ಮಸ್ತಕವ ಮುಟ್ಟಿ ನೋಡಿದಡೆ

Update: 2018-08-21 08:49 GMT

ಮಸ್ತಕವ ಮುಟ್ಟಿ ನೋಡಿದಡೆ,

ಮನೋಹರದಳಿವು ಕಾಣ ಬಂದಿತ್ತು!

ಮುಖಮಂಡಲವ ಮುಟ್ಟಿ ನೋಡಿದಡೆ,

ಮೂರ್ತಿಯ ಅಳಿವು ಕಾಣಬಂದಿತ್ತು!

ಕೊರಳ ಮುಟ್ಟಿ ನೋಡಿದಡೆ,

ಗರಳಧರನ ಇರವು ಕಾಣ ಬಂದಿತ್ತು!

ತೋಳುಗಳ ಮುಟ್ಟಿ ನೋಡಿದಡೆ,

ಶಿವನಪ್ಪುಗೆ ಕಾಣಬಂದಿತ್ತು!

ಉರಸ್ಥಲವ ಮುಟ್ಟಿ ನೋಡಿದಡೆ,

ಪರಸ್ಥಲದಂಗಲೇಪ ಕಾಣ ಬಂದಿತ್ತು!

ಬಸಿರ ಮುಟ್ಟಿ ನೋಡಿದಡೆ,

ಬ್ರಹ್ಮಾಂಡವ ಕಾಣಬಂದಿತ್ತು!

ಗುಹ್ಯವ ಮುಟ್ಟಿ ನೋಡಿದಡೆ,

ಕಾಮದಹನ ಕಾಣ ಬಂದಿತ್ತು!

ಮಹಾಲಿಂಗ ತ್ರಿಪುರಾಂತಕದೇವಾ,

ಮಹಾದೇವಿಯಕ್ಕನ ನಿಲವನರಿಯದೆ ಅಳುಪಿ ಕೆಟ್ಟೆನು.

                            -ಕಿನ್ನರಿ ಬ್ರಹ್ಮಯ್ಯ

ಆಂಧ್ರಪ್ರದೇಶದ ಪೊಡೂರು ಗ್ರಾಮದ ಬ್ರಹ್ಮಯ್ಯ ಅಕ್ಕಸಾಲಿಗ ವೃತ್ತಿ ಬಿಟ್ಟು ಕಲ್ಯಾಣಕ್ಕೆ ಬಂದು ಬಸವಣ್ಣನವರ ಆಪ್ತನಾದ. ಕಲ್ಯಾಣದಲ್ಲಿ ಸುಶ್ರಾವ್ಯವಾಗಿ ಕಿನ್ನರಿ ನುಡಿಸುವ ಕಾಯಕ ಕೈಗೊಂಡು ಜನಮನ ಗೆದ್ದ. ಕಲ್ಯಾಣಕ್ಕೆ ಬಂದ ಅಕ್ಕ ಮಹಾದೇವಿಯನ್ನು ಬರಮಾಡಿಕೊಳ್ಳಲು ಹೋದಾಗ, ಆಕೆಯ ವೈರಾಗ್ಯ ಪರೀಕ್ಷಿಸಲು ಹೋಗಿ ಗಾಬರಿಗೊಂಡು ಶರಣಾಗತನಾದ. ಆ ಸಂದರ್ಭದ ಹಿನ್ನೆಲೆಯಲ್ಲಿ ಆತ ಬರೆದ ವಚನವಿದು.

 ಕಿನ್ನರಿ ಬ್ರಹ್ಮಯ್ಯನು ಅಕ್ಕ ಮಹಾದೇವಿಯ ಅರಿವಿನ ಸ್ಥಾನವಾದ ನೆತ್ತಿಯನ್ನು ಮುಟ್ಟಿನೋಡಿದ. ಆಗ ಆಕೆ ಐಹಿಕ ಜಗತ್ತಿನ ಆಕರ್ಷಣೆಯಿಂದ ಹೊರಗಾದವಳೆಂಬುದರ ಅರಿವಾಯಿತು. ಮುಖ ಮುಟ್ಟಿದಾಗ ನಿರಾಕಾರದ ಸ್ಥಿತಿಯಲ್ಲಿದ್ದುದು ಕಂಡುಬಂದಿತು. ಕೊರಳ ಮುಟ್ಟಿದಾಗ, ಅಲ್ಲಿ ನೀಲಕಂಠನಿದ್ದುದು ಕಂಡು ಬಂದಿತು. ತೋಳುಗಳನ್ನು ಮುಟ್ಟಿ ನೋಡಿದಾಗ ಚೆನ್ನಮಲ್ಲಿಕಾರ್ಜುನ ಆವರಿಸಿಕೊಂಡುದರ ಅರಿವಾಯಿತು. ಎದೆ ಮುಟ್ಟಿ ನೋಡಿದಾಗ ಅಲ್ಲೆಲ್ಲ ಪರಶಿವನೇ ಇದ್ದುದು ಕಂಡುಬಂದಿತು. ಹೊಟ್ಟೆಯನ್ನು ಮುಟ್ಟಿದಾಗ ಬ್ರಹ್ಮಾಂಡದ ಅರಿವಾಯಿತು. ಗುಪ್ತಾಂಗ ಮುಟ್ಟಿದಾಗ ಅಲ್ಲಿ ಕಾಮದಹನವಾದುದು ಕಂಡುಬಂದಿತು. ‘ದೇವರೆ ಮಹಾದೇವಿಯಕ್ಕನ ದಿವ್ಯತೆಯನ್ನು ಅರ್ಥೈಸಿಕೊಳ್ಳದೆ ಬಯಸಿ ಕೆಟ್ಟೆ’ ಎಂದು ಪಶ್ಚಾತ್ತಾಪ ಪಡುತ್ತಾನೆ. ನಾನು ಹುಲಿ ನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.’’ ಎಂದು ಇನ್ನೊಂದು ವಚನದಲಿ ಅಕ್ಕನ ಗುಣಗಾನ ಮಾಡಿದ್ದಾನೆ.

 ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯ ನಂತರ ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದಾಗಿ ಕಲ್ಯಾಣದಲ್ಲಿ ಶರಣರನೇಕರ ಹತ್ಯೆಯಾಯಿತು. ನಂತರ ಬಿಜ್ಜಳನ ಕೊಲೆಯೂ ಆಯಿತು. ಚೆನ್ನಬಸವಣ್ಣನ ಜೊತೆ ಅನೇಕ ಶರಣರು ಉಳವಿಗೆ ಹೋದರು. ಆಗ ಕಿನ್ನರಿ ಬ್ರಹ್ಮಯ್ಯ ದಂಡಾಧಿಕಾರಿಯಾಗಿದ್ದ. ಉಳವಿಯಲ್ಲಿ ಕಿನ್ನರಿ ಬ್ರಹ್ಮಯ್ಯನ ಸಮಾಧಿ ಇದೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಪತನದ ಕಳವಳ