‘‘ನನ್ನೊಳಗೂ ಒಬ್ಬ ಕಲಾವಿದನಿದ್ದ’’

Update: 2018-08-11 18:11 GMT

ಅಂದು ಕತ್ತಲು ಕವಿಯಲು ಕಾದೆ. ಕತ್ತಲು ಕವಿಯುತ್ತಲೇ ನನ್ನ ಸೃಜನಶೀಲ ಕಲೆಯ ಕುಂಚವಾಗಿದ್ದ ಇದ್ದಿಲು ಕಡ್ಡಿಯನ್ನು ಹಿಡಿದುಕೊಂಡು ಹೋಗಿ ಆ ಬೋರ್ಡ್‌ನಲ್ಲಿ ಬರೆಯಲಾಗಿದ್ದ ‘‘ದಯಮಾಡಿ ಗೇಟಿನ ಮುಂದೆ ವಾಹನಗಳನ್ನು ನಿಲ್ಲಿಸಬೇಡಿ’’ ಎಂಬ ವಾಕ್ಯದ ಕೊನೆಯ ಎರಡು ಅಕ್ಷರಗಳನ್ನು ಅಳಿಸಿದೆ. ಆಗ ಅದು ‘ನಿಲ್ಲಿಸ’ ಎಂದಾಯಿತು. ‘ಸ’ ಕ್ಕೆ -‘ಸಿ’ ಎಂದು ಫೈನಲ್ ಟಚ್ ಕೊಟ್ಟು ಇನ್ನೇನು ಕಾಲು ಕೀಳಬೇಕೆನ್ನುವಷ್ಟರಲ್ಲಿ ಆ ಮನೆಯ ಮಾಲಕ ಬಂದೇ ಬಿಟ್ಟ. ನಾನು ತಬ್ಬಿಬ್ಬಾಗಿಬಿಟ್ಟೆ.

ಮೊನ್ನೆ ನನ್ನ ಬಾಲ್ಯದ ಗೆಳೆಯನೊಬ್ಬ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಒಂದು ಅಂಗಡಿಯ ಫಲಕದ ಚಿತ್ರ ನೋಡಿ ನನಗೆ ನನ್ನ ಬಾಲ್ಯಕಾಲದ ಒಂದೆರಡು ಚೇಷ್ಟೆಗಳು ನೆನಪಾದವು. ನನ್ನ ನೆನಪನ್ನು ಕೆದಕಿದ ವಾಟ್ಸ್‌ಆ್ಯಪ್ ಚಿತ್ರ ಅಂಗಡಿಯೊಂದರ ನಾಮ ಫಲಕ - ಟಯರ್ ಪಂಚರ್ ಮಾಡಿಕೊಡಲಾಗುವುದು

ನನ್ನ ಆರು ವರ್ಷ ಪ್ರಾಯದ ಪುಟ್ಟ ಸೋದರಳಿಯ ರಜಾದಿನಗಳಲ್ಲಿ ಮನೆಯೊಳಗೇ ಕೂತು ಟಿವಿಯಲ್ಲಿ ಕಾರ್ಟೂನ್ ನೆಟ್‌ವರ್ಕ್ ವೀಕ್ಷಿಸುವುದು, ಯೂಟ್ಯೂಬ್‌ನಲ್ಲಿ ಕಿಡ್ಸ್ ವೀಡಿಯೊ ನೋಡುತ್ತಿರುವುದು, ಮೊಬೈಲ್‌ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತಿರುವಾಗೆಲ್ಲಾ ನನಗನಿಸುತ್ತಿತ್ತು ಅಯ್ಯೋ ನನಗೆ ಇವನಂತೆ ಇಂದಿಗೂ ಬಾಲ್ಯವಿದ್ದಿದ್ದರೆ ಎಷ್ಟು ಮಂದಿಗೆ ತಂಟೆ ಕೊಟ್ಟು ಏನೆಲ್ಲಾ ಬೈಗುಳ ತಿನ್ನುತ್ತಿದ್ದೆನೋ...., ಅಮ್ಮನ ಕೈಯಿಂದ ಅದೆಷ್ಟು ಪೆಟ್ಟು ತಿನ್ನುತ್ತಿದ್ದೆನೋ.....

ಹೌದು ನಾನು ನನ್ನ ಬಾಲ್ಯವನ್ನು ಅತ್ಯಂತ ಕ್ರಿಯಾಶೀಲವಾಗಿ ಕಳೆದೆ. ನನ್ನೂರು ಬಂಟ್ವಾಳ - ಮಂಗಳೂರು ತಾಲೂಕಿನ ಗಡಿಭಾಗವಾದ ಪಜೀರು. ಆದರೂ ನಾನು ನನ್ನ ಶಾಲಾದಿನಗಳನ್ನು ಕಳೆದದ್ದು ಉಳ್ಳಾಲದ ಮಂಚಿಲದ ನನ್ನ ಅಜ್ಜಿಯ ಮನೆಯಲ್ಲಿ.....

ಕರಾವಳಿಯ ಬ್ಯಾರಿ ಮುಸ್ಲಿಮರಿಗೆಲ್ಲಾ ತಿಳಿದಿರುವಂತೆ ಉಳ್ಳಾಲದ ಬ್ಯಾರಿ ಬಾಲಕರದ್ದು ತಂಟೆಯಲ್ಲಿ ಎತ್ತಿದ ಕೈ...

ನಾನು ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ಮನೆಯ ಪಕ್ಕದ ರಸ್ತೆಯ ಕೆಲಸ ನಡೆಯುತ್ತಿತ್ತು. ಅಲ್ಲಿ ಹಾಕಲಾದ ಬೋರ್ಡ್‌ನಲ್ಲಿ ‘‘ಕಾಮಗಾರಿ ನಡೆಯುತ್ತಿದೆ, ನಿಧಾನವಾಗಿ ಚಲಿಸಿ’’ ಎಂದು ಬರೆಯಲಾಗಿತ್ತು. ನನ್ನ ಸೃಜನಶೀಲ ಮನಸ್ಸು ಅದೆಷ್ಟು ವೇಗವಾಗಿ ಓಡಿತೆಂದರೆ....

ಅಂದು ಕತ್ತಲಾಗಲು ಕಾದೆ. ಸೂರ್ಯ ಮುಳುಗಿ ಬಾನ ತುಂಬಾ ಕಾರಿರುಳು ಕವಿದಾಗ ನಾನು ನನ್ನ ಕಿಡಿಗೇಡಿ ಕೃತ್ಯಕ್ಕಿಳಿದೇ ಬಿಟ್ಟೆ... ಮನೆಯಿಂದ ಎರಡು ತುಂಡು ಇದ್ದಿಲನ್ನು ಹಿಡಿದುಕೊಂಡು ಹೋಗಿ ಕಾಮಗಾರಿ ನಡೆಯುತ್ತಿದೆ ಎಂಬ ಬೋರ್ಡ್‌ನ ಗಾರಿಯ ಮೇಲೆ ಇದ್ದಿಲಿನಲ್ಲಿ ಉಜ್ಜಿದೆ. ಕೇವಲ ಕಾಮ ಮಾತ್ರ ಉಳಿದಿತ್ತು. ಕಾರ್ಯ ಸಾಧಿಸಿದ ಖುಷಿಯಲ್ಲಿ ಮನೆಯತ್ತ ಸಾಗಿದೆ. ಮಾರನೇ ದಿನ ಬೆಳಗ್ಗೆ ಗೆಳೆಯರ ಮುಂದೆಲ್ಲಾ ಇದನ್ನು ತೋರಿಸಿ ಸಂತೋಷಪಟ್ಟೆ ‘‘ಕಾಮ...... ನಡೆಯುತ್ತಿದೆ. ನಿಧಾನವಾಗಿ ಚಲಿಸಿ’’

ಒಮ್ಮೆ ನನ್ನ ಶಾಲಾ ಸಹಪಾಠಿಗಳು ಶಿವರಾತ್ರಿಯ ಸಾಹಸಗಳ ಬಗ್ಗೆ ಹೇಳುತ್ತಿದ್ದಾಗ ನನ್ನ ಮನಸ್ಸು ಲಗಾಮು ತಪ್ಪಿದ ಕುದುರೆಯಂತಾಡತೊಡಗಿತು. ಒಂದು ಬ್ಯಾರಿ ಕಾಕನ ಬಾಡಿಗೆಗೆ ಸೈಕಲುಗಳನ್ನು ನೀಡುವ ಅಂಗಡಿಯಿತ್ತು. ಆಗ ಗಂಟೆಗೆ ಎರಡು ರೂಪಾಯಿ ಬಾಡಿಗೆ. ಒಮ್ಮೆ ನಾನು ಬಾಡಿಗೆ ಸೈಕಲ್ ತಲುಪಿಸಲು ಹತ್ತು ನಿಮಿಷ ತಡವಾಗಿದ್ದಕ್ಕೆ ನನ್ನಿಂದ ಒಂದು ರೂಪಾಯಿ ಜಾಸ್ತಿ ತೆಗೆದುಕೊಂಡಿದ್ದರು. ಏನೇ ಆಗಲಿ ಈ ಬಾರಿ ಅವರಿಗೊಂದು ಶಾಸ್ತಿ ಮಾಡಲೇಬೇಕೆಂದು ಪ್ಲಾನ್ ಹಾಕಿದೆ. ಅದೇನೂ ಶಿವರಾತ್ರಿಯ ದಿನವಲ್ಲ. ಒಂದು ರಾತ್ರಿ ಬಿಳಿ ಬಣ್ಣದ ಖಾಲಿ ಹಾಳೆಯಲ್ಲಿ ಮಾರ್ಕರ್ ಪೆನ್ನಿನಲ್ಲಿ ARRACK SHOP ಎಂದು ಬರೆದು ಅವರ ಅಂಗಡಿಯ ಬದಿಗಿರುವ ಕಂಬಕ್ಕೆ ಅಂಟಿಸಿ ಬಾಣದ ಗುರುತು ಹಾಕಿದೆ.

ಮರುದಿನ ಅದನ್ನು ನೋಡಿ ನಾನು ಅದೆಷ್ಟು ಸಂತಸಪಟ್ಟೆನೋ ನಾನೇ ಬಲ್ಲೆ. ನಾನು ಉದ್ದೇಶ ಪೂರ್ವಕವಾಗಿ ಇಂಗ್ಲಿಷಿನಲ್ಲಿ ಬರೆದಿದ್ದೆ. ಒಂದು ವೇಳೆ ಕನ್ನಡದಲ್ಲಿ ಬರೆದಿದ್ದರೆ ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯುವ ಮುನ್ನವೇ ಅದನ್ನು ಹರಿದು ಬಿಸಾಡುತ್ತಿದ್ದರು. ಆ ಕಾಕನಿಗೆ ARRACK SHOP ಎಂದು ಬರೆದರೆ ಅರ್ಥವಾಗುವುದು ಬಿಡಿ ಓದಲೂ ಬಾರದು. ಮೂರು ದಿನಗಳ ಕಾಲ ಅದು ಯಥಾಸ್ಥಿತಿಯಲ್ಲಿತ್ತು. ಅದನ್ನು ನೋಡಿ ನನ್ನಂತೆ ಅರೆಬರೆ ಇಂಗ್ಲಿಷ್ ಬಲ್ಲ ಹುಡುಗರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದರೇ ಹೊರತು ಯಾರೂ ಅವರಿಗೆ ಹೇಳಿಲ್ಲ. ಆ ಮಹತ್ಕಾರ್ಯವನ್ನು ನಾನು ಮಾಡಿದ್ದೆಂದು ನಾನು ಯಾರಿಗೂ ಹೇಳಲಿಲ್ಲ. ಹೇಳಿದ್ರೆ ವಿಷಯ ಬಾಯಿಂದ ಬಾಯಿಗೆ ಊರಿಡೀ ಹರಡಿ ನಾನು ದಂಡನೆಗೊಳಗಾಗಬೇಕಿತ್ತು.

ಕೊನೆಗೆ ಅದನ್ನು ನೋಡಿದವರೊಬ್ಬರು ಅದನ್ನು ಹರಿದೆಸೆದರು. ಅಂದು ಆ ಕಾಕ ಬಾಡಿಗೆ ಸೈಕಲ್‌ಗೆ ಹೋದ ಹುಡುಗರಿಗೆ ಹಾಕಿದ ಶಾಪ ಅಷ್ಟಿಷ್ಟಲ್ಲ.

ಒಮ್ಮೆ ಮನೆಯೊಂದರ ಕಾಂಪೌಂಡ್ ಮೇಲೆ"Stick no bills"  ಎಂದು ಬರೆದಿತ್ತು. ಅಂದು ರಾತ್ರಿ ಇದ್ದಿಲು ಕಡ್ಡಿಯಲ್ಲಿ "No" ಅಳಿಸಿಬಿಟ್ಟೆ.. ಕೇವಲ"Stick bills", ಮಾತ್ರ ಉಳಿಯಿತು...ಅರ್ಥ ಬದಲಿಸಿದ ಖುಷಿಯಲ್ಲಿ ತೇಲಾಡುತ್ತಾ ಮನೆಕಡೆ ಹೆಜ್ಜೆ ಹಾಕಿದೆ...

ಅದೊಮ್ಮೆ ಅಂಗಡಿಯೊಂದರ ಮುಂದೆ ಬಟ್ಟೆಯ ಪುಟ್ಟ ಬ್ಯಾನರಿನಲ್ಲಿ ಕೆಂಪು ಬಣ್ಣದಲ್ಲಿ ಅಂಗಡಿ ಬಾಡಿಗೆಗಿದೆ ಎಂದೂ ಅದರ ಕೆಳಗೆ ಇಂಗ್ಲಿಷಿನಲ್ಲಿ To let ಎಂದೂ ಬರೆದಿದ್ದನ್ನು ನೋಡಿ ನನ್ನ ಕ್ರಿಯಾಶೀಲ ಮನಸ್ಸು ಎಚ್ಚರಗೊಂಡಿತು.

To ಮತ್ತು let ಇದರ ಮಧ್ಯದ ಅಂತರದಲ್ಲಿ ಕೆಂಪು ಮಾರ್ಕರ್ ಪೆನ್ನಿನಲ್ಲಿ "i"  ಎಂದು ಬರೆದು ‘‘Toilet'' ಎಂದು ಮಾರ್ಪಡಿಸಿದೆ. ಆ ಕೆಲಸ ಮುಗಿಸಿದ ಬಳಿಕ ಕರ್ತವ್ಯ ಮುಗಿಸಿದ ತೃಪ್ತಿ ಸಿಕ್ಕಿತ್ತು.

ಇನ್ನೊಮ್ಮೆ ಪೊರ್ಬು ಮಾಮನ ( ಕ್ರೈಸ್ತ ಸಮುದಾಯವರೊಬ್ಬರ) ಮನೆಯ ಗೇಟಿನ ಮೇಲೆ ನೇತಾಡಿಸಿದ ಪುಟ್ಟ ಬೋರ್ಡ್ ಗಮನಿಸಿದೆ. ಅದರಲ್ಲಿ ‘‘ದಯಮಾಡಿ ಗೇಟಿನ ಮುಂದೆ ವಾಹನಗಳನ್ನು ನಿಲ್ಲಿಸಬೇಡಿ’’ ಎಂದು ಬರೆದಿತ್ತು.

ಅಂದು ಕತ್ತಲು ಕವಿಯಲು ಕಾದೆ. ಕತ್ತಲು ಕವಿಯುತ್ತಲೇ ನನ್ನ ಸೃಜನಶೀಲ ಕಲೆಯ ಕುಂಚವಾಗಿದ್ದ ಇದ್ದಿಲು ಕಡ್ಡಿಯನ್ನು ಹಿಡಿದುಕೊಂಡು ಹೋಗಿ ಆ ಬೋರ್ಡ್‌ನಲ್ಲಿ ಬರೆಯಲಾಗಿದ್ದ ‘‘ದಯಮಾಡಿ ಗೇಟಿನ ಮುಂದೆ ವಾಹನಗಳನ್ನು ನಿಲ್ಲಿಸಬೇಡಿ’’ ಎಂಬ ವಾಕ್ಯದ ಕೊನೆಯ ಎರಡು ಅಕ್ಷರಗಳನ್ನು ಅಳಿಸಿದೆ. ಆಗ ಅದು ‘ನಿಲ್ಲಿಸ’ ಎಂದಾಯಿತು. ‘ಸ’ ಕ್ಕೆ -‘ಸಿ’ ಎಂದು ಫೈನಲ್ ಟಚ್ ಕೊಟ್ಟು ಇನ್ನೇನು ಕಾಲು ಕೀಳಬೇಕೆನ್ನುವಷ್ಟರಲ್ಲಿ ಆ ಮನೆಯ ಮಾಲಕ ಬಂದೇ ಬಿಟ್ಟ. ನಾನು ತಬ್ಬಿಬ್ಬಾಗಿಬಿಟ್ಟೆ.

ಓಡಬೇಕೆನ್ನುವಷ್ಟರಲ್ಲಿ ಆತ ನನ್ನ ಕಾಲರ್ ಹಿಡಿದೇ ಬಿಟ್ಟ. ಗೇಟಿನ ಮೇಲೆ ಟಾರ್ಚ್ ಹೊಡೆದು ನೋಡಿದ. ಕೈಯಲ್ಲೇನು ತೋರಿಸು ಎಂದ. ತೋರಿಸದೇ ಅನ್ಯದಾರಿಯಿರಲಿಲ್ಲ. ಸ್ವಲ್ಪ ಹೊತ್ತು ಸರಿಯಾಗಿ ಗಮನಿಸಿದ ಬಳಿಕವಷ್ಟೇ ಆತನಿಗೆ ವಿಷಯ ತಿಳಿಯಿತು. ಎಡಗೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಕಾಲರ್ ಬಿಟ್ಟು, ಬಲಗೈಯಲ್ಲಿ ಒಂದೇಟು ಕೆನ್ನೆಗೆ ಬಾರಿಸಿದ. ಎರಡನೇ ಏಟು ಇನ್ನೇನು ಬೀಳಬೇಕೆನ್ನುವಷ್ಟರಲ್ಲಿ ಆತನ ಕೈಯಿಂದ ತಪ್ಪಿಸಿ ಎದ್ದೂ ಬಿದ್ದೂ ಓಡಿದೆ. ಆತನ ಒಂದೇ ಪೆಟ್ಟು ಸಾಕಾಯಿತು. ನನ್ನ ಕ್ರಿಯಾ ಶೀಲ ಮನಸ್ಸಿನ ಸೃಜನಶೀಲತೆ ಕುಂದಿಹೋಗಲು...

ಮುಂದೆಂದೂ ಅಂತಹ ಸಾಹಸಕ್ಕೆ ಕೈ ಹಾಕಿಲ್ಲ....

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News