ಶಿವಮೊಗ್ಗ-ಬಳ್ಳಾರಿ-ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ: ವ್ಯಕ್ತವಾಗುತ್ತಿದೆ ವ್ಯಾಪಕ ಆಕ್ಷೇಪ

Update: 2018-10-09 17:18 GMT

ಶಿವಮೊಗ್ಗ, ಅ. 9: ಮುಂದಿನ ವರ್ಷದ ಏಪ್ರಿಲ್ - ಮೇ ತಿಂಗಳಲ್ಲಿ 17 ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರದ ಅವಧಿ ಇನ್ನು ಕೇವಲ ಐದಾರು ತಿಂಗಳು ಮಾತ್ರವಿದೆ. ದೇಶದ ಬಹುತೇಕ ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿ ಸಿದ್ದತೆಯಲ್ಲಿ ತಲ್ಲೀನವಾಗಿವೆ. 

ಇಂತಹ ಸನ್ನಿವೇಶದಲ್ಲಿ ಮೂವರು ಸಂಸದರುಗಳ ರಾಜೀನಾಮೆಯಿಂದ ಖಾಲಿ ಉಳಿದಿದ್ದ ರಾಜ್ಯದ ಶಿವಮೊಗ್ಗ, ಮಂಡ್ಯ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಕಳೆದ ಕೆಲ ದಿನಗಳ ಹಿಂದೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಅ. 9 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಕೂಡ ಆರಂಭವಾಗಿದ್ದು, ನವೆಂಬರ್ 3 ರಂದು ಮತದಾನ ನಡೆಯಲಿದೆ. 

ಆದರೆ ಪ್ರಸ್ತುತ ಘೋಷಣೆಯಾಗಿರುವ ಉಪ ಚುನಾವಣೆಯ ಬಗ್ಗೆ, ಸಾರ್ವಜನಿಕ ವಲಯದಿಂದ ಮಾತ್ರವಲ್ಲದೆ ರಾಜಕೀಯ ಪಕ್ಷಗಳು ಕೂಡ ಅಪಸ್ವರ ಎತ್ತಿವೆ. ಈ ವಿಷಯದ ಕುರಿತಂತೆ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಪರಕ್ಕಿಂತ ವಿರೋಧ ಅಭಿಪ್ರಾಯವೇ ಹೆಚ್ಚಾಗಿ ಕೇಳಿಬರುತ್ತಿದೆ. 

'ಕೇವಲ ನಾಲ್ಕೈದು ತಿಂಗಳ ಅವಧಿಗೆ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದರಿಂದ ಆಡಳಿತಾತ್ಮಕವಾಗಿ ಹಾಗೂ ಕ್ಷೇತ್ರಗಳ ಅಭಿವೃದ್ದಿ ದೃಷ್ಟಿಯಿಂದ ಯಾವುದೇ ಪ್ರಯೋಜನವಿಲ್ಲವಾಗಿದೆ. ಇದರಿಂದ ನಾಗರೀಕರ ಅಮೂಲ್ಯ ತೆರಿಗೆ ಹಣ ವ್ಯರ್ಥವಾಗುತ್ತದೆ' ಎಂದು ವಿವಿಧ ವರ್ಗಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

'ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವುದರಿಂದ, ಉಪ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ. ಪ್ರಸ್ತುತ ಘೋಷಿಸಲಾಗಿರುವ ಉಪ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕೆಂಬ ಮನವಿಯನ್ನು ಕೆಲ ನಾಗರಿಕರು ಚುನಾವಣಾ ಆಯೋಗಕ್ಕೆ ಮಾಡುತ್ತಿದ್ದಾರೆ. ಉಪ ಚುನಾವಣೆಯ ಕುರಿತಂತೆ ವಿವಿಧ ಕ್ಷೇತ್ರಗಳ ಪ್ರಮುಖರು ವ್ಯಕ್ತಪಡಿಸಿರುವ ಅಭಿಪ್ರಾಯ ಈ ಮುಂದಿನಂತಿದೆ. 

01) ಏಕಕಾಲದಲ್ಲಿಯೇ ನಡೆಯಲಿ: ಶಾಸಕ ಕೆ.ಬಿ.ಅಶೋಕ್‍ನಾಯ್ಕ್
'ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯಿಂದ ಆಡಳಿತಾತ್ಮಕವಾಗಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುವುದು ತಮ್ಮ ಅಭಿಪ್ರಾಯವಾಗಿದೆ. ನಿರಂತರ ಚುನಾವಣೆಗಳಿಂದ ಅನಗತ್ಯ ಹೊರೆ ಬೀಳುತ್ತದೆ. ದೇಶಾದ್ಯಂತ ಎಲ್ಲ ಹಂತದ ಚುನಾವಣೆಗಳನ್ನು ಏಕಕಾಲದಲ್ಲಿಯೇ ನಡೆಸುವ ವ್ಯವಸ್ಥೆ ಕಾರ್ಯಗತಗೊಳ್ಳಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಗಂಭೀರ ಚಿತ್ತ ಹರಿಸಬೇಕಉ. ಇದರಿಂದ ಸುಗಮ ಆಡಳಿತ ವ್ಯವಸ್ಥೆಗೂ ಸಹಕಾರಿಯಾಗಲಿದೆ' ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ್‍ನಾಯ್ಕ್ ರವರು ಹೇಳುತ್ತಾರೆ.

02).ರಾಷ್ಟ್ರಪತಿ ಗಮನಹರಿಸಲಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್
'ಮೂರು ಲೋಕಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪ ಚುನಾವಣೆಯಿಂದ ನಾಗರಿಕರಿಗೆ ಯಾವುದೇ ಅನುಕೂಲವಿಲ್ಲ. ಇದರಿಂದ ಆರ್ಥಿಕ ಹೊರೆ ಬೀಳಲಿದೆ. ಆಡಳಿತ ಯಂತ್ರದ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಕೇವಲ ಐದಾರು ತಿಂಗಳ ಅವಧಿಗೆ ಚುನಾವಣೆ ನಡೆಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮ ಅನುಮಾನಾಸ್ಪದವಾಗಿದೆ. ಈ ಕಾರಣದಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ, ಮೂರು ಕ್ಷೇತ್ರಗಳಿಗೆ ಘೋಷಣೆಯಾಗಿರುವ ಚುನಾವಣಾ ವೇಳಾಪಟ್ಟಿ ಹಿಂಪಡೆಯಬೇಕು' ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡುತ್ತಾರೆ. 

03).ಅನಗತ್ಯ ದುಂದು ವೆಚ್ಚ: ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್
'ಪ್ರಸ್ತುತ ಘೋಷಣೆಯಾಗಿರುವ ಉಪ ಚುನಾವಣೆಯಿಂದ, ಆಡಳಿತಕ್ಕಾಗಲಿ ಅಥವಾ ನಾಗರಿಕರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ವಿನಾಕಾರಣ ಹಣ ವ್ಯರ್ಥವಾಗಲಿದೆ. ಚುನಾವಣೆಯಲ್ಲಿ ಆಯ್ಕೆಯಾಗುವ ಸದಸ್ಯರು ತಮಗೆ ಸಿಗುವ ನಾಲ್ಕೈದು ತಿಂಗಳ ಕಾಲಾವಧಿಯಲ್ಲಿ ಯಾವುದೇ ಕೆಲಸಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಐದಾರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗುವುದರಿಂದ, ಪ್ರಸ್ತುತ ಘೋಷಣೆಯಾಗಿರುವ ಉಪ ಚುನಾವಣೆ ರದ್ದುಗೊಳಿಸುವುದು ಉತ್ತಮ ನಿರ್ಧಾರ' ಎಂಬುವುದು ತಮ್ಮ ಅಭಿಪ್ರಾಯವಾಗಿದೆ ಎಂದು ಜಿಲ್ಲಾ ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್‍ರವರು ತಿಳಿಸುತ್ತಾರೆ.  

04). ನಾಗರಿಕರಿಗೆ ಅನಾನುಕೂಲ: ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ
'ಉಪ ಚುನಾವಣೆ ನಡೆಸುವುದರಿಂದ ಅನಗತ್ಯ ದುಂದು ವೆಚ್ಚವಾಗಲಿದೆಯೇ ಹೊರತು ನಾಗರಿಕರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಕೇವಲ ನಾಲ್ಕೈದು ತಿಂಗಳಿಗೆ ಚುನಾವಣೆ ನಡೆಸುವ ಕ್ರಮ ಸರಿಯಾದುದಲ್ಲ. ಕರ್ನಾಟಕ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಅನಗತ್ಯದ ಕುರಿತಂತೆ ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಸೂಕ್ತ ಮನವರಿಕೆ ಮಾಡಿಕೊಡಬೇಕಾಗಿತ್ತು' ಎಂದು ಸಾಗರ ತಾಲೂಕು ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಯವರು ಅಭಿಪ್ರಾಯಪಡುತ್ತಾರೆ.

05). ಎಲ್ಲ ಪಕ್ಷಗಳು ಮನವಿ ಮಾಡಲಿ : ಹಿರಿಯ ಪತ್ರಕರ್ತ ಹರೀಶ್ ದಂಡು
'ಕೇವಲ 5 ತಿಂಗಳ ಅವಧಿಗೆ, ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಲಾಗಿದೆ. ಇದರಿಂದ ನಾಗರೀಕರ ಅಮೂಲ್ಯ ತೆರಿಗೆ ಹಣ ಅನಗತ್ಯ ವ್ಯರ್ಥವಾಗಲಿದೆ. ಈ ಕಾರಣದಿಂದ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಅರ್ಪಿಸಬೇಕು. ಪ್ರಸ್ತುತ ಘೋಷಣೆಯಾಗಿರುವ ಉಪ ಚುನಾವಣೆ ರದ್ದುಗೊಳಿಸುವಂತೆ ಒತ್ತಾಯಿಸಬೇಕು. ಈ ಮೂಲಕ ಬಹುಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಕಾರ್ಯ ಮಾಡಬೇಕು' ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ಹರೀಶ್ ದಂಡುರವರು ಸಲಹೆ ನೀಡುತ್ತಾರೆ. 

06).ಪುನರ್ ಪರಿಶೀಲಿಸಲಿ : ವಕೀಲ ಲಕ್ಷ್ಮೀಕಾಂತ ಚಿಮಣೂರು
'ಚುನಾಯಿತರಾಗುವ ಜನಪ್ರತಿನಿಧಿಯ ಅಧಿಕಾರ 1 ವರ್ಷಕ್ಕಿಂತ ಕಡಿಮೆಯಿದ್ದರೆ ಹಾಗೂ ಸಾರ್ವತ್ರಿಕ ಚುನಾವಣೆ ನಡೆಯುವುದಿದ್ದರೆ, ಇಂತಹ ಸಮಯದಲ್ಲಿ ಉಪ ಚುನಾವಣೆ ಅಗತ್ಯವಿಲ್ಲವೆಂದು ಜನಪ್ರತಿನಿಧಿ ಕಾಯ್ದೆಯಡಿ ಹೇಳಲಾಗಿದೆ. ಪ್ರಸ್ತುತ ಮೂರು ಲೋಕಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪ ಚುನಾವಣೆ ಅನಗತ್ಯ ಹೊರೆಯಾಗಿದೆ. ಅನಗತ್ಯವಾಗಿ ಸರ್ಕಾರಿ ಹಣ ವ್ಯರ್ಥವಾಗಲಿದೆ. ಈ ಕಾರಣದಿಂದ ಕೇಂದ್ರ ಚುನಾವಣಾ ಆಯೋಗ ತನ್ನ ನಿರ್ಧಾರ ಪುನರ್ ಪರಿಶೀಲಿಸಬೇಕು. ಉಪ ಚುನಾವಣೆ ರದ್ದುಗೊಳಿಸಬೇಕು' ಎಂದು ವಕೀಲ ಲಕ್ಷ್ಮೀಕಾಂತ ಚಿಮಣೂರು ಹೇಳುತ್ತಾರೆ. 

07). ಮೊದಲೇ ಎಚ್ಚರ ವಹಿಸಬೇಕಾಗಿತ್ತು : ಎನ್.ಗೋಪಿನಾಥ್
'ಪ್ರಸ್ತುತ ಉಪ ಚುನಾವಣೆ ಘೋಷಣೆಯಾಗಿದೆ. ಇಷ್ಟವಿರಲಿ, ಇಲ್ಲದಿರಲಿ ಎದುರಿಸಲೇಬೇಕಾಗಿದೆ. ಇದೀಗ ಚುನಾವಣೆ ಬೇಡ ಎಂದು ಹೇಳುವುದು ವಿಳಂಬಿತ ಕಾರ್ಯವಾಗಿದೆ. ಈ ಕೆಲಸವನ್ನು ಮೊದಲೇ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರೆ, ಚುನಾವಣೆ ನಡೆಯದಿರುವ ಸಾಧ್ಯತೆಗಳು ಹೆಚ್ಚಿದ್ದವು. ಒಟ್ಟಾರೆ ಈ ಉಪ ಚುನಾವಣೆ ನಾಗರೀಕರಿಗೆ ಅನಗತ್ಯ ಹೊರೆಯಾಗಿದೆ' ಎಂದು ನಾಗರೀಕ ಎನ್.ಗೋಪಿನಾಥ್‍ರವರು ಅಭಿಪ್ರಾಯಪಡುತ್ತಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News