ಕ್ರಿಯಾಶೀಲ ಚಿಂತನೆಗಳು
ಶಿಕ್ಷಣ ಹೊರಣ: ಭಾಗ - 6
ಮಕ್ಕಳಲ್ಲಿ ರಂಗಭೂಮಿ ರಸಗ್ರಹಣದ ಬಗ್ಗೆ ತರಬೇತಿಯನ್ನು ಕೊಡುವುದರ ಅಗತ್ಯವನ್ನು ಮೊದಲಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅರಿತುಕೊಳ್ಳಬೇಕು. ರಂಗಭೂಮಿ ರಸಗ್ರಹಣ ಶಿಬಿರಗಳೇಕೆ ಬೇಕು? ಅದರಿಂದ ಏನು ದಕ್ಕುತ್ತದೆ ಎಂಬುದನ್ನು ಕೂಡಾ ಶಿಕ್ಷಣ ಸಂಸ್ಥೆಗಳು ತಿಳಿದುಕೊಳ್ಳಬೇಕು. ಈ ರಂಗಭೂಮಿ ರಸಗ್ರಹಣ ಶಿಬಿರಗಳು ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮಾತ್ರವಲ್ಲ. ನಾಟಕ ನೋಡುವವರಿಗು ಕೂಡಾ ಅದರ ಅಗತ್ಯವಿದೆ.
ಯಾವುದೇ ಒಂದು ಕಲೆಯನ್ನು ಸಂಪೂರ್ಣವಾಗಿ ಗಮನಿಸುವುದು, ಸಹನೆಯಿಂದ ವೀಕ್ಷಿಸುವುದು, ವಿವೇಚಿಸುವುದು, ವಿಶ್ಲೇಷಿಸುವುದು, ವಿಮರ್ಶೆ ಮಾಡುವುದು, ಪ್ರಶಂಸಿಸುವುದು, ಪ್ರೋತ್ಸಾಹಿಸುವುದು, ಅದರ ಭಾಗವಾಗಿರಲು ಯತ್ನಿಸುವುದು, ಅವುಗಳು ನಡೆಯುವ ಸ್ಥಳಗಳಲ್ಲಿ ನೇರವಾಗಿ ಇರುವುದರಲ್ಲಿಯೇ ಒಂದು ಬಗೆಯ ಆನಂದವನ್ನು ಹೊಂದುವುದು; ಇವೆಲ್ಲವೂ ರಸಗ್ರಹಣದ ಫಲಗಳೇ.
ಕ್ರಿಯಾಶೀಲ ಮತ್ತು ಸೃಜನಶೀಲ ಗುಣಗಳು ಮಕ್ಕಳಲ್ಲಿ ರೂಢಿಸುವುದು ಶಿಕ್ಷಣದಲ್ಲಿ ಅತ್ಯಂತ ಮುಖ್ಯವಾದ ಭಾಗ. ಅದಿಲ್ಲದೇ ಹೋದರೆ ಶಿಕ್ಷಣವೆಂಬುದು ಅಪೂರ್ಣವೆಂಬುದಂತೂ ನಿಶ್ಚಿತ. ಬೆಂಗಳೂರಿನ ನಗರ ಭಾಗದ ಪ್ರೌಢಶಾಲೆ. ಅದರ ವಿದ್ಯಾರ್ಥಿಗಳು ಸಿಬಿಎಸ್‌ಇ ಸಿಲೆಬಸ್‌ನಲ್ಲಿ ಓದುತ್ತಿರುವವರು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳ ಮೇಲ್ವಿಚಾರಕರು ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಮಕ್ಕಳಿಗೆ ರಂಗಾಭಿರುಚಿಯನ್ನು ಬೆಳೆಸಲು ಕನ್ನಡದ ಒಂದು ನಾಟಕ ಪ್ರದರ್ಶನವನ್ನು ಏರ್ಪಡಿಸಿದರು. ಬಹುಶಃ ಆ ಬಗೆಯ ನಾಟಕವು ಮಕ್ಕಳಿಗೆ ಹೊಸತೇ ಆಗಿತ್ತು. ನಾಟಕದ ಭಾಷೆಯೂ ಕೂಡಾ ಧಾರವಾಡದ್ದಾಗಿತ್ತು. ಎಲ್ಲರೂ ಬರಲೇಬೇಕೆಂಬ ಕಡ್ಡಾಯವೇನೂ ಇರದ ಕಾರಣದಿಂದ ಕೆಲವು ಮಕ್ಕಳಷ್ಟೇ ಬಂದಿದ್ದು. ಮುಖ್ಯೋಪಾಧ್ಯಾಯರು ಮತ್ತು ಓರ್ವ ಶಿಕ್ಷಕ ಮಾತ್ರ ಬಂದಿದ್ದರು. ನಿಗದಿತ ಸಮಯಕ್ಕೆ ಮಕ್ಕಳೇನೋ ಬಂದರು. ಆದರೆ, ಮುಖ್ಯೋಪಾಧ್ಯಾಯರು, ಓರ್ವ ಶಿಕ್ಷಕ ಮತ್ತು ಕೆಲವು ಪೋಷಕರು ಬಿಟ್ಟರೆ ನಾಟಕ ಪ್ರಾರಂಭವಾಗುವ ಹೊತ್ತಿಗೆ ಹೈಸ್ಕೂಲ್ ಮಕ್ಕಳೆಲ್ಲಾ ಮೆಲ್ಲ ಮೆಲ್ಲನೆ ಎದ್ದು ಹೊರಟು ಹೋದರು. ತಾವು ನಾಟಕದಲ್ಲಿ ಅಭಿನಯಿಸುವಂತಹ ಆಸಕ್ತಿಯನ್ನು ಹೊಂದಿರುವಂತಹ ಮಕ್ಕಳೂ ಕೂಡ ಅಲ್ಲಿ ಕೊನೆಯವರೆಗೂ ಕುಳಿತುಕೊಳ್ಳಲಿಲ್ಲ. ಮರುದಿನ ಶಾಲೆಗೆ ಬಂದಾಗ ಸಂಬಂಧಪಟ್ಟವರು ಕೆಲವು ಪ್ರಶ್ನೆಗಳನ್ನು ಕೇಳಿದರು.
1. ಕೊನೆಯವರೆಗೂ ಯಾಕೆ ಕುಳಿತುಕೊಳ್ಳಲಿಲ್ಲ?
2. ಎಲ್ಲಿಯವರೆಗೂ ಕುಳಿತಿದ್ದಿರಿ?
3. ನೋಡಿದ್ದಷ್ಟು ನಾಟಕದಲ್ಲಿ ಏನು ಅರ್ಥವಾಯಿತು? 4.ನಾಟಕದ ಯಾವ ಯಾವ ಅಂಶಗಳು ಇಷ್ಟವಾಯಿತು?
5. ನಾಟಕದ ಯಾವ ಯಾವ ಅಂಶಗಳು ಇಷ್ಟವಾಗಲಿಲ್ಲ?
6. ನಾಟಕದ ಯಾವ ಭಾಗ ನಿಮ್ಮ ಗಮನ ಸೆಳೆಯಿತು?
7. ನಾಟಕದ ಯಾವ ಅಂಶಗಳು ನಿಮಗೆ ಮನಸೆಳೆಯುವಲ್ಲಿ ವಿಲವಾಯಿತು?
8. ಒಟ್ಟಾರೆ ನಾಟಕದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಎಲ್ಲಾ ಪ್ರಶ್ನೆಗಳಿಗೂ ಮಕ್ಕಳ ವೌನವೊಂದೇ ಉತ್ತರವಾಗಿತ್ತು. ಯಾವುದೊಂದಕ್ಕೂ ಅವರು ಉತ್ತರಿಸಲಾಗದಂತಿದ್ದರು. ನಾಟಕದ ಪೂರ್ತಿ ಇರಲಿ, ಸ್ವಲ್ಪ ಹೊತ್ತೂ ಕೂರಲಾಗದಿದ್ದ ಅವರ ಸಮಸ್ಯೆ ಏನಾಗಿತ್ತು ಎಂದು ವಿಶ್ಲೇಷಿಸಿ ನೋಡಿದರೆ ಹಲವಾರು ವಿಷಯಗಳನ್ನು ಗಮನಿಸಬಹುದಾಗಿತ್ತು.
1. ಟಿ ವಿ ಅಥವಾ ಸಿನೆಮಾದ ರೀತಿಯ ಆಕರ್ಷಣೆ ನಾಟಕದಲ್ಲಿ ಇರಲಿಲ್ಲ.
2. ಆ ಬಗೆಯ ನಾಟಕವನ್ನು ನೋಡಿರುವ ಅನುಭವವೇ ಅವರಿಗೆ ಇರಲಿಲ್ಲ. 3.ಅವರ ಮನೆಯವರ ಜೊತೆಗೆ ಸಿನೆಮಾ, ಮದುವೆ, ಆರತಕ್ಷತೆ, ಬೀಗರೂಟ, ಸತ್ಯನಾರಾಯಣ ಪೂಜೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ಬಿಟ್ಟರೆ, ನೇರವಾದ ಸಂಗೀತ ಅಥವಾ ನೃತ್ಯ ಕಾರ್ಯಕ್ರಮ ಅಥವಾ ನಾಟಕಗಳಿಗೆ ಹೋಗೇ ಇಲ್ಲ.
4. ನಾಟಕ ಅಂತ ಮಾಡ್ತಾರೆ ಅಂತ ಗೊತ್ತು. ಆದರೆ ನಾಟಕಗಳು ಹೇಗಿರುತ್ತೆ? ಅವುಗಳನ್ನು ಮಾಡಲು ಎಂತೆಂತಹ ಸಾಮರ್ಥ್ಯ, ಪ್ರತಿಭೆ, ಶ್ರಮ ಮತ್ತು ರಸಿಕತೆಗಳಿರುತ್ತವೆ ಎಂಬುದರ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ.
5. ಮೊದಲು ಏನೂ ಡಿಸ್ಟರ್ಬ್ ಇಲ್ಲದೇ ಒಂದು ಕಡೆ ಕುಳಿತುಕೊಳ್ಳಲೇ ಬರುವುದಿಲ್ಲ.
6. ಇವರು ಏನು ಮಾಡುತ್ತಾರೆ? ಏನು ತೋರಿಸುತ್ತಾರೆ ಎಂದು ಕಾಯಲು ಕುತೂಹಲವೇ ಇಲ್ಲ.
7. ಅದು ನಮ್ಮ ಆಸಕ್ತಿಯದಲ್ಲ. (ಆದರೆ ತಮ್ಮ ಆಸಕ್ತಿ ಏನು ಎಂದರೆ ಅದರ ಬಗ್ಗೆಯೂ ಗೊತ್ತಿಲ್ಲ.)
8. ಮನೆಯವರಾರೂ ಬಂದಿಲ್ಲ. ಬೇಗ ಹೋಗಬೇಕಿತ್ತು. ಕತ್ತಲಾದರೆ ಬೈತಾರೆ.
ನಾಟಕವಿದೆ ಎಂದರೂ ಬರದೆಯೇ ಇದ್ದ ಕಾರಣಗಳೆಂದರೆ:
1. ಒಬ್ಬರನ್ನೇ ಕಳಿಸುವುದಿಲ್ಲ. ಮನೆಯವರು ಜೊತೆಗೆ ಬರಲಿಲ್ಲ. ಮನೆಯವರ್ಯಾಕೆ ಬಂದಿಲ್ಲವೆಂದರೆ, ಅವರಿಗೆ ಪುರುಸೊತ್ತಿರಲಿಲ್ಲ. ಬೇರೆ ಕೆಲಸವಿತ್ತು. ಕೆಲಸದಿಂದ ವಾಪಸ್ ಬಂದಿರಲಿಲ್ಲ.
2. ಟ್ಯೂಷನ್ ಇತ್ತು.
3. ಸ್ಕೂಲಿನದೇ ಜಾಸ್ತಿ ಹೋಂವರ್ಕ್ ಇತ್ತು.
4. ತಲೆನೋವು, ನೆಗಡಿ, ಹೊಟ್ಟೆ ನೋವು ಇತ್ಯಾದಿಗಳಿದ್ದವು.
5.ಬರುವಷ್ಟರಲ್ಲಿ ಲೇಟಾಗಿ ಬಿಡ್ತು.
6. ಮಳೆ ಬಂದುಬಿಡುತ್ತೆ ಅಂತ ಕಳಿಸಲಿಲ್ಲ.
7. ಓದೋದು ಬರೆಯೋದು ಅಷ್ಟೇ ಮುಖ್ಯ. ಇನ್ನೇನೂ ಬೇಡ ಅಂತ ಮನೆಯಲ್ಲಿ ಅಂದರು.
ಒಟ್ಟಾರೆ ಇಲ್ಲಿ ಅರ್ಥವಾಗುವುದೇನೆಂದರೆ, ಮಕ್ಕಳಲ್ಲಿ ರಸಗ್ರಹಣದ ಕೊರತೆ ಇದೆ. ಮನೆಯಲ್ಲಿಯೂ ಮತ್ತು ಅವರಲ್ಲಿಯೂ ರಂಗಭೂಮಿಯ ಅಭಿರುಚಿ ಇಲ್ಲ. ಈ ವಿಷಯಗಳು ಕುತೂಹಲಕರವಾಗಿಯೂ ಮತ್ತು ರಂಜನೀಯವಾಗಿಯೂ ಇರುತ್ತದೆ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ. ಜೊತೆಗೆ ಅಂತಹ ಅನುಭವಗಳಿಗೆ ತೆರೆದುಕೊಳ್ಳುವಂತಹ ಅವಕಾಶಗಳು ಮನೆಯಲ್ಲಿಯೂ ಶಾಲೆಯಲ್ಲಿಯೂ ಈ ಮೊದಲು ದೊರೆತಿರಲಿಲ್ಲ.
ರಸಗ್ರಹಣ ಶಿಬಿರ
ಯಾವುದೇ ಒಂದು ಕಲೆಯನ್ನು ಸಂಪೂರ್ಣವಾಗಿ ಗಮನಿಸುವುದು, ಸಹನೆಯಿಂದ ವೀಕ್ಷಿಸುವುದು, ವಿವೇಚಿಸುವುದು, ವಿಶ್ಲೇಷಿಸುವುದು, ವಿಮರ್ಶೆ ಮಾಡುವುದು, ಪ್ರಶಂಸಿಸುವುದು, ಪ್ರೋತ್ಸಾಹಿಸುವುದು, ಅದರ ಭಾಗವಾಗಿರಲು ಯತ್ನಿಸುವುದು, ಅವುಗಳು ನಡೆಯುವ ಸ್ಥಳಗಳಲ್ಲಿ ನೇರವಾಗಿ ಇರುವುದರಲ್ಲಿಯೇ ಒಂದು ಬಗೆಯ ಆನಂದವನ್ನು ಹೊಂದುವುದು; ಇವೆಲ್ಲವೂ ರಸಗ್ರಹಣದ ಲಗಳೇ. ಮನೆಗಳಲ್ಲಿ ಅಂತಹ ತರಬೇತಿ (ತಂದೆ ತಾಯಿಗಳಿಗೂ ಅಭಿರುಚಿ ಇದ್ದಲ್ಲಿ) ಅನೌಪಚಾರಿಕವಾಗಿಯೇ ದೊರಕುತ್ತದೆ. ಒಂದು ವೇಳೆ ಮನೆಯವರಿಗೆ ಅಂತಹ ಅಭಿರುಚಿ ಇಲ್ಲದಿದ್ದರೆ ಶಾಲೆಗಳಲ್ಲಿಯೇ ಅಂತಹ ಅಭಿರುಚಿಗಳನ್ನು ಬೆಳೆಸಲು ರಸಗ್ರಹಣ ಶಿಬಿರಗಳನ್ನು ಮಾಡಬೇಕು.
ಹಾಡುವ, ಕುಣಿಯುವ, ಚಿತ್ರಿಸುವ, ಬಣ್ಣ ತುಂಬುವ, ಕುಸುರಿ ಕೆಲಸಗಳನ್ನು ಮಾಡುವ, ಕರಕುಶಲದಿಂದ ವಸ್ತುಗಳನ್ನು ಮಾಡುವ, ಶಿಲ್ಪ, ನಾಟಕ ಇತ್ಯಾದಿ ಯಾವುದೇ ಕಲೆಗಳನ್ನಾಗಲಿ ರಸಗ್ರಹಣವಿಲ್ಲದಿದ್ದಲ್ಲಿ ಪ್ರಶಂಸಿಸಲೂ ಸಾಧ್ಯವಿಲ್ಲ. ಕಲಿಯಲೂ ಸಾಧ್ಯವಿಲ್ಲ. ಅದರಲ್ಲಿಯೂ ಹಾಡುವ, ಕುಣಿಯುವ, ಅಭಿನಯಿಸುವ, ಬಣ್ಣ ತುಂಬುವ ಇತ್ಯಾದಿ ಎಲ್ಲಾ ಕಲೆಗಳನ್ನು ಮೇಳೈಸಿಕೊಂಡಿರುವ ರಂಗಭೂಮಿಯ ರಸಗ್ರಹಣದ ಬಗ್ಗೆಯಂತೂ ಆಡಳಿತ ಮಂಡಳಿ ಮತ್ತು ಪೋಷಕರು ಖಂಡಿತವಾಗಿಯೂ ತಲೆ ಕೆಡಿಸಿಕೊಳ್ಳಲೇ ಬೇಕು. ಮಕ್ಕಳಲ್ಲಿ ರಂಗಭೂಮಿ ರಸಗ್ರಹಣದ ಬಗ್ಗೆ ತರಬೇತಿಯನ್ನು ಕೊಡುವುದರ ಅಗತ್ಯವನ್ನು ಮೊದಲಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅರಿತುಕೊಳ್ಳಬೇಕು. ರಂಗಭೂಮಿ ರಸಗ್ರಹಣ ಶಿಬಿರಗಳೇಕೆ ಬೇಕು? ಅದರಿಂದ ಏನು ದಕ್ಕುತ್ತದೆ ಎಂಬುದನ್ನೂ ಕೂಡಾ ಶಿಕ್ಷಣ ಸಂಸ್ಥೆಗಳು ತಿಳಿದುಕೊಳ್ಳಬೇಕು. ಈ ರಂಗಭೂಮಿ ರಸಗ್ರಹಣ ಶಿಬಿರಗಳು ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮಾತ್ರವಲ್ಲ. ನಾಟಕ ನೋಡುವವರಿಗೂ ಕೂಡಾ ಅದರ ಅಗತ್ಯವಿದೆ.
ಇಂತಹ ರಸಗ್ರಹಣ ಶಿಬಿರಗಳಿಂದ ಏನೇನೆಲ್ಲಾ ಅನುಕೂಲಗಳುಂಟು ಎಂಬುದನ್ನು ನೋಡೋಣ.
1. ಕಲೆ ಮತ್ತು ಅದರ ಪ್ರದರ್ಶನದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಬೆಳೆಯುತ್ತದೆ.
2. ಕಲೆಯು ಯಾವುದೇ ಒಂದು ವಿಷಯವನ್ನು ಮತ್ತು ಭಾವನೆಯನ್ನು ತನ್ನದೇ ಆದಂತಹ ರೀತಿಗಳಲ್ಲಿ ಹೇಳುತ್ತದೆ. ಆ ರೀತಿಯ ಪ್ರಕಾರ ಮಕ್ಕಳಿಗೆ ತಿಳಿಯುತ್ತದೆ. ಉದಾಹರಣೆ: ಚಿತ್ರಕಲೆಯು ವಿವಿಧ ಬಗೆ ರೇಖೆಗಳ ಪ್ರಯೋಗಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಬಗೆಯ ರೇಖೆಗಳ ಜೋಡಣೆ, ಸಂಯೋಜನೆ, ಇತಿ, ಮಿತಿ, ಹದಗಳೆಲ್ಲವೂ ಅಭಿವ್ಯಕ್ತಿಯ ಬಗೆ ಹೇಗೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯುತ್ತಾರೆ.
3. ಯಾವುದೇ ಕಲೆಯನ್ನು ಪ್ರಶಂಸಿಸುವುದಕ್ಕೆ ಸಾಧ್ಯವಾಗುತ್ತದೆ. 4.ಏಕಾಗ್ರತೆ ಮತ್ತು ಸಂಯಮಶೀಲತೆ ಮುಖ್ಯವಾಗಿ ಮಕ್ಕಳಿಗೆ ರೂಢಿಯಾಗುತ್ತದೆ.
5. ಕಲಿಕೆಗೆ ತೆರೆದುಕೊಳ್ಳಬೇಕಾದ ವಿನಯಶೀಲತೆಯನ್ನೂ, ಕಲಿಸುವಂತಹ ಔದಾರ್ಯವನ್ನೂ ರಸಗ್ರಹಣ ಶಿಬಿರಗಳು ರೂಢಿಸುತ್ತವೆ.
6. ವಿವಿಧ ಹಿನ್ನೆಲೆಗಳ ಅಭಿವ್ಯಕ್ತಿಗಳು ಮತ್ತು ಅನುಭವಗಳೆಲ್ಲವೂ ಕೂಡಾ ತಮ್ಮ ಅಭಿವ್ಯಕ್ತಿ ಮತ್ತು ಅನುಭವಗಳಲ್ಲದೇ ಇದ್ದರೂ ಕೂಡಾ ಗಮನಿಸುವಂತಹ, ಗೌರವಿಸುವಂತಹ ವ್ಯವಧಾನವನ್ನು ಕಲಿಸುತ್ತದೆ.
7. ಒಬ್ಬೊಬ್ಬರ ಸೃಜನಶೀಲತೆ, ಕ್ರಿಯಾಶೀಲತೆಗಳು ಪರಸ್ಪರ ಸಹಕಾರ ತತ್ವದಿಂದ ಒಂದು ಸಲತೆಯನ್ನು ರಸಗ್ರಹಣ ಶಿಬಿರಗಳು ಗುರುತಿಸುವಂತೆ ಮಾಡುತ್ತದೆ.
8. ಕಲೆಯ ಪ್ರಕಾರಗಳನ್ನು ಗಮನಿಸುವ ಮತ್ತು ಗೌರವಿಸುವುದರ ಮೂಲಕ ವಿವಿಧ ಸಂಸ್ಕೃತಿಗಳನ್ನು, ಆಚಾರ ಮತ್ತುವಿಚಾರಗಳನ್ನು, ಜನಜೀವನಗಳನ್ನು ತಿಳಿಯುವ ಅವಕಾಶವು ಸಿಗುತ್ತದೆ.
9. ರಂಗಭೂಮಿಯ ರಸಗ್ರಹಣದ ಶಿಬಿರದಲ್ಲಂತೂ ಮಗುವು ತನ್ನನ್ನು ತಾನೇ ಅರಿಯಲು ಹಲವು ಅವಕಾಶಗಳನ್ನು ಪಡೆದುಕೊಳ್ಳುತ್ತದೆ. ಆತ್ಮಗೌರವದ ಜೊತೆಗೆ ಆತ್ಮವಿಶ್ವಾಸದಿಂದ ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಸಾಧ್ಯವಾಗುತ್ತದೆ.
10. ತನ್ನ ಇತಿಮಿತಿಗಳನ್ನು ತಿಳಿಯುವುದರ ಜೊತೆಗೆ ತನ್ನ ಶಕ್ತಿಯನ್ನೂ ತಿಳಿದುಕೊಂಡು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತು ತನ್ನ ಇತಿಮಿತಿಯನ್ನು ಮೀರುವಂತಹ ಕ್ರಿಯಾಶೀಲತೆಯನ್ನು ಮತ್ತು ಸೃಜನಶೀಲತೆಯನ್ನು ತನ್ನಲ್ಲಿ ರೂಢಿಸಿಕೊಳ್ಳಲು ಸಾಧ್ಯವಿದೆ.
ಇವೆಲ್ಲವೂ ಸರಿಯೇ, ಆದರೆ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ರೂಪಿಸುವಂತಹ, ಏಕಾಗ್ರತೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಇಂತಹ ರಸಗ್ರಹಣ ಶಿಬಿರಗಳನ್ನು ಆಯೋಜಿಸುಮದು ಹೇಗೆ? ಅದರಲ್ಲಿ ಮೇಲ್ಕಂಡಂತಹ ಎಲ್ಲಾ ವಿಷಯಗಳನ್ನು ಅಳವಡಿಸುವುದು ಹೇಗೆ? ಕಲಿಕೆಗೂ, ಬದುಕಿಗೂ ಈ ರಸಗ್ರಹಣ ಶಿಬಿರಗಳು ಪ್ರಾಯೋಗಿಕವಾಗಿ ಹೇಗೆ ನೆರವಾಗುತ್ತವೆ? ಇವೆಲ್ಲವನ್ನೂ ನೆಡೋಣ ಮುಂದಿನ ಲೇಖನಗಳಲ್ಲಿ.