ಸಿಂಧೂ ನಾಗರಿಕತೆಯ ಜನ ಆರ್ಯರಲ್ಲ!

Update: 2018-09-12 18:31 GMT

ರಾಖಿಘರ್ಹಿಯ ಆವಿಷ್ಕಾರಗಳು ಉತ್ಖನನ ಶಾಸ್ತ್ರ, ಭಾಷಾಶಾಸ್ತ್ರ ಮತ್ತು ಧರ್ಮಗಳ ಹೋಲಿಕೆಯ ಅಧ್ಯಯನಗಳು ಈಗಾಗಲೇ ತಿಳಿದುಬಂದಿರುವ ವಾಸ್ತವಾಂಶಗಳನ್ನು ಮತ್ತಷ್ಟು ದೃಢಪಡಿಸುತ್ತವೆ. ಅದೇ ವೇಳೆ ಸಂಘಪರಿವಾರಿಗರು ವಾಸ್ತವಾಂಶಗಳ ತಿರುಚುವಿಕೆ, ಸುಳ್ಳು ಮಾಹಿತಿಗಳ ಪ್ರಸಾರ ಮತ್ತಿತರ ನಾನಾ ಬಗೆಯ ಕಸರತ್ತುಗಳ ಮೂಲಕ ನಡೆಸುತ್ತಿರುವ ಕುವಾದಕ್ಕೆ ಕೊಡಲಿ ಏಟು ನೀಡುತ್ತವೆೆ.

ಹಿಂದಿನ ‘‘ಸಂಘ ಪರಿವಾರದ ಆರ್ಯರು ಭಾರತದ ಮೂಲನಿವಾಸಿಗಳು ಸಿದ್ಧಾಂತಕ್ಕೆ ಕೊಡಲಿಯೇಟು?’’ ಎಂಬ (ವಾರ್ತಾಭಾರತಿ, 19.4.2018) ಲೇಖನದ ಕೊನೆಯಲ್ಲಿ ‘‘ಮುಂದಿನ ದಿನಗಳಲ್ಲಿ ಸಿಂಧೂ ಕಣಿವೆಯ ರಾಖಿಘರ್ಹಿ ಸೈಟಿನಿಂದ ಡಿಎನ್‌ಎ ಸ್ಯಾಂಪಲ್‌ಗಳು ಲಭ್ಯವಾದಾಗ (ಆರ್ಯರು ಭಾರತದಿಂದ ಇತರೆಡೆಗಳಿಗೆ ಹರಡಿದ ಸಿದ್ಧಾಂತದ) ಆ ಬುನಾದಿ ಸಂಪೂರ್ಣ ಕುಸಿದುಬೀಳುವುದರಲ್ಲಿ ಸಂಶಯವಿಲ್ಲ’’ ಎಂದು ಬರೆದಿದ್ದೆ. ಈಗ ರಾಖಿಘರ್ಹಿಯ ಡಿಎನ್‌ಎ ಸ್ಯಾಂಪಲ್‌ಗಳ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಈಗಾಗಲೇ ನಿರೀಕ್ಷಿಸಿದ ಹಾಗೆ ಅವು ಸಂಘ ಪರಿವಾರದ ಸೈದ್ಧಾಂತಿಕ ಬುನಾದಿಯನ್ನು ಪೂರ್ತಿಯಾಗಿ ಕೆಡವಿಹಾಕುತ್ತವೆ! ಆದರೂ ಸಂಘಿಗಳು ಛಲ ಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡುವುದರಲ್ಲಿ ಅನುಮಾನವಿಲ್ಲ, ಏಕೆಂದರೆ ಅವರ ಮಟ್ಟಿಗೆ ಇದು ಅಳಿವು ಉಳಿವಿನ ಪ್ರಶ್ನೆ. ಮೋದಿ ಸರಕಾರದ ಸಂಸ್ಕೃತಿ ಸಚಿವರಾಗಿರುವ ಮಹೇಶ್ ಶರ್ಮ ಮೊನ್ನೆ ಮಾರ್ಚ್‌ನಲ್ಲಿ ಇತಿಹಾಸ ಸಮಿತಿಯ ಸಭೆಯೊಂದನ್ನು ಏರ್ಪಡಿಸಿದುದರ ಹಿನ್ನೆಲೆ ಪ್ರಾಯಶಃ ಇದೇ ಇರಬೇಕು. ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ಪ್ರಧಾನ ನಿರ್ದೇಶಕರ ಕಚೇರಿಯಲ್ಲಿ ನಡೆದ ಆ ವಿಶಿಷ್ಟ ಸಭೆಯಲ್ಲಿ ಕೆಲವು ಕುತೂಹಲಕಾರಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಿತಿಯ ಅಧ್ಯಕ್ಷ ಕೆ.ಎನ್.ದೀಕ್ಷಿತ್‌ರ ಪ್ರಕಾರ ಸದರಿ ಸಮಿತಿಗೆ ‘‘ಪುರಾತನ ಇತಿಹಾಸದ ಕೆಲವು ನಿರ್ದಿಷ್ಟ ಅಂಶಗಳ ಪರಿಷ್ಕರಣೆಗೆ ನೆರವಾಗುವಂತಹ ವರದಿಯನ್ನು ತಯಾರಿಸುವ’’ ಕೆಲಸವನ್ನು ವಹಿಸಲಾಗಿದೆ. ಅದರ ಗುರಿ: ಡಿಎನ್‌ಎ ಮತ್ತು ಉತ್ಖನನಗಳ ಮಾಹಿತಿಗಳನ್ನು ಬಳಸಿಕೊಂಡು ಹಿಂದೂಗಳು ಇದೇ ನೆಲದ ಮಕ್ಕಳು ಮತ್ತು ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿರುವುದು ಮಿಥ್ಯೆ ಅಲ್ಲ, ಸತ್ಯ ಎಂದು ಸಾಬೀತುಮಾಡುವುದು. ಇದೊಂದು ಆರೆಸ್ಸೆಸ್ ಪ್ರಣೀತ ಯೋಜನೆ ಎಂದು ಬೇರೆ ಹೇಳಬೇಕಾಗಿಲ್ಲ.

ಸಂಘ ಪರಿವಾರದ ಸುಳ್ಳುಗಳು
ಸಂಘ ಪರಿವಾರದ ಹಿಂದುತ್ವ ಮತ್ತು ಹಿಂದೂ ರಾಷ್ಟ್ರ ಸಿದ್ಧಾಂತಗಳು ನಿಂತಿರುವುದೇ ವೈದಿಕರು (ಆರ್ಯರು) ಇಲ್ಲಿನ ಮೂಲನಿವಾಸಿಗಳು ಎಂಬ ಪ್ರಮೇಯದ ಬುನಾದಿಯ ಮೇಲೆ. ವೈದಿಕರು ಮೂಲನಿವಾಸಿಗಳು ಅಲ್ಲ ಎಂದಾದ ತಕ್ಷಣ ಈ ಸಿದ್ಧಾಂತಗಳು ಮುರಿದುಬೀಳುತ್ತವೆ. ಬ್ರಾಹ್ಮಣಶಾಹಿಯ ಅನ್ಯಮತ ದ್ವೇಷದ ಮೂಲಕಾರಣವೇ ಇಲ್ಲದಾಗುತ್ತದೆ. ಅವರ ವೈದಿಕ ಪಾರಮ್ಯದ ಕೇಸರಿ ರಾಷ್ಟ್ರದ ಕನಸು ಕನಸಾಗಿಯೇ ಉಳಿಯುತ್ತದೆ. ಆದುದರಿಂದಲೇ ಸಂಘಪರಿವಾರಿಗರು ಇದಕ್ಕೋಸ್ಕರ ಆಕಾಶ ಪಾತಾಳ ಒಂದು ಮಾಡಿ ಸುಳ್ಳುಗಳ ಸರಮಾಲೆಯನ್ನು ಪೋಣಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ. ಗೋಳ್ವ್ವಾಲ್ಕರ್ ತನ್ನ ‘ಬಂಚ್ ಆಫ್ ಥಾಟ್ಸ್’ನಲ್ಲಿ ‘‘ವಿದೇಶೀ ಬ್ರಿಟಿಷ್ ಕುತಂತ್ರಿಗಳು ಭಾರತ ಎಂದೂ ಒಂದೇ ರಾಷ್ಟ್ರ ಆಗಿರಲಿಲ್ಲ, ಹಿಂದೂಗಳು ನೆಲದ ಮಕ್ಕಳಲ್ಲ, ಮುಸ್ಲಿಮರು ಅಥವಾ ಬ್ರಿಟಿಷರಂತೆ ವಿದೇಶಗಳಿಂದ ಬಂದ ಅಲೆಮಾರಿ ಜನರೆಂದು ಗುಪ್ತ ಅಪಪ್ರಚಾರ ನಡೆಸಿದರು’’ ಎಂದು ಬರೆದರು. ಇನ್ನು ಕೆಲವರು ಕಾದಂಬರಿಗಳನ್ನು ರಚಿಸಿದರೆ ರಾಜಾರಾಮರಂತಹ ಕೆಲವು ತಥಾಕಥಿತ ‘ಸಂಶೋಧಕರು’ ಹರಪ್ಪದ ಮೊಹರಿನಲ್ಲಿ ಕಂಡು ಬಂದ ಪ್ರಾಣಿಯನ್ನು ಕುದುರೆ ಎಂದು ಬಿಂಬಿಸಿ ಆ ಕಾರಣಕ್ಕಾಗಿ ಅವರು ‘ಆರ್ಯರು’ ಎಂದು ಸಾಧಿಸಲೆತ್ನಿಸಿದರಾದರೂ ದಯನೀಯ ಸೋಲುಂಡರು. ಈಗ ಸಿಂಧೂ ಕಣಿವೆಯ ರಾಖಿಘರ್ಹಿ ಸೈಟಿನಲ್ಲಿ (ದಿಲ್ಲಿಯಿಂದ 156 ಕಿಮೀ ದೂರದಲ್ಲಿ ಈಗಿನ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿದೆ) ನಡೆದ ಉತ್ಖನನದ ವೇಳೆ ಸಿಕ್ಕಿದ 4,500 ವರ್ಷಗಳಷ್ಟು ಹಳೆಯ ಅಸ್ತಿಪಂಜರವೊಂದು ಸಿಂಧೂ ನಾಗರಿಕತೆಯ ಜನ ಯಾರು ಎಂಬ ವಿಷಯದ ಮೇಲಿನ ವಾದವಿವಾದಕ್ಕೆ ಅಂತಿಮ ತೆರೆ ಎಳೆಯಲಿದೆ ಎನ್ನಬಹುದು.

ವಲಸೆಯ ಇತಿಹಾಸ
ಆಫ್ರಿಕಾ ಭೂಖಂಡ ಪ್ರಪಂಚದ ಮೊದಲ ಮಾನವರ ಉಗಮಸ್ಥಾನ ಎಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ತಿಳಿಸುತ್ತವೆ. ಅಂಗರಚನಾ ಶಾಸ್ತ್ರದನುಸಾರ ಆಧುನಿಕ ಲಕ್ಷಣಗಳಿರುವ ಮಾನವರು ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಕಡೆಗಳಿಗೆ ಚದುರಿಹೋದರು. ಇವರಲ್ಲಿ ಒಂದು ಗುಂಪು ಸುಮಾರು 50,000 ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ. ಇವರ ಪೀಳಿಗೆಗಳು ಬೇಟೆಗಾರ, ಸಂಗ್ರಹಗಾರರಾಗಿ ಬದುಕತೊಡಗಿದರು. ಇವರನ್ನು ಆದಿಯ ಮೂಲರೂಪದ ದಕ್ಷಿಣ ಭಾರತೀಯರು (ಆ ಮೂ ದ ಭಾ) ಎಂದು ಹೆಸರಿಸಲಾಗಿದೆ.
ಮತ್ತೊಂದು ದೊಡ್ಡ ವಲಸೆ ನಡೆದಿರುವುದು ಸುಮಾರು 10,000 ವರ್ಷಗಳ ಹಿಂದೆ. ಪಶ್ಚಿಮ ಏಶ್ಯಾದ ಫರ್ಟೈಲ್ ಕ್ರೆಸೆಂಟ್‌ನಲ್ಲಿ (ಪೂರ್ವ ಮೆಡಿಟರೇನಿಯನ್‌ನಿಂದ ಪರ್ಷಿಯ ಕೊಲ್ಲಿಯವರೆಗಿನ ಅರ್ಧಚಂದ್ರಾಕಾರದ ಪ್ರದೇಶ) ಬೇಸಾಯದ (ಗೋಧಿ, ಬಾರ್ಲಿ, ಜಾನುವಾರು ಸಾಕಣೆ) ಆವಿಷ್ಕಾರವಾದ ನಂತರದಲ್ಲಿ ಅಲ್ಲಿಂದ ವಲಸೆಯೆದ್ದ ಜನರು ಎರಡು ದಿಕ್ಕಿನಲ್ಲಿ ಚದುರಿದರು. ಕೆಲವು ಗುಂಪುಗಳು ಯುರೋಪ್ ಕಡೆ ಸಾಗಿದರೆ ಇತರ ಗುಂಪುಗಳು ಇರಾನ್ ಮೂಲಕ ದಕ್ಷಿಣ ಏಶ್ಯಾದ ಭಾರತ ಉಪಖಂಡ ಮತ್ತಿತರ ಜಾಗಗಳಲ್ಲಿ ನೆಲಸಿದವು.


ಪ್ರಧಾನವಾಗಿ ಭಾರತದ ವಾಯವ್ಯ ಭಾಗದಲ್ಲಿ ನೆಲೆಯೂರಿದ ಇರಾನಿ ಕೃಷಿಕರು ಸ್ಥಳೀಯ ಬೇಟೆಗಾರ, ಸಂಗ್ರಹಗಾರ ಆದಿವಾಸಿಗಳೊಂದಿಗೆ (ಆ ಮೂ ದ ಭಾ) ಮಿಶ್ರವಾದರು. ಈ ಸಮ್ಮಿಶ್ರ ಜನಾಂಗವನ್ನು ಮೂಲರೂಪದ ದಕ್ಷಿಣ ಭಾರತೀಯರು (ಮೂ ದ ಭಾ) ಎಂದು ಕರೆಯಲಾಗಿದೆ. ಇವರು ಸಿಂಧೂ ಕಣಿವೆಯಲ್ಲಿ ಬೇಸಾಯ ಮಾಡುತ್ತಾ ನಿಧಾನಕ್ಕೆ ಹರಪ್ಪ, ಮೊಹೆಂಜೊದಾರೊ, ದೊಲೆವಿರ, ರಾಖಿಘರ್ಹಿಗಳಂತಹ ಪಟ್ಟಣಗಳನ್ನು ಕಟ್ಟಿಕೊಂಡರು. ಇದೇ ಸುಮಾರು 20 ಲಕ್ಷ ಚದರ ಕಿ.ಮೀ. ವಿಸ್ತಾರದ ಸಿಂಧೂ ಕಣಿವೆ ನಾಗರಿಕತೆ ಅಥವಾ ಹರಪ್ಪಾ ನಾಗರಿಕತೆ. ಸುಮಾರು ಕ್ರಿ.ಪೂ. 5500ದಿಂದ 1300ದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ನಗರ ಸಂಸ್ಕೃತಿ ಆ ಬಳಿಕ ಪ್ರಧಾನವಾಗಿ ನೀರಿನ ಸೆಲೆಗಳು ಬತ್ತಿಹೋದ ಕಾರಣ ನಿಧಾನಕ್ಕೆ ಪತನಗೊಂಡಿತು. ಅಲ್ಲಿನ ಜನರು ವಲಸೆ ಹೋಗಿ ಭಾರತದಾದ್ಯಂತ ನೆಲಸಿ, ಸ್ಥಳೀಯರು ಮತ್ತು ಹೊರಗಿನಿಂದ ಬಂದವರೊಂದಿಗೆ (ಸ್ಟೆಪ್ಪಿಜನರು) ಮಿಶ್ರವಾದರು.
ಸುಮಾರು 6000 ವರ್ಷಗಳ ಹಿಂದೆ ಮಧ್ಯ ಏಶ್ಯಾದ ಸ್ಟೆಪ್ಪಿ ಹುಲ್ಲುಗಾವಲುಗಳಿಂದ ಮತ್ತೊಂದು ದೊಡ್ಡ ಪ್ರಮಾಣದ ವಲಸೆ ನಡೆದಿದೆ. ಇವರು ದನ, ಕುದುರೆ, ಕುರಿ ಸಾಕಣೆ ಮಾಡುತ್ತಿದ್ದ ಅರೆ ಅಲೆಮಾರಿ ಪಶುಪಾಲಕರಾಗಿದ್ದರು. ಕುದುರೆಗಳನ್ನು ಪಳಗಿಸಿ ಸವಾರಿ ಮಾಡಲು ಕಲಿತ ಇವರು ಮುಂದೆ ಅಶ್ವ-ಚಾಲಿತ ರಥಗಳನ್ನು ಶೋಧಿಸಿ ದುರ್ಜಯ ಯೋಧ ಜನಾಂಗವಾದರು. ಇವರು ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ ಗ್ರೀಕ್, ಲ್ಯಾಟಿನ್, ಪ್ರಾಚೀನ ಪರ್ಷಿಯನ್, ಸಂಸ್ಕೃತ ಮುಂತಾದವುಗಳ ಮೂಲ ಭಾಷೆಯೊಂದನ್ನು ಆಡುತ್ತಿದ್ದರು. ಇವರ ಒಂದು ಅಶ್ವಾರೂಢ ಗುಂಪು ಭಾರತಕ್ಕೆ ಸುಮಾರು 4,000 ವರ್ಷಗಳ ಹಿಂದೆ ಬಂದಿದೆ. ಈ ಸ್ಟೆಪ್ಪಿಯ ಜನರು (ಆರ್ಯರು ಎಂದು ಕರೆಯಲಾದವರು) ಸ್ಥಳೀಯ ಮೂಲರೂಪದ ದಕ್ಷಿಣ ಭಾರತೀಯರ ಜೊತೆ ಮಿಶ್ರವಾದ ಪರಿಣಾಮವಾಗಿ ರೂಪುಗೊಂಡ ಜನಾಂಗವನ್ನು ಮೂಲರೂಪದ ಉತ್ತರ ಭಾರತೀಯರು ಎಂದು ಕರೆಯಲಾಗಿದೆ. ಆದುರಿಂದಲೇ ಗಣನೀಯ ಸಂಖ್ಯೆಯ ಉತ್ತರ ಭಾರತೀಯರಲ್ಲಿ ಸ್ಟೆಪ್ಪಿ ವಂಶವಾಹಿಗಳ ಕುರುಹುಗಳಿರುವುದನ್ನು ಕಾಣಬಹುದು.

ರಾಖಿಘರ್ಹಿಯ ಉತ್ಖನನ ಮತ್ತು ವಂಶವಾಹಿ ಪರೀಕ್ಷೆ

ರಾಖಿಘರ್ಹಿಯಲ್ಲಿ ಉತ್ಖನನ ಕಾರ್ಯ 1960ರ ದಶಕದ ಕೊನೆಯಿಂದಲೇ ಆರಂಭವಾಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಈಗ ಪುಣೆಯ ಡೆಕ್ಕನ್ ಕಾಲೇಜಿನ ಉಪ ಕುಲಾಧಿಪತಿಗಳೂ ಪ್ರಾಕ್ತನ ಶಾಸ್ತ್ರಜ್ಞರೂ ಆಗಿರುವ ಡಾ ವಸಂತ ಶಿವರಾಮ ಶಿಂಧೆ ನೇತೃತ್ವದ ತಂಡವೊಂದು 2015ರ ಮಾರ್ಚ್ 11ರಂದು ಇಬ್ಬರು ಪುರುಷರದು, ಒಂದು ಸ್ತ್ರೀಯದ್ದು ಮತ್ತು ಒಂದು ಮಗುವಿನದ್ದು ಸೇರಿ ಒಟ್ಟು ನಾಲ್ಕು ಮಾನವ ಅವಶೇಷಗಳನ್ನು ಪತ್ತೆಹಚ್ಚಿದೆ. ಅವರಲ್ಲೊಂದು ಪುರುಷ ಅಸ್ತಿಪಂಜರ ಸುಮಾರು 4,500 ವರ್ಷಗಳ ಹಿಂದಿನದು ಎನ್ನಲಾಗಿದೆ. ಆ ಪುರುಷ ಅಸ್ತಿಪಂಜರದ ಮೇಲೆ ನಡೆಸಿದ ಪರೀಕ್ಷೆಗಳು ಆತನ ವಂಶವಾಹಿಗಳಲ್ಲಿ ಸ್ಟೆಪ್ಪಿ ಜನರ (ಆರ್ಯರು) ಗುಂಪಿನ ಕುರುಹುಗಳು ಇಲ್ಲವೆಂದು ಖಚಿತವಾಗಿ ಹೇಳುತ್ತವೆ! ಇದರರ್ಥ ಸಿಂಧೂ ನಾಗರಿಕತೆಯ ಜನರಿಗೂ ಸ್ಟೆಪ್ಪಿಯ ವಲಸಿಗರಿಗೂ ಸಂಬಂಧ ಇಲ್ಲ; ಸ್ಟೆಪ್ಪಿಯ ವಲಸಿಗರು ಭಾರತಕ್ಕೆ ಬರುವುದಕ್ಕೂ ಮೊದಲೇ ಸಿಂಧೂ ನಾಗರಿಕತೆಯ ಜನ ಇಲ್ಲಿ ವಾಸಿಸುತ್ತಿದ್ದರು ಎಂದಾಗುತ್ತದೆ! ಈ ಅಧ್ಯಯನಗಳ ಪ್ರಕಾರ ರಾಖಿಘರ್ಹಿಯ 4,500 ವರ್ಷಗಳಷ್ಟು ಪುರಾತನ ವ್ಯಕ್ತಿ ಮೂಲರೂಪದ ದಕ್ಷಿಣ ಭಾರತೀಯರನ್ನು (ಸಿಂಧೂ ನಾಗರಿಕತೆಯ ಜನ) ಅದರಲ್ಲೂ ಪ್ರಧಾನವಾಗಿ ನೀಲಗಿರಿಯ ಇರುಳರನ್ನು ಹೆಚ್ಚು ಹೋಲುತ್ತಿದ್ದು ಇವರ ವಂಶವಾಹಿಗಳ ನಡುವೆ ನಿಕಟ ಸಂಬಂಧಗಳಿರುವುದಾಗಿ ತಿಳಿದುಬಂದಿದೆೆ. ಅಂದರೆ ರಾಖಿಘರ್ಹಿಯ ಸಿಂಧೂ ನಾಗರಿಕತೆಯ ಜನರು ಮತ್ತು ಇರುಳರದು ಮೂಲತಃ ಒಂದೇ ವಂಶ ಎಂದಾಯಿತು!
ರಾಖಿಘರ್ಹಿಯ ಆವಿಷ್ಕಾರಗಳು ಉತ್ಖನನ ಶಾಸ್ತ್ರ, ಭಾಷಾಶಾಸ್ತ್ರ ಮತ್ತು ಧರ್ಮಗಳ ಹೋಲಿಕೆಯ ಅಧ್ಯಯನಗಳ ಮೂಲಕ ಈಗಾಗಲೇ ತಿಳಿದುಬಂದಿರುವ ವಾಸ್ತವಾಂಶಗಳನ್ನು ಮತ್ತಷ್ಟು ದೃಢಪಡಿಸುತ್ತವೆ. ಅದೇ ವೇಳೆ ಸಂಘಪರಿವಾರಿಗರು ವಾಸ್ತವಾಂಶಗಳ ತಿರುಚುವಿಕೆ, ಸುಳ್ಳು ಮಾಹಿತಿಗಳ ಪ್ರಸಾರ ಮತ್ತಿತರ ನಾನಾ ಬಗೆಯ ಕಸರತ್ತುಗಳ ಮೂಲಕ ನಡೆಸುತ್ತಿರುವ ಕುವಾದಕ್ಕೆ ಕೊಡಲಿ ಏಟು ನೀಡುತ್ತವೆೆ. ಒಂದು ವರ್ಷದಷ್ಟು ಹಿಂದೆಯೇ ಪ್ರಕಟಿಸಬೇಕಾಗಿದ್ದ ಈ ಆವಿಷ್ಕಾರಗಳನ್ನು ಪ್ರಕಟಿಸದಿರುವುದಕ್ಕೆ ಕಾರಣವೆಂದರೆ ಇದೊಂದು ರಾಜಕೀಯವಾಗಿ ಸೂಕ್ಷ್ಮವಾಗಿರುವ ವಿಷಯ ಎನ್ನುತ್ತಾರೆ ಡಾ ಶಿಂಧೆ.
ಒಂದು ವೇಳೆ ರಾಖಿಘರ್ಹಿಯ ಅಸ್ತಿಪಂಜರದಲ್ಲಿ ಸ್ಟೆಪ್ಪಿವಲಸಿಗರ ವಂಶವಾಹಿ ಗುಂಪು ಪತ್ತೆಯಾಗಿದ್ದರೆ ಸಿಂಧೂ ನಾಗರಿಕತೆಯ ಜನರೇ ಆರ್ಯರು ಮತ್ತು ಅವರು ಮೂಲತಃ ಭಾರತದವರಾಗಿದ್ದು ಇಲ್ಲಿಂದ ಬೇರೆ ಕಡೆಗಳಿಗೆ ವಲಸೆ ಹೋದರು ಎಂಬ ಸಂಘ ಪರಿವಾರದ ವಾದಕ್ಕೆ ಬಹುದೊಡ್ಡ ಸಮರ್ಥನೆ ಸಿಗುತ್ತಿತ್ತು. ಆದರೆ ಹಾಗಾಗಲಿಲ್ಲ. ವಾಸ್ತವವಾಗಿ ರಾಖಿಘರ್ಹಿಯ ಸಂಶೋಧನೆಗಳು ಸಂಘ ಪರಿವಾರದ ಕುವಾದಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತವೆ. ಈ ಕುರಿತ ಸಂಶೋಧನಾ ಪ್ರಬಂಧವೊಂದು ಸದ್ಯದಲ್ಲೇ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗಲಿದೆ. ರಾಖಿಘರ್ಹಿಯಲ್ಲಿ ನಡೆದ ಉತ್ಖನನಗಳು ಮತ್ತು ವಂಶವಾಹಿ ಪರೀಕ್ಷೆಗಳು ಅಂತಿಮವಾಗಿ ಈ ಕೆಳಗಿನ ಅಂಶಗಳನ್ನು ನಿರ್ಣಾಯಕವಾಗಿ ಸಾಬೀತುಪಡಿಸುತ್ತವೆ:
• ಸಂಸ್ಕೃತ ಭಾಷೆ ಮತ್ತು ವೈದಿಕ ಧರ್ಮಗಳ ಮೂಲ ಸಿಂಧೂ ನಾಗರಿಕತೆ ಅಲ್ಲ. ವಾಸ್ತವದಲ್ಲಿ ಅವೆರಡೂ ಸುಮಾರು 4000 ವರ್ಷಗಳ ಹಿಂದೆ ಮಧ್ಯ ಏಶ್ಯಾದಿಂದ ಭಾರತಕ್ಕೆ ವಲಸೆ ಬಂದ ಸ್ಟೆಪ್ಪಿಜನರ (ಆರ್ಯರೆಂದು ಕರೆಯಲಾದರು) ಕೊಡುಗೆ.
• ಹೆಚ್ಚು ಕಡಿಮೆ ಎಲ್ಲಾ ಆಧುನಿಕ ಭಾರತೀಯರ ವಂಶವಾಹಿಗಳಲ್ಲಿ ಸುಮಾರು 10,000 ವರ್ಷಗಳ ಹಿಂದೆ ಇಲ್ಲಿಗೆ ಬಂದ ಇರಾನಿ ಕೃಷಿಕರ ಕುರುಹುಗಳು ಕಂಡುಬರುತ್ತವೆ. ಗಣನೀಯ ಸಂಖ್ಯೆಯ ಉತ್ತರ ಭಾರತೀಯರ ವಂಶವಾಹಿಗಳಲ್ಲಿ ಇದರೊಂದಿಗೆ ಸ್ಟೆಪ್ಪಿಜನರ ಕುರುಹುಗಳೂ ಕಂಡುಬರುತ್ತವೆ. ಸ್ಥೂಲವಾಗಿ ಹೇಳುವುದಾದರೆ ಆಧುನಿಕ ಭಾರತೀಯರದು ಒಂದು ಮಿಶ್ರ ತಳಿಯಾಗಿದ್ದು ಅವರಲ್ಲಿ ಗಮನಾರ್ಹ ಪ್ರಮಾಣದಲ್ಲಿರುವುದು ಸಿಂಧೂ ನಾಗರಿಕತೆಯ ಜನರ - ಅದರೆ ಮೂಲರೂಪದ ದಕ್ಷಿಣ ಭಾರತೀಯರ - ವಂಶವಾಹಿಗಳು. ಆದುದರಿಂದ ಸಂಪೂರ್ಣ ಪರಿಶುದ್ಧ ಆರ್ಯ ಜನಾಂಗ ಅಥವಾ ವೈದಿಕ ಜನಾಂಗ ಎಂಬುದು ಬರೀ ಮಿಥ್ಯೆ ಅಲ್ಲದೆ ಇನ್ನೇನೂ ಅಲ್ಲ.
• ಸಿಂಧೂ ನಾಗರಿಕತೆಯ ಜನರು ಆರ್ಯರಲ್ಲ; ಅವರು ದ್ರಾವಿಡರು ಎಂದು ಕರೆಯಲಾದ ಮೂಲರೂಪದ ದಕ್ಷಿಣ ಭಾರತೀಯರು.

*********

Who Were the Harappans;
Why Hindutva is Out of Steppe with new discoveries about the Indus Valley people; 
(ಆಕರಗಳು: 13.8.2018ರ ಔಟ್‌ಲುಕ್‌ನಲ್ಲಿ ಸುನೀಲ್ ಮೆನನ್ ಮತ್ತು ಸಿದ್ಧಾರ್ಥ ಮಿಶ್ರಾ ಲೇಖನ - ಸ್ಕ್ರೋಲ್.ಇನ್ ನಲ್ಲಿ ಗಿರೀಶ್ ಶಹಾನೆಯವರ ಲೇಖನ - ಇಂಡಿಯ ಟುಡೇ ದಲ್ಲಿ ಕಾಯ್ ಫ್ರೀಸ್ ಲೇಖನ - 4500year-old DNA from Rakhigarhi reveals evidence that will unsettle Hindutva)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ