ಸ್ವಾತಂತ್ರ ದಿನದಲ್ಲಿ ಪಾರತಂತ್ರದ ಅಳಲು
ಮತ್ತೊಂದು ಸ್ವಾತಂತ್ರ್ಯ ದಿನ ಬಂದಿದೆ. ಕಳೆದ ವರ್ಷದ ಇದೇ ದಿನವಾದ ಆಗಸ್ಟ್ ಹದಿನೈದರಿಂದ ಈ ಆಗಸ್ಟ್ ಹದಿನೈದರವರೆಗಿನ ನಮ್ಮ ದೇಶ ಕಳೆದ ದಿನಗಳನ್ನು ಅವಲೋಕನ ಮಾಡಿದರೆ ನಾವಿರುವ ಸ್ಥಿತಿಯ ಬಗ್ಗೆ ನಮಗೆ ಆತಂಕ ಅನುಮಾನಗಳು ಹೆಚ್ಚಾಗುತ್ತವೆಯೇ ಹೊರತು ಸ್ವಾತಂತ್ರ್ಯದ ಅನುಭವ ಆ ಗುವುದು ಬಹಳ ಕಡಿಮೆಯೇನೋ.
ಹಾಗೆ ನೋಡುವುದಾದರೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಳವಾದವು. ಮಹಿಳೆಯರ ಮೇಲಿನ ಅತ್ಯಾಚಾರ ಕಗ್ಗೊಲೆಗಳು ಹೆಚ್ಚಾದವು. ರೈತರ ಆತ್ಮಹತ್ಯೆಗಳು ಕಡಿಮೆಯಾಗದೆ ಹೆಚ್ಚುತ್ತಾ ಹೋಗುತ್ತಿವೆ. ಮಹಾದಾಯಿಯಿಂದ ಕುಡಿಯುವ ನೀರು ಸಿಗುವ ಭರವಸೆ ಇನ್ನೂ ಕೂಡ ಕಾಣುತ್ತಿಲ್ಲ. ತಮಿಳುನಾಡಿನ ತೂತ್ತುಕುಡಿಯಂತಹ ಸರಕಾರಿ ಕೊಲೆಗಳು ಹೆಚ್ಚಾಯಿತು. ಪ್ರಜಾತಾಂತ್ರಿಕ ಹಕ್ಕುಗಳು ಮೊದಲಿದ್ದುದಕ್ಕಿಂತಲೂ ಕುಗ್ಗಿಹೋದವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರಕ್ಷಣೆಗೆಂದು ಹೇಳಿಕೊಂಡು ಬಂದಿದ್ದ ಕಾಯ್ದೆ ಮತ್ತು ಮೀಸಲಾತಿಯಂತಹವುಗಳನ್ನು ಮೊದಲಿಗಿಂತಲೂ ಶಿಥಿಲಗೊಳಿಸುವ ಪ್ರಯತ್ನಗಳು ತೀವ್ರವಾದವು. ಗೋರಕ್ಷಣೆ ಇನ್ನಿತರ ನೆಪಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತಷ್ಟು ಹೆಚ್ಚಾದವು. ದಲಿತರ, ಆದಿವಾಸಿಗಳ, ಪರವಾಗಿ ದನಿಯೆತ್ತುವವರನ್ನು ಕೊಲ್ಲುವ ಮತ್ತು ದಮನಿಸುವ ಪ್ರಯತ್ನ ಅಧಿಕವಾದವು. ಮೊದಲಿದ್ದ ಆಧಾರ್ ಕಡ್ಡಾಯದ ಜೊತೆಗೆ ಜಿಎಸ್‌ಟಿ ಹೇರಿಕೆಯಾಗಿ ಸಣ್ಣ ಮತ್ತು ಮಧ್ಯಮ ವ್ಯಾಪಾರ ವಹಿವಾಟು, ಕೈಗಾರಿಕೆಗಳು ಭಾರೀ ಕುಸಿತಕ್ಕೆ ಒಳಗಾದವು. ಚಿಲ್ಲರೆ ವ್ಯಾಪಾರವೂ ಕುಸಿತ ಕಂಡಿತು. ಉದ್ಯೋಗಾವಕಾಶಗಳು ದಿನೇದಿನೇ ಕುಸಿತ ಕಾಣುತ್ತಿವೆ. ನೋಟು ರದ್ದತಿಯ ಹೊಡೆತ ಮಾಯುವ ಮುನ್ನವೇ ಇವೆಲ್ಲವೂ ಹೇರಲ್ಪಟ್ಟವು. ಕಪ್ಪುಹಣ ಬರಲಿಲ್ಲ. ಬ್ಯಾಂಕುಗಳ ನಷ್ಟ ನಿಲ್ಲಲಿಲ್ಲ. ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಾ ಹೋಗುತ್ತಿದೆ. ಜಿಡಿಪಿ ದರವೂ ಮೇಲ್ಮುಖ ಬೆಳವಣಿಗೆ ಕಾಣುತ್ತಿಲ್ಲ. ಕೇಂದ್ರಾಧಿಪತ್ಯ ಹೆಚ್ಚಾಗುತ್ತಾ ಹೋಗುತ್ತಿದೆ. ರಾಜ್ಯಗಳ ಅಧಿಕಾರ, ಒಕ್ಕೂಟ ತತ್ವ ಮೊದಲಿಗಿಂತಲೂ ಕ್ಷೀಣಿಸುತ್ತಾ ಹೋಗುತ್ತಿದೆ.
ಮಲ್ಯ, ನೀರವ್ ಮೋದಿಗಳಂತಹ ಹತ್ತಾರು ಸಾವಿರ ಕೋಟಿ ನುಂಗಿದ ಕಾರ್ಪೊರೇಟ್‌ಗಳು ಲಂಡನ್, ಪ್ಯಾರಿಸ್‌ಗಳಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಾ, ಬಂಗಲೆಗಳಲ್ಲಿ ವಜ್ರ ಪ್ಲಾಟಿನಂ ಆಭರಣಗಳನ್ನು ತೊಟ್ಟು ಐಷಾರಾಮಿ ಬಂಗಲೆಗಳಲ್ಲಿ ಬೀರು ವಿಸ್ಕಿ ಕುಡಿಯುತ್ತಾ ಅರಾಮವಾಗಿಯೇ ಇದ್ದಾರೆ. ಬಹುತೇಕ ಮಾಧ್ಯಮಗಳು ಮಾತ್ರ ಮಲ್ಯ, ನೀರವ್ ಮೋದಿಗಳನ್ನು ಕೇಂದ್ರ ಸರಕಾರ ಹಿಡಿದು ಭಾರತಕ್ಕೆ ತಂದೇ ಬಿಟ್ಟಿತು ಅನ್ನುವ ರೀತಿಯಲ್ಲಿ ಭ್ರಮೆ ಹುಟ್ಟಿಸಲು ಹೆಣಗುತ್ತಿವೆ. ಅವರೆಲ್ಲ ಪಾರಾಗಲು ಪ್ರಭುತ್ವವೇ ಸಹಾಯ ಮಾಡಿದ್ದಲ್ಲದೆ ಈಗ ಮಾಡುವ ನಾಟಕಗಳನ್ನು ಮರೆಮಾಚಲು ಬಹುತೇಕ ಮಾಧ್ಯಮಗಳು ಶ್ರಮಿಸುತ್ತಿವೆ. ಇನ್ನು ಜಿಂದಾಲ್ಗಳು ಅದಾನಿಗಳು, ಅಂಬಾನಿಗಳು ಮಾಡಿದ ಬ್ಯಾಂಕ್ ಸಾಲ ವಾಪಸ್ ಕೊಡುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಮಾಧ್ಯಮಗಳು ಹೆಚ್ಚು ದನಿಯೆತ್ತುತ್ತಿಲ್ಲ.
ಬಲು ಮುಖ್ಯವಾದ ರಕ್ಷಣಾಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರ ವನ್ನೂ ವಿದೇಶಿ ಕಾರ್ಪೊರೇಟ್ ನೇರ ಬಂಡವಾಳಕ್ಕೆ ಮುಕ್ತಗೊಳಿಸಿದ ಮೇಲೆ ದೇಶದ ಗಡಿಗಾಗಲೀ, ಸಾರ್ವಭೌಮತ್ವಕ್ಕಾಗಲೀ, ಸಂವಿಧಾನಕ್ಕಾಗಲೀ, ಕೊನೆಗೆ ಸ್ವಾತಂತ್ರ್ಯಕ್ಕಾಗಲೀ ಏನು ಬೆಲೆಯಿದೆ ಎನ್ನುವ ಚರ್ಚೆ ಮಾಧ್ಯಮಗಳಲ್ಲಿ ನಡೆಯುವುದೇ ಇಲ್ಲ.
ದೇಶವನ್ನು ಪೂರ್ತಿಯಾಗಿ ಕಾರ್ಪೊರೇಟ್‌ಬೆಂಬಲಿತ ಶಕ್ತಿಗಳು ಆಕ್ರಮಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ದೇಶದ ಪ್ರಜೆಗಳಿಗೆ ಮೊದಲಿದ್ದ ಕೆಲವು ಸಂವಿಧಾನದತ್ತ ಹಕ್ಕುಗಳು, ರಕ್ಷಣೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ದೇಶದ ಸಂವಿಧಾನಕ್ಕೆ ಬೆಲೆ ಸಿಗಬೇಕೆಂದು ನಿರೀಕ್ಷಿಸಲು ಸಾಧ್ಯವೇ?
ಸಂವಿಧಾನದ ಬಗ್ಗೆ ಗೌರವವಿರುವ ದೇಶವಾಸಿಗಳು ಈಗ ಮಾಡಬೇಕಾದ ತುರ್ತು ಕೆಲಸ ದೇಶವನ್ನು ಕಾರ್ಪೊರೇಟ್ ಬೆಂಬಲಿತ ಶಕ್ತಿಗಳಿಂದ ಬಿಡಿಸಿ ಸಂವಿಧಾನವನ್ನು ನಿಜವಾದ ಪ್ರಜಾಪ್ರಭುತ್ವದನ್ವಯ ಜಾರಿಗೊಳಿಸಬೇಕೆಂದು ಹಕ್ಕೊತ್ತಾಯ ಮತ್ತು ಅದಕ್ಕಾಗಿನ ಹೋರಾಟ ವಾಗಿದೆ. ದೇಶದ ಎಲ್ಲಾ ಕ್ಷೇತ್ರಗಳು, ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿರುವ ಕಾರ್ಪೊರೇಟ್ ಬೆಂಬಲಿತ ಶಕ್ತಿಗಳಿಂದ ನಮ್ಮ ದೇಶವನ್ನು ಬಿಡಿಸಿಕೊಳ್ಳದಿದ್ದರೆ ಸಂವಿಧಾನವನ್ನು ಉಳಿಸುವುದಾಗಲೀ ಅದರ ಆಶಯಗಳನ್ನು ಜಾರಿಗೊಳಿುವುದಾಗಲೀ ಸಾಧ್ಯವಾಗುತ್ತದೆಯೇ?
ಆಳುವ ಶಕ್ತಿಗಳು ಫ್ಯಾಶಿಸ್ಟ್ ನಿರಂಕುಶಾಧಿಕಾರವನ್ನು ಹೇರಲು ದಾಪುಗಾಲಿಡುತ್ತಾ ಇಡೀ ದೇಶದ ಜನರನ್ನು ತಮ್ಮ ಖೆಡ್ಡಾಕ್ಕೆ ಬೀಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದನ್ನು ಸಾಧಿಸಲು ಅವರು ಕಾರ್ಪೊರೇಟ್ ನೇತೃತ್ವದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾದ ತಂತ್ರ ಕುತಂತ್ರಗಳಿಂದ ಹೊರಟಿದ್ದಾರೆ. ಈ ದೇಶದಲ್ಲಿ ಬಹುಸಂಖ್ಯಾತರಾಗಿರುವ ದಲಿತರಿಗೆ ಆದಿವಾಸಿಗಳಿಗೆ, ಮಹಿಳೆಯರಿಗೆ, ಮುಸ್ಲಿಂ ಅಲ್ಪಸಂಖ್ಯಾತರಿಗೆ ಇನ್ನಿತರ ಬಡವರಿಗೆ ಕನಿಷ್ಠ ಬದುಕಲು ಕೂಡ ಸ್ವಾತಂತ್ರ್ಯವಿಲ್ಲದಿರುವಾಗ ಸ್ವಾತಂತ್ರ ದಿನಕ್ಕೆ ಅರ್ಥ ಬರಲು ಸಾಧ್ಯವೇ?
ಈ ಎಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಕಂಡುಹಿಡಿಯುವ ಪ್ರಯತ್ನ ಸ್ವಾತಂತ್ರ್ಯ ದಿನವೆಂದು ಆಚರಿಸಿಕೊಳ್ಳುವ ಈ ಸಂದರ್ಭದಲ್ಲಾದರೂ ನಾವು ಮಾಡಬೇಡವೇ.?