ಶಿವಮೊಗ್ಗ-ಬಳ್ಳಾರಿ- ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ ಮೊದಲ ವಾರದಲ್ಲಿ ಉಪ ಚುನಾವಣೆ ?

Update: 2018-10-01 18:25 GMT

ಶಿವಮೊಗ್ಗ, ಸೆ. 24: ಮುಂದಿನ ವರ್ಷ 2019 ರ ಏಪ್ರಿಲ್ - ಮೇ ಮಾಹೆಯಲ್ಲಿ ನಡೆಯಲಿರುವ 17 ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ಈಗಿನಿಂದಲೇ ರಾಜಕೀಯ ಪಕ್ಷಗಳು ಸಕಲ ಸಿದ್ದತೆ ನಡೆಸಲಾರಂಭಿಸಿವೆ. ಇದಕ್ಕೂ ಮುನ್ನ ಈ ವರ್ಷದ ನವೆಂಬರ್ ನಲ್ಲಿ ರಾಜೀನಾಮೆಯಿಂದ ಖಾಲಿ ಉಳಿದಿರುವ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ. 

ಎಲ್ಲ ಅಂದುಕೊಂಡಂತೆ ನಡೆದರೆ, ನವೆಂಬರ್ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಯಬಹುದು. ಅಕ್ಟೋಬರ್ ಎರಡನೇ ವಾರದಲ್ಲಿ ಮಾದರಿ ನೀತಿ-ಸಂಹಿತೆ ಘೋಷಣೆಯಾಗಬಹುದು ಎಂದು ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. ಆದರೆ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವ ಕುರಿತಂತೆ ಕೇಂದ್ರ ಅಥವಾ ರಾಜ್ಯ ಚುನಾವಣಾ ಆಯೋಗದಿಂದ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ಮಾಹಿತಿ ಪ್ರಕಟವಾಗಿಲ್ಲ. 

ಇದರಿಂದ 'ಉಪ ಚುನಾವಣೆ'ಯ ಗೊಂದಲ ಮುಂದುವರಿಯುವಂತಾಗಿದೆ. ಇಷ್ಟೆಲ್ಲದರ ನಡುವೆಯೂ ಮೂರು ಜಿಲ್ಲಾಡಳಿತಗಳು ಉಪ ಚುನಾವಣಾ ಪೂರ್ವಭಾವಿ ತಯಾರಿ ನಡೆಸಲಾರಂಭಿಸಿವೆ. ಮತದಾರರ ಪಟ್ಟಿ, ಬೂತ್‍ಗಳ ವ್ಯವಸ್ಥೆ, ಚುನಾವಣಾ ಕಾರ್ಯಕ್ಕೆ ಅಗತ್ಯವಾದ ಸಿಬ್ಬಂದಿಗಳ ವ್ಯವಸ್ಥೆಯಂತಹ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. 

ರಾಜ್ಯ ಚುನಾವಣಾ ಆಯೋಗ ಕೂಡ, ಮೂರು ಜಿಲ್ಲಾಡಳಿತಗಳಿಗೆ ಚುನಾವಣಾ ಪೂರ್ವಭಾವಿ ತಯಾರಿ ಮಾಡಿಟ್ಟುಕೊಳ್ಳುವಂತೆ ಈ ಹಿಂದೆಯೇ ನಿರ್ದೇಶನ ರವಾನಿಸಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಸಾರ್ವತ್ರಿಕ ಚುನಾವಣೆಗೆ ಐದಾರು ತಿಂಗಳಿರುವಂತೆಯೇ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಬೈ ಎಲೆಕ್ಷನ್ ಮತದಾನಕ್ಕೆ ಸಿದ್ದವಾಗಬೇಕಾಗಿದೆಯಾ? ಎಂಬ ಕುತೂಹಲ ಕೆರಳುವಂತೆ ಮಾಡಿದೆ. 

ನಿಯಮವೇನು?: ಲೋಕಸಭಾ ಸದಸ್ಯರುಗಳಾಗಿದ್ದ ಶಿವಮೊಗ್ಗ ಕ್ಷೇತ್ರದ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಕ್ಷೇತ್ರದ ಸದಸ್ಯ ಬಿ.ಶ್ರೀರಾಮುಲು ಹಾಗೂ ಮಂಡ್ಯ ಕ್ಷೇತ್ರದ ಸದಸ್ಯ ಸಿ.ಎಸ್.ಪುಟ್ಟರಾಜುರವರು ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕ್ರಮವಾಗಿ ಶಿಕಾರಿಪುರ, ಬಳ್ಳಾರಿ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. 

ಲೋಕಸಭೆ ಅಥವಾ ವಿಧಾನಸಭೆ ಸದಸ್ಯತ್ವಗಳಲ್ಲಿ ಒಂದನ್ನು ಈ ಸದಸ್ಯರು ಉಳಿಸಿಕೊಳ್ಳಬೇಕಾಗಿತ್ತು. ಶಾಸಕತ್ವ ಉಳಿಸಿಕೊಳ್ಳಲು ನಿರ್ಧರಿಸಿದ ಈ ಮೂವರು, ಕಳೆದ ಮೇ ತಿಂಗಳಲ್ಲಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸ್ಪೀಕರ್ ಸುಮಿತ್ರ ಮಹಾಜನ್‍ರವರು ಈ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಿದ್ದರು. ಇವರ ರಾಜೀನಾಮೆಯಿಂದ ಈ ಮೂರು ಕ್ಷೇತ್ರಗಳು ಖಾಲಿ ಉಳಿದಿವೆ. 

ಚುನಾಯಿತ ಸದಸ್ಯರ ರಾಜೀನಾಮೆ ಅಥವಾ ಇತರೆ ಕಾರಣಗಳಿಂದ ಕ್ಷೇತ್ರ ಖಾಲಿ ಉಳಿದ ವೇಳೆ, ನಿಯಮಾನುಸಾರ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಹೊಸ ಸದಸ್ಯರ ಆಯ್ಕೆ ಮಾಡಬೇಕು. ಈ ಅಕ್ಟೋಬರ್ ಎರಡನೇ ವಾರಕ್ಕೆ ಈ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆಯಿತ್ತು ಆರು ತಿಂಗಳಾಗುತ್ತದೆ. ಒಂದು ವೇಳೆ ಉಪ ಚುನಾವಣೆ ನಡೆಸಲು ಆಯೋಗ ಮುಂದಾದರೆ, ಅಕ್ಟೋಬರ್ ಎರಡನೇ ವಾರದಿಂದ ಚುನಾವಣಾ ಪ್ರಕ್ರಿಯೆಯಗಳನ್ನು ಆರಂಭಿಸುವುದು ಅನಿವಾರ್ಯವಾಗಲಿದೆ. 

ಅವಕಾಶವಿದೆ: ಒಂದು ವೇಳೆ ಅದೇ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವತ್ರಿಕ ಚುನಾವಣೆ ಹತ್ತಿರವಿದ್ದ ವೇಳೆ, ಆಯ್ಕೆಗೊಳ್ಳುವ ಸದಸ್ಯರ ಅಧಿಕಾರಾವಧಿ 1 ವರ್ಷಕ್ಕಿಂತ ಕಡಿಮೆಯಿದ್ದಾಗ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಾಧ್ಯತೆ ಕಡಿಮೆ. ಜನಪ್ರತಿನಿಧಿ ಕಾಯ್ದೆ 1951 ರ ಕಲಂ 151 (ಎ) ನಲ್ಲಿ ಈ ಕುರಿತಂತೆ ಸ್ಪಷ್ಟವಾಗಿ ಹೇಳಲಾಗಿದೆ. ಚುನಾವಣೆ ನಡೆಸಲು ಸಾಧ್ಯವಾಗದಿರುವ ಕುರಿತಂತೆ ಆಯೋಗವು ಕೇಂದ್ರದೊಂದಿಗೆ ಚರ್ಚಿಸಿ ಮಾಹಿತಿ ನೀಡುತ್ತದೆ. 
ಪ್ರಸ್ತುತ 16 ನೇ ಲೋಕಸಭೆ ಅವಧಿ ಪೂರ್ಣಕ್ಕೆ ಇನ್ನೂ ಸರಿಸುಮಾರು ಏಳೆಂಟು ತಿಂಗಳು ಬಾಕಿಯಿದೆ. ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆಯ 17 ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ಈ ಕಾರಣದಿಂದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಸಾಧ್ಯತೆಗಳು ಕಡಿಮೆ ಎಂಬ ಮಾತುಗಳು ಇವೆ. 

ಆಸಕ್ತಿಯಿಲ್ಲ: ಉಪ ಚುನಾವಣೆಯ ಬಗ್ಗೆ ರಾಜಕೀಯ ಪಕ್ಷಗಳಲ್ಲಿಯೂ ಆಸಕ್ತಿಯಿಲ್ಲವಾಗಿದೆ. ಕೇವಲ ನಾಲ್ಕೈದು ತಿಂಗಳಿಗೆ ಚುನಾವಣೆ ನಡೆಸುವುದರಿಂದ ಯಾವುದೇ ಲಾಭವಿಲ್ಲ. ಇದರಿಂದ ಅನಗತ್ಯ ಆರ್ಥಿಕ ಹೊರೆ ಬೀಳುತ್ತದೆ. ಜೊತೆಗೆ ಈ ಚುನಾವಣೆಯ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳಿರುವ ಕಾರಣದಿಂದ, ಬಹುತೇಕ ರಾಜಕೀಯ ಪಕ್ಷಗಳು ಉಪ ಚುನಾವಣೆ ಬಗ್ಗೆ ನಿರಾಸಕ್ತಿ ಭಾವ ತಳೆದಿವೆ. 
ಒಟ್ಟಾರೆ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆಯಾ? ಇಲ್ಲವೆ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿದೆ. ಈ ಕುರಿತಂತೆ ಚುನಾವಣಾ ಆಯೋಗವು ಇಲ್ಲಿಯವರೆಗೂ ಅದಿಕೃತವಾಗಿ ಏನನ್ನೂ ಹೇಳದಿರುವುದರಿಂದ ಸಾಕಷ್ಟು ಕುತೂಹಲ ಕೆರಳುವಂತೆಯೂ ಮಾಡಿದೆ. 

ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಅಡೆತಡೆ!
ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಸಂಸತ್ ಸದಸ್ಯರು ರಾಜೀನಾಮೆ ನೀಡಿರುವುದರಿಂದ ಕಳೆದ ಐದಾರು ತಿಂಗಳಿನಿಂದ ಕೇಂದ್ರ ಸರ್ಕಾರದ ಹಂತದಲ್ಲಿ ಈ ಕ್ಷೇತ್ರಗಳಿಗೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಇದರಿಂದ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಅಡೆತಡೆ ಉಂಟಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಂಸದರ ಅನುದಾನದಡಿ ಈ ಹಿಂದೆ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೂ ಸೂಕ್ತ ಅನುದಾನ ಬಿಡುಗಡೆಯಾಗದಿರುವ ಹಾಗೂ ಕೆಲ ಕಾಮಗಾರಿಗಳು ಸ್ಥಗಿತಗೊಂಡಿರುವ ದೂರುಗಳು ಕೂಡ ಕೇಳಿಬರುತ್ತಿವೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News