ವಿಜೇತರ ಯಾದಿಯಲ್ಲಿರುವ ಆರು ಕಾದಂಬರಿಗಳ ಕುರಿತು...

Update: 2018-09-26 18:31 GMT

ಸೆಪ್ಟ್ಟಂಬರ್ ಇಪ್ಪತ್ತರಂದು 2018ರ ಮ್ಯಾನ್ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್ ಬಿಡುಗಡೆಯಾಯಿತು. ಅನ್ನಾ ಬರ್ನ್ಸ್‌ರವರ ‘ಮಿಲ್ಕ್ ಮ್ಯಾನ್’, ಎಸಿ ಎಡುಗ್ಯನ್‌ರವರ ‘ವಾಶಿಂಗ್ಟನ್ ಬ್ಲಾಕ್’ ಡೈಸಿ ಜಾನ್ಸನ್‌ರ ‘ಎವೆರಿಥಿಂಗ್ ಅಂಡರ್’, ರ್ಯಾಚೆಲ್ ಕುಶ್ನರ್ ಬರೆದಿರುವ ‘ದಿ ಮಾರ್ಸ್‌ ರೂಮ್’, ರಿಚರ್ಡ್ ಪವರ್ಸ್‌ರ ‘ದಿ ಓವರ್ ಸ್ಟೋರಿ’ ಮತ್ತು ರಾಬಿನ್ ರಾಬರ್ಟ್ಸನ್‌ರ ‘ದಿ ಲಾಂಗ್ ಟೇಕ್’ ಈ ಬಾರಿಯ ಸಂಭಾವ್ಯ ಪ್ರಶಸ್ತಿ ವಿಜೇತರ ಯಾದಿಯಲ್ಲಿರುವ ಹೆಸರುಗಳು.

ಆರು ಮಂದಿ ಲೇಖಕರಲ್ಲಿ ಮೂವರು (ಬರ್ನ್ಸ್, ಜಾನ್ಸನ್ ಮತ್ತು ರಾಬರ್ಟ್ಸನ್) ಬ್ರಿಟನ್‌ನವರು; ಅವರು ಇಬ್ಬರು (ಕುಕ್ನರ್ ಮತ್ತು ಪವರ್ಸ್‌) ಅಮೆರಿಕ ಲೇಖಕರು; ಎಡುಗ್ಯನ್ ಓರ್ವ ಕೆನಡಿಯನ್.
 ಆರು ಕಾದಂಬರಿಗಳ ಸಾರ ಇಲ್ಲಿದೆ.

ಎವೆರಿಥಿಂಗ್ ಅಂಡರ್

ಓರ್ವ ಪುಸ್ತಕ ಮಾರಾಟಗಾರ್ತಿಯಾಗಿದ್ದ ಇಪ್ಪತ್ತೇಳರ ಹರೆಯದ ಡೈಸಿ ಜಾನ್ಸನ್ ಈಗ ಪ್ರಸಿದ್ಧ ಕಾದಂಬರಿಗಾರ್ತಿ ಯಾಗಿದ್ದಾರೆ. ಅವರ ಕಾದಂಬರಿ ‘ಎವೆರಿಥಿಂಗ್ ಅಂಡರ್’ ಕಾಲುವೆ ದೋಣಿಯೊಂದರಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ಗ್ರೆಟೆಲ್ ಎಂಬ ಒಂದು ಮಗುವಿನ ಕಥೆ ಹೇಳುತ್ತದೆ. ಗ್ರೆಟೆಲ್ ಮತ್ತು ಅವಳ ತಾಯಿ ತಮ್ಮಿಬ್ಬರದೇ ಆದ ಒಂದು ಭಾಷೆಯನ್ನು ಶೋಧಿಸುತ್ತಾರೆ. ತನ್ನ ಹದಿನಾರನೇ ವಯಸ್ಸಿನಿಂದ ಆಕೆ ತನ್ನ ತಾಯಿಯನ್ನು ನೋಡಿಲ್ಲ. ಅವಳ ಹಳೆಯ ನೆನಪುಗಳು ಮಸುಕಾಗಿವೆ. ಓರ್ವ ನಿಘಂಟು ರಚನಾಕಾರಳಾಗಿ ಕೆಲಸ ಮಾಡುತ್ತಿರುವ ಗ್ರೆಟೆಲ್ ತನ್ನ ಬಾಲ್ಯದ ಖಾಸಗಿ ಶಬ್ದಕೋಶವನ್ನು ಜ್ಞಾಪಿಸಿಕೊಳ್ಳಲು ಆರಂಭಿಸುತ್ತಾಳೆ. ಆ ಶಬ್ದಗಳ ಜೊತೆಗೆ ಇನ್ನೂ ಹಲವಾರು ವಿಷಯಗಳು ಅವಳಿಗೆ ನೆನಪಾಗುತ್ತವೆ. ನದಿಯಲ್ಲಿ ಕಳೆದ ಘೋರವಾದ ವರ್ಷಗಳು, ಒಂದು ಚಳಿಗಾಲ ಅವಳ ದೋಣಿಯಲ್ಲಿ ಉಳಿದುಕೊಳ್ಳಲು ಬಂದ ಒಬ್ಬ ಏಕಾಂಗಿ ಹುಡುಗ... ಅಂತಿಮವಾಗಿ, ಗ್ರೆಟೆಲ್‌ಗೆ ಏನೂ ಮಾಡಲಾಗುವುದಿಲ್ಲ ಆಕೆ ಮರಳಿ ಹೋಗಬೇಕಾಗುತ್ತದೆ.

ದಿ ಮಾರ್ಸ್‌ ರೂಮ್

ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಓರ್ವ ಮಾಜಿ ಲ್ಯಾಪ್ ನರ್ತಕಿಯ ಕಥೆಯ ಕುರಿತು ಸಂಶೋಧನೆ ನಡೆಸಲು ಅಮೆರಿಕನ್ ಕಾದಂಬರಿಗಾರ್ತಿ ರ್ಯಾಚೆಲ್ ತಾನೇ ಸ್ವತಃ ಜೈಲಿಗೆ ಹೋದರು. ಅವರು ಕಾದಂಬರಿಯಲ್ಲಿ ಸತತ ಎರಡು ಬಾರಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಸೇರಿದ ರೋಮಿ ಹಾಲ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ‘ದಿ ಮಾರ್ಸ್‌ ರೂಮ್’ ಸಮಕಾಲೀನ ಅಮೆರಿಕದ ಸೆರೆಮನೆ ಜೀವನದ ಢಾಳಾದ ಚಿತ್ರಣ ನೀಡುವುದಷ್ಟೇ ಅಲ್ಲದೆ ಜೈಲು ಔದ್ಯಮಿಕ ಸಂಕೀರ್ಣದ ಕಟುವಾದ ಟೀಕೆಯೂ ಆಗಿದೆ.

ದಿ ಓವರ್ ಸ್ಟೋರಿ

ಈಶಾನ್ಯ ಪೆಸಿಫಿಕ್‌ನ ಕಾಡುಗಳಲ್ಲಿ ನಡೆಯುವ ಕಥೆಗೆ ರಿಚರ್ಡ್ ಪವರ್ಸ್‌ನ ಹಳ್ಳಿಯ ಬದುಕೇ ಸ್ಫೂರ್ತಿ. ಈ ಕಾದಂಬರಿಯಲ್ಲಿ ಒಂಬತ್ತು ಮಂದಿ ಅಪರಿಚಿತರಿಗೆ ಬೇರೆ ಬೇರೆ ರೀತಿಗಳಲ್ಲಿ ಮರಗಳು ತಮ್ಮ ಬಳಿಗೆ ಕರೆಸಿಕೊಳ್ಳುತ್ತವೆ. ಪೆಸಿಫಿಕ್ ಕಾಡುಗಳಲ್ಲಿ ಉಳಿದಿರುವ ಕೆಲವು ಎಕರೆ ಕಾಡುಗಳನ್ನು ಉಳಿಸಲು ಅಲ್ಲಿ ಅವರಿಗೆ ಅಂತಿಮ ಅವಕಾಶ ನೀಡಲಾಗುತ್ತದೆ.

ವಾಶಿಂಗ್ಟನ್ ಬ್ಲ್ಯಾಕ್


ಕೆನಡಿಯನ್ ಲೇಖಕಿ ಎಸಿ ಎಡುಗ್ಯನ್ ಬರೆದಿರುವ ಈ ಕಾದಂಬರಿ ಒಂದು ನಿಜ ಕಥೆಯನ್ನಾಧರಿಸಿದೆ. ಗುಲಾಮನಾಗಿ ದುಡಿಯುವ ಒಬ್ಬನ ಜಗತ್ತು ನಾಶವಾಗಿ ಅದನ್ನು ಮರು ನಿರ್ಮಾಣ ಮಾಡುವುದಕ್ಕಾಗಿಯೇ ನಡೆಸುವ ಹುಡುಕಾಟದ ಕಥೆ ಇದು.

ದಿ ಲಾಂಗ್ ಟೇಕ್


ಲಂಡನ್ ಮೂಲದ ಕವಿ ರಾಬಿನ್ ರಾಬರ್ಟ್ಸನ್‌ಬರೆದಿರುವ ಒಂದು ಕಾವ್ಯ ನಾಟಕ ‘ದಿ ಲಾಂಗ್ ಟೇಕ್’ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಕಾವ್ಯ ಕಾದಂಬರಿ. ವಾಕರ್, ಒತ್ತಡದಿಂದ ಬಳಲುತ್ತಿದ್ದಾನೆ. ಆತ ಸ್ವಾತಂತ್ರ್ಯ, ಅಜ್ಞಾತತೆ ಮತ್ತು ಚೇತರಿಕೆಗಾಗಿ ನಗರದ ಕಡೆಗೆ ನೋಡುತ್ತಿದ್ದಾನೆ. ನ್ಯೂಯಾರ್ಕ್ ನಿಂದ ಲಾಸ್‌ಏಂಜಲಿಸ್‌ಗೆ, ಅಲ್ಲಿಂದ ಸ್ಯಾನ್ ಫ್ರಾನ್ಸಿಸ್ಕೊ ನಗರಕ್ಕೆ ಆತ ಅಲೆದಾಡುತ್ತಿರುವಾಗ ನಮಗೆ ಅಮೆರಿಕನ್ ಇತಿಹಾಸದ ಮುಖ್ಯವಾದ ಒಂದು ಭಗ್ನ ಯುಗದ ದರ್ಶನವಾಗುತ್ತದೆ.

ಮಿಲ್ಕ್ ಮ್ಯಾನ್

ಅನ್ನಾ ಬರ್ನ್ಸ್ ರಚಿತ ಮಿಲ್ಕ್ ಮ್ಯಾನ್‌ನಲ್ಲಿ ಕಥಾನಾಯಕಿ ತನ್ನ ಬಾಯ್ ಫ್ರೆಂಡ್ ಯಾರೆಂದು ತನ್ನ ತಾಯಿಗೆ ತಿಳಿಯದಂತೆ ನೋಡಿಕೊಳ್ಳುವುದರಲ್ಲಿ ಬಿಜಿಯಾಗಿದ್ದಾಳೆ. ಆಕೆ ಹಾಲು ಮಾರುವವನ ಜೊತೆ ತನ್ನ ಮುಖಾಮುಖಿಯನ್ನು ಯಾರಿಗೂ ಹೇಳಿಲ್ಲ. ಆದರೆ ಅವಳ ಬಾವನಿಗೆ ಅನುಮಾನ ಬಂದಾಗ ಗಾಳಿ ಮಾತುಗಳು ಹರಡಲಾರಂಭಿಸುತ್ತದೆ. ಅವಳ ಪಾಲಿಗೆ ಇಡೀ ಪ್ರಕರಣ ಅಪಾಯಕಾರಿ ಆಗಲಾರಂಭಿಸುತ್ತದೆ. ಗಾಳಿ ಮಾತು ಮತ್ತು ಅಂತೆಕಂತೆಗಳು, ಮೌನ ಹಾಗೂ ಉದ್ದೇಶಪೂರ್ವಕವಾದ ಕಿವುಡುತನದ ಕತೆಯಾಗಿರುವ ಮಿಲ್ಕ್ ಮ್ಯಾನ್ ಭಾರೀ ಪರಿಣಾಮಗಳಿಗೆ ಕಾರಣಾಗುವ ನಿಷ್ಕ್ರಿಯತೆಯ ಕಥಾನಕವಾಗಿದೆ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News

ಜಗದಗಲ
ಜಗ ದಗಲ