ಬ್ಯಾಂಕ್ ಬಳಕೆದಾರರ ಹಕ್ಕುಗಳ ಬಗ್ಗೆ ಒಂದಿಷ್ಟು...
ಭಾಗ-57
ನಮ್ಮ ಪ್ರೊಫೆಸರ್ ಒಬ್ಬರು ಬ್ಯಾಂಕ್ ಶಾಖೆ ಮೂಲಕ ತಮ್ಮ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಬ್ಯಾಂಕ್‌ಗೆ ಪಾವತಿಸಿದ ರಶೀದಿ ಅವರಿಗೆ ಸಿಗುತ್ತಿತ್ತು. ಕೆಲ ದಿನಗಳ ಬಳಿಕ ಪ್ರೊಫೆಸರ್ ಮನೆಗೆ ವಿದ್ಯುತ್ ಬಿಲ್ ಪಾವತಿ ಆಗಿಲ್ಲ. ಅದಕ್ಕಾಗಿ ವಿದ್ಯುತ್ ಕಡಿತಗೊಳಿಸುವ ನೋಟಿಸು ಬಂದಿತ್ತು. ಇವರಲ್ಲಿ ಬಿಲ್ ಪಾವತಿಸಿದ ಸಾಕ್ಷವಿತ್ತು. ಬ್ಯಾಂಕ್‌ನಲ್ಲಿ ವಿಚಾರಿಸಿದರೆ, ನಮಗೆ ಗೊತ್ತಿಲ್ಲ ಎಂಬ ಉತ್ತರ. ನಾವು ತಕ್ಷಣ ಬ್ಯಾಂಕ್ ಮ್ಯಾನೇಜರ್‌ಗೆ ಪತ್ರ ಬರೆದು, ಹಣ ಪಾವತಿಸಿದ ರಶೀದಿಯ ಪ್ರತಿಯನ್ನೂ ಇರಿಸಿದೆವು.
ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಬ್ಯಾಂಕ್ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೆವು. ಪತ್ರ ತಲುಪಿದ ಕೆಲ ಹೊತ್ತಿನಲ್ಲೇ ಬ್ಯಾಂಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ‘‘ಕ್ಷಮಿಸಿ, ಬ್ಯಾಂಕ್ ಕ್ಯಾಶಿಯರ್ ಸೀಲ್ ಹಾಕಿಕೊಂಡು ಹಣವನ್ನು ಲಪಟಾಯಿಸಿದ್ದಾರೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’’ ಎಂದು ವಿನಂತಿಸಿದರು. ಈ ಪ್ರಕರಣವೂ ಈ ರೀತಿಯಾಗಿ ಸುಖಾಂತ್ಯಗೊಂಡಿತು. ಬ್ಯಾಂಕ್‌ನಲ್ಲಿ ಟೈಅಪ್ ಸೇಲ್ ಕೂಡಾ ನಡೆಯುತ್ತಿದೆ. ನಮ್ಮ ಸ್ನೇಹಿತರೊಬ್ಬರು ಮಂಗಳೂರು ಬಂದರು ಮಂಡಳಿಯಲ್ಲಿ ಕೆಲಸದಲ್ಲಿದ್ದರು. ಅವರ ವೇತನ ಬ್ಯಾಂಕ್‌ನಲ್ಲಿ ಠೇವಣಿಯಾಗುತ್ತಿತ್ತು. ಅಲ್ಲಿಂದ ಅವರು ವೈಯಕ್ತಿಕ ಸಾಲವನ್ನು ಕೂಡಾ ಪಡೆದಿದ್ದರು.
ಸಾಲ ಕೊಡುವ ಸಂದರ್ಭ ಮ್ಯಾನೇಜರ್ ಒಂದು ವೌಖಿಕ ಷರತ್ತನ್ನು ಹಾಕಿದ್ದರು. ಅದೇನೆಂದರೆ, ನೀವು ತಿಂಗಳಿಗೆ ಇಷ್ಟು ಮೊತ್ತದ ಆರ್‌ಡಿಯನ್ನು ತೆರೆಯಬೇಕು. ಹಾಗಿದ್ದರೆ ಮಾತ್ರವೇ ಸಾಲ ಕೊಡಲಾಗುವುದು ಎಂಬ ಷರತ್ತದು. ಆ ಸ್ನೇಹಿತ ನನ್ನಲ್ಲಿ ಆ ವಿಷಯ ತಿಳಿಸಿದ್ದ. ನನ್ನಲ್ಲಿ ಆರ್‌ಡಿ ಇದೆ. ಅದಕ್ಕೆ ನನಗೆ ಸಿಗುವುದು ಶೇ. 7 ಬಡ್ಡಿ. ನನ್ನ ಸಾಲಕ್ಕೆ ಶೇ. 18 ಬಡ್ಡಿಯನ್ನು ವಿಧಿಸುತ್ತಿದ್ದಾರೆ. ಇದಕ್ಕೇನು ಮಾಡಬಹುದು ಎಂದು ಆತ ವಿಚಾರಿಸಿದ್ದ. ನಾನು ಆತನಿಗೆ, ನಿನ್ನ ಆರ್‌ಡಿ ಕ್ಲೋಸ್ ಮಾಡಿ. ಅದರಲ್ಲಿರುವ ಹಣವನ್ನು ನಿನ್ನ ಸಾಲಕ್ಕೆ ಹೊಂದಿಸು ಎಂದೆ. ಮುಂದೆ ಆರ್‌ಡಿ ಹಣ ಸೇರಿಸಿ ಸಾಲದ ಮೊತ್ತವನ್ನು ಕಟ್ಟು ಈ ಬಗ್ಗೆ ಒಂದು ಪತ್ರವನ್ನು ಬ್ಯಾಂಕ್ ಮ್ಯಾನೇಜರ್‌ಗೆ ನೀಡು ಎಂದೆ. ಆ ರೀತಿಪತ್ರ ನೀಡಿದಾಗ ಮ್ಯಾನೇಜರ್ ಈ ರೀತಿ ಮಾಡಲು ಆಗುವುದಿಲ್ಲ ಎಂದು ಉತ್ತರಿಸಿದ. ಆರ್‌ಡಿಯನ್ನು ಸಾಲ ಪಡೆಯಲು ಪೂರ್ವ ಬೇಡಿಕೆಯಾಗಿ ಮಾಡಲಾಗಿತ್ತು ಎಂದು ಹೇಳಿದ. ಆ ಬಗ್ಗೆ ಲಿಖಿತವಾಗಿ ನೀಡುವಂತೆ ಮ್ಯಾನೇಜರ್‌ಗೆ ಹೇಳಲಾಯಿತು. ಆ ಮ್ಯಾನೇಜರ್ ಲಿಖಿತವಾಗಿ ನೀಡಿದ.
‘‘ನಿಮ್ಮ ಬೇಡಿಕೆಯನ್ನು ಪರಿಗಣಿಸಲಾಗದು. ಯಾಕೆಂದರೆ ಆರ್‌ಡಿಯನ್ನು ಸಾಲದ ಪೂರ್ವ ಬೇಡಿಕೆಯಾಗಿ ಪರಿಗಣಿಸಿ ತೆರೆಯಲಾಗಿತ್ತು ಎಂದು ಆತ ಬರೆದಿದ್ದ. ನಾವು ಅದನ್ನು ಉಲ್ಲೇಖಿಸಿ, ಇದು ಬ್ಯಾಂಕ್‌ನಿಂದ ನಡೆದ ಟೈ ಅಪ್ ಸೇಲ್ ಎಂದು ಆರ್‌ಬಿಐನ ಎಂಆರ್‌ಟಿಪಿ ಸೆಲ್‌ಗೆ ಪತ್ರ ಬರೆದೆವು. ಅಲ್ಲಿಂದ ಬ್ಯಾಂಕ್‌ಗೆ ನೋಟೀಸು ನೀಡಲಾಯಿತು. ಅಡುಗೆ ಅನಿಲ ಸಂಪರ್ಕ ಕೊಡಬೇಕಾದರೆ ನೀವು ಗ್ಯಾಸ್ ಸ್ಟೌ ತೆಗೆದುಕೊಳ್ಳಬೇಕೆಂಬ ನಿಯಮ ವಿಧಿಸುತ್ತಾರಲ್ಲ ಆ ರೀತಿಯ ಟೈ ಅಪ್ ಸೇಲ್ ಬ್ಯಾಂಕ್‌ನಿಂದ ನಡೆದಿತ್ತು. ಬ್ಯಾಂಕ್‌ನವರಿಗೆ ಶಾಕ್. ಅವರು ಆರ್‌ಡಿಯನ್ನು ಕ್ಲೋಸ್ ಮಾಡಿದರು. ಜತೆಗೆ ಈ ಕಾರ್ಯಕ್ಕಾಗಿ ದಂಡವನ್ನೂ ವಿಧಿಸಲಾಯಿತು. ಬಳಕೆದಾರರು ಸಾಮಾನ್ಯವಾಗಿ ಈ ಬಗ್ಗೆ ಗಮನ ಹರಿಸುವುದಿಲ್ಲ. ಅವರಿಗೆ ಅರಿವಿಲ್ಲದೆಯೇ ಅವರು ಮೋಸ ಹೋಗುತ್ತಿರುತ್ತಾರೆ. ಇದು ಫೋರ್ಜರಿ ಪ್ರಕರಣ
ಕೆಐಒಸಿಎಲ್‌ನ ಉದ್ಯೋಗಿಯೊಬ್ಬರು ನಮ್ಮಲ್ಲಿಗೆ ಬಂದಿದ್ದರು. ಅವರು ಕಚೇರಿಯಲ್ಲಿ ಇಲ್ಲದ ವೇಳೆ ಅವರ ಟೇಬಲ್ ತೆರೆದು ಚೆಕ್ ಪುಸ್ತಕ ತೆಗೆದು ಅವರ ಖಾತೆಯಿಂದ ಹಣ ಪಡೆದಿದ್ದರು. ಇದು ತಡವಾಗಿ ಆ ವ್ಯಕ್ತಿಯ ಗಮನಕ್ಕೆ ಬಂದಿತ್ತು. ತನಗೆ ಅರಿವಿಲ್ಲದೆ, ತನ್ನ ಚೆಕ್ ಮೂಲಕ ಹಣ ಹೇಗೆ ಪಡೆಯಲಾಗಿದೆ ಎಂದು ಆತ ಬ್ಯಾಂಕ್‌ನಲ್ಲಿ ಹೋಗಿ ಚೆಕ್ ಕೇಳಿ ಪಡೆದುಕೊಂಡರು. ಆ ವ್ಯಕ್ತಿ ಎರಡು ರೀತಿಯ ಸಹಿಯನ್ನು ಹಾಕುತ್ತಿದ್ದರು. ಬ್ಯಾಂಕ್ ಜತೆ ವ್ಯವಹರಿಸುವ ಸಹಿಯನ್ನು ಆ ಚೆಕ್ ಹೊಂದಿರಲಿಲ್ಲ. ಇದು ಇವರ ಕಚೇರಿಯ ಯಾರೋ ವ್ಯಕ್ತಿ ಬ್ಯಾಂಕ್‌ನ ಯಾರದ್ದೋ ಸಿಬ್ಬಂದಿಯ ಜತೆ ಸೇರಿಕೊಂಡಿ ಮಾಡಿರುವ ಫೋರ್ಜರಿ ಪ್ರಕರಣ. ಅವರು ಈ ಪ್ರಕರಣವನ್ನು ನಮ್ಮ ಬಳಿ ತಂದಾಗ, ನಾವು ಬ್ಯಾಂಕ್‌ಗೆ ಪತ್ರ ಬರೆದೆವು. ಬ್ಯಾಂಕ್‌ನವರು ಅದು ನಮಗೆ ಗೊತ್ತಿಲ್ಲ ಎಂಬ ಸಬೂಬಿನ ಉತ್ತರ ನೀಡಿದ್ದರು. ತನಿಖೆ ಆಗಲಿ ಎಂದರು. ಹಾಗಾದರೆ ನಾವು ಪೊಲೀಸ್ ದೂರು ನೀಡುತ್ತೇವೆ ಎಂದು ಮರು ಪತ್ರ ಬರೆದೆವು. ಪತ್ರ ಬರೆದ ಮರುದಿನವೇ ಹಣವನ್ನು ಖಾತೆಗೆ ವರ್ಗಾಯಿಸಲಾಗಿತ್ತು. ಆ ವ್ಯಕ್ತಿ ತಮ್ಮ ಖಾತೆಯಲ್ಲಿ ಎರಡು ತಿಂಗಳು ಹಣ ಇಲ್ಲದಕ್ಕೆ ತನಗೆ ಬಡ್ಡಿಯನ್ನೂ ನೀಡಬೇಕೆಂದು ಆಗ್ರಹಿಸಿದ್ದ ಮೇರೆಗೆ ಅವರಿಗೆ ಬಡ್ಡಿಯನ್ನೂ ನೀಡಲಾಯಿತು. ಈ ರೀತಿಯ ಪರಿಸ್ಥಿತಿಗಳು ಕೂಡಾ ಬ್ಯಾಂಕ್ ವ್ಯವಹಾರದ ಸಂದರ್ಭ ನಡೆಯುತ್ತಿರುತ್ತವೆ.