ಪ್ರಾಮಾಣಿಕತೆ ಒಂದು ಮಾತುಕತೆ
ಮಕ್ಕಳು ಮಕ್ಕಳಾಗಿಯೇ ಉಳಿಯುವುದಿಲ್ಲ. ಅವರು ಬಹಳ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವಂತಹ ಹಿರಿಯರಾಗುತ್ತಾರೆ ಎಂಬ ಎಚ್ಚರಿಕೆ, ಮುಂದಾಲೋಚನೆ ಪೋಷಕರಿಗೂ ಮತ್ತು ಶಿಕ್ಷಕರಿಗೂ ಇದ್ದು, ತಾವು ಈಗ ತೋರುವ ವರ್ತನೆ ಮತ್ತು ನೀಡುವ ಪೋಷಣೆ ದೀರ್ಘಕಾಲದ ಪರಿಣಾಮವನ್ನು ಉಂಟುಮಾಡುವುದು ಎಂಬುದರ ಬಗ್ಗೆ ಗಮನ ನೀಡಬೇಕಾಗಿರುವುದು ಬಹಳ ಮುಖ್ಯ.
ಶಿಕ್ಷಣ ಹೂರಣ: ಭಾಗ 10
ತಾವು ಹೇಗಿದ್ದೇವೆ?
ತಾವು ಹೇಗಿದ್ದೇವೆ? ಈ ಆತ್ಮಚಿತ್ರಣವು ಪೋಷಕರಿಗೆ ಮಕ್ಕಳ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಮಕ್ಕಳು ಹೇಗಿದ್ದಾರೆ ಎಂಬುದಕ್ಕಿಂತ ಮುಖ್ಯವಾದುದು ತಾವು ಅವರೊಟ್ಟಿಗೆ ಹೇಗಿದ್ದೇವೆ? ತಮ್ಮ ಎಂತಹ ವ್ಯಕ್ತಿತ್ವವನ್ನು ಅವರು ನೋಡುತ್ತಿದ್ದಾರೆ? ತಮ್ಮ ಎಂತಹ ಚಟುವಟಿಕೆಗಳನ್ನು ಅವರು ಗಮನಿಸುತ್ತಿದ್ದಾರೆ? ತಮ್ಮ ಎಂತಹ ಅಭಿರುಚಿಗಳನ್ನು ಮತ್ತು ಆಸಕ್ತಿಗಳನ್ನು ಅವರು ಗುರುತಿಸುತ್ತಿದ್ದಾರೆ? ಮಕ್ಕಳ ಮುಂದೆ ತಾವು ಯಾವುದಕ್ಕೆ ಪ್ರಧಾನವಾಗಿ ಬೆಲೆ ಕೊಡುತ್ತಿದ್ದೇವೆ? ಯಾವುದಕ್ಕೆ ಬೆಲೆ ಕೊಡುತ್ತಿಲ್ಲ? ಯಾವ ಯಾವ ವೌಲ್ಯಗಳನ್ನು ನಾವು ಪ್ರದರ್ಶಿಸುತ್ತಿದ್ದೇವೆ? ಯಾವ ವಿಷಯಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ? ಇವನ್ನೆಲ್ಲಾ ಪೋಷಕರು ನೋಡಿಕೊಂಡರೆ ಇನ್ನು ಮಿಕ್ಕಿದ್ದು ಸುಲಭ.
ಹಂತ ಹಂತವಾಗಿ ಕ್ಷೀಣಿಸುವ ಪ್ರಾಮಾಣಿಕತೆ
ನಾನು ಶಾಲೆಯಲ್ಲಿ ಮತ್ತು ಹೊರಗೆ ಬಹಳ ಹತ್ತಿರದಿಂದ ಎಷ್ಟೋ ಮಕ್ಕಳನ್ನು ನೋಡುತ್ತೇನೆ. ಆ ಮಕ್ಕಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲು ಇಷ್ಟಪಡುತ್ತೇನೆ. ಮೊದಲನೆಯ ಭಾಗದಲ್ಲಿ ಮೂರು ವರ್ಷಗಳಿಂದ ಆರು ವರ್ಷಗಳವರೆಗೆ: ಅವರಲ್ಲಿ ಮನೆಯಲ್ಲಿ ಸಹಜವಾಗಿ ಪ್ರಭಾವ ಬೀರಿರುವಂತಹ ಭಯ ಅಥವಾ ಲವಲವಿಕೆ, ಉತ್ಸಾಹ, ಹಿಂಜರಿಯುವಿಕೆ ಎಂತದ್ದೋ ಇರುತ್ತದೆ. ಅದನ್ನು ನೇರವಾಗಿ ಅಭಿವ್ಯಕ್ತಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಯಾವ ರೀತಿಯಲ್ಲಿ ತಮ್ಮನ್ನು ಪದೇ ಪದೇ ಪ್ರಕಟಗೊಳಿಸಿಕೊಳ್ಳುತ್ತಾರೋ ಅದಕ್ಕೆ ಪ್ರತಿಯಾಗಿ ತಮ್ಮನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ ಮತ್ತು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುತ್ತಾರೆ. ಆರು ವರ್ಷಗಳಿಂದ ಹತ್ತು ವರ್ಷಗಳಲ್ಲಿ ಬರುವ ಮಕ್ಕಳು ಬಹುಪಾಲು ತಮ್ಮ ಗುರುತುಗಳನ್ನು ಮೂಡಿಸಿಕೊಂಡಿರುತ್ತಾರೆ. ಆಸಕ್ತಿ ಮತ್ತು ಅಭಿರುಚಿಯನ್ನು ಕೊಂಚ ಮಟ್ಟಿಗೆ ಗುರುತಿಸಿಕೊಂಡಿರುತ್ತಾರೆ. ಇದು ಕೌಟುಂಬಿಕ ಹಿನ್ನೆಲೆ ಮತ್ತು ಶೈಕ್ಷಣಿಕ ಪರಿಸರದ ಬಹುದೊಡ್ಡ ಪ್ರಭಾವ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ, ಆ ಮಕ್ಕಳಲ್ಲಿಯೂ ಕೂಡ ಒಂದು ಹಂತದ ಪ್ರಾಮಾಣಿಕತೆಯನ್ನು ಕಾಣಬಹುದು. ಪ್ರೀತಿ ಮತ್ತು ಭೀತಿಗೆ ಅನುಗುಣವಾಗಿ ಅವರ ವರ್ತನೆಗಳು, ಪ್ರತಿಕ್ರಿಯೆಗಳು ರೂಪುಗೊಳ್ಳುತ್ತಾ ಹೋಗುವುದರೊಂದಿಗೆ ಅದು ಮುಂದೆ ಗಾಢವಾಗುತ್ತಾ ಹೋಗುವುದು. ಇನ್ನು ಹನ್ನೊಂದರಿಂದ ಹದಿನಾರುವರ್ಷದ ಮಕ್ಕಳನ್ನು ನೋಡಿದರೆ ಗಾಬರಿಯಾಗುತ್ತದೆ. ಬಹುಪಾಲು ಆ ಮಕ್ಕಳಲ್ಲಿ ನಾನು ಗುರುತಿಸುವುದೇ ಕೃತಕತೆ. ಅವರ ಸಮ್ಮತಿಯನ್ನಾಗಲಿ ಅಥವಾ ಅಸಮ್ಮತಿಯನ್ನಾಗಲಿ ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದಿಲ್ಲ. ಮಿಗಿಲಾಗಿ ನಮ್ಮನ್ನು ಮೆಚ್ಚಿಸಲೋ ಅಥವಾ ನಮ್ಮನ್ನು ಪ್ರತಿಭಟಿಸಲೋ ಪರೋಕ್ಷವಾದಂತಹ ಪ್ರತಿಕ್ರಿಯೆಗಳನ್ನು ನೀಡುತ್ತಿರುತ್ತಾರೆ. ಮಕ್ಕಳಲ್ಲಿ ಈ ಬಗೆಯ ಅಪ್ರಾಮಾಣಿಕತೆಯ ಪ್ರತಿಕ್ರಿಯೆಯು ಹೆಚ್ಚಿನ ಮಟ್ಟದಲ್ಲಿರುವುದಕ್ಕೆ ಕಾರಣಗಳು ಹಲವಿವೆ. ಅದರಲ್ಲಿ ಮೊದಲ ಮತ್ತು ಬಹಳ ಮುಖ್ಯವಾದ ಕಾರಣವೆಂದರೆ ಮನೆಯಲ್ಲಿ ಕುಟುಂಬದ ಸದಸ್ಯರು ಮತ್ತು ಶಾಲೆಯಲ್ಲಿ ಶಿಕ್ಷಕರು ತಮ್ಮ ಸಂಪರ್ಕವನ್ನು ಪ್ರಾಮಾಣಿಕವಾಗಿ ಮಕ್ಕಳೊಂದಿಗೆ ಸಾಧಿಸದೇ ಇರುವುದು.
ಪ್ರಾಮಾಣಿಕತೆ: ಒಂದು ಕೇಸ್ ಸ್ಟಡಿ
ಒಬ್ಬ ಒಂಬತ್ತನೇ ತರಗತಿಯ ಹುಡುಗ ಬಹಳ ಸುಳ್ಳುಗಳನ್ನು ಹೇಳುತ್ತಿದ್ದ. ಹಾಗೆಯೇ ಪ್ರತಿಸಲ ಸುಳ್ಳು ಹೇಳಿದಾಗಲೂ ಸಿಕ್ಕಿ ಹಾಕಿಕೊಳ್ಳುತ್ತಿದ್ದ. ಇನ್ನೂ ಕೆಲವು ಸಲ ನಮ್ಮನ್ನು ಮೆಚ್ಚಿಸಲು ಅನಗತ್ಯವಾಗಿ ಕೃತಕವಾಗಿ ನಡೆದುಕೊಳ್ಳುತ್ತಿದ್ದ. ಇದನ್ನೆಲ್ಲಾ ಗಮನಿಸಿದ ಆರು ತಿಂಗಳ ನಂತರ ಅವನೊಂದಿಗೆ ಮಾತಾಡಿದೆ. ಸಂಭಾಷಣೆ ಇಂಗ್ಲಿಷ್‌ನಲ್ಲಿತ್ತು. ನಾನು: ಹಲೋ, ನಾನೂ ನೀನು ಸ್ವಲ್ಪ ಮಾತಾಡೋಣ್ವಾ?
ಹುಡುಗ: ಖಂಡಿತವಾಗಿ ಸರ್. ಏನು ಹೇಳಿ ಸರ್? (ಕಿವಿಯವರೆಗೂ ಮೂತಿಯನ್ನು ಹಿಗ್ಗಿಸಿರುವಂತಹ ನಗು)
ನಾನು: ಪ್ರಾಮಾಣಿಕವಾಗಿ ನಗುವುದು ಎಂದರೇನು ಅಂತ ನಿನಗೆ ಗೊತ್ತಿದೆಯಾ?
ಹುಡುಗ: (ನಿರುತ್ತರ)
ನಾನು: ಈ ಪ್ರಶ್ನೆಗೆ ಪ್ರಾಮಾಣಿಕವಾದ ಉತ್ತರ ಬಯಸುತ್ತೇನೆ. ಹುಡುಗ: ಪ್ರಾಮಾಣಿಕತೆ ಅಂದರೆ ಏನು ಸರ್?
ನಾನು: ಮುಖವಾಡವಿಲ್ಲದೇ ತಮ್ಮನ್ನು ತಾವು ತೋರ್ಪಡಿಸಿಕೊಳ್ಳುವುದು. ತಮ್ಮ ನೈಜತೆಗೆ ಬದ್ಧವಾಗಿರುವುದು. ತನ್ನ ವಿಷಯವು ಒಳಗೆ ಏನಿರುವುದೋ ಅದನ್ನೇ ಹೊರಗೆಯೂ ಕೂಡ ಪ್ರತಿಫಲಿಸುವುದು. ತುಂಬಾ ಸರಳವಾಗಿ ಹೇಳುವುದಾದರೆ ನಿಜವಾಗಿ ಆಲೋಚಿಸುವುದು, ಆಲೋಚಿಸುವುದನ್ನೇ ನಿಜವಾಗಿ ಹೇಳುವುದು. ಹುಡುಗ: ಈ ಪ್ರಾಮಾಣಿಕತೆಯಿಂದ ಏನು ಪ್ರಯೋಜನ ಸರ್?
ನಾನು: ಒಬ್ಬರನ್ನೊಬ್ಬರು ಮೋಸಗೊಳಿಸುವುದಿಲ್ಲ. ತನ್ನನ್ನು ತಾನು ಮೋಸಗೊಳಿಸಿಕೊಳ್ಳದೇ ಇರಬಹುದು. ಒಟ್ಟಾರೆ ತಾನೇ ತನಗೂ ಮತ್ತು ಇತರರಿಗೂ ಮೋಸ ಮಾಡದೇ ಇರುವುದು. ಹುಡುಗ: ಸುಳ್ಳು ಹೇಳಿದರೆ ಒಬ್ಬರಿಗೊಬ್ಬರು ಮೋಸಗೊಳಿಸುತ್ತಿದ್ದೇವೆ ಎಂದೇ?
ನಾನು: ಹೌದು. ಸುಳ್ಳು ಹೇಳುವುದು ಮಾತ್ರವಲ್ಲ. ಸುಳ್ಳು ನಗೆ, ಸುಂದರವಾದ ಸುಳ್ಳಿನ ಮಾತು, ಸುಳ್ಳು ಸುಳ್ಳೇ ಒಪ್ಪುವುದು, ಸುಳ್ಳು ಸುಳ್ಳೇ ಆರೋಪಿಸುವುದು, ಸುಳ್ಳುಸುಳ್ಳೇ ಹೊಗಳುವುದು ಎಲ್ಲವೂ ಮೋಸ ಮಾಡುವ ವ್ಯಾಪ್ತಿಗೇ ಬರುತ್ತದೆ. ಹುಡುಗ: ನಿಮ್ಮ ಬಳಿ ಈಗ ನಾನು ಪ್ರಾಮಾಣಿಕವಾಗಿ ಮಾತಾಡುತ್ತಿದ್ದೇನೆಂದು ನಿಮಗೆ ಯಾವುದಾದರೊಂದು ರೀತಿಯಲ್ಲಿ ಪ್ರಮಾಣಿಸಬೇಕಾ?
ನಾನು: ಅಗತ್ಯವಿಲ್ಲ. ನೀನು ಸುಮ್ಮನೆ ಹೇಳು. ಹುಡುಗ: ನಿಮಗೇ ಗೊತ್ತಾಗತ್ತೆ. ಅಲ್ಲವೇ?
ನಾನು: ನೀನು ಹೇಳು. ಹುಡುಗ: ನನ್ನ ತಾಯಿ ನನ್ನ ತಂದೆಯ ಬಳಿ ಸುಳ್ಳು ಹೇಳುತ್ತಾಳೆ. ಅದೇ ರೀತಿ ನನ್ನ ತಂದೆಯೂ ಕೂಡಾ. ನನ್ನ ಅಕ್ಕ ಕೂಡಾ. (ಅವನ ಮನೆಯಲ್ಲಿ ಎಲ್ಲರೂ ಎಷ್ಟರ ಮಟ್ಟಿಗೆ ಅಪ್ರಾಮಾಣಿಕವಾಗಿದ್ದಾರೆ ಎಂಬುದನ್ನು ಹೇಳುತ್ತಾ ಬಂದ.) ನೀವು ಹೇಳುವಂತೆ ಅವರೆಲ್ಲಾ ಒಬ್ಬರಿಗೊಬ್ಬರು ಮೋಸ ಮಾಡುತ್ತಿದ್ದಾರೆ ಎಂದರೆ, ಹೌದು ನಾನೂ ಕೂಡ ಅವರೊಟ್ಟಿಗೆ ಒಬ್ಬೊಬ್ಬರಿಗೂ ಮೋಸ ಮಾಡಿಕೊಂಡು ನನ್ನ ಲಾಭವನ್ನು ನೋಡಿಕೊಳ್ಳುತ್ತಿದ್ದೇನೆ. ಈಗ ನಾನು ಏನು ಮಾಡಲಿ? ಹೇಗೆ ಪ್ರಾಮಾಣಿಕವಾಗಿರಲಿ?
ನಾನು: ಶಾಲೆಯಲ್ಲಿ?
ಹುಡುಗ: ಇದೇ ಶಾಲೆಯಲ್ಲಿ ನಾನು ಎಲ್‌ಕೆಜಿಯಿಂದ ಓದುತ್ತಿದ್ದೇನೆ. ಒಬ್ಬ ಟೀಚರ್ರೂ ಒಂದು ಸಲವೂ ನಮ್ಮ ಹುಡುಗ ಅಂತ ಹೇಳಿಲ್ಲ. ಅವರು ಒಂದೇ ಒಂದು ಸಲವೂ ನನ್ನ ಬೆನ್ನು ತಟ್ಟಿ ಮುಗುಳ್ನಕ್ಕಿಲ್ಲ. (ನಗುತ್ತಾ) ನೀವು ಹೇಳುವ ಹಾಗೆ ಪ್ರಾಮಾಣಿಕವಾಗಿ ನಕ್ಕಿಲ್ಲ. ನಾನು: ನಿನ್ನ ಶಿಕ್ಷಕರು ಅಪ್ರಾಮಾಣಿಕರು ಎಂದು ಹೇಳುತ್ತೀಯಾ?
ಹುಡುಗ: ಇಲ್ಲ ಇಲ್ಲ. ಅವರು ಅವರ ಕೋಪ ತೋರಿಸುವುದರಲ್ಲಿ ಪ್ರಾಮಾಣಿಕರು. ಅವರ ಸಿಲೆಬಸ್ ಮುಗಿಸುವುದರಲ್ಲಿ ಪ್ರಾಮಾಣಿಕರು. ನಾವು ಬರೆದಿರುವುದಕ್ಕೆ ಸರಿಯಾಗಿ ಅಂಕ ಕೊಡುವುದರಲ್ಲಿ ಪ್ರಾಮಾಣಿಕರು. (ಏನೋ ಹೇಳುವಂತೆ ಮಾಡಿ ಮತ್ತೆ ವೌನಿಯಾದ.)
ನಾನು: ಮತ್ತೆ ಇನ್ನೂ ಏನು ಬಯಸುತ್ತೀಯಾ?
ಹುಡುಗ: ನನಗೆ ತಲೆ ಸುತ್ತು ಬಂದು ಬಿದ್ದರೆ ತಕ್ಷಣ ಮನೆಗೆ ಫೋನ್ ಮಾಡಿ ಬಂದು ಕರೆದುಕೊಂಡು ಹೋಗಿ ಅಂತಾರೆ. ಒಂದೇ ಒಂದು ದಿನ ಏನಾಯ್ತು? ಯಾಕಾಯ್ತು? ಊಟ ಮಾಡಿದೆಯಾ? ಅಂತ ಕೇಳಲಿಲ್ಲ. ಹಣೆ ಮುಟ್ಟಿ ನೋಡಲಿಲ್ಲ. ಹೊಟ್ಟೆ ನೋಯುತ್ತಿದೆ ಎಂದು ಅತ್ತರೆ ಏನೂ ಆಗುವುದಿಲ್ಲ ಸುಮ್ಮನಿರು ಅಂತ ಕಾಳಜಿ ತೋರಿಸಲಿಲ್ಲ. ನಾನು: (ನಗುತ್ತಾ) ಈ ಪ್ರಾಮಾಣಿಕತೆ ಎಂಬ ವಿಷಯ ಬಹಳ ಅಪಾಯಕಾರಿಯಾದದ್ದು. ನಿನಗೊಂದು ವಿಷಯ ಅರ್ಥವಾಗಲಿಲ್ಲವಾ? ಅವರು ನಿರೀಕ್ಷೆಗೆ ತಕ್ಕನಾಗೆ ನಡೆದುಕೊಳ್ಳಲಿಲ್ಲ ಎಂದರೆ ಅವರು ಪ್ರಾಮಾಣಿಕವಾಗಿಯೇ ಇದ್ದರು. ಅವರಿಗೆ ಪ್ರಾಮಾಣಿಕವಾಗಿ ಏನೂ ಅನ್ನಿಸಲಿಲ್ಲ, ಕೇಳಲಿಲ್ಲ. ಹುಡುಗ: ಅದೇ ಸರ್ ನಾನು ಹೇಳ್ತಿರೋದು. ಪ್ರಾಮಾಣಿಕವಾಗಿಯೇ ನಮ್ಮನ್ನು ಪ್ರೀತಿಸಲಿ ಅಂತ. ಅವರು ಮಾಡೋ ಕೆಲಸ ಅವರು ಮಾಡ್ಕೊಂಡು ಹೋಗ್ತಾರೆ. ನಾವು ಈ ಶಾಲೆಯ ಪ್ರಾಡಕ್ಟ್ಸ್ ಅಂತ ಬೇರೆ ಹೇಳ್ತಾರೆ. ಮನೇಲೊಂದು ತರ ಇಲ್ಲೊಂದು ತರ. ನಾನು: ಒಳ್ಳೆ ಹುಡುಗ. ಎಲ್ಲರದ್ದೂ ಅವರವರದೇ ಒತ್ತಡಗಳು, ದೃಷ್ಟಿಗಳು ಮತ್ತು ಆದ್ಯತೆಗಳು ಇರುತ್ತವೆ. ಇರಲಿ, ಈಗ ಕನಿಷ್ಠಪಕ್ಷ ನೀನು ನನ್ನ ಜೊತೆ ಪ್ರಾಮಾಣಿಕವಾಗಿ ಇರುತ್ತೀಯಾ? ಹುಡುಗ: ಖಂಡಿತ ಸರ್. (ಹುಡುಗ ಹೈ-ಪೈ ಕೊಟ್ಟು ಹೋದ.)
ಈ ಸಂಭಾಷಣೆಯು ಪರಿಸ್ಕೃತಗೊಂಡಿದೆ. ಆದರೆ ಹೂರಣವನ್ನು ಉಳಿಸಿಕೊಂಡಿದ್ದೇನೆ. ಹುಡುಗ ಅನೇಕಾನೇಕ ವಿಷಯಗಳನ್ನು ತನ್ನದೇ ರೀತಿಯಲ್ಲಿ ಹೇಳುತ್ತಾ ಹೋದ. ಅದರಲ್ಲಿ ಒಟ್ಟಾರೆ ನಾನು ಗ್ರಹಿಸಿದ್ದು ಏನೆಂದರೆ, ಅವರಿಗೆ ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ ಆಪ್ತತೆಯ ಸ್ಪರ್ಶ, ಅದರಲ್ಲೂ ದೊಡ್ಡವರಿಂದ ಬೇಕು. ಒಬ್ಬ ಹುಡುಗ ಅಥವಾ ಹುಡುಗಿಗೆ ಶಾಲೆಯಲ್ಲಿ ಹೀಗೆ ಎಂದು ಕಲಿಕೆಯ ವಿಷಯದಲ್ಲಾಗಲಿ, ವರ್ತನೆಯ ವಿಷಯದಲ್ಲಾಗಲಿ ಹಣೆ ಪಟ್ಟಿಕಟ್ಟಿಬಿಟ್ಟರೆ ಉಳಿದೆಲ್ಲಾ ಶಿಕ್ಷಕರೂ ಅದನ್ನೇ ಅನುಸರಿಸಿಕೊಂಡು ಹೋಗುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಒಬ್ಬರೇ ಒಬ್ಬ ಶಿಕ್ಷಕರೂ ಮತ್ತೊಂದು ಮಗ್ಗುಲಿನಿಂದ ವಿದ್ಯಾರ್ಥಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ ಹಾಗೆಯೇ ಸಮರ್ಥಿಸುವುದೂ ಇಲ್ಲ. ವಿದ್ಯಾರ್ಥಿಯು ತಾನೊಬ್ಬ ಮೂಲೆಗೊಳಗಾದಂತೆ ಭಾವಿಸುತ್ತಾನೆ. ಇದು ಬರಿಯ ಶಾಲೆಗೇ ಮುಗಿಯುವುದಿಲ್ಲ. ಮನೆಗೂ ಮುಂದುವರಿಯುತ್ತದೆ. ಆ ಹುಡುಗನ ಮಾತಿನಲ್ಲಿ ಯಾಕೆ ಎಲ್ಲರೂ ಇತರರು ನೀಡುವ ಅಭಿಪ್ರಾಯಗಳ ಮೇಲೆಯೇ ತಮ್ಮ ಅಭಿಪ್ರಾಯವನ್ನೂ ರೂಪಿಸಿಕೊಳ್ಳುತ್ತಾ ಹೋಗುತ್ತಾರೆ ಎಂಬ ಪ್ರಶ್ನೆ ಇತ್ತು. ಅದು ನೇರವಾಗಿಲ್ಲದಿದ್ದರೂ, ಅದನ್ನು ಧ್ವನಿಸುತ್ತಿತ್ತು.
ಮಕ್ಕಳು ಮಕ್ಕಳಾಗಿಯೇ ಉಳಿಯುವುದಿಲ್ಲ. ಅವರು ಬಹಳ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವಂತಹ ಹಿರಿಯರಾಗುತ್ತಾರೆ ಎಂಬ ಎಚ್ಚರಿಕೆ, ಮುಂದಾಲೋಚನೆ ಪೋಷಕರಿಗೂ ಮತ್ತು ಶಿಕ್ಷಕರಿಗೂ ಇದ್ದು, ತಾವು ಈಗ ತೋರುವ ವರ್ತನೆ ಮತ್ತು ನೀಡುವ ಪೋಷಣೆ, ದೀರ್ಘಕಾಲದ ಪರಿಣಾಮವನ್ನು ಉಂಟುಮಾಡುವುದು ಎಂಬುದರ ಬಗ್ಗೆ ಗಮನ ನೀಡಬೇಕಾಗಿರುವುದು ಬಹಳ ಮುಖ್ಯ.