ಗಾಂಧಿ ಎಂಬ ಗಂಧದ ಕೊರಡು

Update: 2018-10-01 18:33 GMT

ಹಾತ್ಮಾ ಗಾಂಧೀಜಿಯವರು ಸಂತರ ಗುಣವನ್ನು ಹೊಂದಿದ್ದ ಕಾರಣ ಅವರು ಆಧ್ಯಾತ್ಮಿಕ ಲೋಕದಲ್ಲಿದ್ದುಕೊಂಡು ಲೌಕಿಕ ಜಗತ್ತಿಗೆ ಮಾರ್ಗದರ್ಶನ ಮಾಡಬೇಕೆಂಬುದು ಸೂಫಿ ಸಂತರೊಬ್ಬರ ಆಶಯವಾಗಿತ್ತು. ಗಾಂಧೀಜಿಯವರಿಗೆ ಈ ಕುರಿತು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಅವರಲ್ಲಿಗೆ ಹೋದರು. ಆ ಸಂದರ್ಭದಲ್ಲಿ ಗಾಂಧೀಜಿಯವರ ಆರೋಗ್ಯ ಹದಗೆಟ್ಟಿತ್ತು. ಬೆಂಗಳೂರು ಬಳಿಯ ನಂದಿ ಗಿರಿಧಾಮದಲ್ಲಿ ಉಳಿದುಕೊಳ್ಳು ವುದಾಗಿಯೂ ತಾವು ಅಲ್ಲಿಗೆ ಬಂದರೆ ಮಾತನಾಡಬಹುದೆಂದು ಗಾಂಧೀಜಿಯವರು ಆ ಸೂಫಿ ಸಂತರಿಗೆ ತಿಳಿಸಿದರು.

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಾಗಿ ಗಾಂಧೀಜಿಯವರು 1936ನೇ ಮೇ 31ರ ವರೆಗೆ ಒಟ್ಟು 45 ದಿನಗಳ ವರೆಗೆ ನಂದಿ ಗಿರಿಧಾಮದಲ್ಲಿದ್ದರು. ಪಟ್ಟುಬಿಡದ ಆ ಸೂಫಿ ಸಂತರು ಈ ಸಂದರ್ಭದಲ್ಲಿ ಗಾಂಧೀಜಿಯವರ ಮನವೊಲಿಸುವುದಕ್ಕಾಗಿ ನಂದಿಬೆಟ್ಟಕ್ಕೆ ಹೋದರು. ಗಾಂಧೀಜಿಯವರನ್ನು ಕಂಡಕೂಡಲೆ ಅವರ ಮನಸ್ಸಿಗೆ ಕಿರಿಕಿರಿಯಾಯಿತು. ಏನು ಮಾಡಬೇಕಾದ ಮನುಷ್ಯ ಏನು ಮಾಡುತ್ತಿದ್ದಾರೆ ಎಂದು ಅವರಿಗೆ ಅನಿಸಿತು. ‘‘ಇದೇನು ಮಾಡುತ್ತಿರುವಿರಿ ಮಹಾತ್ಮರೆ’’ ಎಂದು ಬೇಸರದಿಂದ ಕೇಳಿದರು. ಆಗ ಗಾಂಧೀಜಿಯವರು ‘‘ಬನ್ನಿ ಬಾಂಬ್ ತಯಾರಿಸುತ್ತಿದ್ದೇನೆ’’ ಎಂದು ಪ್ರಸನ್ನಚಿತ್ತರಾಗಿ ಹೇಳಿದರು. ಹೌದು ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ನಿರ್ನಾಮ ಮಾಡುವುದಕ್ಕಾಗಿ ಬಾಂಬ್ ತಯಾರಿಸುತ್ತಿದ್ದರು!
ಆ ಸೂಫಿ ಸಂತ ಭೇಟಿಯಾದ ಸಂದರ್ಭದಲ್ಲಿ ಗಾಂಧೀಜಿಯವರು ಚರಕ ಹಿಡಿದು ನೂಲು ತೆಗೆಯುತ್ತಿದ್ದರು. ನೂಲು ಸುತ್ತಿ ಸುತ್ತಿ ಚರಕದ ಉರುಳೆ ಬಾಂಬಿನ ಹಾಗೆ ಕಾಣುತ್ತಿತ್ತು. ಬಡರಾಷ್ಟ್ರಗಳು ಸ್ವಾವಲಂಬನೆ ಸಾಧಿಸಲು ಸಹಾಯಕವಾಗುವ ವಸ್ತುಗಳೆಲ್ಲ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಬಾಂಬ್‌ಗಳ ಹಾಗೆ ಕಾಣುತ್ತವೆ ಎಂಬುದು ಗಾಂಧೀಜಿಯವರು ಕಂಡುಕೊಂಡ ಸತ್ಯವಾಗಿತ್ತು. ಗಾಂಧೀಜಿಯವರ ಸ್ವದೇಶಿ ಆಂದೋಲನದಿಂದಾಗಿ ಇಂಗ್ಲೆಂಡಿನಲ್ಲಿ ಮ್ಯಾಂಚೆಸ್ಟರ್ ಮತ್ತು ಯಾರ್ಕ್‌ಷೈರ್ ಕಡೆಗಳಲ್ಲಿ ಬಹಳಷ್ಟು ಜವಳಿ ಗಿರಣಿಗಳು ಭಾರತದಲ್ಲಿ ಮಾರುಕಟ್ಟೆ ಕಳೆದುಕೊಂಡು ಬಂದಾದವು. ತಮ್ಮ ವಸ್ತುಗಳ ಮಾರಾಟಕ್ಕಾಗಿ ಹೆಚ್ಚು ಹೆಚ್ಚು ಮಾರುಕಟ್ಟೆಗಳು ಸಿಕ್ಕಂತೆಲ್ಲ ಸಾಮ್ರಾಜ್ಯಶಾಹಿ ಶಕ್ತಿ ಪ್ರಬಲವಾಗುತ್ತ ಹೋಗುತ್ತದೆ. ಮಾರುಕಟ್ಟೆಗಳನ್ನು ಕಳೆದುಕೊಂಡಂತೆಲ್ಲ ದುರ್ಬಲವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾಮ್ರಾಜ್ಯಶಾಹಿ ವ್ಯವಸ್ಥೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ವಸ್ತುಗಳ ಬೆಲೆಗಳು ಸಹಜವಾಗಿಯೇ ಸ್ಥಳೀಯರು ಸಾಂಪ್ರದಾಯಿಕವಾಗಿ ಉತ್ಪಾದಿಸುವ ಬೆಲೆಗಳಿಗಿಂತ ಕಡಿಮೆಯದ್ದಾಗಿರುತ್ತವೆ. ಇಂತಹ ಕಡಿಮೆ ಬೆಲೆಯ ವಸ್ತಗಳೇ ಸಾಮ್ರಾಜ್ಯಶಾಹಿ ವ್ಯವಸ್ಥೆಯ ನಿಜವಾದ ಸೈನ್ಯ ಎಂದು ಕಾರ್ಲ್ ಮಾರ್ಕ್ಸ್ 1858ರಲ್ಲೇ ಹೇಳಿದ್ದಾರೆ. ಸಾಮ್ರಾಜ್ಯಶಾಹಿಗಳ ವಸ್ತುಗಳು ಚೀನಾ ಗೋಡೆಯನ್ನೂ ದಾಟುವುವು ಮತ್ತು ಆದಿವಾಸಿಗಳ ತಾಣಗಳನ್ನೂ ತಲುಪುವುವು ಎಂದು ಮಾರ್ಕ್ಸ್ ತಿಳಿಸಿದ್ದಾರೆ. ಸಾಮ್ರಾಜ್ಯಶಾಹಿಗಳನ್ನು ಸೋಲಿಸಬೇಕೆಂದರೆ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಾವಲಂಬಿಯಾಗುವುದೊಂದೇ ದಾರಿ ಎಂಬುದನ್ನು ಗಾಂಧೀಜಿ ಪ್ರತಿಪಾದಿಸುತ್ತಿದ್ದರು.
1936ಕ್ಕೆ ಮೊದಲೇ ಗಾಂಧೀಜಿ ತಮ್ಮ ಚರಕ ಎಂಬ ಆಯುಧದ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತ ಸಾಗಿದ್ದರು. 1931ರಲ್ಲಿ ನಡೆದ ಎರಡನೇ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧೀಜಿಯವರು ಇಂಗ್ಲೆಂಡಿಗೆ ಹೋದ ಸಂದರ್ಭದಲ್ಲಿ, ಕಾರ್ಮಿಕರ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಜವಳಿ ಕಾರ್ಖಾನೆಗಳ ನಗರವಾದ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದಾಗ ಕಾರ್ಖಾನೆಗಳು ಬಂದಾಗಿದ್ದನ್ನು ಕಣ್ಣಾರೆ ಕಂಡರು. ಅಲ್ಲಿನ ಬಹುಪಾಲು ಕಾರ್ಮಿಕರು ಕೆಲಸವಿಲ್ಲದೆ ಅರೆಹೊಟ್ಟೆ ಜೀವನ ಸಾಗಿಸುತ್ತಿದ್ದುದನ್ನು ಕಂಡು ಗಳಗಳನೆ ಅತ್ತರು. ಅಲ್ಲಿನ ಕಾರ್ಮಿಕ ಮಹಿಳೆಯರು ಅವರ ಕಣ್ಣೀರು ಒರೆಸಿ ಮಗುವಿನಂತೆ ಎತ್ತಿಕೊಂಡರು. ನಿಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಉಪವಾಸವಿರಲು ಸಿದ್ಧರಿದ್ದೇವೆ ಎಂದು ಹೇಳಿದರು! ಆ ಮೂಲಕ ಅವರೆಲ್ಲ ದುಡಿಯುವ ವರ್ಗದ ಅಂತರ್‌ರಾಷ್ಟ್ರೀಯ ಪ್ರಜ್ಞೆಯ ಸಾಕಾರ ಮೂರ್ತಿಗಳಾಗಿ ಗಾಂಧೀಜಿಯವರಿಗೆ ಕಂಡರು.
ಗಾಂಧೀಜಿಯವರು ಕೂಡ ಅಂತರ್‌ರಾಷ್ಟ್ರೀಯ ಪ್ರಜ್ಞೆಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಮನುಷ್ಯರನ್ನು ಧರ್ಮ, ಜಾತಿ, ಮತ, ಪಂಥ, ದೇಶ ಮತ್ತು ಭಾಷೆಯನ್ನು ಮೀರಿ ನೋಡುವ ಉದಾತ್ತ ದೃಷ್ಟಿಕೋನವನ್ನು ಹೊಂದಿದ್ದರು.
ದಕ್ಷಿಣ ಆಫ್ರಿಕಾದ ನತಾಲ್ ಪ್ರಾಂತ ಕಬ್ಬು ಬೆಳೆಗೆ ಪ್ರಸಿದ್ಧವಾಗಿತ್ತು. ಜುಲು ಬುಡುಕಟ್ಟಿನ ಕಪ್ಪುಜನರ ಪ್ರದೇಶ ಅದಾಗಿರುವುದರಿಂದ ಆ ಪ್ರದೇಶಕ್ಕೆ ಜುಲುಲ್ಯಾಂಡ್ ಎಂದೇ ಕರೆಯುವರು. ಈ ಜನ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವಲ್ಲಿ ಆಸಕ್ತಿ ತೋರಿಸದ ಕಾರಣ ಅಲ್ಲಿನ ಶ್ರೀಮಂತ ಕಬ್ಬು ಬೆಳೆಗಾರರು 1860ರಲ್ಲಿ ಅಂದಿನ ಬ್ರಿಟಿಷ್ ಭಾರತ ಸರಕಾರದೊಂದಿಗೆ ವ್ಯವಹರಿಸಿ ಭಾರತೀಯ ಕೂಲಿಗಳನ್ನು ಕರೆಸಿಕೊಂಡರು. ಆದರೆ ಆ ಕೂಲಿಗಳ ಆಹಾರ ಪದ್ಧತಿಯ ಪ್ರಕಾರ ಆಹಾರ ಸಾಮಗ್ರಿಗಳನ್ನು ಒದಗಿಸಲಿಕ್ಕಾಗಲಿಲ್ಲ. ಆದ್ದರಿಂದ ಭಾರತೀಯ ವ್ಯಾಪಾರಿಗಳೂ ದಕ್ಷಿಣ ಆಫ್ರಿಕಾಗೆ ಹೋಗಬೇಕಾಯಿತು. ಹೀಗೆ ಎರಡೂ ವರ್ಗಗಳ ಭಾರತೀಯರು ದಕ್ಷಿಣ ಆಫ್ರಿಕಾದ ಭಾಗವಾದರು.
ಈ ಹಿನ್ನೆಲೆಯಲ್ಲಿ ಗಾಂಧೀಜಿಯವರು ತರುಣ ವಕೀಲರಾಗಿ 1893ನೇ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾಗೆ ಬಂದರು. ಅಲ್ಲಿನ ಜನಾಂಗೀಯ ತಾರತಮ್ಯ ಅವರನ್ನು ಸತ್ಯಾಗ್ರಹಿಯಾಗಿ ಪರಿವರ್ತಿಸಿತು. ರಾಜಕೀಯ ಶಕ್ತಿ ಇಲ್ಲದೆ ಯಾವ ಹೋರಾಟಗಳೂ ಸಫಲವಾಗುವುದಿಲ್ಲ ಎಂಬುದರ ಮನವರಿಕೆಯಾಯಿತು. 1894ನೇ ಮೇ 22ರಂದು ನತಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪಿಸಿದರು. ಅಲ್ಲಿಯ ವರೆಗೆ ದಕ್ಷಿಣ ಆಫ್ರಿಕಾದ ಕರಿಯರಿಗೆ, ಮಿಶ್ರವರ್ಣೀಯರಿಗೆ ಮತ್ತು ಅಲ್ಲಿನ ಭಾರತೀಯ ಮೂಲದ ಪ್ರಜೆಗಳಿಗೆ ರಾಜಕೀಯ ಪಕ್ಷದ ಪರಿಜ್ಞಾನವೇ ಇರಲಿಲ್ಲ. ಬಿಳಿಯರಲ್ಲದ ಈ ಎಲ್ಲ ಜನಾಂಗಗಳ ಮೊದಲ ಸಂಘಟನೆಯಾಗಿ ನತಾಲ್ ಇಂಡಿಯನ್ ಕಾಂಗ್ರೆಸ್ ಬೆಳೆಯಿತು. ಮುಂದೆ 1912ರಲ್ಲಿ ಸ್ಥಾಪನೆಯಾದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ಗೆ ಇದು ಸ್ಫೂರ್ತಿಯಾಯಿತು. 1918ರಲ್ಲಿ ಜನಿಸಿದ ನೆಲ್ಸನ್ ಮಂಡೇಲಾ ಅವರು ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆದು ದಕ್ಷಿಣ ಆಫ್ರಿಕಾವನ್ನು ಬಿಳಿಯರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದರು.
 ‘‘ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಇರುವಂಥ ಅತ್ಯಂತ ಹಳೆಯ ರಾಜಕೀಯ ಸಂಘಟನೆ ನತಾಲ್ ಇಂಡಿಯನ್ ಕಾಂಗ್ರೆಸ್ ಅನ್ನು 1894ರಲ್ಲಿ ಮಹಾತ್ಮಾ ಗಾಂಧಿ ಅವರು ಸ್ಥಾಪಿಸಿದರು. ಅವರು ಅದರ ಮೊದಲ ಕಾರ್ಯದರ್ಶಿಗಳಾದರು. ಇಲ್ಲಿ ಇದ್ದಂತಹ 21 ವರ್ಷಗಳ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ಇತಿಹಾಸದ ಮೇಲೆ ಅಗಣಿತ ಪ್ರಭಾವವನ್ನು ಬೀರುವಂಥ ವಿಚಾರ ಮತ್ತು ಹೋರಾಟಗಳ ಹುಟ್ಟಿಗೆ ನಾವು ಸಾಕ್ಷಿಯಾದೆವು. ಹಾಗೆ ನೋಡಿದರೆ ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದ ನೆಲದ ಮೇಲೆಯೇ ಸತ್ಯಾಗ್ರಹದ ತತ್ತ್ವಜ್ಞಾನವನ್ನು ಕಂಡುಹಿಡಿದು ಆಚರಿಸಲು ಆರಂಭಿಸಿದರು. ಮಹಾತ್ಮಾಜಿ ಅವರು ಭಾರತಕ್ಕೆ ಬಂದ ಮೇಲೆ ದಕ್ಷಿಣ ಆಫ್ರಿಕಾದ ಕಾಳಜಿಗಳು ಅಖಿಲ ಭಾರತ ಕಾಂಗ್ರೆಸ್‌ನ ಮತ್ತು ಇಡೀ ಭಾರತ ಜನತೆಯ ಕಾಳಜಿಗಳಾದವು’’ ಎಂದು ನೆಲ್ಸನ್ ಮಂಡೇಲಾ ಅವರು 1979ರಲ್ಲಿ ಅಂತರ್‌ರಾಷ್ಟ್ರೀಯ ತಿಳಿವಳಿಕೆಗಾಗಿ ಇರುವ ಜವಾಹರಲಾಲ್ ನೆಹರೂ ಪ್ರಶಸ್ತಿಗಾಗಿ ಆಯ್ಕೆಯಾದಾಗ ಭಾರತಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಮಂಡೇಲಾ ಅವರು ಜೈಲಿನಲ್ಲಿದ್ದರು. ಅವರು 1980ರ ಆಗಸ್ಟ್ 3ರಂದು ಭಾರತಕ್ಕೆ ಬರೆದ ಪತ್ರವನ್ನು ಜೈಲು ಅಧಿಕಾರಿಗಳು ತಡೆಹಿಡಿದರು. ನಂತರ ಅವರು ಜೈಲಿನಿಂದ ರಹಸ್ಯವಾಗಿ ಆ ಪತ್ರವನ್ನು ಭಾರತಕ್ಕೆ ಕಳಿಸಿದರು. ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ 1981ನೇ ಆಗಸ್ಟ್ 26ರಂದು ಆ ಪತ್ರದ ಬಿಡುಗಡೆ ಮಾಡಿತು.
ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವು ಭಾರತ ದೇಶದ ಸ್ವಾತಂತ್ರ್ಯ ಹೋರಾಟ ಮಾತ್ರವಾಗಿರಲಿಲ್ಲ. ಅವರು ಜಗತ್ತಿನ ಎಲ್ಲ ಗುಲಾಮಿ ದೇಶಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾರ್ಗದರ್ಶಿಯ ಹಾಗೆ ಇದ್ದರು. ಗಾಂಧೀಜಿಯವರ ಕುರಿತು ಲೆನಿನ್ ಅವರು ಎಂ.ಎನ್. ರಾಯ್ ಅವರಿಗೆ ಹೇಳಿದ ಮಾತು ಮನೋಜ್ಞವಾಗಿದೆ. ಎಂ.ಎನ್. ರಾಯ್ ಅವರು ರಶ್ಯಾ ಕ್ರಾಂತಿಯ ಸಂದರ್ಭದಲ್ಲಿ ಅಲ್ಲೇ ಇದ್ದವರು. 1917ರ ಅಕ್ಟೋಬರ್‌ನಲ್ಲಿ ನಡೆದ ರಶ್ಯಾ ಕ್ರಾಂತಿಯ ನಂತರ ಲೆನಿನ್ ಅವರು ಝಾರ್ ದೊರೆಯಿಂದ ವಿಮೋಚನೆಗೊಂಡ ಸೋವಿಯತ್ ದೇಶದ ನಾಯಕರಾದರು. ಎಂ.ಎನ್. ರಾಯ್ ಅವರು ಶಾಂತಿ ಕುರಿತ ಮಹಾಪ್ರಬಂಧವೊಂದನ್ನು ಬರೆದು ಲೆನಿನ್ ಅವರಿಗೆ ತೋರಿಸಿದರು. ಆಗ ಲೆನಿನ್ ಅವರು ಭಾರತಕ್ಕೆ ಹೋಗಿ ಗಾಂಧೀಜಿಯವರ ಜೊತೆಗೂಡಿ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ತಿಳಿಸಿದರು. ಆಗ ಎಂ.ಎನ್. ರಾಯ್ ಅವರು, ‘‘ಗಾಂಧೀಜಿ ಭಜನೆ ಮಾಡುತ್ತಾರೆ’’ ಎಂದರು. ಅದಕ್ಕೆ ಲೆನಿನ್ ಅವರು, ‘‘ಆ ಭಜನೆ ಸಾಮ್ರಾಜ್ಯಶಾಹಿ ಪರ ಇದೆಯೊ ಅಥವಾ ವಿರುದ್ಧ ಇದೆಯೊ’’ ಎಂದು ಕೇಳಿದರು. ಆಗ ‘‘ವಿರುದ್ಧ ಇದೆ’’ ಎಂದು ತಿಳಿಸಿದಾಗ, ಭಜನೆ ಮಾಡಬಹುದು ಎಂದು ಲೆನಿನ್ ಹೇಳಿದರು.
ಗಾಂಧೀಜಿಯವರು ಅಂತರ್‌ರಾಷ್ಟ್ರೀಯ ವಸಾಹತುವಾದದ ಕ್ರೌರ್ಯವನ್ನು ಕೊನೆಗಾಣಿಸಲು ದೇಸೀ ಅಸ್ತ್ರಗಳನ್ನೇ ಬಳಸಿದರು. ಅವರು ಗುಡಿ, ಚರ್ಚು, ಮಸೀದಿಗಳಿಗೆ ಹೋಗಲಿಲ್ಲ. ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದಕ್ಕೆ ಅವರು ವಿರೋಧವಾಗಿದ್ದರು. ಆದರೆ ‘ಈಶ್ವರ ಅಲ್ಲಾ ತೇರೊ ನಾಮ್’ ಮತ್ತು ‘ಪೀಡ ಪರಾಯೆ ಜಾನಿರೋ’ ಎಂದು ಸಾರುವ ಪ್ರಾರ್ಥನಾ ಗೀತೆಗಳು ಎಲ್ಲ ಧರ್ಮಗಳ ಚೌಕಟ್ಟುಗಳನ್ನು ಮೀರಿ ಮಾನವಧರ್ಮದ ಅನಂತತೆಯನ್ನು ಸಾರುವಂಥವುಗಳಾಗಿದ್ದವು. ಸೂಫಿಗಳ, ಶರಣರ, ಸಂತರ, ದಾಸರ ಮತ್ತು ಅನುಭಾವಿ ಕವಿಗಳ ಮಾನವ ಏಕತಾ ಪ್ರಜ್ಞೆಯೊಂದಿಗೆ ಬೆಳೆದು ಬಂದ ಭಾರತದ ಭಕ್ತಿಪಂಥ ಅದಾಗಲೇ ಜಾತೀಯತೆ ಮತ್ತು ಅಸ್ಪಶ್ಯತೆಯನ್ನು ಮೀರಿ ನಿಂತದ್ದಾಗಿತ್ತು. ಇಂಥ ಚಿಂತನೆಗಳಿಂದ ಕೂಡಿದ್ದ ಪ್ರಾರ್ಥನಾ ಸಭೆಗಳ ಮೂಲಕ ಅವರು ಎಲ್ಲ ಜಾತಿ ಮತ್ತು ಧರ್ಮಗಳ ಜನಸಮುದಾಯಗಳನ್ನು ಒಂದುಗೂಡಿಸಿದರು. ಆ ಮೂಲಕ ಕೋಮುವಾದ, ಅಸ್ಪಶ್ಯತೆ ಮತ್ತು ಜಾತೀಯತೆಯನ್ನು ಕೊನೆಗಾಣಿಸುತ್ತಾ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ಅವರು ಅಹಿಂಸೆಯ ನೆಲೆಯಲ್ಲಿ ಬಳಸಿದ ಅಸ್ತ್ರಗಳೆಂದರೆ ಅಹಿಂಸೆ, ಪ್ರಾರ್ಥನೆ, ಚರಕ ಮತ್ತು ಉಪವಾಸ ಸತ್ಯಾಗ್ರಹ. ಇವೆಲ್ಲ ದೇಸೀ ‘ಆಯುಧ’ಗಳೇ ಆಗಿದ್ದವು. ಇವೆಲ್ಲ ಭಾರತೀಯ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಅಹಿಂಸೆ, ಚರಕ ಮತ್ತು ಪ್ರಾರ್ಥನೆ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಅವರು ಉಪವಾಸ ಸತ್ಯಾಗ್ರಹವನ್ನು ಕಲಿತದ್ದು ಭಾರತೀಯ ಮಹಿಳೆಯರಿಂದ! ಭಾರತೀಯ ಮಹಿಳೆಯ ಬಹುದೊಡ್ಡ ಅಸ್ತ್ರವೆಂದರೆ ಉಪವಾಸದಿಂದ ಕೂಡಿರುವ ಮೌನಸತ್ಯಾಗ್ರಹ. ಗಂಡನಿಗೆ, ಅತ್ತೆ ಮಾವಂದಿರರಿಗೆ ಮತ್ತು ಮನೆಯಲ್ಲಿ ಇನ್ನುಳಿದ ಹಿರಿಯರಿಗೆ ಏನೂ ಹೇಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಆಕೆ ಉಪವಾಸವಿದ್ದು ದೈನಂದಿನ ಕೆಲಸಕ್ಕಿಂತ ಹೆಚ್ಚಿಗೆ ಕೆಲಸ ಮಾಡುತ್ತಾಳೆ. ಕೊನೆಗೆ ತನ್ನ ಸಾತ್ವಿಕ ಶಕ್ತಿಯಿಂದ ಅವರನ್ನೆಲ್ಲ ಮಣಿಸುತ್ತಾಳೆ. ಗಾಂಧೀಜಿಯವರಿಗೆ ಇದು ಬಹು ದೊಡ್ಡ ಅಸ್ತ್ರವಾಗಿ ಕಂಡಿತು! ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಮಣಿಸಲು ಈ ಅಸ್ತ್ರದ ಪ್ರಯೋಗವನ್ನು ಗಾಂಧೀಜಿಯವರು ಬಹಳ ಪರಿಣಾಮಕಾರಿಯಾಗಿ ಮಾಡಿದರು.
ಗಾಂಧೀಜಿಯವರು ಪ್ರಾರ್ಥನೆಯ ಮೂಲಕ ಜನರಲ್ಲಿ ಭಾವೈಕ್ಯ ಸಾಧಿಸಿದರು. ಚರಕದ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆರ್ಥಿಕ ಬೆನ್ನೆಲುಬನ್ನು ಮುರಿದರು. ಸತ್ಯಾಗ್ರಹದ ಮೂಲಕ ಸಾತ್ವಿಕ ಯುದ್ಧ ಸಾರಿದರು. ಬ್ರಿಟಿಷರ ಬಳಿ ಭೌತಿಕ ರಣರಂಗದಲ್ಲಿ ಬಳಸುವ ಅತ್ಯಾಧುನಿಕ ಅಸ್ತ್ರಗಳಿದ್ದವು. ಆದರೆ ಸಾತ್ವಿಕ ಯುದ್ಧದಲ್ಲಿ ಬಳಸುವ ಅಸ್ತ್ರಗಳು ಅವರಲ್ಲಿ ಇರಲಿಲ್ಲ! ಹೀಗೆ ಗಾಂಧೀಜಿಯವರ ಅಹಿಂಸೆ ನಿಷ್ಕ್ರಿಯ ಅಹಿಂಸೆಯಾಗಿರದೆ ಧೀರೋದಾತ್ತರ ಕ್ರಿಯಾಶೀಲ ಅಸ್ತ್ರವಾಗಿತ್ತು. ಬ್ರಿಟಿಷರ ದಬ್ಬಾಳಿಕೆ ಎಂಬ ಅಗ್ನಿಯ ಅಸ್ತ್ರಕ್ಕೆ ಅದು ಸಂಯಮದ ಜಲಾಸ್ತ್ರವಾಗಿತ್ತು. ಅಗ್ನಿಯನ್ನು ಅಗ್ನಿಯಿಂದ ನಂದಿಸಲಿಕ್ಕಾಗದು. ಅದನ್ನು ಕೊಣೆಗಾಣಿಸಲು ನೀರೇ ಬೇಕು.
“Generations to come, it may be, will scarce believe that such a one, as this, ever in flesh and blood, walked upon this earth” 
ಭಾರತೀಯರು ಜಾತಿಸಂಘರ್ಷ ಮತ್ತು ಕೋಮುಗಲಭೆಗಳಲ್ಲಿ ತೊಡಗುತ್ತಿದ್ದ ಸಂದರ್ಭದಲ್ಲಿ ಅವರನ್ನೆಲ್ಲ ಕಂದಾಚಾರ ಮತ್ತು ಮೂಢನಂಬಿಕೆಗಳಿಂದ ಮೇಲೆತ್ತಿ ಭಾವೈಕ್ಯ ಸಾಧಿಸಿ ಒಂದಾಗಿಸಿಕೊಂಡು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹೊರಹಾಕುವುದು ಬಹು ದೊಡ್ಡ ಸವಾಲಾಗಿತ್ತು. ಏತನ್ಮಧ್ಯೆ ಬ್ರಿಟಿಷರ ವಿರುದ್ಧ ಸಾಹಸಿ ತರುಣರು ವೀರಾವೇಶದಿಂದ ಹೋರಾಡುತ್ತ ಹುತಾತ್ಮರಾಗುವುದಕ್ಕಿಂತ ಅಹಿಂಸಾ ಹೋರಾಟದಲ್ಲಿ ತೊಡಗುವುದು ಹೆಚ್ಚು ಫಲಪ್ರದವಾದುದು ಎಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆ ಇತ್ತು. ಜಾತಿ, ಕೋಮು ಮತ್ತು ಸಶಸ್ತ್ರ ಹೋರಾಟಗಳ ಸವಾಲುಗಳನ್ನು ಎದುರಿಸುತ್ತ ಜನರನ್ನು ಅಹಿಂಸಾ ಮಾರ್ಗದಲ್ಲಿ ಹೋರಾಟಕ್ಕೆ ಅಣಿಗೊಳಿಸುವಲ್ಲಿ ಗಾಂಧೀಜಿಯವರು ಸಫಲರಾದರು. ಅಹಿಂಸೆ ಎಂಬುದು ಮಹಾನ್ ಶೂರರ ಅಸ್ತ್ರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಬ್ರಿಟಿಷ್ ಪೊಲೀಸರ ಮತ್ತು ಸೈನಿಕರ ಲಾಠಿಗಳಿಗೆ ತಲೆ ಕೊಡುವುದು ಮತ್ತು ಗುಂಡುಗಳಿಗೆ ಎದೆಯೊಡ್ಡುವುದು ಧೀರೋದಾತ್ತರಿಂದ ಮಾತ್ರ ಸಾಧ್ಯ. ಭಾರತೀಯ ಪ್ರಜೆಗಳನ್ನು ಈ ಎತ್ತರಕ್ಕೆ ಒಯ್ದ ಗಾಂಧೀಜಿಯವರ ಬಗ್ಗೆ ವಿಶ್ವವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಎಂದು ಹೇಳಿದ್ದು ಎಲ್ಲ ಕಾಲಕ್ಕೂ ಸಲ್ಲುವಂಥದ್ದಾಗಿದೆ. ಗಾಂಧೀಜಿಯವರು ಇಡೀ ಮಾನವಕುಲಕ್ಕೆ ಸಂಬಂಧಪಟ್ಟವರಾ ಗಿದ್ದರು. ಮಾನವರನ್ನು ಬೇರ್ಪಡಿಸುವ ಯಾವುದೇ ಸಿದ್ಧಾಂತವನ್ನು ಅವರು ಒಪ್ಪುತ್ತಿರಲಿಲ್ಲ. ಮನುಷ್ಯರನ್ನು ಜನಾಂಗೀಯ ಆಧಾರದ ಮೇಲೆ ಹಿಂಸಿಸುವುದು ಫ್ಯಾಶಿಸ್ಟ್ ಶಕ್ತಿಗಳ ಕೃತ್ಯವಾಗಿರುತ್ತದೆ ಎಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆ ಇತ್ತು. ಅಂತೆಯೆ ಅವರು ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಹಿಟ್ಲರ್‌ನ ಫ್ಯಾಶಿಸ್ಟ್ ಶಕ್ತಿಯನ್ನು ಸೋಲಿಸುವುದಕ್ಕಾಗಿ ಇಂಗ್ಲೆಂಡ್, ಅಮೆರಿಕ ಮತ್ತು ಅಂದಿನ ಸೋವಿಯತ್ ದೇಶಗಳಿಗೆ ನೈತಿಕ ಬೆಂಬಲ ಸೂಚಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿಯವರು ಎರಡನೇ ಮಹಾಯುದ್ಧದ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ರಿಟಿಷರ ವೈರಿಯಾಗಿದ್ದ ಹಿಟ್ಲರ್‌ಗೆ ಬೆಂಬಲ ವ್ಯಕ್ತಪಡಿಸಿ ಬ್ರಿಟಿಷರನ್ನು ಹೊರದಬ್ಬುವ ಯೋಜನೆ ರೂಪಿಸಲಿಲ್ಲ. ಅಹಿಂಸೆ ಮತ್ತು ತ್ಯಾಗದಿಂದ ಕೂಡಿದ ಅಸಹಕಾರ ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೆಯುವುದು ಗಾಂಧೀಜಿಯವರ ಛಲವಾಗಿತ್ತು. 1914ರಲ್ಲಿ ದಕ್ಷಿಣ ಆಫ್ರಿಕಾದಿಂದ ಬರುವಾಗಲೇ ಅವರು ಈ ಅಸಹಕಾರ ಚಳವಳಿಯ ರೂಪುರೇಷೆಗಳನ್ನು ಸಿದ್ಧಮಾಡಿಕೊಂಡೇ ಬಂದಿದ್ದರು. ಕೊನೆಯವರೆಗೂ ಆ ಪ್ರಕಾರವೇ ಹೋರಾಟದಲ್ಲಿ ತೊಡಗಿದರು.
1919ರಿಂದ 1922ರವರೆಗಿನ ಅವರ ಸತ್ಯಾಗ್ರಹ ಭಾರತೀಯರನ್ನು ಒಂದುಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ರಾಜದ್ರೋಹದ ಆರೋಪದ ಮೇಲೆ ಬ್ರಿಟಿಷ್ ಸರಕಾರ 1922ರಿಂದ 1924ರವರೆಗೆ ಜೈಲಿಗೆ ಅಟ್ಟಿತು. 1930ರಲ್ಲಿ ಗಾಂಧೀಜಿಯವರು ನಡೆಸಿದ ಉಪ್ಪಿನ ಸತ್ಯಾಗ್ರಹ ಐತಿಹಾಸಿಕವಾಗಿದೆ. ಆಗ ಜನಸಮುದಾಯ ಅವರ ಜೊತೆ 320 ಕಿಲೊ ಮೀಟರ್ ವರೆಗೆ ನಡೆದು ದಾಂಡಿ ಸಮುದ್ರ ದಡದಲ್ಲಿ ಉಪ್ಪುತಯಾರಿಸಿ ಉಪ್ಪಿನ ಮೇಲೆ ಬ್ರಿಟಿಷ್ ಸರಕಾರ ಹೇರಿದ್ದ ಏಕಸ್ವಾಮ್ಯವನ್ನು ಮುರಿಯಿತು. ಶ್ರೀಮಂತರಿರಲಿ, ಬಡವರಿರಲಿ, ಹಳ್ಳಿಗರಿರಲಿ, ಪಟ್ಟಣಿಗರಿರಲಿ, ಯಾರೇ ಇರಲಿ ಉಪ್ಪುಎಲ್ಲರಿಗೂ ಬೇಕು. ಹೀಗೆ ಸರ್ವವ್ಯಾಪಿಯಾದ ಉಪ್ಪಿನ ಮೂಲಕ ಸ್ವಾತಂತ್ರ್ಯ ಹೋರಾಟದ ಪ್ರಜ್ಞೆ ಮೂಡಿಸಿದವರು ಗಾಂಧೀಜಿ.
ಗಾಂಧೀಜಿಯವರು ಜೈಲಿನಿಂದ ಹೊರಬಂದ ಮೇಲೆ ಭಾರತೀಯ ಸಂವಿಧಾನದ ಸುಧಾರಣೆಗಾಗಿ ಬ್ರಿಟಿಷ್ ಸರಕಾರ ಏರ್ಪಡಿಸಿದ್ದ ಎರಡನೇ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ತುಂಡು ಬಟ್ಟೆಯಿಂದಲೇ ಇಂಗ್ಲೆಂಡಿಗೆ ಹೋದರು! ಅವರು ಬ್ರಿಟಿಷ್ ದುಡಿಯುವ ವರ್ಗಕ್ಕೂ ಪ್ರಿಯರಾಗಿದ್ದರು. ‘‘ಮಾನವೀಯತೆಯಲ್ಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಮಾನವೀಯತೆ ಎಂಬುದೊಂದು ಸಾಗರ. ಆ ಸಾಗರದಲ್ಲಿನ ಕೆಲ ಹನಿಗಳು ಹೊಲಸಾದಾಗ ಸಾಗರ ಹೊಲಸಾಗದು.’’ ಎಂಬ ಅವರ ಮಾತು ಅವರ ವ್ಯಕ್ತಿತ್ವದ ಪ್ರತೀಕವಾಗಿದೆ. ಆದರೆ ಭಾರತ ಎಂಬ ಸಾಗರದ ಕೆಲ ಹೊಲಸು ಹನಿಗಳು ಅವರ ಜೀವವನ್ನೇ ತೆಗೆದುಕೊಂಡದ್ದೊಂದು ವಿಪರ್ಯಾಸವಾಗಿದೆ.
1948ನೇ ಜನವರಿ 30ರಂದು ಗಾಂಧೀಜಿಯವರು ದಿಲ್ಲಿಯಲ್ಲಿ ಸಾಯಂಕಾಲದ ಪ್ರಾರ್ಥನೆಗೆ ಹೋಗುವ ಸಂದರ್ಭದಲ್ಲಿ ನಾಥೂರಾಮ ಗೋಡ್ಸೆ ಗುಂಡಿಕ್ಕಿ ಕೊಂದ. ಮಾತು ಕೊಟ್ಟ ಪ್ರಕಾರ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡಬೇಕು ಎಂದು ಗಾಂಧೀಜಿಯವರು ಹಟ ಮಾಡಿ ಕೊಡಿಸಿದ್ದು ಮತ್ತು ದೇಶ ವಿಭಜನೆಗೆ ಸಹಕರಿಸಿದ್ದು ಗಾಂಧೀಜಿಯವರು ಮಾಡಿದ ತಪ್ಪುಗಳು. ಅದಕ್ಕಾಗಿ ಅವರ ವಧೆ ಮಾಡಿರುವುದಾಗಿ ಗೋಡ್ಸೆ ತನ್ನ ಕೊನೆಯ ಬರವಣಿಗೆಯಲ್ಲಿ ತಿಳಿಸಿದ್ದಾನೆ. ಈ ವಾದವನ್ನು ಗುಜರಾತಿನಲ್ಲಿ ಚುನ್ನಿಕಾಕಾ ಎಂದೇ ಪ್ರಸಿದ್ಧರಾದ ಗಾಂಧಿವಾದಿ ಚುನ್ನಿಭಾಯಿ ವೈದ್ಯ ಅವರು ಅಲ್ಲಗಳೆದು ಪಾಂಡಿತ್ಯಪೂರ್ಣವಾದ ದೀರ್ಘ ಲೇಖನವನ್ನು ಬರೆದಿದ್ದಾರೆ. ದೇಶವಿಭಜನೆ ಮತ್ತು ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡುವ ಪ್ರಶ್ನೆ ಏಳುವ ಮೊದಲೇ ಐದು ಬಾರಿ ಗಾಂಧೀಜಿಯವರ ಹತ್ಯೆ ಮಾಡುವ ಘಟನೆಗಳು ಜರುಗಿವೆ ಎಂದು ಅವರು ದಾಖಲೆಗಳೊಂದಿಗೆ ಸಾಬೀತುಪಡಿಸಿದ್ದಾರೆ.
1934ರಲ್ಲಿ ಗಾಂಧೀಜಿಯವರನ್ನು ಹತ್ಯೆ ಮಾಡಲು ಯತ್ನಿಸಿದ ಮೊದಲ ಘಟನೆ ಪೂನಾದಲ್ಲಿ ನಡೆಯಿತು. ಪೂನಾ ಮುನಸಿಪಾಲಿಟಿ ಯವರು ಗಾಂಧೀಜಿಯವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಅವರ ಕಡೆಗೆ ಬಾಂಬ್ ಎಸೆಯಲಾಯಿತು. ಆದರೆ ಅದು ಕಾರಿನ ಮುಂಭಾಗಕ್ಕೆ ಬಡಿದ ಕಾರಣ ಗಾಂಧೀಜಿಯವರು ಬಚಾವಾದರು. ಆ ಸಂದರ್ಭದಲ್ಲಿ ಚೀಫ್ ಮುನಿಸಿಪಲ್ ಆಫೀಸರ್, ಇಬ್ಬರು ಪೊಲೀಸರು ಮತ್ತು ಇತರ ನಾಲ್ವರು ಸಾರ್ವಜನಿಕರು ಗಾಯಗೊಂಡರು. ಆ ಸಂದರ್ಭದಲ್ಲಿ ದೇಶವಿಭಜನೆ ಪ್ರಶ್ನೆ ಎಲ್ಲಿತ್ತು? 55 ಕೋಟಿ ರೂಪಾಯಿ ಕೊಡುವ ಪ್ರಸಂಗ ಎಲ್ಲಿತ್ತು?
1944ರಲ್ಲಿ ಮಹಾರಾಷ್ಟ್ರದ ಪಂಚಗಣಿಯಲ್ಲಿ ಚಾಕು ಹಿಡಿದ ವ್ಯಕ್ತಿಯೊಬ್ಬ ಗಾಂಧೀಜಿ ಕಡೆಗೆ ಧಾವಿಸಿದ. ಆತ ನಾಥೂರಾಮ ಗೋಡ್ಸೆ ಎಂಬುದು ನಂತರ ತಿಳಿದು ಬಂದಿತು. ಪೂನಾ ಸುರತಿ ಲಾಡ್ಜ್ ಮಾಲಕ ಮಣಿಶಂಕರ ಪುರೋಹಿತ ಆತನ ಗುರುತು ಹಿಡಿದರು. ಕಾಂಗ್ರೆಸ್ ನಾಯಕ ಬಿ.ಡಿ. ಬಿಸರೆ ಗುರೂಜಿ ಅವರು ಗೋಡ್ಸೆ ಕೈಯಲ್ಲಿನ ಚಾಕು ಕಸಿದುಕೊಂಡರು. ಗೋಡ್ಸೆ ಕೊಟ್ಟ ಕಾರಣಗಳು ಆವಾಗ ಎಲ್ಲಿದ್ದವು?
1944ನೇ ಸೆಪ್ಟಂಬರ್ ತಿಂಗಳಲ್ಲಿ ಗಾಂಧೀಜಿಯವರು ಮುಹಮ್ಮದ್ ಅಲಿ ಜಿನ್ನಾ ಅವರನ್ನು ಭೇಟಿ ಮಾಡುವುದಕ್ಕಾಗಿ ವಾರ್ಧಾದಿಂದ ಮುಂಬೈಗೆ ಹೋಗುವವರಿದ್ದರು. ಆ ಸಂದರ್ಭದಲ್ಲಿ ಪೂನಾದಿಂದ ಒಂದು ಗುಂಪು ವಾರ್ಧಾಗೆ ಹೋಗಿ ಗಾಂಧೀಜಿಯವರ ಹತ್ಯೆಗೆ ಪ್ರಯತ್ನಿಸಿತು. ಜಿ.ಎಲ್. ಥಟ್ಟೆ ಎಂ�

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ