ತೆರೆದ ಪುಸ್ತಕ ಪರೀಕ್ಷೆ ಶಾಲಾ ವಿದ್ಯಾರ್ಥಿಗಳಿಗೆ ಸೂಕ್ತವೇ?
ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆ ಕುರಿತು ಪ್ರಸ್ತಾಪಿಸಿರುವುದು ಹೊಸ ಚಿಂತನೆಗೆ ಅನುವು ಮಾಡಿಕೊಟ್ಟಿದೆ. ತೆರೆದ ಪುಸ್ತಕ ಪರೀಕ್ಷೆಗೆ ಒಳಗೊಳ್ಳುವ ವಿದ್ಯಾರ್ಥಿಗಳು ವಿಷಯಗಳನ್ನು ಸಂಗ್ರಹಿಸುವ, ಅವುಗಳನ್ನು ಸ್ವ-ಸಾಮರ್ಥ್ಯದಿಂದ ಅಧ್ಯಯನ ನಡೆಸುವ, ಅವುಗಳನ್ನು ವಿಶ್ಲೇಷಿಸುವ ಹಾಗೂ ಪ್ರತಿಕ್ರಿಯಿಸುವ ಮತ್ತು ಅವುಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ. ಅಲ್ಲದೇ ಕಾಪಿ ಆ್ಯಂಡ್ ಪೇಸ್ಟ್ ವಿಧಾನಕ್ಕೆ ಅನುಕೂಲಕರವಾಗಿರುವುದಿಲ್ಲ. ಈ ವಿಧಾನದಲ್ಲಿ ಪರೀಕ್ಷೆ ಬರೆದವರು ಉತ್ತೀರ್ಣರಾಗುವ ಪ್ರಮಾಣವೂ ಬಹಳ ಕಡಿಮೆ.
ಶಿಕ್ಷಣ ರಂಗದಲ್ಲಿ ಇತ್ತೀಚೆಗೆ ತುಂಬಾ ಚರ್ಚಿತವಾಗುತ್ತಿರುವ ವಿಷಯವೆಂದರೆ ತೆರೆದ ಪುಸ್ತಕ ಪರೀಕ್ಷೆ. ಅದರ ಕುರಿತು ಸಾಕಷ್ಟು ಲೇಖನಗಳು ಹೊರಬಂದು, ಸಂವಾದಗಳು ಹಾಗೂ ವಿಚಾರ ಸಂಕಿರಣಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೊದಲು ಅದರ ಸ್ವರೂಪ ಮತ್ತು ಪ್ರಸ್ತುತತೆಯನ್ನು ಅವಲೋಕಿಸುವ ಅಗತ್ಯ ಎದ್ದುಕಾಣುತ್ತಿದೆ. ಬೋಧನಾ ಪ್ರಕ್ರಿಯೆ ಮೂರು ಪ್ರಮುಖ ಹಂತಗಳನ್ನು ಒಳಗೊಂಡಿದೆ ಅವುಗಳೆಂದರೆ, ಯೋಜನೆ, ನಿರ್ವಹಣೆ ಮತ್ತು ವೌಲ್ಯಮಾಪನ. ವೌಲ್ಯಮಾಪನದ ಅಡಿಪಾಯವೇ ಬೋಧನೆ, ವೌಲ್ಯಮಾಪನದ ಅನೇಕ ವಿಧಗಳಲ್ಲಿ ತೆರೆದ ಮತ್ತು ಮುಚ್ಚಿದ ಪುಸ್ತಕ ಪರೀಕ್ಷೆಗಳು ಹೆಚ್ಚಿನ ಮಹತ್ವ ಪಡೆದುಕೊಂಡಿವೆ. ಈಗಾಗಲೆ ವಿವಿಧ ವಿದ್ಯಾರ್ಥಿಗಳಿಗೆ, ವಿವಿಧ ಸ್ತರಗಳಲ್ಲಿ ಮತ್ತು ಕೋರ್ಸ್‌ಗಳಲ್ಲಿ ಈ ರೀತಿಯ ಪರೀಕ್ಷೆಗಳು ವೌಲ್ಯಮಾಪನಕ್ಕಾಗಿ ಬಳಸಲಾಗುತ್ತಿದೆ. ಪಠ್ಯಪುಸ್ತಕಗಳೇಜ್ಞಾನದ ಮಿತಿ ಎನ್ನುವಂತೆ ಮೂಲ ಶಿಕ್ಷಣದಲ್ಲಿ ಬಳಸ ಲಾಗುತ್ತಿದೆ ಹಾಗೂ ಪ್ರಸ್ತುತ ಲಭ್ಯವಿರುವ ಜ್ಞಾನವನ್ನೆಲ್ಲಾ ವಿವಿಧ ಮೂಲಗಳಿಂದ ಪರಿಷ್ಕರಿಸಿ ಹುಡುಕುವುದು ಮತ್ತು ಬೇಕಾದಾಗ ಅವುಗಳನ್ನು ಬಳಸುವುದು ಅನಿವಾರ್ಯವಾಗಿದೆ. ತೆರೆದ ಪುಸ್ತಕ ಪರೀಕ್ಷೆಗಳ ಕುರಿತು ಜೇಹು ಮತ್ತು ಇತರರು, ಮೈಕಲ್ ಮತ್ತು ಕೈರಾನ್ ಹಾಗೂ ವೀಬರ್ ಮತ್ತು ಇತರರು, ಕೈಗೊಂಡ ಸಂಶೋಧನೆಗಳ ಪ್ರಕಾರ, ತೆರೆದ ಪುಸ್ತಕ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಮತ್ತು ಆತಂಕವನ್ನು ಕಡಿಮೆ ಮಾಡಿ, ನ್ಯಾಯೋಚಿತ ಪರೀಕ್ಷೆಯಿಂದ ಕಲಿಕಾ ಫಲಗಳು ದೊರೆಯುತ್ತವೆ, ಕಲಿಕಾಂಶಗಳನ್ನು ಕಂಠಪಾಠ ಮಾಡುವ ಕಲಿಕಾ ವ್ಯವಸ್ಥೆ ದೂರವಾಗಿ ವಿದ್ಯಾರ್ಥಿಗಳು ರಚನಾತ್ಮಕವಾಗಿ ಆಲೋಚಿಸುವ ಮತ್ತು ವಿಶ್ಲೇಷಣಾತ್ಮಕ ಪರೀಕ್ಷಾ ತಯಾರಿ ಮಾಡಿಕೊಳ್ಳುವ ಪದ್ಧತಿ ಪುಷ್ಟೀಕರಣಗೊಳ್ಳುತ್ತದೆ. ಅದಲ್ಲದೇ ಉನ್ನತ ಮಟ್ಟದ ಆಲೋಚನೆಯ ಪ್ರಶ್ನೆಗಳನ್ನು ಈ ಪರೀಕ್ಷೆಗಳು ಹೊಂದಿರುವವರಿಂದ ಮಕ್ಕಳು ಹೆಚ್ಚಿನ ಅಂಕ ಸಾಧನೆ ಮಾಡಲು ಸಾಧ್ಯವಿಲ್ಲ. ತೆರೆದ ಪುಸ್ತಕ ಪರಿಕ್ಷೆಗಳು ಸಮಸ್ಯಾ ಪರಿಹಾರ, ರಚನಾತ್ಮಕ ಮತ್ತು ಆಳ ಜ್ಞಾನಕ್ಕೆ ಮಹತ್ವ ನೀಡುತ್ತವೆ ಮತ್ತು ನೈಜ ಜೀವನದ ಸ್ಪಷ್ಟ ಚಿತ್ರಣ ತೋರಿಸುವಲ್ಲಿ ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ವಿಷಯದಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳುವುದಕ್ಕೆ ಮತ್ತು ಅರ್ಥಮಾಡಿಕೊಳ್ಳಲು ಪುಷ್ಟೀಕರಿಸಿ, ಹೆಚ್ಚಿನ ನೈಜತೆಗೆ ಮತ್ತು ಸಮಸ್ಯೆ ಪರಿಹರಿಸುವ ಸಂದರ್ಭಗಳಿಗೆ ಸೂಕ್ತವಾಗಿರುತ್ತದೆ.
ತೆರೆದ ಪುಸ್ತಕ ಪರೀಕ್ಷೆಯ ಸ್ವರೂಪವನ್ನು ತಿಳಿದುಕೊಳ್ಳುವುದಾದರೆ, ಪರೀಕ್ಷಾರ್ಥಿಗಳು ಯಾವುದಾದರೊಂದು ವಿಷಯ ಸಂಬಂಧಿತ ಆಕರವನ್ನು ಬಳಸಲು ಅವಕಾಶವಿರುತ್ತದೆ. ಅಂದರೆ ತರಗತಿಯ ಟಿಪ್ಪಣೆ, ಪಠ್ಯಪುಸ್ತಕ ಮತ್ತು ಮಾನ್ಯತೆ ಪಡೆದ ಮಾಹಿತಿಯ ಆಕರವನ್ನು ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯಲು ಬಳಸಬಹುದು. ಮುಚ್ಚಿದ ಪುಸ್ತಕ ಪರೀಕ್ಷೆ ಮತ್ತು ತೆರೆದ ಪುಸ್ತಕ ಪರೀಕ್ಷೆ ಬೇರೆ ಬೇರೆ ಬೋಧನಾ ಉದ್ದೇಶಗಳನ್ನು ಮತ್ತು ಬೋಧನಾ ವಿಧಾನಗಳನ್ನು ಹೊಂದಿರುವಂತಹವು ಮತ್ತು ಆ ಮೂಲಕ ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳು ಕೂಡ ಬೇರೆ ಬೇರೆಯಾಗಿರುತ್ತವೆ. ಮುಚ್ಚಿದ ಪುಸ್ತಕ ಪರೀಕ್ಷೆ ನಿರ್ದಿಷ್ಟ ಮತ್ತು ವ್ಯಾಪಕವಾದ ವಿಷಯದ ಸ್ಮರಣೆಯನ್ನು ಅಪೇಕ್ಷಿಸುತ್ತದೆ. ಆದರೆ ತೆರೆದ ಪುಸ್ತಕ ಪರೀಕ್ಷೆ ಉನ್ನತ ಮಟ್ಟದ ಕಲಿಕೆಯನ್ನು ನಿರೀಕ್ಷಿಸುತ್ತದೆ, ಇದು ಜ್ಞಾನಾತ್ಮಕ ವಲಯದ ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ವೌಲ್ಯಮಾಪನದಂತಹ ನಿರ್ದಿಷ್ಟ ಉದ್ದೇಶಗಳನ್ನು ಆಧರಿಸಿದ ಪ್ರಶ್ನೆಗಳನ್ನೊಳಗೊಂಡಿರುತ್ತದೆ.
ಬೌನ್‌ರವರ ಪ್ರಕಾರ ಕೆಲವೊಂದು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುಂಚೆಯೆ ಸಂಭವನೀಯ ಪ್ರಶ್ನೆಗಳನ್ನು ನೀಡಲಾಗಿ, ವಿದ್ಯಾರ್ಥಿಗಳು ಆ ಪ್ರಶ್ನೆಗಳಿಗೆ ಪೂರಕವಾದ ವಿಷಯ ಸಾಮಗ್ರಿಗಳನ್ನು ಕಲೆಹಾಕಿ, ವಿಷಯವಸ್ತು ತಯಾರಿಸಿ ಪರೀಕ್ಷೆಗಳನ್ನು ಬರೆಯಲು ಅವುಗಳನ್ನು ಬಳಸಿಕೊಳ್ಳಬಹುದು. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಮನೆಗೆ ನೀಡಲಾಗುತ್ತದೆ ಮತ್ತು ಮನೆಯಲ್ಲಿ ವಿಷಯಗಳನ್ನು ಅಧ್ಯಯನ ಮಾಡಿ ಉತ್ತರಗಳನ್ನು ಬರೆದು ತರಬೇಕು. ಈಗಾಗಲೇ ಕೆ.ಜಿಯಿಂದ ಪಿ.ಜಿ.ವರೆಗೆ ಎಲ್ಲಾ ತರಗತಿಗಳಲ್ಲಿ ಆಂತರಿಕ ಅಂಕಗಳ ವೌಲ್ಯಮಾಪನಕ್ಕಾಗಿ ಕಾರ್ಯಯೋಜನೆಯ ರೂಪದಲ್ಲಿ ಈ ಚಟುವಟಿಕೆಗಳನ್ನು ನೀಡಲಾಗುತ್ತಿದೆ.
ತೆರೆದ ಪುಸ್ತಕ ಪರೀಕ್ಷೆಗಳ ಎರಡು ವಿಧಗಳೆಂದರೆ, ನಿರ್ಬಂಧಿತ ಮತ್ತು ಅನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆ: ನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾನ್ಯತೆ ಹೊಂದಿದ ಅಥವಾ ಪರಿಗಣಿಸಬಹುದಾಂತಹ ವಿಷಯಕ್ಕೆ ಪೂರಕವಾದ ಆಧಾರ ಗ್ರಂಥಗಳನ್ನು ಪರೀಕ್ಷೆಯಲ್ಲಿ ಬಳಸಬಹುದು ಮತ್ತು ಅನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಾವ ಪರಿಕರವನ್ನಾದರೂ ಪರೀಕ್ಷೆಗೆ ತರಬಹುದು ಮತ್ತು ವಿಷಯ ವಸ್ತುವಿನಾಧಾರಿತ ಪ್ರಶ್ನೆಗಳಿಗಿಂತ, ಬೌದ್ಧಿಕ ಕೌಶಲ್ಯಗಳನ್ನು ಬಳಸಿ ಉತ್ತರಿಸುವ ಪ್ರಶ್ನೆಗಳೆ ಈ ಪರೀಕ್ಷೆಯ ಮೂಲವಾಗಿದೆ. ತೆರೆದ ಪುಸ್ತಕ ಪರೀಕ್ಷೆಯಲ್ಲಿ ಸೃಜನತೆಗೆ ಪೂರಕವಾದ ಪ್ರಶ್ನೆಗಳಿರುತ್ತವೆ, ಬಹು ಹಂತ ಸಮಸ್ಯೆಗಳಾಧಾರಿತ ಪ್ರಶ್ನೆಗಳಿರುತ್ತವೆ ಮತ್ತು ಕಾರ್ಯ ನಿಯೋಜನೆಯ ಮುಂದಿನ ಭಾಗವಾಗಿ ಪ್ರಶ್ನೆಗಳಿರುತ್ತವೆ. ಈ ರೀತಿಯ ಪರೀಕ್ಷೆಗಳಲ್ಲಿ ಮಾಹಿತಿ ಯನ್ನು ಹುಡುಕುವ, ಬಳಸುವ ಹಾಗೂ ಸಮಸ್ಯೆ ಬಗೆಹರಿಸುವ, ಸೂಕ್ತ ನಿದರ್ಶನಗಳಿಂದ ಸಮಸ್ಯೆ ಬಿಡಿಸುವ ಸಾಮರ್ಥ್ಯ ಆಧಾರಿತ ಪ್ರಶ್ನೆಗಳು ವಿಶೇಷವಾಗಿ ಪ್ರಬಂಧ ಮಾದರಿಯಲ್ಲಿ ಇರುತ್ತವೆ. ತೆರೆದ ಪುಸ್ತಕ ಪರೀಕ್ಷೆಗಳ ಸೂಕ್ತತೆಯನ್ನು ಗಮನಿಸುವುದಾದರೆ, ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಲ್ಲಿ ಬೌದ್ದಿಕ ಸಾಮರ್ಥ್ಯಗಳು ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುವ ಆವಶ್ಯಕತೆ ಇರುತ್ತದೆ. ತೆರೆದ ಪುಸ್ತಕ ಪರೀಕ್ಷೆಯು ಪರೀಕ್ಷಾರ್ಥಿ ಗಳಲ್ಲಿ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತ್ವರಿತವಾಗಿ ಹುಡುಕುವ, ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ, ಸಂಶ್ಲೇಷಿಸುವ ಮತ್ತು ಜ್ಞಾನವನ್ನು ಬಳಸುವ ಹಾಗೂ ವಿಮರ್ಶಾತ್ಮವಾಗಿ ಆಲೋಚಿಸುವ ಸಾಮರ್ಥ್ಯವನ್ನು ಬೆಳೆಸುತ್ತವೆ ಮತ್ತು ಆ ಸಾಮರ್ಥ್ಯಗಳನ್ನೇ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಹೊಂದಬೇಕಾಗಿರುವುದು ಅಪೇಕ್ಷಣೀಯ. ಹಾಗಾಗಿ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಈ ಮಾದರಿಯ ಪರೀಕ್ಷೆಗಳು ಸೂಕ್ತವೆನಿಸುತ್ತವೆ.
ತೆರೆದ ಪುಸ್ತಕ ಪರೀಕ್ಷೆಗಳ ಕುರಿತ ತಪ್ಪು ಗ್ರಹಿಕೆಗಳೆಂದರೆ ಪರೀಕ್ಷೆ ತುಂಬಾ ಸರಳವಾಗುತ್ತದೆ, ಓದುವ ಅವಶ್ಯಕತೆಯಿರುವುದಿಲ್ಲ, ಪುಸ್ತಕದಿಂದ ನೇರವಾಗಿ ನಕಲು ಮಾಡಬಹುದು, ಮತ್ತು ಹೆಚ್ಚಿನ ಆಧಾರ ಸಾಮಗ್ರಿಗಳಿದ್ದಷ್ಟು ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಬಹುದು ಎನ್ನುವಂತಹದ್ದು.
ತೆರೆದ ಪುಸ್ತಕ ಪರೀಕ್ಷೆಗಳ ಅನುಕೂಲವನ್ನು ನೋಡುವುದಾದರೆ, ಪ್ರಶ್ನೆ ಪತ್ರಿಕೆ ರಚಿಸಲು ಮುಕ್ತವಾಗಿ ಆಧಾರ ಗ್ರಂಥಗಳು ದೊರೆತಿರುವುದರಿಂದ ಪ್ರಶ್ನೆಗಳನ್ನು ರಚಿಸಲು ಸುಲಭವಾಗುತ್ತದೆ ಮತ್ತು ಸ್ವತಂತ್ರವಾದ ಅವಕಾಶವಿರುತ್ತದೆ. ಕಂಠಪಾಠ ಮಾಡುವ ಪ್ರಮೆಯವಿರದೇ ಉನ್ನತ ಮಟ್ಟದ ಕೌಶಲಗಳಿಗೆ ಹೆಚ್ಚಿನ ಒತ್ತು ಕೊಡುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಕಲೆಹಾಕಬೇಕಾದ ಅನಿವಾರ್ಯತೆ ಇರುತ್ತದೆ. ಪ್ರಶ್ನೆಗಳಿಗೆ ಉತ್ತರಿಸಲು ಬೇರೆ ಬೇರೆ ಆಧಾರ ಗ್ರಂಥಗಳಿಂದ ಮಾಹಿತಿ ಕಲೆಹಾಕಬೇಕಾಗುತ್ತದೆೆ. ವಿವಿಧ ಕಲಿಕಾ ಉದ್ದೇಶಗಳು ಮತ್ತು ವಿವಿಧ ವಿಷಯ ಪರಿಣಿತಿಯನ್ನು ಹೊಂದಿರಬೇಕಾಗುತ್ತದೆ. ಮಾಹಿತಿ ಕಲೆಹಾಕುವ ಕೌಶಲಗಳು ಬೆಳೆಯುತ್ತವೆ ಮತ್ತು ಮಾಹಿತಿ ಬಳಸುವ ತಂತ್ರ ಕರಗತವಾಗುತ್ತದೆ. ಓದಿ ಅರ್ಥಮಾಡಿಕೊಳ್ಳುವ ಮತ್ತು ಅನುಭವಗಳನ್ನು ವಿಸ್ತೃತವಾಗಿ ವಿವರಿಸುವ, ವರ್ಣಿಸುವ, ಹಂಚಿಕೊಳ್ಳುವ, ಸಂಗತಿಗಳನ್ನು ನಿರ್ಣಯಿಸುವ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ಸೂಕ್ತ.
ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆ ಕುರಿತು ಪ್ರಸ್ತಾಪಿಸಿರುವುದು ಹೊಸ ಚಿಂತನೆಗೆ ಅನುವು ಮಾಡಿಕೊಟ್ಟಿದೆ. ತೆರೆದ ಪುಸ್ತಕ ಪರೀಕ್ಷೆಗೆ ಒಳಗೊಳ್ಳುವ ವಿದ್ಯಾರ್ಥಿಗಳು ವಿಷಯಗಳನ್ನು ಸಂಗ್ರಹಿಸುವ, ಅವುಗಳನ್ನು ಸ್ವ-ಸಾಮರ್ಥ್ಯದಿಂದ ಅಧ್ಯಯನ ನಡೆಸುವ, ಅವುಗಳನ್ನು ವಿಶ್ಲೇಷಿಸುವ ಹಾಗೂ ಪ್ರತಿಕ್ರಿಯಿಸುವ ಮತ್ತು ಅವುಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ. ಅಲ್ಲದೇ ಕಾಪಿ ಆ್ಯಂಡ್ ಪೇಸ್ಟ್ ವಿಧಾನಕ್ಕೆ ಅನುಕೂಲಕರವಾಗಿರುವುದಿಲ್ಲ. ಈ ವಿಧಾನದಲ್ಲಿ ಪರೀಕ್ಷೆ ಬರೆದವರು ಉತ್ತೀರ್ಣರಾಗುವ ಪ್ರಮಾಣವೂ ಬಹಳ ಕಡಿಮೆ.
ಆದುದರಿಂದ ಈ ಮೇಲಿನ ಅಂಶಗಳನ್ನು ಗಮನಿಸಿದರೆ ತೆರೆದ ಪುಸ್ತಕ ಪರೀಕ್ಷೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಇನ್ನೂ ಬೆಳೆದಿರುವುದಿಲ್ಲ. ಕೆಲವು ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಆ ಮಟ್ಟದ ಬುದ್ಧ್ದಿಶಕ್ತಿ ಇದ್ದರೂ ಈ ರೀತಿಯ ಪರೀಕ್ಷೆಗಳಿಗೆ ಒಗ್ಗಿಕೊಳ್ಳುವುದಕ್ಕೆ ಸಮಯ ಮತ್ತು ಅನುಭವಗಳು ಬೇಕಾಗುತ್ತವೆ. ಈ ರೀತಿಯ ಪರೀಕ್ಷೆಗಳನ್ನು ನಡೆಸಲು ಮತ್ತು ವಿವಿಧ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸಲು ಶಿಕ್ಷಕರಿಗೆ ಅನುಭವದ ಕೊರತೆ ಇದ್ದು ತರಬೇತಿಗಳ ಅವಶ್ಯಕತೆ ಎದ್ದು ಕಾಣುತ್ತದೆ. ಶಿಕ್ಷಕರೇ ತೆರೆದ ಪುಸ್ತಕ ಪರೀಕ್ಷೆಯ ಮಾದರಿಯಲ್ಲಿರುವ ಇಲಾಖಾ ಪರೀಕ್ಷೆಗಳನ್ನು ಪಾಸಾಗುವಲ್ಲಿ ಹರಸಾಹಸ ಮಾಡುತ್ತಿದ್ದಾಗ ಶಾಲಾ ವಿದ್ಯಾರ್ಥಿಗಳು ಇದೇ ಮಾದರಿಯ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟಸಾಧ್ಯವೇ ಸರಿ.
ಲೇಖಕರ ಪರಿಚಯ: ಪ್ರಾಧ್ಯಾಪಕರು, ಶಿಕ್ಷಣ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.