ಪ್ರವಾಸೋದ್ಯಮದಲ್ಲಿ ಭಾರತಕ್ಕಿದೆ ವಿಫುಲ ಅವಕಾಶ!

Update: 2018-09-26 18:30 GMT

ಪ್ರವಾಸವು ಮಾನವನಲ್ಲ್ಲಷ್ಟೇ ಅಲ್ಲ ಪಕ್ಷಿಗಳು, ಮೀನುಗಳು, ಪ್ರತಿಯೊಂದು ಜೀವಿಯಲ್ಲಿಯೂ ಕಂಡು ಬರುವ ವಿಶೇಷ ಗುಣ. ಬಹುಶಃ ಆದಿಜೀವಿಯ ಅಲೆಮಾರಿ ಲಕ್ಷಣವೇ ಇದಕ್ಕೆ ನಾಂದಿಯಾಗಿರಬೇಕು. ಈ ಮೊದಲು ಪ್ರವಾಸದ ಹಿಂದಿನ ಉದ್ದೇಶವೇ ಬೇರೆ ಇತ್ತು. ಜೀವಿಸುತ್ತಿರುವವರು ನೆಮ್ಮದಿ, ಹೊಸತನಕ್ಕಾಗಿ ಇತರ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಅಂಥವುಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಪ್ರಾಧಾನ್ಯತೆ, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರದೇಶಗಳ ವ್ಯಾಪ್ತಿಯಿಂದ ಸರಿದು ದೇಶ, ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಹರಡಿದೆ. ಇದರ ಪರಿಣಾಮ ಪ್ರವಾಸ ಎನ್ನುವುದು ಪ್ರವಾಸೋದ್ಯಮವಾಗಿ ಬದಲಾಗಿದೆ. ಜಗತ್ತಿನ ಪ್ರತಿಷ್ಠಿತ ಉದ್ಯಮಗಳಲ್ಲಿ ಒಂದೆನಿಸಿಕೊಂಡಿದೆ.

ಜಗತ್ತಿನ ಏಳು ಜೈವಿಕ ವೈವಿಧ್ಯತೆಯ ರಾಷ್ಟ್ರಗಳಲ್ಲಿ ಭಾರತವು ಒಂದು. ಪ್ರವಾಸೋದ್ಯಮಕ್ಕೆ ಅನುಕೂಲವಾಗ ಬಲ್ಲ ಎಲ್ಲ ಸಂಪನ್ಮೂಲಗಳು ಇಲ್ಲಿವೆ. ವಿದೇಶ ಪ್ರವಾಸಿಗರು ಸಂಶೋಧಕರು, ವಿಜ್ಞಾನಿಗಳು, ವಿಷಯ ತಜ್ಞರು, ಬಂಡವಾಳ ಹೂಡಿಕೆದಾರರು ಇವರೆಲ್ಲರ ಸಮ್ಮಿಲನದಿಂದಾಗಿ ನಾವು ನಮ್ಮ ಸಂಪನ್ಮೂಲಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಬಹುದಲ್ಲದೆ, ಆರ್ಥಿಕಾಭಿವೃದ್ಧಿ ಗಾಗಿ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಬಹುದೆಂಬುದನ್ನು ಅರಿಯಲು ಸಹ ಸಹಾಯಕವಾಗುತ್ತದೆ.
 ಭಾರತದಲ್ಲಿ ಶೇಕಡಾ 4.68ರಷ್ಟು ಭೂಪ್ರದೇಶ ಅಭಯಾರಣ್ಯಗಳು ಮತ್ತು ಪಕ್ಷಿಧಾಮಗಳಿಂದ ಕೂಡಿದೆ. ಹಿಮಾಚಲ ಪ್ರದೇಶ ಸ್ಥಳೀಯ ಜನಾಂಗವನ್ನು ಪ್ರವಾಸೋದ್ಯಮದಲ್ಲಿ ಪ್ರೋತ್ಸಾಹಿಸುತ್ತದೆ. ಅದರಂತೆ ಕರ್ನಾಟಕ, ಸಿಕ್ಕಿಂ, ರಾಜಸ್ಥಾನ ಮತ್ತು ಆಂಧ್ರ ಪ್ರದೇಶಗಳ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಕೂಡಾ ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
ಭಾರತದಲ್ಲಿ ಪ್ರವಾಸೋದ್ಯಮ 1970ರ ದಶಕದ ನಂತರ ಹೊಸ ಚಾಲನೆ ಪಡೆದುಕೊಂಡಿತು. 1982ರಲ್ಲಿ ಪ್ರವಾಸೋದ್ಯಮಕ್ಕಾಗಿಯೇ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಲಾಯಿತು. 1988ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸಮಿತಿಯನ್ನು ರಚಿಸಿ, ನಿರೀಕ್ಷೆ ಗುರಿ ತಲುಪುವ ಯೋಜನೆ ಹಮ್ಮಿಕೊಳ್ಳಲಾಯಿತು. 1992ರಲ್ಲಿ ರಾಷ್ಟ್ರೀಯ ಕ್ರಮ ಯೋಜನೆ ಮತ್ತು 1996ರಲ್ಲಿ ರಾಷ್ಟ್ರೀಯ ಯೋಜನೆಗಳು ಜಾರಿಗೊಂಡವು. ಇದಕ್ಕೂ ಮುನ್ನ 1966ರಲ್ಲಿ ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮತ್ತು 1989ರಲ್ಲಿ ಟೂರಿಸಂ ಫೈನಾನ್ಸ್ ಕಾರ್ಪೊರೇಷನ್‌ಗಳನ್ನು ಸ್ಥಾಪಿಸಿದ್ದು ಮಹತ್ವದ ಮೈಲುಗಲ್ಲುಗಳಾಗಿದ್ದವು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಬೇಕು. ಸದ್ಯಕ್ಕೆ ಪ್ರತಿವರ್ಷ ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ 25 ಲಕ್ಷದಷ್ಟು ಮಾತ್ರ. ವಿಶ್ವ ಪ್ರವಾಸೋದ್ಯಮ ದಿನಾಚರಣೆ 2018ರ ಥೀಮ್ ‘ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂರಕ್ಷಣೆ’ ಆಗಿರುತ್ತದೆ.


ನಮ್ಮ ಭಾರತ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಭಾರತೀಯರ ಜೀವನ ಶೈಲಿ, ಸಾಂಸ್ಕೃತಿಕ ಚರಿತ್ರೆ, ರಂಗುರಂಗಿನ ಜಾತ್ರೆಗಳು, ಉತ್ಸವಗಳು ಇವೆಲ್ಲ ಹೊರನಾಡಿನವರನ್ನು ಆಕರ್ಷಿಸುತ್ತದೆ. ಸುಂದರ ಕಡಲತೀರಗಳು, ಅಭಯಾರಣ್ಯಗಳು, ಕಾಡುಪ್ರಾಣಿಗಳು, ಹಿಮ, ನದಿ, ಪರ್ವತ ಶ್ರೇಣಿಗಳು ಮೆಚ್ಚಿನ ತಾಣವಾಗಿವೆ. ಭಾರತೀಯರ ಕರಕುಶಲತೆ ಅದರಲ್ಲೂ ವಿಶೇಷವಾಗಿ ಆಭರಣಗಳು, ನೆಲಹಾಸು, ಚರ್ಮದ ಉತ್ಪಾದನೆಗಳು, ಆನೆದಂತ, ಕುಸುರಿ ಕೆಲಸಗಳು ಇತ್ಯಾದಿ ವಿದೇಶಿ ಪ್ರವಾಸಿಗರ ನೆಚ್ಚಿನ ಶಾಪಿಂಗ್ ವಸ್ತುಗಳಾಗಿವೆ. ಸಮೀಕ್ಷೆಯೊಂದರ ಪ್ರಕಾರ ನಮ್ಮ ಪ್ರವಾಸ ಖರೀದಿಯ ಶೇಕಡಾ 40ರಷ್ಟು ಆದಾಯ ಈ ವಸ್ತುಗಳಿಂದ ಬರುತ್ತಿದೆ.
ಜಗತ್ತಿನ ಪೈಪೋಟಿ ಉದ್ಯಮಗಳ ಸಾಲಿಗೆ ಈಗ ಪ್ರವಾಸೋದ್ಯಮವೂ ಸೇರ್ಪಡೆಯಾಗಿದೆ. ಈ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಂದ ಸಹಸ್ರಾರು ಕೋಟಿ ರೂ. ಗಳ ಬಂಡವಾಳ ಹೂಡಿಕೆಯಾಗುತ್ತಿದೆ.
ಯುನೈಟೆಡ್ ನೇಷನ್ ವರ್ಲ್ಗ್ಡ್ ಟೂರಿಸಂ ಆರ್ಗನೈಸೇಶನ್ 1980 ಸೆಪ್ಟಂಬರ್-27ರಂದು ವಿಶ್ವ ಪ್ರವಾಸೋದ್ಯಮ ದಿನಾ ಚರಣೆ ಆಚರಿಸುವ ಕುರಿತು ಗೊತ್ತುವಳಿಯನ್ನು ಅಂಗೀಕರಿಸಿತು. ಇದರ ಉದ್ದೇಶ ಅಂತರ್‌ರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಅರಿವು ಮೂಡಿಸುವುದು ಮತ್ತು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳನ್ನು ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವುದಾಗಿದೆ.

 ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳು:
ತಾಜಮಹಲ್ ಆಗ್ರಾ, ಜೈಪುರ, ಕಾಶ್ಮೀರ, ಕನ್ಯಾಕುಮಾರಿ, ಕೇರಳ, ಅಜಂತಾ, ಎಲ್ಲೋರಾ, ಡಾರ್ಜಲಿಂಗ್, ಮೈಸೂರು, ಲಡಾಖ್, ಅಂಡಮಾನ್ ನಿಕೋಬಾರ್, ಗುಜರಾತ್

ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು:
ಗೋಮಟೇಶ್ವರ ಶ್ರವಣ ಬೆಳಗೊಳ, ಹಂಪೆ, ಗೋಲಗುಮ್ಮಟ ಬಿಜಾಪುರ, ಪಟ್ಟದಕಲ್ಲು, ಬೆಂಗಳೂರು, ಮೈಸೂರು, ಬಾದಾಮಿ, ಬನಶಂಕರಿ, ಚಿಕ್ಕಮಗಳೂರು, ಮೇಲುಕೋಟೆ, ಬೇಲೂರು ಹಳೆಬೀಡು, ಗೋಕರ್ಣ, ಕುದುರೆಮುಖ, ಜೋಗ ಜಲಪಾತ, ಶಿವನಸಮುದ್ರ, ಮುರುಡೇಶ್ವರ, ನಾಗರಹೊಳೆ, ಬಂಡೀಪುರ.

ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಅಗತ್ಯ
ವಿದೇಶಿ ಪ್ರವಾಸಿಗರಿಗೆ ಕೀಟಲೆ ಕೊಡುವ ಸ್ವಭಾವ ಇಂದು ನಮ್ಮವರಲ್ಲಿ ಜಾಸ್ತಿಯಾಗಿದೆ. ಇದು ನಮ್ಮ ಭವ್ಯ ಸಂಸ್ಕೃತಿಗೆ ಮಸಿ ಬಳಿಯುವ ಸಂಗತಿ ಕೂಡಾ. ಇಲ್ಲಿ ಅತಿಥಿಗಳಿಗೆ ರಕ್ಷಣೆ ಕೊಡುವುದಕ್ಕಿಂತ ಅವರಿಂದ ಭಕ್ಷಣೆಗಾಗಿ ಹುಡುಕಾಡುವವರೇ ಜಾಸ್ತಿ. ಅವರಿಂದ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲಪಟಾಯಿಸುವ ಕಾರ್ಯ ನಮ್ಮವರಿಂದಲೇ ನಡೆಯುತ್ತಿದೆ. ವಿದೇಶಿ ಪ್ರವಾಸಿಗರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇನಿಲ್ಲ. ಇಂಥ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಕೆಲವು ಅದಮರಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರ ಹಾಳಾಗುತ್ತಿದೆ. ಇಂಥ ಅಮಾನವೀಯ ಕೃತ್ಯಗಳನ್ನು ತಡೆಯುವಂಥ ಕಾರ್ಯ ಇಲ್ಲಿ ಆಗಬೇಕಾದ್ದು ಅಗತ್ಯ.

Writer - ಜಗದೀಶ ವಡ್ಡಿನ, ಬಾಡ

contributor

Editor - ಜಗದೀಶ ವಡ್ಡಿನ, ಬಾಡ

contributor

Similar News

ಜಗದಗಲ
ಜಗ ದಗಲ