'ಅರೆಭಾಷೆ' ಸಬಲೀಕರಣದ ಸುತ್ತ ಮುತ್ತ

Update: 2018-08-05 05:15 GMT

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ವಿಟ್ಲ, ಮತ್ತು ಬೆಳ್ತಂಗಡಿ ಪರಿಸರದಲ್ಲಿ ಹಾಗೂ ಕೊಡಗಿನ ಭಾಗಮಂಡಲ ಪರಿಸರದಲ್ಲಿ ಪ್ರಚಲಿತದಲ್ಲಿರುವ ಅರೆಭಾಷೆಯು ಕನ್ನಡದ ಒಂದು ಸಾಮಾಜಿಕ ಉಪಭಾಷೆಯೆಂದು ಇದುವರೆಗೆ ಹೇಳುತ್ತಾ ಬರಲಾಗಿದೆ. ಈ ಭಾಷೆಯಲ್ಲಿ ಇಂದಿಗೂ ಕಾಣಸಿಗುವ ಕೆಲವು ವಿಶಿಷ್ಟ ಪದಗಳು ಮತ್ತು ಉಚ್ಚಾರಣೆಯು ಸುಮಾರು 1,500 ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದುವು.

ಭಾಷೆಗೆ ಸಂಬಂಧಿಸಿದಂತೆ 1971ರಿಂದಲೂ ಕೇಂದ್ರ ಸರಕಾರ ಒಂದು ಧೋರಣೆಯನ್ನು ಸ್ಪಷ್ಟವಾಗಿ ಅನುಸರಿಸುತ್ತಲೇ ಬಂದಿದೆ. ಅದೆಂದರೆ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳನ್ನು ಮಾತ್ರ ಅದು ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ. ಈ ನಿಲುವಿನಿಂದಾಗಿ ನಮ್ಮ ದೇಶದ ಅನೇಕ ಸ್ವತಂತ್ರ ಭಾಷೆಗಳ ಹೆಸರುಗಳು ( ಉದಾ: ಕೊರಗ ಭಾಷೆ) ಇಲ್ಲಿ ಲಭ್ಯವಾಗುವುದೇ ಇಲ್ಲ. ಅರೆಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡದಂಥ ಮುಖ್ಯ ಭಾಷೆಗಳ ಕತೆಯಾದರೂ ಅಷ್ಟೆ. ಈ ಮಿತಿಯೊಳಗೆ 2011ರ ಜನಗಣತಿಯು ಒಟ್ಟು 19,569 ಭಾಷೆಗಳನ್ನು ಮಾತೃಭಾಷೆಗಳೆಂದು ಮನ್ನಿಸುತ್ತದೆ. ಅಚ್ಚರಿಯೆಂದರೆ 2001ರ ಜನಗಣತಿಯು 1,636 ಭಾಷೆಗಳನ್ನು ಮಾತ್ರ ಪಟ್ಟಿ ಮಾಡುತ್ತದೆ. ಕೇವಲ 10 ವರ್ಷಗಳಲ್ಲಿ ಸುಮಾರು 18 ಸಾವಿರ ಭಾಷೆಗಳು ಹೆಚ್ಚಾಗಲು ಸರಕಾರವು ತನ್ನ ಕೆಲವು ಮಾನದಂಡಗಳನ್ನು ಬದಲಾಯಿಸಿದ್ದೇ ಕಾರಣ. 2011ರ ಜನಗಣತಿಯ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 40. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 60. 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 122. 2011ರ ಜನಗಣತಿಯು ವರದಿ ಮಾಡಿದ ಪ್ರಕಾರ 19,569 ಭಾಷೆಗಳಲ್ಲಿ ಸ್ವತಂತ್ರ ಭಾಷೆಗಳು ಸಂಖ್ಯೆ ಒಟ್ಟು 121. ಇದರಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಆದರೆ ಅದು ದೇಶದ ಒಟ್ಟು 96.71 ಶೇ. ಜನರನ್ನು (117,11,03,853 ಕೋಟಿ ) ಪ್ರತಿನಿಧಿಸುತ್ತದೆ. ಈಗ ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ ಒಟ್ಟು 99. ಆದರೆ ಇದು ದೇಶದ 3.29 (3,97,51,124 ಕೋಟಿ) ಶೇ.ಜನರನ್ನು ಮಾತ್ರ ಪ್ರತಿನಿಧಿಸುತ್ತದೆ. ಈ ಅಂಕಿ ಅಂಶಗಳು 2001ರ ಜನಗಣತಿಯಿಂದ ತುಂಬ ಬೇರೆಯಾಗಿಯೇನೂ ಇಲ್ಲ. ಅಲ್ಲಿ 8ನೇ ಪರಿಚ್ಛೇದಕ್ಕೆ ಸೇರಬೇಕಾದ ಭಾಷೆಗಳ ಸಂಖ್ಯೆಯನ್ನು 100 ಎಂದು ಹೇಳಲಾಗಿದೆ. 2011ರ ಜನಗಣತಿಯಲ್ಲಿ ಸಿಮ್ಟೆ ಮತ್ತು ಪರ್ಶಿಯನ್ ಭಾಷೆಗಳನ್ನು (10 ಸಾವಿರ ಜನರ ಭಾಷೆಯಾಗಿರದೇ ಇರುವುದರಿಂದ) ತೆಗೆದು ಹಾಕಿ, ಅಲ್ಲಿಗೆ ಮಾವೋ ಭಾಷೆಯನ್ನು ಸೇರಿಸಲಾಗಿದೆ. 8ನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯು 52,83,47,193 ಕೋಟಿ ಜನರನ್ನು ಹೊಂದಿದ್ದು ( ಶೇ. 43.63) ಪ್ರಥಮ ಸ್ಥಾನದಲ್ಲಿದೆ. 4,3706512 ಜನರನ್ನು ಹೊಂದಿರುವ ( ಶೇ. 3.61) ಕನ್ನಡವು ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಬಂಗಾಲಿ ( ಶೇ. 8.3), ಮರಾಠಿ( ಶೇ. 6.86) , ತೆಲುಗು ( ಶೇ. 6.70), ತಮಿಳು ( ಶೇ. 5.70), ಗುಜರಾತಿ ( ಶೇ. 4.58) ಮತ್ತು ಉರ್ದು ( ಶೇ. 4.19) ಭಾಷೆಗಳು ಸಂಖ್ಯಾ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲಿವೆ. ಸಂಸ್ಕೃತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ ಒಟ್ಟು 2,4821 ಮಾತ್ರ. ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು ಇದರಲ್ಲಿ ಶೇ. 96.47ರಷ್ಟು ಜನರು ( 4,37,06,512) ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಉಳಿದ 21,54,853 (ಶೇ. 3.53) ಜನರು ಕರ್ನಾಟಕದಲ್ಲಿರುವ ಬೇರೆ ಭಾಷೆಯವರಾಗಿದ್ದಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಒಂದು ನಿರ್ದಿಷ್ಟ ಭಾಷೆಯನ್ನು ಆಡುವವರ ಸಂಖ್ಯೆಯಲ್ಲಿ ಕಂಡು ಬರುವ ಏರಿಳಿತಗಳು. 1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇ. 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇ. 42 ಆಗಿದ್ದರೆ ತಮಿಳಿನಲ್ಲಿ ಶೇ. 6 ಆಗಿದೆ. ಈ ವಿಷಯದಲ್ಲಿ ತುಳುವರು ಕನ್ನಡಕ್ಕಿಂತ ಮುಂದಿದ್ದು ಶೇ. 9 ಏರಿಕೆ ತೋರಿಸಿದ್ದಾರೆ. ಜನಗಣತಿಯ ಪ್ರಕಾರ ಒಟ್ಟು ತುಳುವರ ಸಂಖ್ಯೆ 18,46,427 ಮಾತ್ರ. ಈ ನಡುವೆ, 19,569 ಮಾತೃ ಭಾಷೆಗಳಿರುವ ಭಾರತದಲ್ಲಿ ಇದೀಗ ಕೇವಲ 22 ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ. ಭಾಷೆಯೊಂದು ಯಾವುದೇ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಿಸಲ್ಪಟ್ಟಾಗ ಅದು ಸಹಜವಾಗಿ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಇದು ಕಾರಣವಾಗಿ ಭಾರತೀಯ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ 14 ಭಾಷೆಗಳನ್ನು ಪಟ್ಟಿಗೆ ಸೇರಿಸಲಾಯಿತು. ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ಮತ್ತು ನೇಪಾಳಿ ಭಾಷೆಗಳನ್ನು ಸೇರಿಸಲಾಯಿತು. ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಆಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಸೇರಿಸಲಾಯಿತು. ಈ ನಾಲ್ಕು ಭಾಷೆಗಳು ಕೇವಲ ಅರ್ಹತೆಯಿಂದ ಸೇರಿವೆ ಎಂದೇನೂ ಭಾವಿಸಬೇಕಾಗಿಲ್ಲ. ಡೋಗ್ರಿ ಭಾಷೆಯ ಹಿಂದೆ ಮಹಾರಾಜಾ ಕರಣ್ ಸಿಂಗ್ ಮತ್ತು ಹೊತ್ತಿ ಉರಿಯುತ್ತಿರುವ ಕಾಶ್ಮೀರ ಸಮಸ್ಯೆ ಸೇರಿಕೊಂಡಿದೆ. ಅಸ್ಸಾಮಿಗೆ ಭೇಟಿ ನೀಡಿದ್ದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಬೋಡೋ ಲ್ಯಾಂಡ್ ಕೇಳುತ್ತಿರುವ ಬೋಡೋ ಬುಡಕಟ್ಟಿನ ಜನರನ್ನು ಮೆಚ್ಚಿಸಲು ಬೋಡೋ ಭಾಷೆಗೆ ಮನ್ನಣೆ ನೀಡುವ ಕೆಲಸ ಮಾಡಿದರು. ಮೈಥಿಲಿ ಭಾಷೆಯ ಹಿಂದೆ ಆಗಿನ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರ ಕೆಲಸಗಳಿವೆ ಮತ್ತು ಸಂತಾಲಿ ಭಾಷೆಯ ಹಿಂದೆ ಪಶ್ಚಿಮ ಬಂಗಾಳ ಸರಕಾರದ ಒತ್ತಡವಿದೆ. ಈ 22 ಭಾಷೆಗಳಲ್ಲದೆ ಇತರ ಅನೇಕ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಬಯಸಿದಾಗ, ಅಂಥ ಭಾಷೆಗಳನ್ನು ಕೇಂದ್ರ ಸರಕಾರವು 2004ರಲ್ಲಿ ಸೀತಾಕಾಂತ ಮಹಾಪಾತ್ರ ಸಮಿತಿಗೆ ಒಪ್ಪಿಸಿತು. ಮತ್ತೆ ಎಂಟನೇ ಪರಿಚ್ಛೇದಕ್ಕೆ ಸೇರಲು ಹೋರಾಡುತ್ತಿರುವ ತುಳು, ಕೊಡವ ಭಾಷೆಗಳೂ ಸೇರಿದಂತೆ ಇತರ 39 ಭಾಷೆಗಳನ್ನು ಪಟ್ಟಿ ಮಾಡಿ ಏನೂ ಮಾಡಲಾಗದೆ ಕೈ ಕಟ್ಟಿ ಕುಳಿತಿದೆ. ಭಾಷೆಯ ಬಗ್ಗೆ ಎಚ್ಚರ ಮೂಡುತ್ತಿದ್ದಂತೆ ಇದೀಗ ಮತ್ತೆ 60 ಭಾಷೆಗಳು ತಮ್ಮ ಧ್ವನಿ ಎಬ್ಬಿಸಿವೆ, ಹೋರಾಟ ನಡೆಸಲು ಸಜ್ಜಾಗುತ್ತಿವೆ. ಈ ಹೊರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರಕಾರವು ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನೇ ಇದೀಗ ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿ ಭಾಷೆಗೊಂದು ದೂರದರ್ಶನ ವಾಹಿನಿಯನ್ನು ತೆರೆಯಲು ತಮ್ಮಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ ಎಂದು ಪ್ರಸಾರ ಭಾರತಿ ಸ್ಪಷ್ಟ ಪಡಿಸಿದೆ. ಭಾರತದ ಸಣ್ಣ ನೋಟುಗಳಲ್ಲಿ ಅಷ್ಟೊಂದು ಹೆಸರುಗಳನ್ನು ಪ್ರಕಟ ಮಾಡುವುದಾದರೂ ಹೇಗೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಅನೇಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಬೇಕಾದ ವಿದ್ವಾಂಸರಿಲ್ಲ ಎಂದು ಯುಪಿ ಎಸ್‌ಸಿ ಭಾವಿಸಿದೆ. ವಿದ್ವಾಂಸರು ಸೃಷ್ಟಿಯಾಗುವ ಹಾಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದರೆ ಯಾರೂ ಉತ್ತರ ಕೊಡುವುದಿಲ್ಲ. ಸರಕಾರಕ್ಕೆ ಸಣ್ಣ ಭಾಷೆಗಳ ಸಬಲೀಕರಣ ಪ್ರಕ್ರಿಯೆಯ ಬಗ್ಗೆ ಯಾವ ಆಸಕ್ತಿಯೂ ಇಲ್ಲ. ಭಾಷೆಗಳ ಬಗೆಗೆ ತಿಳುವಳಿಕೆ ಇಲ್ಲದ ಅದಕ್ಷ ಅಧಿಕಾರಿಗಳ ಮತ್ತು ಮುನ್ನೋಟವಿಲ್ಲದ ರಾಜಕಾರಣಿಗಳ ಸಂಲಗ್ನದಲ್ಲಿ ಭಾರತದ ಅನೇಕ ಭಾಷೆಗಳು ಅವಸಾನದಂಚಿಗೆ ಚಲಿಸುತ್ತಿವೆ. ಈ ನಡುವೆ ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ (Christopher Moseley, ed., UNESCO, Paris 2010).

ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರಕಾರ ಅದರ ಕಡೆಗೆ ಗಂಭೀರವಾಗಿ ಕಿವಿಗೊಡದಿರುವುದು. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲವಲ್ಲ. ಈಚೆಗೆ ಬಿಡುಗಡೆಯಾದ ಹೊಸ ಶಿಕ್ಷಣ ನೀತಿಯು ಹಿಂದೀ ಭಾಷೆಯ ಅಭಿವೃದ್ಧಿಗೆ ಅನೇಕ ಸೂಚನೆಗಳನ್ನು ಕೊಡುತ್ತದೆ. ಆದರೆ ಉಳಿದ ಭಾಷೆಗಳ ಅಭಿವೃದ್ಧಿಯ ಹೊಣೆ ರಾಜ್ಯ ಸರಕಾರದ್ದು ಎಂದು ಹೇಳುತ್ತದೆ. ಆದರೆ ಕರ್ನಾಟಕ ರಾಜ್ಯವು ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕೆಂದು ಹೊರಟಾಗ ಮಾಧ್ಯಮದ ಹಕ್ಕನ್ನು ಸುಪ್ರೀಂ ಕೋರ್ಟ್ ಪೋಷಕ ರಿಗೂ ಮಕ್ಕಳಿಗೂ ನೀಡಿದೆ. ಇದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಆದರೆ ಈ ಕುರಿತು ಭಾರತದಲ್ಲಿ ದೊಡ್ಡ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ. ಕೋಮುವಾದ, ಧರ್ಮ, ಜಾತಿ, ದನ ಇತ್ಯಾದಿಗಳ ಕುರಿತು ಜನರು ತಲೆಕಡಿಸಿಕೊಂಡಷ್ಟು ಭಾಷೆಗಳ ಸಾವಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಹೀಗೆ ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನಗಳ ಮಾತೃ ಭಾಷೆಗಳು ಇಂದು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತಗಳ ರಚನೆಯಾದಾಗ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಯಾಕೆ ಘೋಷಿಸುತ್ತಿಲ್ಲ? ಇದುವರೆಗೂ ಘೋಷಿಸಿಲ್ಲ. ಆಂಧ್ರ ಪ್ರದೇಶವು ತೆಲುಗಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು , ದಿಲ್ಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಹಾಗೆ ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ. ಕೇಂದ್ರ ಸರಕಾರವೂ ಈ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸಂಕೋಚ ಪಡುತ್ತಿದೆ. ಖಾಸಿ, ಜೈಂಟಿಯಾ, ರಾಜಸ್ಥಾನಿ, ಭೋಜಪುರಿ, ಬೃಜ್ ಮೊದಲಾದ ಅನೇಕ ಸುಂದರ ಭಾಷೆಗಳ ಕತೆಯಾದರೂ ಅಷ್ಟೆ. ಇದನ್ನು ಇನ್ನಷ್ಟು ವಿವರವಾಗಿ ಗಮನಿಸಿದರೆ ಭಾಷಾ ರಾಜಕೀಯದ ಬಗೆಗೆ ಕೆಲವು ಒಳನೋಟಗಳು ದೊರೆಯುತ್ತವೆ. ಇವಕ್ಕೆಲ್ಲ ಕಿರೀಟ ಪ್ರಾಯವಾಗಿ ಸರಕಾರ (ಮುಖ್ಯವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗಳು) ಮತ್ತು ವಿಶ್ವವಿದ್ಯಾನಿಲಯಗಳ ಆಡಳಿತಾಂಗಗಳು ಜೊತೆ ಸೇರಿಕೊಂಡು ಮಾನವಿಕಗಳನ್ನು ಇದೀಗ ‘ಅನುತ್ಪಾದಕ’ ಎಂದು ಘೋಷಿಸಲು ಸುರುಮಾಡಿವೆ. ಮಾನವಿಕಗಳನ್ನು ಶುದ್ಧ ವಿಜ್ಞಾನದೊಂದಿಗೆ ಹೋಲಿಸಿ ತಕ್ಷಣದ ಫಲಿತಾಂಶಕ್ಕಾಗಿ ಕಾಯುವ, ಯುವಕರಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋವಕಾಶ ಕಲ್ಪಿಸುವ ಇಲ್ಲವೇ ಅವರನ್ನು ವಿದೇಶಕ್ಕೆ ರಫ್ತು ಮಾಡುವ (12ನೇ ಪಂಚವಾರ್ಷಿಕ ಯೋಜನೆಯು ಕುಶಲ ಕರ್ಮಿಗಳನ್ನು 2020ನೇ ಇಸವಿಯಲ್ಲಿ ಚೀನಾ ದೇಶಕ್ಕೆ ಕಳಿಸುವ ಬಗ್ಗೆ ಉತ್ಸಾಹದಿಂದ ಮಾತಾಡುತ್ತದೆ) ಬಗ್ಗೆ ಇದೀಗ ಸರಕಾರ ಯೋಚಿಸುತ್ತಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜಗತ್ತಿಗೆ ಇವತ್ತು ಮಾನವಿಕಗಳು ಬೇಡವಾಗಿವೆ. ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಮಾನವಿಕಗಳಿಗೆ ಮಹತ್ವ ಕಡಿಮೆಯಾಗುತ್ತದೆ. ಈ ನಡುವೆ, ಇಂಥ ವಿಷಯಗಳ ಕುರಿತು ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಸರಕಾರಗಳೇ ಮರೆತಿವೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈಗ ಅಂಥ ಬೌದ್ಧಿಕತೆ ಕಳೆಗುಂದುತ್ತಿದೆ. ಸಮಕಾಲೀನ ರಾಜಕಾರಣವು ಹೀಗೆ ಮಾನವಿಕಗಳನ್ನು ಗೌಣಗೊಳಿಸುತ್ತಿರುವಾಗ ಅದನ್ನು ದಿಟ್ಟವಾಗಿ ಇದಿರಿಸುವ ಎಚ್ಚರವನ್ನೂ ಮಾನವಿಕಗಳಲ್ಲಿ ಕೆಲಸ ಮಾಡುತ್ತಿರುವ ಭಾಷಾ ಸಂಶೋಧಕರು ತೋರಿಸುತ್ತಿಲ್ಲ. ಮಾನವಿಕಗಳೇ ಪ್ರಧಾನವಾಗಿರುವ ಭಾರತದ ಹಲವು ವಿಶ್ವವಿದ್ಯಾಲಯಗಳು ಈಗ ತಮ್ಮ ಗತಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡಲಾಗಿದೆ. 2011ರ ಜನಗಣತಿಯಲ್ಲಿರುವ ಭಾಷಾ ಸಂಬಂಧಿ ವಿವರಗಳನ್ನು ಎಷ್ಟು ಜನ ಭಾಷಾ ಅಧ್ಯಾಪಕರು ಗಮನಿಸಿರಬಹುದು ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ನಿರಾಶಾದಾಯಕ ಉತ್ತರ ಬರುತ್ತದೆ. ಇಂತ ಬೆಳವಣಿಗೆಗಳ ನಡುವೆ ಅರೆ ಭಾಷೆಯಂತಹ ಸಣ್ಣ ಆದರೆ ಸುಂದರ ಭಾಷೆಯನ್ನು ಸಬಲೀಕರಣಗೊಳಿಸುವುದು ಯಾರು ಮತ್ತು ಹೇಗೆ? ಪ್ರೊ. ಕುಶಾಲಪ್ಪ ಗೌಡರು 1970ರಷ್ಟು ಹಿಂದೆ ಹಾಕಿ ಕೊಟ್ಟ ಹಾದಿಯಲ್ಲಿ ಮುಂದುವರಿಯುವುದು ಹೇಗೆ? ಇಂಥ ಪ್ರಶ್ನೆಗಳೇ ಆ ಹಿರಿಯರಿಗೆ ನಾವು ಸಲ್ಲಿಸುವ ಗೌರವವೂ ಹೌದು.

ಅರೆಭಾಷೆ- ಚಾರಿತ್ರಿಕ ಹಿನ್ನೆಲೆ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ವಿಟ್ಲ, ಮತ್ತು ಬೆಳ್ತಂಗಡಿ ಪರಿಸರದಲ್ಲಿ ಹಾಗೂ ಕೊಡಗಿನ ಭಾಗಮಂಡಲ ಪರಿಸರದಲ್ಲಿ ಪ್ರಚಲಿತದಲ್ಲಿರುವ ಅರೆಭಾಷೆಯು ಕನ್ನಡದ ಒಂದು ಸಾಮಾಜಿಕ ಉಪಭಾಷೆಯೆಂದು ಇದುವರೆಗೆ ಹೇಳುತ್ತಾ ಬರಲಾಗಿದೆ (ಕುಶಾಲಪ್ಪ ಗೌಡ 1970. ಒಂದು ನಿರ್ದಿಷ್ಟ ಪ್ರದೇಶಕ್ಕೆ ಒಳಪಟ್ಟಿದ್ದರಿಂದ ಇದನ್ನು ಪ್ರಾದೇಶಿಕ ಉಪಭಾಷೆ ಎಂದರೂ ನಡೆಯುತ್ತದೆ). ಈ ಭಾಷೆಯಲ್ಲಿ ಇಂದಿಗೂ ಕಾಣಸಿಗುವ ಕೆಲವು ವಿಶಿಷ್ಟ ಪದಗಳು ಮತ್ತು ಉಚ್ಚಾರಣೆಯು ಸುಮಾರು 1,500 ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದುವು. ಕೆಲವು ಸ್ವರಗಳು ಮತ್ತು ವ್ಯಂಜನಗಳು ಪುನಾರಚಿತ ಪ್ರಾಗ್ದ್ರಾವಿಡ ಭಾಷೆಯಲ್ಲಿದ್ದಂತೆಯೂ ಭಾಸವಾಗುತ್ತದೆ. ಹೀಗೆ ಪ್ರಾಚೀನ ಭಾಷೆಯ ಗುಣಗಳನ್ನು ಹೊಂದಿರುವ ಅರೆಭಾಷೆಯು ಈಗ ನಾವು ಮಾತಾಡುವ ರೂಪದಲ್ಲಿ ಕಾಣಿಸಿಕೊಂಡು ಹೆಚ್ಚೆಂದರೆ 500 ವರ್ಷಗಳನ್ನು ಮೀರಿರುವ ಸಾಧ್ಯತೆ ಕಡಿಮೆ. ಏಕೆಂದರೆ ಅರೆಭಾಷೆಯನ್ನು ಪ್ರಧಾನವಾಗಿ ಮಾತಾಡುವ ಗೌಡ ಸಮುದಾಯದ ಜನರು ಸುಳ್ಯ, ವಿಟ್ಲ, ಪುತ್ತೂರು, ಬೆಳ್ತಂಗಡಿ ಪರಿಸರದ ಮೂಲ ನಿವಾಸಿಗಳೇನೂ ಅಲ್ಲ. ಅವರು ಈಗಿನ ಹಾಸನ ಪರಿಸರದಲ್ಲಿರುವ ಕೆಂಚಮ್ಮನ ಹೊಸಕೋಟೆ - ಐಗೂರು ಪರಿಸರದಿಂದ ಕರಾವಳಿಯ ಕಡೆಗೆ ವಲಸೆ ಬಂದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ, ಮಂಜರಾಬಾದ್, ಮಾರನಹಳ್ಳಿ, ಗೊರೂರು, ಹೊಸಕೋಟೆ, ಕುಮಾರಿಹಳ್ಳಿ, ದೇವರಬೆಟ್ಟ, ಎಡೆಕುಮೇರಿ, ಹೆತ್ತೂರು, ಪಾಳ್ಯ, ಆಲೂರು, ಕುಂದೂರು, ಎಸಳೂರು ಮೊದಲಾದ ಪ್ರದೇಶಗಳೇ ಸುಳ್ಯ ಪರಿಸರದ ಗೌಡರಿಗೆ ಮೂಲಸ್ಥಾನ. ಅಲ್ಲಿಂದ ವಲಸೆ ಬಂದಾಗ ಇವರೆಲ್ಲ ಅಲ್ಲಿನ ದೈವಗಳಾದ ಏಳೂರು ಮುನಿಸ್ವಾಮಿ, ಕಾಲಭೈರವ, ಸಬ್ಬಮ್ಮ, ಕೆಂಚಮ್ಮ ಮೊದಲಾದ ದೈವಗಳನ್ನು ತಮ್ಮಾಂದಿಗೇ ಕರೆತಂದಿದ್ದಾರೆ. ಆ ಪ್ರದೇಶದಿಂದ ಸುಳ್ಯ ಕಡೆಗೆ ಯಾಕೆ ಗೌಡರು ವಲಸೆ ಬಂದರು ಎಂಬುದರ ವಿವರ ಈ ಪ್ರಬಂಧದ ಉದ್ದೇಶಕ್ಕೆ ಹೊರತಾದುದು. ಈ ವಲಸೆಯ ಕಾಲಘಟ್ಟವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದರೂ ಈ ವಲಸೆಯ ಕಾಲ ಘಟ್ಟವನ್ನು ಪರಿಶೀಲಿಸುವುದು ಅರೆಭಾಷೆಯ ಚರಿತ್ರೆಯನ್ನು ಬರೆಯಲು ಅನುಕೂಲವಾಗುತ್ತದೆ. ಐಗೂರು ಸೀಮೆಗೆ ಸೇರಿದ ಹೊಸಕೋಟೆಯಲ್ಲಿ ಕೆಂಚಮ್ಮ ದೇವರ ದೇವಸ್ಥಾನವಿದ್ದು ಅದು ಹೊಸಕೋಟೆ ಕೆಂಚಮ್ಮ ಎಂದು ಪ್ರಸಿದ್ಧಿ ಪಡೆದಿದೆ. ಕ್ರಿ.ಶ. 1350ರ ಸುಮಾರಿನಲ್ಲಿ ಹರಿಹರನು ಈ ದೇವಳವನ್ನು ಕಟ್ಟಿದ್ದಾನೆಂದು ಹೇಳಲಾಗಿದೆ. (ಲಕ್ಷ್ಮೀನರಸಿಂಹ ಶಾಸ್ತ್ರೀ, 1936, 59). ಈ ದೇವಸ್ಥಾನವನ್ನು ಕಟ್ಟಿದ ಆನಂತರವಷ್ಟೇ ಒಕ್ಕಲಿಗರು ಸುಳ್ಯ ಪರಿಸರಕ್ಕೆ ವಲಸೆ ಹೋಗಿರಬೇಕು ಏಕೆಂದರೆ ಸುಳ್ಯ ಸೀಮೆಯ ಗೌಡರಿಗೆ ಕಟ್ಟೆ ಮನೆಯಾದ ಕೂಜುಗೋಡಿನವರೆಗೆ ಹೊಸಕೋಟೆ ಕೆಂಚಮ್ಮನೇ ಮನೆದೇವರು. ಎಡಮಂಗಲದ ಸಮೀಪದಲ್ಲಿರುವ ಮಾಗಣಿ ಗೌಡರ ಮನೆತನ ಏನಡ್ಕದವರೆಗೂ ಕೆಂಚಮ್ಮನೇ ಕುಲದೇವರು. ಈ ಎರಡೂ ಮನೆತನದವರು ನಾಯರ್ ಬಳಿಯವರಾಗಿದ್ದು ಸುಳ್ಯ ಪರಿಸರದ ಗೌಡರಿಂದ ಪ್ರತಿಷ್ಠಿತ ಮನೆತನಗಳೆಂದು ಮಾನ್ಯತೆ ಪಡೆದಿವೆ. ಅಲ್ಲಿರುವ ಕೆಂಚಮ್ಮ ದೇವರಿಗೆ ಗೌಡರು ಭಯ ಭಕ್ತಿಯಿಂದ ಹರಕೆ ಒಪ್ಪಿಸುತ್ತಾರೆ. ಇಲ್ಲಿ ಹಣದ ರೂಪದಲ್ಲಿ ಬಿದ್ದ ಹರಕೆಯನ್ನು ಹೊಸಕೋಟೆ ಕೆಂಚಮ್ಮನಿಗೆ ವರ್ಷಕ್ಕೊಂದು ಬಾರಿ ಕಳುಹಿಸಿಕೊಡಲಾಗುತ್ತಿತ್ತು. ವಿಶೇಷ ಸಂದರ್ಭದಲ್ಲಿ ಗೌಡರು ಹೊಸಕೋಟೆ ಕೆಂಚಮ್ಮನಿಗೆ ಈಗಲೂ ನೇರ ಹರಕೆ ಹೊರುತ್ತಾರೆ. ಭೌಗೋಳಿಕವಾಗಿ ತುಂಬ ವ್ಯತ್ಯಾಸ ಇರುವ ಹೊಸಕೋಟೆ ಮತ್ತು ಸುಳ್ಯ ಪರಿಸರಕ್ಕೆ ಇಂತಹ ಧಾರ್ಮಿಕ ಸಂಬಂಧ ಇರುವುದಕ್ಕೆ ಮೂಲ ಕಾರಣ ವಲಸೆಯೇ ಆಗಿದೆ. ಕ್ರಿ.ಶ. 1350ರಲ್ಲಿ ಹೊಸಕೋಟೆ ದೇವಸ್ಥಾನ ರಚಿತವಾಗಿ, ಎಷ್ಟೋ ವರ್ಷಗಳ ಅನಂತರವಷ್ಟೇ ಈ ವಲಸೆ ಕಾರ್ಯಕ್ರಮ ನಡೆದಿರಬಹುದು. ಏಕೆಂದರೆ ಆ ದೇವರ ಪ್ರಭಾವವು ಗೌಡರ ಮೇಲೆ ಪರಿಣಾಮಕಾರಿಯಾಗಿ ಆಗಿದೆ. ಕ್ರಿ.ಶ. 1550ರಲ್ಲಿ ಸುಳ್ಯ ಸೀಮೆಯೂ, ಐಗೂರು ಸೀಮೆಯೂ ಒಟ್ಟಾಗಿಯೇ ವಿಜಯನಗರದ ಅಂಕಿತಕ್ಕೆ ಒಳಪಟ್ಟಿದ್ದರಿಂದ ಈ ವಲಸೆಗೆ ರಾಜಕೀಯ ವಿರೋಧವಿರಲಿಲ್ಲ. ಸುಳ್ಯ ಪರಿಸರದಲ್ಲಿದ್ದ ಗೌಡರ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖ ನೀಡುವ ಲಿಖಿತ ಆಧಾರವೆಂದರೆ ಕ್ರಿ.ಶ. 1683ರ ಸುಬ್ರಹ್ಮಣ್ಯದ ಶಾಸನ. ಈ ಶಾಸನದಲ್ಲಿ ಬರುವ ‘ಗಾವುಂಡು’ ಪದ ಸ್ಥಾನ ಸೂಚಕವಾಗಿರದೆ ಸ್ಪಷ್ಟವಾಗಿ ಜಾತಿ ಸೂಚಕವಾಗಿದ್ದು ಕೂಜುಗೋಡು ಕಟ್ಟೆಮನೆಯವರನ್ನು ಕುರಿತಾಗಿದೆ. ಕ್ರಿ.ಶ. 1665ರ ಸುಬ್ರಹ್ಮಣ್ಯದ ಶಾಸನದ ಪ್ರಕಾರ ಐಗೂರು ಸೀಮೆಯ ಪ್ರಮುಖ ಸ್ಥಳಗಳು ಕುಕ್ಕೆ ದೇವಳಕ್ಕೆ ಉಂಬಳಿಯಾಗಿ ದೊರಕಿದ್ದುವು. ಈ ಕಾರಣದಿಂದ ಐಗೂರು ಪ್ರಾಂತದ ಜನರು ಬಿಸಿಲೆ ಘಟ್ಟವನ್ನಿಳಿದು ಸುಬ್ರಹ್ಮಣ್ಯಕ್ಕೆ ಬಂದು ಹರಕೆ ಒಪ್ಪಿಸಲೇ ಬೇಕಾಗಿತ್ತು. ಈ ಧಾರ್ಮಿಕ ಪ್ರೇರಣೆ ಕೂಡಾ ವಲಸೆಗೆ ಕಾರಣವಾಗಿದ್ದಿರಬಹುದು. ಶಿರಾಡಿ ಭೂತದ ಪಾಡ್ದನದ ಪ್ರಕಾರ ಆ ಭೂತವು ಘಟ್ಟದಿಂದ ಇಳಿದು ಬಂಗಾಡಿ ಸೀಮೆಗೆ ಬಂದಿದೆ. ಅಲ್ಲಿ ಕಾರಣಿಕ ತೋರಿಸಿ ಗುಡಿಕಟ್ಟಿಸಿಕೊಂಡು; ದೈವ ಅಂತ ಹೇಳಿಸಿಕೊಂಡು ಕಡಬ ಮಾರ್ಗವಾಗಿ ಪಂಜ ಸಾವಿರ ಸೀಮೆಗೆ ಬಂದಿದೆ. ಪಂಜ ಸೀಮೆಯಿಂದ ಮತ್ತೆ ಸುಳ್ಯಕ್ಕೆ ದಾಟಿದೆ. ಭೂತ-ಚಲಿಸಿದ ಈ ದಾರಿಯು ಗೌಡರು ಪಸರಿಸಿದ್ದಕ್ಕೆ ದಿಕ್ಸೂಚಿಂತಿದೆ. ಐಗೂರು ಸೀಮೆಯಿಂದ ಬಂಗಾಡಿ ಸೀಮೆಗೆ ಬಂದ ಗೌಡರು ನಿಧಾನವಾಗಿ ಕಡಬ ಪರಿಸರಕ್ಕೆ ಒತ್ತರಿಸಿಕೊಂಡಿರಬಹುದು. ಆದರೆ ಏನೆಕಲ್ಲಿನಲ್ಲಿ ವಿಶೇಷ ಆರಾಧನೆಗೆ ಒಳಪಡುವ ಬಚ್ಚನಾಯ್ಕನ ಪಾಡ್ದನದಲ್ಲಿರುವ ಪ್ರಕಾರ. ಆ ಭೂತವು ಕಾಗನೂರಿನಿಂದ ಬಿಸಿಲೆ ಘಟ್ಟ ಇಳಿದು ಸುಬ್ರಹ್ಮಣ್ಯಕ್ಕೆ ಬಂದಿದ

Writer - ಡಾ. ಪುರುಷೋತ್ತಮ ಬಿಳಿಮಲೆ

contributor

Editor - ಡಾ. ಪುರುಷೋತ್ತಮ ಬಿಳಿಮಲೆ

contributor

Similar News