ಸ್ಕೇಟಿಂಗ್ ಲೋಕದ ಬಾಲ ಪ್ರತಿಭೆ ಫರಾಝ್!

Update: 2018-08-19 12:37 GMT

ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಸರ್ರನೆ ಮಿಂಚಿನಂತೆ ಸಾಗುವ ಸ್ಕೇಟಿಂಗ್ ಕ್ರೀಡೆ ದ.ಕ. ಜಿಲ್ಲೆಯ ಪಾಲಿಗೆ ಅಪರೂಪದ ಕ್ರೀಡೆ. ಹಾಗಿದ್ದರೂ ಈ ಕ್ಷೇತ್ರದಲ್ಲಿ ಈಗಾಗಲೇ ಜಿಲ್ಲೆಯ ಸಾಕಷ್ಟು ಪ್ರತಿಭೆಗಳು ರಾಷ್ಟ್ರ ಮಾತ್ರವಲ್ಲದೆ ಅಂತರ್‌ರಾಷ್ಟ್ರೀಯವಾಗಿಯೂ ಹೆಸರು ಮಾಡಿವೆ. ಅವರಲ್ಲೊಬ್ಬಾತ ನಮ್ಮ ಉದಯೋನ್ಮುಖ, ಬಾಲಪ್ರತಿಭೆ ಮುಹಮ್ಮದ್ ಫರಾಝ್ ಅಲಿ.

ವಿಶೇಷವೆಂದರೆ ಈತ ತನ್ನ ಏಳೂವರೆ ಪ್ರಾಯದಲ್ಲೇ ರೋಲರ್ ಸ್ಕೇಟಿಂಗ್ ವಿಭಾಗದಲ್ಲಿ 20 ಚಿನ್ನದ ಪದಕಗಳು, ಏಳು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಬೆಳಗಾಂನಲ್ಲಿ ಕಳೆದ ಮೇ 25ರಿಂದ 27 ರವರೆಗೆ ನಡೆದ 8ನೆ ದಿ. ಶ್ರೀ ನಾರಾಯಣ್ ಕಸಟ್ ಸ್ಮಾರಕ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1 ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ 2017ರ ಅಕ್ಟೋಬರ್ 24ರಂದು ಬೆಳಗಾಂನಲ್ಲಿ ನಡೆದ ‘ಲಾಂಗೆಸ್ಟ್ ಬಿಸ್ಕೆಟ್ (ಕುಕಿ)’ ಡಂಕಿಂಗ್ ರಿಲೇಯಲ್ಲಿ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿತ್ತು. ಈ ತಂಡದ 395 ಸ್ಪರ್ಧಿಗಳಲ್ಲಿ ಫರಾಝ್‌ಕೂಡಾ ಭಾಗವಹಿಸಿ ಗಿನ್ನೆಸ್ ದಾಖಲೆಯ ಭಾಗವಾಗಿದ್ದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಚಾರ.
ತಿರುವನಂತಪುರದಲ್ಲಿ 2018ರ ಜನವರಿ 19ರಿಂದ 21ರವರೆಗೆ ನಡೆದ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2017ರಲ್ಲಿ ಫರಾಝ್ ಒಂದು ಚಿನ್ನ, ಒಂದು ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರ ಮಟ್ಟದ ಮುಕ್ತ ಸ್ಕೇಟಿಂಗ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.
‘‘ಅಂದ ಹಾಗೆ, ಫರಾಝ್ ಪ್ರಸ್ತುತ 3ನೆ ತರಗತಿ ವಿದ್ಯಾರ್ಥಿ. ಆತನಿಗೆ ಮುಂದಿನ ಅಕ್ಟೋಬರ್ ತಿಂಗಳಿಗೆ 8 ವರ್ಷ ಪೂರ್ಣವಾಗಲಿದೆ. ಹಾಗಾಗಿ ಆತನಿಗೆ ಸದ್ಯ ರಾಷ್ಟ್ರ ಮಟ್ಟದ ಮುಕ್ತ ಸ್ಪರ್ಧೆಗಳಲ್ಲಿ ಮಾತ್ರವೇ ಅವಕಾಶ ಲಭ್ಯ’’ ಎಂದು ಫರಾಝ್ ತಂದೆ ಉಮರ್ ಫಾರೂಕ್ ಹೇಳುತ್ತಾರೆ.
ಮಂಗಳೂರಿನಲ್ಲಿ ವಾಸ್ತವ್ಯವಿರುವ ಉಮ್ಮರ್ ಫಾರೂಕ್ ನಗರದಲ್ಲಿ ಮೊಬೈಲ್ ಶಾಪೊಂದನ್ನು ನಡೆಸುತ್ತಿದ್ದಾರೆ. ಸುಮಾರು ಐದರ ಹರೆಯದಲ್ಲಿ ಮಗ ಮೊಬೈಲ್‌ಗೆ ಆಕರ್ಷಿತನಾಗಿದ್ದನ್ನು ಕಂಡು, ಆತನ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಸಮೀಪದ ಸ್ಕೇಟಿಂಗ್ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ಅಲ್ಲಿ ಆತನ ಆಸಕ್ತಿಯನ್ನು ಕಂಡು ಆತನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಆತ ಸ್ಕೇಟಿಂಗ್ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಲ್ಲ ಎಂಬ ಸ್ನೇಹಿತರೊಬ್ಬರ ಮಾತಿನಂತೆ ಫರಾಝ್‌ಗೆ ಸ್ಕೇಟಿಂಗ್ ಬಗ್ಗೆ ಅತ್ಯುತ್ತಮ ತರಬೇತು ನೀಡಲು ಉಮರ್ ಫಾರೂಕ್ ನಿರ್ಧರಿಸಿದರು. ಪ್ರಸ್ತುತ ಫರಾಝ್ ಮಂಗಳೂರಿನ ಖ್ಯಾತ ಸ್ಕೇಟಿಂಗ್ ತರಬೇತುದಾರರಾದ ಮೋಹನ್‌ದಾಸ್ ಕೆ. ಮತ್ತು ಜಯರಾಜ್ ಕುಕ್ಯಾನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.


 ‘‘ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಫರಾಝ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾನೆ. ಆತನ ಆಸಕ್ತಿ ಕಂಡು ನಾವು ಆತನಿಗೆ ಸ್ಕೇಟಿಂಗ್‌ನಲ್ಲಿ ಹೆಚ್ಚಿನ ತರಬೇತಿ ನೀಡಲು ಮುಂದಾದೆವು. ಆತ ನಮ್ಮ ನಿರೀಕ್ಷೆಯನ್ನೂ ಮೀರಿ ಮುನ್ನಡೆಯುತ್ತಿದ್ದಾನೆ. ನಮಗೂ ಖುಷಿ ಇದೆ. ಸ್ಕೇಟಿಂಗ್ ಜತೆ ಆತ ಪಠ್ಯ ಚಟುವಟಿಕೆಯಲ್ಲೂ ಆಸಕ್ತಿ ಹೊಂದಿದ್ದಾನೆ. ನೀರುಮಾರ್ಗದ ಪ್ರೆಸಿಡೆನ್ಸಿ ಶಾಲೆಯಲ್ಲಿ ಫರಾಝ್ ಕಲಿಯುತ್ತಿದ್ದು, ಅಲ್ಲಿಯೂ ಶಾಲೆಯ ದೈಹಿಕ ಶಿಕ್ಷಕರಾದ ದೀಕ್ಷಿತ್ ಹಾಗೂ ರಾಜ್‌ಪಾಲ್‌ರವರು ಸ್ಕೇಟಿಂಗ್ ಬಗ್ಗೆ ವಿಶೇಷ ತರಬೇತಿಯನ್ನು ನೀಡುತ್ತಾರೆ. ಇದಲ್ಲದೆ ನಗರದ ‘ಹೈ ಪ್ಲೈಯರ್’ ಕ್ಲಬ್‌ನಲ್ಲಿ ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಸ್ಕೇಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾನೆ’’ ಎಂದು ಉಮರ್ ಫಾರೂಕ್ ಹೇಳುತ್ತಾರೆ. ಫರಾಝ್ ತಾಯಿ ಝರೀನಾ ಗೃಹಿಣಿಯಾಗಿದ್ದು, ಶಾಲೆಯಿಂದ ಮನೆಗೆ ಬರುವ ಮಗನ ಆಟ ಪಾಠ, ವಿರಾಮದ ಬಳಿಕ ಆತನನ್ನು ಸ್ಕೇಟಿಂಗ್ ತರಬೇತಿಗೆ ಸಿದ್ಧಗೊಳಿಸುತ್ತಾರೆ. ಬೆಳಗ್ಗೆಯೂ ಈ ಪರಿಪಾಠ ನಡೆಯುತ್ತಿದೆ.

‘‘ಸ್ಕೇಟಿಂಗ್ ಒಂದು ಮೋಜಿನ ಕ್ರೀಡೆ. ಹಾಗಾಗಿ ಅದು ನನಗಿಷ್ಟ. ಸ್ಕೇಟಿಂಗ್‌ನಲ್ಲಿ ಒಲಿಂಪಿಕ್‌ನಲ್ಲಿ ಸಾಧನೆ ಮಾಡಬೇಕು’’ ಎಂದು ಹೇಳುವ ಫರಾಝ್‌ಗೆ ಸ್ಕೇಟಿಂಗ್ ಹೊರತುಪಡಿಸಿ ಫುಟ್ಬಾಲ್, ಕ್ರಿಕೆಟ್ ಕೂಡಾ ಇಷ್ಟವಂತೆ.
6ರಿಂದ 8 ವರ್ಷದೊಳಗಿನ ಮಕ್ಕಳ ಸ್ಕೇಟಿಂಗ್ ವೈಯಕ್ತಿಕ ವಿಭಾಗದಲ್ಲಿ ಕರ್ನಾಟಕ ರಾಜ್ಯದ ನಂ.1 ಆಟಗಾರ ಎಂಬ ಹೆಗ್ಗಳಿಕೆಯೂ ಫರಾಝ್‌ಗಿದೆ. ಅಂತರ್ ಶಾಲಾ ವಿಭಾಗ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಲವಾರು ಪಂದ್ಯಾಟಗಳಲ್ಲಿ ಪ್ರಶಸ್ತಿ ಪಡೆದಿರುವ ಫರಾಝ್, 2016ರ ಫೆಬ್ರವರಿ ತಿಂಗಳಲ್ಲಿ ನಡೆದ ಅಂತರ್ ಶಾಲಾ ಸ್ಕೇಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಸ್ಕೇಟಿಂಗ್‌ನಲ್ಲಿ ದಕ ಬೇಟೆಯನ್ನು ಆರಂಭಿಸಿದ್ದರು.
ಬಳಿಕ 2017ರ ಜುಲೈ ತಿಂಗಳಲ್ಲಿ ಪ್ರಥಮ ರಾಷ್ಟ್ರೀಯ ಇಂಡೋರ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಲ್ಳಿ ಾಗೂ ಕಂಚಿನ ಪದಕ ಪಡೆದಿದ್ದರು.
2017ರ ಸೆಪ್ಟಂಬರ್ ತಿಂಗಳಲ್ಲಿ ಗೋವಾದಲ್ಲಿ ನಡೆದ 23ನೇ ರಾಷ್ಟ್ರೀಯ ರೋಲರ್ ರಿಲೇ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ ಹಾಗೂ 1 ಬೆಳ್ಳಿಯ ಪದಕ ಪಡೆದು ಮಂಗಳೂರಿಗೆ ಹೆಸರು ತಂದಿದ್ದರು ಫರಾಝ್. 2017ರ ಅಕ್ಟೋಬರ್‌ನಲ್ಲಿ ಕೋಝಿಕೋಡ್‌ನಲ್ಲಿ ಜರುಗಿದ 5ನೆ ಎಫ್‌ಆರ್.ಎಸ್.ಐ. ಮಲಬಾರ್ ಮೀಟ್‌ನಲ್ಲಿ 2 ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಪಡೆದು ಪದಕಗಳ ಬೇಟೆ ಯನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರೆ.
ಲಿಂಬೋ ಸ್ಕೇಟಿಂಗ್‌ನಲ್ಲೂ ತರಬೇತಿ
ಸ್ಕೇಟಿಂಗ್‌ನ ವಿಶೇಷ ವಿಭಾಗ ಲಿಂಬೋ ಸ್ಕೇಟಿಂಗ್. ಸ್ಕೇಟಿಂಗ್ ಹಾಕಿದ ಎರಡೂ ಕಾಲುಗಳನ್ನೂ 180ಡಿಗ್ರಿಗೆ ಅಗಲೀಕರಿಸಿಕೊಂಡು ಸಂಪೂರ್ಣ ದೇಹವನ್ನು ಮುಂದಕ್ಕೆ ಬಾಗಿಸಿಕೊಂಡು ದೇಹದ ಯಾವುದೇ ಭಾಗವನ್ನು ನೆಲಕ್ಕೆ ತಾಗದಂತೆ ಅತಿ ಕಡಿದಾದ ಎತ್ತರದಲ್ಲಿ ಸಾಗುವುದನ್ನು ಲಿಂಬೋ ಸ್ಕೇಟಿಂಗ್ ಅಥವಾ ರೋಲರ್ ಲಿಂಬೋ ಎನ್ನಲಾಗುತ್ತದೆ. ಸ್ಕೇಟಿಂಗ್‌ನಲ್ಲಿ ಇದು ಅತ್ಯಂತ ಅಪರೂಪ ಹಾಗೂ ಅತ್ಯಂತ ತ್ರಾಸದಾಯಕ ವಿಭಾಗವೆಂದೂ ಪರಿಗಣಿಸಲಾಗುತ್ತದೆ. ಅಂತಹ ಲಿಂಬೋ ಸ್ಕೇಟಿಂಗ್‌ನಲ್ಲಿಯೂ ಮುಹಮ್ಮದ್ ಫರಾಝ್ ತರಬೇತು ಹೊಂದುತ್ತಿದ್ದಾರೆ.
ತಾನೊಬ್ಬ ಅಪರೂಪದ ಸ್ಕೇಟರ್ ಆಗಬೇಕೆಂಬ ಕನಸು ಹೊತ್ತಿರುವ ಫರಾಝ್ ನೀರುಮಾರ್ಗದ ಪ್ರೆಸಿಡೆನ್ಸಿ ಶಾಲೆಯಲ್ಲಿ 3ನೆ ತರಗತಿಯಲ್ಲಿ ಕಲಿಯುತ್ತಿದ್ದು, ಶಾಲೆಯಿಂದಲೂ ಈತನಿಗೆ ಅತ್ಯುತ್ತಮ ಪ್ರೋತ್ಸಾಹ ಸಿಗುತ್ತಿದೆ. ಅತ್ಯುತ್ತಮ ತರಬೇತುದಾರರು, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯ ಪ್ರೋತ್ಸಾಹದಿಂದಾಗಿಯೇ ಆತ ಕಳೆದ ಎರಡೂವರೆ ವರ್ಷದಲ್ಲಿಯೇ ಇಷ್ಟೊಂದು ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಫರಾಝ್ ಪೋಷಕರು. 

Full View

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News

ಜಗದಗಲ
ಜಗ ದಗಲ