ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಟಿಕೆಟ್ ಘೋಷಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ
#ಯಡಿಯೂರಪ್ಪ, ರಾಘವೇಂದ್ರಗೆ ದುಂಬಾಲು ಬಿದ್ದ ಬೆಂಬಲಿಗರು
ಶಿವಮೊಗ್ಗ, ಆ. 15: ಮಹಾನಗರ ಪಾಲಿಕೆಯ 35 ವಾರ್ಡ್‍ಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸುತ್ತಿದ್ದಂತೆ, ಬಿಜೆಪಿ ಪಾಳೇಯದಲ್ಲಿ ಬಂಡಾಯ ಭುಗಿಲೆದಿದ್ದಿದ್ದು, ಭಿನ್ನಮತ ಸ್ಪೋಟಿಸಿದೆ. ಹಲವು ವಾರ್ಡ್‍ಗಳಲ್ಲಿ ಬಿಜೆಪಿಗೆ ಬಂಡಾಯಗಾರರು ಎದುರಾಗಿದ್ದಾರೆ. ಇದು ಪಕ್ಷದ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಭಿನ್ನರ ಕೋಪ ಶಮನಕ್ಕೆ ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿಯ ಬಣ ರಾಜಕೀಯವು ತೀವ್ರಗೊಳ್ಳಲಾರಂಭಿಸಿದೆ. ಟಿಕೆಟ್ ಹಂಚಿಕೆಯಲ್ಲಿ ಕ್ಷೇತ್ರದ ಶಾಸಕ ಈಶ್ವರಪ್ಪ ಬೆಂಬಲಿಗರಿಗೆ ಸಿಂಹಪಾಲು ಸಿಕ್ಕಿದ್ದು, ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಆರೋಪ ಕೂಡ ಬಿ.ಎಸ್.ವೈ. ಬಣದವರದ್ದಾಗಿದೆ.
ಈಗಾಗಲೇ ಬಿ.ಎಸ್.ವೈ ಹಾಗೂ ರಾಘವೇಂದ್ರರೊಂದಿಗೆ ಟಿಕೆಟ್ ವಂಚಿತ ಬೆಂಬಲಿಗರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಿ.ಎಸ್.ವೈ. ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಲ ವಾರ್ಡ್‍ಗಳ ಅಭ್ಯರ್ಥಿಗಳ ಬದಲಾವಣೆಗೆ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಈಶ್ವರಪ್ಪ ಬಣವು ಯಾವುದೇ ಒತ್ತಡಕ್ಕೆ ಮಣಿಯದಿರುವ ನಿರ್ಧಾರ ಕೈಗೊಂಡಿದೆ. ಎಷ್ಟೆ ಒತ್ತಡ ಎದುರಾದರೂ, ಪ್ರಸ್ತುತ ಘೋಷಣೆಯಾಗಿರುವ ಅಭ್ಯರ್ಥಿಗಳನ್ನು ಬದಲಾಯಿಸದಿರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ತಂತ್ರ: ಕಳೆದ ವಿಧಾನಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಹಾಗೂ ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂದರ್ಭದಲ್ಲಿ ಶಿವಮೊಗ್ಗ ಬಿಜೆಪಿ ಪಾಳೇಯದಲ್ಲಿ ಉಂಟಾದ ಗೊಂದಲದ ವೇಳೆ, ತಮ್ಮ ವಿರುದ್ಧ ತಿರುಗಿಬಿದ್ದಿದ್ದ ಹಲವು ಟಿಕೆಟ್ ಆಕಾಂಕ್ಷಿಗಳನ್ನು ದೂರವಿಡುವಲ್ಲಿ ಕೆ.ಎಸ್.ಇ ಯಶಸ್ವಿಯಾಗಿದ್ದಾರೆ. ವಿರೋಧಿ ಪಾಳೇಯದವರು ಕಣಕ್ಕಿಳಿಯಲು ಯತ್ನಿಸುತ್ತಿದ್ದ ವಾರ್ಡ್‍ಗಳಲ್ಲಿ ತಮ್ಮ ಬೆಂಬಲಿಗರಿಗೆ, ಪಕ್ಷ ನಿಷ್ಠ, ಸಂಘಪರಿವಾರ ಹಿನ್ನೆಲೆಯವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಿಕೆಟ್ ಸಿಕ್ಕೇ ಸಿಗುವ ನಿರೀಕ್ಷೆಯಲ್ಲಿದ್ದ ಬಿ.ಎಸ್.ವೈ. ಬಣದ ಹಲವು ನಾಯಕರಿಗೆ, ಕೆ.ಎಸ್.ಇ. ತಂತ್ರಗಾರಿಕೆಗೆ ಬೆಸ್ತು ಬೀಳುವಂತೆ ಮಾಡಿದೆ. ಕೊನೆಯ ಕ್ಷಣದ ಪ್ರಯತ್ನವಾಗಿ ಬಿ.ಎಸ್.ವೈ, ಬಿ.ವೈ.ರಾಘವೇಂದ್ರರಿಗೆ ದೂರು ಸಲ್ಲಿಸಿದ್ದಾರೆ. ಪ್ರಸ್ತುತ ಘೋಷಿಸಲಾಗಿರುವ ವಾರ್ಡ್‍ವಾರು ಅಭ್ಯರ್ಥಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮತ್ತೊಂದೆಡೆ ಪ್ರಸ್ತುತ ಘೋಷಿಸಲಾಗಿರುವ ಅಭ್ಯರ್ಥಿಗಳ ಪಟ್ಟಿಗೆ, ಸ್ಥಳೀಯ ಸಂಘ-ಪರಿವಾರದ ನಾಯಕರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ಕೆ.ಎಸ್.ಇ.ಗೆ ಆನೆಬಲ ಬಂದಂತಾಗಿದೆ. ಈ ಕಾರಣದಿಂದಲೇ ಬಿ.ಎಸ್.ವೈ. ಬಣದಿಂದ ಎಷ್ಟೆ ಒತ್ತಡ ಎದುರಾದರೂ ಅಭ್ಯರ್ಥಿಗಳ ಪಟ್ಟಿ ಪರಿಷ್ಕರಿಸದಿರುವ ನಿಲುವು ತಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ನಡೆ ನಿಗೂಢ: ಬೆಂಬಲಿಗರಿಗೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ಸಿಗದಿರುವ ವಿಷಯದ ಕುರಿತಂತೆ, ಬಿ.ಎಸ್.ವೈ ಹಾಗೂ ಬಿ.ವೈ.ಆರ್. ನಡೆ ಏನೆಂಬುವುದು ಸಂಪೂರ್ಣ ನಿಗೂಢವಾಗಿದೆ. ಕೆ.ಎಸ್.ಇ. ಕಾರ್ಯತಂತ್ರಕ್ಕೆ ಯಾವ ರೀತಿ ಪ್ರತಿತಂತ್ರ ರೂಪಿಸಲಿದ್ದಾರೆ ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಕಾಂಗ್ರೆಸ್-ಜೆಡಿಎಸ್‍ನಲ್ಲಿಯೂ ಇದೇ ಸ್ಥಿತಿ!
ಬಿಜೆಪಿ ಪಕ್ಷ ಎಲ್ಲ ವಾರ್ಡ್‍ಗಳಿಗೂ ಏಕಕಾಲದಲ್ಲಿಯೇ ಟಿಕೆಟ್ ಪ್ರಕಟಿಸಿ, ರಣಕಹಳೆ ಮೊಳಗಿಸಿದೆ. ಪಟ್ಟಿ ಪ್ರಕಟಿಸಿದ ಬೆನ್ನಲ್ಲೆ, ಟಿಕೆಟ್ ವಂಚಿತರ ಅಸಮಾಧಾನದ ಹೊಗೆಯೂ ಏಳಲಾರಂಭಿಸಿದೆ. ಈ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಇನ್ನಷ್ಟೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕಾಗಿದೆ. ಇನ್ನೆರೆಡು ದಿನಗಳಲ್ಲಿ ಈ ಪಕ್ಷಗಳ ಹುರಿಯಾಳುಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಈ ಪಕ್ಷಗಳಲ್ಲಿಯೂ ಸ್ಪರ್ಧಾಳುಗಳ ಸಂಖ್ಯೆ ದುಪ್ಪಟ್ಟಿದೆ. ಅಧಿಕೃತ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಬಂಡಾಯ ಭುಗಿಲೇಳುವ ಸಾಧ್ಯತೆಗಳು ಕಂಡುಬರುತ್ತಿವೆ. ಈ ಕಾರಣದಿಂದಲೇ ಎರಡು ಪಕ್ಷಗಳ ನಾಯಕರು ನಾಮಪತ್ರ ಸಲ್ಲಿಕೆಗೆ ಕೆಲ ದಿನಗಳಿರುವಂತೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ನಿರ್ಧರಿಸಿದ್ದಾರೆಂಬ ಮಾಹಿತಿಗಳು ಕೇಳಿಬರುತ್ತಿವೆ