಲಗೊಂಡ ನಂತರವೇ ನನ್ನ ಮತ್ತು ಎಸ್. ಮಲ್ಲಿಕಾರ್ಜುನಯ್ಯನವರ ಬಿಡುಗಡೆಯಾಯಿತು. ಇಡೀ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿ ಬಂದಿಯಾಗಿದ್ದ ರಾಜಕಾರಿಣಿ ನಾನೊಬ್ಬನೇ. ರಾಜ್ಯದ ರಾಜಕಾರಿಣಿಗಳ ಪೈಕಿ ತುರ್ತುಪರಿಸ್ಥಿತಿಯಲ್ಲಿ ಮೊದಲು ಬಂಧನಕ್ಕೊಳಗಾದವನು ನಾನು ಮತ್ತು ಕಡೆಯದಾಗಿ ಬಿಡುಗಡೆ ಹೊಂದಿದವನೂ ನಾನೇ.
ಸಂವಿಧಾನದ ವಿಧಿಯೊಂದನ್ನು ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡು ತುರ್ತುಪರಿಸ್ಥಿತಿ ಹೇರಿದವರಿಗೆ 1977ರ ಚುನಾವಣೆಯಲ್ಲಿ ಅವರನ್ನೆಲ್ಲ ಸೋಲಿಸುವ ಮೂಲಕ ಜನ ತಕ್ಕ ಶಿಕ್ಷೆ ಕೊಟ್ಟರು ಎಂದು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಹಾಗೆಯೇ ಇದೇ ದೇಶದ ಜನ ಮುಂದಿನ ಅಂದರೆ, 1982 ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆರಿಸಿ, ಅಧಿಕಾರ ನೀಡಿದರು ಎಂಬುದನ್ನೂ ಮರೆಯಲಾಗದು

Writer - ಎ. ಕೆ. ಸುಬ್ಬಯ್ಯ

contributor

Editor - ಎ. ಕೆ. ಸುಬ್ಬಯ್ಯ

contributor

Similar News

ಜಗದಗಲ
ಜಗ ದಗಲ