‘‘ನಾನು ಕೂಡ ನಗರದ ನಕ್ಸಲ್’’ -ಅರುಂಧತಿ ರಾಯ್
ಮತದಾರರ ನಿಜವಾದ ದತ್ತಾಂಶ ಮತ್ತು ಲೋಕನೀತಿ ಸಿಎಸ್‌ಡಿಎಸ್- ಎಬಿಪಿ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರೀ ವೇಗದಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದೆ. ನಾವು ಅಪಾಯಕಾರಿ ಕಾಲವನ್ನು ಪ್ರವೇಶಿಸುತ್ತಿದ್ದೇವೆ ಎಂಬುದೇ ಇದರ ಅರ್ಥ. ಜನಪ್ರಿಯತೆಯ ಈ ನಷ್ಟಕ್ಕೆ ಏನು ಕಾರಣಗಳಿವೆಯೋ, ಆ ಕಾರಣಗಳಿಂದ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಇನ್ನು ಮುಂದೆ ಕ್ರೂರವಾದ ಹಾಗೂ ಸತತವಾದ ಪ್ರಯತ್ನಗಳು ನಡೆಯಲಿವೆ.
ಆಗಸ್ಟ್ 30ರ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮುಖಪುಟದ ಒಂದು ವರದಿ, ‘‘ಬಂಧಿತರು ಸರಕಾರ ಉರುಳಿಸುವ ಫ್ಯಾಶಿಸ್ಟ್ ವಿರೋಧಿ ಸಂಚಿನ ಭಾಗಿಗಳು’’ ಎನುತ್ತದೆ. ಇಷ್ಟರಲ್ಲೇ ನಮಗೆ ಗೊತ್ತಾಗಿದೆ: ಸ್ವತಃ ತನ್ನ ಪೊಲೀಸರೇ ಫ್ಯಾಶಿಸ್ಟ್ ಎಂದು ಕರೆಯುವ ಒಂದು ಸರಕಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಇವತ್ತಿನ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯವೊಂದಕ್ಕೆ ಸೇರಿರುವುದು ಒಂದು ಅಪರಾಧ. ಕೊಲೆಯಾಗುವುದೇ ಒಂದು ಅಪರಾಧ. ಗುಂಪು ಥಳಿತಕ್ಕೊಳಗಾಗುವುದು ಒಂದು ಅಪರಾಧ. ಬಡವನಾಗಿರುವುದು ಒಂದು ಅಪರಾಧ. ಬಡವರ ಪರವಾಗಿ ನಿಂತು ವಾದಿಸುವುದೆಂದರೆ ಸರಕಾರ ಉರುಳಿಸಲು ಸಂಚು ರೂಪಿಸುವುದು.
ಪೊಲೀಸರು ಏಕಕಾಲದಲ್ಲಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರ, ಕವಿಗಳ, ನ್ಯಾಯವಾದಿಗಳ ಹಾಗೂ ಪಾದ್ರಿಗಳ ಮನೆಗಳ ಮೇಲೆ ದಾಳಿ ನಡೆಸಿ ಐದು ಮಂದಿಯನ್ನು ಹಾಸ್ಯಾಸ್ಪದ ಆಪಾದನೆಗಳ ಆಧಾರದಲ್ಲಿ ಬಂಧಿಸಿದರು. ಇದು ಯಾಕೆ ನಡೆಯಿತು?
ಮತದಾರರ ನಿಜವಾದ ದತ್ತಾಂಶ ಮತ್ತು ಲೋಕನೀತಿ ಸಿಎಸ್‌ಡಿಎಸ್- ಎಬಿಪಿ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರೀ ವೇಗದಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದೆ. ನಾವು ಅಪಾಯಕಾರಿ ಕಾಲವನ್ನು ಪ್ರವೇಶಿಸುತ್ತಿದ್ದೇವೆ ಎಂಬುದೇ ಇದರ ಅರ್ಥ. ಜನಪ್ರಿಯತೆಯ ಈ ನಷ್ಟಕ್ಕೆ ಏನು ಕಾರಣಗಳಿವೆಯೋ, ಆ ಕಾರಣಗಳಿಂದ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಇನ್ನು ಮುಂದೆ ಕ್ರೂರವಾದ ಹಾಗೂ ಸತತವಾದ ಪ್ರಯತ್ನಗಳು ನಡೆಯಲಿವೆ. ಇನ್ನು ಚುನಾವಣೆಗಳು ನಡೆಯುವವರೆಗೆ ಇದೊಂದು ಮುಂದುವರಿಯುವ ಸರ್ಕಸ್ ಆಗಿರುತ್ತದೆ; ಬಂಧನಗಳು, ಹತ್ಯೆಗಳು, ಗುಂಪು ಥಳಿತಗಳು, ಬಾಂಬ್ ದಾಳಿಗಳು, ಸುಳ್ಳು ಧ್ವಜ ದಾಳಿಗಳು, ದೊಂಬಿಗಳು, ಧಾರ್ಮಿಕ ಕಾರಣಗಳಿಗಾಗಿ ಅಸಹಾಯಕ ಜನರ ಹತ್ಯೆಗಳು....
ವಿಭಜಿಸು ಮತ್ತು ಆಳು(ಡಿವೈಡ್ ಆ್ಯಂಡ್ ರೂಲ್), ಹೌದು. ಆದರೆ ಇದಕ್ಕೆ ಇನ್ನೊಂದನ್ನು ಸೇರಿಸಿಕೊಳ್ಳಿ- ಬೇರೆಡೆಗೆ ಗಮನ ಸೆಳೆ ಮತ್ತು ಆಳು (ಡೈವರ್ಟ್ ಆ್ಯಂಡ್ ರೂಲ್). ಇವತ್ತಿನಿಂದ ಚುನಾವಣೆಗಳು ನಡೆಯುವ ವರೆಗೆ ಎಲ್ಲಿಂದ, ಯಾವಾಗ ಯಾರ ಮೇಲೆ ಸಿಡಿಲು ಬೆಂಕಿಯುಂಡೆ ಬೀಳುತ್ತದೆಂದು ನಮಗೆ ತಿಳಿಯುವುದಿಲ್ಲ. ನ್ಯಾಯವಾದಿಗಳ ಮತ್ತು ಕಾರ್ಯಕರ್ತರ ಬಂಧನದ ಬಗ್ಗೆ ಬರೆಯುವ ಮೊದಲು ನಾವು ಗಮನಿಸುತ್ತಲೇ ಇರಬೇಕಾದ ಕೆಲವು ವಿಷಯಗಳನ್ನು ನಾನು ಪುನರುಚ್ಚರಿಸಬಯಸುತ್ತೇನೆ.
1. ಪ್ರಧಾನಿ ಮೋದಿಯವರು ಟಿವಿಯಲ್ಲಿ ಕಾಣಿಸಿಕೊಂಡು ಆಗ ಚಲಾವಣೆಯಲ್ಲಿದ್ದ ಕರೆನ್ಸಿಯ ಶೇ. 80 ನೋಟುಗಳು ಅಮಾನ್ಯಗೊಳಿಸುವುದಾಗಿ ಘೋಷಿಸಿ ಒಂದು ವರ್ಷ ಒಂಬತ್ತು ತಿಂಗಳು ಕಳೆದಿದೆ. ಆ ನೋಟುಗಳಲ್ಲಿ ಶೇ. 99 ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ಈಗ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ. ಗಾರ್ಡಿಯನ್ ಪತ್ರಿಕೆಯು ‘‘ನೋಟು ಅಮಾನ್ಯೀಕರಣವು ದೇಶದ ಶೇ. 1 ಜಿಡಿಪಿಯನ್ನು ಅಳಿಸಿಹಾಕಿದೆ ಮತ್ತು ಅದರಿಂದ ಹದಿನೈದು ಲಕ್ಷ (1.5 ಮಿಲಿಯನ್) ಉದ್ಯೋಗಗಳು ನಾಶವಾಗಿದೆ’’ ಎಂದು ವರದಿ ಮಾಡಿದೆ. ಅದೇ ವೇಳೆ, ಹೊಸ ನೋಟುಗಳ ಮುದ್ರಣಕ್ಕೆ ಹಲವಾರು ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಅಮಾನ್ಯೀಕರಣದ ಬಳಿಕ ಬಂದ ಜಿಎಸ್‌ಟಿಯು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳಿಗೆ ಭಾರೀ ಹೊಡೆತ ನೀಡಿದೆ. ಬಡವರು, ಮದ್ಯಮವರ್ಗದವರು ಹೀಗೆ ಯಾತನೆ ಅನುಭವಿಸುವಾಗಲೆ, ಬಿಜೆಪಿಗೆ ನಿಕಟವಾಗಿರುವ ಹಲವಾರು ಕಾರ್ಪೊರೇಟ್‌ಗಳು ತಮ್ಮ ಸಂಪತ್ತನ್ನು ಹಲವಾರು ಪಾಲು ಹೆಚ್ಚಿಸಿಕೊಂಡಿವೆ. ವಿಜಯ ಮಲ್ಯ ಮತ್ತು ನೀರವ್ ಮೋದಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳೊಂದಿಗೆ ವಿದೇಶಕ್ಕೆ ಪಲಾಯನ ಮಾಡಲು ಅವಕಾಶ ಮಾಡಿ ಕೊಡಲಾಗಿದೆ.
ಇದಕ್ಕೆಲ್ಲ ನಾವು ಯಾವ ರೀತಿಯ ಉತ್ತರದಾಯಿತ್ವವನ್ನು ನಿರೀಕ್ಷಿಸಬಹುದು? ಏನೂ ಇಲ್ಲ? ಸೊನ್ನೆ?
2. ಪ್ರಧಾನಿ ಮೋದಿಯವರು 2016ರಲ್ಲಿ ಮುಂಬೈಯಲ್ಲಿ ‘ಮೇಕ್ ಇನ್ ಇಂಡಿಯಾ’ ಮೇಳದಲ್ಲಿ ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಪ್ರಕಟಿಸಿದ್ದು ನಮಗೆಲ್ಲ ನೆನಪಿದೆ. 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಪಡಿಸಿ ಮರು ಒಪ್ಪಂದ ಮಾಡಿಕೊಳ್ಳಲಾಯಿತು. ಎಚ್‌ಎಎಲ್‌ಗೆ ನೀಡಿದ್ದ ಕರಾರನ್ನು ಇದುವರೆಗೆ ಒಂದೇ ಒಂದು ವಿಮಾನವನ್ನೂ ತಯಾರಿಸದ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್‌ನ ಪಾಲ್ಗೊಳ್ಳುವಿಕೆಯಲ್ಲಿ, ಹೊಸದಾಗಿ ಮಾಡಿಕೊಳ್ಳಲಾಯಿತು. ಈ ವ್ಯವಹಾರದಲ್ಲಿ ಕಲ್ಪನಾತೀತವಾದ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ.
3. ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿಲಂಕೇಶ್ ಹತ್ಯೆಯ ವಿಚಾರಣೆಯಿಂದ ಈಗಾಗಲೇ ಹಲವು ಬಂಧನಗಳಾಗಿವೆ. ಇವು ಸನಾತನ ಸಂಸ್ಥೆಯಂತಹ ಹಲವಾರು ಬಲಪಂಥೀಯ ಸಂಘಟನೆಗಳ ಚಟುವಟಿಕೆಗಳನ್ನು ಬಹಿರಂಗ ಪಡಿಸಿವೆ ಹಿಟ್‌ಲಿಸ್ಟ್ ಹೊಂದಿರುವ ಪೂರ್ಣ ಮಟ್ಟದ ಬಲಪಂಥೀಯ ಭಯೋತ್ಪಾದನಾ ಜಾಲ ಅಸ್ತಿತ್ವದಲ್ಲಿರುವುದು ಜಾಹೀರಾಗಿದೆ. ಈ ಜಾಲದಲ್ಲಿರುವ ಎಷ್ಟು ತಂಡಗಳ ಬಗ್ಗೆ ನಮಗೆ ಗೊತ್ತಿದೆ? ಎಷ್ಟು ಮಂದಿ ರಹಸ್ಯವಾಗಿ ಕಾರ್ಯಾಚರಿಸುತ್ತಿದ್ದಾರೆ? ನಮ್ಮನ್ನು ಸದೆಬಡಿಯಲು ಅವರ ಬಳಿ ಏನು ಯೋಜನೆಗಳಿವೆ? ಯಾವ ಸುಳ್ಳು-ಧ್ವಜ ದಾಳಿಗಳು? ಯಾವ ನಿಜವಾದ ದಾಳಿಗಳು? ದಾಳಿ ಎಲ್ಲಿ? ಕಾಶ್ಮೀರದಲ್ಲಿ ನಡೆಯುತ್ತದೋ? ಅಯೋಧ್ಯೆಯಲ್ಲೋ? ಕುಂಭಮೇಳದಲ್ಲೋ? ಇದೆಲ್ಲದರಿಂದ, ನಿಜವಾದ ಬೆದರಿಕೆಯಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಇತ್ತೀಚಿನ ಬಂಧನಗಳು ನಡೆದಿವೆ.
4. ಶೈಕ್ಷಣಿಕ ಸಂಸ್ಥೆಗಳನ್ನು ಕೆಡಹುವ ವೇಗವನ್ನು ಗಮನಿಸಿ. ವಿಶ್ವವಿದ್ಯಾನಿಲಯಗಳ ನಾಶ, ಕೇವಲ ದಾಖಲೆಗಳಲ್ಲಿ ಮಾತ್ರ ಇರುವ ಫ್ಯಾಂಟಮ್ ವಿಶ್ವವಿದ್ಯಾನಿಲಯಗಳಿಗೆ ಭಾರೀ ಮನ್ನಣೆ. ಜೆಎನ್‌ಯು(ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ)ವನ್ನು ನಮ್ಮ ಕಣ್ಣೆದುರೇ ದುರ್ಬಲಗೊಳಿಸಲಾಗುತ್ತಿದೆ. ಮತ್ತೆ ಇತಿಹಾಸವನ್ನು ಸುಳ್ಳುಮಾಡುವ ಪ್ರಕ್ರಿಯೆ, ಪಠ್ಯಕ್ರಮವನ್ನು ಮೂರ್ಖವಾಗಿಸುವಿಕೆ (ಈಡಿಯಟಿಫಿಕೇಶನ್)...ಶಿಕ್ಷಣದ ಮರು-ಬ್ರಾಹ್ಮಣೀಕರಣವನ್ನು ನಾವು ಈಗ ನೋಡುತ್ತಿದ್ದೇವೆ. ದಲಿತ, ಆದಿವಾಸಿ ಮತ್ತು ಒಬಿಸಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರತಳ್ಳಲಾಗುತ್ತಿದೆ. ಯಾಕೆಂದರೆ ಅವರಿಗೆ ದುಬಾರಿ ಶುಲ್ಕ ನೀಡಲು ಸಾಧ್ಯವಾಗುತ್ತಿಲ್ಲ, ಇದು ಸಂಪೂರ್ಣವಾಗಿ ವಿರೋಧಿಸಬೇಕಾದ ವಿಷಯ; ಖಂಡಿತವಾಗಿಯೂ ಇದು ಸ್ವೀಕಾರಾರ್ಹವಲ್ಲ.
5. ಕೃಷಿರಂಗದ ಅವನತಿಯಿಂದಾಗಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ಮುಸ್ಲಿಮರ ಮೇಲೆ ಗುಂಪುಹಲ್ಲೆ ಮತ್ತು ದಲಿತರ ಮೇಲೆ ನಿರಂತರ ದಾಳಿ, ಸಾರ್ವಜನಿಕ ಛಡಿ ಏಟು, ಭೀಮ್ ಆರ್ಮಿಯ ನಾಯಕ ಚಂದ್ರಶೇಖರ ಆಝಾದ್‌ರ ಬಂಧನ, ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ-ಇದೆಲ್ಲವೂ ನಾವು ಗಮನಿಸಬೇಕಾದ ಸಂಗತಿಗಳು.
ಇನ್ನು, ಇತ್ತೀಚೆಗೆ ನಡೆದ ಐವರ ಬಂಧನಗಳು. ಈ ಐವರಲ್ಲಿ ಯಾರೂ ಕೂಡ 2017ರ ಡಿಸೆಂಬರ್ 31ರಂದು ನಡೆದ ಎಲ್ಗಾರ್ ಪರಿಷತ್ ರ್ಯಾಲಿಯಲ್ಲಿ ಹಾಜರಿರಲಿಲ್ಲ ಅಥವಾ ಮರುದಿನ ಭೀಮಾ-ಕೋರೆಗಾಂವ್ ವಿಜಯವನ್ನಾಚರಿಸಲು ನಡೆದಿದ್ದ, 3,00,000 ಮಂದಿ ಸೇರಿದ್ದ ರ್ಯಾಲಿಯಲ್ಲಿಯೂ ಹಾಜರಿರಲಿಲ್ಲ. ಆ ಪರಿಷತ್ತನ್ನು ಸಂಘಟಿಸಿದವರು ಇಬ್ಬರು ಪ್ರಸಿದ್ಧ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಸಾವಂತ್ ಮತ್ತು ನ್ಯಾಯ ಮೂರ್ತಿ ಕೊಲ್ಸೆ ಪಟೇಲ್, ಮರುದಿನದ ರ್ಯಾಲಿಯ ಮೇಲೆ ಹಿಂದೂ ಮತಾಂಧರು ದಾಳಿ ನಡೆಸಿದರು. ಅವರಲ್ಲಿ ಮುಖ್ಯ ಆಪಾದಿತರಾದ ಮಿಲಿಂದ್ ಏಕ್‌ಬೋಟೆ ಮತ್ತು ಸಾಂಭಾಜಿ ಭಿಡೆ ಇನ್ನೂ ತಲೆಮರೆಸಿಕೊಂಡಿದ್ದಾರೆ...
ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ-ಎರಡೂ ಸರಕಾರಗಳಿಗೆ ಅವುಗಳು ಆದಿವಾಸಿಗಳ ಮೇಲೆ ನಡೆಸಿದ ದಾಳಿಗಳ ವೇಷಮರೆಸುವುದು ಮುಖ್ಯವಾಗಿದೆ. ಈಗ ಬಿಜೆಪಿ ದಲಿತರ ಮೇಲಿನ ದಾಳಿಗಳನ್ನು ‘ಮಾವೋವಾದಿಗಳು’ ಅಥವಾ ‘ನಕ್ಸಲ’ರೆಂದು ಹೇಳಿ ನಿಜವಿಷಯವನ್ನು ಮುಚ್ಚಿಡುತ್ತಿದೆ.
ಕೃಪೆ: scroll.in