ಗ್ರಹಣವೆಂಬ ಪ್ರಾಕೃತಿಕ ವಿಸ್ಮಯವನ್ನು ನೋಡಲು ಮರೆಯದಿರಿ

Update: 2018-09-15 17:51 GMT

►► ಭಾಗ-56

ಗ್ರಹಣಗಳಿಗೂ ಭೂಕಂಪನಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಿದಿನ ಭೂಮಿಯ ಮೇಲೆ ಭೂಕಂಪನಗಳು ನಡೆಯುತ್ತಿರುತ್ತವೆ. ಚಿಲಿಯಲ್ಲಿ ಅತ್ಯಂತ ದೊಡ್ಡ ಭೂಕಂಪ ನಡೆದಿತ್ತು. ಆದರೆ ಆ ಸಂದರ್ಭ ಯಾವುದೇ ಗ್ರಹಣ ಸಂಭವಿಸಿರಲಿಲ್ಲ. ತಜ್ಞರ ಪ್ರಕಾರ ಜಗತ್ತಿನಲ್ಲಿ ವರ್ಷಕ್ಕೆ ಸುಮಾರು ಒಂದು ಲಕ್ಷ, ದಿನಕ್ಕೆ ಸುಮಾರು 2,500ರಷ್ಟು ಭೂಕಂಪನಗಳು ನಡೆಯುತ್ತವೆ. ಅವುಗಳು ಲಘು ಪ್ರಮಾಣದಲ್ಲಿ ನಡೆಯುತ್ತವೆ. ಅದು ನಮಗೆ ಗೊತ್ತಾಗುವುದೇ ಇಲ್ಲ.

ಗ್ರಹಣದ ಬಗ್ಗೆ ನಾನು ಈಗಾಗಲೇ ಹಲವಾರು ಬಾರಿ ತಿಳಿಸಿದ್ದೇನೆ. ವಿಚಾರವಾದಿಗಳ ತಂಡವು ಈ ಗ್ರಹಣದ ಸಂದರ್ಭದಲ್ಲಿ ಕೈಗೊಂಡ ವೈಜ್ಞಾನಿಕ ಕಾರ್ಯಕ್ರಮಗಳ ಬಗ್ಗೆಯೂ ತಿಳಿಸಿದ್ದೇನೆ. ಹಾಗಿದ್ದರೂ ಗ್ರಹಣದ ಸಂದರ್ಭದಲ್ಲಿ ಇದೊಂದು ಮನೋದೌರ್ಬಲ್ಯವಾಗಿ ಸಮಾಜವನ್ನು ಇನ್ನೂ ಕಾಡುತ್ತಿರುವುದು, ಅದಕ್ಕೆ ಪೂರಕವಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರಗಳ ಮೂಲಕ ಜನರಲ್ಲಿ ಮತ್ತಷ್ಟು ಭೀತಿ, ತಪ್ಪು ಕಲ್ಪನೆಗಳನ್ನು ಬಿತ್ತುವ ಹಿನ್ನೆಲೆಯಲ್ಲಿ ನಾವು ಈ ಗ್ರಹಣಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವುದು ಅಗತ್ಯವಾಗಿದೆ.

ಈ ಗ್ರಹಣಗಳ ಸುತ್ತ ಹೆಣೆಯಲಾಗುವ ಮೂಢನಂಬಿಕೆಗಳು ಬಹಳ ಹಿಂದಿನಿಂದಲೂ ಮಾನವನನ್ನು ಬಾಧಿಸುತ್ತಾ ಬಂದಿದೆ. ಗ್ರಹಣ ಎಂಬುದು ಪ್ರಕೃತಿಯ ವಿಸ್ಮಯ. ಹಾಗಿದ್ದರೂ ವಿಜ್ಞಾನದ ಈ ಕೌತುಕವನ್ನು ಅರಿಯದ ಮಾನವ, ಸೂರ್ಯಗ್ರಹಣದ ವೇಳೆ ದಿನದ ಹೊತ್ತು ಸೂರ್ಯನಿಗೆ ಅದೇನೋ ಅಪಾಯ ಸಂಭವಿಸಿದೆ ಎಂಬ ನೆಲೆಯಲ್ಲಿ ಮಾನವನಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಾ ಬಂದಿದೆ. ಪ್ರತಿಕ್ರಿಯೆ ರೂಪದಲ್ಲಿ ಸೂರ್ಯನ ಕಿರಣಗಳು ತನ್ನ ಮೇಲೆ ಅಥವಾ ತಾನು ತಿನ್ನುವ ಆಹಾರ ವಸ್ತುಗಳ ಮೇಲೆ ಬೀಳದಂತೆ ಎಚ್ಚರಿಕೆ ವಹಿಸುವ ಪ್ರಕ್ರಿಯೆಗಳು ಹಿಂದಿನಿಂದ ನಡೆದುಕೊಂಡು ಬಂದಿವೆ. ವಿಜ್ಞಾನ ಬೆಳೆದಂತೆ ಈ ಬಗ್ಗೆ ಸಾಕಷ್ಟು ಅರಿವು ಮೂಡಿದ್ದರೂ, ಮಾನಸಿಕವಾಗಿ ಹಿಂದುಳಿದ ಮಾನವರಲ್ಲಿ ಗ್ರಹಣಗಳ ಭಯ ಸ್ವಾಭಾವಿಕವಾಗಿ ಕಾಡಲಾರಂಭಿಸುತ್ತದೆ. ಇದೊಂದು ಮೌಢ್ಯವಾಗಿದ್ದರೂ ಅದರಿಂದ ಹೊರಬರಲು ಮನುಷ್ಯ ಈ ಮೌಢ್ಯಗಳಿಂದ ಹೊರಬಂದಿಲ್ಲ. ಕೆಲವೊಂದು ರಾಷ್ಟ್ರಗಳಲ್ಲಿ ಸೂರ್ಯನನ್ನು ರಾಕ್ಷಸ ನುಂಗಿದ್ದಾನೆ ಎಂದು ಹೇಳುತ್ತಾ, ನಗಾರಿಗಳನ್ನು ಬಾರಿಸಿ, ಸಿಡಿಮದ್ದು ಹಾರಿಸಿ ರಾಕ್ಷಸನನ್ನು ಹೆದರಿಸುವಂತಹ ಪ್ರಕ್ರಿಯೆಗಳೂ ನಡೆಯುತ್ತವೆ. ಇದಕ್ಕೆ ಇಂಬು ನೀಡುವಂತೆ ಈ ರೀತಿಯ ಪ್ರಕ್ರಿಯೆ ಕೆಲ ನಿಮಿಷ, ಗಂಟೆಗಳಲ್ಲಿ ಪ್ರಕೃತಿ ಸಹಜ ಗ್ರಹಣ ಪ್ರಕ್ರಿಯೆಯೂ ನಿಂತಿರುತ್ತದೆ.

ಆದರೆ ಮೌಢ್ಯಗಳನ್ನು ತುಂಬುವವರು ಇದು ತಮ್ಮ ಪ್ರತಿಬಂಧಕ ಶಕ್ತಿಗಳಿಂದಾಗಿ ಗ್ರಹಣವೆಂಬ ರಾಕ್ಷಸನನ್ನು ಓಡಿಸಿದ್ದೇವೆಂದು ಮಾನಸಿಕವಾಗಿ ತುಮುಲದಲ್ಲಿರುವ ಮಾನವರನ್ನು ನಂಬಿಸುತ್ತಾ ಬಂದಿದ್ದಾರೆ. ಇಂದಿಗೂ ಅದು ಮುಂದುವರಿದಿದೆ. ತಂತ್ರಜ್ಞಾನ, ವಿಜ್ಞಾನ ಮುಂದುವರಿದಂತೆ ಮನೋಭಾವ ವೈಜ್ಞಾನಿಕಗೊಳ್ಳುವ ಬದಲು, ಮೌಢ್ಯವನ್ನು ಪ್ರಚಾರ ಮಾಡಲು ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಮುಂದುವರಿದ ತಂತ್ರಜ್ಞಾನವನ್ನು ಮೌಢ್ಯಕ್ಕಾಗಿ ಬಳಕೆ ಮಾಡುತ್ತಿರುವುದನ್ನು ನಮ್ಮ ದೇಶದಲ್ಲಿಯೂ ನಾವು ಕಾಣುತ್ತಿರುತ್ತೇವೆ. ಮುಂದುವರಿದ ತಂತ್ರಜ್ಞಾನದ ಭಾಗವಾಗಿ ಗ್ರಹಣ ಸಂಭವಿಸುವ ಕೆಲ ತಿಂಗಳುಗಳ ಮುಂಚಿತವಾಗಿಯೇ ಜನರಲ್ಲಿ ಭೀತಿಯನ್ನು ಹರಡಲಾಗುತ್ತದೆ. ಗ್ರಹಣದಿಂದಾಗಿ ಕೆಲವೊಂದು ರಾಶಿಯವರಿಗೆ, ನಕ್ಷತ್ರದವರಿಗೆ ತೊಂದರೆಗಳಾಗುತ್ತವೆ ಎಂಬ ಪುಕಾರು ಹಬ್ಬಲಾಗುತ್ತದೆ. ಇದರಿಂದ ಬೆದರಿದವರು ಸಹಜವಾಗಿ ದುಷ್ಪರಿಣಾಮಗಳಿಂದ ಮುಕ್ತರಾಗಲು ಏನು ಮಾಡಬೇಕೆಂಬ ನಿಟ್ಟಿನಲ್ಲಿ ಮೌಢ್ಯಗಳಿಗೆ ಬಲಿಯಾಗುತ್ತಾರೆ.

ಇದಕ್ಕಾಗಿ ಮೌಢ್ಯಗಳನ್ನು ಬಿತ್ತುವವರಿಂದ ಪರಿಹಾರ ಮಾರ್ಗವನ್ನೂ ಕಂಡುಕೊಳ್ಳುತ್ತಾರೆ. ಗ್ರಹಣಗಳಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ದುರದೃಷ್ಟವಶಾತ್ ಅದ್ಯಾವುದೋ ಕಾರಣಗಳಿಂದ ಪರಿಹಾರ ಮಾಡಿಸಿಕೊಂಡವರಿಗೆ ತೊಂದರೆ ಆದಾಗ ಮಾಡಿಸಿದ ಪರಿಹಾರದಲ್ಲೇ ದೋಷವಾಗಿದೆ ಎಂಬ ಮಾನಸಿಕ ಒತ್ತಡವನ್ನು ಹೇರಿ ಮತ್ತೊಂದಷ್ಟು ಖರ್ಚಿಗೆ ದಾರಿ ಮಾಡಿಕೊಡಲಾಗುತ್ತದೆ. ಗ್ರಹಣ ಹೆಸರಿನಲ್ಲಿ ಈ ರೀತಿ ದೋಚುವ ಕೆಲಸ ಸಾಕಷ್ಟು ನಡೆಯುತ್ತಿದೆ. ಮುಖ್ಯವಾಗಿ ಗ್ರಹಣದ ವೇಳೆ ಸ್ತ್ರೀಯರ ಮೇಲೆ ಹೆಚ್ಚಿನ ಒತ್ತಡ ಹೇರಲಾಗುತ್ತದೆ. ಗರ್ಭಿಣಿಯಾದವರು ಗ್ರಹಣದ ವೇಳೆ ಹೊರ ಬರಬಾರದು. ಕಿರಣಗಳಿಂದಾಗಿ ಭ್ರೂಣದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಹುಟ್ಟುವ ಮಗುವಿಗೆ ಸೀಳುತುಟಿ ಉಂಟಾಗುತ್ತದೆ ಎಂಬ ಭಯವನ್ನೂ ಹುಟ್ಟಿಸಲಾಗುತ್ತದೆ. ವಿಚಾರವಾದಿ ಸಂಘಟನೆಗಳಿಗೆ ಸೇರಿದ ಮಹಿಳಾ ಸದಸ್ಯರು ಕೂಡಾ ಗರ್ಭಾವಸ್ಥೆಯ ಸಂದರ್ಭದಲ್ಲಿ ಗ್ರಹಣದ ವೇಳೆ ಕಿರಣಕ್ಕೆ ಮೈಯ್ಯೆಡ್ಡಿ ನಿಂತು ಗ್ರಹಣದಿಂದ ದುಷ್ಪರಿಣಾಮಗಳಾಗುವುದು ಮೂಢನಂಬಿಕೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಗ್ರಹಣದ ವೇಳೆ ತರಕಾರಿ ಹೆಚ್ಚುವ ಕೆಲಸವನ್ನು ಮಾಡಿದ್ದಾರೆ. ಯಾರಿಗೂ ಈವರೆಗೂ ಸೀಳು ತುಟಿಯ ಮಗು ಜನಿಸಿದ ಉದಾಹರಣೆ ಇಲ್ಲ!

ಇತ್ತೀಚೆಗೆ ತನ್ನನ್ನು ಸದ್ಗುರು ಎಂದು ಕರೆಸಿಕೊಳ್ಳುವಾತ ಹಾಗೂ ವೈದ್ಯರೊಬ್ಬರು ವಾಟ್ಸ್‌ಆ್ಯಪ್ ಮೂಲಕ ಗ್ರಹಣದ ವೇಳೆ ಹೊಟ್ಟೆಯಲ್ಲಿರುವ ಆಹಾರ ಕೆಡುವುದು; ಮುಖ್ಯವಾಗಿ ಇದು ಬೇಯಿಸಿದ ಆಹಾರದ ಮೇಲೆ ದುಷ್ಪರಿಣಾಮ ಬೀರುತ್ತದೆ; ಹಾಗಾಗಿ ಗ್ರಹಣದ ವೇಳೆ ಹೊಟ್ಟೆಯಲ್ಲಿ ಆಹಾರ ಇರಬಾರದು. ಇದಕ್ಕಾಗಿಯೇ ಗ್ರಹಣದ ವೇಳೆ ಆಹಾರ ಸೇವನೆಯನ್ನು ನಿಷಿದ್ಧ ಮಾಡಲಾಗುತ್ತದೆ; ಕೆಲವು ಗಂಟೆಗಳ ಮುಂಚಿತವಾಗಿ ಹಾಗೂ ಗ್ರಹಣ ಬಿಟ್ಟ ಕೆಲ ಗಂಟೆಗಳ ಕಾಲ ಇದನ್ನು ಪಾಲಿಸಲಾಗುತ್ತದೆ; ಕೆಲವೇ ಗಂಟೆಗಳಲ್ಲಿ ಈ ಗ್ರಹಣದ ವೇಳೆ ಬದಲಾವಣೆಯಾಗುತ್ತದೆ ಎಂದು ಹೇಳುವ ಈ ಮಹಾನುಭಾವರು ಯಾವುದೇ ಪುರಾವೆಗಳನ್ನು ನೀಡುವುದಿಲ್ಲ. ಆದರೆ ಜನರು ಇದನ್ನು ನಂಬುತ್ತಾರೆ.

ಎರಡು ವರ್ಷಗಳ ಹಿಂದೆ ನನ್ನ ಮಿತ್ರರೊಬ್ಬರ ವಿವಾಹ ಜೀವನದ 25ನೆ ವರ್ಷಾಚರಣೆ ನಡೆಯಿತು. ಆ ದಿನ ಗ್ರಹಣ. ನೂರಾರು ಮಂದಿ ಊಟ ಮಾಡಿದರು. ಆದರೆ ಯಾರಿಗೂ ತೊಂದರೆ ಆಗಿಲ್ಲ. ಜಗತ್ತಿನಲ್ಲಿ ಕೋಟ್ಯಂತರ ಮಂದಿ ಗ್ರಹಣದ ವೇಳೆಯಲ್ಲಿ ಆಹಾರ ಸೇವಿಸುತ್ತಾರೆ. ಅದರಲ್ಲಂತೂ ಖಗ್ರಾಸ ಸೂರ್ಯಗ್ರಹಣ ನಡೆದರೆ, ವಿದೇಶದ ಕೆಲವು ರಾಷ್ಟ್ರಗಳಲ್ಲಿ ಅದರ ಪಥವನ್ನು ಅರಸುತ್ತಾ ಬಹಳಷ್ಟು ಮಂದಿ ಪ್ರಯಾಣ ಬೆಳೆಸುತ್ತಾರೆ. ವಿಶೇಷ ದೂರದರ್ಶಕಗಳ ಮೂಲಕ ಸೂರ್ಯನ ಬೆಳಕಿನಲ್ಲಿ ಕೂತು ಪ್ರಕೃತಿ ವಿಸ್ಮಯದ ಆನಂದ ಪಡೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಮನೆಯೊಳಗೆ ಕೂತು ಪ್ರಕೃತಿ ವಿಸ್ಮಯವನ್ನು ಮೌಢ್ಯವನ್ನಾಗಿಸುವ ಕಾರ್ಯ ನಡೆಯುತ್ತದೆ. ಇದು ಖಂಡನೀಯ. ನಾವು ಹಲವಾರು ಬಾರಿ ಇಂತಹ ಸೂರ್ಯ ಹಾಗೂ ಚಂದ್ರಗ್ರಹಣಗಳ ವೇಳೆೆ ತೆರೆದ ಆಕಾಶದ ನಡುವೆ ಸಿಹಿ ತಿಂಡಿಗಳನ್ನು ಹಂಚಿ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದ್ದೇವೆ. ಶಾಲೆಯ ಆವರಣದಲ್ಲೊಮ್ಮೆ ಗ್ರಹಣದ ಸಂದರ್ಭ ವಿಜ್ಞಾನ ಕೇಂದ್ರದವರು ಟೆಲಿಸ್ಕೋಪ್ ಮೂಲಕ ಗ್ರಹಣ ನೋಡುವ ವ್ಯವಸ್ಥೆಯನ್ನು ಮಾಡಿದ್ದರು. ಆ ಸಂದರ್ಭ ನಾವು ಸಿಹಿತಿಂಡಿ ಹಂಚಿದ್ದೆವು. ಆ ಸಂದರ್ಭ ಅಲ್ಲಿ ಬಹಳಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು. ಅವರು ನಮ್ಮಲ್ಲಿ ತಿಂಡಿಯನ್ನು ಮತ್ತೆ ಮತ್ತೆ ಕೇಳಿ ತಿನ್ನುತ್ತಿದ್ದರು. ತಿಂಡಿ ಅಷ್ಟೊಂದು ಇಷ್ಟವಾಯಿತೇ ಎಂದು ಅವರಲ್ಲಿ ಕೇಳಿದರೆ, ‘ಬೆಳಗ್ಗಿನಿಂದ ನಮಗೆ ಮನೆಯಲ್ಲಿ ಏನೂ ಕೊಟ್ಟಿಲ್ಲ.’ ಎಂಬ ಉತ್ತರ!

ಇಂತಹ ಮೌಢ್ಯಗಳಿಂದ ಮಾನಸಿಕ ದೌರ್ಬಲ್ಯ ಹೆಚ್ಚುತ್ತಿದೆ. ಇಂತಹವರು ಮಾನಸಿಕ ಒತ್ತಡಕ್ಕೆ ಒಳಗಾಗುವುದು ಹೆಚ್ಚು. ಗ್ರಹಣಗಳಿಂದಾಗಿ ಪ್ರಾಕೃತಿಕ ವಿಕೋಪ ನಡೆಯುತ್ತದೆ ಎಂಬ ಗಾಳಿಸುದ್ದಿಯನ್ನೂ ಹಬ್ಬಲಾಗುತ್ತದೆ. ಕೇರಳದಲ್ಲಿ ನಡೆದ ಜಲ ಪ್ರಳಯಕ್ಕೆ ಗ್ರಹಣ ಕಾರಣ ಎಂಬ ಊಹಾಪೋಹವನ್ನು ಕೆಲವು ನಕಲಿ ಜ್ಯೋತಿಷಿಗಳು ಹಬ್ಬಿಸಿದ್ದಾರೆ. ಅದೇ ಉತ್ತರಾಖಂಡದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ದುರಂತದ ಸಂದರ್ಭಕ್ಕೆ ಯಾವ ಗ್ರಹಣ ಕಾರಣ. ಕೇರಳಕ್ಕಿಂತಲೂ ಹೆಚ್ಚಿನ ತೊಂದರೆ ಅಲ್ಲಿ ಸಂಭವಿಸಿದೆ. ಸೂರ್ಯ ಗ್ರಹಣದಿಂದ ಭೂಕಂಪಗಳು ಸಂಭವಿಸುತ್ತವೆ ಎಂದಾದರೆ, ಪ್ರತಿ ದಿನ ಭೂಕಂಪಗಳು ನಡೆಯುತ್ತಿರಬೇಕಿತ್ತು. ಗ್ರಹಣಗಳಿಗೂ ಭೂಕಂಪನಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಿದಿನ ಭೂಮಿಯ ಮೇಲೆ ಭೂಕಂಪನಗಳು ನಡೆಯುತ್ತಿರುತ್ತವೆ. ಚಿಲಿಯಲ್ಲಿ ಅತ್ಯಂತ ದೊಡ್ಡ ಭೂಕಂಪ ನಡೆದಿತ್ತು. ಆದರೆ ಆ ಸಂದರ್ಭ ಯಾವುದೇ ಗ್ರಹಣ ಸಂಭವಿಸಿರಲಿಲ್ಲ. ತಜ್ಞರ ಪ್ರಕಾರ ಜಗತ್ತಿನಲ್ಲಿ ವರ್ಷಕ್ಕೆ ಸುಮಾರು ಒಂದು ಲಕ್ಷ, ದಿನಕ್ಕೆ ಸುಮಾರು 2,500ರಷ್ಟು ಭೂಕಂಪನಗಳು ನಡೆಯುತ್ತವೆ. ಅವುಗಳು ಲಘು ಪ್ರಮಾಣದಲ್ಲಿ ನಡೆಯುತ್ತವೆ. ಅದು ನಮಗೆ ಗೊತ್ತಾಗುವುದೇ ಇಲ್ಲ. ನಾವು ವಿಚಾರವಾದಿಗಳು ಸಾಧ್ಯವಾದಷ್ಟು ಗ್ರಹಣಗಳ ವೇಳೆ ತೆರೆದ ವಾತಾವರಣದಲ್ಲಿ ಅಡುಗೆ ಮಾಡಿ ಊಟ ಮಾಡುವ ಪರಿಪಾಠ ಇರಿಸಿಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಜನರಲ್ಲಿ ಗ್ರಹಣದ ಬಗೆಗಿನ ಮೌಢ್ಯವನ್ನು ಹೋಗಲಾಡಿಸುವುದು ಮತ್ತು ಈ ರೀತಿಯ ಭ್ರಮೆಗಳಿಗೆ ವೈಜ್ಞಾನಿಕ ಕಾರಣಗಳಿಲ್ಲ ಎಂಬುದನ್ನು ಸಾಬೀತುಪಡಿಸುವುದು. ದೇಶ ಬಲಿಷ್ಠವಾಗಬೇಕಾದರೆ ಇಂತಹ ಮೌಢ್ಯಗಳು ದೂರವಾಗಬೇಕು. ಇಂತಹ ಮೌಢ್ಯಗಳನ್ನು ಪ್ರಚಾರ ಮಾಡುವವರನ್ನು ನಂಬದೆ ಜೀವನ ನಡೆಸುವಂತಾಗಬೇಕು. ಹಲವಾರು ಬಾರಿ ಗ್ರಹಣದ ವೇಳೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ವಿಚಾರವಾದಿಯಾಗಿ ನಾನೂ ಇಂತಹ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಆಗ ನಾನು ಕೊಡುವ ಉತ್ತರವಿಷ್ಟೆ. ಆ ದಿನದಂದು ಗ್ರಹಣ ಇಲ್ಲದ ವೇಳೆ ನೀವೇನು ಮಾಡುತ್ತೀರಿ ಅದನ್ನೇ ಮಾಡಿ. ಯಾವ ಆಹಾರ, ಯಾವ ಹೊತ್ತಿಗೆ ಸೇವಿಸುತ್ತೀರಿ ಅದನ್ನು ಮುಂದುವರಿಸಿ. ಸಾಧ್ಯವಾದಲ್ಲಿ ಗ್ರಹಣಗಳೆಂಬ ಪ್ರಾಕೃತಿಕ ವಿಸ್ಮಯಗಳನ್ನು ನೋಡಲು ಮರೆಯದಿರಿ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News