ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

Update: 2018-09-01 16:59 GMT

ಶಿವಮೊಗ್ಗ, ಸೆ. 1: ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿದ್ದ, ಸ್ಥಳೀಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ 35 ವಾರ್ಡ್‍ಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಸೆ. 3 ರಂದು ಫಲಿತಾಂಶ ಹೊರಬೀಳಲಿದೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‍ಗೆ ಪಾಲಿಕೆ ಚುನಾವಣೆಯು ಅತ್ಯಂತ ಮಹತ್ವದ್ದಾಗಿತ್ತು. ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದವು. ವಿಶೇಷವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಭಾರೀ ಹಣಾಹಣಿ ಏರ್ಪಟ್ಟಿತ್ತು. ಆ ಎರಡು ಪಕ್ಷಗಳ ಪ್ರಮುಖ ನಾಯಕರು ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಮತದಾರರ ಮನವೊಲಿಕೆಗೆ ನಾನಾ ತಂತ್ರ-ಪ್ರತಿತಂತ್ರ ರೂಪಿಸಿದ್ದವು.

ಕಳೆದ ನಗರಸಭೆ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ, ಕೆಜೆಪಿಯೊಂದಿಗಿನ ದಾಯಾದಿ ಕಲಹದಿಂದ ತೀವ್ರ ಮುಖಭಂಗಕ್ಕೀಡಾಗಿದ್ದ ಬಿಜೆಪಿಯು, ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಾಳಯದಲ್ಲಿ, ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆಯಿಲ್ಲದಿದ್ದರೂ ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳು ಜಯ ಸಂಪಾದಿಸುವ ಲೆಕ್ಕಾಚಾರದಲ್ಲಿದೆ. ಉಳಿದಂತೆ ಜೆಡಿಎಸ್ ಪಕ್ಷವು, ಕಳೆದ ನಗರಸಭೆ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಸಿಕ್ಕ ಸ್ಥಾನಗಳ ನಿರೀಕ್ಷೆಯಲ್ಲಿದೆ. 'ಕಿಂಗ್' ಆಗಲು ಸಾಧ್ಯವಿಲ್ಲ ಎಂಬುವುದರ ಸ್ಪಷ್ಟ ಅರಿವಿರುವ ಆ ಪಕ್ಷವು, ಮತ್ತೆ 'ಕಿಂಗ್ ಮೇಕರ್' ಆಗಿ ಕಾಂಗ್ರೆಸ್ ಅಥವಾ ಬಿಜೆಪಿಯ ಜೊತೆ ಹೊಂದಾಣಿಕೆ ರಾಜಕಾರಣದ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಶಾಂತ: ಕಳೆದ ಸರಿಸುಮಾರು 2-3 ವಾರಗಳಿಂದ ನಗರದ ಬಹುತೇಕ ಬಡಾವಣೆಗಳಲ್ಲಿ ರಾಜಕೀಯ ಚಟುವಟಿಕೆಗಳ ಕಾರುಬಾರು ಸಖತ್ ಜೋರಾಗಿತ್ತು. ಪ್ರಚಾರದ ಅಬ್ಬರ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ ಅಭ್ಯರ್ಥಿಗಳು ಮತ್ತವರ ಬೆಂಬಲಿಗರೇ ಕಾಣ ಸಿಗುತ್ತಿದ್ದರು. 'ಮೈಕಾಸುರನ' ಆರ್ಭಟ ಕೂಡ ಜೋರಾಗಿತ್ತು. 

ಶುಕ್ರವಾರ ಸಂಜೆ ಮತದಾನ ಪೂರ್ಣಗೊಂಡ ನಂತರ ರಾಜಕೀಯ ಚಟುವಟಿಕೆಗಳು ಅಕ್ಷರಶಃ ಸ್ತಬ್ದಗೊಂಡಿದೆ. ಧಾರಾಕಾರ ಮಳೆ ಸುರಿದ ನಂತರದ ಕಂಡುಬರುವ ಶಾಂತ ಸ್ಥಿತಿ ಮನೆ ಮಾಡಿದೆ. ಮತ್ತೊಂದೆಡೆ ಯಾವ ವಾರ್ಡ್‍ನಲ್ಲಿ ಯಾರು ಗೆಲ್ಲಬಹುದು? ಸೋಲಬಹುದು? ಯಾರಿಗೆ ಎಷ್ಟು ಮತ ಬಿದ್ದಿದೆ? ಎಂಬಿತ್ಯಾದಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. 

ಕುತೂಹಲ!
ಪಾಲಿಕೆಯ 35 ವಾರ್ಡ್‍ಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿದೆ. ರಾಜಕೀಯ ಪಕ್ಷಗಳು, ಗುಪ್ತಚರ ಏಜೆನ್ಸಿಗಳು ಹಾಗೂ ರಾಜಕೀಯ ವಿಶ್ಲೇಷಕರು ಯಾವ್ಯಾವ ವಾರ್ಡ್‍ಗಳಲ್ಲಿ ಯಾವ ಪಕ್ಷ ಗೆಲ್ಲುವ-ಸೋಲುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ತಮ್ಮದೆ ಆದ ಮೂಲಗಳಿಂದ ಸಂಗ್ರಹಿಸಿವೆ. ಇಂತಹ ಪಕ್ಷಕ್ಕೆ ಇಂತಿಷ್ಟು ಸ್ಥಾನ ಲಭ್ಯವಾಗುವ ಸಾಧ್ಯಸಾಧ್ಯತೆಗಳ ಕುರಿತಂತೆ ತಮ್ಮದೆ ಆದ ವರದಿ ತಯಾರಿಸಿಕೊಂಡಿವೆ.  

ಒಟ್ಟಾರೆ ಮಾಹಿತಿಗಳ ಅನುಸಾರ, ಈ ಹಿಂದಿನ ನಗರಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ್ದ ಬಿಜೆಪಿ ಪಕ್ಷ ಈ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಕಳೆದ ಬಾರಿಯಷ್ಟೆ ಸ್ಥಾನ ಗಳಿಸಲಿದ್ದು, ಲಾಭವೂ ಇಲ್ಲ - ನಷ್ಟವೂ ಇಲ್ಲ. ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಕಳೆದ ಅವಧಿಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಆ ಪಕ್ಷ ಗೆಲ್ಲುವುದು ಅನುಮಾನ ಎಂದು ಹೇಳಲಾಗುತ್ತಿದೆ. ಉಳಿದಂತೆ ಎಸ್‍ಡಿಪಿಎ ಒಂದು ಹಾಗೂ ಎರಡರಿಂದ-ಮೂವರು ಪಕ್ಷೇತರ ಅಭ್ಯರ್ಥಿಗಳು ಜಯ ಸಂಪಾದಿಸುವ ಸಾಧ್ಯತೆಗಳಿವೆ ಎಂದು ವಿವಿಧ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತವೆ. 

ಜೂಜು ಬಲು ಜೋರು: ಎಲ್ಲೆಡೆ ಬೆಟ್ಟಿಂಗ್ ಭರಾಟೆ
ಪಾಲಿಕೆ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೆ ನಗರಾದ್ಯಂತ ಬೆಟ್ಟಿಂಗ್ ಭರಾಟೆ ಸಖತ್ ಜೋರಾಗಿದೆ. ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಕುತೂಹಲಿಗಳು, ಪಕ್ಷಗಳ ಕಾರ್ಯಕರ್ತರು, ಕೆಲ ಜುಗಾರಿಗಳು ಸಾವಿರದಿಂದಿಡಿದು ಲಕ್ಷ ರೂ.ಗಳವರೆಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಟಿ-20 ಕ್ರಿಕೆಟ್ ಮ್ಯಾಚ್‍ಗಳ ವೇಳೆ ನಡೆಯುವ ಜೂಜಿಗಿಂತಲೂ ಹೆಚ್ಚು ಬಾಜಿ ಪಾಲಿಕೆ ಚುನಾವಣೆಯ ಮೇಲೆ ಕಂಡುಬರುತ್ತಿದೆ ಎಂದು ಮೂಲಗಳು ಮಾಹಿತಿ ನೀಡುತ್ತವೆ. 

ಆಯಾ ವಾರ್ಡ್‍ನಲ್ಲಿದ್ದವರೇ, 'ತಮ್ಮ ವಾರ್ಡ್‍ನಲ್ಲಿ ಇವರು ಗೆಲ್ಲುತ್ತಾರೆ-ಸೋಲುತ್ತಾರೆ' ಎಂದು ಪಣ ಕಟ್ಟುತ್ತಿದ್ದಾರೆ. ಹೈವೋಲ್ಟೇಜ್ ಹಣಾಹಣಿ ಹಾಗೂ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿದ್ದ ವಾರ್ಡ್‍ಗಳಲ್ಲಂತೂ ಭಾರೀ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಪ್ರಸ್ತುತ ಚುನಾವಣಾ ಕಣದಲ್ಲಿರುವ ಕೆಲ ಪ್ರಭಾವಿ ರಾಜಕಾರಣಿಗಳ ಸೋಲು-ಗೆಲುವಿನ ಮೇಲೂ ಜೂಜು ನಡೆಸಲಾಗುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. 

'ಕೆಲ ಅಭ್ಯರ್ಥಿಗಳು ನಾಟ್‍ರಿಚೇಬಲ್-ಸ್ವಿಚ್‍ಆಫ್'
ಇಷ್ಟು ದಿನ ಮತದಾರರಿಗೆ ಎಲ್ಲೆಂದರಲ್ಲಿ ಸಿಗುತ್ತಿದ್ದ, ಕಂಡಕಂಡಲ್ಲಿ ಕೈ ಮುಗಿಯುತ್ತಿದ್ದ, ಕಾಲು ಹಿಡಿಯುತ್ತಿದ್ದ ಕೆಲ ಅಭ್ಯರ್ಥಿಗಳೀಗ ಅಕ್ಷರಶಃ 'ನಾಟ್ ರಿಚೇಬಲ್' ಆಗಿದ್ದಾರೆ. ಹೌದು. ಮತದಾನ ಪೂರ್ಣಗೊಂಡ ಕೆಲ ಗಂಟೆಗಳ ಅಂತರದಲ್ಲಿಯೇ ಕೆಲ ಅಭ್ಯರ್ಥಿಗಳ ಮೊಬೈಲ್ ಫೋನ್‍ಗಳು ಸ್ವಿಚ್ ಆಫ್ ಆಗಿದ್ದರೆ, ಮತ್ತೆ ಕೆಲವರ ಮೊಬೈಲ್‍ಗಳು 'ನಾಟ್ ರಿಚೇಬಲ್' ಆಗಿವೆ. ಉಳಿದಂತೆ ಇಷ್ಟು ದಿನ ಚುನಾವಣೆ ಬ್ಯುಸಿಯ ಒತ್ತಡದಲ್ಲಿದ್ದ ಬಹುತೇಕ ಅಭ್ಯರ್ಥಿಗಳು, ಶನಿವಾರ ರಿಲ್ಯಾಕ್ಸ್ ಮೂಡ್‍ನಲ್ಲಿದ್ದರು. 

ಇನ್ನೂ ಕೆಲ ಅಭ್ಯರ್ಥಿಗಳು ತಮ್ಮ ವಾರ್ಡ್‍ನ ವಿವಿಧ ಬೂತ್‍ಗಳಲ್ಲಿ ಆಗಿರುವ ಮತದಾನದ ಆಧಾರದ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಸುತ್ತಿದ್ದರು. ಮತ್ತೆ ಕೆಲ ಅಭ್ಯರ್ಥಿಗಳು ದೇವರುಗಳ ಮೊರೆ ಹೋಗಿದ್ದಾರೆ. ದೇವಾಲಯಗಳಿಗೆ ಭೇಟಿಯಿತ್ತು ವಿಶೇಷ ಪೂಜೆ ನಡೆಸುತ್ತಿದ್ದಾರೆ. ಫಲಿತಾಂಶ ಏನಾಗುವುದೋ? ತಮ್ಮ ರಾಜಕೀಯ ತಂತ್ರಗಾರಿಕೆಗಳು ಫಲ ನೀಡಲಿವೆಯಾ? ಮತದಾರರು ಕೈ ಹಿಡಿಯಲಿದ್ದಾರಾ? ಎಂಬ ಗುಂಗಿನಲ್ಲಿ ಬಹುತೇಕ ಅಭ್ಯರ್ಥಿಗಳಿದ್ದು, ಸೆ. 3 ರ ಫಲಿತಾಂಶ ದಿನದತ್ತ ಚಿತ್ತ ನೆಟ್ಟಿದ್ದಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News