ನಾಝೀವಾದ
1919ರಲ್ಲಿ ಜರ್ಮನಿಯಲ್ಲಿ ಸ್ಥಾಪನೆಗೊಂಡ ನ್ಯಾಶನಲ್ ಸೋಸಿಯಲಿಸ್ಟ್ ವರ್ಕರ್ಸ್ ಪಾರ್ಟಿಯ ಮೂಲ ಜರ್ಮನ್ ಅಧ್ಯಕ್ಷರಿಂದಾಗಿ ಅದಕ್ಕೆ ‘ನಾಝೀ ಪಕ್ಷ’ ಎಂಬ ಹೆಸರು ರೂಢಿಗೆ ಬಂದಿತು. ಹಿಟ್ಲರ್‌ನು 1920ರಲ್ಲಿ ಆ ಪಕ್ಷದ ಸದಸ್ಯನೂ, ತರುವಾಯದಲ್ಲಿ ಅದರ ಪರಮೋಚ್ಚ ನಾಯಕನೂ ಆದನು.
ಇದಕ್ಕೂ ಮೊದಲು ಇಟಲಿಯಲ್ಲಿ ಮುಸಲೋನಿಯ ಫ್ಯಾಶಿಸ್ಟ್ ಪಕ್ಷವು ಸತ್ತೆಯನ್ನು ಪಶಪಡಿಸಿಕೊಂಡು ಫ್ಯಾಶಿಸಮ್‌ನ ಸರ್ವಾಧಿಕಾರಿ ತತ್ತ್ವಜ್ಞಾನಕ್ಕೆ ಸತ್ತೆಯನ್ನು ತಂದು ಕೊಟ್ಟಿತ್ತು. ಹೀಗಾಗಿ ನಾಝಿಗಳನ್ನು ಕೆಲವು ಕಾಲ ಫ್ಯಾಶಿಸ್ಟ್‌ರೆಂದು ಕರೆಯಲಾಗುತ್ತಿತ್ತು. ಮುಸಲೋನಿಯ ಫ್ಯಾಶಿಸಮ್ ಹಾಗೂ ಹಿಟ್ಲರನ ನಾಝೀವಾದಗಳಲ್ಲಿ ಬಹುಮಟ್ಟಿಗೆ ಹೋಲಿಕೆ ಇದ್ದರೂ ನಾಝೀವಾದವು ಸ್ವತಂತ್ರವೂ, ಬೇರೆ ಬಗೆಯದೂ ಆಗಿತ್ತು. ಹಿಟ್ಲರ್‌ನ ಆತ್ಮ ಚರಿತ್ರೆ ಹಾಗೂ ಬೇರೆ ಬೇರೆ ಸನ್ನಿವೇಶಗಳಲ್ಲಿ ಅವನು ಮಾಡಿದ ಭಾಷಣಗಳಲ್ಲಿ ತನ್ನ ವಿಚಾರ ಹಾಗೂ ಕಲ್ಪನೆಗಳನ್ನು ಪ್ರತಿಪಾದಿಸಿರುವನು.
ನಾಝೀವಾದದ ಯೋಚನೆಯು ವ್ಯಕ್ತಿಯಿಂದ ಶುರುವಾಗುವುದಿಲ್ಲ. ‘‘ರಾಷ್ಟ್ರವು ಈ ಪ್ರಣಾಲಿಯ ಕೇಂದ್ರಬಿಂದುವಿನಲ್ಲಿದೆ. ರಕ್ತದ ಬಂಧನದಿಂದಾಗಿ ರಾಷ್ಟ್ರೀಯ ಸಮಾಜವು ಏಕಾತ್ಮವಾಗಿರುತ್ತದೆ’’ ಎಂಬುದು ಅವನ ಹೇಳಿಕೆ. ಒಬ್ಬ ವ್ಯಕ್ತಿಯು ಈ ಸಮಾಜದಿಂದ ಸ್ವತಂತ್ರ ಅಥವಾ ಬೇರೆಯವನಲ್ಲ. ಸಮಾಜದ ಮನಸ್ಸು ಮತ್ತು ಇಚ್ಛೆಗಳ ಸ್ವಾತಂತ್ರ, ಎಲ್ಲ ವ್ಯಕ್ತಿಗಳ ಇಚ್ಛೆ ಮತ್ತು ಮನಸ್ಸುಗಳಿಗಿಂತ ಬೇರೆಯಲ್ಲದೆ ಅದು ಹೆಚ್ಚು ಮಹತ್ವದ್ದು. ಹಿಟ್ಲರ್‌ನ ಯೋಚನೆಯು ಅಮೆರಿಕ ಹಾಗೂ ಫ್ರೆಂಚ್ ಕ್ರಾಂತಿಗಳು ಮಾನವತೆಗೆ ನೀಡಿದ ವ್ಯಕ್ತಿಸ್ವಾತಂತ್ರ, ವ್ಯಕ್ತಿಪ್ರತಿಷ್ಠೆಯ ಪರಿಕಲ್ಪನೆಗಳನ್ನು ಧಿಕ್ಕರಿಸುವಂತಿದೆ. ಹಿಟ್ಲರ್‌ನು ತನ್ನೊಂದು ಭಾಷಣದಲ್ಲಿ ಇದನ್ನು ಸ್ಪಷ್ಟಪಡಿಸಿದನು. ವ್ಯಕ್ತಿಯ ಉದಾರ ಮತವಾದದ ಕಲ್ಪನೆ ಹಾಗೂ ಮಾನವತೆಯ ಮಾರ್ಕ್ಸವಾದದ ಪರಿಕಲ್ಪನೆಗಳನ್ನು ನಾಶಪಡಿಸುವುದು ಅವನ ನಾಝಿಸಮ್ ಕಾರ್ಯಕ್ರಮದ ಮಹತ್ವದ ಭಾಗವಾಗಿದೆ.
ಹಿಟ್ಲರನು ‘ಸಮಾಜ’ ಅಥವಾ ‘ಜನತೆ’ ಎಂಬ ಪದಗಳನ್ನು ಬಳಸುತ್ತಿದ್ದನಾದರೂ ಜರ್ಮನ್ ಸಮಾಜವಷ್ಟೇ ಅವನ ಕಣ್ಣೆದುರು ಇರಲಿಲ್ಲ. ಮಾನವ ವಂಶದ ಉಚ್ಚ ನೀಚತೆಯನ್ನು ನಂಬಿಯೇ ಅವನು ತತ್ತ್ವಜ್ಞಾನವನ್ನು ಕಟ್ಟಿದನು. ‘‘ನಾರ್ಡಿಕ್ ವಂಶವಷ್ಟೇ ಪ್ರಪಂಚದ ಎಲ್ಲಕ್ಕೂ ಶ್ರೇಷ್ಠ ವಂಶ, ಬೇರೆ ದೇಶಗಳವರು ಎರಡನೆಯ ಮಟ್ಟದವರು; ನಾರ್ಡಿಕ್ ಅಂದರೆ ಜರ್ಮನ್ನರು ಶ್ರೇಷ್ಠ ವಂಶದವರಾದ ಕಾರಣ ಜರ್ಮನ್ನರಿಗಷ್ಟೇ ಉಳಿದವರನ್ನು ಆಳುವ ಹಕ್ಕು ಇದೆ’’ ಎಂಬುದು ಅವನ ಸಿದ್ಧಾಂತವಾಗಿತ್ತು. ಅವನು ಈ ನಾರ್ಡಿಕ್ ವಂಶವನ್ನೇ ಆರ್ಯವಂಶವೆಂದು ಕರೆಯುತ್ತಿದ್ದನು. ಬೇರೆ ಬೇರೆ ಮಾನವಜನಾಂಗಗಳನ್ನು ಒಪ್ಪಿಕೊಳ್ಳುವುದೆಂದರೆ ಒಂದು ಅಪರಾಧವೆಂದು ಅವನಿಗೆ ಅನ್ನಿಸುತ್ತಿತ್ತು. ಜನಾಂಗಗಳ ನಡುವಿನ ಸಮಾನತೆಯಂತೆಯೇ ಮಾನವ-ಮಾನವರ ನಡುವಿನ ಸಮಾನತೆಯೂ ಒಂದು ಮಹಾಪರಾಧವಾಗಿ ಅವನಿಗೆ ಕಾಣುತ್ತಿತ್ತು. ಬೇರೆ ಬೇರೆ ಮಾನವ ಜನಾಂಗಗಳು ಹಾಗೂ ಬೇರೆ ಬೇರೆ ವ್ಯಕ್ತಿಗಳ ನಡುವಿನ ಸಮಾನತೆಯೇ ಹಿಟ್ಲರನ ವಂಶಸಿದ್ಧಾಂತದ ಅರ್ಥವೆನ್ನಿಸಿತ್ತು.
ಡಾರ್ವಿನ್ನನ ‘‘ಬದುಕಲು ಸಮರ್ಥನಾದವನೇ ಬದುಕುವನು’’ ಎನ್ನುವ ಸಿದ್ಧಾಂತವನ್ನು ಹಿಟ್ಲರನು ಎತ್ತಿ ಹಿಡಿಯುವಂತಿತ್ತು. ‘‘ಜೀವನದಷ್ಟೇ ಜೀವನದ ಸಂರ್ಘಷವೂ ಪುರಾತನವಿದ್ದ ಕಾರಣ ಬಲವುಳ್ಳ ಜೀವಿಯೇ ಬದುಕಿ ಉಳಿಯುವುದು, ದುರ್ಬಲ ಜೀವಿಯು ನಾಶಹೊಂದುವುದು, ಎನ್ನುವುದು ಪ್ರಕೃತಿಯ ಕ್ರಮ. ಮಾನವತೆಯ ತತ್ತ್ವವನ್ನು ಅನುಸರಿಸಿ ಮನುಷ್ಯನು ಪ್ರಾಣಿವಿಶ್ವದಲ್ಲಿ ಶ್ರೇಷ್ಠನೆನ್ನಿಸಲಾರ. ಅವನು ತೀರ ಪಶುವಿನಂತಹ ಹೋರಾಟದ ಮೂಲಕವೇ ತನ್ನನ್ನು ಕಾಪಾಡಿಕೊಳ್ಳಬಲ್ಲನು’’ ಎಂಬುದು ನಾಝೀವಾದದ ಆಲೋಚನೆಯಾಗಿತ್ತು. ಅವನು ಅದಕ್ಕೆ ‘ಸೆಲೆಕ್ಷನ್ ಆಫ್ ಫಿಟೆಸ್ಟ್’ ಅಂದರೆ ‘‘ಯೋಗ್ಯತೆಯುಳ್ಳವನೇ ಬದುಕಲು ಆಯ್ಕೆ ಹೊಂದುತ್ತಾನೆ’’ ಎಂದು ಸೂತ್ರ ರೂಪವನ್ನು ನೀಡಿದನು.
ವಂಶಶ್ರೇಷ್ಠತ್ವ, ಅಸಮಾನತೆ, ಬೇರೆ ಬೇರೆ ವಂಶದವರನ್ನು ಕೀಳೆಂದು ಭಾವಿಸುವ ನಾಝಿ ವಿಚಾರ ಪ್ರಣಾಲಿಯಲ್ಲಿ ಜ್ಯೂಗಳನ್ನು ಕುರಿತಾದ ಅವನ ದ್ವೇಷವೇ ಮುಖ್ಯವಾಗಿತ್ತು. ‘‘ಜ್ಯೂ ಜನರು ಸೈತಾನರು. ಶ್ರೇಷ್ಠ ವಂಶದವರಾದ ಜರ್ಮನ್ನರ ಪುರುಷಾರ್ಥವನ್ನು ಕುಗ್ಗಿಸಲೆಂದು ಅವರು ಬಗೆ ಬಗೆಯ ಕಾರಸ್ಥಾನಗಳನ್ನು ಹೂಡಿದರು. ಕ್ರೈಸ್ತ್ತ ಧರ್ಮವೂ ಇಂಥದೇ ಒಂದು ಸಂಚಾಗಿತ್ತು.’’ ನಾಝಿಗಳ ಅಭಿಪ್ರಾಯದ ಮೇರೆಗೆ ಬೋಲ್ಶೆವಿಸಮ್ ಕೂಡ ಜ್ಯೂಗಳ ಇಂಥದೇ ಒಂದು ಕಾರಸ್ಥಾನವಾಗಿತ್ತು. ಈ ಜ್ಯೂಗಳೇ ಕಮ್ಯುನಿಸ್ಟರಿಂದ ಹಿಡಿದು ಸೂಳೆಗಾರಿಕೆಯವರೆಗಿನ ಎಲ್ಲ ಬಗೆಯ ಭ್ರಷ್ಟತೆ ಹಾಗೂ ಅಧಃಪತನಗಳ ಮೂಲವೆನ್ನುವ ತಲೆತಿರುಕತನದ ನಂಬಿಕೆಯು ನಾಝೀವಾದದ ಹಿಂಬಾಲಕರಲ್ಲಿತ್ತು. ಇದರಿಂದಾಗಿಯೇ ಜ್ಯೂಗಳ ತಲೆದಂಡದ ಮಾರಣಹೋಮಗಳಂತಹ ಭಯಂಕರವಾದ ಕೃತ್ಯಗಳು ತಲೆಯೆತ್ತಿದ್ದವು.
ನಾಝಿಗಳ ಬಂಧನಾಗಾರಗಳು ಹಾಗೂ ಸಂಹಾರ ಕೇಂದ್ರಗಳೆಂದರೆ ಈ ವಿಚಾರಸರಣಿಯ ಮಾನವೀಯತೆಯ ವಿರೋಧ ಹಾಗೂ ಜ್ಯೂ ದ್ವೇಷದ ಪರಿಪಾಕವೇ ಆಗಿತ್ತು. ಈ ಬಂಧನಾಗಾರಗಳು ಮನುಷ್ಯರನ್ನು ಕೊಲ್ಲುವ ಮಟ್ಟಿಗೆ ಮಾತ್ರ ಸೀಮಿತಗೊಂಡಿರಲಿಲ್ಲ. ಮನುಷ್ಯರನ್ನು ಕೊಲ್ಲಲು ಇಂಥ ಶಿಬಿರಗಳೇ ಬೇಕೆಂದಿರಲಿಲ್ಲ. ನಾಝಿಗಳಿಗೆ ಅವರನ್ನು ಕೊಲ್ಲುವುದಷ್ಟೇ ಆಗಿರದೆ, ಅಮಾನವೀಯವಾದ ಚಿತ್ರಹಿಂಸೆ ಹಾಗೂ ವಿದ್ರೂಪಗೊಳಿಸುವ ಮೂಲಕ ಮಾನವೀಯತೆಯನ್ನು ನಾಶಪಡಿಸುವುದಿತ್ತು. ಅವರ ಮಾನವ ಆತ್ಮ ಹಾಗೂ ಆತ್ಮ ಪ್ರತಿಷ್ಠೆಗಳನ್ನು ಪೂರ್ತಿಯಾಗಿ ನಾಶಪಡಿಸಿದ ತರುವಾಯವಷ್ಟೇ ಅವರನ್ನು ದೊಡ್ಡ ದೊಡ್ಡ ಒಲೆಗಳಿಗೆ ಎಸೆದು, ಸುಟ್ಟು ಬೂದಿಯನ್ನು ತಯಾರಿಸಲಾಯಿತು. ಅಂದರೇನೇ ನಾಝೀವಾದವು ತಾನು ತಿರಸ್ಕರಿಸುವ ಮಾನವೀಯ ವೌಲ್ಯಗಳನ್ನು ಸುಟ್ಟು, ಬೂದಿಯನ್ನಾಗಿ ಮಾಡಿತು. ಇದು ನಾಝೀವಾದದ ಭಯಂಕರವಾದ ಆವಿಷ್ಕಾರವಾಗಿತ್ತು.
ನಾಝೀವಾದವು ವ್ಯಕ್ತಿಸ್ವಾತಂತ್ರದ ವೌಲ್ಯವನ್ನು ತಳ್ಳಿ ಹಾಕಿತು. ಅದೇ ರೀತಿ ಅದು ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ನಿರಾಕರಿಸಿತು. ಹಿಟ್ಲರ್‌ನಿಗೆ 1933ರಲ್ಲಿ ಸರ್ವಾಧಿಕಾರವು ಲಭಿಸುತ್ತಲೇ ಅವನು ಕಾನೂನನ್ನು ರಚಿಸಿ ನಾಝಿ ಪಕ್ಷವನ್ನು ಜರ್ಮನಿಯ ಏಕಮೇವ ಪಕ್ಷವೆಂದು ಘೋಷಿಸಿದನು. ಬೇರೊಂದು ರಾಜಕೀಯ ಪಕ್ಷವನ್ನು ಸ್ಥಾಪಿಸುವ ಯತ್ನವನ್ನು ರಾಷ್ಟ್ರದ್ರೋಹವೆಂದು ಬಗೆಯಲಾಯಿತು. ಹಿಟ್ಲರ್ ತನ್ನ ಪಕ್ಷದಲ್ಲಿ ಇನ್ನೊಬ್ಬ ಪ್ರತಿಸ್ಪರ್ಧಿ ನಾಯಕನನ್ನು ಒಪ್ಪುತ್ತಿರಲಿಲ್ಲ. ಅವನ ನಾಝೀವಾದದಲ್ಲಿ ನಾಯಕ ತತ್ತ್ವಕ್ಕೆ ತುಂಬ ಮಹತ್ವವಿತ್ತು. ಒಬ್ಬನಾದರೂ ಎದುರಾಳಿ, ಬಂಡಾಯಗಾರ ನಾಯಕನು ತಯಾರಾದರೆ ಸರ್ವಾಧಿಕಾರದ ಸೌಧ ಕುಸಿದು ಬೀಳುವ ಹೆದರಿಕೆ ಇತ್ತು. ಅದರಿಂದಾಗಿ ಪಕ್ಷ, ನಾಯಕನೊಡನೆಯ ಅದರ ಏಕಾತ್ಮಕತೆ ಹಾಗೂ ಏಕನಾಯಕ ತತ್ತ್ವವನ್ನು ಸ್ಥಾಪಿಸಲಾಯಿತು. ಅವನು ಇಡಿಯ ಜರ್ಮನ್ ರಾಷ್ಟ್ರದ ನಾಝೀಕರಣವನ್ನು ಮಾಡಿದನು. ವೃತ್ತಪತ್ರಗಳ ನಾಝೀಕರಣ ನಡೆಯಿತು. ನಾಝಿಕರಣಕ್ಕೆ ಒಳಗಾಗದವುಗಳನ್ನು ನಿಲ್ಲಿಸಲಾಯಿತು. ಬಾಲ ತರಗತಿಗಳಿಂದ ಹಿಡಿದು ವಿಶ್ವವಿದ್ಯಾನಿಲಯಗಳ ವರೆಗಿನ ಇಡಿಯ ಶಿಕ್ಷಣವನ್ನು ನಾಝೀವಾದದ ಪ್ರಭುತ್ವದೆಡೆಗೆ ತರಲಾಯಿತು. ಒಂದೇ ಒಂದು ಹಿಟ್ಲರ್ ರಾಷ್ಟ್ರೀಯ ಯುವ ಸಂಘಟನೆಯನ್ನು ಸ್ಥಾಪಿಸಲಾಯಿತು. ಎಲ್ಲ ಕಾರ್ಮಿಕ ಸಂಘಟನೆಗಳನ್ನು ಕಾನೂನುಬಾಹಿರವೆಂದು ಸಾರಿ ಅವುಗಳಿಗೆ ಬದಲಾಗಿ ಕಾರ್ಮಿಕರು ಹಾಗೂ ಒಡೆಯರ ಮೈತ್ರಿಕೂಟವನ್ನು ತಯಾರಿಸಲಾಯಿತು.
ನಾಝೀವಾದದ ಸರ್ವಾಧಿಕಾರ ಶಾಹಿಯ ಇನ್ನೊಂದು ವೈಶಿಷ್ಟ್ಯವನ್ನು ಕುರಿತು ನಮೂದಿಸುವಂತಿದೆ. ಸಾಮಾನ್ಯವಾಗಿ ಹುಕುಂ ಶಾಹಿ ಅಥವಾ ಸರ್ವಾಧಿಕಾರ ಶಾಹಿ ಎಂದರೆ ಅಲ್ಪಸಂಖ್ಯೆ ಇರುವವರು ಬಹುಸಂಖ್ಯೆ ಇರುವವರ ಮೇಲೆ ಅವರ ಮನಸ್ಸಿನ ವಿರುದ್ಧವಾಗಿ ಹೇರಲಾದ ಸತ್ತೆ ಎಂದು ಅರ್ಥೈಸಲಾಗುತ್ತದೆ. ಆದರೆ ಹಿಟ್ಲರ್‌ನ ನಾಝಿ ಪಕ್ಷಕ್ಕೆ ಜರ್ಮನಿಯಲ್ಲಿ 1933ರಲ್ಲಿ ನಡೆದ ಕೊನೆಯ ಪ್ರಕಟ ಚುನಾವಣೆಯಲ್ಲಿ ಶೇ. 44ರಷ್ಟು ಮತಗಳು ಲಭಿಸಿದ್ದವು. ನಾಝಿ ಪಕ್ಷಗಳಂಥ ಇತರ ಪಕ್ಷಗಳ ಮತದಾನವನ್ನು ಗಮನಕ್ಕೆ ತಂದುಕೊಂಡರೆ ಶೇ. 55ಕ್ಕೂ ಮಿಕ್ಕಿದ ಜರ್ಮನ್ ಮತದಾರರು ನಾಝೀವಾದಕ್ಕೆ ಬೆಂಬಲ ನೀಡಿದ್ದರು. ಬಹುಸಂಖ್ಯಾತ ಮತದಾರರ ಸಮ್ಮತಿಯಿಂದ ಸ್ಥಾಪನೆಗೊಂಡ ಹಾಗೂ ಆ ಕಾಲದ ವಾಯಮಾರ್ ಪ್ರಜಾಸತ್ತಾತ್ಮಕ ಸಂಸತ್ತಿನಿಂದ ಅಧಿಕೃತವಾಗಿ ಒಪ್ಪಿಕೊಳ್ಳದ ಆಧುನಿಕ ಕಾಲದ ಒಂದೇ ಒಂದು ಬಹುಮತದ ಸರ್ವಾಧಿಕಾರ ಶಾಹಿ ಇದಾಗಿತ್ತು. ನಾಝೀವಾದವು ಕೊಲೆ ಹಾಗೂ ಭಯೋತ್ಪಾದನೆಗಳನ್ನು ತಮ್ಮ ಅಧಿಕೃತ ಧೋರಣೆಯನ್ನಾಗಿ ತೀರ್ಮಾನಿಸಿತ್ತು. ಏಕೆಂದರೆ ಚರ್ಚ್ ಹಾಗೂ ವಾದ ವಿವಾದಗಳನ್ನು ಅದು ನಂಬುತ್ತಿರಲಿಲ್ಲ. ಸಾಕ್ರೆಟಿಸ್ ಮೊತ್ತ ಮೊದಲಿಗೆ ಬುದ್ಧಿವಾದದ ರೋಗವನ್ನು ಹಬ್ಬಿಸಿದ. ಏಕೆಂದರೆ ಮೂಲಭೂತ ಪ್ರಶ್ನೆಗಳನ್ನು ಚರ್ಚೆ ಹಾಗೂ ವಾದ ವಿವಾದಗಳಿಂದ ಬಿಡಿಸಬೇಕೆಂಬ ಸಿದ್ಧಾಂತವನ್ನು ಅವನೇ ಪ್ರತಿಪಾದಿಸಿದನು. ಹೀಗಾಗಿ ಸಾಕ್ರೆಟಿಸ್ ಮೊದಲ ಸೋಷಿಯಲ್ ಡೆಮಾಕ್ರಟಿಕ್ ಆಗಿದ್ದನೆಂದು ನಾಝೀವಾದ ಶ್ರೇಷ್ಠ ಸೈದ್ಧಾಂತಿಕನಾದ ಅರ್ಥರ್ ರೋಸೆನ್‌ಬರ್ಗ್ ಅನ್ನುತ್ತಿದ್ದ. ಒಟ್ಟಿನಲ್ಲಿ ಎಲ್ಲಾ ಉದಾರ ಮತದ ವಿರೋಧಿ ಪ್ರವೃತ್ತಿಗಳು ಹಾಗೂ ನಿಲುವುಗಳ ಅಂತಿಮ ಪರ್ಯವಸಾನವು ನಾಝೀವಾದದಲ್ಲಿ ಆಗಿತ್ತು.
1919ರ ವರ್ಸಾಯ್ ಒಡಂಬಡಿಕೆಯಲ್ಲಿ ಜರ್ಮನಿಯಲ್ಲಾದ ಅನ್ಯಾಯ ಅಥವಾ 1923-32ರ ಆರ್ಥಿಕ ಕುಸಿತದ ಪರಿಣಾಮದಿಂದಾಗಿ ಸೋತ ಹಾಗೂ ಬಿಕ್ಕಟ್ಟಾದ ಆರ್ಥಿಕ ಸಂಕಟಕ್ಕೆ ಸಿಲುಕಿದ ಜರ್ಮನಿಯಲ್ಲಿ ಆಕ್ರಮಣಶೀಲ ನಾಝೀವಾದ ಹುಟ್ಟಿ ಬಂದಿತೆಂಬ ಒಂದು ಅಭಿಪ್ರಾಯವಿದೆ. ಎರಡನೇ ಮಹಾಯುದ್ಧದ ತರುವಾಯ ಪರಿಸ್ಥಿತಿಯು ವರ್ಸಾಯ್ ಒಡಂಬಡಿಕೆಗಿಂತ ಇನ್ನಷ್ಟು ಭೀಕರವಾಯಿತು. ಆದರೆ ಮತ್ತೆ ಅಲ್ಲಿ ನಾಝೀವಾದ ಉದಯಕ್ಕೆ ಬರಲಿಲ್ಲವೆನ್ನುವ ಸಂಗತಿಯನ್ನು ಗಮನಿಸುವಂತಿದೆ. 1920-32ರ ಆರ್ಥಿಕ ಕುಸಿತವು ವಿಶ್ವ ಮಟ್ಟದ್ದಾಗಿತ್ತು. ಇಂಗ್ಲೆಂಡ್, ಅಮೆರಿಕಗಳೂ ಆರ್ಥಿಕ ಹೊಡೆತದಿಂದ ಬಚಾವ್ ಆಗಿರಲಿಲ್ಲ. ಆದರೆ ಈ ಆರ್ಥಿಕ ಸಂಕಟದಿಂದ ಅಲ್ಲಿ ಸರ್ವಾಧಿಕಾರಿಶಾಹಿಯು ಜನ್ಮ ತಳೆಯಲಿಲ್ಲ. ಆದರೆ ಜರ್ಮನಿಯಲ್ಲಿ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಆ ಕಾಲಕ್ಕೆ ಅಲ್ಲಿಯ ಪ್ರಜಾಪ್ರಭುತ್ವವು ದುರ್ಬಲವಾಗಿತ್ತಲ್ಲದೆ ಸರ್ವಾಧಿಕಾರಿ ವಿಚಾರಸರಣಿಯ ಪ್ರಭಾವವು ಮೊದಲೇ ಬೆಳೆದಿತ್ತು.
ನಾಝೀವಾದವೆಂದರೆ ಏಕಾಧಿಕಾರಿ ಬಂಡವಾಳಶಾಹಿ ಪರಿಪಾಕವೆಂದು ಮಾರ್ಕ್ಸ್‌ವಾದಿಗಳು ಬಗೆಯುತ್ತಾರೆ. ಜರ್ಮನಿಯಲ್ಲಿ ಏಕಾಧಿಕಾರಿ ಬಂಡವಾಳಶಾಹಿಯು ಇದ್ದ ಕಾರಣ ಅದರ ಪ್ರಭಾವವು ಉದಾರ ಮತವಾದಿ ಪ್ರಜಾಪ್ರಭುತ್ವಕ್ಕೆ ಅನುಕೂಲವಾಗಿರಲಿಲ್ಲ. ಆದರೆ ಈ ಏಕಾಧಿಕಾರಿ ಬಂಡವಾಳಶಾಹಿಯು ಕೈಸರ್‌ನ ಕಾಲದ ರಾಷ್ಟ್ರಸತ್ತೆಯೊಂದಿಗೆ ಹತ್ತಿರದ ನಂಟನ್ನು ಹೊಂದಿತ್ತು. ಇಂಗ್ಲೆಂಡ್, ಅಮೆರಿಕಗಳಲ್ಲಿ ಏಕಾಧಿಕಾರಿ ಬಂಡವಾಳಶಾಹಿ ಇದ್ದಿತ್ತಾದರೂ ಜರ್ಮನಿಯಲ್ಲಿ ಮಾತ್ರ ನಾಝಿ ಸರ್ವಾಧಿಕಾರಿಶಾಹಿಯನ್ನು ತಯಾರಿಸಲು ಏಕಾಧಿಕಾರಿ ಬಂಡವಾಳಶಾಹಿಗೆ ಏಕೆ ಸಾಧ್ಯವಾಯಿತು ಎಂಬ ಸಂಗತಿಯ ವಿವರಣೆ ಕೇವಲ ಆರ್ಥಿಕ ಕಾರಣಗಳಿಂದ ಆಗಲಾರದು. ಸಮಾಜದಲ್ಲಿ ನೆಲೆಯೂರಿದ್ದ ರಾಜಕೀಯ ಸಂಪ್ರದಾಯ, ಪರಿಕಲ್ಪನೆ ಹಾಗೂ ಸಂಸ್ಥೆಗಳ ಸಾಮರ್ಥ್ಯವು ಮಹತ್ವದ ಘಟಕವಾಗಿದೆ. ಜರ್ಮನಿಯಲ್ಲಿ ಅದಿಲ್ಲದ ಕಾರಣದಿಂದಲೇ ನಾಝೀವಾದವು ಉದಯಿಸಲು ಸಾಧ್ಯವಾಯಿತು.
ನಾಝೀವಾದದ ಉದಯ ಏಕಾಯಿತು? ಜರ್ಮನ್ ಜನತೆ ಅದನ್ನು ಬೆಂಬಲಿಸಿದ್ದೇಕೆ? ಎನ್ನುವ ಸಂಗತಿಗೆ ನಾಝೀವಾದ ನೇರ ಅಮಾನವೀಯ ಸ್ವರೂಪವೂ ಅಷ್ಟೇ ಮಹತ್ವದ ಕಾರಣ. ಅದರಿಂದ ಮಾನವತೆಯ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ ಹಾಗೂ ಮಾನವೀಯ ಪ್ರತಿಷ್ಠೆಯ ಮೌಲ್ಯಗಳನ್ನು ಕಾಪಾಡುವ ಒಂದು ಮಹತ್ವದ ಪಾಠವು ಮಾನವನಿಗೆ ಲಭಿಸುತ್ತದೆ. ಮಾನವತೆ ಹಾಗೂ ಮಾನವ ವಿರೋಧಿಯಾದ ನಾಝೀವಾದದಂತಹ ಶಕ್ತಿಗಳು ಎಲ್ಲ ಸಮಾಜಗಳಲ್ಲೂ ಸೂಕ್ತವಾಗಿ ಇರಬಲ್ಲವು. ಇಂತಹ ತತ್ತ್ವಜ್ಞಾನವು ವಂಶವಾದ, ತುದಿ ಮುಟ್ಟಿದ ರಾಷ್ಟ್ರವಾದ, ವಿಶಿಷ್ಟ ಸಾಮಾಜಿಕ ಗುಂಪಿನ ಬಗೆಗಿನ ದ್ವೇಷ, ಕಲ್ಪಿತ ಅಥವಾ ವಾಸ್ತವದ ಅನ್ಯಾಯದ ಅಳತೆ ಮೀರಿದ ರೊಚ್ಚು, ಮೊದಲಾದ ಹಲವಾರು ಪ್ರವೃತ್ತಿಗಳ ರಸಾಯನದಿಂದ ತಯಾರಾಗ ಬಲ್ಲುದು, ತನಗೆ ಬೆಂಬಲವನ್ನು ಪಡೆಯಬಲ್ಲುದು. ಹೀಗಾಗಿ ಈ ಬಗೆಯ ಸಂಕಟವು ಪ್ರಪಂಚದ ಮೇಲೆ ಮತ್ತೆ ಬಾರದಿರಲೆಂದು ಇಂಥ ಪ್ರವೃತ್ತಿ ವಿರುದ್ಧ ನಿರಂತರವಾಗಿ ಎಚ್ಚರದಿಂದಿರುವುದು ಆವಶ್ಯ.