ಹಿಂದೀ ರಾಜಕಾರಣದ ಗೊಂದಲ
ಭಾಗ-4
ಪಾಶವಿ ಶಕ್ತಿಯ ಉಪಯೋಗ ಎಂದೂ ಮಾಡಲಾರೆವೆನ್ನುವುದು ಅವಿಚಾರತನವಷ್ಟೇ. ಅಮೆರಿಕದಲ್ಲಿ ನೀಗ್ರೋಗಳು ಅನೇಕ ವರ್ಷಗಳ ಪರ್ಯಂತ ಗುಲಾಮಗಿರಿಯಲ್ಲಿ ಮುಳುಗಿದ್ದರು. ಅದರ ಉಚ್ಚಾಟನೆಗಾಗಿ ಪಾಶವಿ ಶಕ್ತಿಯ ಪ್ರಯೋಗ ಮಾಡಬೇಕಾಯ್ತು. ನೈತಿಕ ಬಲವನ್ನೇ ನಂಬಿಕೊಂಡಿದ್ದರೆ, ಈ ನೀಗ್ರೋಗಳು ಗುಲಾಮಗಿರಿಯಿಂದ ಇದುವರೆಗೆ ಮುಕ್ತರಾಗುತ್ತಿದ್ದರೋ, ಇಲ್ಲವೋ ಎಂಬುದು ಸಂಶಯ. ಹಾಗೆಯೇ ಅವರಿಗೆ ಸ್ವಾತಂತ್ರ ಸಂಪಾದಿಸಿ ಕೊಡುವಂತಾಗಲು, ಯಾವ ಪಾಶವಿ ಶಕ್ತಿಯ ಉಪಯೋಗ ಮಾಡಲಾಯ್ತೋ, ಅದರಲ್ಲಿ ಅಮೆರಿಕ ದೇಶಕ್ಕೆ ಜನರು ನೈತಿಕ ದೋಷ ಉಂಟಾಯಿತೆನ್ನುವ, ವೃತ್ತಿಯ ಜನರು ಎಲ್ಲಾದರೂ ಸಿಗುವರೆಂದು ನಮ್ಮ ವಿಶ್ವಾಸ. ಇಂದು ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಗುಲಾಗಿರಿಯಲ್ಲಿವೆ. ಅವೆಲ್ಲ ಮುಕ್ತವಾಗಬೇಕು. ನೈತಿಕ ಬಲದಿಂದ ಅದು ಸಾಧ್ಯವಾಗುವಂತಿದ್ದರೆ, ವಿನಾಕಾರಣ, ಪಾಶವಿ ಶಕ್ತಿಯ ಪ್ರಯೋಗ ಮಾಡಬೇಕೆನ್ನುವುದು ಹುಚ್ಚುತನವೇ ಸರಿ. ಧ್ಯೇಯವು ನಿಷ್ಕಳಂಕವೂ, ಪರಿಶುದ್ಧವೂ ಆಗಿದ್ದರೆ, ಆ ಧ್ಯೇಯದ ಸಿದ್ಧಿಗಾಗಿ ಆತ್ಯಂತಿಕ ಸಾಧನದ ಪ್ರಯೋಗದಲ್ಲಿ ನೀತಿಯ ತತ್ವವು ಅಡ್ಡ ಬರದು; ಹಾಗೆ ಬಂದರೆ ಆ ತತ್ವ ಪೊಳ್ಳೆನ್ನಬಹುದು. ಅಹಿಂಸೆಯು ಒಂದು ಸಾಧನವಷ್ಟೇ; ಧ್ಯೇಯವಲ್ಲ ಮತ್ತು ಧ್ಯೇಯಾನುಸಾರ ಸಾಧನದ ಯುಕ್ತಾಯುಕ್ತತೆಯನ್ನು ನಿರ್ಧರಿಸಬಹುದು. ಧ್ಯೇಯವನ್ನು ಸಾಧಿಸುವಲ್ಲಿ, ಅಹಿಂಸೆಯ ಸಾಧನೆ ಅಪೂರ್ಣವಾಗುವುದಾದರೆ, ಧ್ಯೇಯದ ನಾಶವಾಗುವುದಿದ್ದರೆ, ಆಗಲೂ ಅಹಿಂಸೆಯನ್ನು ಬಿಟ್ಟು ಬೇರಾವ ಸಾಧನವನ್ನೂ ಬಳಸಬಾರದೆನ್ನುವುದು ಮೂರ್ಖತನವಷ್ಟೇ.
ಎರಡನೆ ಸಿದ್ಧಾಂತದಂತೆ ಪಾಶವಿ ಶಕ್ತಿಯ ಪ್ರಯೋಗ, ಇನ್ನೊಬ್ಬರಿಗೆ ಅನ್ಯಾಯ ಮಾಡಲೆಂದಾಗುವುದಾದರೆ, ಅದು ಪಾಪ; ಆದರೆ, ಪಾಶವಿ ಶಕ್ತಿಯ ನಿವಾರಣೆಗಾಗಿ ಅದನ್ನು ಉಪಯೋಗಿಸುವುದರಲ್ಲಿ ಯಾವ ಪಾಪವೂ ಇಲ್ಲ. ಪಾಶವಿ ಶಕ್ತಿಯ ಪ್ರತೀಕಾರ ಮಾಡದೆ ಇರುವುದೆಂದರೆ, ಪಾಶವಿ ಶಕ್ತಿಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶ ಮಾಡಿ ಕೊಡುವಂತೆ, ಸಹಾಯ ಮಾಡುವಂತೆ. ನಿಜ ವಿಚಾರವೆಂದರೆ, ನಿಮ್ಮ ಮೇಲೆ ಯಾರಾದರೂ ಪಾಶವಿ ಶಕ್ತಿಯನ್ನು ಪ್ರಯೋಗಿಸಿದರೆ, ಅವಶ್ಯಕವೆನಿಸಿದರೆ, ಪಾಶವಿ ಶಕ್ತಿಯಿಂದಲೇ ಪ್ರತೀಕಾರ ಮಾಡಿ. ಆದರೆ ಪಾಶವಿ ಶಕ್ತಿಯಿಂದ ಪ್ರತಿಪಕ್ಷವನ್ನು ಸೋಲಿಸಿದ ಬಳಿಕ, ಪರಾಜಿತರ ಮೇಲೆ ಅನ್ಯಾಯವೆಸಗಲು ಆ ಗೆಲುವನ್ನು ಉಪಯೋಗಿಸಬೇಡಿ.
ಮೂರನೆಯ ಸಿದ್ಧಾಂತವೆಂದರೆ, ನಿಶ್ಶಸ್ತ್ರ ಪ್ರತೀಕಾರದ ಮಾರ್ಗವನ್ನು ಒಂದು ರಾಷ್ಟ್ರವು ಸ್ವೀಕರಿಸಿ, ಉಳಿದ ರಾಷ್ಟ್ರಗಳು ಸ್ವೀಕರಿಸದೆ ಹೋದರೆ ಅದರಿಂದ ಉಪಯೋಗವೇನೂ ಇಲ್ಲ. ಹೊಸ ಮಾರ್ಗವು ಸುಲಭವಿದ್ದರೆ, ಜನರು ಅದನ್ನು ಅನುಸರಿಸುತ್ತಾರೆ, ದುರ್ಗಮವಿದ್ದರೆ ಅನುಸರಿಸುವುದಿಲ್ಲ. ಉದಾಹರಣೆಗೆ, ಒಂದೆಡೆ ಸೋಶಿಯಲಿಸಮ್ ಜಾರಿಗೆ ಬಂದರೆ ಎಲ್ಲೆಡೆ ಬರುವುದೇನೂ ಶಕ್ಯವಲ್ಲ. ಎಲ್ಲರೂ ಅನುಸರಿಸಿದರೆ ಮಾತ್ರ ಸೋಶಿಯಲಿಸಮ್ ಜಾರಿಗೆ ಬರುವುದು. ನಿಶ್ಶಸ್ತ್ರ ಪ್ರತೀಕಾರದ ತತ್ವದಲ್ಲೂ ಇದೇ ನ್ಯಾಯ ಅನ್ವಯವಗುತ್ತದೆ. ಎಲ್ಲ ರಾಷ್ಟ್ರಗಳು ಒಂದಾಗಿ ನಿಶ್ಶಸ್ತ್ರ ಪ್ರತೀಕಾರವನ್ನು ಅಂಗೀಕರಿಸಬೇಕು. ಅದರ ಸಲುವಾಗಿ ಜಾಗತಿಕ ಸಂಘಟನೆಯೊಂದು ರೂಪುಗೊಳ್ಳಬೇಕು. ಇದು ಒಂದೆರಡು ರಾಷ್ಟ್ರಗಳು ಮಾಡುವ ಕೆಲಸವಲ್ಲ.
ಅಹಿಂಸೆಯ ತತ್ವವು ಹಿಂದೂಸ್ಥಾನದಲ್ಲಿ ಆದಿಕಾಲದಿಂದಲೂ ಚಾಲನೆಯಲ್ಲಿದೆ. ಆರ್ಯರು ಧ್ಯೇಯದಲ್ಲೂ, ಕೃತಿಯಲ್ಲೂ ಹಿಂಸಾವಾದಿಗಳಾಗಿದ್ದರು. ಯಜ್ಞವು ಅವರ ಧರ್ಮದ ಮುಖ್ಯ ಅಡಿಪಾಯವಾಗಿತ್ತು. ಆ ಯಜ್ಞದಲ್ಲಿ ಹಿಂಸೆ ಮತ್ತು ಮದ್ಯಪಾನದ ಹೊರತು ಬೇರೇನೂ ಇರಲಿಲ್ಲ. ಈ ಹಿಂಸಕ ಆರ್ಯಧರ್ಮದಿಂದ ಬೇಸತ್ತು, ಮಹಾವೀರನು ಅಹಿಂಸಾವಾದಿ ಜೈನಧರ್ಮವನ್ನು ಸ್ಥಾಪಿಸಿದನು. ಆದರೆ ಇವೆರಡೂ ತತ್ವಗಳು ಅತಿರೇಕಕ್ಕೆ ಹೋದವು. ಒಂದು ಅತಿರೇಕದ ಹಿಂಸೆಯಾದರೆ ಮತ್ತೊಂದು ಅತಿರೇಕದ ಅಹಿಂಸೆ! ಹಾಗೆಂದೇ ಗೌತಮ ಬುದ್ಧನು ತನ್ನ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಇವೆರಡೂ ಅತಿರೇಕಗಳನ್ನು ಕೈಬಿಟ್ಟು, ಮಧ್ಯಮ ದಾರಿಯನ್ನು ಅನುಸರಿಸಿದನು. ''ಶಕ್ಯವಾದರೆ ಅಹಿಂಸೆ; ಇಲ್ಲವಾದರೆ ಹಿಂಸೆ'' ಎಂಬುದು ಬುದ್ಧನ ಭೂಮಿಕೆಯಾಗಿತ್ತು. ಬೌದ್ಧಧರ್ಮ ಉಳಿದಿದ್ದರೆ, ಅಹಿಂಸೆಯ ಕುರಿತಾದ ಇಂದಿನ ಈ ಪ್ರಶ್ನೆ ಏಳುತ್ತಿರಲಿಲ್ಲ. ಬ್ರಾಹ್ಮಣ ಬಂಧುಗಳ ಹಿಂಸೆಯಿಂದ ಬೇಸತ್ತ ಜನತೆ ಬುದ್ಧನನ್ನನುಸರಿಸಿ ಅಹಿಂಸೆಯನ್ನಾಂತು, ಅದಕ್ಕೆ ಸಾಕ್ಷಿಯಾಗಿ ಗೋಮಾಂಸ ತ್ಯಜಿಸಿ ಶಾಖಾಹಾರಿಗಳಾದರು. ಹೀಗೆ ಬುದ್ಧನ ವಿಚಾರ ಸರಣಿಯ ಲೋಪವಾಗಿ ಆತ್ಯಂತಿಕ ಅಹಿಂಸೆಯೇ ಹಿಂದೂಗಳಿಗೆ ಶಿರೋಭೂಷಣವಾಯ್ತು. ಸಾವಿರಾರು ವರ್ಷಗಳಿಂದ ಹೀಗಿರುವುದರಿಂದಲೇ ಈ ಜನರು ಹೀಗೆ ದುರ್ಬಲರಾಗಿರುವುದು.
ಮಾನವ ಜೀವನಕ್ಕೆ ಯಾವುದಾದರೂ ನೈತಿಕ ತತ್ವದ ಅಡಿಪಾಯ ಇರಬೇಕೆಂಬುದನ್ನು ನಾವು ಒಪ್ಪುತ್ತೇವೆ. ಸಂಸಾರಿ ಜೀವನದಲ್ಲಿ ಅಲ್ಲದಿದ್ದರೂ, ರಾಜಕಾರಣದಲ್ಲಾದರೂ ಹಾಗಿರುವುದು ನಮಗೆ ಸಮ್ಮತ. ಹಿಂದೆ ಗಾಂಧಿ ಹಾಗೂ ತಿಲಕರ ನಡುವೆ ಈ ಪ್ರಶ್ನೆಯ ಬಗ್ಗೆ ವಾದವೆದ್ದಿತ್ತು. ರಾಜಕಾರಣದಲ್ಲಿ ಮೋಸಕ್ಕೆ ಪ್ರತಿಯಾಗಿ ಮೋಸೆವೆಂಬ ಇದೇ ತತ್ವದ ಆಧಾರದ ಮೇಲೆ ನೋಡಬೇಕೆಂದು ತಿಲಕರು ಪ್ರತಿಪಾದಿಸಿದ್ದರು. ''ಇತರರ ಕ್ರೋಧವನ್ನು ನಿಮ್ಮ ಶಾಂತಿಯಿಂದ ಜಯಿಸಿ, ದುಷ್ಟರನ್ನು ಸಾಧುತನದಿಂದ ಜಯಿಸಿ, ಅಸತ್ಯವನ್ನು ಸತ್ಯದಿಂದ ಜಯಿಸಿ, ಎಂಬ ಗೌತಮ ಬುದ್ಧನ ತತ್ವ ಮಾನ್ಯವಲ್ಲ, ಅದರೆ ಗೀತೆಯಲ್ಲಿ ಹೇಳಿದ ''ನನ್ನನ್ನು ಯಾವ ಸ್ವರೂಪದಲ್ಲಿ ಭಜಿಸುವರೋ, ಅದೇ ರೀತಿ ಫಲವನ್ನು ಕೊಡುವೆ'' ಎಂಬ ತತ್ವದಂತೆ ನಡೆಯುವುದೇ ತಮ್ಮ ಭೂಮಿಕೆ ಎಂದು ಅವರು ನಂತರ ಸ್ಪಷ್ಟ ಪಡಿಸಿದ್ದಾರೆ. ಇದಕ್ಕೆ ಗಾಂಧಿ, ಗೀತೆಯ ತತ್ವಕ್ಕಿಂತ ಬುದ್ಧನ ತತ್ವವೇ ಲಾಭದಾಯಕ, ಅಂದಿದ್ದರು. ಇದಕ್ಕೆ ನಮ್ಮ ಸಹಮತವಿದೆ. ಗೀತೆಯ ತತ್ವ ಮತ್ತು ನಾನಾ ಫಡ್ನವೀಸರ ಮೋಸಕ್ಕೆ ಪ್ರತಿಯಾಗಿ ಮೋಸ ಎಂಬುದರಲ್ಲಿ ವ್ಯತ್ಯಾಸವೇನೂ ಕಾಣುವುದಿಲ್ಲ. ಆದರೆ, ಗಾಂಧಿ ಬುದ್ಧನ ಪಕ್ಷ ಹಿಡಿದರೂ, ಅಹಿಂಸೆಯ ವಿಷಯದಲ್ಲಿ ಬುದ್ಧ ಮತ್ತು ಗಾಂಧಿಯವರಲ್ಲಿ ದೊಡ್ಡ ವ್ಯತ್ಯಾಸವಿದೆ ಎಂಬುದನ್ನು ಮರೆಯಬಾರದು. ಅದು ತತ್ವ ಮತ್ತು ನಿಯಮದ ವ್ಯತ್ಯಾಸ. ಬುದ್ಧನು ಅಹಿಂಸೆಯನ್ನು ತತ್ವವೆಂದುಕೊಳ್ಳುತ್ತಾನೆ, ನಿಯಮವೆಂದಲ್ಲ. ಗಾಂಧಿ ಅಹಿಂಸೆಯೇ ತತ್ವವೆನ್ನುತ್ತಾರೆ. ತತ್ವ ಮತ್ತು ನಿಯಮಗಳ ನಡುವಣ ವ್ಯತ್ಯಾಸ ದೊಡ್ಡದಿದೆ. ನಿಯಮ ಪಾಲಿಸಲು ಇರುತ್ತದೆ. ಅದು ಮನುಷ್ಯನನ್ನು ಗುಲಾಮನನ್ನಾಗಿಸುತ್ತದೆ. ತತ್ವದ ಉಪಾಸಕನಾಗುತ್ತಾನೆ. ಈ ವ್ಯತ್ಯಾಸವನ್ನರಿಯದ ಅನೇಕ ಸಮಾಜಗಳು ರಸಾತಳಕ್ಕಿಳಿದಿವೆ. ತತ್ವ ಪ್ರಗತಿಗೆ ಬಾಧೆ ತರುವುದಿಲ್ಲ. ನಿಯಮ ಗತಿಯನ್ನು ಕುಂಠಿತವಾಗಿಸುತ್ತದೆ. ಈ ಮಹತ್ವದ ವ್ಯತ್ಯಾಸವನ್ನು ಗಾಂಧಿ ಅರಿಯಲಿಲ್ಲವೆಂದು ಕಾಣುತ್ತದೆ.
ಅಹಿಂಸೆ ಎಂಬ ಗಂಭೀರ ವಿಷಯದಲ್ಲಿ ಗಾಂಧಿ ಅವರ ವಿಚಾರದಲ್ಲಾದ ಬದಲಾವಣೆ, ಅವರ ಲೇಖನಗಳಿಂದ ತಿಳೀದು ಬರುತ್ತದೆ.
1922ರ ಮಾರ್ಚ್ ದಿನಾಂಕ 2ರ 'ಯಂಗ್ ಇಂಡಿಯಾ'ದ ಅಂಕಣದಲ್ಲಿ ಈ ವಿಷಯವಾಗಿ ಗಾಂಧಿ ಬರೆದಿದ್ದಾರೆ.
''ನನಗೆ ಖೇದವೆನಿಸುವುದೆಂದರೆ, ಕೆಲ ಹಿಂದೂಗಳು ಹಾಗೂ ಮುಸ್ಲಿಮರು ನಾನು ಅವರ ಧರ್ಮಶ್ರದ್ಧೆಯನ್ನು ಕಡೆಗಣಿಸಿರುವೆನೆಂದೂ, ಅಹಿಂಸೆಯ ತತ್ವದ ಬಗ್ಗೆ ರಾಜಿ ಮಾಡಿಕೊಳ್ಳದೆ, ಇಂಡಿಯಾ ದೇಶಕ್ಕೆ ಮಹಾಹಾನಿಯನ್ನುಂಟು ಮಾಡಿರುವೆನೆಂದೂ ಅಂದುಕೊಂಡಿದ್ದಾರೆ.
ಹಿಂಸೆಯು ಯಾವುದೇ ಧರ್ಮದ ಶಾಸನವಲ್ಲವೆಂದು ನಾನು ದಿಟ್ಟವಾಗಿಯೇ ಹೇಳುತ್ತೇನೆ ಮತ್ತು, ಅಹಿಂಸೆಯು ಬಹುತೇಕ ಎಲ್ಲ ಧರ್ಮಗಳಲ್ಲೂ ಕಡ್ಡಾಯವಿದ್ದು, ಪ್ರಸಂಗ ವಿಶೇಷವಾಗಿ ಹಿಂಸೆಯು ಅಪದ್ಧರ್ಮಕರ್ಮವೆಂದು ಮಾನ್ಯತೆ ಪಡೆದಿದೆ. ಆದರೆ, ಹಿಂಸೆಯ ಅತ್ಯಂತಿಕ ಸ್ವರೂಪವನ್ನೇನೂ ನಾನು ಇಂಡಿಯಾದೆದುರು ತೆರೆದಿಟ್ಟಿಲ್ಲ. ಕಾಂಗ್ರೆಸ್ ವೇದಿಕೆಯಿಂದ ನಾನು ನೀಡಿರುವ ಅಹಿಂಸೆಯ ಬೋಧೆ, ಕೇವಲ ಧೋರಣೆ ಮಾತ್ರದ್ದಾಗಿದೆ.
ಅಹಿಂಸಾಪಾಲನೆಯಲ್ಲಿ ನಂಬಿಕೆಯಿಲ್ಲದವರು, ಅದನ್ನು ನೇರವಾಗಿ ಧಿಕ್ಕರಿಸಬೇಕೇ ಹೊರತು, ಕಪಟ ವಿಶ್ವಾಸ ತೋರಬಾರದು. ಹಿಂಸೆ ಅವಶ್ಯಕವಾಯಿತೆಂದೇ ಇಟ್ಟುಕೊಳ್ಳಿ. ಆದರೆ, ಅದರಲ್ಲಿ ವಿಶ್ವಾಸವಿಲ್ಲದೆ, ಬರಿದೆ ಕೋವಿಯನ್ನು ಕೈಯಲ್ಲಿ ಹಿಡಿದು ಸುಮ್ಮನೆ ನಿಂತರೆ, ಅದು ಮೋಸವಲ್ಲವೇ? ನಾನು ನೊಣವನ್ನೇನೋ ಕೊಲ್ಲಬಲ್ಲೆ. ಆದರೆ, ನೊಣವನ್ನೂ ನಾನು ಕೊಲ್ಲುವವನಲ್ಲ. ಆದರೆ ಅಂತಹ ಕಾರ್ಯಕ್ಕೆ ನಿಯುಕ್ತನಾದಲ್ಲಿ ಹಾಗೆ ಮಾಡಬೇಕೆಂದು ಅಪೇಕ್ಷಿಸಲಾಗುವುದಿಲ್ಲವೇ? ಕಾಂಗ್ರೆಸ್ ಹಾಗೂ ಖಿಲಾಫತ್ ಕಮಿಟಿಯಲ್ಲಿರುವವರು ಈ ಸರಳ ಸತ್ಯವನ್ನು ಅರಿತರೆ ಖಂಡಿತವಾಗಿಯೂ ಈ ಹೋರಾಟವನ್ನು ಈ ವರ್ಷವೇ ಉಶಸ್ವಿಯಾಗಿ ಕೊನೆಗೊಳಿಸುವರು, ಇಲ್ಲವೇ ಅಹಿಂಸೆಯ ಬಗ್ಗೆ ಹೇಸಿ, ಈ ಕಪಟನಾಟಕವನ್ನು ತ್ಯಜಿಸಿ, ಬೇರಿನ್ನೇನಾದರೂ ಯೋಜನೆಗೆ ತೊಡಗುವರು''. ಬಳಿಕ ಮಾರ್ಚ್ 1ರ 'ಯಂಗ್ ಇಂಡಿಯಾ' ಅಂಕಣದಲ್ಲಿ ಈ ವಿಚಾರವಾಗಿ ಅವರ ಮಾತುಗಳು ಇನ್ನೂ ಸ್ಪಷ್ಟವಿವೆ.
ಲಾಹೋರ್‌ನಿಂದ ವರದಿ:
''ಬಾರ್ಡೋಲಿ ನಿರ್ಣಯದ ಬಗ್ಗೆ ಬೆಳಕಿಗೆ ಬಂದಿರುವ ಅಂಶದಿಂದ ತಿಳಿಯುವುದೆಂದರೆ, ಈ ನಿರ್ಧಾರವು, ಒಂದೇ ಪಂಡಿತ್ ಮಾಲವೀಯ ಅವರ ಪ್ರಭಾವದಿಂದ, ಇಲ್ಲವೇ ಅಹಿಂಸೆಯ ಬಗೆಗಿನ ಅವಾಸ್ತವ ಕಲ್ಪನೆಯಿಂದ ಮೂಡಿದ್ದಾಗಿದೆ. ಇದು ಮಾಲವೀಯ ಅವರಿಗೆ ಶೋಭಿಸುವುದಲ್ಲ, ಅಷ್ಟೇ ಅಲ್ಲ, ತಿಳುವಳಿಕೆ ಹೀನವೂ ಆಗಿದೆ. ಕಾಂಗ್ರೆಸ್‌ನ ಆದರ್ಶ, ಸ್ವರಾಜ್ಯವೇ ಹೊರತು, ಅಹಿಂಸೆ ಅಲ್ಲವಲ್ಲ? ಲೇಖಕನ ಬಗ್ಗೆ ಸಹಾನುಭೂತಿ ಅನಿಸದಿರುವುದು ಸಾಧ್ಯವೇ ಇಲ್ಲ. ದಿಲ್ಲಿಯಲ್ಲಿ ಕಾಣಬಂದ ಮನೋವೃತ್ತಿಯ ಪ್ರತೀಕ ಅವರ ಈ ಪತ್ರ. ಬಾರ್ಡೋಲಿ ನಿರ್ಣಯಕ್ಕೂ, ಪಂಡಿತ ಮಾಲವೀಯ ಅವರಿಗೂ ಯಾವ ಸಂಬಂಧವೂ ಇಲ್ಲ. ಹಾಗೆಂದು ಮೊದಲೇ ಹೇಳಿದ್ದೇವೆ. ಹಾಗೆಯೇ, ಅಹಿಂಸೆಯ ಅವಾಸ್ತವ ಕಲ್ಪನೆಯಂತೆ ತರ್ಕಶುದ್ಧ ದೃಷ್ಟಿಯಿಂದ ವಿಚಾರಿಸಿದರೆ, ಬಾರ್ಡೋಲಿ ನಿರ್ಣಯವು ಸೀಮಿತ ಅಹಿಂಸೆಯೆಂಬ ರಾಷ್ಟ್ರೀಯ ಶಪಥದಿಂದ ಉಗಮವಾದುದು. ರಾಷ್ಟ್ರದ ಧ್ಯೇಯ, ಅಹಿಂಸೆಯಲ್ಲ, ಸ್ವರಾಜ್ಯ, ಎಂಬುದಕ್ಕೆ ನನ್ನ ಪೂರ್ಣ ಸಮ್ಮತಿಯಿದೆ. ಅಹಿಂಸೆಯಷ್ಟೇ ಸ್ವರಾಜ್ಯವೂ ನನ್ನ ಧ್ಯೇಯ; ಅಹಿಂಸೆಯನ್ನು ಅವಲಂಬಿಸದೆ, ಜನತೆಗೆ ಸ್ವರಾಜ್ಯ ಪ್ರಾಪ್ತಿಯಾಗುವುದು ಅಸಾಧ್ಯ. ಆದರೆ, ಇಂಡಿಯಾ ದಾಸ್ಯದ ಶೃಂಖಲೆಯಲ್ಲೇ ಇರುವುದಕ್ಕಿಂತ ಹಿಂಸಾಮಾರ್ಗದಿಂದಲಾದರೂ ಸ್ವತಂತ್ರವಾಗಲೆಂಬ ನನ್ನ ಇಚ್ಛೆಯನ್ನು ಎಷ್ಟೋ ಸಲ ವ್ಯಕ್ತಪಡಿಸಿದ್ದೇನೆ''.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)