ಕೀರ್ತನ ಕಲಾಭೂಷಣ ‘ಶ್ರೀ ಚಿಕ್ಕಣ್ಣದಾಸ್’

Update: 2018-10-06 12:51 GMT

ಹರಿಕಥಾ ಕೀರ್ತನ ಪ್ರಕಾರದಲ್ಲಿ ಶ್ರೀ ಚಿಕ್ಕಣ್ಣದಾಸರದು ಗಣ್ಯವಾದ ಹೆಸರು. ಪ್ರಾರಂಭದಲ್ಲಿ ಹರಿಕಥೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ನಂತರ ವೃತ್ತಿಯನ್ನಾಗಿಸಿಕೊಂಡು, ಅದರಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಜನಪ್ರಿಯರಾದ ಚಿಕ್ಕಣ್ಣದಾಸರ ಜೀವನದ ಹಾದಿ ಮಾರ್ಗದರ್ಶಿಯೂ ಆಗಿದೆ.

ಮೈಸೂರಿನ ಪಡುವಾರಹಳ್ಳಿಯ ಶ್ರೀ ದಾಸೇಗೌಡರು ಮತ್ತು ಶ್ರೀಮತಿ ಮರಿಯಮ್ಮ ನವರ ಸುಪುತ್ರರಾದ ಇವರಿಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಉಂಟಾಯಿತು. ಇವರ ತಂದೆ ದಾಸೇಗೌಡರು ರಂಗಭೂಮಿಯ ಯಶಸ್ವೀ ನಟರಾಗಿದ್ದು, ಅವರ ದುರ್ಯೋಧನ, ರಾವಣ, ಕೀಚಕ ಇವೇ ಮುಂತಾದ ಪೌರಾಣಿಕ ಪಾತ್ರಗಳು ಅಂದು ಬಹುಜನಪ್ರಿಯವಾಗಿದ್ದು, ಅವರ ಕಂಚುಕಂಠ, ಸಂಭಾಷಣಾ ಪ್ರೌಢಿಮೆ ಸಹಜವಾಗಿಯೇ ಚಿಕ್ಕಣ್ಣ ದಾಸರ ಮೇಲೆ ಪ್ರಭಾವ ಬೀರಿತು. ಜೊತೆಗೆ ಚಿಕ್ಕಣ್ಣದಾಸರ ಧ್ವನಿ ಇಂಪಾಗಿದ್ದು ಭಜನೆ, ಕೀರ್ತನೆಗಳಿಗೆ ಹೊಂದುವಂತಿತ್ತು. ಚಿಕ್ಕಂದಿನಲ್ಲಿ ರಾಮಮಂದಿರಗಳಲ್ಲಿ ನಡೆಯುತ್ತಿದ್ದ ಭಜನೆಗಳಲ್ಲಿ ಇವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಲ್ಲದೆ ಅಜ್ಜಿ ಶ್ರೀಮತಿ ನರಸಮ್ಮನವರ ಜೊತೆ ಹರಿಕಥೆ, ಭಜನೆಗಳಿಗೆ ಹೋಗುತ್ತಾ ಆ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಇವರ ಚಿಕ್ಕಪ್ಪ ಶ್ರೀ ಈರೇಗೌಡರು ಹೆಸರಾಂತ ಹರಿಕಥಾ ವಿದ್ವಾಂಸರಾಗಿದ್ದು, ಅವರ ಪ್ರಭಾವದಿಂದ ಇವರ ಮನಸ್ಸು ಹರಿಕತೆಯ ಕಡೆಗೆ ಹರಿಯಿತು. ಇವರು ಕ್ರಮಬದ್ಧವಾಗಿ ಸಂಗೀತ ಶಿಕ್ಷಣ ಪಡೆಯದಿದ್ದರೂ ಯಾವ ಹಾಡನ್ನಾದರೂ ಕೇಳಿದೊಡನೆ ತಕ್ಷಣ ಗ್ರಹಿಸಿ ಹಾಡುವ ಶಕ್ತಿ ದೈವದತ್ತವಾಗಿ ಇವರಿಗೆ ಒಲಿದಿತ್ತು. ಇದು ಪ್ರಾರಂಭದಲ್ಲಿ ಹರಿಕಥೆ ಮೂಡಲು ಬುನಾದಿಯಾಯಿತು.

ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಸಂಸಾರವನ್ನು ನಿರ್ವಹಿಸುವ ಹೊಣೆ ಹೆಗಲಿಗೆ ಬಿದ್ದಾಗ ಹರಿಕಥೆಯನ್ನೇ ಜೀವನೋಪಾಯಕ್ಕಾಗಿ ಆರಿಸಿಕೊಂಡರು. ಮೈಸೂರಿನ ಶ್ರೀ ಪಿ. ರಂಗಸ್ವಾಮಿಯವರಿಂದ ಸುಮಾರು ಮೂರು ತಿಂಗಳುಗಳ ಕಾಲ ಸಂತ ಸಕ್ಕೂಬಾಯಿ ಕೀರ್ತನೆಯನ್ನು ಕಲಿತರು. ಈ ಶಿಕ್ಷಣದಿಂದ ಸ್ವತಂತ್ರವಾಗಿ ಕೀರ್ತನೆ ಮಾಡುವ ಅಭಿಲಾಷೆ ಇವರಿಗೆ ಉಂಟಾಯಿತು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ ಮೈಸೂರು ವಿಶ್ವವಿದ್ಯಾನಿಲಯದ ವಿದ್ವಾಂಸರೂ, ಕಲಾಪ್ರೇಮಿಗಳೂ ಆದ ಶ್ರೀ ಉ.ಕಾ. ಸುಬ್ಬರಾಯಾಚಾರ್ಯರು 1977 ಆಗಸ್ಟ್ 15 ರಂದು ಅಲೋಕದಲ್ಲಿ ಭರಣಿ ಯೋಜನೆ ಅನ್ವಯ ಹರಿಕಥಾ ಕಾರ್ಯಕ್ರಮವನ್ನು ಇವರಿಂದ ಏರ್ಪಡಿಸಿದರು. ಇದು ಚಿಕ್ಕಣ್ಣದಾಸರ ಮೊದಲ ಯಶಸ್ವೀ ಕಾರ್ಯಕ್ರಮವೂ ಆಯಿತು. ಮುಂದೆ ಇದೇ ಯೋಜನೆಯಡಿಯಲ್ಲಿ ಹುಣಸೂರು ಸಮೀಪದ ಹನಗೋಡಿನಲ್ಲಿ ನಡೆದ ರಾಷ್ಟ್ರೀಯ ಸೇವಾಯೋಜನೆಯ ಅಂಗವಾಗಿ ಇವರು ಹರಿಕಥೆ ನಡೆಸಿಕೊಟ್ಟರು. ಇದಕ್ಕೆ ಯೋಜನಾಧಿಕಾರಿಗಳಾದ ಶ್ರೀ ಶಿವಣ್ಣನವರ ಪ್ರೋತ್ಸಾಹ ಸಿಕ್ಕಿತು. ಇದೇ ಸಂದರ್ಭದಲ್ಲಿ ಖ್ಯಾತ ಜಾನಪದ ವಿದ್ವಾಂಸರೂ, ಗಾಯಕರೂ ಆದ ಡಾ.ಪಿ.ಕೆ. ರಾಜಶೇಖರ್ ಮತ್ತು ಹೊನ್ನಾರು ಗಾಯನ ವೃಂದದವರ ಪರಿಚಯವೂ ಆಗಿ, ಇವರ ಕಲೆ ಬೆಳೆಯಲು ಸಹಕಾರಿಯಾಯಿತು. ಈ ತಂಡದ ಜೊತೆಯಲ್ಲಿ ಹಲವಾರು ಗೀತೆಗಳನ್ನು ಹಾಡುವುದರ ಜೊತೆಗೆ ಹಾಸ್ಯ ಸನ್ನಿವೇಶಗಳನ್ನು ನಡೆಸಿಕೊಟ್ಟು ಜನಪ್ರಿಯರಾದರು. ಮೈಸೂರು, ಮಂಡ್ಯ ಮುಂತಾದ ಜಿಲ್ಲೆಗಳ ಅನೇಕ ಕಡೆ ಪ್ರವಾಸ ಮಾಡಿ ಅನುಭವ ಗಳಿಸಿಕೊಂಡರು. ಈ ಜನಪದ ಕಲಾವಿದರ ಒಡನಾಟದಿಂದ ಮುಂದೆ ಹರಿಕಥೆಗಳಿಗೆ ಅನೇಕ ಜನಪದ ಕಥೆಗಳು ಹಾಗೂ ಜನಪದ ಗೀತೆಗಳು ಸೇರಿಕೊಂಡು ಇವರ ಕೀರ್ತನಶೈಲಿಗೆ ಒಂದು ಹೊಸತನವನ್ನು ತಂದುಕೊಟ್ಟಿತು.

ತರುವಾಯ ಚಿಕ್ಕಣ್ಣದಾಸರಿಗೆ ಹರಿಕಥಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಅದಮ್ಯ ಬಯಕೆಯುಂಟಾಯಿತು. ಇದರ ಫಲವಾಗಿ ಹರಿಕಥೆಗೆ ಅಗತ್ಯವಾದ ಶಾಸ್ತ್ರೀಯ ಸಂಗೀತದ ಜ್ಞಾನ ಸಂಪಾದಿಸಲು ಖ್ಯಾತ ಚಲನಚಿತ್ರ ಸಾಹಿತಿ ಸಂಗೀತಗಾರರಾದ ಶ್ರೀ ಎಚ್.ಕೆ. ಯೋಗಾನರಸಿಂಹ ಅವರಿಂದ ಎರಡು ವರ್ಷಗಳ ಕಾಲ ಸಂಗೀತ ಶಿಕ್ಷಣ ಪಡೆದರು. ಮುಂದೆ ಖ್ಯಾತ ಸಂಗೀತ ವಿದುಷಿ ಶ್ರೀಮತಿ ಕೆ.ಜಿ. ಕನಕಲಕ್ಷ್ಮೀಯವರಿಂದ ಸಂಗೀತ ಕಲಿತರು. ಇದರಿಂದ ಇವರ ಕೀರ್ತನೆಗಳಿಗೆ ಮತ್ತಷ್ಟು ಸೊಬಗು ಬಂದಿತೆಂದರೆ ಅತಿಶಯೋಕ್ತಿಯಲ್ಲ. ಸದಾಕಾಲ ವಿದ್ಯೆಯನ್ನು ಕಲಿಯಲು ಇವರ ಮನಸ್ಸು ಹಾತೊರೆಯುತ್ತಿತ್ತು. ಇದು ನಿಜಕ್ಕೂ ಅವರಿಗೆ ಕಲೆ ಮತ್ತು ಸಂಗೀತದ ಮೇಲಿರುವ ಭಕ್ತಿ, ಗೌರವಗಳನ್ನು ತೋರಿಸುತ್ತದೆ.

ಈ ಮಧ್ಯೆ ಇವರ ಜೀವನದಲ್ಲಿ ಮತ್ತೊಂದು ಆಶಾದಾಯಕ ಬೆಳವಣಿಗೆ ಉಂಟಾಯಿತು. ಶ್ರೀ ಉ.ಕಾ. ಸುಬ್ಬರಾಯಾಚಾರ್ಯರ ಮಾರ್ಗದರ್ಶನದಿಂದ ಮುದ್ರಣ ಕಲೆಯಲ್ಲಿ ವಿಶೇಷ ತರಬೇತಿಯನ್ನು ಗಳಿಸಿದರು. ಅದರಲ್ಲೂ ಆಫ್‌ಸೆಟ್ ಮುದ್ರಣಕಲೆಯಲ್ಲಿ ವಿಶೇಷ ಪರಿಣಿತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮುದ್ರಣ ವಿಭಾಗದಲ್ಲಿ ನೌಕರಿಗೆ ಸೇರಿದರು. ಇದು ಇವರ ಜೀವನ ನಿರಾತಂಕವಾಗಿ ಸಾಗಲು ಸಹಕಾರಿಯಾಯಿತು. ಆದಾಗ್ಯೂ ತಮಗೆ ಆರಂಭದಲ್ಲಿ ಅನ್ನವಿತ್ತ ಈ ಕಲೆಯನ್ನು ಗೌರವಿಸಿ, ಬೆಳೆಸಿಕೊಂಡು ಬಂದಿರುವುದು ಇವರ ಹಿರಿತನಕ್ಕೆ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ. ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘ, ಮೈಸೂರು ವಿಶ್ವವಿದ್ಯಾನಿಲಯಗಳ ಪ್ರೋತ್ಸಾಹ ಗಮನಾರ್ಹವಾಗಿ ಇವರಿಗೆ ಒದಗಿಬಂದಿದೆ.

ಇವರು ಜನಗಳನ್ನಾಕರ್ಷಿಸುವ ನವರಸಭರಿತ ವಾದ ಕಥೆಗಳನ್ನು ಹೇಳುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಇವರ ಕೆಲವು ಪ್ರಸಿದ್ಧ ಕೀರ್ತನೆಗಳೆಂದರೆ ಭಕ್ತ ಸಿರಿಯಾಳ, ಭಕ್ತಮಾರ್ಕಂಡೇಯ, ಸೀತಾ ಕಲ್ಯಾಣ, ಶ್ರೀರಾಮಪಟ್ಟಾಭಿಷೇಕ, ನಲ್ಲತಂಗ, ಸುಗುಣಾಮಣಿ, ಭೂಕೈಲಾಸ, ಸತಿಸಾವಿತ್ರಿ, ಚಂದ್ರಹಾಸ (ರಾಷ್ಟ್ರಕವಿ ಕುವೆಂಪು ಅವರ ಚಂದ್ರಹಾಸ ಕೃತಿಯ ಪ್ರೇರಣೆಯಿಂದ) ಇತ್ಯಾದಿ. ಇವರು ಮೈಸೂರು, ಬೆಂಗಳೂರು, ಮಂಡ್ಯ, ಕೇರಳ, ಮಂಗಳೂರು ಮುಂತಾದ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಖ್ಯಾತ ಹರಿಕಥಾ ವಿದ್ವಾಂಸರಾದ ಶ್ರೀ ಅಚ್ಯುತದಾಸ್ ಅವರ ಸಮ್ಮುಖದಲ್ಲಿ ಕೀರ್ತನೆ ನಡೆಸಿ ಮೆಚ್ಚುಗೆ ಪಡೆದಿರುವುದನ್ನು ಗಮನಿಸಬಹುದು.

ಖ್ಯಾತ ಹರಿಕಥಾ ವಿದ್ವಾಂಸರಾದ ಶ್ರೀ ಗುರುರಾಜುಲುನಾಯ್ಡು ಅವರೆಂದರೆ ಇವರಿಗೆ ಅಚ್ಚುಮೆಚ್ಚು. ಅವರ ನಲ್ಲತಂಗಾ ಕಥೆಯನ್ನು ಕೇಳುತ್ತಾ ಕೇಳುತ್ತಾ ಹರಿಕಥೆ ಕಲಿತು, ಅವರ ಶೈಲಿಯನ್ನು ಅಳವಡಿಸಿಕೊಂಡು ಕೃಷ್ಣರಾಜನಗರದಲ್ಲಿ ನಡೆದ ಕೀರ್ತನಕಾರರ ಸಮ್ಮೇಳನದಲ್ಲಿ ಅವರ ಅಧ್ಯಕ್ಷತೆಯಲ್ಲಿಯೇ ಕೀರ್ತನೆ ಮಾಡಿ ಶ್ರೀ ನಾಯ್ಡುಗಳಿಂದ ಮೆಚ್ಚುಗೆ ಪಡೆದ ಇವರ ಸಾಧನೆ ನಿಜಕ್ಕೂ ಅದ್ಭುತ. ಏಕಲವ್ಯನಂತೆ ಇವರದೂ ಅದ್ವಿತೀಯವಾದ ಅಭ್ಯಾಸ. ಸಾಧನೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಇವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕೀರ್ತನೆಗಳನ್ನು ಮಾಡಿ ಒಂದರ್ಥದಲ್ಲಿ ಸಮಾಜ ಸೇವೆಯನ್ನು ಮಾಡಿದರು. ಇದಕ್ಕೆ ಹಲವಾರು ಪೌರಾಣಿಕ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಇವರ ಪ್ರತಿಭೆಗೆ ಸಾಕ್ಷಿಯಾದವು. ಆಕಾಶವಾಣಿ ಕಲಾವಿದರಾಗಿಯೂ ಶ್ರೀಯುತರು ಹಲವಾರು ಕೀರ್ತನೆಗಳನ್ನು ನಡೆಸಿಕೊಟ್ಟು ನಾಡಿನ ಜನರ ಗಮನ ಸೆಳೆದಿದ್ದಾರೆ.

ಇವರು ನಟರಾಗಿಯೂ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದೂ ಉಂಟು. ಅದರಲ್ಲೂ ನಾರದ, ಅಭಿಮನ್ಯು ಈ ಪಾತ್ರಗಳು ಇವರಿಗೆ ಅಪಾರ ಹೆಸರನ್ನು ತಂದುಕೊಟ್ಟಿವೆ. ತ್ಯಾಗಿ, ಬಲಿದಾನ, ರಾಮಾಯಣ, ಭೀಮವಿಜಯ, ಅಹಿರಾವಣ - ಮಹಿರಾವಣ ಇವು ಇವರ ಅಭಿನಯದ ಕೆಲವು ನಾಟಕಗಳು.

ಇವರ ಕೀರ್ತನ ಕ್ಷೇತ್ರದ ಅನುಪಮ ಸೇವೆಗಾಗಿ ಇವರಿಗೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಸತ್ಕರಿಸಿವೆ. ನಝರ್‌ಬಾದ್‌ನ ಶ್ರೀ ಮುರುಘಾದೇವಿ ದೇವಾಲಯದ ವತಿಯಿಂದ ಶ್ರೀ ಆದಿಚುಂಚನಗಿರಿ ಮಠಾಧೀಶ್ವರರಾದ ಶ್ರೀ ಶ್ರೀ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿಗಳ ಸನ್ನಿಧಿಯಲ್ಲಿ ಹಾಸ್ಯ ಕಿಶೋರ ಎಂಬ ಬಿರುದು, ಶ್ರೀ ಶ್ರೀ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿಯವರಿಂದ ಕೀರ್ತನ ಕಿಶೋರ ಎಂಬ ಬಿರುದೂ ಇವರಿಗೆ ಬಂದಿವೆ. ಇದನ್ನು ಇವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅಲ್ಲದೆ ಇವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಹರಿಕಥಾ ದುರಂಧರ, ಹರಿಕಥಾ ಭೂಷಣ, ಕೀರ್ತನ ಚತುರ, ನವರಸ ಕೀರ್ತನಾಲಂಕಾರ ಎಂಬ ಬಿರುದುಗಳು ಬಂದಿವೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಉಪಕುಲಪತಿಗಳಾದ ಡಾ.ಎಂ. ಮಾದಯ್ಯನವರ ಅಧ್ಯಕ್ಷತೆಯಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಶ್ರೀ ಎಸ್.ಎಂ. ಯಾಹ್ಯಾರವರಿಂದ ಸನ್ಮಾನ ಸ್ವೀಕರಿಸಿದಾಗ ಇವರಿಗೆ ಅತ್ಯಂತ ಸಂತೋಷವಾಗಿದ್ದನ್ನು, ಈ ಅದ್ದೂರಿ ಸಮಾರಂಭದ ಕ್ಷಣಗಳನ್ನು ನೆನೆಸಿಕೊಂಡಾಗ ತಮ್ಮ ಕಲಾಸೇವೆ ಸಾರ್ಥಕತೆ ಪಡೆಯಿತೆಂಬುದನ್ನು ಆನಂದದಿಂದ ಚಿಕ್ಕಣ್ಣದಾಸರು ಹೇಳುವಾಗ ಕಲಾಭಿಮಾನಿಗಳೆಲ್ಲರಿಗೂ ಹೆಮ್ಮೆಯುಂಟಾಗುತ್ತದೆ. ಇವರ ಸಾಧನೆಯ ಬಗ್ಗೆ ಗೌರವ ಮೂಡುತ್ತದೆ. ತಮಗೆ ನೆರವಾದ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸ್ನೇಹಿತರನ್ನು ಸದಾ ಇವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ತಮ್ಮ ಈ ಸಾಧನೆಯ ಯಶಸ್ಸಿನ ಹಿಂದೆ ಅವರ ಕುಟುಂಬದ ಹಿರಿಯರನ್ನು ತಂದೆ, ತಾಯಿ, ಅಜ್ಜಿ, ಚಿಕ್ಕಪ್ಪ, ಸಹೋದರ, ಸಹೋದರಿಯರು, ಮಕ್ಕಳು, ಧರ್ಮಪತ್ನಿ ಶ್ರೀಮತಿ ಸುಶೀಲಮ್ಮನವರನ್ನು ನೆನೆಯುತ್ತಾರೆ. ಇವರ ಧರ್ಮಪತ್ನಿ ಇಂದಿಗೂ ಇವರ ಕಲಾಸೇವೆಗೆ ಪ್ರೇರಣೆ, ಪೋಷಣೆ ನೀಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯರು, ಕೀರ್ತನೆ ಕಲಿಸಿದ, ಸಂಗೀತ ಕಲಿಸಿದ ಗುರುಗಳು, ನೆರವು ನೀಡಿದ ಸ್ನೇಹಿತರು, ಸನ್ಮಾನ ನೀಡಿ ಗೌರವಿಸಿದ ಗುರುಹಿರಿಯರು, ಸಂಘ-ಸಂಸ್ಥೆಗಳು ಎಲ್ಲರನ್ನು ಕೃತಜ್ಞತಾಪೂರ್ವಕವಾಗಿ ನಮಿಸಿ ಧನ್ಯನಾದೆ ಎನ್ನುತ್ತಾರೆ. ಇಷ್ಟೆಲ್ಲಾ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದರೂ ವಿನಯವಂತಿಕೆ, ಕಲಿಯುವ ಗುಣ ಇವು ಇವರ ಸಹಜ ಗುಣಗಳಾಗಿ ಬೆಳೆಯುತ್ತಿವೆ. ತಮ್ಮ ಸಾಧನೆಯ ಹಿಂದೆ ಹಿರಿಯರ ಹಾರೈಕೆ, ಸ್ನೇಹಿತರ ಪ್ರೋತ್ಸಾಹ ಅಭಿಮಾನಗಳು ನೆರಳಿನಂತಿವೆ ಎಂದು ಭಾವಿಸುತ್ತಾರೆ. ಇವರ ಈ ಸಾಧನೆ ಅಭಿನಂದನೀಯ - ಅನುಕರಣೀಯ. ಹೊನ್ನಾರು ಜನಪದ ಗಾಯನ ವೃಂದದ ಆದ್ಯಗಾಯಕರಲ್ಲಿ ಒಬ್ಬರಾಗಿದ್ದ ಇವರನ್ನು ಹೊನ್ನಾರು ಜನಪದ ಗಾಯನ ವೃಂದದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಕೀರ್ತನ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Writer - ದಡದಹಳ್ಳಿ ಬ್ರಹ್ಮದೇವ

contributor

Editor - ದಡದಹಳ್ಳಿ ಬ್ರಹ್ಮದೇವ

contributor

Similar News