ದ್ವೀಪವೊಂದರ ಕಥೆ -ಕೊನೆಯ ಅಲೆ

Update: 2018-08-27 18:31 GMT

ಪಂಕಜ್ ಸೇಖ್‌ಸರಿಯಾರವರು ಸಂಶೋಧಕರು, ಪತ್ರಕರ್ತರು ಮತ್ತು ಛಾಯಾಚಿತ್ರಕಾರರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿ ಅಲ್ಲಿನ ಬದುಕಿನ ತಾಯಿ ಬೇರಿನ ಜೊತೆಗೆ ಸಂಬಂಧ ಬೆಸೆದುಕೊಳ್ಳಲು ಪ್ರಯತ್ನಿಸಿದವರು. ಈ ದ್ವೀಪಗಳ ಬಗೆಗೆ ಅವರು ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ದಿ ಲಾಸ್ಟ್ ವೇವ್’ ಅವರ ಪ್ರಥಮ ಕಾದಂಬರಿ. ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರು ಈ ಕಾದಂಬರಿಯನ್ನು ‘ಕೊನೆಯ ಅಲೆ’ ಹೆಸರಿನಲ್ಲಿ ಕನ್ನಡಕ್ಕಿಳಿಸಿದ್ದಾರೆ.
  ಒಬ್ಬ ಸೃಜನಶೀಲ ಸಂಶೋಧಕನ ತಳಮಳಗಳು ಕಂಡದ್ದನ್ನು ಕಂಡಂತೆ ದಾಖಲಿಸುವುದರೊಂದಿಗೆ ಮುಗಿಯುವುದಿಲ್ಲ. ಅವನು ಸಂವೇದನಾಶೀಲನಾಗಿದ್ದರೆ ಆತ ನಿಧಾನಕ್ಕೆ ಅನ್ವೇಷನೆಯ ಒಂದು ಭಾಗವೇ ಆಗುತ್ತಾನೆ. ಈ ಕಾದಂಬರಿಯ ಮುಖ್ಯ ಕಥಾಪಾತ್ರ ಹರೀಶನಲ್ಲಿ, ನಾವು ಮೂಲ ಲೇಖಕನನ್ನು ಗುರುತಿಸಬಹುದು. ಕಥೆಯ ಕೇಂದ್ರ ಅಂಡಮಾನ್‌ನ ಉಷ್ಣ ವಲಯದ ಮಳೆಕಾಡುಗಳ ಮೂಲ ನಿವಾಸಿಗಳಾದ ಜರವಾ ಜನಾಂಗ. ಅತ್ಯಂತ ಪುರಾತನ ಮತ್ತು ಅತಂತ್ರವಾಗುತ್ತಿರುವ ಸಮುದಾಯ ಇದು. ಅವರ ಬದುಕಿಗೆ ಪೂರಕವಾಗಿರುವ ಅಂಶಗಳೆಲ್ಲ ನಾಶವಾಗುತ್ತಿರುವುದನ್ನು ಹರೀಶ ಗುರುತಿಸುತ್ತಾನೆ. ಅಂಕಲ್ ಪೇಮ್‌ನ ಜೊತೆಗೆ ಜರವಾ ಜನಾಂಗವನ್ನು ಉಳಿಸುವ ಅವರ ಬದುಕಿನ ಲಯ ಕಡಿದುಕೊಳ್ಳದಂತೆ ನೋಡಿಕೊಳ್ಳುವ ದಾರಿಯನ್ನು ಹುಡುಕಲು ಯತ್ನಿಸುತ್ತಾನೆ. ಈ ದಾರಿಯಲ್ಲಿ ಆತನಿಗೆ ಜೊತೆಯಾಗುವವಳು, ಸಮುದಾಯಕ್ಕೆ ಸೇರಿದ ಸೀಮಾ. ವಿದ್ಯಾವಂತಳೂ, ಜಗತ್ತನ್ನು ಅರಿತವಳೂ ಆಗಿರುವ ಸೀಮಾ ಮತ್ತು ಹರೀಶ ಒಂದು ಸಮಾನಾಂತರ ದಿಕ್ಕಿನಲ್ಲಿ ಚಲಿಸುತ್ತಿರುವವರಾದರೂ, ಇಬ್ಬರ ಅನುಭೂತಿಗಳು ಎಲ್ಲೋ ಅವರನ್ನು ಸೇರಿಸುವಂತಿತ್ತು. ನಿಧಾನಕ್ಕೆ ಅವರು ಯಾವುದೋ ಒಂದು ಬಿಂದುವಿನಲ್ಲಿ ಸೇರಬೇಕೆನ್ನುವಾಗ ಅವರ ಬದುಕಿಗೆ ಅಪ್ಪಳಿಸುವುದು ದೈತ್ಯ ಸುನಾಮಿ. ಈ ದೈತ್ಯ ಅಲೆಗಳು ವಿಘಟಿತವಾಗುತ್ತಿರುವ ಪರಿಸರ, ಬದುಕನ್ನು ತನ್ನ ಒಂದೇ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತದೆ. 2004ರ ಸುನಾಮಿ ಹೇಗೆ ದ್ವೀಪವಾಸಿಗಳ ಬದುಕನ್ನು ಇನ್ನಿಲ್ಲದಂತೆ ಬದಲಾಯಿಸಿತು ಎನ್ನುವುದನ್ನು ಈ ಕಾದಂಬರಿ ಹೇಳುತ್ತದೆ. ಕೊನೆಯ ಅಲೆ ಕಳೆದು ಹೋದ ಪ್ರೇಮಿಗಳ, ಜನಾಂಗವೊಂದರ ಸಂಸ್ಕೃತಿಯ ಇತಿಹಾಸ ಮತ್ತು ಕಾಲನ ಹೊಡೆತಕ್ಕೆ ಸಿಲುಕಿ ನಲುಗಲು ಸದಾ ಸಿದ್ಧವಾಗಿರುವ ಪರಿಸರ ವ್ಯವಸ್ಥೆಯೊಂದರ ಕಥೆಯಾಗಿದೆ. ಇದು ಕೇವಲ ಜರವಾ ಸಮುದಾಯವೊಂದರ ಕತೆಯಾಗಬೇಕಾಗಿಲ್ಲ. ನಾಗರಿಕತೆಯ ಸುನಾಮಿಗೆ ಸಿಲುಕಿ ತೊಯ್ದೆಡುವ ಅಸಂಖ್ಯ ಬುಡಕಟ್ಟು ನಿವಾಸಿಗಳ ಕತೆಯೂ ಹೌದು.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 264. ಮುಖಬೆಲೆ 250 ರೂ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News