ವೈದ್ಯಕೀಯ ವರದಿಗಳಲ್ಲಿ ಸೊನ್ನೆ ಮತ್ತು ಚುಕ್ಕಿಗಳ ಮಹತ್ವ

Update: 2018-09-11 05:16 GMT

ಈ ಶೀರ್ಷಿಕೆ ನಿಮಗೆ ವಿಚಿತ್ರವೆಂದೆನಿಸಲೂಬಹುದು. ಆದರೆ ವೈದ್ಯಕೀಯ ವರದಿಗಳಲ್ಲಿ ಒಂದು ಚುಕ್ಕಿಯಿಂದ ಅಥವಾ ಒಂದು ಸೊನ್ನೆಯಿಂದ  ಪ್ರಾಣಾಪಾಯವೂ ಸಂಭವಿಸಬಹುದು. ಅದೇನು ಮತ್ತು ಹೇಗೆ ಎಂದರಿಯಲು ಮುಂದೆ ಓದಿ.
ನಾನೊಂದು ಪುಟ್ಟ ವೈದ್ಯಕೀಯ ಸಂಸ್ಥೆ ನಡೆಸುವವನಾಗಿ ಸ್ವತಃ ನನ್ನಿಂದಲೂ ಸಂಭವಿಸಬಹುದಾದ ಪ್ರಮಾದವಿದು.
ಒಮ್ಮೆ ನನ್ನ ಮಿತ್ರರೊಬ್ಬರು ನನಗೆ ಫೋನ್ ಕರೆ ಮಾಡಿ "ನನ್ನ ರಕ್ತದ ಪ್ಲೇಟ್ ಲೆಟ್ಸ್ ವಿಪರೀತವಾಗಿ ಇಳಿಮುಖವಾಗಿದೆ ಎಂದರು. ಎಷ್ಟಿದೆ ಎಂದು ಪ್ರಶ್ನಿಸಿದೆ. ಹದಿನೆಂಟು ಸಾವಿರ(ಅದರ ನಾರ್ಮಲ್ ಮಿತಿ ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ)  ಎಂದರು. ನೀವು ಈಗೆಲ್ಲಿದ್ದೀರಿ ಎಂದು ಪ್ರಶ್ನಿಸಿದೆ. ಮನೆಯಲ್ಲಿದ್ದೇನೆ ಎಂದರು.. ಸ್ವಾಮೀ ಏನು ಸಾಯಲು ಸಿದ್ಧರಾಗಿದ್ದೀರಾ...? ತಕ್ಷಣ ಒಳ್ಳೆಯ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದೆ.

ಸ್ವಲ್ಪ ಹೊತ್ತಲ್ಲೇ ಅವರು ನನ್ನ ಕಚೇರಿಗೆ ಲ್ಯಾಬ್ ರಿಪೋರ್ಟ್ ಹಿಡಿದುಕೊಂಡು ಬಂದರು. ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದರು. ಇದನ್ನು ವೈದ್ಯರಿಗೆ ತೋರಿಸಲಿಲ್ಲವೇ ಎಂದು ಪ್ರಶ್ನಿಸಿದೆ. ತೋರಿಸಿದ್ದೇನೆ ಎಂದರು. ವೈದ್ಯರು ಏನೆಂದರು. ಕೆಲವು ಮಾತ್ರೆ ಬರೆದುಕೊಟ್ಟು ರೆಸ್ಟ್ ಮಾಡಿ ಎಂದರು. ನನಗೆ ಆಶ್ಚರ್ಯವಾಯಿತು. ತಕ್ಷಣ ಅವರು ಪರೀಕ್ಷೆ ಮಾಡಿದ ಆಸ್ಪತ್ರೆಗೆ ಕರೆ ಮಾಡಿ ಲ್ಯಾಬ್ ಗೆ ಫೋನ್ ಕನೆಕ್ಟ್ ಮಾಡಲು ಕೋರಿದೆ. ಅವರ ಲ್ಯಾಬ್ ರಿಪೋರ್ಟ್ ನ ರಿಜಿಸ್ಟ್ರರ್ ನಂಬರ್ ಹೇಳಿ ರಿಪೋರ್ಟ್ ಕೇಳಿದೆ. ಆಕೆ ಒಂದು ನಿಮಿಷದೊಳಗಾಗಿ ಒಂದು ಲಕ್ಷ ಎಂಬತ್ತು ಸಾವಿರ ಪ್ಲೇಟ್ ಲೆಟ್ಸ್ ಇರುವುದಾಗಿ ತಿಳಿಸಿದಳು.

ವಾಸ್ತವವಾಗಿ ನಡೆದದ್ದೇನೆಂದರೆ ಲ್ಯಾಬ್ ರಿಪೋರ್ಟ್ ಕಂಪ್ಯೂಟರ್ ಎಂಟ್ರಿ ಮಾಡುವಾಗ ಒಂದು ಸೊನ್ನೆ ಕಡಿಮೆ ಆಗಿತ್ತಷ್ಟೆ. ಅವರು 1,80,000 cells/cumm ಎಂದು ಬರೆಯಬೇಕಾದಲ್ಲಿ 18,000 cells/cumm ಎಂದು ಎಂಟ್ರಿ ಮಾಡಿದ್ದರು. ಸಾಮಾನ್ಯವಾಗಿ ತೀರಾ ಅಬ್ ನಾರ್ಮಲ್ ರಿಪೋರ್ಟ್ ಗಳಿದ್ದಾಗ ಅದನ್ನು ದಪ್ಪಾಕ್ಷರಗಳಲ್ಲಿ ಬರೆಯುವ, ಅಥವಾ ಆ ಸಂಖ್ಯೆಗೆ ಅಡಿಗೆರೆ ಹಾಕುವ ಕ್ರಮವನ್ನು ಹೆಚ್ಚಿನೆಲ್ಲಾ ಲ್ಯಾಬ್ ಗಳಲ್ಲಿ ಪಾಲಿಸುತ್ತಾರೆ. ರಿಪೋರ್ಟ್ ನಿಜಕ್ಕೂ ನಾರ್ಮಲ್ ಇದ್ದುದರಿಂದ ಅವರು ಹಾಗೆ ಮಾಡಿಲ್ಲವಷ್ಟೆ. ಅಂತಹ ಯಾವುದೇ ಸಂಕೇತವಿಲ್ಲದ್ದರಿಂದ ವೈದ್ಯರು ಅಲ್ಲಿ ಒಂದು ಸೊನ್ನೆ ಕಡಿಮೆಯಾಗಿದ್ದನ್ನು ಗಮನಿಸಿರಲಿಲ್ಲ. ಒಂದು ವೇಳೆ ಹದಿನೆಂಟು ಸಾವಿರ ಬರೆಯಬೇಕಾದಲ್ಲಿ ಒಂದು ಸೊನ್ನೆ ಹೆಚ್ಚುವರಿಯಾಗಿ ಒಂದು ಲಕ್ಷ ಎಂಬತ್ತು ಸಾವಿರವಾಗಿದ್ದು,ವೈದ್ಯರು ನಾರ್ಮಲ್ ಎಂದೇ ತಿಳಿದು ರೋಗಿಯನ್ನು ಮನೆಗೆ ಕಳುಹಿಸಿದ್ದರೆ ರೋಗಿಯ ಸಾವು ಸಂಭವಿಸುವ ಸಾಧ್ಯತೆಯೂ ಇದೆ.

ಇನ್ನೊಮ್ಮೆ ನನ್ನ ಪರಿಚಯದ ಹಳ್ಳಿಗ ವೃದ್ದರೊಬ್ಬರು ತಮ್ಮ ಮಗಳ ಥೈರಾಯ್ಡ್ ರಕ್ತ ಪರೀಕ್ಷೆಯ ರಿಪೋರ್ಟ್ ಹಿಡಿದುಕೊಂಡು ಬಂದರು. ಆಕೆಯ ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್(TSH) ಎಂಬ ಪರೀಕ್ಷೆಯನ್ನು ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರಲ್ಲಿ ಮಾಡಿಸಿದ್ದರು. ಆಕೆಗೆ ಹಿಂದಿನಿಂದಲೂ ಥೈರಾಯ್ಡ್ ಸಮಸ್ಯೆಯಿತ್ತು. ಆಕೆಯ TSH: 127 uIu/ml ಇತ್ತು. TSH ಪರೀಕ್ಷೆಯ ನಾರ್ಮಲ್ ಮಿತಿ 0.4ರಿಂದ 5.5 uIu/ml. ಸಾಮಾನ್ಯವಾಗಿ ಅದು ನೂರಕ್ಕಿಂತ ಹೆಚ್ಚು ಬಂದಾಗ More than 100 ಎಂದು ವರದಿ ಕೊಡಲಾಗುತ್ತದೆ.

ನನಗೆ ಆ ವರದಿ ನೋಡಿದ ಕೂಡಲೇ ಸಂಶಯ ಕಾಡತೊಡಗಿತು. ಅವರ ಔಷಧಿ ಚೀಟಿ ನೋಡಿದೆ. ವೈದ್ಯರು 12.5 Mcg ಯ Eltroxine ಎಂಬ ಮಾತ್ರೆ ಬರೆದಿದ್ದರು. ಸುಮಾರು ಮೂರು ತಿಂಗಳ ಹಿಂದೆ ಅದೇ ರೋಗಿಯ TSH ಹೆಚ್ಚಿದ್ದಾಗ 50 Mcgಯ Eltroxine ಎಂಬ ಮಾತ್ರೆ ಬರೆದ ಹಳೇ ಚೀಟಿಯೂ ಅವರ ಫೈಲಲ್ಲಿತ್ತು. ಥೈರಾಯ್ಡ್ ಹೆಚ್ಚಿದ್ದಾಗ ಕಡಿಮೆ ಪ್ರಮಾಣದ ಮಾತ್ರೆಯೂ ಥೈರಾಯ್ಡ್ ಕಡಿಮೆಯಿದ್ದಾಗ ಹೆಚ್ಚು ಪ್ರಮಾಣದ ಮಾತ್ರೆಯೂ ಬರೆಯಲು ಸಾಧ್ಯವೇ ಇಲ್ಲ ಎಂಬುವುದು ಕಾಮನ್ ಸೆನ್ಸ್ ಗೆ ನಿಲುಕುವ ವಿಚಾರ. ಈ ರೀತಿಯ ಗೊಂದಲವಿದ್ದುದರಿಂದ ನಾನು‌ ಅದೇ TSH ಪರೀಕ್ಷೆಯನ್ನು ಮತ್ತೆ ಮಾಡಿದೆ. ನನಗೆ ಆಕೆಯ TSH 1.30 ಸಿಕ್ಕಿತು. ವಾಸ್ತವದಲ್ಲಿ ಇಲ್ಲಿ ಆದ ಪ್ರಮಾದವಿಷ್ಟೆ. 1.27 ಎಂದು ಬರೆಯಬೇಕಾದಲ್ಲಿ ಚುಕ್ಕಿ ಬಿಟ್ಟು ಹೋಗಿ 127 ಆಗಿತ್ತು.

ವೈದ್ಯರು ಇದನ್ನು ಗಮನಿಸಿರಬಹುದು. ಬಹುಶಃ ಲ್ಯಾಬ್ ಗೆ ಕರೆ ಮಾಡಿ ಖಚಿತಪಡಿಸಿರಬಹುದು. ಆದರೆ ಅವರು ಆ ರಿಪೋರ್ಟ್ ನಲ್ಲಿ ಆದ ಪ್ರಮಾದ ಸರಿಪಡಿಸಿ ಬೇರೆ ಪ್ರಿಂಟ್ ತೆಗೆದುಕೊಡಲು ಕೇಳಲಿಲ್ಲ. ತನಗೆ ಖಚಿತವಾದ ಕೂಡಲೇ ಔಷಧಿಯ ಪ್ರಮಾಣ ಇಳಿಸಿ ಬಿಟ್ಟಿದ್ದಾರೆ. ಒಂದು ವೇಳೆ ಅವರದನ್ನು ಖಚಿತಪಡಿಸದೇ ಅದೇ ಪ್ರಿಂಟಿನ ಆಧಾರದ ಮೇಲೆ ಔಷಧಿ ಪಾರಂಭಿಸುತ್ತಿದ್ದರೆ ಕನಿಷ್ಠವೆಂದರೂ 100 Mcgಯ ಮಾತ್ರೆ ಪ್ರಾರಂಭಿಸುತ್ತಿದ್ದರು. ಇದರಿಂದ ರೋಗಿಗೆ ಕೇವಲ ಒಂದು ವಾರದೊಳಗಾಗಿ ಹೈಪರ್ ಥೈರಾಯ್ಡ್ (ಥೈರಾಯ್ಡ್ ಅಂಶ ವಿಪರೀತ ಇಳಿಕೆ) ಆಗಿ ಏನಾದರೂ ಅಪಾಯ ಸಂಭವಿಸುತ್ತಿತ್ತು. ಸಾಮಾನ್ಯ ಓದು ಬರಹ ಬಲ್ಲವರೆಲ್ಲಾ ಇಂತಹ ಪ್ರಮಾದಗಳಾಗಿವೆಯೇ ಎಂದು ಪತ್ತೆ ಹಚ್ಚಲು ಸಾಧ್ಯ. 

ನಿಮ್ಮ ಲ್ಯಾಬ್ ರಿಪೋರ್ಟ್ ಗಳಲ್ಲಿ  ಸಾಮಾನ್ಯವಾಗಿ ಮೂರು ಕಾಲಂಗಳಿರುತ್ತವೆ. ಮೊದಲ ಕಾಲಂಗೆ Test name (ಪರೀಕ್ಷೆಯ ಹೆಸರು) ಎಂಬ ಶೀರ್ಷಿಕೆ ಇರುತ್ತದೆ. ಎರಡನೇ ಕಾಲಂಗೆ Value ಅಥವಾ  Report (ಪ್ರಮಾಣ ಅಥವಾ ವರದಿ) ಎಂಬ ಶೀರ್ಷಿಕೆ ಇರುತ್ತದೆ. ಮೂರನೇ ಕಾಲಂಗೆ Normal range ಅಥವಾ Reference range (ನಾರ್ಮಲ್ ಮಿತಿ) ಎಂಬ ಶೀರ್ಷಿಕೆ ಇರುತ್ತದೆ. ಆಯಾ ಶೀರ್ಷಿಕೆಯಡಿ ಆಯಾ ವಿವರಗಳಿರುತ್ತವೆ. ಎರಡನೆಯ ಕಾಲಂನಲ್ಲಿರುವಂತಹದ್ದು ನಿಮ್ಮ ಪರೀಕ್ಷಾ ವರದಿ. ಮೂರನೇ ಕಾಲಂನಲ್ಲಿರುವಂತಹದ್ದು ನಾರ್ಮಲ್ ಮಿತಿ. ನಿಮ್ಮ ವರದಿಗಳು ನಿಮ್ಮ ಕೈಗೆ ಸಿಕ್ಕ ಕೂಡಲೇ ಇವನ್ನು ಗಮನಿಸಿ. ಅದರಲ್ಲಿ ವಿಪರೀತ ಏರಿಕೆ ಅಥವಾ ವಿಪರೀತ ಇಳಿಕೆ ಕಂಡುಬಂದಲ್ಲಿ ನೀವು ಲ್ಯಾಬ್ ನಲ್ಲಿ ನಿಮ್ಮ ವರದಿಯನ್ನು ಖಚಿತಪಡಿಸಿಕೊಳ್ಳಿ. 

ಲ್ಯಾಬ್ ಗಳಲ್ಲಿ ಕಂಪ್ಯೂಟರ್ ಎಂಟ್ರಿ ಮಾಡುವವರು ಅಥವಾ ವರದಿ ಬರೆಯುವವರು ಇಂತಹ ಪ್ರಮಾದಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು.
ಓದುಗರು ಈ ಲೇಖನವನ್ನು ಎರಡೆರಡು ಬಾರಿ‌ ಓದಿದರೆ ಇದನ್ನು ಸಂಪೂರ್ಣವಾಗಿ ಅರ್ಥೈಸಿ ನಿಮಗೂ ಆಗಬಹುದಾದ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News