ಅ-ಭಾರತದ ಜ್ಞಾನ-ಶಿಕ್ಷಣದ ಕುರಿತ ಚಿಂತನೆ
ಭಾರತದ ಜ್ಞಾನ ಮತ್ತು ಶಿಕ್ಷಣದ ಕುರಿತಂತೆ ಜಿ.ಎನ್. ದೇವಿಯವರ ಚಿಂತನೆಗಳ ಸಂಗ್ರಹ ‘ಅ-ಒಳಗಿನ ಬಿಕ್ಕಟ್ಟು’. ಕೆ. ಪಿ. ಸುರೇಶ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮ ಜ್ಞಾನದ ಸ್ಥಿತಿ ಮತ್ತು ಬಿಕ್ಕಟ್ಟನ್ನಷ್ಟೇ ಅಲ್ಲ, ನಮ್ಮ ಪ್ರಜಾಸತ್ತೆಯ ಸ್ಥಿತಿ ಮತ್ತು ಬಿಕ್ಕಟ್ಟಿನ ಕುರಿತಂತೆ ಈ ಪುಟ್ಟ ಕೃತಿ ಧ್ಯಾನಿಸುತ್ತದೆ. ಲೇಖಕರೇ ಹೇಳುವಂತೆ, ಭಾರತದಲ್ಲಿ ಜ್ಞಾನದ ಸ್ಥಿತಿಗತಿ ಮತ್ತು ಭಾರತದ ಉಚ್ಚ ಶಿಕ್ಷಣದ ಕೇಂದ್ರ ಸಮಸ್ಯೆಗಳನ್ನು ವಿಶ್ಲೇಷಿಸಲು ಈ ಪುಸ್ತಕ ನಾಲ್ಕು ಅಂಶಗಳ ಮೇಲೆ ಲಕ್ಷ ವಹಿಸುತ್ತದೆ. ಮೊದಲನೆಯದಾಗಿ, ಭಾರತೀಯ ಪರಂಪರೆಯಲ್ಲಿ ಜ್ಞಾನವೆಂದರೇನು ಎಂಬ ಅಂಶ. ಎರಡನೆಯದಾಗಿ, ಸ್ಮತಿಯ ಹಾದಿ ಗತಿ. ಮೂರನೆಯದಾಗಿ, ಸಾಮಾಜಿಕವಾಗಿ ಹೊರಗಿಡುವುದರ ವಿನ್ಯಾಸಗಳು ಹಾಗೂ ಜ್ಞಾನ ಸೃಷ್ಟಿಯ ಮೇಲೆ ಅದರ ಪರಿಣಾಮ. ನಾಲ್ಕನೆಯದಾಗಿ ಜ್ಞಾನದ ರೂಪಗಳ ಮೇಲೆ ತಂತ್ರಜ್ಞಾನದ ಪ್ರಭಾವ.
ಮೊದಲ ಅಧ್ಯಾಯದಲ್ಲಿ ಸ್ವಾತಂತ್ರಾನಂತರ ಭಾರತದ ಅಭಿವೃದ್ಧಿ, ಬೆಳವಣಿಗೆಗೆ ಕಾಣಿಕೆ ನೀಡಬಲ್ಲಂತಹ ಶಿಕ್ಷಿತ ಯುವ ಮನಸ್ಸುಗಳನ್ನು ಸೃಷ್ಟಿಸಲು ಬೇಕಾದ ಶೈಕ್ಷಣಿಕ ಪ್ರಕ್ರಿಯೆ ಮತ್ತು ನಿಯಂತ್ರಕ ಸಂಸ್ಥೆಗಳು ಹೇಗೆ ರೂಪಪಡೆಯಿತು ಎನ್ನುವುದರ ಕಡೆಗೆ ಲೇಖಕರು ಗಮನ ಸೆಳೆಯುತ್ತಾರೆ. ಎರಡನೇ ಅಧ್ಯಾಯದಲ್ಲಿ ಭಾರತೀಯ ತತ್ವ ಶಾಖೆಗಳಲ್ಲಿ ಜ್ಞಾನವೆಂದರೇನು ಎಂಬ ಗ್ರಹಿಕೆಯ ಬಗ್ಗೆ ಲೇಖಕರು ಬರೆಯುತ್ತಾರೆ. ಉಪನಿಷತ್ತುಗಳಿಂದ ಆರಂಭವಾಗಿ ಧಾರ್ಮಿಕೇತರ ದರ್ಶನ ಮೀಮಾಂಸೆಯಿಂದ ಮುಂದುವರಿದು ಬುದ್ಧ, ಜೈನ, ಸೂಫಿ, ಭಕ್ತಿ ಮತ್ತು ಜಾನಪದ ಪರಂಪರೆಗಳನ್ನು ಮುಂದಿಟ್ಟುಕೊಂಡು ಈ ಅಧ್ಯಾಯವನ್ನು ಅವರು ನಿರೂಪಿಸಿದ್ದಾರೆ. ಮೂರನೇ ಅಧ್ಯಾಯದಲ್ಲಿ ಭಾರತದ ದಮನಕಾರಿ ಸಾಮಾಜಿಕ ಸಂಪ್ರದಾಯಗಳ ಬೇರುಗಳನ್ನು ತಡಕಾಡುವ ಪ್ರಯತ್ನ ನಡೆಯುತ್ತದೆ. ವರ್ಣ, ಜಾತಿಗಳ ಹಿನ್ನೆಲೆ, ಅದನ್ನು ನಿಯಂತ್ರಿಸುತ್ತಾ ಬಂದ ಶಕ್ತಿಗಳ ಕಡೆಗೆ ಲೇಖಕರು ಗಮನ ಸೆಳೆಯುತ್ತಾರೆ. ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳನ್ನೂ ಈ ಸಂದರ್ಭದಲ್ಲಿ ಅವರು ಬಳಸಿಕೊಳ್ಳುತ್ತಾರೆ. ನಾಲ್ಕನೇ ಅಧ್ಯಾಯದಲ್ಲಿ, ಭಾರತ ಗತವನ್ನು ಹೊಂದಿರುವ ದೇಶವಷ್ಟೇ ಅಲ್ಲ, ಅದಕ್ಕೊಂದು ಭವಿಷ್ಯವೂ ಬೇಕು ಎನ್ನುವ ದೂರದೃಷ್ಟಿಯನ್ನಿಟ್ಟುಕೊಂಡು ಬರೆದ ಲೇಖನ. ಸಮಾನತೆ ಮತ್ತು ಜ್ಞಾನದ ತಳಹದಿಯಲ್ಲಿ ವಿಶ್ವಪ್ರಜ್ಞೆಯನ್ನು ಹೊಂದಿದ ಶಿಕ್ಷಣವನ್ನು ಪಡೆಯಲು ತಲೆಮಾರು ಕಾಯುತ್ತಿರುವುದರ ಬಗ್ಗೆ ಅವರು ಕಾಳಜಿ ವ್ಯಕ್ತಪಡಿಸುತ್ತಾರೆ.
ಇದೊಂದು ಪುಟ್ಟ ಕೃತಿ. ಇದೇ ಸಂದರ್ಭದಲ್ಲಿ ಕಠಿಣ ಅಕಾಡಮಿಕ್ ಭಾಷೆಯಲ್ಲಿ ಮಾತನಾಡುವುದರಿಂದ, ವಿದ್ವಾಂಸರಿಗಾಗಿಯೇ ಬರೆದ ಕೃತಿಯಿದು. ಕನ್ನಡ ಅನುವಾದವೂ ಪಾರಿಭಾಷಿಕ ಪದಬಳಕೆಗಳ ಮೂಲಕ ಶ್ರೀಸಾಮಾನ್ಯನನ್ನು ತಲುಪುವುದಕ್ಕೆ ತುಸು ತಿಣುಕಾಡುತ್ತದೆ. ಇನ್ನಷ್ಟು ಸರಳಗನ್ನಡದ ನಿರೂಪಣೆಯ ಅಗತ್ಯವಿತ್ತೇನೋ ಎನ್ನುವಷ್ಟು ಅನುವಾದ ಜಟಿಲವಾಗಿದೆ. ಅಹರ್ನಿಶಿ ಪ್ರಕಾಶನ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 94. ಬೆಲೆ 100 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.