ಪ್ಲಾಸ್ಟಿಕ್ ಅಕ್ಕಿ ಎಂಬುದು ನಾನ್ಸೆನ್ಸ್!

Update: 2018-08-11 18:02 GMT

ಭಾಗ 53

ಪ್ಲಾಸ್ಟಿಕ್ ಅಕ್ಕಿ ಎಂಬ ಅಪಪ್ರಚಾರ ಸುಮಾರು ಎರಡು ವರ್ಷಗಳಿಂದೀಚೆಗೆ ಭಾರೀ ಪ್ರಮಾಣದಲ್ಲಿ ನಡೆದಿತ್ತು. ಈ ಪ್ಲಾಸ್ಟಿಕ್ ಅಕ್ಕಿ ಎಂಬುದು ನಾನ್ಸೆನ್ಸ್ ವಿಚಾರ. ಪ್ಲಾಸ್ಟಿಕ್‌ಗೆ ಕೆಜಿಗೆ 140 ರೂ. ಅಕ್ಕಿ 40 ರೂ.ಗಳಿಗೆ ಸಿಗುತ್ತದೆ. ಹಾಗಿರುವಾಗ ಯಾವ ಮೂರ್ಖನೂ ಪ್ಲಾಸ್ಟಿಕ್‌ನಿಂದ ಅಕ್ಕಿ ಮಾಡಿ ಮಾರಲು ಸಾಧ್ಯವೇ?

ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಅಸಂಬದ್ಧವಾಗಿ ಆಹಾರ ಕಲಬೆರಕೆ ಬಗ್ಗೆ ಅಪಪ್ರಚಾರವಾಗುತ್ತದೆಯೆಂದರೇ ನೋಡುಗ ಅದನ್ನು ನಿಜವೆಂದೇ ನಂಬುವಂತಹ ಪರಿಸ್ಥಿತಿ. ಪ್ಲಾಸ್ಟಿಕ್ ಅಕ್ಕಿ, ಸಿಂಥೆಟಿಕ್ ಮೊಟ್ಟೆ ಭಾರೀ ಪ್ರಚಾರವನ್ನೇ ಪಡೆದಿತ್ತು. ದುಬಾರಿಯಾದ ಪ್ಲಾಸ್ಟಿಕ್‌ನಲ್ಲಿ ಅಕ್ಕಿ ಕಾಳನ್ನು ತಯಾರಿ ಸುವಂತಹ ಪ್ರಕ್ರಿಯೆಗೆ ಸಾಕಷ್ಟು ವೆಚ್ಚವನ್ನು ಮಾಡಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಕಾರ್ಮಿಕರ ಅಗತ್ಯವೂ ಇರುವುದರಿಂದ ಪ್ಲಾಸ್ಟಿಕ್ ಅಕ್ಕಿ ಎಂಬುದು ಅಪಪ್ರಚಾರ ಮಾತ್ರ. ಅಕ್ಕಿಯನ್ನು ಬೇಯಿಸಿ, ಅದನ್ನು ಪೇಸ್ಟ್ ಮಾಡಿ ಅದಕ್ಕೆ ಒಂದು ಹನಿ ಅಯೋಡಿನ್ ಹಾಕಿ ಇದನ್ನು ಪತ್ತೆಹಚ್ಚಬಹುದು. ಆದರೆ ವಾಟ್ಸ್‌ಆ್ಯಪ್‌ಗಳಲ್ಲಿ ಬೆಂದ ಅನ್ನವನ್ನು ಉಂಡೆ ಮಾಡಿ ಅದನ್ನು ನೆಲದಲ್ಲಿ ಚೆಂಡಿನಂತೆ ಪುಟಿದೇಳುವಂತೆ ಮಾಡುವ ಚಿತ್ರಣಗಳು ವಾಟ್ಸ್‌ಆ್ಯಪ್‌ನಲ್ಲಿ ಒಂದೊಮ್ಮೆ ವೈರಲ್ ಆಗಿತ್ತು. ಇದಕ್ಕೆ ಕಾರಣ ಅಕ್ಕಿಯಲ್ಲಿರುವ ಸ್ಟ್ರಾರ್ಚ್ (ಪಿಷ್ಟ) ಇದು ಗಂಜಿಯ ರೂಪದಲ್ಲಿರುತ್ತದೆ ಮತ್ತು ಪ್ರೊಟೀನ್ಸ್. ಅದು ಜತೆ ಸೇರಿ ಅಕ್ಕಿ ಸರಿಯಾಗಿ ಬೇಯದಿದ್ದಾಗ ಅದು ಅಂಟಿನ ರೂಪ ಹೊಂದಿ ರಬ್ಬರ್‌ನಂತೆ ಪುಟಿದೇಳುತ್ತದೆ. ಸಾಮಾನ್ಯವಾಗಿ ಅನ್ನ ಬೆಂದಾಗ ಅದು ಸ್ವಲ್ಪ ಪ್ರಮಾಣದಲ್ಲಿ ಅಂಟಿನಂತಿರುತ್ತದೆ. ಇದಕ್ಕೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಕಾರಣವೇ ಹೊರತು, ಪ್ಲಾಸ್ಟಿಕ್ ಅಲ್ಲ. ಇದನ್ನು ನಾವು ಅದಾಗಲೇ ಕಾರ್ಯಕ್ರಮಗಳ ಮೂಲಕ ಜನರಿಗೆ ಮನವರಿಕೆ ಮಾಡಿದ್ದೇವೆ. ಆದರೂ ಅದನ್ನು ನಂಬದೆ ವಾಟ್ಸ್‌ಆ್ಯಪ್‌ಗಳಲ್ಲಿ ಬರುವ ಸುದ್ದಿಗಳಿಂದಲೇ ಆತಂಕ ಪಡುವವರು ಇನ್ನೂ ಇದ್ದಾರೆ. ಮೊಟ್ಟೆಯ ಬಗ್ಗೆಯೂ ಇಂತಹ ಆತಂಕ ವ್ಯಕ್ತವಾಗಿತ್ತು. ಸಾಮಾನ್ಯವಾಗಿ ಮೊಟ್ಟೆಯನ್ನು ಕೈಯಲ್ಲಿ ಹಿಡಿದು ಅಲುಗಾಡಿಸಿದರೂ ಅದರಲ್ಲಿರುವ ಹಳದಿ ಬಣ್ಣವು ಬಿಳಿ ಬಣ್ಣದೊಂದಿಗೆ ಬೆರೆಯುತ್ತದೆ. ಸಾಮಾನ್ಯ ಮೊಟ್ಟೆಯಿಂದ ಆಮ್ಲೆಟ್ ಮಾಡಿ ಅದನ್ನು ಬೆಂಕಿಗೆ ಹಿಡಿದಾಗ ಅದು ಉರಿಯುವುದಿಲ್ಲ. ಬದಲಿಗೆ ಪ್ಲಾಸ್ಟಿಕ್ ಮೊಟ್ಟೆಯಾಗಿದ್ದರೆ ಅದು ಚರಚರನೆ ಉರಿಯುತ್ತದೆ ಎಂಬ ಸುದ್ದಿಯನ್ನೂ ಹರಿಬಿಡಲಾಯಿತು. ಈ ಬಗ್ಗೆಯೂ ನಾವು ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಮಾಹಿತಿ ಒದಗಿಸಿದ್ದೇವೆ. ಪ್ಲಾಸ್ಟಿಕ್ ಮೊಟ್ಟೆ ತಯಾರಿಸುವುದು ಸುಲಭದ ಮಾತಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಇನ್ನು ಕೋಳಿಗಳಿಗೆ ಹಾರ್ಮೋನ್ ಇಂಜೆಕ್ಷನ್ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಅದು ಬಹುತೇಕವಾಗಿ ನೀರಿನ ಇಂಜೆಕ್ಷನ್ ಆಗಿರುತ್ತದೆ. ಇದರಿಂದ ಒಂದಿಷ್ಟು ಗ್ರಾಂನಷ್ಟು ತೂಕದಲ್ಲಿ ಹೆಚ್ಚುವರಿಯಾಗುತ್ತದೆ. ಇದು ಕೂಡಾ ಕಲಬೆರಕೆಯೇ. ಕೆಲವೊಂದು ಹಣ್ಣು ಹಂಪಲುಗಳಿಗೂ ಈ ಪ್ರಯೋಗ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿತ್ತು. ಅದನ್ನೂ ಅಲ್ಲಗಳೆಯಲಾಗದು. ಇದೇ ವೇಳೆ ಹಣ್ಣು ಹಂಪಲುಗಳನ್ನು ಹಣ್ಣಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತದೆ. ಸದ್ಯ ಆ ರೀತಿ ರಾಸಾಯನಿಕದ ಮೂಲಕ ಹಣ್ಣು ಮಾಗಿಸುವುದನ್ನು ನಿಷೇಧಿಸಲಾಗಿದೆ. ಸಹಜವಾಗಿಯೇ ಹಣ್ಣುಗಳನ್ನು ಹಣ್ಣಾಗಿಸಬೇಕಿದೆ.

ಇತ್ತೀಚೆಗೆ ನಿರ್ದಿಷ್ಟ ಕಂಪೆನಿಯೊಂದರ ಗೋಧಿ ಹಿಟ್ಟು ಕಲಬೆರಕೆಯಾಗಿದ್ದು, ಅದು ಪ್ಲಾಸ್ಟಿಕ್‌ನಿಂ  ಕೂಡಿದೆ ಎಂದು ಭಾರೀ ಪ್ರಚಾರ ಪಡೆಯಿತು. ಗೋಧಿ ಹಿಟ್ಟಿಗೆ ಸಾಮಾನ್ಯವಾಗಿ ನೀರು ಬೆರೆಸಿದಾಗ ಅದು ಅಂಟಾಗುತ್ತದೆ. ಅದು ಅಂಟಾಗಲು ಕಾರಣ ಅದರಲ್ಲಿರುವ ಗ್ಲುಟೆನಿನ್ ಮತ್ತು ಗ್ಲಿಯಾಡಿನ್ ಎಂಬ ಪ್ರೊಟೀನ್‌ಗಳು. ಈ ಎರಡು ಪ್ರೊಟೀನ್‌ಗಳು ಸೇರಿ ಗ್ಲುಟೇನ್ ಎಂಬ ಪ್ರೊಟೀನ್ ಆಗುತ್ತದೆ. ಇದು ನೀರಿನಲ್ಲಿ ಕರಗುವುದಿಲ್ಲ. ಗೋಧಿಯಲ್ಲಿ ಮತ್ತಿರುವುದು ಸ್ಟಾರ್ಚ್ ಮತ್ತು ಫೈಬರ್. ಗೋಧಿ ಹಿಟ್ಟನ್ನು ನೀರಿನಲ್ಲಿ ತೊಳೆಯುತ್ತಾ ಹೋದಂತೆ ಅದರ ಸ್ಟಾರ್ಚ್ ಮತ್ತು ಫೈಬರ್ ನೀರಿನೊಂದಿಗೆ ಕರಗುತ್ತದೆ. ಕೊನೆಗೆ ಉಳಿಯುವುದು ಈ ಎರಡು ಪ್ರೊಟೀನ್‌ಗಳು. ಅವುಗಳು ನೀರಿನಲ್ಲಿ ಕರಗುವುದಿಲ್ಲ. ಬದಲಾಗಿ, ಅಲ್ಕೋಹಾಲ್‌ನಲ್ಲಿ ಕರಗುತ್ತವೆ. ಇದು ಜನರಿಗೆ ಅರ್ಥ ಆಗುವುದಿಲ್ಲ. ಹಾಗಾಗಿ ಕೆಲವು ಕೆಲಸವಿಲ್ಲದವರು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ಇಂತಹ ಅಪಪ್ರಚಾರ ಮಾಡಿ ಕೆಲವೊಂದು ಬ್ರಾಂಡ್‌ಗಳ ಹೆಸರಿನೊಂದಿಗೆ ನೇರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ. ಮನೆಯಲ್ಲಿ ಮಾಡುವ ಗೋಧಿ ಹಿಟ್ಟಿನಲ್ಲೂ ಇದನ್ನು ನಾವು ಕಾಣಬಹುದು. ಸಾವಯವ ಪದಾರ್ಥಗಳು ಕೂಡಾ ಭಾರೀ ಪ್ರಚಾರಕ್ಕೆ ಕಾರಣವಾಗಿದೆ. ನಿಜ, ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಳಕೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿಯೇ ಬಳಕೆ ಮಾಡಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಂದು ರೀತಿಯ ರಾಸಾಯನಿಕಗಳ ಬಳಕೆ ಮಾಡದಿದ್ದಲ್ಲಿ ಇಳುವರಿ ಕಡಿಮೆ ಆಗುತ್ತದೆ. ಇದರಿಂದ ನಮ್ಮ ಬೇಡಿಕೆ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಉತ್ಪಾದಿಸಲು, ಬೇಡಿಕೆ ಪೂರೈಸಲು ಸಾಧ್ಯವಾಗುವುದಿಲ್ಲ. ಆಗಾಗ್ಗೆ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುವುದು ಅಗತ್ಯವಾಗಿರುತ್ತದೆ. ಆದರೆ ಸಾವಯವದಲ್ಲಿ ಅಧಿಕ ರುಚಿ ಎಂಬುದು ಮಾತ್ರ ಭ್ರಮೆ. ಆದರೆ ಆ ಭ್ರಮೆಯಿಂದ ಹೆಚ್ಚಿನ ರುಚಿಗಾಗಿ ಸಾವಯವ ಪದಾರ್ಥಗಳನ್ನು ಸೇವಿಸುವುದಾದರೆ ಅಡ್ಡಿಯಿಲ್ಲ. ಆದರೆ, ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಕಾಯಿಲೆಗಳು ಗುಣ ಆಗುತ್ತವೆ ಎಂಬುದು ಸುಳ್ಳು.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News