ಗಡ್ಕರಿ ಏಳಿಗೆಯನ್ನು ಮೋದಿ-ಶಾ ಜೋಡಿ ತಡೆಯುತ್ತಿದೆಯೇ...?
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಮೆರಿಕ, ಕೆನಡಾ ಮತ್ತು ಇಸ್ರೇಲ್‌ಗೆ ತನ್ನ ಯೋಜಿತ ಭೇಟಿ ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಹಮ್ಮಿಕೊಂಡಿದ್ದ ರೋಡ್ ಶೋಗಳನ್ನು ರದ್ದುಗೊಳಿಸಿ ರುವುದು ರಾಜಕೀಯ ವಲಯದಲ್ಲಿ ಹಲವಾರು ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ. ಸೆ.7ರಿಂದ 9ರವರೆಗೆ ಶಿಕಾಗೋದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿಂದೂ ಸಮಾವೇಶದಲ್ಲಿ ಗಡ್ಕರಿ ಪಾಲ್ಗೊಳ್ಳುವಿಕೆಯ ವಿರುದ್ಧ ಪ್ರಧಾನಿ ಕಚೇರಿಯು ಕೆಂಪು ಸಂಕೇತವನ್ನು ತೋರಿಸಿದ ಬಳಿಕ ಗಡ್ಕರಿ ಭೇಟಿ ರದ್ದುಗೊಂಡಿತ್ತೆನ್ನಲಾಗಿದೆ.
ಗಡ್ಕರಿಯವರ ಯೋಜಿತ ಅಮೆರಿಕ ಭೇಟಿ ಸಂದರ್ಭದಲ್ಲೇ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮತ್ತು ನೀತಿ ಆಯೋಗದ ಸಭೆ ನಿಗದಿಯಾಗಿದ್ದು ಭೇಟಿಯನ್ನು ರದ್ದುಗೊಳಿಸಲು ಕಾರಣವಾಗಿತ್ತು ಎಂದು ಅವರ ಕಚೇರಿಯು ಸಮಜಾಯಿಷಿಯನ್ನು ನೀಡಿದೆ. ಆದರೆ ಸರಕಾರದಲ್ಲಿಯ ಇತರರು ಮತ್ತು ಸಂಘ ಪರಿವಾರ ಈ ಸಮಜಾಯಿಷಿ ಒಪ್ಪಿಕೊಂಡಿಲ್ಲ.
ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು ಹೆಚ್ಚಿನ ಆದ್ಯತೆಯ ವಿಷಯವಾಗಿದ್ದು, ತಿಂಗಳುಗಳ ಹಿಂದೆಯೇ ಗಡ್ಕರಿಯವರ ಪ್ರವಾಸವನ್ನು ಯೋಜಿಸಲಾಗಿತ್ತು. ಗಡ್ಕರಿಯವರು ಬಿಜೆಪಿಯ ಅಧ್ಯಕ್ಷರೂ ಅಲ್ಲ,ಪ್ರಧಾನಿಯೂ ಅಲ್ಲ. ಹೀಗಾಗಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರ ಉಪಸ್ಥಿತಿಯ ಅಗತ್ಯವಿರಲಿಲ್ಲ. ನೀತಿ ಆಯೋಗವಂತೂ ಹೆಚ್ಚುಕಡಿಮೆ ನಿಷ್ಕ್ರಿಯವಾಗಿದೆ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ,ಸರಕಾರವಂತೂ ಇಂತಹ ಆಯೋಗವೊಂದು ಇದೆ ಎನ್ನುವುದನ್ನೇ ಮರೆತುಬಿಟ್ಟಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರೊಂದಿಗೆ ಗಡ್ಕರಿಯವರ ನಿಕಟ ಸಂಬಂಧದ ಬಗ್ಗೆ ಎಚ್ಚರಿಕೆ ವಹಿಸಿದ್ದು,ಇದೇ ಕಾರಣದಿಂದ ಅವರ ವಿದೇಶ ಪ್ರವಾಸಕ್ಕೆ ಅಡ್ಡಗಾಲು ಹಾಕಲಾಗಿತ್ತು ಎಂದು ಸಂಘ ಮೂಲಗಳು ಹೇಳಿವೆ. ಅಮೆರಿಕದ ಸಮಾವೇಶದಲ್ಲಿ ಭಾಗವತ್ ಅವರು ಪ್ರಮುಖ ಆಕರ್ಷಣೆಯಾಗಿದ್ದು,ಪ್ರಧಾನ ಉಪನ್ಯಾಸವನ್ನು ನೀಡಿದ್ದರು. ವಾಸ್ತವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತಕ್ಕೆ ಕೊರತೆಯಾದರೆ ಪ್ರಧಾನಿ ಹುದ್ದೆಗೆ ಗಡ್ಕರಿಯವರು ಆರೆಸ್ಸೆಸ್‌ನ ನೆಚ್ಚಿನ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇದು ಮೋದಿ ಮತ್ತು ಶಾ ಜೋಡಿ ಗಡ್ಕರಿಯವರೆಡೆಗೆ ಒಳಗಿಂದೊಳಗೆ ದ್ವೇಷವನ್ನು ಹೊಂದಲು ಮತ್ತು ಆಗಾಗ್ಗೆ ಅವರಿಗೆ ಮುಖಭಂಗವನ್ನುಂಟು ಮಾಡುತ್ತಿರುವುದಕ್ಕೆ ಕಾರಣವಾಗಿದೆ ಎಂದು ಈ ಮೂಲಗಳು ಹೇಳಿವೆ.
ಹೆದ್ದಾರಿ ಯೋಜನೆಗಳ ಎರಡನೇ ಹಂತದ ಕಾಮಗಾರಿಗಳಲ್ಲಿ ಹೂಡಿಕೆಗಾಗಿ ಪ್ರಮುಖ ವಿದೇಶಿ ಪಿಂಚಣಿ ನಿಧಿಗಳನ್ನು ಆಕರ್ಷಿಸಲು ಗಡ್ಕರಿಯವರು ಸೆ.1ರಿಂದ 12ರವರೆಗೆ ತನ್ನ ವಿದೇಶ ಭೇಟಿಯನ್ನು ಯೋಜಿಸಿದ್ದರು. ಇದರೊಂದಿಗೆ ಶಿಕಾಗೋ ಸಮಾವೇಶ ದಲ್ಲಿ ಭಾಗವತ್ ಅವರೊಂದಿಗೆ ಉಪಸ್ಥಿತರಿರಲಿದ್ದರು. ಹೀಗಾಗಿ ಬಿಜೆಪಿಯ ಉನ್ನತ ನಾಯಕತ್ವ ಮುನ್ನೆಚ್ಚರಿಕೆ ವಹಿಸಿದ್ದಂತೆ ಕಂಡುಬರುತ್ತಿದೆ.
ಇತ್ತೀಚಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಮೋದಿಯವರೊಂದಿಗೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. 2013ರಲ್ಲಿ ಮೋದಿ ಬಿಜೆಪಿಯ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗುವಲ್ಲಿ ಸಾಗರೋತ್ತರ ಆರೆಸ್ಸೆಸ್/ವಿಹಿಂಪ ಜಾಲವು ಪ್ರಮುಖ ಪಾತ್ರ ವಹಿಸಿತ್ತು ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ.
ಹೀಗಾಗಿ ಸಹಜವಾಗಿಯೇ ಗಡ್ಕರಿಯವರ ವಿದೇಶ ಪ್ರಯಾಣ ರದ್ದತಿಯನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗುತ್ತಿದೆ. ಕೆನಡಾದ ಪ್ರಮುಖ ಪಿಂಚಣಿ ನಿಧಿಗಳನ್ನು ಗಡ್ಕರಿಯವರ ಭೇಟಿಗೆ ಆಹ್ವಾನಿಸಲಾಗಿತ್ತು ಮತ್ತು ಸೆ.5-6ರಂದು ಟೊರೊಂಟೊದಲ್ಲಿ ನಡೆಯಲಿದ್ದ ಗಡ್ಕರಿಯವರ ರೋಡ್ ಶೋದಲ್ಲಿ ಪಾಲ್ಗೊಳ್ಳುವುದಾಗಿ ಅವು ದೃಢಪಡಿಸಿದ್ದವು. ಅಮೆರಿಕದಲ್ಲಿಯೂ ಇಂತಹುದೇ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ತನ್ನ ಇಸ್ರೇಲ್ ಭೇಟಿ ಸಂದರ್ಭದಲ್ಲಿ ಅಲ್ಲಿಯ ಸರಕಾರದ ಉನ್ನತ ನಾಯಕತ್ವವನ್ನು ಗಡ್ಕರಿಯವರು ಭೇಟಿಯಾಗಲಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಇವೆಲ್ಲವನ್ನೂ ರದ್ದುಗೊಳಿಸಬೇಕಾಗಿ ಬಂದಿದ್ದು ಗಡ್ಕರಿಯವರಿಗೆ ಭಾರೀ ಮುಜುಗರವನ್ನುಂಟು ಮಾಡಿತ್ತು.
ತನ್ನ ಹರವನ್ನು ವಿಶಾಲಗೊಳಿಸಲು ಆರೆಸ್ಸೆಸ್ ಭಾಗವತರಿಂದ ಸರಣಿ ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮೋದಿ ಮತ್ತು ಶಾ ಜೋಡಿಯಲ್ಲಿ ಕಳವಳವನ್ನುಂಟು ಮಾಡಿದೆ ಎಂದು ಬಿಜೆಪಿಯಲ್ಲಿನ ಮೂಲಗಳು ತಿಳಿಸಿವೆ. ಈ ತಿಂಗಳ ಉತ್ತರಾರ್ಧದಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಆರೆಸ್ಸೆಸ್‌ನ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಅದು ಆಹ್ವಾನಿಸುವ ಸಾಧ್ಯತೆಯಿದೆ.
ಶಾ ಅವರ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಲ್ಲಿ ತನಗೆ ನಂಬಿಕೆಯಿಲ್ಲ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಆರೆಸ್ಸೆಸ್ ಅವರನ್ನು ಕಡೆಗಣಿಸಿದೆ. ಕುತೂಹಲದ ವಿಷಯವೆಂದರೆ ಕಳೆದ ಜುಲೈನಲ್ಲಿ ತನ್ನ ವಾರ್ಷಿಕ ದಿನಾಚರಣೆಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆರೆಸ್ಸೆಸ್ ಆಹ್ವಾನಿಸಿದ್ದರ ಬಗ್ಗೆ ಮೋದಿ ಮತ್ತು ಶಾ ವೌನವಾಗಿಯೇ ಉಳಿದಿದ್ದರು. ಸಚಿವರೂ ಅವರ ಹೆಜ್ಜೆಗಳನ್ನೇ ಅನುಸರಿಸಿದ್ದರು.
ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವ ಆರೆಸ್ಸೆಸ್ ಮೋದಿ-ಶಾ ಜೋಡಿಗೆ ಸಂದೇಶಗಳನ್ನು ರವಾನಿಸುತ್ತಲೇ ಇದೆ. ಗಡ್ಕರಿಯವರ ರೆಕ್ಕೆಗಳನ್ನು ಕತ್ತರಿಸುವ ಮೂಲಕ ಮೋದಿಯವರೂ ತನ್ನದೇ ಆದ ಸಂದೇಶವನ್ನು ರವಾನಿಸಿದ್ದಾರೆ.
ಕೃಪೆ: thewire.in