ಭಾಷಾವಾರು ಪ್ರಾಂತ ರಚನೆ ಅಖಂಡತೆ ಎಂದರೆ...

Update: 2018-08-30 18:49 GMT

ಬ್ರಿಟಿಷರು ನೂರೈವತ್ತಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದರು. ಈ ಆಳ್ವಿಕೆಯ ಕಾಲಕ್ಕೂ, ಭಾಷಾವಾರು ಪ್ರಾಂತ ರಚನೆಯ ಪ್ರಶ್ನೆಯು ಸತತವಾಗಿ ತಮ್ಮೆದುರಿಗೆ ಇರುವಾಗಲೂ ಬ್ರಿಟಿಷರು ಅದನ್ನು ಮಾಡಲಿಲ್ಲ. ಅವರು ಬಹು ಭಾಷೆಗಳುಳ್ಳ ಪ್ರಾಂತಗಳ ಜನರ ‘ಸಂಸ್ಕೃತಿಯ ಐಕ್ಯ’ದ ಕೂಗಾಟವನ್ನು ಲೆಕ್ಕಿಸದೆ, ಗಟ್ಟಿಯಾದ ಆಳ್ವಿಕೆ, ಕಾನೂನು ಮತ್ತು ಶಾಂತಿಗಳನ್ನು ಸ್ಥಾಪಿಸುತ್ತಲೇ ಹೆಚ್ಚಿನ ಗಮನವನ್ನು ಹರಿಸಿದರು. ತಾವು ನಿರ್ಮಿಸಿದ ಆಡಳಿತ ಯಂತ್ರದಲ್ಲಿ ಜಗಳಗಳಿದ್ದ ಕಡೆಗಳಲ್ಲಿ ಭಾಷಾವಾರು ಪ್ರಾಂತ ರಚನೆಯ ದೃಷ್ಟಿಯಿಂದ ಕೆಲವೊಂದು ಸುಧಾರಣೆಗಳು ತುಂಬ ಅವಶ್ಯಕವಾಗಿವೆಯೆಂದು ತಮ್ಮ ಆಳ್ವಿಕೆಯ ಉತ್ತರಾರ್ಧದಲ್ಲಿ ಅವರಿಗೆ ತಿಳಿದುಬಿಟ್ಟಿತ್ತು. ಇಂಗ್ಲಿಷರು ಹೊರಟುಹೋಗುವ ಮುನ್ನ ಬಂಗಾಲ, ಬಿಹಾರ ಮತ್ತು ಒರಿಸ್ಸಾ ಭಾಷಾವಾರು ಪ್ರಾಂತಗಳನ್ನು ರಚಿಸುದುದು ಈ ಸಂಗತಿಗೆ ಉದಾಹರಣೆಯಾಗಿದೆ. ಇಂಗ್ಲಿಷ್ ಸತ್ತೆಯು ಭಾರತದಲ್ಲಿ ಮುಂದುವರಿದಿದ್ದರೆ ಅವರು ಸಾಮಾನ್ಯ ತರ್ಕವನ್ನನುಸರಿಸಿ ಭಾಷಾವಾರು ಪ್ರಾಂತ ರಚನೆಯನ್ನು ಮುಂದುವರಿಸುತ್ತಿದ್ದರೋ, ಇಲ್ಲವೋ ಎನ್ನುವುದನ್ನು ಹೇಳುವುದು ಕಷ್ಟ.

ಬ್ರಿಟಿಷರು ಭಾಷಾವಾರು ಪ್ರಾಂತ ರಚನೆಯನ್ನು ಕುರಿತು ಯೋಚಿಸುವ ಮೊದಲೇ ಕಾಂಗ್ರೆಸ್ 1920ರಲ್ಲಿ ಗಾಂಧಿಯವರ ನಾಯಕತ್ವದಲ್ಲಿ ಭಾಷಾವಾರು ಪ್ರಾಂತ ರಚನೆಯನ್ನು ಆಧರಿಸಿದ ಒಂದು ಸಂವಿಧಾನವನ್ನು ತಯಾರಿಸಿತು. 1920ರಲ್ಲಿ ತಯಾರಿಸಿದ ಈ ಸಂವಿಧಾನಕ್ಕೆ ಆಧಾರಭೂತವಾದ ವಿಚಾರಪ್ರಣಾಲಿಯು ವಿಶುದ್ಧವಾದ ವಿಚಾರವಿನಿಮಯದ ಮೂಲಕ ತಯಾರಾಯಿತೋ ಎಂಬುದನ್ನು ಕಂಡುಹಿಡಿಯಲೆಂದು ಯಾರೂ ತಮ್ಮ ವೇಳೆಯನ್ನು ಹಾಳು ಮಾಡಬೇಕಿಲ್ಲ. ಆದರೆ ಬ್ರಿಟಿಷರು ಮಾತ್ರ ಭಾಷಾವಾರು ಪ್ರಾಂತ ರಚನೆಯ ಮಹತ್ವವನ್ನು ಗುರುತಿಸಿ, ಕೆಲವು ಪ್ರಾಂತಗಳನ್ನು ಶೀಘ್ರವಾಗಿ ಭಾಷಾವಾರು ರಚಿಸಿದರು ಕೂಡ.

1920ರ ಸಂವಿಧಾನದಂತೆ ಕಾಂಗ್ರೆಸ್ ತನ್ನ ತಲೆಯ ಮೇಲೆ ಹೊತ್ತುಕೊಂಡ ಹೊಣೆಯನ್ನು ಕುರಿತು 1945ರ ತನಕ ಉಲ್ಲೇಖಿಸಲೂ ಇಲ್ಲ. ಆದರೆ 1945ರಲ್ಲಿ ಅಧಿಕಾರವನ್ನು ಸ್ವೀಕರಿಸುವ ಹೊತ್ತು ಬರುತ್ತಲೇ ಕಾಂಗ್ರೆಸ್ ಎಂಬ ಮುದುಕಿಯ ಹುಂಜವನ್ನು ಮುಚ್ಚಿಡಲಾಗಿದ್ದರೂ ಭಾಷಾವಾರು ಪ್ರಾಂತ ರಚನೆಯ ಸೂರ್ಯ ಮಾತ್ರ ತಪ್ಪದೆ ಮೂಡಿದನು! ಇತ್ತೀಚೆಗಷ್ಟೇ ಭಾರತೀಯ ಸಂಸತ್ತಿನ ಒಬ್ಬ ಸದಸ್ಯನು ಭಾಷಾವಾರು ಪ್ರಾಂತರಚನೆಯ ಮಸೂದೆಯನ್ನು ತಂದು ಸಂಸತ್ತಿನಲ್ಲಿ ಈ ಪ್ರಶ್ನೆಗೆ ಅಗತ್ಯವಿದ್ದ ವೇಗವನ್ನು ದೊರಕಿಸಿಕೊಟ್ಟನು. ಸಂಸತ್ತಿನಲ್ಲಿ ನಡೆದ ಚರ್ಚೆಯ ಕಾಲಕ್ಕೆ ಈ ಪ್ರಶ್ನೆಗೆ ಸರಕಾರದ ವತಿಯಿಂದ ಉತ್ತರವನ್ನು ನೀಡುವ ಹೊಣೆ ಪ್ರತಿನಿಧಿಯಾದ ನನ್ನ ಮೇಲೆಯೇ ಬಂದಿತು. ಸ್ವಾಭಾವಿಕವಾಗಿಯೇ ವರಿಷ್ಠ ಪದಾಧಿಕಾರಿಗಳ ದೃಷ್ಟಿಕೋನವನ್ನು ಖಚಿತಪಡಿಸಿಕೊಳ್ಳಲೆಂದು ನಾನು ಈ ಸಂಗತಿಯನ್ನು ಅವರಲ್ಲಿಗೆ ಒಯ್ದೆ. ಅಚ್ಚರಿಯ ಸಂಗತಿ ಎಂದರೆ ಈ ಮೇಲಿನ (ಹೈಕಮಾಂಡ್)ವರು ಭಾಷಾವಾರಾಗಿ ಕೆಲವು ಪ್ರಾಂತಗಳನ್ನು ರಚಿಸುವುದಕ್ಕೆ ಪೂರ್ತಿ ವಿರೋಧಿಗಳಾಗಿದ್ದರು. ಇಂಥ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿಯವರೇ ಈ ಹೊಣೆಯನ್ನು ಹೊತ್ತುಕೊಳ್ಳುವುದು ಕೂಡ. ಅವರು ಕೂಡಲೇ ಆಂಧ್ರ ಪ್ರಾಂತವು ಸ್ಥಾಪನೆಗೊಳ್ಳಲಿದೆ ಎಂಬ ಭರವಸೆಯನ್ನೂ ನೀಡಿದರು. ಅವರ ಈ ಭರವಸೆಯಿಂದಾಗಿ ಭಾಷಾವಾರು ಪ್ರಾಂತ ರಚನೆಯ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಆ ಪ್ರಶ್ನೆ ಅಲ್ಲೇ ತಣ್ಣಗಾಯಿತು ಕೂಡ.

ಸಂವಿಧಾನದ ಮಸೂದೆಯು ತಯಾರಾದ ಬಳಿಕ ನನ್ನೆದುರು ಈ ಪ್ರಶ್ನೆಯನ್ನು ಎದುರಿಸುವ ಸನ್ನಿವೇಶವು ಬಂದಿತು. ನಾನು ಆಂಧ್ರ ಪ್ರಾಂತವನ್ನು ಸಂವಿಧಾನದ ‘ಆ’ ವಿಭಾಗದಲ್ಲಿ ಸೇರ್ಪಡಿಸಬೇಕೇ, ಬೇಡವೇ ಎಂಬುದನ್ನು ಪತ್ರದ ಮೂಲಕ ಅವರನ್ನು ವಿಚಾರಿಸಿದೆ. ಅದಕ್ಕೆ ಪುಷ್ಟಿಯನ್ನು ಒದಗಿಸಲೆಂದು ಅದನ್ನು ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆ ಹಾಗೂ ಅವರು ನೀಡಿದ ಭರವಸೆಗಳನ್ನು ಕೂಡ ಅವರಿಗೆ ನೆನಪು ಮಾಡಿಕೊಟ್ಟೆ. ಆದರೆ ಈ ಸಂದರ್ಭದಲ್ಲಿ ಎಲ್ಲಿ ನೊಣ ಸೀನಿತೋ, ನಾ ಕಾಣೆ. ಸಂವಿಧಾನ ಸಮಿತಿಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದರು ಉತ್ತರ ಪ್ರಾಂತದ ಒಬ್ಬ ವಕೀಲರಾದ ಧಾರ್ ಅವರ ಮುಂದಾಳತ್ವದಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಚಾರಣೆಯನ್ನು ನಡೆಸಲೆಂದು ಒಂದು ಸಮಿತಿಯನ್ನು ನೇಮಿಸಿದರು ಎನ್ನುವುದಂತೂ ನಿಜ!

ಭಾಷಾವಾರು ಪ್ರಾಂತ ರಚನೆಯ ಮೇರೆಗೆ ಸಂಯುಕ್ತ-ಮಹಾರಾಷ್ಟ್ರವು ನಿರ್ಮಾಣವಾದರೆ ಯಾವುದೇ ಪರಿಸ್ಥಿತಿಯಲ್ಲೂ ಮುಂಬೈ ನಗರವು ಅದರಲ್ಲಿ ಸೇರ್ಪಡೆಗೊಳ್ಳಲಾರದೆಂದು ಧಾರ್‌ರ ಸಮಿತಿಯು ನೀಡಿದ ಅಭಿಪ್ರಾಯದಿಂದಾಗಿ ಧಾರ್‌ರ ಸಮಿತಿಯು ನಮ್ಮ ನೆನಪಿನಿಂದ ಮಾಸಿ ಹೋಗಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನ ಜೈಪುರದ ಅಧಿವೇಶನದಲ್ಲಿ ಧಾರ್ ಸಮಿತಿಯ ವರದಿಯನ್ನು ಗಮನಿಸಲಾಯಿತು. ಜೈಪುರ ಅಧಿವೇಶನದಲ್ಲಿ ಧಾರ್ ಸಮಿತಿಯ ವರದಿಯನ್ನು ಗಮನಿಸಲಾಯಿತು. ಜೈಪುರ ಅಧಿವೇಶನದಲ್ಲಿ ವಿಶೇಷವಾಗಿ ಈ ಕೆಲಸಕ್ಕೆಂದು ಸ್ವತಃ ಪ್ರಧಾನಮಂತ್ರಿ, ವಲ್ಲಭಭಾಯಿ ಪಟೇಲ್ ಮತ್ತು ಡಾ. ಪಟ್ಟಾಭಿಸೀತಾರಾಮಯ್ಯ ಈ ಮೂವರನ್ನು ಆಯ್ಕೆ ಮಾಡಲಾಯಿತು. ಅವರು ಬರೆದ ವರದಿಯ ಸಾರಾಂಶವೆಂದರೆ, ಶೀಘ್ರವಾಗಿ ಆಂಧ್ರ ಪ್ರಾಂತದ ರಚನೆ ಆಗಬೇಕು, ಮದ್ರಾಸ್ ನಗರವನ್ನು ಮಾತ್ರ ತಮಿಳರಿಗೇನೆ ಕೊಡಬೇಕು! ಇದರ ವಿವರಗಳನ್ನು ಪರಿಶೀಲಿಸಲೆಂದು ಒಂದು ಸಮಿತಿಯನ್ನು ಕೂಡ ನೇಮಿಸಲಾಯಿತು. ಈ ಸಮಿತಿಯು ಬಹುಮತದಿಂದ ಒಂದು ವರದಿಯನ್ನು ತಯಾರಿಸಿತು. ಆದರೆ ಈ ವರದಿಗೆ ಶ್ರೀ ಪ್ರಕಾಶಮ್ ಅವರಂಥ ಪ್ರಮುಖ ವ್ಯಕ್ತಿಯದೇ ವಿರೋಧವಿತ್ತು. ಏಕೆಂದರೆ ಅವರಿಗೆ ಮದ್ರಾಸಿನಂತಹ ಪ್ರಮುಖ ನಗರವನ್ನು ಕಳೆದುಕೊಳ್ಳುವುದು ಬೇಕಿರಲಿಲ್ಲ. ಹೀಗಾಗಿ ಆಂಧ್ರ ಪ್ರಾಂತ ರಚನೆಯ ವಾಹನ ಇಲ್ಲಿಯೇ ಸಿಕ್ಕುಬಿದ್ದಿತು.

ತರುವಾಯದಲ್ಲಿ ಪೊಟ್ಟಿ ಶ್ರೀರಾಮುಲು ಅವರ ಮೃತ್ಯುವಿನ ಘಟನೆ ನಡೆಯಿತು. ಅವರು ಆಂಧ್ರ ಪಾಂತಕ್ಕಾಗಿ ತಮ್ಮ ಜೀವ ತೆತ್ತರು. ಕಾಂಗ್ರೆಸ್‌ವಾಲರೆಲ್ಲರೂ ಆಂಧ್ರ ಪ್ರಾಂತದ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿಯೂ ಸಾಮಾನ್ಯವಾದ ಸಂಗತಿಗಳಿಂದಾಗಿ ಸುಮ್ಮನೆ ತಡ ಮಾಡುತ್ತ ಶ್ರೀರಾಮುಲು ಅವರನ್ನು ಮೃತ್ಯುವಿನ ಕಂದರಕ್ಕೆ ನೂಕಿದರೆಂಬುದು ತುಂಬ ದುಃಖದಾಯಕ ಸಂಗತಿ. ಈಗ ನಿರ್ಮಾಣವಾಗುತ್ತಿರುವ ಆಂಧ್ರ ಪ್ರಾಂತವೆಂದರೆ ಪ್ರಧಾನಿ ಅವರು ಶ್ರೀರಾಮುಲು ಅವರ ಗತಾತ್ಮಕ್ಕೆ ಪ್ರದಾನಿಸುವ ಪಿಂಡವಷ್ಟೇ. ಪ್ರಪಂಚದಲ್ಲಿ ಇನ್ನೆಲ್ಲೂ ಇಂಥ ಘಟನೆಯನ್ನು ಸಹಿಸಿಕೊಳ್ಳುವ ರೆಂದು ಊಹಿಸಲು ಕೂಡದು!

ಭಾಷಾವಾರು ಪ್ರಾಂತ ರಚನೆಯನ್ನು ಮಾಡುವ ಮುನ್ನ ಮೂರು ಸಂಗತಿಳು ಪೂರ್ತಿ ಆಗಬೇಕು. ಮೊದಲ ಸಂಗತಿಯೆಂದರೆ ತನ್ನ ಹೊಟ್ಟೆ ಹೊರೆದುಕೊಳ್ಳುವ ಮಟ್ಟಿಗೆ ಪ್ರಾಂತವು ಸ್ವಯಂ ಪೂರ್ಣವಾಗಿರತಕ್ಕದ್ದು. ಸಂವಿಧಾನ ನಿರ್ಮಿತಿಯ ಕಾಲಕ್ಕೆ ಸಂಸ್ಥಾನಗಳ ವಿಲೀನೀಕರಣ ಪ್ರಶ್ನೆಯು ತಲೆದೋರಿದಾಗ ಆರ್ಥಿಕ ದೃಷ್ಟಿಯಿಂದ ಸ್ವಾವಲಂಬನೆಯು ಅಗತ್ಯದ್ದಾಗಿ ಕಂಡಿದ್ದರಿಂದಲೇ ಇದ್ದ ಸಂಸ್ಥಾನಗಳಿಗೆ ಸ್ವತಂತ್ರ ಪ್ರಾಂತದ ಸ್ಥಾನವೂ ಲಭಿಸಿತ್ತು ಉಳಿದವುಗಳನ್ನು ಹತ್ತಿರದ ಪ್ರಾಂತಗಳಿಗೆ ಜೋಡಿಸಿಕೊಳ್ಳಲಾಯಿತು.

ಆಂಧ್ರವು ಸ್ವಯಂಪೂರ್ಣವಾದ ಪ್ರಾಂತವೇ? ಆಂಧ್ರ ಪ್ರಾಂತದ ವಾರ್ಷಿಕ ಮುಂಗಡಪತ್ರದಲ್ಲಿ ಸುಮಾರು ಐದು ಕೋಟಿ ರೂಪಾಯಿಗಳ ಕೊರತೆ ಉಂಟಾಗಲಿದೆ ಎಂದು ನ್ಯಾಯಮೂರ್ತಿ ವಾಂಚ್ಛೂ ಅವರು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರು. ಹೀಗಿರುವಲ್ಲಿ ಹುಟ್ಟಿ ಬರಲಿರುವ ಆಂಧ್ರ ಪ್ರಾಂತವು ತೆರಿಗೆಯ ಮೂಲಕ ಸಂಪಾದನೆಯನ್ನು ಹೆಚ್ಚಿಸಿಕೊಂಡು ಇಲ್ಲವೇ ವೆಚ್ಚಗಳನ್ನು ಕಡಿತಗೊಳಿಸಿ ಈ ಕೊರತೆಯನ್ನು ನೀಗಿಸಿಕೊಳ್ಳ ಬಲ್ಲದೇ? ಇಂದು ಆಂಧ್ರದ ಎದುರು ಇದೊಂದು ಯಕ್ಷ ಪ್ರಶ್ನೆಯಾಗಿದೆ. ಕೇಂದ್ರ ಸರಕಾರವು ಈ ಕೊರತೆಯನ್ನು ತುಂಬಿ ಕೊಡುವ ಭರವಸೆಯನ್ನು ನೀಡಲಿದೆಯೇ? ಕೇಂದ್ರ ಸರಕಾರವು ಇಂತಹ ಹೊಣೆಯನ್ನು ಹೊರುವುದಾದರೆ ಅದು ಆಂಧ್ರದ ಮಟ್ಟಿಗೆ ಮಾತ್ರವೋ ಅಥವಾ ಇದೇ ರೀತಿಯಾಗಿ ಪೇಚಿನಲ್ಲಿರುವ ಎಲ್ಲ ಪ್ರಾಂತಗಳಿಗೂ ಅದು ಈ ಬಗ್ಗೆ ನೆರವು ನೀಡುವುದೇ? ಎಂಬೆಲ್ಲ ಪ್ರಶ್ನೆಗಳನ್ನು ಇಂದೇ ಬಗೆಹರಿಸಿಕೊಳ್ಳಬೇಕಿದೆ ಆಂಧ್ರ ಪ್ರಾಂತದ ಬಳಿ ಖಚಿತವಾದ ಬಂಡವಾಳವಿಲ್ಲ.

ಬಂಡವಾಳವಿಲ್ಲದೆಯೇ ಒಂದು ರಾಜ್ಯ ನಿರ್ಮಾಣವಾಗಬಲ್ಲದು ಎನ್ನುವುದನ್ನು ಎಲ್ಲಿಯೂ ಕೇಳಿಲ್ಲ. ತಮಿಳರ ನಿಷ್ಠಾವಂತ ಮುಂದಾಳು ವಾದ ರಾಜಗೋಪಾಲಾಚಾರಿ ಅವರು ಅಂಧ್ರ ಪ್ರಾಂತದ ಹೊಸ ಸರಕಾರಕ್ಕೆ ಮದರಾಸಿನಲ್ಲಿ ಒಂದು ದಿನದ ಮಟ್ಟಿಗೂ ಆಸರೆ ನೀಡಲು ಸಿದ್ಧರಿಲ್ಲ. ತಮ್ಮ ಹಿಂದೂ ಧರ್ಮದ ಸಾದಾ ‘ಆತಿಥ್ಯ’ವನ್ನು ತೋರುವ ಔಪಚಾರಿಕತೆ ಕೂಡ ಅವರಲ್ಲಿಲ್ಲ. ಹೊಸ ಆಂಧ್ರ ಸರಕಾರವು ತನ್ನ ಕಾರ್ಯ ಕಲಾಪಗಳಿಗಾಗಿ ಬೇರೊಂದು ಜಾಗವನ್ನು ಹುಡುಕಿಕೊಳ್ಳಬೇಕಿದೆ. ಗುಡಿಸಲುಗಳಲ್ಲಿ ತನ್ನ ಕಚೇರಿಗಳನ್ನು ಶುರು ಮಾಡಿಕೊಳ್ಳಬೇಕಾಗಿ ಬಂದಿದೆ. ಆಂಧ್ರವು ಯಾವ ಊರನ್ನು ತನ್ನ ರಾಜಧಾನಿಯಾಗಿ ಆಯ್ದುಕೊಳ್ಳಲಿದೆ? ಆಂಧ್ರವು ಸಹರಾ ಮರುಭೂಮಿಯಂತಿದೆ. ಅವರಿಗೆ ಎಲ್ಲೋ ಹುಲ್ಲುಗಾವಲು ಕಾಣುತ್ತಿಲ್ಲ. ಆಂಧ್ರ ಇಂಥ ಮರಳುಗಾಡಿನಲ್ಲಿ ತನಗಾಗಿ ಒಂದು ಒಳ್ಳೆಯ ಹಾಗೂ ಆರೋಗ್ಯಕರವಾದ ನೆಲೆಯನ್ನು ಕಂಡುಕೊಳ್ಳಬೇಕಿದ್ದು ತಾತ್ಕಾಲಿಕ ಕಚೇರಿಗಳ ಕಟ್ಟಡಗಳಿಗಾಗಿ ದುಂದುವೆಚ್ಚ ನಡೆದಿದೆ.

ಸರಕಾರವು ಈ ಸಂಗತಿಯನ್ನು ಕುರಿತು ಎಂದಾದರೂ ಯೋಚಿಸಿದೆಯೇ? ಸರಕಾರವು ಆಂಧ್ರಕ್ಕೆ ಖಾಯಂ ಆಗಿ ಒಂದು ಜಾಗವನ್ನು ನೀಡಬಾರದೇಕೆ? ರಾಜಧಾನಿಯಾಗಲು ವಾರಂಗಲ್ ಸೂಕ್ತ ನಗರ. ಅದು ಪ್ರಾಚೀನ ಕಾಲದಲ್ಲಿ ಆಂಧ್ರದ ರಾಜಧಾನಿಯಾಗಿತ್ತು. ಅದು ರೈಲು ಜಂಕ್ಷನ್ ಕೂಡ ಆಗಿದೆ. ಅಲ್ಲದೆ ಈ ನಗರದಲ್ಲಿ ಸಾಕಷ್ಟು ಕಟ್ಟಡಗಳಿವೆ. ಈ ನಗರವು ಆಂಧ್ರದ ಭಾಗವಾಗಿದ್ದರೂ ಇಂದು ಹೈದರಾಬಾದ್ ಸಂಸ್ಥಾನದಲ್ಲಿದೆ. ತಾತ್ವಿಕವಾಗಿ ಹೈದರಾಬಾದ್ ಸಂಸ್ಥಾನವನ್ನು ಒಡೆದು ಅದರಲ್ಲಿರುವ ಆಂಧ್ರದ ಭಾಗವನ್ನು ಸೇರಿಸಿ ಹೊಸ ಆಂಧ್ರ ಪ್ರಾಂತವು ತಯಾರಾಗಬೇಕು. ಹೈದರಾಬಾದ್ ಸಂಸ್ಥಾನವನ್ನು ಒಡೆಯುವಲ್ಲಿ ಪ್ರಧಾನಿಯವರ ಸ್ವಾರ್ಥ ಇದ್ದಿರಬಹುದಾದರೂ ಆಂಧ್ರಕ್ಕಾಗಿ ಹೈದರಾಬಾದಿನ ಕೆಲವು ಭಾಗಗಳನ್ನು ಕಿತ್ತುಕೊಂಡು ವಾರಂಗಲ್‌ನ್ನು ರಾಜಧಾನಿಯಾಗಿ ಮಾಡುವ ಅನುಕೂಲವನ್ನು ಒದಗಿಸಲು ಅಡ್ಡಿಯೇನಿದೆ? ಪರರಾಜ್ಯದಿಂದ ಒಂದು ಭಾಗವನ್ನು ಕಿತ್ತುಕೊಳ್ಳುವುದು ಭಾರತಕ್ಕೆ ಹೊಸದೇನಲ್ಲ. ಆದರೆ ಪ್ರಧಾನಿಯವರಿಗೆ ಹೈದರಾಬಾದ್ ಹಾಗೂ ಕಾಶ್ಮೀರ ಇವೆರಡೂ ಸಂಸ್ಥಾನಗಳ ಬಗೆಗೆ ಈಶ್ವರ ಆಜ್ಞೆಗೆ ವಿರುದ್ಧವಾಗಿ ನಡೆದುಕೊಳ್ಳುವುದಿದೆ. ಆದರೆ ಶೀಘ್ರದಲ್ಲಿಯೇ ಪ್ರಧಾನಿಗಳು ಸ್ವಂತದ ಕಣ್ಣುಗಳಿಂದಲೇ ಇದರ ದುಷ್ಪರಿಣಾಮವನ್ನು ನೋಡಬೇಕಾಗಲಿದೆ ಎನ್ನುವಲ್ಲಿ ನನಗೆ ಸಂದೇಹವಿಲ್ಲ.

ಇಲ್ಲಿ ಸ್ವಲ್ಪವಿಷಯಾಂತರವಾಯಿತು. ನನ್ನ ಆಶಯವೆಂದರೆ ಆ ರಾಜ್ಯವು ಆರ್ಥಿಕ ದೃಷ್ಟಿಯಿಂದ ಸ್ವಯಂಪೂರ್ಣವಾಗಬೇಕಲ್ಲದೆ ಭವಿಷ್ಯದಲ್ಲಿ ಭಾಷಾವಾರು ಪ್ರಾಂತ ರಚನೆಯನ್ನು ಮಾಡುವಾಗ ಈ ಅಂಶವು ಹೆಚ್ಚು ಮಹತ್ವದ್ದು. ಎರಡನೆಯ ಅಂಶವೆಂದರೆ ಭಾಷಾವಾರು ಪ್ರಾಂತ ರಚನೆ ಆಗುವಾಗ ಸಂಭವಿಸಬಹುದಾದ ಇಷ್ಟಾನಿಷ್ಟ ಘಟನೆಗಳ ಕುರಿತು ಮೊದಲೇ ಅರಿತಿರಬೇಕು. ಈ ವರ್ಗೀಕರಣಕ್ಕೆ ತಕ್ಕಂತೆ ಹಿಂದೂಸ್ಥಾನದ ಜನವಸತಿಗಳ ಹುಟ್ಟು-ಸಾವು, ಜಾತಿ- ವಂಶಗಳ ವಿವರವಾದ ಪರಿಶೀಲನೆ, ಕರಾರುವಾಕ್ಕಾದ ಸಂಶೋಧನೆ ಹಾಗೂ ಸರ್ವೇಕ್ಷಣೆಗಳನ್ನು ಕೈಗೊಳ್ಳಬಹುದಾದ ಅಧ್ಯಯನಶೀಲರಾದ ವಿದ್ಯಾರ್ಥಿಗಳಿಲ್ಲ ಎಂಬುದು ದುರದೃಷ್ಟದ ಸಂಗತಿ.

ನಮ್ಮ ದಶವಾರ್ಷಿಕ ಜನಗಣತಿಯ ವರದಿಯನ್ನು ಆಧರಿಸಿ ಮುಸಲ್ಮಾನರೆಷ್ಟು? ಹಿಂದೂಗಳೆಷ್ಟು? ಅಸ್ಪೃಶ್ಯರೆಷ್ಟು? ಜ್ಯೂಗಳೆಷ್ಟು ಮತ್ತು ಕ್ರಿಶ್ಚಿಯನ್ನರೆಷ್ಟು ಎನ್ನುವ ಮಾಹಿತಿಯಷ್ಟೇ ಲಭ್ಯ. ದೇಶದಲ್ಲಿ ಒಟ್ಟು ಧರ್ಮಗಳೆಷ್ಟು ಎಂದು ತಿಳಿದು ಯಾವ ಪ್ರಯೋಜನವೂ ಇಲ್ಲ. ಪ್ರತಿಯೊಂದು ಭಾಷಾ ವಿಭಾಗದಲ್ಲಿ ಜಾತಿ ವಿಭಜನೆ ಹೇಗಿದೆ ಎಂಬ ಮಾಹಿತಿ ನಮಗೆ ಬೇಕು. ಇದನ್ನು ಕುರಿತು ನಮ್ಮಲ್ಲಿ ತೀರಾ ಸ್ವಲ್ಪ ಮಾಹಿತಿ ಇದೆ. ಹೀಗಾಗಿ ಒಬ್ಬನೇ ತನ್ನ ಜ್ಞಾನ ಹಾಗೂ ಮಾಹಿತಿಯನ್ನು ಅವಲಂಬಿಸಬೇಕಾಗಿದೆ. ಒಂದು ಪ್ರಾಂತದಲ್ಲಿ ಬಹುಮಟ್ಟಿಗೆ ಒಂದು ಇಲ್ಲವೇ ಎರಡು ಜಾತಿಗಳ ಸಂಖ್ಯಾ ಪ್ರಾಬಲ್ಯವಿದ್ದು ಉಳಿದವುಗಳು ತೀರಾ ಅಲ್ಪಸಂಖ್ಯವಾದವುಗಳು. ಅವು ಈ ಬಹುಸಂಖ್ಯಾ ಜಾತಿಗಳನ್ನು ಅವಲಂಬಿಸಿರುತ್ತವೆಂದರೆ ತಪ್ಪಾಗಲಿಕ್ಕಿಲ್ಲ.

ಉದಾಹರಣೆಗೆ ಹೇಳುವುದಾದರೆ ಪಂಜಾಬಿನ ಪೆಪ್ಸ್ ಪ್ರಾಂತವನ್ನು ನೋಡಿ. ಅಲ್ಲಿ ಜಾಟರ ಸಂಖ್ಯಾ ಪ್ರಾಬಲ್ಯವಿದ್ದು, ಅಲ್ಲಿ ಅಸ್ಪೃಶ್ಯರು ಪೂರ್ತಿಯಾಗಿ ಅವರನ್ನು ಅವಲಂಬಿಸಿದ್ದಾರೆ, ಆಂಧ್ರದ ಎಲ್ಲೆಡೆಗಳಲ್ಲಿ ಮುಖ್ಯವಾಗಿ ಎರಡು ಇಲ್ಲವೇ ಮೂರು ಜಾತಿಗಳು ಕಾಣಸಿಗುತ್ತವೆ. ರೆಡ್ಡಿ, ಕಮ್ಮ ಹಾಗೂ ಕಪ್ಪುಈ ಮೂರು ಜಾತಿಗಳು. ಜಮೀನ್ದಾರಿ, ಸರಕಾರಿ ನೌಕರಿ, ವ್ಯಾಪಾರ ಉದ್ದಿಮೆಗಳಲ್ಲೆಲ್ಲಾ ಅವರೇ ಸ್ವಾಮಿತ್ವವನ್ನು ಮೆರೆಯುತ್ತಾರೆ. ಅಲ್ಲಿ ಅಸ್ಪೃಶ್ಯರಿಗೆ ಕೆಳಮಟ್ಟದ ಪರಾವಲಂಬಿ ಸ್ಥಾನವಿದೆ. ಮಹಾರಾಷ್ಟ್ರವನ್ನೇ ತೆಗೆದುಕೊಳ್ಳಿ. ಮಹಾರಾಷ್ಟ್ರದ ಗ್ರಾಮಾಂತರ ಗಳಲ್ಲೆಲ್ಲ ಮರಾಠರ ವಸತಿ ಅಪಾರವಾಗಿದೆ. ಬ್ರಾಹ್ಮಣ, ಗುಜರ, ಅಸ್ಪೃಶ್ಯ ಹಾಗೂ ಮೀನುಗಾರರು ಅಮುಖ್ಯ ಸ್ಥಾನದಲ್ಲಿ ಇರುವರು. ಒಂದು ಕಾಲಕ್ಕೆ ಬ್ರಾಹ್ಮಣರು ಹಾಗೂ ಬನಿಯಾಗಳು ನಿರ್ಭಯರಾಗಿ ಇದ್ದರು. ಆದರೆ ಈಗ ಕಾಲ ಬದಲಾಯಿಸಿದೆ.

ಗಾಂಧೀಜಿಯವರ ಹತ್ಯೆಯ ತರುವಾಯ ಬ್ರಾಹ್ಮಣರು ಹಾಗೂ ಬನಿಯಾಗಳು ಮರಾಠರ ಪ್ರಕೋಪಕ್ಕೆ ಹೆದರಿ ಹಳ್ಳಿಹಳ್ಳಿಗಳಿಂದ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಓಡಿ ಹೋಗಿ ನಗರಗಳಲ್ಲಿ ಆಸರೆಯನ್ನು ಕಂಡುಕೊಂಡರು. ಆದರೆ ದುರ್ದೈವಿಗಳಾದ ಅಸ್ಪೃಶ್ಯರು, ಮೀನುಗಾರರು ಹಾಗೂ ಮಾಲಿ ಜನ ಮರಾಠರ ಸೊಕ್ಕು ಹಾಗೂ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಾ ಬಾಳನ್ನು ಸವೆಸುತ್ತಿರುವರು. ವಿಚಿತ್ರವಾದ ಈ ಜಾತಿ ರಚನೆಯನ್ನು ಅರಿಯದವರು ಇಂಥ ಅನ್ಯಾಯಗಳನ್ನು ಸಹಿಸಿಕೊಳ್ಳಲೇಬೇಕು. ಭಾಷಾವಾರು ಪ್ರಾಂತ ರಚನೆಯಲ್ಲಿ ಅಲ್ಪಸಂಖ್ಯಾತ ಜಾತಿಯವರಿಗೆ ಎಂಥ ನೆಲೆಯಿದೆ? ಅವರು ಕಾನೂನು ಮಂಡಳಿಗೆ ಚುನಾಯಿತರಾಗಿ ಬರುವ ಸಾಧ್ಯತೆಯಾದರೂ ಇದೆಯೇ? ಅವರು ಆರ್ಥಿಕ ಪ್ರಗತಿಯನ್ನು ನಿರೀಕ್ಷಿಸಬಹುದೇ? ಅವರಿಗೆ ಪ್ರಾಂತದ ಸರಕಾರಗಳಲ್ಲಿ ನೌಕರಿಗಳು ಲಭಿಸಲಿವೆಯೇ? ಪರಿಸ್ಥಿತಿ ಹೀಗಿರುವಲ್ಲಿ ಭಾಷಾವಾರು ಪ್ರಾಂತ ರಚನೆ ಎಂದರೆ ‘ಸ್ವರಾಜ್ಯ’ವನ್ನು ಬಹುಸಂಖ್ಯಾ ಜಾತಿಯವರ ಕೈಗೆ ಕೊಟ್ಟಂತೆ. ಇದೇ ತಾನೇ ಗಾಂಧೀಜಿಯವರ ಸ್ವರಾಜ್ಯದ ಅವಸ್ಥೆ!

ಈ ಪ್ರಶ್ನೆಯ ಬದಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರಿಗೆ ಭಾಷಾವಾರು ಪ್ರಾಂತ ರಚನೆ ಎಂಬ ಶಬ್ದ ಪ್ರಯೋಗ ಅರ್ಥವಾಗದು. ಇಂಥ ಪ್ರಾಂತಗಳನ್ನು ಜಾಟ ಪ್ರಾಂತ, ರೆಡ್ಡಿ ಪ್ರಾಂತ ಇಲ್ಲವೇ ಮರಾಠ ಪ್ರಾಂತ ಎಂದರೇನೇ ಅವರಿಗೆ ಸರಿಯಾಗಿ ಅರ್ಥವಾದೀತು. ಮೂರನೆಯ ಅಂಶವೆಂದರೆ, ಒಂದು ಭಾಷೆಯನ್ನು ಆಡುವವರದ್ದು. ಒಂದು ಪ್ರಾಂತದಲ್ಲಿ ಸೇರ್ಪಡೆ ಮಾಡುವುದರಿಂದ ಅವರಲ್ಲಿ ಅಖಂಡತೆ ನಿರ್ಮಾಣವಾದೀತೇ? ಮಹಾರಾಷ್ಟ್ರದಲ್ಲಿ ಎಲ್ಲಾ ಮಹಾರಾಷ್ಟ್ರೀಯರು ಒಗ್ಗಟ್ಟಾಗುವರೇ? ಎಲ್ಲಾ ಆಂಧ್ರರು ಆಂಧ್ರಪ್ರದೇಶದಲ್ಲಿ ಒಳಗೊಳ್ಳುವರೇ? ಅಖಂಡತೆ ಎಂದರೆ ಹೊಸದೊಂದು ಬಣವನ್ನು ತಯಾರಿಸುವುದಲ್ಲ. ಇದು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲಗಳ ಅಖಂಡತೆಗೂ ಸಂಬಂಧಪಟ್ಟದ್ದು. ಉತ್ತರ ಪ್ರದೇಶದ ಹಾಗೆ ಇಡಿಯ ಹಿಂದಿ ಮಾತನಾಡುವ ಸಮುಚ್ಚಯದವರ ಒಂದು ಪ್ರಾಂತ ಏಕಿರಬಾರದು? ಆದರೆ ಹೀಗೆ ಅಖಂಡತೆಯನ್ನು ಬೆಂಬಲಿಸುವವರು ಇತರ ಪ್ರಾಂತಗಳೊಡನೆ ಜಗಳ ಕಾಯ ಬಯಸುತ್ತಾರೆಯೇ? ಅಖಂಡತೆ ಎಂದರೆ ತಾನು ಸ್ವತಂತ್ರನು, ಬೇರೆಯವರಿಗಿಂತ ಭಿನ್ನನು ಎಂದು ಅರ್ಥ ಮಾಡಿಕೊಂಡರೆ ಮೌರ್ಯ ಸಾಮ್ರಾಜ್ಯ ಒಡೆದು ಹೋದ ಹಾಗೆ ಹಿಂದೂಸ್ಥಾನವು ಕೂಡ ತುಸು ಕಾಲಾವಧಿಯಲ್ಲಿ ಒಡೆದು ಹೋಳಾಗಲಿದೆ.
      
ಅಂದ ಮಾತ್ರಕ್ಕೆ ಭಾಷಾವಾರು ಪ್ರಾಂತ ರಚನೆಯ ಬೇಡಿಕೆಗೆ ಯಾವುದೇ ಬದಿಯಿಲ್ಲ ಎಂದಲ್ಲ. ಭಾಷಾವಾರು ಪ್ರಾಂತ ರಚನೆಯ ಪರದೆಯ ಹಿಂದೆ ಆಯಾ ಪ್ರಾಂತಗಳ ಬಹುಸಂಖ್ಯಾ ಜಾತಿಗಳ ಕೈಯಿಂದ ಭಾಷಾವಾರು ಅಂತ ರಚನೆಯ ಹೆಣ ಬೀಳುವಂತಾಗಬಾರದು ಎಂಬುದಾಗಿ ಸೂಕ್ತ ಖಚಿತ ಸ್ವರೂಪದ ಮುನ್ನೆಚ್ಚರಿಕೆ ಹಾಗೂ ಸಮತೋಲನೆಯನ್ನು ಉಳಿಸಿಕೊಳ್ಳುವುದನ್ನು ಕುರಿತಾದ ಸೂಚನೆಯಿದು. (‘ಜನತಾ’: ಮೇ 2, 1953)

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News