ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದ ದ್ವಂದ್ವ ನಿಲುವುಗಳು

Update: 2018-10-01 06:52 GMT

ಭಾರತದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ನಗಣ್ಯವೆನ್ನುವ ಮಟ್ಟಕ್ಕೆ ಇಳಿದಿದೆ. ಅದಕ್ಕೆ ಮುಖ್ಯವಾಗಿ ಇದ್ದಿದ್ದು ಕರ್ನಾಟಕವೊಂದೇ ಆಗಿತ್ತು. ಅದೂ ಈಗ ಕೈ ತಪ್ಪಿದೆ. ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಎರಡು ದಶಕಗಳ ನಂತರ ಐದು ವರ್ಷ ಪೂರೈಸಿದ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಹಿರಿಮೆ ಸಿದ್ದರಾಮಯ್ಯರದ್ದಾಗಿದೆ. ಆದರೆ ಅವರು ಮೂಲ ಕಾಂಗ್ರೆಸಿನವ ರಾಗಿರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ನಾಯಕತ್ವದ ನಿರ್ವಾತವನ್ನು ತುಂಬಲು ಸಾಪೇಕ್ಷವಾಗಿ ಜನಬೆಂಬಲವಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಳಸಿಕೊಂಡಿತು. ಸಿದ್ದರಾಮಯ್ಯರೂ ಕೂಡ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಂಡರು.

ರ್ನಾಟಕ ಈಗ ಅತಂತ್ರ ರಾಜಕೀಯ ವ್ಯವಸ್ಥೆಯಲ್ಲಿದೆ. ಕಾಂಗ್ರೆಸ್ ಜೆಡಿಎಸ್ ಸರಕಾರ ರಚನೆ ಮಾಡಿ ನೂರು ದಿನಗಳಿಗೂ ಹೆಚ್ಚು ಕಾಲವಾಗಿದ್ದರೂ ರಾಜಕೀಯ ಬಿಕ್ಕಟ್ಟು ತೀವ್ರವಾಗುತ್ತಿದೆ. ರಾಜಕೀಯ ಅತಂತ್ರದತ್ತ ಕರ್ನಾಟಕ ಸಾಗುತ್ತಿದೆ. ಅದು 2109ರ ಲೋಕಸಭಾ ಚುನಾವಣೆಯ ನಂತರ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಲಕ್ಷಣಗಳು ಈಗ ಕಾಣುತ್ತಿದೆ. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವೇನಾದರೂ 2019ರಲ್ಲಿ ಸ್ಥಾಪಿತವಾದರೆ ಕರ್ನಾಟಕದ ರಾಜಕೀಯದಲ್ಲಿ ಒಂದಷ್ಟು ಸ್ಥಿರತೆ ಬರುವ ಸಾಧ್ಯತೆಗಳೂ ಇವೆ. ಕಾಂಗ್ರೆಸ್ ಅತೀ ಹೆಚ್ಚು ಕಾಲ ದೇಶವನ್ನು ಆಳಿದಂತೆ ಕರ್ನಾಟಕವನ್ನೂ ಆಳಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಹುಟ್ಟು-ಬೆಳವಣಿಗೆಗಳ ಬಗೆಗಿನ ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಸರನ್ನು ಕೇಳದವರು ಭಾರತದ ಮಟ್ಟಿಗೆ ಯಾರೂ ಇರಲಾರರು. ಹಲವರಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದರೆ ಗೊತ್ತಾಗದೇ ಹೋದರೂ ಇಂದಿರಾ ಕಾಂಗ್ರೆಸ್ ಇಲ್ಲವೇ ಕಾಂಗ್ರೆಸ್ ಎಂದರೆ ಖಂಡಿತಾ ಗೊತ್ತಾಗಲೇ ಬೇಕು. ಭಾರತದಲ್ಲಿ ಅತೀ ದೊಡ್ಡ ಚರಿತ್ರೆ ಇರುವ ರಾಜಕೀಯ ಪಕ್ಷ ಇದು. ಸ್ವಾತಂತ್ರ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡ ಪಕ್ಷವೆಂಬ ಹಿರಿಮೆಯನ್ನು ಇದು ಹೇಳಿಕೊಳ್ಳುತ್ತದೆ.

ರಾಷ್ಟ್ರೀಯ ವ್ಯಕ್ತಿತ್ವಗಳೆಂದು ಪರಿಗಣಿಸಲ್ಪಟ್ಟಿರುವ ಮೋಹನ್ ದಾಸ್ ಕರಮ್ ಚಂದ್ ಗಾಂಧಿ, ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ್‌ರಂತಹ ನಾಯಕರು ಈ ಪಕ್ಷದ ಹಿನ್ನೆಲೆಯುಳ್ಳವರು.

ಕಾಂಗ್ರೆಸ್ ಪಕ್ಷವನ್ನು ನಿವೃತ್ತ ಬ್ರಿಟಿಷ್ ನಾಗರಿಕ ಸೇವಾ ಅಧಿಕಾರಿ ಎ.ಒ ಹ್ಯೂಮ್ (ಅಲ್ಲನ್ ಒಕ್ಟಾವಿಯನ್ ಹ್ಯೂಮ್) ಸ್ಥಾಪಿಸಿದ. 1885 ಡಿಸೆಂಬರ್‌ನಲ್ಲಿ ಇದು ತನ್ನ ಮೊದಲ ಸಭೆಯನ್ನು ಆಗಿನ ಬಾಂಬೆಯಲ್ಲಿ ನಡೆಸಿತ್ತು. ಇದಕ್ಕೆ ಬ್ರಿಟಿಷ್ ಸರಕಾರದ ನೇರ ಬೆಂಬಲ ಇತ್ತು. 1983ರಿಂದಲೇ ಹ್ಯೂಮ್ ಇದಕ್ಕಾಗಿ ತಯಾರಿ ನಡೆಸಿದ್ದರು. ಮೊದಲ ಸಭೆಗೆ ಬೇರೆ ಬೇರೆ ಭಾಗಗಳಿಂದ 72 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ 39 ಜನ ಶ್ರೀಮಂತ ವಕೀಲರು, 14 ಜನ ಪತ್ರಕರ್ತರು; ಇವರಲ್ಲಿ ಬಹುತೇಕರು ಪತ್ರಿಕಾ ಮಾಲಕರಾಗಿದ್ದರು, 2 ಜನ ಶಿಕ್ಷಕರು, ಒಬ್ಬರು ಡಾಕ್ಟರ್ ಸೇರಿದ್ದರು. 54 ಜನ ಮೇಲ್ಜಾತಿ, ಮೇಲ್ವರ್ಗಕ್ಕೆ ಸೇರಿದವರಾಗಿದ್ದರು. ಇಬ್ಬರು ಮುಸ್ಲಿಂ ಪಂಗಡದವರು. ಉಳಿದವರು ಪಾರ್ಸಿ ಮತ್ತು ಜೈನ ಪಂಗಡಕ್ಕೆ ಸೇರಿದವರು. ಇವರೆಲ್ಲರೂ ಭಾರೀ ಶ್ರೀಮಂತ ವರ್ಗದವರಾಗಿದ್ದರು. ಇದರಲ್ಲಿ ದಾದಾಭಾಯಿ ನವರೋಜಿ, ಫಿರೋಝ್ ಷಾ ಮೆಹ್ತಾ, ಗಣೇಶ್ ವಾಸುದೇವ ಜೋಷಿ, ದಿನ್ ಷಾ ವಾಚ್ಚ, ಬೆಹರಾಮ್ ಜಿ ಇತರರು ಪ್ರಮುಖರಾಗಿದ್ದವರು. ಈ ಮೊದಲ ಸಭೆಯಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಈ ಪಕ್ಷದ ಮೊದಲ ಅಧ್ಯಕ್ಷರಾಗಿಯೂ ಎ.ಒ.ಹ್ಯೂಮ್ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆ ಆಗುತ್ತಾರೆ. 1886ರಲ್ಲಿ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದಾದಾಭಾಯಿ ನವರೋಜಿ ಬ್ರಿಟಿಷ್ ಪಾರ್ಲಿಮೆಂಟಿನ ಹೌಸ್ ಆಫ್ ಕಾಮನ್ಸ್‌ನಲ್ಲಿ 1892ರಿಂದ 1895ರವರೆಗೆ ಭಾರತೀಯ ಪ್ರತಿನಿಧಿಯಾಗಿದ್ದವರು. ಇದರಲ್ಲಿ ಫಿರೋಝ್ ಷಾ ಮೆಹ್ತಾ, ಕೆ.ಟಿ ತೆಲಂಗ್ ಮತ್ತು ಬದ್ರುದ್ದೀನ್ ತ್ವಯ್ಯಬ್ಜಿ ಶ್ರೀಮಂತ ವಕೀಲರು ಮಾತ್ರವಲ್ಲದೇ ಬಾಂಬೇ ಮಿಲ್ ಮಾಲಕರೊಂದಿಗೆ ನೇರ ಸಂಬಂಧವುಳ್ಳವರಾಗಿದ್ದರು. ದೀನ್ ಷಾ ವಾಚ್ಚಾ ಹಲವಾರು ಬಟ್ಟೆಗಿರಣಿಗಳ ಮಾಲಕರು ಮತ್ತು ಬಟ್ಟೆ ಮಿಲ್ ಮಾಲಕರ ಸಂಘಟನೆಯ ಸದಸ್ಯರಾಗಿದ್ದವರು. ಜೆ. ಎನ್‌ಟಾಟಾರ ಜೀವನ ಚರಿತ್ರೆ ಬರೆದ ಎಫ್. ಆರ್ ಹ್ಯಾರಿಸ್ ಪ್ರಕಾರ ಮೊದಲ ಕಾಂಗ್ರೆಸ್ ಸಭೆಯಲ್ಲಿ ಟಾಟಾ ಕೂಡ ಇದ್ದು ಉದಾರವಾಗಿ ದೇಣಿಗೆಗಳನ್ನು ಆ ಪಕ್ಷಕ್ಕೆ ನೀಡಿದ್ದರು

ಮೊದಲ ಸಭೆಯಲ್ಲಿ ಭಾಗವಹಿಸಿದ ಇತರ ಪ್ರತಿನಿಧಿಗಳು ಆಗಿನ ಬ್ರಿಟಿಷ್ ಸರಕಾರದ ಭಾರತೀಯ ಮೂಲದ ಸೇವಕರು ಹಾಗೂ ಸಲಹೆಗಾರರಾಗಿದ್ದವರು. ಅವರಲ್ಲಿ ದಿವಾನ್ ಬಹಾದೂರ್ ರಘುನಾಥರಾಮ್ ಮದ್ರಾಸಿನ ಡೆಪ್ಯುಟಿ ಕಲೆಕ್ಟರ್ ಆಗಿದ್ದವರು. ಮಹಾದೇವ ರಾನಡೆ ಬ್ರಿಟಿಷರು ರಚಿಸಿದ್ದ ಲೆಜಿಸ್ಲೇಟಿವ್ ಕೌನ್ಸಿಲ್ (ವಿಧಾನ ಪರಿಷತ್ ತರಹದ್ದು)ನ ಮಾಜಿ ಸದಸ್ಯರು ಹಾಗೂ ಪೂನಾದಲ್ಲಿ ಸಣ್ಣ ವ್ಯಾಜ್ಯಗಳ ನ್ಯಾಯಾಧೀಶರಾಗಿದ್ದವರು. ಫಿರೋಝ್ ಷಾ ಮೆಹ್ತಾ ಬಾಂಬೆ ಮುನ್ಸಿಪಲ್ ಕಮಿಷನರಾಗಿದ್ದವರು, ರೊಮೇಶ್ ಚಂದ್ರ ದತ್ತ ವಿಭಾಗೀಯ ಕಮಿಷನರಾಗಿದ್ದರು. ಬ್ರಿಟಿಷ್ ಸರಕಾರ ತನ್ನ ನೌಕರರು ಕಾಂಗ್ರೆಸ್ ಪಕ್ಷದೊಂದಿಗೆ ನೇರವಾಗಿ ಶಾಮೀಲಾಗುವುದಕ್ಕೆ ತಾನೇ ವ್ಯವಸ್ಥೆ ಮಾಡಿತ್ತೆಂದರೆ ಕಾಂಗ್ರೆಸ್ಸಿನ ಹುಟ್ಟು ಯಾಕಾಯಿತು ಎನ್ನುವುದನ್ನು ಊಹಿಸಲು ಕಷ್ಟವೇನಿಲ್ಲ ತಾನೆ.

1915ರಲ್ಲಿ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುತ್ತಾರೆ. ನಂತರ ಅವರೇ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗುತ್ತಾರೆ. ಕೋಲ್ಕತಾದಲ್ಲಿದ್ದ ಮತ್ತೊಂದು ಸಂಘಟನೆಯಾದ ನ್ಯಾಷನಲ್ ಕಾನ್ಫರೆನ್ಸ್ ರಾಷ್ಟ್ರೀಯ ಕಾಂಗ್ರೆಸ್ಸಿನೊಂದಿಗೆ ವಿಲೀನವಾಗುತ್ತದೆ. ಇದಾದ ನಂತರ ಕಾಂಗ್ರೆಸ್ ಇಂತಹ ಪ್ರತಿಷ್ಠಿತರೆನಿಸಿಕೊಂಡವರ ನಾನಾ ಭಾಗಗಳ ಹಲವು ಸಂಘಟನೆಗಳನ್ನು ತನ್ನೊಳಗೆ ವಿಲೀನಗೊಳಿಸುವ ಕೆಲಸಕ್ಕೆ ಇಳಿಯುತ್ತದೆ. ಇದೆಲ್ಲವೂ ಒಂದು ಪೂರ್ವಯೋಜಿತ ಯೋಜನೆಯಾಗಿ ಕಾರ್ಯರೂಪಕ್ಕಿಳಿಸಲಾಗುತ್ತದೆ. ಯಾಕೆಂದರೆ ಕಾಂಗ್ರೆಸ್ಸಿನ ಸ್ಥಾಪನೆಯ ಆರಂಭದಿಂದ ಹಿಡಿದು ನಂತರದ ಕಾರ್ಯಕಲಾಪಗಳಲ್ಲಿ ಬ್ರಿಟಿಷ್ ವೈಸ್ ರಾಯ್ ರಿಪೊನ್ (Ripon)ನ ನೇರ ನಿರ್ದೇಶನವಿರುತ್ತದೆ. ರಿಪೊನ್ 1880ರಿಂದ 1884ರ ವರೆಗೆ ಭಾರತದ ವೈಸ್ ರಾಯ್ ಆಗಿದ್ದ ಬ್ರಿಟಿಷ್ ಅಧಿಕಾರಿ.

1870- 1880ರ ದಶಕಗಳಲ್ಲಿ ಭಾರತದ ಸಾಮಾಜಿಕ ಸ್ಥಿತಿ ಭಾರೀ ಕ್ಷೋಭೆಯಿಂದ ಕೂಡಿದ್ದವು. 1857ರ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ತೀವ್ರತೆಯ ಅರಿವು ಕೂಡ ಬ್ರಿಟಿಷರಿಗೆ ಇತ್ತು . ಬ್ರಿಟಿಷ್ ಭಾರತದ ನಾನಾ ಭಾಗಗಳಲ್ಲಿ ಆದಿವಾಸಿ ಬುಡಕಟ್ಟು ಜನರು, ರೈತಾಪಿಗಳು, ಇನ್ನಿತರ ಜನವರ್ಗಗಳು ಬ್ರಿಟಿಷ್ ಆಡಳಿತಕ್ಕೆ ತೀವ್ರ ಸಡ್ಡು ಹೊಡೆದು ನಿಂತಿದ್ದರು. ಕೇವಲ ಸೇನಾ ಕ್ರಮಗಳಿಂದ ಮಾತ್ರ ಅವನ್ನೆಲ್ಲಾ ದಮನಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಬ್ರಿಟಿಷ್ ಆಡಳಿತಗಾರರಿಗೆ ಆಗಲೇ ಗೊತ್ತಾಗಿ ಹೋಗಿತ್ತು.

 ಕಾಂಗ್ರೆಸ್ ಪಕ್ಷದ ಸ್ಥಾಪನೆಗೂ ಮುನ್ನ ಎ.ಒ.ಹ್ಯೂಮ್ ಬ್ರಿಟಿಷ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಗಳು ಮತ್ತು ಪತ್ರ ವ್ಯವಹಾರಗಳು ಈ ಅಂಶವನ್ನು ಸಾಬೀತುಪಡಿಸುತ್ತವೆ. ಅದಷ್ಟೇ ಅಲ್ಲದೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಂತರ ಕಾರ್ಯನಿರ್ವಹಿಸಿದ ರೀತಿಗಳಿಂದಲೂ ನಾವಿದನ್ನು ಗ್ರಹಿಸಬಹುದು. ಅದು ಯಾವಾಗಲೂ ಬ್ರಿಟಿಷ್‌ಅಧಿಕಾರಿಗಳೊಂದಿಗೆ ನೇರ ಸಂಯೋಜನೆ ಮಾಡಿಕೊಳ್ಳುತ್ತಾ ತನ್ನ ಕಾರ್ಯ ಕಲಾಪಗಳನ್ನು ನಡೆಸಿತ್ತು. ಅಲ್ಲದೇ ನೇರ ಪತ್ರ ವ್ಯವಹಾರಗಳಲ್ಲೂ ತಾನು ನಡೆಸುತ್ತಿರುವ ಕಾರ್ಯಕಲಾಪಗಳ ವರದಿಗಳನ್ನು ಬ್ರಿಟಿಷ್ ಅಧಿಕಾರಿಗಳಿಗೆ ಸಲ್ಲಿಸುತ್ತಿತ್ತು. ಬ್ರಿಟಿಷ್ ವೈಸ್ ರಾಯ್ ರಿಪೊನ್ ಭಾರತದಲ್ಲಿ ನಾಲ್ಕು ವರ್ಷಗಳ ತನ್ನ ಸೇವೆ ಮುಗಿಸಿ ಬ್ರಿಟನ್ನಿಗೆ ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ ನಾನಾ ಭಾಗಗಳಲ್ಲಿ ರಿಪೊನ್‌ಗೆ ಬೀಳ್ಕೊಡುಗೆಗಳನ್ನು ಸಂಘಟಿಸುತ್ತದೆ. ಆತನನ್ನು ಹಾಡಿ ಹೊಗಳುತ್ತದೆ. ಆ ಮೂಲಕ ಕೂಡ ದೇಶದ ಹಲವಾರು ಭಾಗಗಳಲ್ಲಿ ಪ್ರತಿಷ್ಠಿತರೆಂದುಕೊಂಡಿದ್ದ ದೊಡ್ಡ ಭೂಹಿಡುವಳಿದಾರರು, ಶ್ರೀಮಂತ ವಕೀಲರು ನಡೆಸುತ್ತಿದ್ದ ಸಂಘಟನೆಗಳನ್ನು ತನ್ನೊಂದಿಗೆ ವಿಲೀನಗೊಳಿಸುತ್ತಾ ಹೋಗುತ್ತದೆ. ಇಂತಹ ವಿಲೀನಗಳ ಪಟ್ಟಿ ದೊಡ್ಡದಿದೆ..


ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಹುಟ್ಟೇ ಅದರ ಸ್ವಭಾವವನ್ನು ಸ್ವತಹ ತೆರೆದಿಡುತ್ತದೆ. ಆದರೆ ಈ ಮುಖ್ಯ ವಿಚಾರಗಳು ನಮ್ಮ ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿಯೂ ಕೂಡ ಸೇರದೇ ಇರಲು ಕಾರಣಗಳು ಸ್ಪಷ್ಟ. ಜನಸಾಮಾನ್ಯರಿಗೆ ಅವೆಲ್ಲಾ ಗೊತ್ತಾಗಬಾರದು ಅಷ್ಟೇ ಉದ್ದೇಶ. ಹಾಗಾಗಿ ಬಹುತೇಕ ಜನರಿಗೆ ಕಾಂಗ್ರೆಸ್ ಪಕ್ಷದ ಮೂಲ ಸರಿಯಾಗಿ ತಿಳಿದಿಲ್ಲ.
 
ಕಾಂಗ್ರೆಸ್ಸಿನ ಕಾರ್ಯ ಕಲಾಪಗಳು ಬ್ರಿಟಿಷ್ ಸರಕಾರಕ್ಕೆ ಇರಿಸುಮುರಿಸಾಗದಂತೆಯೇ ಮೊದಲಿನಿಂದಲೂ ಇದ್ದಿದ್ದು. ಜನಸಾಮಾನ್ಯರು ನಿಜವಾದ ಸ್ವಾತಂತ್ರ ಹಾಗೂ ಸ್ವಾಯತ್ತತೆಗಳಿಗಾಗಿ ಜೀವದ ಹಂಗು ತೊರೆದು ಹೋರಾಡುತ್ತಿದ್ದರೆ ಕಾಂಗ್ರೆಸ್ ಆ ಹೋರಾಟಗಳನ್ನು ತಣಿಸುವ ಕೆಲಸ ಮಾಡುತ್ತಾ ಬಂದಿತ್ತು. ಜನರ ಗಮನವನ್ನು ತಿರುಗಿಸಲು ಕಾಂಗ್ರೆಸ್ಸಿನ ನಾಯಕರನ್ನು ಬ್ರಿಟಿಷರು ಬಂಧನಕ್ಕೊಳಪಡಿ ಸುತ್ತಿದ್ದುದೂ ನಡೀತಿತ್ತು. ಆಗ ದೊಡ್ಡ ದನಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಗಳನ್ನು ಸಂಘಟಿಸುತ್ತಿತ್ತು. ಬ್ರಿಟಿಷ್ ಆಡಳಿತವನ್ನು ಸಂಪೂರ್ಣವಾಗಿ ಈ ದೇಶದಿಂದ ತೊಲಗಿಸಲು ಜನಸಾಮಾನ್ಯರು ಹೋರಾಡುತ್ತಿದ್ದಾಗ ಕಾಂಗ್ರೆಸ್ ಬ್ರಿಟಿಷ್ ಆಸ್ಥಾನದಲ್ಲಿ ಸಣ್ಣ ಸಣ್ಣ ಸ್ಥಾನಮಾನಗಳಿಗಾಗಿ ಬ್ರಿಟಿಷರನ್ನು ಬೇಡುತ್ತಿತ್ತು. ಜನ ಸಾಮಾನ್ಯರು ಮುಂದಿಡುತ್ತಿದ್ದ ಹಕ್ಕೊತ್ತಾಯಗಳನ್ನು ಬ್ರಿಟಿಷರ ಮುಂದೆ ಇಡುತ್ತಿರಲಿಲ್ಲ. ಅವುಗಳನ್ನು ತಪ್ಪಿಸಿ ಬ್ರಿಟಿಷ್ ಸರಕಾರದಲ್ಲಿ ಕಾಂಗ್ರೆಸ್ಸಿನ ಪ್ರತಿನಿಧಿತ್ವಕ್ಕಾಗಿ ಅವಕಾಶ ಕೋರುವಂತಹ ಸ್ವಾತಂತ್ರದ ಹಕ್ಕೊತ್ತಾಯವನ್ನು ಮರೆಮಾಚುವಂತಹ ಬೇಡಿಕೆಗಳನ್ನು ಮುಂದು ಮಾಡಿ ಪ್ರದರ್ಶನಗಳನ್ನು ಸಂಘಟಿಸುತ್ತಿತ್ತು..

1942ರವರೆಗೂ ಅದು ಬ್ರಿಟೀಷರನ್ನು ದೇಶದಿಂದ ಸಂಪೂರ್ಣವಾಗಿ ಓಡಿಸುವ ಬಗ್ಗೆ ಮಾತಾಡಿರಲಿಲ್ಲ. 1942ರಲ್ಲಿ ಎಲ್ಲೆಡೆಯಿಂದಲೂ ಬ್ರಿಟಿಷರನ್ನು ಸಂಪೂರ್ಣವಾಗಿ ಓಡಿಸುವ ದನಿಗಳು ಶಕ್ತವಾಗತೊಡಗಿದಾಗ ಕಾಂಗ್ರೆಸ್ ಕೂಡ ತನ್ನದೂ ಕೂಡ ಅದೇ ದನಿ ಎಂಬಂತೆ ಹೇಳಿತ್ತು. ಅದು ಕೊಟ್ಟ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣೆಗೆ ಚಾರಿತ್ರಿಕ ಮಹತ್ವವನ್ನು ನೀಡಿ ಮೊದಲಿನಿಂದಲೂ ಜನಸಾಮಾನ್ಯರು ಬ್ರಿಟಿಷ್ ಭಾರತದ ಉದ್ದಗಲಕ್ಕೂ ಅದೇ ಘೋಷಣೆಯೊಂದಿಗೆ ಹೋರಾಡಿದ್ದನ್ನು ಮರೆಮಾಚುವ ಕೆಲಸ ಮಾಡಲಾಯಿತು. ಗಾಂಧಿಯ ‘ಅಹಿಂಸಾ ಸಿದ್ದಾಂತ’ವನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಬ್ರಿಟೀಷರು ನಡೆಸುತ್ತಿದ್ದ ಹಿಂಸಾಕಾಂಡಗಳನ್ನು ಬಲವಾಗಿ ವಿರೋಧಿಸುತ್ತಿರಲಿಲ್ಲ. ಭಗತ್ ಸಿಂಗ್ ನಂತಹವರನ್ನು ನೇಣಿಗೆ ಹಾಕಿದಾಗಲೂ ಕಾಂಗ್ರೆಸ್ ಪ್ರತಿಭಟಿಸಿರಲಿಲ್ಲ. ಆಗ ಕಾಂಗ್ರೆಸ್‌ಗಿಂತಲೂ ಭಗತ್ ಸಿಂಗ್ ಮತ್ತವರ ಸಂಗಾತಿಗಳನ್ನು ಎಲ್ಲಾ ಕಡೆಯ ಜನರು ಭಾರೀ ಮಟ್ಟದಲ್ಲಿ ಬೆಂಬಲಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ಯಾರಿಗೂ ತಿಳಿಯದಂತೆ ನೇಣಿಗೆ ಹಾಕಿ ಕೊನೆಗೆ ಅವರ ಶವಗಳನ್ನೂ ಕೂಡ ವಾರಸುದಾರರಿಗೆ ನೀಡದೇ ಸುಟ್ಟುಹಾಕಿದ್ದರು ಬ್ರಿಟಿಷರು. (ಇವೆಲ್ಲದರ ಬಗೆಗಿನ ಹೆಚ್ಚಿನ ವಿವರಗಳಿಗೆ ‘ಫ್ರೀಡಂ ಸ್ಟ್ರಗಲ್ ಬಿಟ್ರೇಯ್ಡಿ’ ಎಂಬ ಮುಂಬೈಯ ರಿಸರ್ಚ್ ಯೂನಿಟ್ ಫಾರ್‌ಪೊಲಿಟಿಕಲ್ ಎಕಾನಮಿ ಯವರು ಪ್ರಕಟಿಸಿದ ಸುನಿತಿ ಕುಮಾರ್ ಘೋಷ್ ಬರೆದ ಆಂಗ್ಲ ಪುಸ್ತಕವನ್ನು ಓದಿಕೊಳ್ಳಬಹುದು. ಇದು ‘ಮಹಾ ದ್ರೋಹ’ ಎಂಬ ಹೆಸರಿನಲ್ಲಿ ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್ ನಿಂದ ಕನ್ನಡದಲ್ಲಿಯೂ ಅನುವಾದವಾಗಿ ಪ್ರಕಟವಾಗಿದೆ. ಆಂಗ್ಲ ಮಾಹಿತಿಗಾಗಿ ಈ ಮುಂದಿನ ಅಂತರ್ಜಾಲ ತಾಣವನ್ನು ಕೂಡ ನೋಡಬಹುದು. http://www.wengewang.org/read.php?tid=22618&page=5&fpage=1)
1947ರ ಆಗಸ್ಟ್ ಹದಿನೈದರ ಮಧ್ಯ ರಾತ್ರಿ ಇದೇ ಕಾಂಗ್ರೆಸ್ ಪಕ್ಷದ ಕೈಗೆ ಬ್ರಿಟಿಷರು ಅಧಿಕಾರವನ್ನು ಹಸ್ತಾಂತರಿಸುತ್ತಾರೆ. ಮೊದಲ ಪ್ರಧಾನಿಯಾಗಿ ಕಾಶ್ಮೀರಿ ಪಂಡಿತ ಸಮುದಾಯದ ಜವಾಹರ ಲಾಲ್ ನೆಹರೂ ಅಧಿಕಾರ ಸೂತ್ರ ಹಿಡಿಯುತ್ತಾರೆ. 1951 ಮತ್ತು 1952ರಲ್ಲಿ ನಡೆದ ಬ್ರಿಟಿಷ್ ನಂತರದ ಭಾರತದ ಮೊದಲ ಲೋಕಸಭಾ ಮತ್ತು ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಸರಕಾರ ರಚಿಸಲು ಆಯ್ಕೆಯಾಗುತ್ತದೆ.

 ಭಾರತದಲ್ಲಿ ಅತೀ ಹೆಚ್ಚುಕಾಲ ಅಧಿಕಾರದಲ್ಲಿರುತ್ತಾ ಬಂದ ಪಕ್ಷವದು. ಜೊತೆಗೆ ಭಾರತ ಇಂದು ಎದುರಿಸುತ್ತಿರುವ ಜಾತೀಯ ದೌರ್ಜನ್ಯಗಳು, ಬ್ರಾಹ್ಮಣಶಾಹಿ ಹಿಂದೂ ಕೋಮುವಾದಿ ದೌರ್ಜನ್ಯಗಳು, ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ಭಾರತದ ಜನಸಾಮಾನ್ಯರನ್ನು ಎಲ್ಲಾ ಕಡೆಗಳಿಂದಲೂ ಕೊಳ್ಳೆ ಹೊಡೆಯುವಂತಹ ಸ್ಥಿತಿ ಬರಲು ಪ್ರಧಾನ ಕಾರಣ ಕಾಂಗ್ರೆಸ್ಸೇ ಆಗಿದೆ ಎಂದರೆ ಸುಳ್ಳೇನೂ ಅಲ್ಲ. ಅದು ಜನರನ್ನು ಒಡೆಯುತ್ತಾ, ದಮನಿಸುತ್ತಾ, ಕೊಳ್ಳೆ ಹೊಡೆಯುತ್ತಾ ಆಡಳಿತ ನಡೆಸುವುದರಲ್ಲಿ ಇತರ ಎಲ್ಲಾ ಪಕ್ಷಗಳಿಗಳಿಗಿಂತಲೂ ಚೆನ್ನಾಗಿ ಪಳಗಿರುವ ಪಕ್ಷವೆಂದು ಈಗಾಗಲೇ ಭಾರತದ ಜನಸಾಮಾನ್ಯರಿಗೆ ಗೊತ್ತಿರುವಂತಹದ್ದೇ ಆಗಿದೆ.
ಭಾರತದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ನಗಣ್ಯವೆನ್ನುವ ಮಟ್ಟಕ್ಕೆ ಇಳಿದಿದೆ. ಅದಕ್ಕೆ ಮುಖ್ಯವಾಗಿ ಇದ್ದಿದ್ದು ಕರ್ನಾಟಕವೊಂದೇ ಆಗಿತ್ತು. ಅದೂ ಈಗ ಕೈ ತಪ್ಪಿದೆ. ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಎರಡು ದಶಕಗಳ ನಂತರ ಐದು ವರ್ಷ ಪೂರೈಸಿದ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಹಿರಿಮೆ ಸಿದ್ದರಾಮಯ್ಯರದಾಗಿದೆ. ಆದರೆ ಅವರು ಮೂಲ ಕಾಂಗ್ರೆಸಿನವರಾಗಿರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ನಾಯಕತ್ವದ ನಿರ್ವಾತವನ್ನು ತುಂಬಲು ಸಾಪೇಕ್ಷವಾಗಿ ಜನಬೆಂಬಲವಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಳಸಿಕೊಂಡಿತು. ಸಿದ್ದರಾಮಯ್ಯರೂ ಕೂಡ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಂಡರು.
 ಕಾಂಗ್ರೆಸ್ಸಿನ ಎಲ್ಲಾ ಬಣ್ಣಗಳೂ ಜನರ ಮುಂದೆ ಬಯಲಾಗಿ ಕೂತಿರುವಾಗ ಈಗ ಮೋದಿಯ ಬಿಜೆಪಿ ಪಕ್ಷ ಮುನ್ನೆಲೆಗೆ ಬಂದು ಕಾಂಗ್ರೆಸ್ಸಿನ ಅವೇ ನೀತಿಗಳನ್ನೇ ಆಕ್ರಮಣಶೀಲತೆಯಿಂದ ಪಾಲಿಸುತ್ತಿರುವುದು ಮೇಲ್ನೋಟಕ್ಕೇ ಕಾಣಿಸುವಂತಹ ವಿಚಾರ. ಜನಸಾಮಾನ್ಯರಿಗಂತೂ ಯಾರೇ ಅಧಿಕಾರಕ್ಕೆ ಬಂದರೂ ‘ರಾಗಿ ಬೀಸೋದು ತಪ್ಪುತ್ತಲೇ ಇಲ್ಲ’. ಈಗಂತೂ ರಾಗಿ ಬೀಸೋದು ಇರಲಿ, ರಾಗಿ ಕೊಳ್ಳಲೇ ಜನರ ಬಳಿ ಕಾಸೇ ಇಲ್ಲದಿರುವ ಸ್ಥಿತಿ.

Writer - ನಂದಕುಮಾರ್. ಕೆ.ಎನ್

contributor

Editor - ನಂದಕುಮಾರ್. ಕೆ.ಎನ್

contributor

Similar News

ಜಗದಗಲ
ಜಗ ದಗಲ