ಚಿಕ್ಕಮಗಳೂರು: ದೇವರಗುಡ್ಡ ರಕ್ಷಿತಾರಣ್ಯ ಅನೈತಿಕ ಚಟುವಟಿಕೆಗಳ ಆಶ್ರಯತಾಣ

Update: 2018-08-09 18:22 GMT

ಚಿಕ್ಕಮಗಳೂರು, ಆ.9: ಕಳಸ ಪಟ್ಟಣದಿಂದ ನಮ್ಮ ಮನೆಗಳಿಗೆ ಹೋಗಲು ಇದೊಂದೇ ರಸ್ತೆ ಇದೆ. ಈ ರಸ್ತೆಯಲ್ಲಿಯೇ ಇಲ್ಲಿನ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪ್ರತಿದಿನ ತಿರುಗಾಡಬೇಕು. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ರಕ್ಷಿತಾರಣ್ಯದ ಒಳಗೆ ಈ ರಸ್ತೆ ಇರುವುದರಿಂದ ಇತ್ತೀಚೆಗೆ ಈ ರಸ್ತೆ ಮೂಲಕ ತಿರುಗಾಡಲು ನಮಗೆ ಭಯವಾಗುತ್ತಿದೆ. ಏಕೆಂದರೆ ರಕ್ಷಿತಾರಣ್ಯದ ಒಳಗೆ ಯುವಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಕೆಲ ಧನಿಕರು ಇಲ್ಲಿ ಕಾರುಗಳನ್ನು ನಿಲ್ಲಿಸಿಕೊಂಡು ಹಾಡು ಹಗಲೇ ಮದ್ಯಪಾನ ಮಾಡುತ್ತಾರೆ, ಕೆಲವೊಮ್ಮೆ ಕುಡಿದ ಮತ್ತಿನಲ್ಲಿ ಚುಡಾಯಿಸುತ್ತಾರೆ. ಮದ್ಯ ಸೇವಿಸಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪೌಚ್‌ಗಳನ್ನು ಎಸೆಯುತ್ತಾರೆ. ಕೆಲ ಯುವಕರು ಅರಣ್ಯವನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಈ ರಸ್ತೆಯಲ್ಲಿ ನಮಗೆ ತಿರುಗಾಡಲು ಭಯವಾಗುತ್ತಿದೆ.

ಹೀಗೆ ಪದವಿ ಓದುತ್ತಿರುವ ಕಳಸ ಪಟ್ಟಣದಿಂದ 1ಕಿ.ಮೀ. ಅಂತರದಲ್ಲಿರುವ ದೇವರಗುಡ್ಡ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ದೇವರಗುಡ್ಡದ ವಿದ್ಯಾರ್ಥಿನಿಯೊಬ್ಬರು ವಾರ್ತಾಭಾರತಿ ಪತ್ರಿಕೆ ಬಳಿ ಅಳಲು ತೋಡಿಕೊಂಡಿದ್ದು, ಕಳಸ ವಲಯದ ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ವಿವರಿಸುತ್ತಿದ್ದಳು.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಿಂದ ಕುದುರೆಮುಖಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಪಟ್ಟಣದಿಂದ ಕೇವಲ 1 ಕಿ.ಮೀ. ದೂರದಲ್ಲಿರುವ ದೇವರಗುಡ್ಡ ರಕ್ಷಿತಾರಣ್ಯ ಅರಣ್ಯ ಇಲಾಖಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕುಡುಕ, ಕಾಮುಕರ ತಾಣವಾಗುತ್ತಿರುವುದಲ್ಲದೇ ಅರಣ್ಯದಲ್ಲಿ ಹರಡಿಕೊಂಡು ಬಿದ್ದಿರುವ ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಸಿ ಎಸೆದ ತ್ಯಾಜ್ಯಗಳು ಇಡೀ ಅರಣ್ಯದ ಸ್ವಚ್ಛಂದ ಪರಿಸರವನ್ನು ಕಸದ ತೊಟ್ಟಿಯನ್ನಾಗಿಸಿದೆ ಎಂಬುದನ್ನು ವಿದ್ಯಾರ್ಥಿನಿ ಪತ್ರಿಕೆ ಮೂಲಕ ಸಂಬಂಧಿಸಿದ ಅರಣ್ಯಾಧಿಕಾರಿಗಳು, ಗ್ರಾಪಂ ಹಾಗೂ ಪೊಲೀಸ್ ಇಲಾಖೆ ಮುಂದಿಟ್ಟಿದ್ದಾಳೆ.

ಕಳಸ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ದೇವರಗುಡ್ಡ ರಕ್ಷಿತಾರಣ್ಯ ಸ್ವಚ್ಛಂದ ಪರಿಸರಕ್ಕೆ ಹೆಸರಾಗಿದೆ. ಇಲ್ಲಿನ ಎತ್ತರದ ಗುಡ್ಡದಲ್ಲಿನ ಅಕೇಶಿಯಾ, ನೀಲಗಿರಿ ಹಾಗೂ ಕಾಡು ಮರಗಳಿಂದ ತುಂಬಿರುವ ಕಾಡು ಪರಿಸರ ಪ್ರಿಯರನ್ನು ಮಂತ್ರ ಮುಗ್ಧಗೊಳಿಸುತ್ತಿದೆ. ಮೊಲ, ಮಂಗಗಳು, ಜಿಂಕೆ, ಕಾಡು ಕುರಿ, ಕಾಡು ಹಂದಿಗಳಂತಹ ವನ್ಯಜೀವಿಗಳಿಗೆ ಈ ಅರಣ್ಯ ಆಶ್ರಯ ನೀಡಿದೆ. ಆದರೆ ಇತ್ತೀಚೆಗೆ ಈ ಕಾಡು ಕೆಲ ಧನಿಕ ಮದ್ಯ ವ್ಯಸನಿಗಳ, ಕಾಮುಕ ಯುವಕರ ಅಡ್ಡೆಯಾಗಿ ಮಾರ್ಪಡುತ್ತಿದೆ ಎಂದು ಕಳಸ ಪಟ್ಟಣದ ನಾಗರಿಕರು, ಪರಿಸರ ಪ್ರಿಯರು ಹಾಗೂ ದೇವರಗುಡ್ಡ, ಕೋಣೇಬೈಲು, ಕಾರಗದ್ದೆ, ಹಂದೆಡ್ಡು ಗ್ರಾಮಗಳ ನಿವಾಸಿಗಳು ದೂರುತ್ತಿದ್ದಾರೆ.

ಪಟ್ಟಣದ ಸುತ್ತಮುತ್ತ ಇರುವ ಕೆಲ ಧನಿಕರು ಗೌರವ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಪಟ್ಟಣದಲ್ಲಿರುವ ಮದ್ಯದ ಬಾರ್‌ಗಳಿಗೆ ಹೋಗದೇ ಅಲ್ಲಿಂದ ಪಾರ್ಸೆಲ್ ತಂದು ದೇವರಗುಡ್ಡ ರಕ್ಷಿತಾರಣ್ಯದ ಮಧ್ಯೆ ಇರುವ ರಸ್ತೆ ಬದಿಯಲ್ಲಿ ಕಾರು, ಜೀಪ್ ನಿಲ್ಲಿಸಿಕೊಂಡು ಹಾಡ ಹಗಲೇ ಮದ್ಯಪಾನ ಮಾಡುತ್ತಿದ್ದಾರೆ. ಹೀಗೆ ಮದ್ಯ ಕುಡಿದ ಬಳಿಕ ಮದ್ಯದ ಬಾಟಲಿ, ಬಿಸ್ಲೇರಿ ಬಾಟಲಿ, ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಳಸ -ಕುದುರೆಮುಖ ರಸ್ತೆಯಿಂದ ದೇವರಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ತಾಲೂಕು ಪಂಚಾಯತ್ ವತಿಯಿಂದ ನಿರ್ಮಿಸಿದ ಬಸ್ ತಂಗುದಾಣವಿದ್ದು, ಕುಡುಕರು, ಕಾಮುಕರು ಅದನ್ನು ತಮ್ಮ ಚಟಗಳಿಗೆ ಬಳಸಿಕೊಂಡು ಪಾಳು ಕೊಂಪೆಯನ್ನಾಗಿಸಿದ್ದಾರೆ. ದೇವರ ಗುಡ್ಡದ ನಿವಾಸಿಗಳು ಬಸ್ ಕಾಯಲು ನಿಲ್ದಾಣದೊಳಗೆ ಕುಳಿತುಕೊಳ್ಳಲೂ ಸಾಧ್ಯವಾಗದಂತಹ ವಾತಾವರಣ ಸದ್ಯ ನಿರ್ಮಾಣವಾಗಿದೆ. ನಿಲ್ದಾಣದ ಪಕ್ಕದ ಚರಂಡಿ ಮದ್ಯದ ಬಾಟಲಿಗಳಿಂದ ತುಂಬಿ ಹೋಗಿದೆ.

ಇನ್ನು ಪಟ್ಟಣದ ಕೆಲ ಕಾಮುಕ ಯುವಕರು ಈ ರಕ್ಷಿತಾರಣ್ಯವನ್ನು ಅನೈತಿಕ ಚಟುವಟಿಕೆಯ ಅಡ್ಡೆಯನ್ನಾಗಿಸಿಕೊಂಡಿದ್ದು, ಕಾರು, ಬೈಕ್‌ಗಳಲ್ಲಿ ಬರುವ ಇವರು ದೇವರಗುಡ್ಡ ಸುತ್ತಮುತ್ತಲಿನ ಗ್ರಾಮಗಳ ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವಂತಹ ಕೃತ್ಯಗಳಿಗೂ ಕೈ ಹಾಕುತ್ತಿದ್ದಾರೆಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಇಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಈ ಬಗ್ಗೆ ಅವರು ದಿವ್ಯ ನಿರ್ಲಕ್ಷ್ಯ ವಹಿಸಿರುವುದರಿಂದ ರಕ್ಷಿತಾರಣ್ಯ ಕುಡುಕರು, ಕಾಮುಕರ ಆಶ್ರಯ ತಾಣವಾಗಿ ಮಾರ್ಪಡುತ್ತಿದೆ ಎಂದು ದೇವರಗುಡ್ಡದ ನಿವಾಸಿಗಳು ದೂರುತ್ತಿದ್ದಾರೆ.

ಒಟ್ಟಿನಲ್ಲಿ ಅರಣ್ಯ ಸಂಪತ್ತನ್ನು ಉಳಿಸಬೇಕಾದ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸುಂದರ ಅರಣ್ಯ ಪ್ರದೇಶ ಅನೈತಿಕ ಚಟುವಟಿಕೆಗಳ ಬೀಡಾಗುತ್ತಿರುವುದು ಮಾತ್ರವಲ್ಲದೇ ರಕ್ಷಿತಾರಣ್ಯದ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿನಿಯರು ಕಿಡಿಗೇಡಿಗಳು, ಕುಡುಕರ ಹಾವಳಿಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಂಬಂಧ ಇಲ್ಲಿನ ಅರಣ್ಯ ಇಲಾಖೆ, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನಾದರೂ ಕ್ರಮವಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಕಳಸ ಪಟ್ಟಣದಿಂದ ದೇವರಗುಡ್ಡ ಸಂಪರ್ಕಕ್ಕೆ ಕೆಲ ವರ್ಷಗಳ ಹಿಂದೆ ಇಲ್ಲಿನ ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇತ್ತೀಚೆಗೆ ಮದ್ಯಪಾನ ಮಾಡುವ ಸಲುವಾಗಿ ಇಲ್ಲಿಗೆ ಕಾರು ಜೀಪುಗಳಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಇಲ್ಲಿನ ರಸ್ತೆ ಮತ್ತಷ್ಟು ಹದಗೆಟ್ಟಿದೆ. ರಕ್ಷಿತಾರಣ್ಯದಲ್ಲಿ ಪೋಲಿ ಯುವಕರ ಓಡಾಟ ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳಲು ಹಾಡ ಹಗಲೇ ಓಡಾಡಲು ಹೆದರುವಂತಾಗಿದೆ. ಸಂಬಂಧಿಸಿದವರು ರಸ್ತೆ ದುರಸ್ತಿ ಮಾಡಿಸುವುದರೊಂದಿಗೆ ಇಲ್ಲಿ ಪ್ರತಿದಿನ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗಿಳಿಯುವುದು ಅನಿವಾರ್ಯವಾಗಲಿದೆ.

-ಸುರೇಶ್ ಗೌಡ, ಕೋಣೇಬೈಲು ನಿವಾಸಿ

ಅರಣ್ಯ ಇಲಾಖೆಯವರು ಇಲ್ಲಿನ ರಕ್ಷಿತಾ ಅರಣ್ಯದಲ್ಲಿ ಬಡವರು ಮನೆ, ದನದ ಕೊಟ್ಟಿಗೆ, ಕಟ್ಟಿಗೆಗಾಗಿ ಸಣ್ಣದೊಂದು ಮರ ಕಡಿದರೂ ಕೂಡಲೇ ಓಡಿ ಬಂದು ಬಡವರನ್ನು ಗದರಿಸುತ್ತಾರೆ. ಆದರೆ ಬೇರೆ ಗ್ರಾಮಗಳ ಕುಡುಕರು ಇಲ್ಲಿನ ಬಸ್ ನಿಲ್ದಾಣ ಹಾಗೂ ಅರಣ್ಯದಲ್ಲಿ ಹಗಲು ರಾತ್ರಿ ಎನ್ನದೇ ಕುಡಿದು ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ. ವನ್ಯಜೀವಿಗಳಿಗೂ ತೊಂದರೆಯಾಗುತ್ತಿದೆ. ನಮ್ಮ ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಪೊಲೀಸರಿಗೂ ಮಾಹಿತಿ ಇದೆ. ಆದರೆ ಇದುವರೆಗೂ ಇದನ್ನು ತಡೆಯಲು ಮುಂದಾಗಿಲ್ಲ.

-ಆನಂದ್, ದೇವರಗುಡ್ಡ ನಿವಾಸಿ
 

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News