ಸಂವಿಧಾನದ ಪ್ರತಿಯನ್ನು ಸುಟ್ಟವರು ದೇಶವನ್ನು ಬಿಟ್ಟಾರೆಯೇ?

Update: 2018-09-01 18:30 GMT

ಸಂವಿಧಾನದ ಪ್ರತಿಯನ್ನು ಸುಟ್ಟ ಈ ಘಟನೆಯು ತನ್ನಿಂತಾನೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ದೇಶವ್ಯಾಪಿ ವೈರಲ್ ಆದರೂ ಸಾರ್ವಜನಿಕರು ಅದರ ವಿರುದ್ಧ ಮಾತೇ ಆಡಲಿಲ್ಲ. ಯಾವ್ಯಾವುದನ್ನೋ ಚರ್ಚಿಸುವ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳಿಗೂ ಇದು ಸುದ್ದಿ ಎನಿಸಲಿಲ್ಲ. ಜನಸಾಮಾನ್ಯರಿರಲಿ ಪ್ರಜ್ಞಾವಂತರೂ, ಚಿಂತಕರೂ ಈ ಕುರಿತು ಮಾತಾಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನಪ್ರತಿನಿಧಿಗಳು ಇದನ್ನು ಪಕ್ಷಾತೀತವಾಗಿ ಖಂಡಿಸಬೇಕಿತ್ತು. ಅವರಂತೂ ಮಾತೇ ಆಡಲಿಲ್ಲ. ಯಥಾಪ್ರಕಾರ ಈ ಘಟನೆಯನ್ನು ವಿರೋಧಿಸಿ ದೇಶದಾದ್ಯಂತ ಬೀದಿಗೆ ಬಿದ್ದವರು ಅದೇ ದಲಿತ ಸಂಘಟನೆಗಳು. ದಲಿತ ಸಂಘಟನೆಗಳಿಗೆ ಮಾತ್ರವೇ ದೇಶದ ಸಂವಿಧಾನ ರಕ್ಷಿಸುವ ಜವಾಬ್ದಾರಿಯಿದೆಯೇ?

ತ್ತೀಚೆಗೆ ದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ಕೆಲವು ಜಾತಿವಾದಿ ಧರ್ಮಾಂಧ ಕಿಡಿಗೇಡಿಗಳು ಭಾರತದ ಸಂವಿಧಾನದ ಪ್ರತಿಯನ್ನು ಸುಟ್ಟರು. ದಿಲ್ಲಿಯ ಈ ಜಂತರ್ ಮಂತರ್ ಮೈದಾನ ತುಂಬಾ ಖ್ಯಾತಿ ಪಡೆದದ್ದು 2014ರಲ್ಲಿ ಜನಲೋಕಪಾಲ್ ಬಿಲ್‌ಗಾಗಿ ಮತ್ತು ದೇಶದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಝಾರೆ ಎಂಬ ವ್ಯಕ್ತಿ ಧರಣಿ ಕುಳಿತಾಗ. ಅದಕ್ಕೂ ಮುನ್ನ ಅಲ್ಲಿ ಅನೇಕ ರಾಜಕೀಯ ಸಮಾವೇಶಗಳು ನಡೆದಿದ್ದರೂ ಮಾಧ್ಯಮಗಳು ಅದ್ಯಾವುದನ್ನೂ ಅಷ್ಟೊಂದು ಖ್ಯಾತಿಗೊಳಿಸಲಿಲ್ಲ. ಆದರೆ ಹಝಾರೆಯವರು ಅಲ್ಲಿ ಕುಳಿತು ಅಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರಾಯೋಜಿತ ಧರಣಿ ಎಂದು ಹೇಳಲ್ಪಡುತ್ತಿರುವ ಜನಲೋಕಪಾಲ್‌ಗಾಗಿ ನಡೆಸಿದ ಹೋರಾಟದಿಂದ ಜಂತರ್ ಮಂತರ್ ಸಹ ದಿಢೀರನೆ ಖ್ಯಾತಿಗೆ ಬಂತು. ಆ ನಂತರ ಕಾಂಗ್ರೆಸ್ ಸರಕಾರ ಉರುಳಿತು. ಬಿಜೆಪಿ ಅಧಿಕಾರಕ್ಕೆ ಬಂತು ಮತ್ತು ಶ್ರೀಮಾನ್ ನರೇಂದ್ರ ಮೋದಿಯವರು ಪ್ರಧಾನಿಯೂ ಆದರು. ಆದರೆ ಅಂದಿನಿಂದ ಭ್ರಷ್ಟಾಚಾರವೇನೂ ಕೊನೆಯಾಗಲಿಲ್ಲ. ಆದರೂ ಅಣ್ಣಾ ಹಝಾರೆ ಮಾತ್ರ ಸದ್ದಿಲ್ಲದಂತಾದರು! ಅಂದರೆ ಭ್ರಷ್ಟಾಚಾರ ವಿರೋಧಿ ಆಂದೋಲನವೆಂಬುದೊಂದು ಪ್ರಾಯೋಜಿತ ಕಾರ್ಯಕ್ರಮ ಎಂಬುದು ನಿಜವೇ ಆಯಿತು!! ಆ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತು ಹಝಾರೆ, ಮೋದಿಯವರನ್ನು ಪ್ರಧಾನಿ ಮಾಡಿದರು, ಕೇಜ್ರಿವಾಲ್ ಎಂಬ ಶಿಷ್ಯ ‘ಆಮ್ ಆದ್ಮಿ ಪಕ್ಷ’ ಸ್ಥಾಪಿಸುವಲ್ಲಿ ನೆರವಾದರು. ಮಾತ್ರವಲ್ಲ ಕೇಜ್ರಿವಾಲ್ ಅವರನ್ನು ದಿಲ್ಲಿಯ ಮುಖ್ಯಮಂತ್ರಿಯಾಗಿಸುವಲ್ಲಿಯೂ ಪರೋಕ್ಷವಾಗಿ ಸಹಕರಿಸಿದರು. ಇಷ್ಟು ಖ್ಯಾತಿ ಜಂತರ್ ಮಂತರ್ ಮೈದಾನಕ್ಕೆ ಪ್ರಾಪ್ತವಾದ ಹಿನ್ನೆಲೆಯಲ್ಲಿಯೇ ಕಿಡಿಗೇಡಿಗಳು ಇದೇ ಜಂತರ್ ಮಂತರ್ ಮೈದಾನದಲ್ಲಿ ಹಾಡಹಗಲೇ ಪೊಲೀಸರ ಸಮ್ಮುಖದಲ್ಲಿಯೇ ಭಾರತದ ಆಡಳಿತದ ಆತ್ಮವೆಂದೇ ಕರೆಯಲ್ಪಡುವ ಸಂವಿಧಾನದ ಪ್ರತಿಯನ್ನು ಸುಟ್ಟು ಪ್ರತಿಭಟಿಸಿದರು. ಅವರ ಈ ಆಕ್ರೋಶಕ್ಕೆ ಕಾರಣ ಪರಿಶಿಷ್ಟರಿಗೆ ಇರುವ ಮೀಸಲಾತಿ ಸವಲತ್ತು ಮತ್ತು ದೌರ್ಜನ್ಯ ವಿರೋಧಿ ಕಾಯ್ದೆ. ಪರಿಶಿಷ್ಟರ ಹಕ್ಕುಗಳ ರಕ್ಷಣೆ ಮತ್ತು ಅವರಿಗೆ ನೀಡಿರುವ ಮೀಸಲಾತಿ ಅನ್ಯಾಯ, ಇಂತಹ ಸಂವಿಧಾನ ಬೇಡ ಎಂಬುದು ಸಂವಿಧಾನದ ಪ್ರತಿ ಸುಟ್ಟ ದುರುಳರ ಅಭಿಮತ. ಸಂವಿಧಾನದ ಪ್ರತಿ ಸುಡುವಾಗ; ಸಂವಿಧಾನಕ್ಕೆ ಧಿಕ್ಕಾರ, ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರಿಗೆ ಧಿಕ್ಕಾರ ಎಂದು ಕಿಡಿಗೇಡಿಗಳು ಘೋಷಣೆಗಳನ್ನು ನಿರ್ಭಯವಾಗಿ ಕೂಗುತ್ತಾರೆ. ಮನುಸ್ಮತಿಗೆ ಜೈಕಾರವನ್ನು ಹಾಕುತ್ತಾರೆ. ಇಷ್ಟೆಲ್ಲಾ ದೇಶದ್ರೋಹದ ಘಟನೆ ಕಣ್ಣಮುಂದೆ ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದರು! ದೇಶದ ಅಖಂಡತೆಗೆ ಧಕ್ಕೆ ತರುವ ಚಟುವಟಿಕೆಗಳು, ದೇಶದ ಸಂವಿಧಾನಕ್ಕೆ ಅಪಚಾರ ಮಾಡುವ ಘಟನೆಗಳು, ದೇಶದ ನೋಟಿಗೆ, ಧ್ವಜಕ್ಕೆ, ದೇಶದ ಶಾಸನ ಸಾರುವ ಪ್ರತಿಮೆಗಳಿಗೆ ಸಾರ್ವಜನಿಕರು ಯಾರೇ ಆದರೂ ಅಗೌರವ ತೋರಿದರೆ ಅಥವಾ ವಿರೂಪಗೊಳಿಸಿದರೆ ಅದು ಅಪರಾಧ ಮತ್ತು ಅಂತಹ ಕಿಡಿಗೇಡಿಗಳನ್ನು ದೇಶದ್ರೋಹದ ಆಧಾರದ ಮೇಲೆ ಯಾರದೇ ದೂರಿಲ್ಲದೆ ಸ್ವಯಂ ಪ್ರೇರಿತರಾಗಿ ಬಂಧಿಸಬಹುದೆಂಬ ಕಾನೂನಿನ ಪ್ರಾಥಮಿಕ ಜ್ಞಾನವೇ ಇಲ್ಲದ ಪೊಲೀಸರೂ ಕೂಡ ಇಂತಹ ಪ್ರಕರಣಗಳಲ್ಲಿ ದೇಶದ್ರೋಹಿಗಳೇ ಆಗುತ್ತಾರೆ.

ವಿಪರ್ಯಾಸವೆಂದರೆ ಸಂವಿಧಾನದ ಪ್ರತಿಯನ್ನು ಸುಟ್ಟ ಈ ಘಟನೆಯು ತನ್ನಿಂತಾನೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ದೇಶವ್ಯಾಪಿ ವೈರಲ್ ಆದರೂ ಸಾರ್ವಜನಿಕರು ಅದರ ವಿರುದ್ಧ ಮಾತೇ ಆಡಲಿಲ್ಲ. ಯಾವ್ಯಾವುದನ್ನೋ ಚರ್ಚಿಸುವ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳಿಗೂ ಇದು ಸುದ್ದಿ ಎನಿಸಲಿಲ್ಲ. ಜನಸಾಮಾನ್ಯರಿರಲಿ ಪ್ರಜ್ಞಾವಂತರೂ, ಚಿಂತಕರೂ ಈ ಕುರಿತು ಮಾತಾಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನಪ್ರತಿನಿಧಿಗಳು ಇದನ್ನು ಪಕ್ಷಾತೀತವಾಗಿ ಖಂಡಿಸಬೇಕಿತ್ತು. ಅವರಂತೂ ಮಾತೇ ಆಡಲಿಲ್ಲ. ಯಥಾಪ್ರಕಾರ ಈ ಘಟನೆಯನ್ನು ವಿರೋಧಿಸಿ ದೇಶದಾದ್ಯಂತ ಬೀದಿಗೆ ಬಿದ್ದವರು ಅದೇ ದಲಿತ ಸಂಘಟನೆಗಳು. ದಲಿತ ಸಂಘಟನೆಗಳಿಗೆ ಮಾತ್ರವೇ ದೇಶದ ಸಂವಿಧಾನ ರಕ್ಷಿಸುವ ಜವಾಬ್ದಾರಿಯಿದೆಯೇ? ದಲಿತರಿಗೆ ಮಾತ್ರವೇ ಸಂವಿಧಾನದ ಸವಲತ್ತುಗಳಿವೆಯೇ? ಹೀಗೆ ನಾವು ಪ್ರಶ್ನೆಗಳಿಟ್ಟ ಮೇಲೆ ಮೈಸೂರಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಸಂವಿಧಾನದ ಪ್ರತಿ ಸುಟ್ಟವರ ವಿರುದ್ಧ ಪ್ರತಿಭಟಿಸಿದರು. ನಂತರ ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ದಲಿತರು ಆಯೋಜಿಸಿದ ಪ್ರತಿಭಟನಾ ರ್ಯಾಲಿಯೊಡನೆ ಇತರ ಪ್ರಗತಿಪರ ಸಂಘಟನೆಯವರು ಸೇರಿಕೊಂಡು ಧ್ವನಿಗೂಡಿಸಿದ್ದು ಬಿಟ್ಟರೆ ದೇಶದಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಈ ಕೃತ್ಯದ ವಿರುದ್ಧ ಇತರ ಜನಸಮುದಾಯಗಳಿಂದ ಪ್ರತಿರೋಧ ಕಂಡುಬರಲಿಲ್ಲ. ಅಂದರೆ ಪ್ರತಿರೋಧ ನೀಡದ ಮನಸ್ಸುಗಳೂ ಸಂವಿಧಾನದ ಪ್ರತಿ ಸುಟ್ಟವರ ಮನಸ್ಥಿತಿಯನ್ನೇ ಹೊಂದಿದ್ದವೇ? ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಒಂದು ವೇಳೆ ಸಂವಿಧಾನವು ತಾರತಮ್ಯ ಧೋರಣೆೆಯನ್ನು ಹೊಂದಿದೆ ಅದನ್ನು ಸುಟ್ಟಿದ್ದು ಸರಿಯಾಗಿಯೇ ಇದೆ ಎಂದು ಇತರರು ಅಂದುಕೊಂಡಿದ್ದರೆ ಅವರಷ್ಟು ಮೂರ್ಖರು ಇರಲಾರರೆಂದೇ ಹೇಳಬೇಕಾಗುತ್ತದೆ.
ಅವರೆಲ್ಲರೂ ಅಂದುಕೊಂಡಿರುವಂತೆ ಇದು ಕೇವಲ ಅಂಬೇಡ್ಕರ್ ಅವರೊಬ್ಬರೇ ಏಕಮುಖವಾಗಿ ಬರೆದು ಅರ್ಪಿಸಿದ ಸಂವಿಧಾನವಲ್ಲ. ಸಂವಿಧಾನ ಸಭೆಯ ಸರ್ವಸದಸ್ಯರ ನಡುವೆ ಇದು ವ್ಯಾಪಕವಾಗಿ ವರ್ಷಗಟ್ಟಲೆ ಚರ್ಚಿಸಲ್ಪಟ್ಟಿದೆ, ದೇಶದೆಲ್ಲಾ ಭೌಗೋಳಿಕ ಹಿನ್ನೆಲೆಯಲ್ಲಿ ಎಲ್ಲಾ ಜನಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿತಗಳಿಗೆ ಅನುಗುಣವಾಗಿ, ದೇಶದ ಸಮಗ್ರ ಅಭಿವೃದ್ಧಿ, ದೇಶದೆಲ್ಲರ ಅಖಂಡತೆ ಮತ್ತು ಸರ್ವಜನರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿವ, ಎಲ್ಲರಿಗೂ ಮಾನವ ಘನತೆಯನ್ನು ಕೊಡಮಾಡುವ ಅದ್ಭುತವಾದ ಆಶಯಗಳನ್ನು ಹೊಂದಿರುವ ಅಪರೂಪದ ಸಂವಿಧಾನ ನಮ್ಮದು. ಸಂವಿಧಾನ ಜಾರಿಯಾದ ಮೇಲೆಯೇ ಎಲ್ಲಾ ಜನಜಾತಿಯ ಜೀವನಮಟ್ಟವು ಉನ್ನತಗೊಂಡಿದೆ. ಎಲ್ಲಾ ಜಾತಿ ಧರ್ಮದ ಮಹಿಳೆಯರ ಹಕ್ಕುಗಳು, ಎಲ್ಲಾ ಜಾತಿಧರ್ಮದ ಕೃಷಿಕರ ಹಕ್ಕುಗಳು, ಎಲ್ಲಾ ಜಾತಿಧರ್ಮದ ಕಾರ್ಮಿಕರ, ವಿದ್ಯಾರ್ಥಿಗಳ, ನೌಕರರ ಹಕ್ಕುಗಳು ರಕ್ಷಣೆಯಲ್ಲಿರುವುದು. ಇಷ್ಟಿದ್ದೂ ಯಾರೊಬ್ಬರೂ ಸಂವಿಧಾನದ ಪ್ರತಿ ಸುಟ್ಟಿದ್ದರ ಬಗ್ಗೆ ಸಣ್ಣದೊಂದು ಪ್ರತಿರೋಧ ತೋರಲಿಲ್ಲವೆಂದರೆ ಅವರ್ಯಾರಿಗೂ ಈ ದೇಶದ ಸಂವಿಧಾನದ ಬಗ್ಗೆ ಗೌರವವೇ ಇಲ್ಲವೇ?
ಒಂದು ದೇಶದ ಜನವಾಸಿಗಳಾಗಿ ಆ ದೇಶದ ಕಾನೂನು, ಆ ನೆಲದ ಸಂಸ್ಕೃತಿ ಮತ್ತು ಆ ದೇಶದ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಪಡೆದುಕೊಂಡಿಲ್ಲವೆಂದರೆ ಅದಕ್ಕಿಂತ ದುರಂತ ಇನ್ನೊಂದಿರಲಾರದು. ಹಾಗೆ ತನ್ನ ದೇಶದ ಸಂವಿಧಾನವನ್ನು ತನ್ನ ದೇಶವಾಸಿಗಳಿಗೆ ಮನವರಿಕೆ ಮಾಡಿಕೊಟ್ಟಿಲ್ಲದ ಆಳುವ ಸರಕಾರಗಳೇ ಅಪರಾಧಿಗಳು. ತನ್ನ ದೇಶದ ಜನರಿಗೆ ಸಂವಿಧಾನದ ಆಶಯಗಳನ್ನು ತಿಳಿಸದೆ ಅವರನ್ನು ಕತ್ತಲೆಯಲ್ಲೇ ಇಟ್ಟು ಮೂಢರನ್ನಾಗಿ ಮಾಡಿ ಅವರಿಂದ ಅಧಿಕಾರ ಮಾತ್ರ ಪಡೆದು ದೇಶವಾಳುತ್ತಿರುವ ಜನಪ್ರತಿನಿಧಿಗಳೇ ಅಯೋಗ್ಯರು. ವಿವಿಧ ಧರ್ಮಕ್ಕೆ ಸೇರಿದವರಿಗೆ ಆಯಾ ಧರ್ಮದ ಧಾರ್ಮಿಕ ಕಟ್ಟಳೆಗಳ ಬಗ್ಗೆ ಅರಿವಿಲ್ಲದೇ ಹೋದರೂ ನಡೆಯುತ್ತದೆ. ಆದರೆ ದೇಶದ ಸಂವಿಧಾನದ ಬಗ್ಗೆಯೇ ಅರಿವಿಲ್ಲವೆಂದಾದರೆ ಅವರು ಆ ದೇಶದ ಪ್ರಜೆಗಳಾಗಿರಲು ಅರ್ಹರೇ ಆಲ್ಲ.
ಎಂತಹ ನಾಚಿಕೆಗೇಡಿನ ಸಂಗತಿಯಿದು. ಹೀಗೆ ಸಂವಿಧಾನದ ಪ್ರತಿ ಸುಟ್ಟದ್ದನ್ನು ಇಂದು ಖಂಡಿಸದೇ ಮೌನವಾಗಿದ್ದರೆ ನಾಳೆ ಈ ದೇಶವನ್ನೇ ಸುಟ್ಟಾರು ಎಚ್ಚರ. ಸಂವಿಧಾನದ ಪ್ರತಿ ಸುಟ್ಟವರು ಅನಕ್ಷರಸ್ಥರಲ್ಲ. ‘ಮೀಸಲಾತಿ ವಿರೋಧಿ ಸಂಘಟನೆ’ ಎಂಬ ಸಂಘದ ಕಾರ್ಯಕರ್ತರು. ಮೀಸಲಾತಿ ಎಂದರೇನು? ಮೀಸಲಾತಿ ಪರಿಕಲ್ಪನೆ ಹೇಗೆ ಬಂತು? ಯಾರಿಂದ ಬಂತು? ಯಾಕೆ ಬಂತು? ಎಂಬುದರ ಇತಿಹಾಸವೇ ಗೊತ್ತಿಲ್ಲದೆ ತಮ್ಮ ಬುಡಕ್ಕೆ ತಾವೇ ಬೆಂಕಿಯಿಟ್ಟುಕೊಳ್ಳುವ ಧೂರ್ತಬುದ್ಧಿ ಇದು. ಯಾವ ಮನುಸ್ಮತಿಯನ್ನು ಸಂವಿಧಾನವಾಗಬೇಕೆಂದು ಈ ಕಿಡಿಗೇಡಿ ಮನಸ್ಥಿತಿಗಳು ಬಯಸುತ್ತಾವೆಯೋ ಅವಕ್ಕೆ ಮನುಸ್ಮತಿಯೂ ಗೊತ್ತಿಲ್ಲ. ಗೊತ್ತಿದ್ದರೆ ಅವರು ಮೊದಲು ಮನುಸ್ಮತಿಯನ್ನೇ ಸುಡುತ್ತಿದ್ದರು. ಯಾಕೆಂದರೆ ಮನುಸ್ಮತಿ ಬ್ರಾಹ್ಮಣರನ್ನು ಹೊರತು ಪಡಿಸಿ ಬೇರಾರಿಗೂ ಯಾವ ಸ್ವಾತಂತ್ರ್ಯವನ್ನೂ ಕೊಡಮಾಡುವುದಿಲ್ಲ! ಅಲ್ಲಿ ಪೂರ್ಣ ಮೀಸಲಾತಿ ಬ್ರಾಹ್ಮಣರಿಗೆ ಮಾತ್ರವೇ ಇದೆ. ಬ್ರಾಹ್ಮಣರಿಗೆ ಸರ್ವಸ್ವಾತಂತ್ರ್ಯವನ್ನೂ ಸರ್ವ ಅಪರಾಧಗಳಿಗೂ ಲೈಸನ್ಸನ್ನೂ ದಯಪಾಲಿಸುವ ಮತ್ತು ಎಲ್ಲಾ ತರದ ಶಿಕ್ಷೆಗಳಿಂದಲೂ ಬ್ರಾಹ್ಮಣರನ್ನು ಮುಕ್ತಗೊಳಿಸುವ ಸರ್ವಾಧಿಕಾರವನ್ನೇ ಅದು ದಯಪಾಲಿಸುತ್ತದೆ. ಅದೇ ವೇಳೆಗೆ ಕ್ಷತ್ರಿಯ, ವೈಶ್ಯರಿಗೆ ಅನೇಕ ಕಟ್ಟುಪಾಡುಗಳ ಮೀಸಲಾತಿ ನೀಡುತ್ತದೆ ಮತ್ತು ಶೂದ್ರಾತಿಶೂದ್ರರಿಗೆ ಸರ್ವವಿಧದಲ್ಲೂ ಕಟ್ಟಳೆಗಳನ್ನೇ ವಿಧಿಸುತ್ತದೆ. ಇದರ ಆಧಾರದಲ್ಲಿ ಸಮಾಜವು ಸುಮಾರು 2,000 ವರ್ಷಗಳ ಕಾಲ ನಡೆದುಕೊಂಡು ಬಂದಿದೆ. ನಮ್ಮ ಹಿರಿಯ ತಲೆಮಾರು ಮನುಸ್ಮತಿಯ ಕಡುಕಟ್ಟಳೆಗಳಿಂದ ನಲುಗಿದೆ. ಆದರೆ ಮನುಸ್ಮತಿಗೆ ವಿರುದ್ಧವಾಗಿ 1950ರಿಂದ ಬಾಬಾಸಾಹೇಬರ ನೇತೃತ್ವದ ಸರ್ವಜನರ ಹಕ್ಕು ಅಧಿಕಾರಗಳನ್ನು ಕಾಪಾಡುವ, ಸರ್ವರಿಗೂ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ನೀಡುವ ಸಂವಿಧಾನ ಜಾರಿಗೆ ಬಂದಿದೆ. ಇದನ್ನೂ ಸುಟ್ಟು ನಿಮಗೆ ನೀವೇ ಬೆಂಕಿಹಚ್ಚಿಕೊಂಡು ಸಾಯಬೇಕೆಂದುಕೊಂಡಿರುವಿರಾ?
ಸಂವಿಧಾನದ ಪ್ರತಿ ಸುಟ್ಟವರ ವಿರುದ್ಧ ಪ್ರತಿಭಟಿಸುವ ಭರದಲ್ಲಿ ಕೆಲವರು ಭಗವದ್ಗೀತೆ ಮತ್ತು ಹಿಂದೂ ದೇವರುಗಳ ಚಿತ್ರಗಳನ್ನು ಸುಟ್ಟದ್ದೂ ಖಂಡನಾರ್ಹವೇ. ಯಾರೋ ಕಿಡಿಗೇಡಿಗಳು ದೇಶದ ಒಂದೆಡೆ ಬೆಂಕಿಯಿಟ್ಟರೆ ಅದನ್ನು ಪ್ರತಿಭಟಿಸಿ ಮತ್ತೊಂದು ಕಡೆ ಬೆಂಕಿಯಿಡುವುದೇ ಉತ್ತರವಾದರೆ ಯಾರೂ ಬದುಕುಳಿಯುವುದಿಲ್ಲ. ಬೆಂಕಿಗೆ ನೀರು ಉತ್ತರವಾಗಬೇಕು. ಅಷ್ಟಕ್ಕೂ ಸಂವಿಧಾನಕ್ಕೆ ಭಗವದ್ಗೀತೆಯಾಗಲಿ, ಮನುಸ್ಮತಿಯಾಗಲಿ ಅಥವಾ ದೇವರುಗಳ ಚಿತ್ರಗಳಾಗಲಿ ಸಮವೇ? ಹಾಗೆ ಉತ್ತರ ಕೊಡುವ ಮೂಲಕ ನಾವೇ ಸಂವಿಧಾನಕ್ಕೊಂದು ಪ್ರತಿಗ್ರಂಥವನ್ನು ತೋರಿದಂತಾಯಿತು ಮತ್ತು ಅವರ ಆಲೋಚನೆಗಳಿಗೇ ಪುಷ್ಟಿಕೊಟ್ಟಂತಾಯಿತು ಅಲ್ಲವೇ? ಸಂವಿಧಾನದ ಪ್ರತಿ ಸುಟ್ಟವರ ಉದ್ದೇಶವೇ ಅದಾಗಿದೆ. ಅವರ ತಂತ್ರವೇ ಸಂವಿಧಾನದ ಪ್ರತಿ ಸುಡುವ ಮೂಲಕ ಜನರ ಭಾವನೆಗಳನ್ನು ಪರೀಕ್ಷಿಸುವುದಾಗಿದೆ. ಸಂವಿಧಾನದ ಪ್ರತಿ ಸುಟ್ಟಾಗ ವಿಶೇಷವಾಗಿ ದಲಿತರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವರು ಪರೀಕ್ಷಿಸಿದರು, ದಲಿತರು ಅವರ ನಿರೀಕ್ಷೆಯನ್ನು ಸಫಲಗೊಳಿಸಿದರು!
ಹಾಗೆಂದು ದಲಿತರು ಸುಮ್ಮನಿರಬೇಕಿತ್ತೇ? ಇಲ್ಲ. ದಲಿತರ ಪ್ರತಿಭಟನೆ ನ್ಯಾಯಯುತವಾದುದು. ದಲಿತರಿಗೆ ದೇಶದ ಮೇಲೆ ಇರುವ ಕಾಳಜಿ ಸರ್ವಕಾಲಕ್ಕೂ ಮೆಚ್ಚುವಂತಹದ್ದು. ಅವರ ಸಂವೇದನೆ ಮತ್ತು ದೇಶಪ್ರೇಮ ಎಂದಿಗೂ ಉತ್ಕಟವಾಗಿಯೇ ಇದೆ. ಅವರೂ ಪ್ರತಿಭಟಿಸದೆ ಹೋಗಿದ್ದರೆ ಸಂವಿಧಾನದ ಪ್ರತಿ ಸುಟ್ಟವರನ್ನು ಬಂಧಿಸಲಾಗುತ್ತಿರಲಿಲ್ಲ. ಅವರ ಹೋರಾಟದ ಮಾದರಿ ಪ್ರಶ್ನಾರ್ಹವೇ ಹೊರತು ಹೋರಾಟವೇ ಪ್ರಶ್ನಾರ್ಹವಲ್ಲ. ಎಂದಿನ ಅದೇ ಸಿದ್ಧಮಾದರಿಯ ಬೀದಿ ಹೋರಾಟವನ್ನು ತೊರೆದು ಈ ಬಾರಿ ದಲಿತರು ಮತ್ತು ಪ್ರಗತಿಪರರು ಆಯಾ ಪ್ರದೇಶದ ಜನಪ್ರತಿನಿಧಿಗಳ ಅಂದರೆ, ಶಾಸಕರು, ಸಂಸದರು, ಮಂತ್ರಿಗಳು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ, ನಗರಸಭೆ, ಪಾಲಿಕೆಗಳ ಜನಪ್ರತಿನಿಧಿಗಳ ಮನೆಯ ಮುಂದೆ ೇರಾವ್ ಮಾಡಿ ಅವರು ಸಂವಿಧಾನದ ಪ್ರತಿ ಸುಟ್ಟವರ ಕುರಿತು ಬಹಿರಂಗವಾಗಿ ಮತ್ತು ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೇಳುವಂತೆ ಒತ್ತಡ ಹೇರಬೇಕಿತ್ತು. ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳಿಗೇ ಹೆಚ್ಚು ಅಧಿಕಾರವಿರುವುದರಿಂದ ಅವರ ಮೂಲಕವೇ ಪ್ರತಿಭಟನೆಗಳು ಪಕ್ಷಾತೀತವಾಗಿ ನಡೆಯುವಂತೆ ಒತ್ತಡ ತಂದಿದ್ದರೆ ಅವರ ಹಿಂಬಾಲಕರೂ ಬೀದಿಗಿಳಿಯುತ್ತಿದ್ದರು. ಆಗ ಮಾಧ್ಯಮಗಳ ಮುಖವಾಡಗಳೂ ಕಳಚುತ್ತಿದ್ದವು. ಜನಸಾಮಾನ್ಯರಿಗೂ ಸಂವಿಧಾನದ ಅರಿವು ಉಂಟಾಗುತ್ತಿತ್ತು. ಇಷ್ಟಕ್ಕೇ ದುರುಳರ ದುರ್ವರ್ತನೆಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಇಲ್ಲವಾದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಸ್ವಾತಂತ್ರ್ಯ ದಿನ ನಮ್ಮ ಪ್ರಧಾನಿ ಮೋದಿ, ರಾಜ್ಯದ ಮುಖ್ಯಮಂತ್ರಿಗಳು, ರಾಷ್ಟ್ರಪತಿ, ರಾಜ್ಯಪಾಲರುಗಳು ಈ ವಿಷಯದ ಮೇಲೆ ತಮ್ಮ ಭಾಷಣ ಮಾಡಿದ್ದರೆ ಅವರ ಭಾಷಣಗಳಿಗೆ ತೂಕವಿರುತ್ತಿತ್ತು. ಯಾರೂ ಇದನ್ನು ಪ್ರಸ್ತಾಪ ಮಾಡದೆ ದೇಶದ ಸಂವಿಧಾನಕ್ಕೆ ಪರೋಕ್ಷವಾಗಿ ಅಗೌರವ ತೋರಿಸಿ ಅವರೂ ದೇಶವಿರೋಧಿ ನಡೆಯನ್ನೇ ತೋರಿದರು. ಸಂವಿಧಾನಕ್ಕೆ ಅಗೌರವ ತೋರಿದ ಎಲ್ಲರಿಗೂ ಧಿಕ್ಕಾರ.

Writer - ಡಾ. ಕೃಷ್ಣಮೂರ್ತಿ ಚಮರಂ

contributor

Editor - ಡಾ. ಕೃಷ್ಣಮೂರ್ತಿ ಚಮರಂ

contributor

Similar News

ಜಗದಗಲ
ಜಗ ದಗಲ