ಎಹ್ಸಾನ್ ಜಾಫ್ರಿಯ ಪುತ್ರಿ ನಿಶ್ರೀನ್ ಪತ್ರಕ್ಕೆ ಶ್ವೇತ ಸಂಜೀವ್ ಭಟ್ ರ ಉತ್ತರ
ಪ್ರೀತಿಯ ನಿಶ್ರೀನ್ ಜಾಫ್ರಿ ಹುಸೇನ್ ,
ಬೆಂಬಲ ಸೂಚಿಸಿ ನೀವು ಬರೆದ ಆತ್ಮೀಯ ಪತ್ರಕ್ಕೆ ನಾನು ಆಭಾರಿಯಾಗಿದ್ದೇನೆ. 2002 ರಲ್ಲಿ ನೀವು, ನಿಮ್ಮ ಕುಟುಂಬ ಹಾಗು ಸಾವಿರಾರು ಅಮಾಯಕ ನಾಗರೀಕರು ಅನುಭವಿಸಿದ್ದನ್ನು ಊಹಿಸುವುದೂ ಕಷ್ಟ.
ನನ್ನ ಪತಿ ಮನೆಗೆ ಮರಳಿದ ಆ ರಾತ್ರಿ ನನಗಿನ್ನೂ ನೆನಪಿದೆ. ಮನೆಯ ಗೇಟ್ ದಾಟಿ ಬರುವಾಗ ಅವರಿನ್ನೂ ಎಂದಿನಂತೆ ದೃಢವಾಗಿಯೇ ಇದ್ದರು. ಆದರೆ ಮನೆಯೊಳಗೆ ಕಾಲಿಟ್ಟಿದ್ದೇ ತಡ ಅವರು ಸಂಪೂರ್ಣ ಕುಸಿದು ಬಿಟ್ಟರು. ಹೀಗಾಗಿದ್ದು ನನ್ನ ಜೀವನದಲ್ಲೇ ಅದೇ ಮೊದಲು. ಐಪಿಎಸ್ ಮಾಡುವುದು ನನ್ನ ಪತಿಯ ಕನಸಾಗಿತ್ತು. ದೇಶಸೇವೆ ಮಾಡುವುದು ಅವರ ಪರಮ ಗುರಿಯಾಗಿತ್ತು. ಆದರೆ ಆ ರಾತ್ರಿ ಅದೇ ಮೊದಲ ಬಾರಿ ಪೊಲೀಸ್ ಪಡೆಯ ಬಗೆಗಿನ ಅವರ ಉತ್ಕಟ ಪ್ರೀತಿ ನಾಶವಾಗಿದ್ದನ್ನು ನಾನು ಕಂಡೆ. ಆಗ ನನಗೆ ಕಂಡಿದ್ದು ಘೋರ ದುಃಖ ಮಾತ್ರ.
ಅಂದು ನಡೆದ ಘಟನೆಗಳ ಪರಿಣಾಮಗಳನ್ನು ಮಾತ್ರ ನಾವು ಇಂದು ಬದುಕುತ್ತಿದ್ದೇವೆ. ನಾವು ಇಷ್ಟೆಲ್ಲಾ ಅನುಭವಿಸಿದ ಮೇಲೂ ನಿಮ್ಮ ತಂದೆಗೆ, ತಾಯಿಗೆ ಮತ್ತು ಅಂದು ತಮ್ಮ ಮನೆಯವರು , ಮಿತ್ರರನ್ನು ಕಳಕೊಂಡ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನವನ್ನು ನನ್ನ ಪತಿ ಕೈಬಿಟ್ಟಿಲ್ಲ. ಆ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಮಾಧಾನ ನೀಡಲು, ಅವರ ಆಪ್ತರ ಬರ್ಬರ ಕೊಲೆಗಾರರಿಗೆ ಶಿಕ್ಷೆ ಕೊಡಿಸಲು ಅವರಿನ್ನೂ ಪ್ರಯತ್ನಿಸುತ್ತಲೇ ಇದ್ದಾರೆ. ದೇವರು ನಮ್ಮ ಕೈಬಿಟ್ಟ, ಸರಕಾರವೂ ನಮ್ಮನ್ನು ನಿರಾಶ್ರಿತರಾಗಿಸಿದ ಆ ಮೂರು ದಿನಗಳು ಮತ್ತು ಆ ಮೂರು ಘೋರ ರಾತ್ರಿಗಳ ಘಟನೆಗಳ ಪರಿಣಾಮವನ್ನೇ ನಾವು ಕಳೆದ ಹದಿನಾರು ವರ್ಷಗಳಿಂದ ಬದುಕುತ್ತಿದ್ದೇವೆ.
(ದಿ.ಎಹ್ಸಾನ್ ಜಾಫ್ರಿಯೊಂದಿಗೆ ಪುತ್ರಿ ನಸ್ರೀನ್ ಜಾಫ್ರಿ ಹುಸೇನ್)
ಆತ್ಮೀಯ ನಿಶ್ರೀನ್ , ಅಧಿಕಾರದಾಹಿ ಪುರುಷರು ಮತ್ತು ಮಹಿಳೆಯರು ಅಂದು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಬದುಕಿನೊಂದಿಗೆ ಆಡಿದ ಆ ಅಸಹ್ಯಕರ ಕರ್ತವ್ಯ ಲೋಪವನ್ನು ಎಂದೂ ನಾವು ಮರೆಯುವುದಿಲ್ಲ, ಕ್ಷಮಿಸುವುದಿಲ್ಲ.
ನನ್ನ ಪತಿ ಮಾಡುತ್ತಿರುವ ಹೋರಾಟದ ಬಗ್ಗೆ ನಾನು ಒಂದೇ ಒಂದು ಕ್ಷಣ ಕೂಡ ಮರುಗಲಿಲ್ಲ. ನಮಗೆ ಬಂದ ಬೆದರಿಕೆಗಳಿಗೆ , ನನ್ನ ಮನೆಯನ್ನು ಒಡೆದು ಹಾಕಿದ್ದಕ್ಕೆ , ನಮ್ಮ ಸುರಕ್ಷತಾ ಗಾರ್ಡ್ ಗಳನ್ನು ಹಿಂದೆಗೆದುಕೊಂಡಿದ್ದಕ್ಕೆ ನಾನು ಜಗ್ಗುವುದಿಲ್ಲ. ಹೌದು, ಈಗ ಮೊದಲಿನಂತೆ ನಮಗೆ ಬಾಗಿಲುಗಳು ಸುಲಭವಾಗಿ ತೆರೆಯುವುದಿಲ್ಲ. ನ್ಯಾಯದ ಹಾದಿ ಬಲು ದೂರವಿದೆ. ಆದರೆ ನಾವು ಜೊತೆಗಿರುವವರೆಗೆ ಇದು ಏಕಾಂಗಿ ಹೋರಾಟವಲ್ಲ.
ನಮ್ಮ ಧ್ವನಿ ಎತ್ತಿದ್ದಕ್ಕೆ ನಾವು ಸರಿಯಾದ ಬೆಲೆ ತೆತ್ತಿದ್ದೇವೆ ಎಂದು ನಂಬಿದವರಿಗೆ ನಾವು ಎಂದೂ ಹಿಂಜರಿಯುವುದಿಲ್ಲ ಎಂದು ಹೇಳುತ್ತೇನೆ.
ಆದರೆ ನಮ್ಮ ಈ ಹೋರಾಟವನ್ನು ತಮ್ಮದು ಎಂದು ಪರಿಗಣಿಸಿದವರಿಗೆ, ನಿಮ್ಮ ತಂದೆಗೆ ಮತ್ತು ಈಗ ನನ್ನ ಪತಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಹಾಡಹಗಲು ನಿಂತು ಆಗ್ರಹಿಸುವವರಿಗೆ ನಾನು ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನು ಕಳೆದ ವಾರದ ಬೆಳವಣಿಗೆಗಳ ಕುರಿತು ಮೌನವಾಗಿ ಪ್ರಶ್ನಿಸುತ್ತಿರುವವರಿಗೆ ಹಾಗು ದೌರ್ಜನ್ಯ ಮತ್ತು ಕಡಿವಾಣಗಳೇ ದೇಶದಲ್ಲಿ ಸಾಮಾನ್ಯ ನೀತಿಯಾಗುತ್ತಿವೆ ಎಂದು ಆತಂಕ ಪಟ್ಟುಕೊಳ್ಳುವವರಿಗೆ ನಾನು ಹೇಳುವುದು - 'ಎಚ್ಚರಿಕೆಯಿಂದಿರಿ'. ಈ ಎಚ್ಚರಿಕೆಯಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಇದರಿಂದ ಮಾತ್ರ ನಮ್ಮ ಕುಟುಂಬಗಳಿಗೆ ಮತ್ತು ಸುದೀರ್ಘ ಕಾಲದಿಂದ ನೋವು ಅನುಭವಿಸುತ್ತಿರುವ ಎಲ್ಲ ಕುಟುಂಬಗಳಿಗೆ ನ್ಯಾಯ ಸಿಗಲಿದೆ. ಏಕೆಂದರೆ ನಮಗೆ ಬೇಕಿರುವುದು ಸೇಡು, ಪ್ರತಿಕಾರ ಅಲ್ಲ.
ಎಂದೆಂದೂ ನಿಮ್ಮೊಂದಿಗೆ
ದೇವರ ಅನುಗ್ರಹವಿರಲಿ
ಶ್ವೇತಾ ಸಂಜೀವ್ ಭಟ್