ಬ್ಯಾಂಕ್ ಗಳಿಂದಲೂ ಆಗುತ್ತೆ ಬಳಕೆದಾರರಿಗೆ ಮೋಸ

Update: 2018-09-30 07:16 GMT

ಭಾಗ 56

ಬ್ಯಾಂಕ್ ಬಳಕೆದಾರರಾಗಿ ನಮಗೆ ಹಲವಾರು ಹಕ್ಕುಗಳಿವೆ. ಹಾಗಿದ್ದರೂ ಅವುಗಳ ಮಾಹಿತಿಯ ಕೊರತೆಯಿಂದಾಗಿ ಬಳಕೆದಾರರು ಶೋಷಣೆಗೊಳಗಾಗುತ್ತಾರೆ. ಪ್ರಮುಖವಾಗಿ ಎರಡು ರೀತಿಯ ಸಮಸ್ಯೆಗಳನ್ನು ಬಳಕೆದಾರರು ಎದುರಿಸುತ್ತಾರೆ. ಒಂದನೆಯದಾಗಿ ಬ್ಯಾಂಕ್‌ನ ಪಾಲಿಸಿ (ನೀತಿ)ಯಿಂದಾಗಿ ಬ್ಯಾಂಕ್ ಆಡಳಿತದಿಂದ ತೊಂದರೆಯಾದರೆ, ಇನ್ನೊಂದು ಬ್ಯಾಂಕ್‌ನ ಸಿಬ್ಬಂದಿಯಿಂದಾಗಿಯೂ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಬಳಕೆದಾರರು ಯಾವತ್ತೂ ಬ್ಯಾಂಕ್‌ನ ಜತೆ ನೇರವಾಗಿ ವ್ಯವಹಾರ ಮಾಡಬೇಕೇ ಹೊರತು ಮಧ್ಯವರ್ತಿಗಳ ಮೂಲಕ ವ್ಯವಹಾರಕ್ಕಿಳಿಯಬಾರದು. ಉತ್ತರ ಕನ್ನಡ ಜಿಲ್ಲೆಯ ಕಲಾವಿದ(ಪೇಯ್ಟಿಂಗ್ ವೃತ್ತಿಯಲ್ಲಿದ್ದವರು)ರೊಬ್ಬರು ತಮ್ಮ ತಂಗಿಯ ಮದುವೆಗಾಗಿ ಹಣವನ್ನು ರಾಷ್ಟ್ರೀಕೃತವಲ್ಲದ ಪ್ರಮುಖ ಬ್ಯಾಂಕೊಂದರಲ್ಲಿ ಠೇವಣಿ ಇರಿಸಿದ್ದರು. ಸಾವಿರಾರು ರೂ.ಅನ್ನು ಅವರು ಕಷ್ಟಪಟ್ಟು ಸಂಪಾದಿಸಿ ಸಂಗ್ರಹಿಸಿದ್ದರು. ಅದೊಂದು ದಿನ ಬ್ಯಾಂಕ್ ಮ್ಯಾನೇಜರ್ ಅವರ ಬಳಿ ಬಂದು, ಬಟ್ಟೆ ಅಂಗಡಿ ವ್ಯಾಪಾರಿಗೆ ನೀವು ಠೇವಣಿ ಇರಿಸಿರುವುದು ತಿಳಿದಿದೆ. ಅವರಿಗೆ ಹಣದ ಅಗತ್ಯವಿದೆ. ಅವರಿಗೆ ನೀವು ಚೆಕ್ ಬರೆದು ಕೊಟ್ಟರೆ, ಅವರು ನಿಮಗೆ ಅಗತ್ಯವಿರುವಾಗ ಅದನ್ನು ಹಿಂದಿರುಗಿಸುತ್ತಾರೆ ಎಂದು ಆ ಕಲಾವಿದರ ಬಳಿ ಹೇಳಿಕೊಂಡರು. ಅವರು ನಿಮ್ಮ ಹಣಕ್ಕೆ ಬಡ್ಡಿಯನ್ನೂ ನೀಡುತ್ತಾರೆಂದು ಬ್ಯಾಂಕ್ ಮ್ಯಾನೇಜರ್ ಹೇಳಿದಾಗ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರದ ಆ ಕಲಾವಿದ ನಂಬಿ ಚೆಕ್‌ಗೆ ಸಹಿ ಹಾಕಿ ನೀಡಿದರು. ವ್ಯಾಪಾರಿ ಖಾತೆಗೆ ಹಾಕಿದ ಹಣದ ಚೆಕ್‌ನ ಪೇಯಿಂಗ್ ಸ್ಲಿಪ್ಪನ್ನು ಸಾಕ್ಷಿಯಾಗಿ ಕಲಾವಿದ ವ್ಯಕ್ತಿಗೆ ನೀಡಲಾಯಿತು. ಕೆಲ ವರ್ಷಗಳ ಬಳಿಕ ಈ ಕಲಾವಿದ ವ್ಯಕ್ತಿಗೆ ಹಣದ ಅಗತ್ಯ ಬಿತ್ತು. ಆತ ಬ್ಯಾಂಕ್‌ನಲ್ಲಿ ಮ್ಯಾನೇಜರನ್ನು ವಿಚಾರಿಸಿದಾಗ ಬಟ್ಟೆ ವ್ಯಾಪಾರಿಯಲ್ಲಿ ಕೇಳುವಂತೆ ತಿಳಿಸಿದರು. ಆತ ನೇರವಾಗಿ ವ್ಯಾಪಾರಿ ಬಳಿ ಹೋಗಿ ಪೇಯಿಂಗ್ ಸ್ಲಿಪ್ ತೋರಿಸಿ, ನಾನು ನಿಮಗೆ ಕೊಟ್ಟಿರುವ ಹಣ ವಾಪಸ್ ಕೊಡಿ. ಅಗತ್ಯವಿದೆ ಎಂದಾಗ, ‘‘ನೀನೆಲ್ಲಿ ನನಗೆ ಹಣ ಕೊಟ್ಟಿದ್ದು, ಮ್ಯಾನೇಜರ್ ನನಗೆ ಹಣ ತೆಗೆದುಕೊಂಡಿರುವುದು ಬಾಕಿ ಇತ್ತು. ಅದನ್ನು ನನ್ನ ಖಾತೆಗೆ ಹಾಕಿದ್ದಾರೆ. ಅದು ಮಾತ್ರ ನನಗೆ ಗೊತ್ತಿರುವುದು. ನಿಮ್ಮ ಹಣದ ಬಗ್ಗೆ ಗೊತ್ತಿಲ್ಲ’’ ಎಂದಾಗ ಈ ಕಲಾವಿದನಿಗೆ ಒಂದೊಮ್ಮೆ ಬರಸಿಡಿಲೇ ಬಡಿದಂತಾಯಿತು. ಮತ್ತೆ ಮ್ಯಾನೇಜರನ್ನು ವಿಚಾರಿಸಿದರೆ, ಆತ ನನಗೆ ಗೊತ್ತಿಲ್ಲ ಎಂದು ಹೇಳಿ ಸಾಗಹಾಕತೊಡಗಿದ. ಆದರೆ ಅದೃಷ್ಟವಶಾತ್ ಪೇಯಿಂಗ್ ಸ್ಲಿಪ್‌ನಲ್ಲಿ ಬರೆದ ಬರಹಮ್ಯಾನೇಜರದ್ದು. ಆ ಕಲಾವಿದ ವ್ಯಕ್ತಿ ಎಲ್ಲೆಲ್ಲಾ ವಿಚಾರಿಸಿ ಕೊನೆಗೆ ಮಂಗಳೂರಿಗೆ ನಮ್ಮಲ್ಲಿಗೆ ಬಂದಿದ್ದ. ಪೇಯಿಂಗ್ ಸ್ಲಿಪ್ ತೋರಿಸಿ ನನಗೆ ಹೇಗಾದರೂ ಮಾಡಿ ಹಣ ತೆಗಿಸಿಕೊಡಿ ಎಂದು ಆತ ಬಿನ್ನವಿಸಿದ. ಆಗ ನಾನು ಆ ಬ್ಯಾಂಕ್‌ನ ಅತೀ ಹಿರಿಯ ಅಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅದಕ್ಕವರು, ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಬ್ಯಾಂಕ್‌ಗೂ ಸಂಬಂಧವಿಲ್ಲ ಎಂದು ಹೇಳಿದರು. ಅದು ನನಗೆ ಗೊತ್ತಿಲ್ಲ. ನಾನು ಈ ವಿಷಯವನ್ನು ಪತ್ರಿಕೆಯವರಿಗೆ ತಿಳಿಸುತ್ತೇನೆ. ಆಗ ನಿಮ್ಮ ಬ್ಯಾಂಕ್‌ನ ಮ್ಯಾನೇಜರ್ ವಿಚಾರವನ್ನು ನಾನು ಹೇಳಲೇಬೇಕಾಗುತ್ತದೆ. ಮುಂದೆ ನೀವು ಏನು ಬೇಕಾದರೂ ಮಾಡಿ ಎಂದು ಹೇಳಿದೆ. ಮುಂದೆ ಆ ಮ್ಯಾನೇಜರನ್ನು ಸಸ್ಪೆಂಡ್ ಮಾಡಿ ಹಣ ವಾಪಸ್ ಕೊಡಿಸಲಾಯಿತು. ಇಂತಹ ಪ್ರಕರಣದಲ್ಲಿ ಬ್ಯಾಂಕನ್ನು ನಾವು ಜವಾಬ್ಧಾರಿಯನ್ನಾಗಿಸಬೇಕಾಗುತ್ತದೆ. ಇಲ್ಲಿ ನಡೆದ ಪ್ರಕರಣಕ್ಕೆ ಬ್ಯಾಂಕ್‌ಗೆ ನೇರವಾಗಿ ಸಂಬಂಧ ಇಲ್ಲವಾಗಿದ್ದರೂ ಬ್ಯಾಂಕ್ ಶಾಖೆಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯಿಂದಲೇ ಬಳಕೆದಾರ ವ್ಯಕ್ತಿಗೆ ಮೋಸ ಆಗಿತ್ತು. ಅದನ್ನು ಸರಿಪಡಿಸಲು ಬ್ಯಾಂಕ್ ಜವಾಬ್ದಾರಿಯನ್ನು ಹೊರಲೇಬೇಕಾಯಿತು. ಇನ್ನೊಂದು ಅರಸೀಕೆರೆಯ ಪ್ರಕರಣ. ಅಲ್ಲಿನ ಬ್ಯಾಂಕೊಂದರ ಶಾಖೆಯಲ್ಲಿ ಅನಕ್ಷರಸ್ಥ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿ ಹಣವನ್ನು ಸಂಗ್ರಹಿಸಿದ್ದ. ಒಂದು ದಿನ ಆತ ಹಣ ಪಡೆಯಲು ಹೋದಾಗ ಆತನ ಖಾತೆ ಖಾಲಿಯಾಗಿತ್ತು!

ಇದನ್ನು ಬ್ಯಾಂಕ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ‘ನೀವೇ ಬರೆದ ಚೆಕ್‌ನಿಂದ ಹಣ ಪಡೆಯಲಾಗಿದೆ’ ಎಂಬ ಉತ್ತರ ಆ ಬಡಪಾಯಿ ವ್ಯಕ್ತಿಯನ್ನು ಕೆಲ ಕ್ಷಣ ತಲ್ಲಣಕ್ಕೊಳಪಡಿಸಿತು. ಬ್ಯಾಂಕ್‌ನ ಸಿಬ್ಬಂದಿ ಈ ವ್ಯಕ್ತಿಯಿಂದ ಸಹಿ ಮಾಡಿಸಿದ ಚೆಕ್‌ನ ಮೂಲಕ ಹಣವನ್ನು ಪಡೆದುಕೊಂಡು ಮೋಸ ಎಸಗಿದ್ದರು. ಆ ನೊಂದ ವ್ಯಕ್ತಿ ನಮ್ಮಲ್ಲಿಗೆ ಬಂದಾಗ ನಾವು ಆ ಬ್ಯಾಂಕ್‌ನ ವಲಯ ಕಚೇರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ, ನಾವು ಆ ಬಗ್ಗೆ ವಿಚಾರಣೆ ಮಾಡಿ, ಎಲ್ಲಾ ಸಂಪೂರ್ಣ ಆದ ಮೇಲೆ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿದರು. ಅದಕ್ಕೆ ನಾನು, ನಿಮ್ಮ ಬ್ಯಾಂಕ್ ಸಿಬ್ಬಂದಿ ಕೆಲಸದ ಅವಧಿಯಲ್ಲಿ ಮಾಡಿರುವ ಮೋಸವದು. ನೀವು ತನಿಖೆ ಯಾವಾಗ ಬೇಕಾದರೂ ಮಾಡಿ. ನೀವು ನಾಳೆಯೊಳಗೆ ಆ ವ್ಯಕ್ತಿಯ ಖಾತೆಗೆ ಹಣ ಕ್ರೆಡಿಟ್ ಮಾಡದಿದ್ದರೆ, ಮರುದಿನ ಸಂತೆ ಇದೆ. ಆ ಸಂತೆ ದಿನ ನಮ್ಮವರು ಬ್ಯಾನರ್ ಹಿಡಿದು ನಿಮ್ಮ ಬ್ಯಾಂಕ್ ಎದುರು ಕುಳಿತುಕೊಳ್ಳುತ್ತೇವೆ ಎಂದು ಹೇಳಿದೆ. ಮರುದಿನ ಆ ವ್ಯಕ್ತಿ ಖಾತೆಗೆ ಹಣ ಕ್ರೆಡಿಟ್ ಆಗಿತ್ತು. ಅದು ಫೋರ್ಜರಿ ಪ್ರಕರಣ. ಹಾಗಾಗಿ ಬ್ಯಾಂಕ್‌ನವರಿಗೆ ಭಯ ಇತ್ತು. ಪೊಲೀಸ್ ಕಂಪ್ಲೇಟ್ ಆದರೆ ವಿನಾ ಕಾರಣ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅರಿತ ಬ್ಯಾಂಕ್‌ನವರು ತಕ್ಷಣ ಪ್ರತಿಕ್ರಿಯಿಸಿದ್ದರು.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News