ಮಹಿಳೆಯ ಗತ ಇತಿಹಾಸದ ಮೌನ ಮತ್ತು ಭವಿಷ್ಯತ್ತಿನ ಭಾಷ್ಯ

Update: 2018-09-07 18:36 GMT

ಎಲ್ಲ ಮಹಿಳೆಯರ ಗತ ಇತಿಹಾಸ ವೌನದ್ದೇ ಆಗಿರಬಹುದು. ಆದರೆ ಬರಲಿರುವ ಭವಿಷ್ಯವನ್ನು ವೌನವಾಗಿರಲು ಮಹಿಳೆಯರು ಅವಕಾಶ ನೀಡಬಾರದು. ಅದಕ್ಕಾಗಿ ಅವರು ಧ್ವನಿ ಎತ್ತಬೇಕಾಗಿದೆ. ಹೀಗೆ ಧ್ವನಿ ಎತ್ತಲು ಅವರಿಗೆ ಸೂಕ್ತ ಶಿಕ್ಷಣ ಸಿಗುವಂತಾಗಬೇಕು. ಹಾಗಾದರೆ ಮಾತ್ರ ಸಮಾಜದಲ್ಲಿ ಅವರು ತಲೆ ಎತ್ತಿ ನಿಲ್ಲಬಲ್ಲರು. ಇಂಥ ಮಹಿಳೆಯರ ಉದಾಹರಣೆಗಳನ್ನು ಹುಡುಕಿದರೆ ಸಿಗಬಹುದು.
ತಮ್ಮ ವೈಯಕ್ತಿಕ ವೈಕಲ್ಯಗಳ ಹೊರತಾಗಿಯೂ ತಲೆಯೆತ್ತಿ ನಿಂತ ಅನೇಕ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ.

 ‘‘ಮನೆಯಲ್ಲಿ, ಹೊರಗಡೆ ಶಾಲಾ ಕಾಲೇಜುಗಳಲ್ಲಿ, ಧಾರ್ಮಿಕ ಪೂಜಾ ಕೇಂದ್ರಗಳಲ್ಲಿ ಮಹಿಳೆಯರು ಒಬ್ಬ ಆರಾಧಕಳಾಗಿ, ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ವಿದ್ಯಾರ್ಥಿನಿಯಾಗಿ ಯಾ ಕೆಲಸದವಳಾಗಿ ಹಾಗೆಯೇ ಒಂದು ದೇಶದ ಪ್ರಜೆಯಾಗಿ ಪರಸ್ಪರ ಭೇಟಿಯಾಗುತ್ತಲೇ ಇರುತ್ತಾರೆ. ಹಾಗೆ ಭೇಟಿಯಾದಾಗೆಲ್ಲ ತಂತಮ್ಮ ಸುಖ ದುಃಖಗಳ ಕುರಿತು ಚರ್ಚಿಸುತ್ತಾರೆ. ಚರ್ಚೆ ಮುಗಿದು ಮುಕ್ತಾಯದ ಹಂತಕ್ಕೆ ಬರುವಾಗ ಮಾತುಗಳು ಅವರವರ ಸಂಸಾರದ ಕಾಳಜಿಯತ್ತ ಹೊರಳದೇ ಇರುವುದಿಲ್ಲ. ಎಲ್ಲ ಮಹಿಳೆಯರ ಗತ ಇತಿಹಾಸ ವರ್ತಮಾನಗಳು ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ ಎಂಬುದು ಈ ಚರ್ಚೆಯ ಸಾರವಾಗಿರುತ್ತದೆ. ಇಂತಹ ಚರ್ಚೆಗಳ ಮುಖಾಂತರವೇ ಮಹಿಳೆಯರ ಮನಸ್ಸುಗಳು ಪರಸ್ಪರ ಕನೆಕ್ಟ್ (Connect) ಆಗುತ್ತವೆ.’’ ಇದೇ ಅರ್ಥ ಬರುವ ಮಾತುಗಳನ್ನು ವರ್ಷಗಳ ಹಿಂದೆ ಅಮೆರಿಕದ ಸಚಿವೆ ಹಿಲರಿ ಕ್ಲಿಂಟನ್ ಹೇಳಿದ್ದು ಇಂದಿಗೂ ಪ್ರಸ್ತುತ.
 ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ, ಆಕೆ ಆರೋಗ್ಯವಾಗಿದ್ದರೆ ಕುಟುಂಬದಲ್ಲಿ ನೆಮ್ಮದಿಯಿರುತ್ತದೆ. ಆಕೆ ತನ್ನನ್ನೂ ದುಡಿಮೆಗೆ ತೊಡಗಿಸಿಕೊಂಡರೆ ಆರ್ಥಿಕತೆ ಬಲಗೊಳ್ಳುತ್ತದೆ. ಆದ್ದರಿಂದ ಪ್ರತಿಯೊಂದು ದೇಶ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಸರಕಾರದ ‘ಭೇಟಿ ಬಜಾವೋ ಬೇಟಿ ಪಢಾವೋ’ ಘೋಷಣೆ ಹೆಚ್ಚು ಅರ್ಥ ಪಡೆಯುತ್ತದೆ. ಜಗತ್ತಿನ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರೇ ಆಗಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿಗೆ ಇಂದಿಗೂ ಓದು ಬರಹ ಬರುವುದಿಲ್ಲ. ಬ್ಯಾಂಕ್ ಖಾತೆ ಏನೆಂದು ತಿಳಿದಿಲ್ಲ. ಮನೆಗಳಲ್ಲಿ ಸಣ್ಣ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು, ವೃದ್ಧರ ಆರೈಕೆ ಮಾಡಲು, ಸಂಸಾರ ನಿರ್ವಹಣೆ ಮಾಡಲು ಇವರೇ ಬೇಕು. ಇಷ್ಟಿದ್ದರೂ ಯಾವ ಸರಕಾರಗಳೂ ಯಾವ ಅರ್ಥಶಾಸ್ತ್ರಜ್ಞರೂ ಇವರ ಸೇವೆಯ ಸೂಕ್ತ ವೌಲ್ಯಮಾಪನ ಮಾಡುವುದಿಲ್ಲ. ಜಗತ್ತು ಮುಂದುವರಿದಿದೆ ಎಂದು ಭಾವಿಸುವಾಗಲೇ ಕೆಲವು ಕಡೆ ಆಕೆಯ ಶೋಷಣೆ ನಡೆಯುತ್ತಲೇ ಇದೆ. ಅಲ್ಲಲ್ಲಿ ವರದಕ್ಷಿಣೆ ಸಾವು ನಡೆಯುವುದರ ಜೊತೆಗೆ ಸ್ವತಃ ಅವಳ ಅಪ್ಪ ಅಣ್ಣ ಮಾವ ಆಕೆಯ ಮೇಲೆ ದೌರ್ಜನ್ಯ ಎಸಗುತ್ತಾರೆ. ಹಣದಾಸೆಗೆ ಅವಳನ್ನು ವೇಶ್ಯಾವಾಟಿಕೆಗಳಿಗೆ ತಳ್ಳುವುದೂ ನಡೆಯುತ್ತದೆ. ಎಷ್ಟೋ ಹಿಂದುಳಿದ ದೇಶಗಳಲ್ಲಿ ಸಣ್ಣ ಪುಟ್ಟ ಖಾಯಿಲೆಗಳಿಂದ ಮಹಿಳೆಯರು ಸಾವನ್ನಪ್ಪುತ್ತಾರೆ. ಅವರ ಕಣ್ಣೆದುರೇ ಅವರ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಸರಿಯಾದ ಶುಶ್ರೂಷೆ ಕೊಡಿಸುವ ವ್ಯವಧಾನವೂ ನಮ್ಮ ನಾಗರಿಕ ಸಮಾಜಕ್ಕಿಲ್ಲ. ತನ್ನ ಹಾಗೂ ತನ್ನ ಕುಟುಂಬದ ನೆಮ್ಮದಿಯ ಬದುಕಿಗಾಗಿ ಏನು ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ. ಎಲ್ಲಿಯವರೆಗೆ ತನ್ನ ಬದುಕಿನ ನಿರ್ಧಾರಗಳನ್ನು ಮಹಿಳೆ ಸ್ವತಂತ್ರವಾಗಿ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವಳ ಸಬಲೀಕರಣ ಸಾಧ್ಯವಾಗುವುದಿಲ್ಲ. ಅವಳ ಬದುಕಿಗೊಂದು ಅರ್ಥ ಬರಬೇಕೆಂದರೆ ಅವಳು ಬಾಯಿ ಮುಚ್ಚಿಕೊಂಡಿರುವಂತಾಗಬಾರದು. ಗಂಡಸರಾದಿಯಾಗಿ ಮನೆ ಮಂದಿ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕಾಗಿ ಮಹಿಳೆೆಯರು ತಮ್ಮ ಕನಸುಗಳನ್ನು ಚಿವುಟಿ ಹಾಕುವಂತಿಲ್ಲ. ಆದರೆ ವಸ್ತು ಸ್ಥಿತಿ ಅನೇಕ ದೇಶಗಳಲ್ಲಿ ತದ್ವಿರುದ್ಧವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಎಂಬುದು ಮಹಿಳೆಯರ ವಿಷಯದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಅಸ್ಮಿತೆಗಾಗಿ ಮಹಿಳೆಯರು ನಡೆಸುವ ಹೋರಾಟದಲ್ಲಿ ಅವರ ಮೇಲಿನ ಅತ್ಯಾಚಾರವನ್ನು ಒಂದು ಅಸ್ತ್ರವಾಗಿ ಬಳಸಲಾಗುತ್ತಿದೆ. ಮಹಿಳೆಯರನ್ನು ರಾಜಕೀಯ ವಲಯದಿಂದ ದೂರವಿಟ್ಟರೂ ಅವರು ದೌರ್ಜನ್ಯಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚು. ಎಂಥ ಕಷ್ಟಕರ ಸನ್ನಿವೇಶಗಳಲ್ಲೂ ಮಹಿಳೆ ಬಾಯಿ ಮುಚ್ಚಿಕೊಂಡರಬೇಕೆಂಬುದು ಈ ಸಮಾಜ ಅಪೇಕ್ಷಿಸುತ್ತದೆ. ಏಕೆಂದರೆ ಮಹಿಳೆಯರ ಇತಿಹಾಸವೇ ವೌನದ್ದು. ಎಲ್ಲ ಕುಟುಂಬಗಳಿಗೂ ಭಾವನಾತ್ಮಕ ಹಾಗೂ ಐಹಿಕ ಅಗತ್ಯಗಳಿಗೆ ಮಹಿಳೆಯರು ಇರಬೇಕಾದುದು ಅನಿವಾರ್ಯ. ಕೆಲವೊಮ್ಮೆ ಹೊರಗಡೆಯಿಂದ ದುಡಿದು ತಂದು ಕುಟುಂಬ ಪೋಷಣೆಗೆ ಸಹಕರಿಸುವುದೂ ಅವಳ ಪಾಲಿಗೆ ಸೇರುತ್ತದೆ. ಹೀಗೆ ಮಹಿಳೆ ಮೇಲಿನ ಅವಲಂಬನೆ ಎಂಬುದು ನಮ್ಮ ಕಣ್ಣುಗಳ ಮುಂದಿರುವ ವಾಸ್ತವ. ಹೀಗಿದ್ದರೂ ಮಹಿಳೆಯರನ್ನು ಕಡೆಗಣಿಸುವುದು ಯಾಕೆ ನಿಲ್ಲುವುದಿಲ್ಲ. ಎಲ್ಲ ಮಹಿಳೆಯರ ಗತ ಇತಿಹಾಸ ವೌನದ್ದೇ ಆಗಿರಬಹುದು. ಆದರೆ ಬರಲಿರುವ ಭವಿಷ್ಯವನ್ನು ವೌನವಾಗಿರಲು ಮಹಿಳೆಯರು ಅವಕಾಶ ನೀಡಬಾರದು. ಅದಕ್ಕಾಗಿ ಅವರು ಧ್ವನಿ ಎತ್ತಬೇಕಾಗಿದೆ. ಹೀಗೆ ಧ್ವನಿ ಎತ್ತಲು ಅವರಿಗೆ ಸೂಕ್ತ ಶಿಕ್ಷಣ ಸಿಗುವಂತಾಗಬೇಕು. ಹಾಗಾದರೆ ಮಾತ್ರ ಸಮಾಜದಲ್ಲಿ ಅವರು ತಲೆ ಎತ್ತಿ ನಿಲ್ಲಬಲ್ಲರು. ಇಂಥ ಮಹಿಳೆಯರ ಉದಾಹರಣೆಗಳನ್ನು ಹುಡುಕಿದರೆ ಸಿಗಬಹುದು.


ತಮ್ಮ ವೈಯಕ್ತಿಕ ವೈಕಲ್ಯಗಳ ಹೊರತಾಗಿಯೂ ತಲೆಯೆತ್ತಿ ನಿಂತ ಅನೇಕ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಅಂಥ ಕೆಲವು ಉದಾಹರಣೆಗಳು ಇವು.
ಮಹಿಳೆಯ ಪರಂಪರಾಗತ ಇತಿಹಾಸದ ವೌನದ ಅಧ್ಯಾಯನ್ನು ತೊಡೆದು ಹಾಕಿ ಭವಿಷ್ಯದ ಹೊಸ ಇತಿಹಾಸ ಬರೆಯಲು ಹೊರಟ ಬೆಂಗಳೂರಿನ ಶಾಲಿನಿ ಸರಸ್ವತಿ ‘ಬದಲಾಣೆಗಾಗಿ ಮುನ್ನುಗ್ಗಿ (be bold for change ) ಘೋಷ ವಾಕ್ಯದೊಂದಿಗೆ ಆಚರಿಸಲಾದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಬಿಚ್ಚಿಟ್ಟ ಆತ್ಮ ಕಥನ ಇದು. ಸುಮಾರು ಆರು ವರ್ಷಗಳ ಹಿಂದೆ ಗಂಡನ ಜೊತೆ ಕಾಂಬೋಡಿಯಾ ಪ್ರವಾಸ ಮುಗಿಸಿ ಮನೆಗೆ ವಾಪಸಾದ ಮೇಲೆ ಗರ್ಭಪಾತವಾಗುವುದರೊಂದಿಗೆ ಕಾಲುಗಳು ಬ್ಯಾಕ್ಟೀರಿಯ ಸೋಂಕಿನಿಂದ ಮರಗಟ್ಟಿದವು. ಆಸ್ಪತ್ರೆಗೆ ದಾಖಲಿಸಿ ಆಕೆಗೆ ಚಿಕಿತ್ಸೆ ನೀಡಲಾಯಿತು. ಮತ್ತೆ ಶ್ವಾಸಕೋಶಗಳಿಗೆ ನೀರು ತುಂಬಿ ಕಿಡ್ನಿ ತನ್ನ ಕೆಲಸ ನಿಲ್ಲಿಸಿತು. ಈಕೆ ಎಷ್ಟೆಂದರೆ ಎರಡು ದಿನ ಬದುಕಬಹುದು ಎಂದು ಚಿಕಿತ್ಸೆ ನೀಡಿದ ವೈದ್ಯರು ಕೈಚೆಲ್ಲಿದರು. ನಂತರ ಕೋಮಾಕ್ಕೆ ತಿರುಗಿದ ಆಕೆಗೆ ಎಚ್ಚರಗೊಂಡ ಮೇಲೆ ಆಕ್ಸಿಜನ್ ಥೆರಪಿ ನೀಡಲಾಯಿತು. ನಂತರ ಕೇರಳದ ಸ್ವಾಮೀಜಿಯೊಬ್ಬರಿಂದ ಚಿಕಿತ್ಸೆ ಪಡೆದ ಮೇಲೆ ಗ್ಯಾಂಗ್ರೀನ್ ಗುಣವಾದರೂ ನಂತರದ ಸೋಂಕಿನಿಂದಾಗಿ ಕೈಮೂಳೆ ಮುರಿಯಿತು. ನಂತರ 2013 ಸೆಪ್ಟಂಬರ್‌ನಲ್ಲಿ ಆಸ್ಪತ್ರೆಯಲ್ಲಿ ಎಡಗೈಯನ್ನು ಕತ್ತರಿಸಿದರು. ಇದರ ಬೆನ್ನಲ್ಲೇ ಒಂದು ದಿನ ಬಲಗೈ ಮೂಳೆ ಕಣ್ಣದುರಿಗೆ ಕಳಚಿ ಬಿತ್ತು. ದೇಹದಲ್ಲಿ ಸೋಂಕು ವ್ಯಾಪಿಸಿದ ಕಾರಣ ಅದನ್ನು ಜೋಡಿಸುವ ಪ್ರಶ್ನೆಯೇ ಉಳಿದಿರಲಿಲ್ಲ. ನಂತರ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾದಾಗ ಎರಡೂ ಕಾಲುಗಳನ್ನು ಕತ್ತರಿಸಿ ಕೃತಕ ಕೈಕಾಲುಗಳನ್ನು ಜೋಡಿಸಿದರು. ‘‘ಜೀವನವೇ ಸಾಕಿನ್ನು ಎನ್ನುವಾಗ ಸುತ್ತಮುತ್ತಲಿನ ಜನರು ಹಾಗೂ ಪತಿ ಪ್ರಶಾಂತ ನನ್ನಲ್ಲಿ ಬದುಕುಳಿಯುವ ಆಸೆಗೆ ಪ್ರೇರಣೆಯಾಗಿ ನಿಂತರು’’ ಎಂದು ಹೇಳಿದ ಆಕೆ 2017ರಂದು ಬೆಂಗಳೂರಲ್ಲಿ ನಡೆದ 10 ಕಿ. ಮೀಟರ್ ಓಟದ ಸ್ಪರ್ಧೆಯಲ್ಲಿ ಕೃತಕ ಕಾಲುಗಳನ್ನು (ಬ್ಲೇಡ್) ಅಳವಡಿಸಿಕೊಂಡು 2 ಗಂಟೆಗಳ ಅವಧಿಯಲ್ಲಿ ಓಟ ಮುಗಿಸಿ ಸ್ಪರ್ಧೆಯಲ್ಲಿ ಮೊದಲನೆಯವಳಾಗಿ ಬಂದ ನಂತರ ತನ್ನ ಕಥನ ಎಲ್ಲರೆದುರು ಬಿಚ್ಚಿಟ್ಟಾಗ ಎಲ್ಲರ ಮುಖದಲ್ಲೂ ಆಕೆಯ ಕುರಿತು ವಿಷಾದ ಹಾಗೂ ಮೆಚ್ಚುಗೆ ಎರಡೂ ಒಟ್ಟಿಗೆ ಕಾಣಿಸಿದವು. ‘‘ಮುಂದಿನ ನನ್ನ ಗುರಿ 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪಾರಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದು’’ ಎಂದಾಕೆ ತನ್ನ ಮಾತು ಮುಗಿಸಿ ದಾಗ ಎಲ್ಲರಿಂದಲೂ ಶುಭಹಾರೈಕೆ.
ಮುಂದಿನದು ಮಾಡಲ್ ಒಬ್ಬಾಕೆಯ ಕಥನ.
ಸ್ವೀಡನ್‌ನ ರೂಪದರ್ಶಿ ಥೆರೆಸೆ ಹಾನಾಸೂನ್ ಕತೆ ಇದೇ ರೀತಿಯದು. ಮಾಡೆಲ್‌ಗಳಿಗೆ ಅಗತ್ಯವಾದ ಕಾಂತಿಯುತ ತ್ವಚೆ, ಬಳುಕುವ ಮೈಮಾಟ, ಹೊಳೆವ ಕೇಶರಾಶಿ ಇದ್ದರೆ ಮಾತ್ರ ಆಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬಲ್ಲಳು. ಥೆರೆಸೆಗೆ ಮೊದಲಿನವೆರಡು ಇದ್ದರೂ ಹೊಳೆವ ಕೇಶರಾಶಿ ಇರಲಿಲ್ಲ. ಈಕೆ 14 ವರ್ಷದವಳಿದ್ದಾಗಲೇ ಅಲೊಪೆಸಿಯಾ ಕಾಯಿಲೆಗೆ ತುತ್ತಾಗಿ ಈಕೆಯ ಕೂದಲು ಸಂಪೂರ್ಣ ಉದುರಿ ತಲೆ ಬೋಳಾಯಿತು. ತನ್ನ ಬೋಳು ತಲೆಯನ್ನು ಮರೆ ಮಾಚಲು ಆಕೆ ವಿಗ್ ಧರಿಸಿ ಓಡಾಡತೊಡಗಿದ್ದಳು. ಇವಳ ಗುಟ್ಟು ಮನೆಯವರಿಗೆ ಮತ್ತು ಕೆಲವು ಆಪ್ತ ಸ್ನೇಹಿತರಿಗಷ್ಟೇ ಗೊತ್ತಿರುವ ವಿಷಯವಾಗಿತ್ತು. ಆದರೆ, ಸುಳ್ಳನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಕೊನೆಗೊಂದು ದಿನ ಬದಿಗಿಟ್ಟು ಬೋಳು ತಲೆಯಲ್ಲಿಯೇ ಓಡಾಡತೊಡಗಿದರು. ಅದರ ನಂತರವೇ ಅವರ ಕನಸಾಗಿದ್ದ ಮಾಡಲಿಂಗ್ ಕ್ಷೇತ್ರಕ್ಕೆ ಅವರಿಗೆ ಪ್ರವೇಶ ಸಿಕ್ಕಿತ್ತು. ಈಗ ಲಿಂಗ್ರಿ ಬ್ರಾಂಡ್ ಉತ್ಪನ್ನಗಳಿಗೆ ಇವರೇ ರೂಪದರ್ಶಿ. ತಲೆಗೂದಲು ಇಲ್ಲದವರಿಗೆ ತಾನು ಪ್ರೇರಣೆಯಾಗುತ್ತಿರುವುದು ತನಗೆ ಹೆಮ್ಮೆಯ ವಿಚಾರ ಎನ್ನುತ್ತಾರೆ ಈಕೆ. ಏಕೆಂದರೆ ಇವರಂತೆ, ಇರುವ ಅನೇಕರು ಇವರನ್ನು ಸಂಪರ್ಕಿಸಿ ಮಾರ್ಗದರ್ಶನ ಬಯಸಿದ್ದಾರಂತೆ. ತಲೆಗೂದಲು ಉದುರಿ ತಲೆ ಬೋಳಾಯಿತೆಂದು ನಿರಾಶೆಯಿಂದ ಮೂಲೆ ಸೇರಿದ್ದರೆ ಅವರು ಹೊಸಭಾಷ್ಯ ಬರೆಯಲಾಗುತ್ತಿತ್ತೇ?. ಇದು

ಮಹಿಳೆಯರ ಮೌನ ಮಾತಾದ ಪರಿ.
ಖ್ಯಾತ ನೃತ್ಯಕಲಾವಿದೆ ಸುಧಾಚಂದ್ರನ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಿ. ಕೆಲವು ವರ್ಷಗಳ ಹಿಂದೆ ತಮ್ಮ ನಾಡಾದ ಕೇರಳಕ್ಕೆ ಹೋಗುವಾಗ ಸಂಭವಿಸಿದ ರೈಲು ಅವಘಡದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ನೃತ್ಯ ಕಲಾವಿದೆಯಾಗುವ ತನ್ನ ಕನಸು ಭಗ್ನವಾಯಿತೆಂದು ನಿರಾಸೆಯಿಂದ ಇದ್ದಾಗ, ಮತ್ತೆ ಜೋಡಿಸಿದ ಕೃತಕ ಕಾಲುಗಳಿಂದ ರಕ್ತ ಒಸರುತ್ತಿದ್ದರೂ ಛಲ ಬಿಡದೆ, ಅಭ್ಯಾಸ ಮುಂದುವರಿಸಿದ್ದು, ಮುಂದೊಂದು ದಿನ ಮುಂಬೈಯ ಷಣ್ಮುಗಾನಂದ ಸಭಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಎದುರು ಸುಮಾರು ಒಂದು ತಾಸಿನಷ್ಟು ಕಾಲ ಅಮೋಘ ನೃತ್ಯಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಯ ಕರತಾಡನಗಿಟ್ಟಿಸಿದ್ದು ಈಗ ಹಳೆಯ ಕತೆ. ಈಕೆಯದು ಕೃತಕ ಕಾಲುಗಳು ಹೌದಾ? ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಮೂಡಿದ್ದೂ ಉಂಟಂತೆ. ಈಕೆಯಂತೆ ಕೃತಕ ಕಾಲುಗಳಲ್ಲಿಯೇ ಹಿಮಾಲಯ ಚಾರಣ ಮುಗಿಸಿದ ಉತ್ತರ ಭಾರತದ ಕುಗ್ರಾಮದ ಯುವತಿ ಅರುಣಾಳ ಕತೆ ಕೂಡಾ ಇದೇ ಪಟ್ಟಿಯಲ್ಲಿ ಸೇರುತ್ತದೆ. ಇವೆಲ್ಲವೂ ವೌನ ಮುರಿದು ಹೊಸ ಭಾಷ್ಯ ಬರೆದ ಮಹಿಳೆಯರ ಕೆಲವು ಉದಾಹರಣೆಗಳು.

Writer - ಕೆ. ಶಾರದಾ ಭಟ್

contributor

Editor - ಕೆ. ಶಾರದಾ ಭಟ್

contributor

Similar News

ಜಗದಗಲ
ಜಗ ದಗಲ