ಬ್ಯಾರಿ ನಿಘಂಟು : ಪಂಡಿತರಿಗೋ..ಪಾಮರರಿಗೋ ?

Update: 2018-09-22 04:53 GMT

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2017ರಲ್ಲಿ ಕೆಲವು ಭಾಷಾ ತಜ್ಞರ ತಂಡವನ್ನು ಸೇರಿಸಿಕೊಂಡು ಬ್ಯಾರಿ ನಿಘಂಟನ್ನು ಹೊರತಂದಿತು. ಇದರ  ರಚನಾ ತಂಡದ ಸಲಹಾ ಮಂಡಳಿಯಲ್ಲಿ ಕನ್ನಡದ ಪ್ರಮುಖ ವಿದ್ವಾಂಸರಾದ  ಬಿ.ಎ.ವಿವೇಕ ರೈ ಮತ್ತು ಪ್ರೊ.ಎ.ವಿ.ನಾವಡ ಮುಂತಾದವರೂ ಇದ್ದರು. ಮೂಲತಃ ಮೌಖಿಕ ಭಾಷೆಯಾಗಿದ್ದ ಬ್ಯಾರಿಯ ಇತಿಹಾಸದಲ್ಲಿ ಈ ನಿಘಂಟು ಅತ್ಯಂತ ಮಹತ್ವದ ಒಂದು ಮೈಲಿಗಲ್ಲಾಗುತ್ತದೆ ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೆವು.

ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದಾಗ ಸಂತಕವಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಹದಿನಾರು ಭಾಷೆಗೆ ಅನುವಾದಿಸುವ ಬಹಳ ಮಹತ್ವದ ಯೋಜನೆಯೊಂದನ್ನು ಕೈಗೊಂಡಿತ್ತು. ಹಾಗೆ ಸಮಗ್ರ ಕನಕ ಸಾಹಿತ್ಯ ಅನುವಾದಗೊಂಡ ಹದಿನಾರು ಭಾಷೆಗಳಲ್ಲಿ ಬ್ಯಾರಿಯೂ ಒಂದು. ನಾನು (ಈ ಲೇಖಕ) ಆ ಅನುವಾದ ಯೋಜನೆಯ ಬ್ಯಾರಿ ಅನುವಾದಕರಲ್ಲಿ ಒಬ್ಬನಾಗಿದ್ದೆ. ಹರಿಭಕ್ತಿ ಸಾರ, ರಾಮಧಾನ್ಯ ಚರಿತ್ರೆ, ನಳ ಚರಿತ್ರೆ ಎಂಬ ಮೂರು ಕಾವ್ಯ ಗ್ರಂಥಗಳನ್ನು ಬ್ಯಾರಿ ಭಾಷೆಗೆ ನಾನು ಅನುವಾದಿಸಿದ್ದೆ. ಆ ಸಂದರ್ಭದಲ್ಲಿ ಬ್ಯಾರಿ ಭಾಷೆಗೆ ಒಂದು ಸಮಗ್ರ ನಿಘಂಟು ಇರಲಿಲ್ಲ. ಆಗ ನಾವೆಲ್ಲಾ ಹಳೆಗನ್ನಡದ ಅನೇಕ ಪದಗಳಿಗೆ ಸಮನಾರ್ಥಕ ಬ್ಯಾರಿ ಪದಗಳನ್ನು ಹುಡುಕಲು ಪಟ್ಟ ಪಾಡು ನಮಗೇ ಗೊತ್ತು. ಆದುದರಿಂದ ಒಂದು ಮೌಖಿಕ ಭಾಷೆಯಾಗಿದ್ದ ಬ್ಯಾರಿಯಲ್ಲಿ ನಿಘಂಟಿನ ಎಷ್ಟು ಅಗತ್ಯವಿದೆ ಎಂಬ ವಾಸ್ತವ ನಮಗೆ ಮನವರಿಕೆಯಾಗಿತ್ತು. ಇಂತಹ ಒಂದು ನಿಘಂಟು ತಯಾರಿಸಿದಾಗ ನಾವಂತೂ ತುಂಬಾ ಖುಷಿಪಟ್ಟಿದ್ದೆವು. ಇನ್ನು ಮುಂದೆ ಇಂತಹ ಮಹತ್ವದ ಅನುವಾದ ಕಾರ್ಯಗಳು ಅಷ್ಟೊಂದು ತ್ರಾಸದಾಯಕವಾಗದು ಎಂದು ಭಾವಿಸಿದ್ದೆವು. ಆದರೆ ಬ್ಯಾರಿ ಭಾಷೆಯ ಅಧ್ಯಯನ ಮತ್ತು ಬ್ಯಾರಿಯಲ್ಲಿ ಸಾಹಿತ್ಯ ರಚನೆಗೆ ಬಹು ದೊಡ್ಡ ಕೊಡುಗೆಯಾಗಬೇಕಿದ್ದ ಈ ನಿಘಂಟು ನಮ್ಮಂತಹ ಬ್ಯಾರಿ ಬರಹಗಾರರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿಬಿಟ್ಟಿದೆ. 

ಸುಮಾರು  ಇಪ್ಪತ್ತು  ಸಾವಿರ ಪದಗಳ ಈ ಬೃಹತ್ ನಿಘಂಟನ್ನು ಭಾಷಾ ತಜ್ಞರ ತಂಡ ಬಹಳ ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿಯೇ ರಚಿಸಿದೆ. ಇದು ಬ್ಯಾರಿ- ಕನ್ನಡ - ಇಂಗ್ಲಿಷ್ ನಿಘಂಟು. ಇಲ್ಲಿನ ತೊಡಕು ಇದುವೇ ಆಗಿದೆ. ಬ್ಯಾರಿ ಭಾಷೆಯನ್ನು ಹೊಸದಾಗಿ ಕಲಿಯಬಯಸುವ ವ್ಯಕ್ತಿಯೊಬ್ಬನಿಗೆ ಈ ನಿಘಂಟಿನ ಬಳಕೆ ಸಾಧ್ಯವಾಗುವುದಿಲ್ಲ, ಮತ್ತು ಬ್ಯಾರಿ ಭಾಷೆಗೆ ಜಗತ್ತಿನ ಇತರ ಭಾಷೆಗಳ ಮಹತ್ವದ ಜ್ಞಾನ ಭಂಡಾರವನ್ನು ತರಲೂ ಈ ನಿಘಂಟು ಉಪಯೋಗಕ್ಕೆ ಬಾರದಂತಾಗಿ ಬಿಟ್ಟಿದೆ. ಹೇಗೆಂದರೆ ಕನ್ನಡ ಭಾಷೆ ಬಲ್ಲವ ಒಂದು ನಿರ್ದಿಷ್ಟ ಪದಕ್ಕೆ ಬ್ಯಾರಿ ಸಮಾನಾರ್ಥಕ ಪದ ಯಾವುದೆಂದು ಹುಡುಕಬಯಸುತ್ತಾನೆಯೇ ಹೊರತು ಬ್ಯಾರಿಯ ನಿರ್ದಿಷ್ಟ ಪದಕ್ಕೆ ಕನ್ನಡದಲ್ಲಿ ಸಮನಾರ್ಥಕ ಪದ ಯಾವುದೆಂದು ಹುಡುಕುವುದಿಲ್ಲ ಅಥವಾ ಹುಡುಕಿದರೂ ತೀರಾ ವಿರಳ. ಯಾಕೆಂದರೆ ಬ್ಯಾರಿ ಮೌಖಿಕ ಭಾಷೆಯಾಗಿಯೇ ಇದ್ದುದರಿಂದ ಅಥವಾ ಬ್ಯಾರಿಯಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಗ್ರಾಂಥಿಕ ಸಾಹಿತ್ಯ ಇಲ್ಲದಿದ್ದುದರಿಂದ ಅದೆಷ್ಟೋ ಬ್ಯಾರಿ ಪದಗಳು ಕಾಲದೊಂದಿಗೆ ಕಣ್ಮರೆಯಾಗಿ ಅದರ ಜಾಗಕ್ಕೆ ಇತರ ಭಾಷೆಯ ಪದಗಳು ಒಂದೋ ಯಥಾವತ್ತಾಗಿ ಅಥವಾ ಅಪಭ್ರಂಶಗೊಂಡು ಸೇರಿಬಿಟ್ಟಿವೆ. ಒಂದು ಉದಾಹರಣೆ: ಕನ್ನಡದ 'ಹಗುರ' ಪದಕ್ಕೆ ಬ್ಯಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ 'ಆಗ್ರ' ಎನ್ನಲಾಗುತ್ತಿದೆ. ಅಥವಾ ತುಳುವಿನ "ಪೂತೆ " ಎಂಬ ಶಬ್ದವನ್ನು ಬಳಸಲಾಗುತ್ತಿದೆ. ವಾಸ್ತವದಲ್ಲಿ ಅದಕ್ಕೆ ಬ್ಯಾರಿಯಲ್ಲಿ 'ತ್ಯಾಂಪೆ' ಎಂಬ ಬ್ಯಾರಿ ಪದವೇ ಇದೆ. ಆದರೆ ಅದು ಕಾಲನ ಹೊಡೆತಕ್ಕೆ ಕಣ್ಮರೆಯಾಗಿತ್ತು. ಯಾವುದೇ ಒಂದು ಭಾಷೆಯಲ್ಲಿ ಎರವಲು ಪದಗಳು ಇರುವುದು ತಪ್ಪಲ್ಲ. ಯಾವುದೇ ಭಾಷೆಯ ಮೇಲೆ ಸ್ಥಳೀಯ ಪ್ರಭಾವಿ ಭಾಷೆಯ ಪ್ರಭಾವ ಇದ್ದೇ ಇರುತ್ತದೆ. ಆದರೆ ಒಂದು ಭಾಷೆಯಲ್ಲಿ ಒಂದು ವಸ್ತುವಿಗೆ ಅಥವಾ ಒಂದು ವಿಷಯಕ್ಕೆ ಸ್ವಂತ ಪದವಿದ್ದಾಗ್ಯೂ ಎರವಲು ಪದ ಬಳಕೆ ಮಾಡುವುದು ಚೆನ್ನಾಗಿರುವುದಿಲ್ಲ.

ಈ ನಿಘಂಟಿನಲ್ಲಿ ಕನ್ನಡ ಅಕ್ಷರ ಮಾಲೆಯಂತೆ ಕ್ರಮಬದ್ಧವಾಗಿ ಪದಗಳನ್ನು ಬ್ಯಾರಿಯಲ್ಲಿ ಕೊಟ್ಟು ಅದರ ಕನ್ನಡ ಮತ್ತು ಇಂಗ್ಲಿಷ್ ಅರ್ಥವನ್ನು ನೀಡಲಾಗಿದೆ. ಕನ್ನಡ ಲಿಪಿಯಲ್ಲಿರುವ ಯಾವುದೇ ನಿಘಂಟನ್ನು ಕನ್ನಡ ಬಲ್ಲವ ಮಾತ್ರ ಬಳಸಲು ಸಾಧ್ಯ. ಈ ನಿಘಂಟನ್ನು ಬಳಸುವ ಬ್ಯಾರಿಗೆ ಕನ್ನಡ ಭಾಷೆ ಗೊತ್ತಿರುತ್ತದೆ ಮತ್ತು ಗೊತ್ತಿರಲೇಬೇಕು. ಬ್ಯಾರಿ ಭಾಷೆಯಲ್ಲಿ ಲಿಖಿತ ಅಥವಾ ಗ್ರಾಂಥಿಕ ಸಾಹಿತ್ಯ ತೀರಾ ಇತ್ತೀಚೆಗೆ ಬೆಳೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಬ್ಯಾರಿ ದ್ರಾವಿಡ ಭಾಷಾ ವೃಕ್ಷದ ಒಂದು ರೆಂಬೆ. ಬ್ಯಾರಿ ಎಂಬ ಭಾಷೆ ಹಲವು ಭಾಷೆಗಳ ಸಂಗಮದಿಂದ ಉಂಟಾದ ಒಂದು ಸ್ವತಂತ್ರ ಭಾಷೆ. ಕನ್ನಡ, ತಮಿಳು, ತುಳು, ಮಲಯಾಳಂ, ಕೊಡವ, ಅರೆಬಿಕ್ ಮತ್ತು ಉರ್ದು ಭಾಷೆಯ ಬಹಳಷ್ಟು ಪದಗಳು ಬ್ಯಾರಿಯಲ್ಲಿವೆ.‌ ಅವುಗಳಲ್ಲಿ ಕೆಲವು ಯಥಾ ರೂಪದಲ್ಲಿದ್ದರೆ ಮತ್ತೆ ಕೆಲವು ಜನರ ಆಡುಮಾತಿನಲ್ಲಿ ಅಪಭ್ರಂಶಗೊಂಡು ಬ್ಯಾರೀಕರಣವಾಗಿ ಬ್ಯಾರಿಯದ್ದೇ ಸ್ವಂತ ಪದಗಳಂತೆ ಬಳಕೆಯಲ್ಲಿದೆ. ಹೀಗಿರುವಾಗ ಎಲ್ಲರೂ ಒಂದು ನಿರ್ದಿಷ್ಟ ಪದಕ್ಕೆ ಬ್ಯಾರಿ ಭಾಷೆಯಲ್ಲಿ ಏನೆನ್ನುತ್ತಾರೆ ಎಂದು ಹುಡುಕುತ್ತಾರೆಯೇ ಹೊರತು, ಒಂದು ನಿರ್ದಿಷ್ಟ ಬ್ಯಾರಿ ಪದದ ಅರ್ಥವೇನೆಂದು ಹುಡುಕುವುದಿಲ್ಲ. ಒಂದು ವೇಳೆ ಹುಡುಕಿದರೂ ಬ್ಯಾರಿ ಭಾಷೆ ಬಲ್ಲವ ಮಾತ್ರ ಹಾಗೆ ಹುಡುಕುತ್ತಾನೆ.

ಒಂದು ಉದಾಹರಣೆ ಗಮನಿಸಿ, ಇಂಗ್ಲಿಷಿನ 'ಸೀರಿಯಸ್' ಎಂಬ ಪದ ಈಗ ಯಾವುದೇ ಭಾಷೆಗೂ ಸ್ವಂತ ಪದದಂತಾಗಿ ಬಿಟ್ಟಿದೆ. ನೀವು ತಟ್ಟನೆ ಯಾರಲ್ಲಾದರೂ 'ಸೀರಿಯಸ್'ಗೆ ಕನ್ನಡದಲ್ಲಿ ಏನನ್ನುವುದು ಎಂದು ಕೇಳಿದರೆ ಒಂದು ಕ್ಷಣ ಭಾಷಾ ತಜ್ಞನೂ ಯೋಚಿಸಿಯೇ ಗಂಭೀರ ಎನ್ನಬೇಕಾಗುತ್ತದೆ. ಇದೇ ಸೀರಿಯಸ್ ಗೆ ಬ್ಯಾರಿಯಲ್ಲಿ 'ಕಸ್ತ್' ಎಂಬ ಸ್ವಂತ ಪದವಿದೆ ಎಂದು ನಾನು ಹಿರಿಯರಲ್ಲಿ‌ ಕೇಳಿ ಬಲ್ಲೆ. ಈಗ ನಿಮಗೆ 'ಕಸ್ತ್' ಎಂಬ ಪದದ ಬಗ್ಗೆ ಗೊತ್ತೇ ಇಲ್ಲದಿದ್ದರೆ ಈ ನಿಘಂಟಿನಲ್ಲಿ ನೀವದನ್ನು ಹೇಗೆ ಹುಡುಕುತ್ತೀರಿ? ಒಂದು ವೇಳೆ ಅದು ಕನ್ನಡ- ಬ್ಯಾರಿ- ಇಂಗ್ಲಿಷ್ ನಿಘಂಟಾಗಿದ್ದರೆ ನಾವು ಸರಳವಾಗಿ ಗಂಭೀರ ಎಂಬ ಪದಕ್ಕೆ ಬ್ಯಾರಿಯಲ್ಲಿ ಯಾವ ಸಮನಾರ್ಥಕ ಪದವಿದೆ ಎಂದು ಹುಡುಕಲು ಸಾಧ್ಯ. ಯಾವುದೇ ಒಂದು ಪದಕೋಶ ಆ ಭಾಷೆ ಬಲ್ಲವನಿಗಾಗಿ ಮಾತ್ರವೆಂಬಂತಿರಬಾರದು. ಪದಕೋಶ ಭಾಷೆ ಅರಿಯದವರಿಗೆ ಭಾಷೆ ಕಲಿಯಲೂ ಉಪಯೋಗವಾಗುವಂತಿರಬೇಕು. ಈ ನಿಘಂಟನ್ನು ಹಿಡಿದುಕೊಂಡು ಬ್ಯಾರಿಯಾಗಲೀ, ಬ್ಯಾರಿಯೇತರರಾಗಲಿ ಭಾಷಾ ಅಧ್ಯಯನ ನಡೆಸಲು ಸಾಧ್ಯವಿಲ್ಲ.

ಬ್ಯಾರಿ ಭಾಷೆಯದ್ದೇ ಆದ ಅತ್ಯಂತ ಸರಳ ಸ್ವಂತ ಪದಗಳಿದ್ದೂ ಹೊಸ ತಲೆಮಾರಿನ ಬ್ಯಾರಿ ಮಕ್ಕಳಿಗೆ ಅನೇಕ ಪದಗಳು ಗೊತ್ತೇ ಇಲ್ಲ. ಇದನ್ನು ಯಾರು  ಬೇಕಿದ್ದರೂ ಪರೀಕ್ಷಿಸಿ ನೋಡಬಹುದು. ಉದಾಹರಣೆಗೆ, 'ಸ್ಪೂನ್'. ಇದಕ್ಕೆ ಬ್ಯಾರಿಯಲ್ಲಿ 'ಸಾಂಡೆ ಕೈಲ್' ಅಥವಾ 'ಸಾಂಡೈಲ್' ಎನ್ನುತ್ತಾರೆ. ಬಹುತೇಕ ಬ್ಯಾರಿಗಳು ಈಗೀಗ ಅದನ್ನು 'ಸ್ಪೂನ್' ಎಂದೇ ಹೇಳುತ್ತಾರೆ. ಹತ್ತು ವರ್ಷದೊಳಗಿನ ಹೆಚ್ಚು ಕಡಿಮೆ ಯಾವುದೇ ಮಕ್ಕಳಲ್ಲಿ ಕೇಳಿ ನೋಡಿದರೂ ಅವರದನ್ನು 'ಸ್ಪೂನ್' ಎಂದೇ ಹೇಳುತ್ತಾರೆ. ಅವರಿಗೆ ಅದಕ್ಕೆ ಬ್ಯಾರಿಯಲ್ಲೂ ನಿರ್ದಿಷ್ಟ ಹೆಸರಿದೆ ಎಂದು ಗೊತ್ತಿರಲಾರದು. ಇಂತಹ ನೂರಾರು ಉದಾಹರಣೆಗಳಿವೆ. ಯಾವುದೇ ಭಾಷೆ ಆ ಭಾಷೆಯ ಸಾಹಿತ್ಯದಿಂದಲೋ, ಭಾಷಾ ತಜ್ಞರಿಂದಲೋ ಉಳಿಯುವುದಲ್ಲ. ಭಾಷೆ ಜನರ ನಾಲಿಗೆಯ ತುದಿಯಲ್ಲಿದ್ದರೆ ಮಾತ್ರ ಉಳಿಯಬಲ್ಲುದು. ಭಾಷೆಯ ಅದೆಷ್ಟೋ ಪದಗಳು ಜನಮಾನಸದಿಂದ ಮರೆಯಾಗುತ್ತಿರುವುದರಿಂದ ಅದನ್ನು ದಾಖಲಿಸಿಡಲೇಬೇಕು. ಆದರೆ ಆ ರೀತಿ ದಾಖಲಿಸಿಟ್ಟಿರುವುದನ್ನು ಹುಡುಕುವ ವಿಧಾನ ತ್ರಾಸದಾಯಕವಾಗಿ ಬಿಟ್ಟರೆ ಅಂತಹ ದಾಖಲೀಕರಣವೂ ಉಪಯೋಗಕ್ಕೆಬಾರದು.

ಪದಕೋಶಗಳ ರಚನೆ ಕೇವಲ ಪಂಡಿತರಿಗಲ್ಲ. ಅದು ನನ್ನಂತಹ ಪಾಮರರಿಗೂ ಉಪಯೋಗಕ್ಕೆ ಬರಬೇಕೆಂದರೆ ಅವು ಸುಲಭವಾಗಿ ಎಟುಕುವಂತಿರಬೇಕು.
ಈಗಾಗಲೇ ಹೇಳಿದಂತೆ ಬ್ಯಾರಿ ಒಂದು ಮೌಖಿಕ ಭಾಷೆಯಾಗಿದ್ದುದರಿಂದ ನಿಘಂಟು ರಚನೆಯ ಕಾರ್ಯದಲ್ಲಿ ಕೇವಲ ಪಂಡಿತರಿಂದ ಮಾಡಿಸಿರುವುದೂ ಸಲ್ಲ. ಇಲ್ಲಿ ಪಾಮರರ ಅಗತ್ಯವೂ ಬಹಳ ಇತ್ತು. ಇದೀಗ ಖ್ಯಾತ, ಪ್ರಖ್ಯಾತ ಭಾಷಾ ವಿದ್ವಾಂಸರ ಸಲಹಾ ಮಂಡಳಿ ರಚಿಸಿಯೂ ಏನಾಯಿತು? ಅವರು ಒಂದು ಅಕಾಡಮಿಕ್ ಆದ ಸಿದ್ಧ ಮಾದರಿಯನ್ನು ಬಳಸಿದರೇ ಹೊರತು ಜನೋಪಯೋಗಕ್ಕೆ ಬರಬಹುದಾಗಿದ್ದ ಸರಳ ಮಾದರಿಯ ಕುರಿತು ಯೋಚಿಸುವ ಗೋಜಿಗೂ ಹೋಗಲಿಲ್ಲ.

ಈ ನಿಘಂಟಿನಲ್ಲಿ ಎಲ್ಲಾ ಭಾಷಾ ನಿಘಂಟುಗಳಿಗೆ ಬಳಸುವಂತಹದ್ದೇ ಸಿದ್ಧ ಮಾದರಿಯನ್ನು ಬಳಸಿದ್ದು ಅಕಾಡಮಿಕ್ ದೃಷ್ಟಿಯಿಂದ  ಸರಿ. ಆದರೆ  ಒಂದು ಸ್ಥಳೀಯ ಮೌಖಿಕ ಭಾಷೆಯ ನಿಘಂಟಿಗೆ ಇಂತಹ ಅಕಾಡಮಿಕ್ ಸ್ವರೂಪದ ಸಿದ್ಧ ಮಾದರಿಗಿಂತ ಜನಬಳಕೆಗೆ ಸುಲಭವಾಗುವ ಮಾದರಿಯನ್ನು ಬಳಸಬೇಕಿತ್ತು ಎಂದು ಅನೇಕ ಬಾರಿ ನನಗನಿಸಿತ್ತು. ನನ್ನಂತಹದ್ದೇ ಅನಿಸಿಕೆಯನ್ನು ಅನೇಕರು ನನಗೆ ತಿಳಿಸಿದ್ದರು. ಈಗ ಏನೋ ತಪ್ಪಾಗಿ ಹೋಗಿದೆ. ಆದರೆ ಆ ತಪ್ಪನ್ನು ಸರಿಪಡಿಸುವ ಕೆಲಸ ಮುಂದಿನ ಆವೃತ್ತಿಗಾದರೂ ಆಗಲೇಬೇಕು. ಈಗಾಗಲೇ ಬ್ಯಾರಿ ಸಾಹಿತ್ಯ ಅಕಾಡಮಿ ಬ್ಯಾರಿ ವ್ಯಾಕರಣ ಗ್ರಂಥದ ರಚನೆಗೆ ಯೋಜನೆ ಹಾಕಿದೆ. ವ್ಯಾಕರಣ ಗ್ರಂಥದಲ್ಲೂ ಸಿದ್ಧ ಮಾದರಿಗೆ ಜೋತು ಬೀಳದೇ ಜನಬಳಕೆಗೆ ಸುಲಭವಾಗುವ ಮಾದರಿಯಲ್ಲಿ ರಚಿಸಬೇಕಿದೆ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News