ಸಾಯದಿರಲಿ ಬೇಸಾಯ....
ಕೃಷಿಯ ಕುರಿತಂತೆ ಬರೆಯುವುದೆಂದರೆ, ನಮ್ಮ ಬೇರನ್ನು ನಾವೇ ಹುಡುಕುತ್ತಾ ಸಾಗುವುದು. ಅದರ ಜೊತೆಗೆ ನಮ್ಮ ಪರಂಪರೆ, ಸಂಸ್ಕೃತಿ, ಹಬ್ಬ, ಹರಿದಿನ ಎಲ್ಲವೂ ತಳಕು ಹಾಕಿಕೊಂಡಿರುತ್ತದೆ. ವರ್ತಮಾನದಲ್ಲಿ ಕೃಷಿ ಎದುರಿಸುತ್ತಿರುವ ಬಿಕ್ಕಟ್ಟು ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿಯೂ ತನ್ನ ದುಷ್ಪರಿಣಾಮಗಳನ್ನು ಬೀರುತ್ತಿವೆ. ಕೃಷಿ ಮತ್ತು ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಹಲವು ಹಿರಿಯ ಪತ್ರಕರ್ತರು ಬರೆಯುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ತಲುಪಿಸಿದ್ದಕ್ಕಾಗಿಯೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಲೇಖಕರಿದ್ದಾರೆ. ಕನ್ನಡದಲ್ಲಿ ಪರಿಸರದ ಬಗ್ಗೆ, ಜಲ, ಅರಣ್ಯಗಳ ಕುರಿತಂತೆ ಬರೆದವರು ಹಲವರು. ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಬರೆದವರೂ ಇದ್ದಾರೆ. ಆದರೆ ಅದು ಬೇಸಾಯವನ್ನು ಜೀವನವಿಧಾನವಾಗಿ ಗ್ರಹಿಸಿ ಬರೆದ ಲೇಖನಗಳಲ್ಲ. ಈ ನಿಟ್ಟಿನಲ್ಲಿ ಚಂಸು ಪಾಟೀಲರ ‘ಬೇಸಾದಯ ಕತಿ’ ಕೃತಿ ತುಸು ವಿಭಿನ್ನವಾಗಿ ನಮ್ಮನ್ನು ತಲುಪುತ್ತದೆ.
ಇದು ಲೇಖಕರ ಆತ್ಮಕಥನದ ರೂಪದಲ್ಲಿದೆ. ಇಲ್ಲಿ ಬೇಸಾಯವನ್ನು ಲೇಖಕರು ದೂರದಿಂದ ಕಂಡು ಬರೆದಿಲ್ಲ. ಅದರ ಒಂದು ಭಾಗವಾಗಿಯೇ ಬರೆಯುತ್ತಾ ಹೋಗುತ್ತಾರೆ. ಸ್ವಯಂ ಕೃಷಿಗಿಳಿಯುತ್ತಾ ಅದರ ಲಾಭ ನಷ್ಟಗಳನ್ನು ಒಂದೆಡೆ ಹೇಳುತ್ತಾರೆ. ಹಾಗೆಯೇ ಕೃಷಿ ಬದುಕಿನ ಜೊತೆಗೆ ಸುತ್ತಿಕೊಂಡಿರುವ ಬೇರೆ ಬೇರೆ ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತಾರೆ. ಹಾಗೆಯೇ ಕೃಷಿಯ ಜೊತೆಗೆ ಅಂಟಿಕೊಂಡ ಸಂಬಂಧಗಳನ್ನೂ ತೆರೆದಿಡುವ ಪ್ರಯತ್ನ ಮಾಡುತ್ತಾರೆ. ಅಂದರೆ ಬೇಸಾಯದ ಬೇರೆ ಬೇರೆ ಮಗ್ಗುಲುಗಳು ಲೇಖಕರಿಂದ ಪರಿಚಯವಾಗುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನಾವಿಂದು ಯಾವ ಹಬ್ಬ ಹರಿದಿನ, ಉತ್ಸವಗಳನ್ನು ಆಚರಿಸುತ್ತಿದ್ದೇವೆಯೋ ಅವೆಲ್ಲವೂ ಬೇಸಾಯದಿಂದ ತನ್ನ ನಂಟನ್ನು ಕಳೆದುಕೊಂಡು ಸ್ವತಂತ್ರವಾಗುತ್ತಿರುವುದು, ಮತ್ತು ಕೃತಕ ಆಚರಣೆಯಾಗಿ ಮುಂದುವರಿಯುತ್ತಿರುವುದನ್ನೂ ಅವರು ಗಮನಿಸುತ್ತಾರೆ.‘‘ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳೆಲ್ಲ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡ ಮಣ್ಣೆ. ಇಂದು ಉಂಡುಟ್ಟು ಸಂಭ್ರಮಿಸಲಿಕ್ಕೆ ಮಾತ್ರ ಬೆಳೆದು ಬಂದಿರುವ ಪರಂಪರೆಯಲ್ಲ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಈ ಆಚರಣೆಗಳನ್ನು ನಾವು ಬಿಟ್ಟಿಲ್ಲ. ಆದರೆ ನಂಬಿಕೆಗಳಿಗೆ ಮಣ್ಣು ಕೊಟ್ಟಿದ್ದೇವೆ. ಈ ಎಲ್ಲ ಹಬ್ಬಗಳಲ್ಲಿ ಮಣ್ಣಿನ ಮೂರ್ತಿಗಳಿಗೆ ಕಡುಬು, ಉಂಡಿ, ಹೋಳಿಗೆ ಮಾಡಿ ನೈವೇದ್ಯ ಅರ್ಪಿಸುತ್ತೇವೆ. ಆದರೆ ಅದೇ ಮಣ್ಣಿಗೆ ನಾವು ಪ್ರತಿದಿನವೂ ವಿಷವನ್ನು ಉಣಿಸುತ್ತಿದ್ದೇವೆ. ಮತ್ತೆ ಇಷ್ಟೆಲ್ಲ ಆದ ಮೇಲೆ ಆಚರಣೆಗಳಾದರೂ ಯಾವ ಡಂಭಾಚಾರಕ್ಕೆ?’’ ಎಂದು ಅವರು ಈ ಕೃತಿಯಲ್ಲಿ ವಿಷಾದದಿಂದ ಕೇಳುತ್ತಾರೆ.
ಅಹರ್ನಿಶಿ ಪ್ರಕಾಶನ ಕೃತಿಯನ್ನು ಹೊರತಂದಿದೆ. 136 ಪುಟಗಳ ಈ ಕೃತಿಯ ಮುಖಬೆಲೆ 130 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.