ಶಿವಮೊಗ್ಗ ಲೋಕಸಭೆ ಚುನಾವಣೆ: ಯಡಿಯೂರಪ್ಪ- ಈಶ್ವರಪ್ಪ ನಡುವೆ ಶುರುವಾಗಲಿದೆಯೇ ಮತ್ತೊಂದು ಸುತ್ತಿನ ಜಂಗೀಕುಸ್ತಿ ?
ಶಿವಮೊಗ್ಗ, ಸೆ.11: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಹಲವು ತಿಂಗಳು ಬಾಕಿಯಿದೆ. ಆದರೆ ಶಿವಮೊಗ್ಗ ಬಿಜೆಪಿ ಪಾಳಯದಲ್ಲಿ ಮಾತ್ರ ದಿಢೀರ್ ಆಗಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಅಭ್ಯರ್ಥಿ ಆಯ್ಕೆಯ ಕುರಿತಂತೆ ಆರಂಭವಾಗಿರುವ ಚರ್ಚೆಗಳು, ನಾಯಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಮತ್ತೊಂದು ಸುತ್ತಿನ ಹಣಾಹಣಿಗೆ ವೇದಿಕೆ ನಿರ್ಮಾಣವಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಇಲ್ಲಿಯವರೆಗೂ ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಬಿ.ವೈ.ರಾಘವೇಂದ್ರ ಕೂಡ ಪೂರ್ವಭಾವಿ ಸಿದ್ದತೆ ನಡೆಸಲಾರಂಭಿಸಿದ್ದರು. ಆದರೆ ಇತ್ತೀಚೆಗೆ ಈಶ್ವರಪ್ಪರವರು, 'ಬಿ.ವೈ.ರಾಘವೆಂದ್ರ ಜೊತೆಗೆ ಇನ್ನೂ ಹಲವರು ಸ್ಪರ್ಧಾಕಾಂಕ್ಷಿಗಳಿದ್ದಾರೆ' ಎಂದು ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಮೂವರು ನಾಯಕರ ಹೆಸರು ತೇಲಿಬಿಟ್ಟಿದ್ದಾರೆ. ಇದು ಕಮಲ ಪಾಳಯದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.
ಕೆ.ಎಸ್.ಈ ರವರ ಈ ಹೇಳಿಕೆಯು, ಬಿ.ಎಸ್.ವೈ. ಪಾಳಯವನ್ನು ಕೆರಳಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‍ರವರು, ಪರೋಕ್ಷವಾಗಿ ಈಶ್ವರಪ್ಪ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಈಶ್ವರಪ್ಪ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ. ಅವರ ಪುತ್ರ ಕೆ.ಇ.ಕಾಂತೇಶ್ ಕೂಡ ಸ್ಪರ್ಧಾಕಾಂಕ್ಷಿಯಾಗಿದ್ದಾರೆ' ಎಂದು ವ್ಯಂಗ್ಯ ದಾಟಿಯಲ್ಲಿ ಕುಟುಕಿದ್ದರು.
ಬಿಜೆಪಿಯಲ್ಲಿನ ಸದ್ಯದ ಈ ವಿದ್ಯಮಾನ ಗಮನಿಸಿದರೆ, ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರವೂ ಮುಂದಿನ ದಿನಗಳಲ್ಲಿ ಬಿ.ಎಸ್.ವೈ. ಹಾಗೂ ಈಶ್ವರಪ್ಪ ನಡುವೆ ಭಾರೀ ಹಣಾಹಣಿಗೆ ಎಡೆ ಮಾಡಿಕೊಡುವ ಲಕ್ಷಣಗಳಿದ್ದು, ಇಬ್ಬರ ನಡುವೆ ಮತ್ತೊಂದು ಜಂಗೀಕುಸ್ತಿಗೆ ಆಸ್ಪದವಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ದಾಳ: ಒಂದಾನೊಂದು ಕಾಲದಲ್ಲಿ ಬಿ.ಎಸ್.ವೈ. ಹಾಗೂ ಈಶ್ವರಪ್ಪರವರು ಬಿಜೆಪಿ ಪಕ್ಷದಲ್ಲಿ 'ರಾಮ-ಲಕ್ಷ್ಮಣ'ರೆಂದೇ ಖ್ಯಾತರಾಗಿದ್ದರು. ಆ ಮಟ್ಟಕ್ಕೆ ಅವರಿಬ್ಬರ ನಡುವೆ ಸ್ನೇಹ-ಬಾಂಧ್ಯವವಿತ್ತು. ಕಳೆದೊಂದು ದಶಕದಿಂದೀಚೆಗಿನ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಇಬ್ಬರ ನಡುವಿನ ಆಪ್ತತೆ-ಸ್ನೇಹಭಾವ ಕಡಿಮೆಯಾಗಿ, ವೈಮನಸ್ಸು ಬೆಳೆದಿದೆ. ಇದು ಹಲವು ಬಾರಿ ಬೆಳಕಿಗೆ ಬಂದಿದೆ.
ಬಿ.ಎಸ್.ವೈ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ವೇಳೆ, 2013 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಶ್ವರಪ್ಪರನ್ನು ಸೋಲಿಸಿಯೇ ಸಿದ್ದ ಎಂದು ಬಿಎಸ್.ವೈ ಘೋಷಿಸಿದ್ದರು. ಕೆಜೆಪಿಯಿಂದ ಎಸ್.ರುದ್ರೇಗೌಡರನ್ನು ಕಣಕ್ಕಿಳಿಸಿದ್ದರು. ಈ ಚುನಾವಣೆಯಲ್ಲಿ ಈಶ್ವರಪ್ಪ ಸೋಲಿನ ಜೊತೆಗೆ ಕೆಜೆಪಿಯೂ ಸೋತಿತ್ತು. ಇಬ್ಬರ ಗಲಾಟೆಯಲ್ಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.
ಈ ಚುನಾವಣೆಯು ಈ ಇಬ್ಬರು ನಾಯಕರ ನಡುವಿನ ಕಂದಕ ಮತ್ತಷ್ಟು ದೊಡ್ಡದಾಗಿಸಿತ್ತು. ಬಿ.ಎಸ್.ವೈ. ಬಿಜೆಪಿಗೆ ಮರು ಸೇರ್ಪಡೆಯಾದ ನಂತರವೂ ಈಶ್ವರಪ್ಪ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಕಂಡುಬರಲಿಲ್ಲ. ಮೇಲ್ನೋಟಕ್ಕೆ ಇಬ್ಬರು ಒಟ್ಟಾಗಿರುವಂತೆ ಕಂಡುಬಂದರೂ, ಒಳಗೊಳಗೆ ರಾಜಕೀಯ ತಂತ್ರ - ಪ್ರತಿತಂತ್ರ ನಡೆಸಿಕೊಂಡು ಬರುತ್ತಿರುವುದು ಸುಳ್ಳಲ್ಲವಾಗಿದೆ.
ಬಿ.ಎಸ್.ವೈ. ಜೊತೆಗಿನ ವಿರಸದ ಕಾರಣದಿಂದಲೇ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ, ತೊಡೆ ತಟ್ಟಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪಗೆ ಟಿಕೆಟ್ ಸಿಗದಂತೆ ಬಿ.ಎಸ್.ವೈ. ಯತ್ನಿಸಿದ್ದ ಮಾತುಗಳು ಕೇಳಿಬಂದಿದ್ದವು. ತಮ್ಮ ಬೆಂಬಲಿಗ ಎಸ್.ರುದ್ರೇಗೌಡರನ್ನು ಕಣಕ್ಕಿಳಿಸುವ ತಯಾರಿ ನಡೆಸಿದ್ದರು. ಆದರೆ ಈಶ್ವರಪ್ಪರವರು ಟಿಕೆಟ್ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಬಲವರ್ದನೆ: ವಿಧಾನಸಭೆ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಜಯ ಸಾಧಿಸಿದ ನಂತರ ಶಿವಮೊಗ್ಗ ಬಿಜೆಪಿ ಪಾಳಯದಲ್ಲಿ ಈಶ್ವರಪ್ಪ ಪ್ರಭಾವ ಹೆಚ್ಚಾಗಲಾರಂಭಿಸಿದೆ. ಈ ಕಾರಣದಿಂದಲೇ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಬಿ.ಎಸ್.ವೈ. ಪಾಳಯದಲ್ಲಿ ಗುರುತಿಸಿಕೊಂಡಿದ್ದ ಹಲವರಿಗೆ ಟಿಕೆಟ್ ತಪ್ಪಿಸಿದ್ದರು ಎನ್ನಲಾಗುತ್ತಿದೆ.
ಬಿ.ಎಸ್.ವೈ. ಬೆಂಬಲಿಗರ ಅಸಮಾಧಾನ-ಬಂಡಾಯದ ಹೊರತಾಗಿಯೂ, ಸುಮಾರು 20 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಜಯಗಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಶಿವಮೊಗ್ಗ ನಗರ ಬಿಜೆಪಿಯಲ್ಲಿ ಈಶ್ವರಪ್ಪ ಅನಭಿಷಕ್ತ ದೊರೆಯಾಗಿ ಪರಿವರ್ತಿತರಾಗಿದ್ದಾರೆ. ಜಿಲ್ಲಾ ಘಟಕದಲ್ಲಿಯೂ ಪ್ರಾಬಲ್ಯ ಸಾಧಿಸಿಲು ಯತ್ನಿಸುತ್ತಿದ್ದಾರೆ. ಈ ಕಾರಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ದಾಳ ಉರುಳಿಸಿದ್ದಾರೆ. ಬಿ.ವೈ.ರಾಘವೇಂದ್ರಗೆ ಅಷ್ಟು ಸುಲಭವಾಗಿ ಟಿಕೆಟ್ ಲಭಿಸುವುದು ಅಸಾಧ್ಯ ಎಂಬ ನೇರಾನೇರ ಸಂದೇಶವನ್ನು ಬಿ.ಎಸ್.ವೈ. ಬಣಕ್ಕೆ ರವಾನಿಸಿದ್ದಾರೆ. ಜೊತೆಗೆ ಮತ್ತೊಮ್ಮೆ ಬಿ.ಎಸ್.ವೈ. ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ.
ಈಶ್ವರಪ್ಪ ಉರುಳಿಸುತ್ತಿರುವ ದಾಳಗಳಿಗೆ ಸದ್ಯಕ್ಕೆ ಬಿ.ಎಸ್.ವೈ. ಬಣದಿಂದ ತಣ್ಣನೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೂಕ್ತ ಸಮಯದಲ್ಲಿ ಪ್ರತಿದಾಳ ಉರುಳಿಸುವ ತಯಾರಿ ನಡೆಸುತ್ತಿದೆ. ಮತ್ತೊಂದೆಡೆ ತವರೂರು ಶಿವಮೊಗ್ಗದ ಪಕ್ಷದ ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಬಿ.ಎಸ್.ವೈ. ತಮ್ಮ ಆಪ್ತರ ಮೂಲಕ ಮಾಹಿತಿ ತರಿಸಿಕೊಂಡಿದ್ದಾರೆನ್ನಲಾಗಿದೆ. ಇದರಿಂದ ಬಿಜೆಪಿಯಲ್ಲಿನ ಮುಂದಿನ ವಿದ್ಯಮಾನಗಳು ಕುತೂಹಲ ಕೆರಳುವಂತೆ ಮಾಡಿದೆ.
ನಾನು ಸ್ಪರ್ಧಾಕಾಂಕ್ಷಿ : ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್
ಮುಂಬರುವ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ' ಎಂದು ಕೆ.ಎಸ್.ಈಶ್ವರಪ್ಪ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ.ಕಾಂತೇಶ್ ತಿಳಿಸಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಆದರೆ ಟಿಕೆಟ್‍ಗೆ ಲಾಬಿ ನಡೆಸುವುದಿಲ್ಲ. ಪಕ್ಷ ಕಣಕ್ಕಿಳಿಯುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷ ಸೂಚಿಸುವವರಿಗೆ ಬೆಂಬಲವಾಗಿ ಕೆಲಸ ಮಾಡುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.