ಚಿಕ್ಕಮಗಳೂರು: ವನ್ಯಜೀವಿಗಳ ಆಕರ್ಷಕ ತಾಣ ಮುತ್ತೋಡಿ ಅಭಯಾರಣ್ಯ
ಚಿಕ್ಕಮಗಳೂರು, ಅ.2: ಕಾಫಿ ಬೆಳೆಗೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ ಎಂದರೆ ತಪ್ಪಾಗಲಾರದು. ಹಚ್ಚ ಹಸಿರು ಹೊದ್ದು ಮುಗಿಲೆತ್ತರಕ್ಕೆ ಮೈಚಾಚಿ ನಿಂತಿರುವ ಸುಂದರ ಗಿರಿಶ್ರೇಣಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಪರೂಪದ ವನ್ಯಜೀವಿಗಳನ್ನು ಮಡಿಲಲ್ಲಿರಿಸಿಕೊಂಡು ಸಲಹುತ್ತಿರುವ ಅಭಯಾರಣ್ಯಗಳು, ಶೋಲಾ ಕಾಡುಗಳು ಪರಿಸರ, ವನ್ಯಜೀವಿ ಪ್ರೇಮಿಗಳ ಪಾಲಿಗೆ ಸ್ವರ್ಗವಾಗಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಈ ಬಾರಿ ಕಾಫಿನಾಡಿನ ಧಟ್ಟ ಕಾಡುಗಳಿಗೆ ಹೊಸ ಮೆರಗು ಬಂದಿದ್ದು, ಇದು ಇಲ್ಲಿನ ವನ್ಯಜೀವಿಗಳಲ್ಲಿ ಪುಳಕಕ್ಕೆ ಕಾರಣವಾಗಿದೆ. ಅದರಲ್ಲೂ ಭದ್ರಾ ಹುಲಿ ಯೋಜನೆ ವ್ಯಾಪ್ತಿಯ ಮತ್ತೋಡಿ ಅಭಯಾರಣ್ಯಕ್ಕೀಗ ಜೀವಕಳೆ ಬಂದಿದ್ದು, ಅಭಯಾರಣ್ಯದ ಅಪರೂಪದ ವನ್ಯಜೀವಿಗಳಲ್ಲಿ ನವಚೈತನ್ಯ, ಪುಳಕ ಮೂಡಿಸಿದೆ. ಈ ಕಾರಣಕ್ಕೆ ಅಭಯಾರಣ್ಯದಾದ್ಯಂತ ಸಫಾರಿಗೆ ಹೋಗುವವರಿಗೆ ಕಾಡಿನ ವನ್ಯಜೀವಿಗಳು ಹೋದಲ್ಲೆಲ್ಲಾ ದರ್ಶನ ಭಾಗ್ಯ ನೀಡುತ್ತಿವೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಕೇವಲ 20 ಕಿ.ಮೀ.ದೂರದಲ್ಲಿರುವ ಮುತ್ತೋಡಿ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ದಟ್ಟ ಅಭಯಾರಣ್ಯವಾಗಿದೆ. ಅಪರೂಪದ ಸಸ್ಯ ಸಂಕುಲ, ವೈವಿಧ್ಯಮಯ ಮರ ಗಿಡಿಗಳಿಗೆ ಹೆಸರಾಗಿರುವಂತೆಯೇ ಈ ಅಭಯಾರಣ್ಯ ಅಳಿವಿನಂಚಿನಲ್ಲಿರುವ ಹುಲಿ, ಚಿರತೆ, ಆನೆ, ಸಿಂಗಳೀಕ, ಕಾಡು ಕುರಿ, ಜಿಂಕೆ, ನವಿಲು, ಕಪ್ಪುಹದ್ದು, ಕಿಂಗ್‌ಫಿಶರ್, ಕಾಡುಕೋಣದಂತಹ ಅಪರೂಪದ ವನ್ಯಜೀವಿಗಳಿಗೂ ಹೆಸರಾಗಿದೆ. ಜಿಲ್ಲೆಯಲ್ಲಿನ ಅಭಯಾರಣ್ಯಗಳಲ್ಲಿ 39 ಹುಲಿಗಳನ್ನು ಹೊಂದಿರುವ ಅಭಯಾರಣ್ಯ ಎಂಬ ಖ್ಯಾತಿಗೆ ಈ ದಟ್ಟಾರಣ್ಯ ಪ್ರಸಿದ್ಧವಾಗಿದೆ. ಈ ಕಾರಣಕ್ಕೆ ಇಲ್ಲಿಗೆ ವಾರಾಂತ್ಯಗಳಲ್ಲಿ ದೂರದ ನಗರ, ಪಟ್ಟಣ ಸೇರಿದಂತೆ ವಿದೇಶದ ಪರಿಸರ, ವನ್ಯಜೀವಿ ಪ್ರೇಮಿಗಳು ಆಗಮಿಸಿ ಸಫಾರಿ ಮೂಲಕ ಅಪರೂಪದ ಕಾಡು ಪ್ರಾಣಿ, ಪಕ್ಷಿಗಳ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಕೆಲ ಪರಿಸರ ಪ್ರೇಮಿಗಳು ಅಧ್ಯಯನದ ಸಲುವಾಗಿಯೂ ಇಲ್ಲಿ ಠಿಕಾಣಿ ಹೂಡುತ್ತಿದ್ದಾರೆ.
ಈ ಬಾರಿ ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಮತ್ತೋಡಿ ಅಭಯಾರಣ್ಯ ಹಚ್ಛ ಹಸಿರಿನಿಂದ ಕಂಗೊಳಿಸುತ್ತಿದೆ. ಸಫಾರಿ ವೇಳೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣಸಿಗುವ ಹಸಿರಿನ ವನರಾಶಿ ಮಧ್ಯೆ, ದಾರಿ ಬದಿಗಳಲ್ಲಿ ಅಪರೂಪದ ವನ್ಯಜೀವಿಗಳ ದರ್ಶನ ಭಾಗ್ಯ ಖಚಿತ. ಅರಣ್ಯವನ್ನು ಸೀಳಿಕೊಂಡು ಹೋಗಿರುವಂತೆ ಭಾಸವಾಗುವ ಮಣ್ಣಿನ ಕಚ್ಚಾ ರಸ್ತೆಗಳ ಬದಿಯಲ್ಲಿ, ಮೋಡಗಳಿಗೆ ಮುತ್ತಿಕ್ಕಲೆಂಬಂತೆ ಮುಗಿಲೆತ್ತರಕ್ಕೆ ಚಾಚಿ ನಿಂತಂತಿರುವ 300 ವರ್ಷಗಳಷ್ಟು ಹಳೆಯ ಮರಗಳು, ಸೋಂಪಾಗಿ ಬೆಳೆದು ನಿಂತಿರುವ ಹುಲ್ಲು ಮೇಯುತ್ತಿರುವ ಜಿಂಕೆಗಳು, ಕಾಡುಕುರಿ, ಮೊಲಗಳು, ಅನ್ಯಗ್ರಹದ ಜೀವಿಗಳಂತೆ ಆಕರ್ಷಿಸುವ ಲಂಗೂರ್‌ಗಳು, ಗಂಡು ಹೆಣ್ಣು ನವಿಲುಗಳ ನರ್ತನ, ಭೇಟೆಗೆ ಹೊಂಚು ಹಾಕಿ ನಿಂತ ಹುಲಿ, ಚಿರತೆ, ಬಂಡೆ ಕಲ್ಲಿನಂತೆ ದಿಟ್ಟಿಸಿ ನಡುಕ ಹುಟ್ಟಿಸುವ ಕಾಡಾನೆ, ಅಮಾಯಕನಂತೆ ಪೋಸು ಕೊಡುವ ಕಾಡುಕೋಣ, ಮಕ್ಕಳ ಚಿತ್ತ ಸೆಳೆಯುವ ಕೆಂದಳಿಲು, ಬಣ್ಣ ಬಣ್ಣದ ಚಿತ್ತಾರವನ್ನು ಮೈಮೇಲೆ ಬಿಡಿಸಿಕೊಂಡಂತೆ ಮನ ಕಣ್ಮನಕ್ಕೆ ಮುದ ನೀಡುವ ವಿವಿಧ ಜಾತಿಯ ಪಕ್ಷಿಗಳು, ಪ್ರಾಣಿ ಪಕ್ಷಿಗಳ ಕಲರವದೊಂದಿಗೆ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಸಣ್ಣ ಸಣ್ಣ ಕೆರೆಗಳು, ಝರಿಜಲಪಾತ, ನದಿ ತೊರೆಗಳ ನಿನಾದ, ತಂಪಾದ ಗಾಳಿ, ತಂಪು ಇಂಪಾದ ಗಾಳಿ ಮೈಮನಕ್ಕೆ ಮುದ ನೀಡುವ ಮುತ್ತೋಡಿ ಸಫಾರಿಯ ವೈಶಿಷ್ಯವಾಗಿದ್ದು, ನಗರದ ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಬದುಕುವವರ ಪಾಲಿಗೆ ಹೊಸ ಪ್ರಪಂಚವೇ ಕಣ್ಣ ಮುಂದೆ ಬಂದು ನಿಂತಂತೆ ಗೋಚರಿಸುತ್ತದೆ.
ಮಂಗಳವಾರ ಅರಣ್ಯ ಇಲಾಖೆ ವತಿಯಿಂದ ನಡೆದ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಪರೂಪದ ಸಫಾರಿಯು ಅಪರೂಪದ ವನ್ಯಜೀವಿಗಳ ಪ್ರಪಂಚದ ದರ್ಶನ ಮಾಡಿಸಿತ್ತು. ದಾರಿಯುದ್ದಕ್ಕೂ ಕಂಡು ಬಂದ ಜಿಂಕೆಗಳ ಸಾಲು, ಕಾಡುಕೋಣಗಳ ಗುಂಪು, ಲಂಗೂರ್‌ಗಳ ಕೀಟಲೆ, ಕೆಂದಳಿಲಿನ ಲವಲವಿಕೆ, ಬಾಹುಗಳಲ್ಲಿ ಮರಗಳ ಬಿಗಿದಪ್ಪಿದ ಉಡಗಳು, ನವಿಲುಗಳ ಗಾಂಭೀರ್ಯದ ನಡಿಗೆ, ಕಾಡು ಕುರಿಯ ನಿರ್ಭೀತ ನೋಟ, ಫರ್ಲಾಂಗು ದೂರದಲ್ಲಿ ಭೇಟೆಗೆ ಹೊಂಚು ಹಾಕಿ ನೆಲದ ಮೇಲೆಯೇ ಕುಳಿತಿದ್ದ ಚಿರತೆ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳು ಶಾಲಾ ಮಕ್ಕಳೂ ಸೇರಿದಂತೆ ಪರಿಸರ ಪ್ರೇಮಿಗಳನ್ನು ಆಕರ್ಷಿಸಿದವು. ಹುಲಿ, ಕಾಡಾನೆ ಭೀತಿಯಲ್ಲೇ ಅರಣ್ಯ ಪ್ರವೇಶಿಸಿದ್ದವರು ಹಿಂದಿರುಗಿ ಬರುವ ವೇಳೆ ಈ ಪ್ರಾಣಿಗಳ ದರ್ಶನವಾಗದಿರುವ ಬಗೆಗಿನ ಬೇಸರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಕಡಿಮೆ ಶುಲ್ಕದಲ್ಲಿ ಸಫಾರಿ ವ್ಯವಸ್ಥೆ
ಮುತ್ತೋಡಿ ಅಭಯಾರಣ್ಯದಲ್ಲಿ ವಾರಾಂತ್ಯದಲ್ಲಿ ಕಡಿಮೆ ಶುಲ್ಕದಲ್ಲಿ ಸಫಾರಿ ವ್ಯವಸ್ಥೆ ಇದ್ದು, ದೂರದ ಪ್ರವಾಸಿಗರಿಗೆ ಅರಣ್ಯ ಇಲಾಖೆಯ ವಿಹಾರಧಾಮಗಳಲ್ಲಿ ತಂಗುವ ವ್ಯವಸ್ಥೆಯೂ ಇದೆ. ಜಿಲ್ಲೆಯಲ್ಲಿ ಸದ್ಯ ಮಳೆಯ ರೌದ್ರಾವತಾರಕ್ಕೆ ವಿರಾಮ ಬಿದ್ದಿರುವುದರಿಂದ ಪ್ರವಾಸಿಗರಿಗೆ ಹಸಿರ ಕಾನನದ ಗಮ್ಮತ್ತು ಕಣ್ತುಂಬಿಕೊಳ್ಳಲು ಸಕಾಲ. ಸಫಾರಿ ವಾಹಗಳ ಚಾಲಕರು ಅರಣ್ಯ ಇಲಾಖೆ ಸಿಬ್ಬಂದಿಯೇ ಆಗಿದ್ದು, ಸ್ನೇಹ ಜೀವಿಗಳಾದ ಇವರು ಕಾಡು ಪ್ರಾಣಿಗಳ ಹೆಸರು, ಅವುಗಳ ಆಂಗ್ಲ ನಾಮ, ಪ್ರತೀ ಮರಗಿಡಗಳ ಜಾತಿ, ಪ್ರತೀ ಪ್ರಾಣಿಗಳ ಸ್ವಭಾವ, ಅವುಗಳ ಸಂಚಾರ ಸೇರಿದಂತೆ ಕಾಡಿನ ಮೂಲೆ ಮೂಲೆಗಳ ಪರಿಚಯವನ್ನೂ ಥಟ್ ಅಂತ ಹೇಳುವಷ್ಟರ ಮಟ್ಟಿಗೆ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಜ್ಞಾನ ಸಂಪಾದಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅಭಯಾರಣ್ಯದಲ್ಲಿ ಸಫಾರಿ ವೇಳೆ ಪ್ರತ್ಯೇಕ ಮಾರ್ಗದರ್ಶಿಯ ಅಗತ್ಯವಿರುವುದಿಲ್ಲ. ಪರಿಸರ ಪ್ರೇಮಿಗಳಿಗೆ ಮುತ್ತೋಡಿ ಅಭಯಾರಣ್ಯದ ವೈಶಿಷ್ಟ್ಯ ಕಂಡು ತಿಳಿಯಲು ಇದು ಸಕಾಲವಾಗಿದೆ.